ಮಕ್ಕಳನ್ನು ಫೇಲ್ ಮಾಡುವುದು ಕೊಂದು ಸ್ವರ್ಗಕ್ಕೆ ಕಳಿಸಿದಂತೆ-ನಿರಂಜನಾರಾಧ್ಯ ವಿ.ಪಿ.

school children
ಕಳೆದ ವಾರ ಜನವಸತಿ ಮಟ್ಟದಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ನಡೆಸಿ ಅವರ ಸಮಸ್ಯೆಗಳನ್ನು ಅರಿಯುವ ಭಾಗವಾಗಿ ರಾಮನಗರ ಜಿಲ್ಲೆಯ ಕುಗ್ರಾಮವೊಂದಕ್ಕೆ ಭೇಟಿ ನೀಡಿದ್ದೆ. ಗ್ರಾಮದೊಳಗೆ ಪ್ರವೇಶಿಸುತ್ತಿದ್ದಂತೆಯೇ ಓಡಿ ಬಂದ 5ನೇ ತರಗತಿಯ ಸಾಕಮ್ಮ ಅತ್ಯಂತ ಆತಂಕದಿಂದ ‘ಅಂಕಲ್, ಈ ಸಾರಿಯಿಂದ ಶಾಲೆಯಲ್ಲಿ ಪಾಸು-ಫೇಲ್ ಇರುತ್ತಂತೆ, ನಿಜನಾ!’ ಎಂದು ಗಾಬರಿಯಿಂದ ಕೇಳಿದಳು. ಅವಳ ಆತಂಕ -ಗಾಬರಿ ಕಂಡು ಒಂದು ಕ್ಷಣ ಮೌನವಾದ ನಾನು ‘ಇಲ್ಲಮ್ಮಾ, ಭಯ ಪಡಬೇಡ , ನೀನು ಚೆನ್ನಾಗಿಯೇ ಓದುತಿದ್ದಿ ಓದು ’ ಎಂದು ಸಮಾಧಾನ ಹೇಳಿದೆ. ಅಷ್ಟಕ್ಕೆ ಸುಮ್ಮನಾಗದ ಸಾಕಮ್ಮ; ‘ಅಂಕಲ್, ನಾನೇದರೂ ಫೇಲಾದರೆ, ನಮ್ಮಪ್ಪ ನನ್ನನ್ನು ಶಾಲೆಗೆ ಕಳಿಸುವುದಿಲ್ಲವೆಂದು ಆಗಾಗ್ಗೆ ಹೇಳುತ್ತಿರುತ್ತಾರೆ’ ಎಂದು ಅಳಲು ಪ್ರಾರಂಭಿಸಿದಳು. ಮಕ್ಕಳಿಗೆಂದು ಕೊಂಡುಕೊಂಡಿದ್ದ ಚಾಕಲೇಟೊಂದನ್ನು ಆಕೆಯ ಕೈಗೆ ಕೊಟ್ಟು , ‘ನಿಮ್ಮ ತಂದೆಯ ಬಳಿ ನಾನು ಮಾತನಾಡುತ್ತೇನೆ’ ಎಂದು ಸಮಾಧಾನ ಪಡಿಸುವ ಪ್ರಯತ್ನ ಮಾಡಿದೆ.
ಇದು ಕೇವಲ ಸಾಕಮ್ಮಳೊಬ್ಬಳ ಕಥೆಯಲ್ಲ. ಅಂಥಹ ಲಕ್ಷಾಂತರ ಹೆಣ್ಣು-ಗಂಡು ಮಕ್ಕಳಲ್ಲಿ ಅಡಗಿರುವ ಭಯ ಮತ್ತು ಆತಂಕ. ನಮ್ಮ ಶಿಕ್ಷಣ ವ್ಯವಸ್ಥೆ ‘ಮಕ್ಕಳ ಸರ್ವಾಂಗೀಣ ಅಭಿವೃದ್ಧಿ; ಮಕ್ಕಳ ಜ್ಞಾನ, ಸಾಮಥ್ರ್ಯ ಮತ್ತು ಪ್ರತಿಭೆಯ ವರ್ಧನೆ; ಶಿಶು ಸ್ನೇಹಿ ಮತ್ತು ಶಿಶು ಕೇಂದ್ರೀಕೃತ ವಾತಾವರಣದಲ್ಲಿ ಚಟುವಟಿಕೆ ಹಾಗು ಅನ್ವೇಷಣೆಯ ಮೂಲಕ ಮಕ್ಕಳ ಕಲಿಕೆ; ಮಗುವಿನ ಭಯ, ಆಘಾತ ಹಾಗೂ ಆತಂಕ ಹೋಗಲಾಡಿಸಿ ಮುಕ್ತವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ನೆರವಾಗುವಂತಹ ಕಲಿಕಾ ವಾತಾವರಣದ’ ಬಗ್ಗೆ ನೀತಿ ಮತ್ತು ಕಾನೂನುಗಳಲ್ಲಿ ಹೇಳುತ್ತಲೇ ವಾಸ್ತವದಲ್ಲಿ ಮಕ್ಕಳಿಗೆ ಭಯ–ಆತಂಕ ಹುಟ್ಟಿಸುವ ಇಂಥಹ ಭಯೋತ್ಪಾದನೆಯ ಕೆಲಸಕ್ಕೆ ನಮ್ಮ ನೀತಿ ನಿರೂಪಕರು ಕೈ ಹಾಕಿರುವುದು ಶೈಕ್ಷಣಿಕ ವ್ಯವಸ್ಥೆಯ ದಿವಾಳಿತನಕ್ಕೆ ಉತ್ತಮ ಉದಾಹರಣೆ.
ಎಲ್ಲ ಮಕ್ಕಳಿಗೆ ಕನಿಷ್ಠ ಎಂಟನೇ ತರಗತಿಯವರೆಗೆ ಉಚಿತ ,ಕಡ್ಡಾಯ ಮತ್ತು ಗುಣಾತ್ಮಕ ಶಿಕ್ಷಣವನ್ನು ಖಾತರಿಗೊಳಿಸುವ ಶಿಕ್ಷಣ ಹಕ್ಕು ಕಾಯ್ದೆ, ಶಾಲೆಗೆ ಒಮ್ಮೆ ಪ್ರವೇಶ ಪಡೆದ ಯಾವುದೇ ಮಗುವನ್ನು ಪ್ರಾಥಮಿಕ ಶಿಕ್ಷಣವು ಪೂರ್ಣಗೊಳ್ಳುವವರೆಗೆ ಯಾವುದೇ ತರಗತಿಯಲ್ಲಿ ಅನುತ್ತೀರ್ಣಗೊಳಿಸುವುದು ಮತ್ತು ಶಾಲೆಯಿಂದ ಹೊರಹಾಕುವುದನ್ನು ನಿಷೇಧಿಸುತ್ತದೆ. ಈ ಅವಕಾಶವನ್ನು ಕಾಯಿದೆಯಲ್ಲಿ ಸೇರಿಸಿರುವ ಉದ್ದೇಶ ಮಕ್ಕಳು ಏನೂ ಕಲಿಯದೇ ಇದ್ದರೂ ಅವರನ್ನು ಒಂದು ತರಗತಿಯಿಂದ ಮತ್ತೊಂದು ತರಗತಿಗೆ ತೇರ್ಗಡೆ ಮಾಡಿ ಕಳಿಸಬೇಕೆಂಬುದಲ್ಲ. ಬದಲಿಗೆ, ಪ್ರತಿಯೊದು ಮಗುವು ಆಯಾ ತರಗತಿಗಳಲ್ಲಿ ನಿಗದಿತ ವಿಷಯಗಳಲ್ಲಿ ಕಲಿಯಬೇಕಾದ ಕನಿಷ್ಠ ಸಾಮಥ್ರ್ಯಗಳನ್ನು ಆಯಾ ಶೈಕ್ಷಣಿಕ ವರ್ಷವೇ ಕಲಿಸುವ ಹೊಣೆಗಾರಿಕೆ ಶಿಕ್ಷಣ ವ್ಯವಸ್ಥೆಯ ಮೇಲಿರುತ್ತದೆಯೆಂಬುದನ್ನು ಗಟ್ಟಿಯಾಗಿ ಒತ್ತಿ ಹೇಳುವುದು.
ಮಗುವನ್ನು ಅನುತ್ತೀರ್ಣಗೊಳಿಸುವುದು ಮತ್ತು ಶಾಲೆಯಿಂದ ಹೊರಹಾಕುವುದನ್ನು ನಿಷೇಧಿಸುವ ಆರ್‍ಟಿಈ ಕಾಯ್ದೆಯ ಮೂಲ ಆಶಯ ಮತ್ತು ವೈಜ್ಞಾನಿಕತೆಯನ್ನು ಅರಿಯದ ಕೇಂದ್ರ ಸರ್ಕಾರ ಪರೀಕ್ಷೆಗಳ ಮೂಲಕ ಉತ್ತೀರ್ಣ ಹಾಗು ಅನುತ್ತೀರ್ಣ ಹಣೆ ಪಟ್ಟಿಯನ್ನು ಹಚ್ಚಿ ಅನುತ್ತೀರ್ಣರಾದ ಮಕ್ಕಳನ್ನು ಅದೇ ತರಗತಿಯಲ್ಲಿ ಮತ್ತೊಂದು ಶೈಕ್ಷಣಿಕ ಅವಧಿಗೆ ಮುಂದುವರಿಸಲು ಅನುವಾಗುವಂತೆ ತಿದ್ದುಪಡಿ ಮಾಡಲು ಮುಂದಾಗಿರುವುದು ನಿಜಕ್ಕೂ ಹಾಸ್ಯಾಸ್ಪದ. ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಅಗತ್ಯವಾದ ಮತ್ತು ಸಶಕ್ತವಾದ ಒಂದು ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಡಲಾಗದ ಸರ್ಕಾರ ಮತ್ತು ಸಮಾಜ ಮಾತ್ರ ಈ ರೀತಿಯ ನಕಾರಾತ್ಮಕ ಯೋಚನೆ ಮಾಡಲು ಸಾಧ್ಯ. ಪರೀಕ್ಷೆಯ ಮೂಲಕ ಮಕ್ಕಳ ಹಣೆ ಬರಹವನ್ನು ಬರೆದು ಅದನ್ನೇ ಗುಣಾತ್ಮಕತೆಯ ಮಾನದಂಡವೆಂದು ಬೀಗುವುದು ನಮ್ಮ ಬೌದ್ಧಿಕ ದಿವಾಳಿತನದ ಪರಮಾವಧಿ.
ಸಂಶೋಧನೆಗಳ ಪ್ರಕಾರ ಅತ್ಯಂತ ವಿಶೇಷ ಸಂಧರ್ಭಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲ ಮಕ್ಕಳ ಮಿದುಳು ಶಕ್ತಿ ಒಂದೇ ಆಗಿರುತ್ತದೆ. ಮಕ್ಕಳು ಕಲಿಯಲು ಅಥವಾ ಕಲಿಯದಿರಲು ಕಲಿಕಾ ವ್ಯವಸ್ಥೆ ಕಾರಣವೇ ಹೊರತು ಖಂಡಿತ ಮಕ್ಕಳಲ್ಲ. ವ್ಯವಸ್ಥೆಯ ವೈಫಲ್ಯವನ್ನು ಮಕ್ಕಳ ಮೇಲೆ ಹಾಕಿ ಅವರನ್ನು ಬಲಿಪಶುವನ್ನಾಗಿಸುವುದು ಎಷ್ಟುಸರಿ ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಕ್ಕಳನ್ನು ಫೇಲ್ ಎಂದು ಘೋಷಿಸಿ ಅದೇ ವರ್ಗದಲ್ಲಿ ಮುಂದುವರಿಯುವಂತೆ ಮಾಡಲು ಹಾತೊರೆಯುತ್ತಿರುವ ನಾವು ಮಕ್ಕಳ ನೋವಿನಲ್ಲಿ ಸಂತೋಷ ಕಾಣುವ ಕ್ರೌರ್ಯರಸಿಕರಂತಾಗುವುದಿಲ್ಲವೇ?.
ಯಾವುದೇ ಪರೀಕ್ಷೆಗಳು ಅಥವಾ ಮೌಲ್ಯಾಂಖನಗಳು ಕಲಿಕೆಯಲ್ಲಿ ಮಕ್ಕಳಗಿರುವ ಸಾಧಕ-ಬಾಧಕಗಳನ್ನು ಗುರಿತಿಸಿ ಅವರ ಕಲಿಕೆಯನ್ನು ಉತ್ತಮ ಪಡಿಸುವ ಸಾಧನಗಳಾಗಬೇಕೆ ಹೊರತು ಮಗುವಿನ ಹಣೆಬರಹವನ್ನು ನಿರ್ಧರಿಸುವ ಅಳತೆಗೋಲಾಗಬಾರದು. ಮಗು ಕಲಿಯದಿದ್ದರೆ ಕಲಿಯಲು ಇರುವ ಸಮಸ್ಯೆಗಳನ್ನು ಗುರುತಿಸಿ ನಿವಾರಿಸುವ ಮೂಲಕ ಕಲಿಕೆಯಾಗುವಂತೆ ಮಾಡಬೇಕಾದುದು ವ್ಯವಸ್ಥೆ ಮತ್ತು ಶಿಕ್ಷಕರ ಮುಂದಿರುವ ಸವಾಲೇ ಹೊರತು ಮಗುವನ್ನು ಅನುತ್ತೀರ್ಣಗೊಳಿಸುವುದು ಉತ್ತರವಲ್ಲ. ಕಲಿತಿಲ್ಲವೆಂಬ ಕಾರಣಕ್ಕೆ ಮಗುವನ್ನು ನಾವು ಅನುತ್ತೀರ್ಣಗೊಳಿಸುವುದು ಸರಿಯೆಂದರೆ, ಕಲಿಸಲು ವಿಫಲವಾಗಿರುವ ಶಿಕ್ಷಕ, ಕಲಿಕೆಯನ್ನು ಖಾತರಿಗೊಳಿಸಲು ಅಗತ್ಯವಾದ ಮೇಲುಸ್ತುವಾರಿ ಮಾಡಲು ನೇಮಕವಾಗಿರುವ ಗುಚ್ಛ ಸಂಪನ್ಮೂಲ ವ್ಯಕ್ತಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ವಿಷಯ ಪರಿವೀಕ್ಷಕರು ,ಶಿಕ್ಷಣಾಧಿಕಾರಿ, ಉಪ ನಿರ್ದೇಶಕರು , ಉಪನಿರ್ದೇಶಕರು(ಶೈಕ್ಷಣಿಕ) , ನಿರ್ದೇಶಕರು ಮತ್ತು ಆಯುಕ್ತರನ್ನು ಅವರವರ ಕೆಲಸ-ಜವಾಬ್ದಾರಿ ನಿರ್ವಹಿಸುವಲ್ಲಿ ಫೇಲ್ ಆಗಿದ್ದಾರೆಂದೇ ಘೋಷಿಸಬೇಕಾಗುತ್ತದೆಯಲ್ಲವೇ?. ಹೀಗಾಗಿ, ವ್ಯವಸ್ಥೆಯ ದೋಷಕ್ಕೆ ಮಗುವನ್ನು ಬಲಿಪಶು ಮಾಡುವ ಬದಲು ಮಗು ಸರಳವಾಗಿ ಮತ್ತು ಸರಾಗವಾಗಿ ಕಲಿಯುವ ವ್ಯವಸ್ಥೆಯನ್ನು ಕಟ್ಟಿಕೊಡಬೇಕಿದೆ.
ಈಗಿನ ಕಲಿಕಾ ವ್ಯವಸ್ಥೆ ಹೇಗಿದೆಯೆಂದರೆ ನಮ್ಮ ಶಿಕ್ಷಕರು ಕಲಿಸುವ ಪ್ರಕ್ರಿಯೆಯ ಸುಗುಮಕಾರರಾಗಿ ಕೆಲಸ ಮಾಡುವುದೊಂದನ್ನು ಬಿಟ್ಟು ಉಳಿದೆಲ್ಲ ಕಲಿಕೇತರ ಕೆಲಸಗಳನ್ನು ಮಾಡುವುದರಲ್ಲಿಯೇ ತೊಡಗಿಸಿಕೊಳ್ಳುವಂತಾಗಿದೆ. ಕಲಿಕಾ ರಾಯಭಾರಿಗಳಾಗಬೇಕಿದ್ದ ಶಿಕ್ಷಕರು ಇಂದು ದಿವ್ಯತೆಗೇರಿದ ಗುಮಾಸ್ತರಾಗಿದ್ದಾರೆ. ಶಾಲೆಯಲ್ಲಿ ಹತ್ತು-ಹಲವು ದಾಖಲೆಗಳ ನಿರ್ವಹಣೆಯ ನಿರ್ವಾಹಕರಾಗಿ ; ಗುಚ್ಛ ಸಂಪನ್ಮೂಲ ವ್ಯಕ್ತಿಗೆ ಅಂಕಿ-ಅಂಶಗಳನ್ನು ಒದಗಿಸುವ ಆಪ್ತ ಸಹಾಯಕರಾಗಿ ; ದಿಕ್ಕು-ದಿಶೆಯ ಅಳತೆಗೋಲಿಲ್ಲದ ಅನಗತ್ಯ ತರಬೇತಿಗಳಲ್ಲಿ ಪಾಲ್ಗೊಳ್ಳುವ ಪ್ರಯೋಗ ಪ್ರಾಣಿಗಳಾಗಿ ; ಗಣತಿ-ಚುನಾವಣೆಗಳ ಮಾಹಿತಿ ಸಂಗ್ರಹಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆಯೇ ಹೊರತು ಉತ್ತಮ ಶಿಕ್ಷಕರಾಗಿಯಲ್ಲ. ಪರಿಸ್ಥಿತಿ ಹೀಗಿರುವಾಗ , ಮಕ್ಕಳ ಕಲಿಕೆ ಹೇಗೆ ಸಾಧ್ಯ. ಕಲಿಕೆಗೆ ಪೂರಕವಾದ ವ್ಯವಸ್ಥೆಯನ್ನು ಕಟ್ಟಿಕೊಡದೆ , ಮಕ್ಕಳು ಕಲಿಯುವ ಆಸೆಯೊತ್ತು ಶಾಲೆಗೆ ಬಂದರೂ ಕಲಿಸದೆ, ಕೇವಲ ಪರೀಕ್ಷೆ ನಡೆಸಿ ‘ಫೇಲ್’ ಎಂಬ ನಾಮಫಲಕ ಹಚ್ಚುವ ಈ ಕ್ರೂರ ವ್ಯವಸ್ಥೆ ಸಮಗ್ರವಾಗಿ ಬದಲಾಗಬೇಕಿದೆ.
ಮಕ್ಕಳು ನಿರೀಕ್ಷೆಗೆ ತಕ್ಕಂತೆ ಕಲಿಯಬೇಕಾದರೆ ಕಲಿಕಾ ವ್ಯವಸ್ಥೆ ಸುಧಾರಿಸಬೇಕು. ಮೊದಲಿಗೆ ಪ್ರತಿಯೊಂದು ಮಗುವಿಗೂ ಕಲಿಯುವ ಸಾಮಥ್ರ್ಯವಿದೆ ಎಂಬುದನ್ನು ಗೌರವಿಸಬೇಕು. ಕಲಿಕೆಯ ವೇಗದಲ್ಲಿ ವ್ಯತ್ಯಾಸವಾದ ಮಾತ್ರಕ್ಕೆ ಕಲಿಯಲು ಅಸಮರ್ಥರು, ಮುಂದಿನ ತರಗತಿಗೆ ಹೋಗಲು ಅನರ್ಹರು ಎಂಬ ಮನಸ್ಥಿತಿಯಿಂದ ಹೊರಬಂದು ಆಯಾ ತರಗತಿಗಳಲ್ಲಿಯೇ ಮಕ್ಕಳ ಕಲಿಕೆಗೆ ಅಡ್ಡಿಯಾಗಿರುವ ಅಂಶಗಳನ್ನು ಗುರುತಿಸಿ ಸೂಕ್ತ ಮಧ್ಯ ಪ್ರವೇಶಿಕೆಗಳ ಮೂಲಕ ಆಯಾ ಶೈಕ್ಷಣಿಕ ವರ್ಷದಲ್ಲಿಯೇ ಮಗು ನಿಗದಿತ ಕಲಿಕಾ ಮಟ್ಟವನ್ನು ತಲುಪುವಂತೆ ನೋಡಿಕೊಳ್ಳುವುದು ಶಿಕ್ಷಕರ ಆದ್ಯ ಕರ್ತವ್ಯವಾಗಬೇಕು. ಶಿಕ್ಷಕರು ಈ ಕೆಲಸವನ್ನು ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣವಾಗಿ ನಿರ್ವಹಿಸಲು ಅಗತ್ಯ ವಾತಾವರಣವನ್ನು ಕಟ್ಟಿಕೊಡುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಬೇಕು . ಅದನ್ನು ಬಿಟ್ಟು , ಮೊಸರಿನಲ್ಲಿ ಕಲ್ಲುಡುಕುವಂತೆ ಮಕ್ಕಳಿಗೆ ಕಲಿಯುವ ಸಾಮಥ್ರ್ಯವಿಲ್ಲವೆಂಬ ಅವೈಜ್ಞಾನಿಕ ಮನಸ್ಥಿತಿಯಿಂದ ನಿತ್ಯವೂ ವಿಕಾಸವೊಂದಬೇಕಾದ ಮಗುವಿಗೆ ಅನುತ್ತೀರ್ಣವೆಂಬ ಹಣೆಪಟ್ಟಿ ಹಚ್ಚಿ ಬದಲಾಗದ ಅದೇ ಕತ್ತಲೆ ಕೋಣೆಯಲ್ಲಿ ಮತ್ತೊಂದು ವರ್ಷ ಕೊಳೆಹಾಕುವ ನಮ್ಮ ಈ ನಿರ್ಧಾರ ಮಗುವನ್ನು ಕೊಂದು ಸ್ವರ್ಗಕ್ಕೆ ಕಳಿಸಿದ ಕೃತ್ಯದಂತಾಗುತ್ತದೆಯೇ ಹೊರತು ಬದಲಾವಣೆಯೆನಿಸಲಾರದು.ಈ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕಿದೆ.