ಮಕ್ಕಳ ರಕ್ಷಣೆ ಹೊಣೆಯ ಕಠಿಣ ಹಾದಿ-ಕೈಲಾಶ್ ಸತ್ಯಾರ್ಥಿ

                

ಕಳೆದ ವಾರ ನಾವು ಸಾಕ್ಷಿಯಾದದ್ದು ಸಣ್ಣ ವಿದ್ಯಮಾನವೇನೂ ಅಲ್ಲ. ನಮ್ಮ ದೇಶದ ಶಾಸನ ರಚನೆ ವ್ಯವಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ನಿರ್ದಿಷ್ಟ ಪ್ರಕರಣದ ಕಾರಣಕ್ಕಾಗಿ ಒಂದಲ್ಲ, ಎರಡು ಬಾರಿ ಕಾಯ್ದೆಯೊಂದಕ್ಕೆ ತಿದ್ದುಪಡಿ ತಂದಿದ್ದೇವೆ. ನಮ್ಮ ಮಗಳು ಜ್ಯೋತಿಯ (ನಿರ್ಭಯಾ) ವಿಧಿಯನ್ನು ನಾವೆಲ್ಲರೂ ಕೇಳಿದ್ದೇವೆ, ಮತ್ತೆ ಮತ್ತೆ ಅದನ್ನು ಪುನರುಚ್ಚರಿಸಿದ್ದೇವೆ. 2012ರ ಡಿಸೆಂಬರ್ 16ರ ರಾತ್ರಿ ಜ್ಯೋತಿ ಮೇಲೆ ನಡೆದ ಅಮಾನವೀಯ ಹಲ್ಲೆಯ ನಂತರ ಸಾರ್ವಜನಿಕ ಆಕ್ರೋಶ ದೊಡ್ಡ ಪ್ರಮಾಣದಲ್ಲಿ ವ್ಯಕ್ತವಾಗಿದೆ; ಅದು ಈಗ ನಮ್ಮ ಶಾಸನ ರಚನೆ ವ್ಯವಸ್ಥೆ ಕೆಲಸ ನಿರ್ವಹಿಸುವ ವಿಧಾನವನ್ನು ಬದಲಾಯಿಸುವಲ್ಲಿಯೂ ಯಶಸ್ವಿಯಾಗಿದೆ. ನಾನು ಆಶಾ ದೇವಿ (ಜ್ಯೋತಿಯ ತಾಯಿ) ಅವರನ್ನು ಭೇಟಿಯಾಗಿದ್ದೆ ಮತ್ತು ಈ ಹೆತ್ತವರಿಗೆ ನ್ಯಾಯ ದೊರೆಯಲಿ ಎಂದು ಪ್ರಾಮಾಣಿಕವಾಗಿ ಹಾರೈಸಿದ್ದೆ. ಯಾವುದೇ ತೀರ್ಪು ಅಥವಾ ತಿದ್ದುಪಡಿ ಜ್ಯೋತಿಯನ್ನು ಮರಳಿ ತರಲಾರದು, ಆದರೆ ಭವಿಷ್ಯದಲ್ಲಿ ಇಂತಹ ಕ್ರೂರ ಹಲ್ಲೆಗಳು ನಡೆಯದಂತೆ ಸುಧಾರಣೆಗಳು ಸಮಾಜಕ್ಕೆ ಖಾತರಿ ನೀಡಬಹುದು.

ಹೆಚ್ಚಿನ ಗದ್ದಲವಿಲ್ಲದೆ ಬಾಲ ನ್ಯಾಯ ಕಾಯ್ದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ನಮ್ಮ ಅಪರಾಧ ಕಾನೂನು ವ್ಯವಸ್ಥೆಯಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಇರುವ ಕೊರತೆಗಳನ್ನು ನೀಗಿಸಲು ನಮ್ಮ ಸಂಸದರು ಜತೆಯಾದ ರೀತಿ ಹೃದಯಸ್ಪರ್ಶಿಯಾಗಿತ್ತು. ನಮ್ಮ ದುರ್ಬಲ ನೀತಿಗಳು ಮತ್ತು ಅವುಗಳ ಚೌಕಟ್ಟುಗಳಲ್ಲಿನ ದ್ವಂದ್ವಗಳ ಕಾರಣದಿಂದ ವ್ಯವಸ್ಥೆ ನಮ್ಮನ್ನು ವಿಫಲಗೊಳಿಸುವಂತೆ ಕಾಣಿಸುತ್ತಿತ್ತು.ಹೊಸ ಸಾಂಸ್ಥಿಕ ಚೌಕಟ್ಟುಗಳನ್ನು ರಚಿಸುವುದರೊಂದಿಗೆ ಈಗಾಗಲೇ ಇರುವಂಥವನ್ನು ಬಲಪಡಿಸಬೇಕು ಎಂದು ನಾನು ಹಿಂದೆ ಹೇಳಿದ್ದೆ. ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಮತ್ತು ಬಾಲ ನ್ಯಾಯ ಮಂಡಳಿ (ಜೆಜೆಬಿ) ರಚನೆ ಅದರಲ್ಲಿ ಸೇರಿದ್ದವು. 2010ರಲ್ಲಿ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ (ಬಚ್‌ಪನ್ ಬಚಾವೊ ಆಂದೋಲನ್ ಮತ್ತು ಭಾರತ ಸರ್ಕಾರ ಹಾಗೂ ಇತರರು) ಬಗ್ಗೆ ನೀಡಿದ ತೀರ್ಪಿನಲ್ಲಿ ಇವುಗಳ ರಚನೆಯನ್ನು ಕಡ್ಡಾಯಗೊಳಿಸಲಾಗಿತ್ತು. ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾಗುವ ಮಕ್ಕಳ ವಿಚಾರದಲ್ಲಿ ನಾವು ಜವಾಬ್ದಾರಿಯಿಂದ ಜಾರಿಕೊಳ್ಳುವುದು ಸಾಧ್ಯವಿಲ್ಲ. ಮುಂದೆ ಸಾಗುವುದಕ್ಕೆ ಇರುವ ಒಂದೇ ದಾರಿ ಎಂದರೆ ಈ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗುವಂತೆ ನಮ್ಮ ನೀತಿ ಮತ್ತು ವ್ಯವಸ್ಥೆಗಳಲ್ಲಿ ಸುಧಾರಣೆ ತರುವುದು.

ಹೊಸ ಮಸೂದೆ, ಸಿಡಬ್ಲ್ಯುಸಿಗಳು ಮತ್ತು ಜೆಜೆಬಿಗಳನ್ನು ಮುಖ್ಯವಾಹಿನಿಗೆ ತರುವುದರೊಂದಿಗೆ ತಮ್ಮ ಕಾರ್ಯಚಟುವಟಿಕೆಗಳಿಗೆ ಅವೇ ಉತ್ತರದಾಯಿಗಳಾಗುವಂತೆಯೂ ಮಾಡುತ್ತದೆ. ಮಕ್ಕಳ ದತ್ತು ಸಂಸ್ಥೆಗಳನ್ನು ಸಾಂವಿಧಾನಿಕ ಸಮಿತಿಗಳಾಗಿ ಪರಿವರ್ತಿಸುವ ಮೂಲಕ ವ್ಯಾಪಕ ಅಧಿಕಾರ ನೀಡಲಾಗಿದೆ. ಮಾದಕ ಪದಾರ್ಥ ಸೇವನೆ, ಮದ್ಯ ವ್ಯಸನ ಅಥವಾ ಮಾನಸಿಕ ಅನಾರೋಗ್ಯ ಹೊಂದಿರುವ ಮಕ್ಕಳಿಗೆ ಚಿಕಿತ್ಸೆ ಸೇರಿದಂತೆ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ಈ ಸಂಸ್ಥೆಗಳು ಒದಗಿಸಬೇಕಿದೆ. ಈ ಸಮಿತಿಗಳ ಕಾರ್ಯನಿರ್ವಹಣೆಯನ್ನು ಜಿಲ್ಲಾಧಿಕಾರಿ, ಕೇಂದ್ರ ಮತ್ತು ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ನೋಡಿಕೊಳ್ಳಬೇಕು. ಅನುಷ್ಠಾನ ದಕ್ಷವಾಗಿ ನಡೆದರೆ ಈ ವ್ಯವಸ್ಥೆ ಸೂಕ್ತ ಮತ್ತು ಸ್ವಾಗತಾರ್ಹವೇ. ಆದರೆ ಜೆಜೆಬಿಗಳು ಹಿಂದೆ ಕಾರ್ಯನಿರ್ವಹಿಸಿದ ರೀತಿ ನಮಗೆ ಈ ನಿಟ್ಟಿನಲ್ಲಿ ಭರವಸೆಯನ್ನೇನೂ ನೀಡುವುದಿಲ್ಲ.

ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಮಸೂದೆ 2015ರ ಪ್ರಕಾರ, 16-18 ವರ್ಷದ ಒಳಗಿನ ಬಾಲಕ–ಬಾಲಕಿ ಘೋರ ಅಪರಾಧ ಎಸಗಿದರೆ (ಏಳು ವರ್ಷ ಮತ್ತು ಅದಕ್ಕಿಂತ ಹೆಚ್ಚು ಶಿಕ್ಷೆ ನೀಡಬಹುದಾದ ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧ) ಅವರನ್ನು ಜೆಜೆಬಿಯ ಬದಲಿಗೆ ವಯಸ್ಕರ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಆದರೆ ಅದು ಸೂಕ್ತ ಎಂದು ಜೆಜೆಬಿ ತೀರ್ಮಾನಿಸಿದರೆ ಮಾತ್ರ. ನಂತರ, ಬಾಲ ನ್ಯಾಯಾಲಯವು ನಿರ್ಧರಿಸಿದರೆ ಈ ಬಾಲಕ-ಬಾಲಕಿಯನ್ನು ‘ಸುರಕ್ಷಿತ ಸ್ಥಳ’ಕ್ಕೆ (ಕಾನೂನಿನಲ್ಲಿ ವ್ಯಾಖ್ಯಾನಿಸಿರುವಂತೆ) ಅಥವಾ ವೀಕ್ಷಣಾಲಯಕ್ಕೆ ಕಳುಹಿಸಿ ಅಲ್ಲಿ ಅವರು ಸುಧಾರಣೆ ಆಗುವಂತೆ, ಪುನರ್ವಸತಿಗೊಳ್ಳುವಂತೆ ಮಾಡಬಹುದು. 21 ವರ್ಷದೊಳಗಿನವರು ಜೈಲು ಪಾಲಾಗದಂತೆ ಮಸೂದೆ ಖಾತರಿ ನೀಡುತ್ತದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಕರಾರನ್ನು ಭಾರತ ಅಂಗೀಕರಿಸಿದೆ. ಹಾಗಾಗಿ ಇಲ್ಲಿ 18 ವರ್ಷದೊಳಗಿನವರನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಸಂವಿಧಾನ ಕೂಡ ಎಲ್ಲ ಮಕ್ಕಳಿಗೆ ಕಾನೂನಿನಲ್ಲಿ ವಿಶೇಷ ಸ್ಥಾನದ ಖಾತರಿಕೊಟ್ಟಿದೆ. ಹಾಗಾಗಿ, ಎಷ್ಟು ಮಕ್ಕಳನ್ನು ನಾವು ‘ಸುರಕ್ಷಿತ ಸ್ಥಳ’ಕ್ಕೆ ಕಳುಹಿಸಿದ್ದೇವೆ ಎಂಬುದರ ಬದಲು ಎಷ್ಟು ಮಕ್ಕಳನ್ನು ಸುಧಾರಣೆ ಮಾಡಲಾಗಿದೆ ಎಂಬುದರ ಮೇಲೆ ಕಾಯ್ದೆಯ ಯಶಸ್ಸನ್ನು ಅಳೆಯಬೇಕಾಗುತ್ತದೆ.

‘ಕಾನೂನು ಸಂಘರ್ಷಕ್ಕೆ ಒಳಗಾಗುವ ಮಕ್ಕಳ’ ಹಕ್ಕುಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಹೊಸ ಮಸೂದೆ ‘ನಿರ್ಬಂಧಗಳ’ ವ್ಯವಸ್ಥೆಯೊಂದನ್ನು ರೂಪಿಸಿದೆ. ‘ಆರೋಪಕ್ಕೆ ಒಳಗಾದ ಮಕ್ಕಳು ಮತ್ತು ಕಾನೂನಿನೊಂದಿಗೆ ಸಂಘರ್ಷ ಹೊಂದಿರುವ ಮಕ್ಕಳಿಗೆ ಸಂಬಂಧಿಸಿದ ಕಾನೂನನ್ನು ಸಮಗ್ರಗೊಳಿಸುವುದು ಮತ್ತು ತಿದ್ದುಪಡಿ ತರುವುದು; ಆರೈಕೆ ಮತ್ತು ರಕ್ಷಣೆ ಅಗತ್ಯ ಇರುವ ಮಕ್ಕಳಿಗೆ ‘ಮಗು ಸ್ನೇಹಿ’ ಧೋರಣೆಯನ್ನು ಅನುಸರಿಸುವ ಮೂಲಕ ಸೂಕ್ತ ಆರೈಕೆ, ರಕ್ಷಣೆ, ಬೆಳವಣಿಗೆ, ಚಿಕಿತ್ಸೆ, ಸಾಮಾಜಿಕ ಮರು ಸೇರ್ಪಡೆ’ ಇದರ ಉದ್ದೇಶವಾಗಿದೆ.

ಬಾಲ ಗೃಹ ಮತ್ತು ಮಕ್ಕಳ ಆರೈಕೆ ಸಂಸ್ಥೆಯಲ್ಲಿ ಇರುವ ಪ್ರತಿ ಮಗುವಿಗೆ ಸರ್ಕಾರವು ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡುತ್ತದೆ. ಈ ಕೇಂದ್ರಗಳು ಹೆಚ್ಚಾಗಿ ಶಿಥಿಲ ಸ್ಥಿತಿಯಲ್ಲಿಯೇ ಇವೆ.  ಮಗುವಿನ ಸಮಗ್ರ ಬೆಳವಣಿಗೆ ಮತ್ತು ಆರೈಕೆಯ ಖಾತರಿಗಾಗಿ ಈ ಮೊತ್ತವನ್ನು ಕನಿಷ್ಠ 4,500ಕ್ಕೆ ಏರಿಸಬೇಕು. ನಮ್ಮ ಜನಸಂಖ್ಯೆಯಲ್ಲಿ ಶೇ 40ರಷ್ಟು ಮಕ್ಕಳಿದ್ದಾರೆ. ಆದರೆ ಒಟ್ಟು ದೇಶಿ ಉತ್ಪನ್ನದ ಶೇ 4 ಭಾಗವನ್ನು ಮಾತ್ರ ಅವರಿಗಾಗಿ ವ್ಯಯ ಮಾಡಲಾಗುತ್ತಿದೆ.

ನಮ್ಮ ಗಮನ ತಪ್ಪಿಸಿಕೊಳ್ಳುವ ಒಂದು ಅಂಶಕ್ಕೆ ಹೊಸ ಮಸೂದೆ ಪರಿಹಾರ ಒದಗಿಸಿದೆ. ಅದು ಬಾಲ ಗೃಹಗಳ ನೋಂದಣಿ. ನೋಂದಣಿ ಹೊಂದಿಲ್ಲದ ಬಾಲಗೃಹಗಳಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲು ಹೊಸ ಮಸೂದೆಯಲ್ಲಿ ಅವಕಾಶ ಇದೆ. ಮಕ್ಕಳ ಸಾಗಾಟ ಮತ್ತು ಶೋಷಣೆ ತಡೆಯುವಲ್ಲಿ ಬಾಲಗೃಹಗಳ ಕಡ್ಡಾಯ ನೋಂದಣಿ ಬಹಳ ದೊಡ್ಡ ಕ್ರಮ. ದೇಶದಾದ್ಯಂತ ಬಾಲ ಗೃಹಗಳು ಕಾನೂನುಬದ್ಧಗೊಳ್ಳುವುದು ಮತ್ತು ಒಂದೇ ಮಾನದಂಡದಲ್ಲಿ ರೂಪುಗೊಳ್ಳುವುದನ್ನು ಈ ಮಸೂದೆ ಖಾತರಿಪಡಿಸುತ್ತದೆ. ಹಾಗಿದ್ದರೂ, ಪುನರ್ವಸತಿಯ ಮಾನದಂಡಗಳು, ಸುಧಾರಣಾ ಚೌಕಟ್ಟುಗಳನ್ನು ಇನ್ನೂ ವ್ಯಾಖ್ಯಾನಿಸಲಾಗಿಲ್ಲ. ಇಂತಹ ಮಕ್ಕಳು ವಿವಿಧ ರೀತಿಯ ಅಸಮಾನತೆಗಳಿಗೆ ಒಳಗಾಗುತ್ತಾರೆ ಮತ್ತು ಬಾಲಗೃಹಗಳಲ್ಲಿ ಅವರು ಸುರಕ್ಷಿತರಲ್ಲ ಎಂಬುದನ್ನು ಹರಿಯಾಣದ ಅಪ್ನಾ ಘರ್ ಘಟನೆ ನಮಗೆ ನೆನಪಿಸುತ್ತದೆ. ಹಾಗಾಗಿ, ಈ ಬಾಲಗೃಹಗಳು ಮತ್ತು ಮಕ್ಕಳಿಗೆ ಆರೈಕೆ ಹಾಗೂ ರಕ್ಷಣೆ ಒದಗಿಸಲು ನೆರವಾಗುವ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಮೊದಲು ನಾವು ಸುಧಾರಣೆಗೆ ಒಳಪಡಿಸಬೇಕಾಗಿದೆ.

ಎಲ್ಲ ಕಾನೂನುಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಆಡಳಿತಾತ್ಮಕ ವ್ಯವಸ್ಥೆಗಳು ಮಕ್ಕಳ ಹಕ್ಕುಗಳ ರಕ್ಷಣೆಗೆ ಪೂರಕವಾಗಿರಬೇಕು ಎಂಬುದನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಕಡ್ಡಾಯಗೊಳಿಸಿದೆ. ರಾಜ್ಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಎನ್‌ಸಿಪಿಸಿಆರ್ ನಿಯಮಗಳಿಗೆ ಅನುಗುಣವಾಗಿ ಆಯೋಗಗಳನ್ನು ಸ್ಥಾಪಿಸಲಾಗಿದೆ. ಎನ್‌ಸಿಪಿಸಿಆರ್ ಮತ್ತು ಎಸ್‌ಸಿಪಿಸಿಆರ್‌ಗಳಿಗೆ ಉತ್ತರದಾಯಿತ್ವ ಇಲ್ಲದಿರುವುದು ಇಲ್ಲಿನ ಅತ್ಯಂತ ದೊಡ್ಡ ಮಿತಿಯಾಗಿದೆ. ಅಲ್ಲದೆ, ಈ ಸಮಿತಿಗಳು ತಮ್ಮ ಅಧಿಕಾರವನ್ನು ದಕ್ಷವಾಗಿ ಚಲಾಯಿಸಲು ಅಗತ್ಯವಾದ ಸಾಮರ್ಥ್ಯ, ಸಂಪನ್ಮೂಲಗಳನ್ನು ನೀಡಲಾಗಿಲ್ಲ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಾರ, 2014ರಲ್ಲಿ ಬಾಲ ನ್ಯಾಯ ಕಾಯ್ದೆ– 2000 ಪ್ರಕಾರ ಮಕ್ಕಳ ವಿರುದ್ಧ 1,315 ದೂರುಗಳನ್ನು ದಾಖಲಿಸಲಾಗಿದೆ. ಮೇಲೆ ಪ್ರಸ್ತಾಪಿಸಿದ ಅತ್ಯಾಚಾರ ನಡೆಯುವುದಕ್ಕೆ ಒಂದು ತಿಂಗಳ ಮೊದಲು ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಸ್ಕೊ) ಕಾಯ್ದೆ 2012 ಅಂಗೀಕಾರಗೊಂಡಿತು. ಈ ಕಾಯ್ದೆ ಅಡಿ ದಾಖಲಾದ ಪ್ರಕರಣಗಳಲ್ಲಿ 2014ರಲ್ಲಿಶೇ 1ರಷ್ಟು ಆರೋಪಿಗಳು ತಪ್ಪಿತಸ್ಥರು ಎಂದು ಆದೇಶ ನೀಡಲಾಗಿದ್ದರೆ, ಶೇ 4ರಷ್ಟು ಮಂದಿ ಖುಲಾಸೆಯಾಗಿದ್ದಾರೆ.
ಶೇ 95ರಷ್ಟು ಪ್ರಕರಣಗಳು ಬಾಕಿ ಇವೆ. ತನಿಖೆ ನಡೆದು ವರ್ಷದ ಒಳಗೆ ವಿಚಾರಣೆ ಪೂರ್ಣಗೊಳ್ಳಬೇಕು ಎಂದೂ ಕಾನೂನು ಕಡ್ಡಾಯಗೊಳಿಸಿದೆ. ಲೈಂಗಿಕ ದೌರ್ಜನ್ಯ ದೂರುಗಳು ದಾಖಲಾಗುವುದು ಅಪರೂಪವಲ್ಲ, ಸಾಮಾನ್ಯವಾಗಿಬಿಟ್ಟಿವೆ. ಹಾಗಿದ್ದರೂ ನ್ಯಾಯದಾನ ಮಾತ್ರ ನಡೆಯುತ್ತಿಲ್ಲ.

ಸೂಕ್ತ ಆಡಳಿತ ಮತ್ತು ಕಾನೂನು ಅನುಷ್ಠಾನ ಸಾಧ್ಯವಾಗುವುದಕ್ಕೆ ಹೆಚ್ಚು ತ್ವರಿತವಾದ ವ್ಯವಸ್ಥೆ ನಮ್ಮ ಈಗಿನ ತುರ್ತು ಅಗತ್ಯ. ಘೋರ ಅಪರಾಧಗಳು ಮತ್ತು ಕಾನೂನಿನೊಂದಿಗೆ ಸಂಘರ್ಷ ಇರುವ ಮಕ್ಕಳ ಪ್ರಕರಣಗಳನ್ನು ನಿರ್ವಹಿಸಲು, ಸಂತ್ರಸ್ತರು, ಸಾಕ್ಷಿಗಳ ರಕ್ಷಣೆ ಹಾಗೂ ತ್ವರಿತ ನ್ಯಾಯದಾನಕ್ಕೆ ಎಲ್ಲ ಜಿಲ್ಲೆಗಳಲ್ಲಿಯೂ ತ್ವರಿತಗತಿ ನ್ಯಾಯಾಲಯಗಳ ಅಗತ್ಯ ಇದೆ. ಮಕ್ಕಳ ವಿರುದ್ಧ ನಡೆದ ಅಪರಾಧ ಕೃತ್ಯಗಳ ತ್ವರಿತ ವಿಚಾರಣೆ ನಡೆಸಿ ಎರಡು ತಿಂಗಳೊಳಗೆ ವಿಲೇವಾರಿ ಮಾಡುವುದಕ್ಕೆ ಎಲ್ಲ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ನಿಯೋಜಿಸಬೇಕು. ಹಾಗಾದರೆ ಪ್ರಕರಣಗಳ ದಕ್ಷ ವಿಲೇವಾರಿ ಸಾಧ್ಯವಾಗುತ್ತದೆ. ನಮ್ಮ ಪ್ರಕ್ರಿಯೆಗಳನ್ನು ಹೆಚ್ಚು ಚುರುಕುಗೊಳಿಸಬೇಕು ಮತ್ತು ಎಲ್ಲ ಹಂತಗಳಲ್ಲಿಯೂ ಅವು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು.

ಬಾಲ್ಯ ವಿವಾಹಕ್ಕೆ ಈಡಾಗುವ ಅಪಾಯ, ಸಶಸ್ತ್ರ ಸಂಘರ್ಷಕ್ಕಾಗಿ ಸಾಗಾಟ, ಸಂಘಟಿತ ಅಪರಾಧ ಮತ್ತು ಜೀತದಂತಹ ಮಕ್ಕಳ ವಿರುದ್ಧದ ಹೊಸ ಅಪರಾಧಗಳನ್ನು ಹೊಸ ಮಸೂದೆ ಗುರುತಿಸಿರುವುದು ಮಹತ್ವದ ವಿಚಾರವಾಗಿದೆ. ಮಕ್ಕಳನ್ನು ಭಿಕ್ಷೆ ಬೇಡಲು ದೂಡುವುದು ಮತ್ತು ಮಾದಕ ಪದಾರ್ಥ ಕಳ್ಳ ಸಾಗಾಟಕ್ಕೆ ಮಕ್ಕಳ ಬಳಕೆ ವಿಚಾರವನ್ನೂ ಮಸೂದೆಯಲ್ಲಿ ವ್ಯಾಖ್ಯಾನಿಸಲಾಗಿದ್ದು, ಇಂತಹ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ.

ನಮ್ಮ ಮಕ್ಕಳ ವಿಧಿ ಮತ್ತು ಅವರು ಬದುಕುವ ಲೋಕವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಸ ಮಸೂದೆ ಹೊಂದಿದೆ. ಪುನರ್ವಸತಿ, ಸುಧಾರಣೆ ಮತ್ತು ಅಪರಾಧ ಎಸಗದಂತೆ ತಡೆಯುವುದಕ್ಕೆ ಸಂಬಂಧಿಸಿ ಮಕ್ಕಳ ಸಮಗ್ರ ರಕ್ಷಣೆ ಮತ್ತು ಆರೈಕೆಗೆ ಮಸೂದೆ ಹೆಚ್ಚಿನ ಒತ್ತು ನೀಡಿದೆ. ಹಾಗಾಗಿ ಇದು  ಕಳೆದೊಂದು ದಶಕದ ಅವಧಿಯಲ್ಲಿನ ಅತ್ಯಂತ ಮಹತ್ವದ ಕಾನೂನು ಸುಧಾರಣೆಯಾಗಿದೆ.

ಮಕ್ಕಳನ್ನು ನಾವು ಹೇಗೆ ನೋಡಿಕೊಳ್ಳುತ್ತಿದ್ದೇವೆ ಎಂಬುದರ ಮೇಲೆ ನಮ್ಮ ಸಮಾಜದ ಭವಿಷ್ಯ ನಿಂತಿದೆ. ಈ ಮಸೂದೆಗಾಗಿ ನಾವೇ ಹೋರಾಡಿದ್ದೇವೆ ಮತ್ತು ಅದು ಅಂಗೀಕಾರವಾಗಬೇಕು ಎಂದು ಒತ್ತಾಯಿಸಿದ್ದೇವೆ. ಹಾಗಾಗಿಯೇ ಇದು ಸೂಕ್ತವಾಗಿ ಅನುಷ್ಠಾನಗೊಳ್ಳುವಂತೆ ನಾವು ನೋಡಿಕೊಳ್ಳಬೇಕಿದೆ. ಕಾನೂನು ಸಂಘರ್ಷದಲ್ಲಿ ಇರುವ ಮಕ್ಕಳೂ ಸೇರಿ ನಮ್ಮ ಎಲ್ಲ ಮಕ್ಕಳ ರಕ್ಷಣೆಗಾಗಿ ಸಕಾರಾತ್ಮಕ ಬದಲಾವಣೆ ತರುವತ್ತ ನಮ್ಮೆಲ್ಲ ಸಿಟ್ಟನ್ನು ತಿರುಗಿಸಬೇಕಿದೆ.

ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳಲಾಗುತ್ತದೆ ಎಂಬುದೇ ಯಾವುದೇ ಸಮಾಜದ ಅಳತೆಗೋಲು. ಈ ಮಕ್ಕಳಿಗೆ ಸುಧಾರಣೆಗೆ ಮತ್ತೊಂದು ಅವಕಾಶ ನೀಡಬೇಕು ಎಂಬುದು ನನ್ನ ವಿನೀತ ವಿನಂತಿ. ನಿರ್ಭಯಾ ಪ್ರಕರಣದ ತಪ್ಪಿತಸ್ಥ ಬಾಲಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಜನ ಒತ್ತಾಯಿಸಿದ್ದಾರೆ. ಆತ ಎಸಗಿದ ಕೃತ್ಯದ ಕ್ರೌರ್ಯ ಗಮನಿಸಿ ಈ ಬೇಡಿಕೆಯನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ನಮ್ಮ ನಿಲುವು ಏನು? ಅವರನ್ನು ಶಿಕ್ಷಿಸಿ, ಸಂತ್ರಸ್ತೆಯ ಪರವಾಗಿ ಸೇಡು ತೀರಿಸಿಕೊಂಡು ಮುಂದಕ್ಕೆ ಸಾಗುವುದೇ? ಅಥವಾ, ಅವರ ಕೈ ಹಿಡಿದು ಮಾರ್ಗದರ್ಶನ ಮಾಡುವುದೇ? ಯಾರೊಬ್ಬರನ್ನು ಮತ್ತು ಪ್ರತಿಯೊಬ್ಬರನ್ನೂ ಬದಲಾಯಿಸಲು ಸಾಧ್ಯ ಎಂದು ನಂಬಲು ನಾನು ಬಯಸುತ್ತೇನೆ. ಅದಕ್ಕಾಗಿ ನಾವು ಮಾಡಬೇಕಾಗಿರುವುದು ಅವರನ್ನು ನೋಡುವ ವಿಧಾನ ಬದಲಾಯಿಸುವುದು ಮಾತ್ರ.