ಭೂಮಿಗೆ ಭಾರವಾಗದಂತೆ ಜೀವಿಸುವ ಬಗ್ಗೆ -ದೇವನೂರ ಮಹಾದೇವ

[ಆದಿಮಾ ಪ್ರಕಾಶನದಿಂದ ಪ್ರಕಟವಾದ ಪದ್ಮಾಲಯ ನಾಗರಾಜ್ ಅವರ “ಅಚಲ ಗುರುಮಾರ್ಗ” ಕೃತಿ ಬಿಡುಗಡೆ ಮಾಡಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪೂರ್ಣಪಾಠ, 4.11.2018ರ ಪ್ರಜಾವಾಣಿ ಮುಕ್ತಛಂದ ಪುರವಣಿಯಲ್ಲಿ ಪ್ರಕಟವಾಗಿದ್ದು, ನಮ್ಮ ಓದಿಗಾಗಿ ಇಲ್ಲಿದೆ… ]

 

 

                                                           

`ಅಚಲ ಗುರುಮಾರ್ಗ’ ಪುಸ್ತಕವನ್ನು ಓದಿ ಮುಗಿಸಿದಾಗ ನನಗೆ ಅರ್ಥವಾದುದಕ್ಕಿಂತ ಅರ್ಥವಾಗದಿರುವುದೇ ಹೆಚ್ಚಿದೆ ಅನ್ನಿಸಿಬಿಟ್ಟಿತು. ಜೊತೆಗೆ ನನಗೆ ಅರ್ಥವಾಗಿದೆ ಅಂದುಕೊಂಡಿದ್ದು ಸರಿಯೋ ತಪ್ಪೊ ಎಂಬ ಅನುಮಾನವೂ ಜೊತೆಜೊತೆಗೆ ಬಂತು. ಹಾಗಾಗಿ, ಓದುತ್ತಾ ನನ್ನೊಳಗೆ ಓಡಾಡಿದ ಕೆಲವು ಅನ್ನಿಸಿಕೆಗಳನ್ನಷ್ಟೆ ಮುಂದಿಡುತ್ತಿರುವೆ: `ಅಚಲ ಗುರುಮಾರ್ಗ’ ಪುಸ್ತಕದಲ್ಲಿ ಒಂದು ವಿಸ್ಮಯಕಾರಿ ನೋಟ ಬರುತ್ತದೆ- ಛಾವಣಿಗಳಲ್ಲಿ ಗೂಡು ಕಟ್ಟುವ ಕಣಜದ ಬಗ್ಗೆ. ಆ ತಾಯಿ ಕಣಜ ತಾನು ಕಟ್ಟಿದ ಗೂಡಿನೊಳಗೆ ಮೊಟ್ಟೆಗಳನ್ನಿಟ್ಟು ಅವು ಮರಿಗಳಾಗಿ ಬೆಳವಣಿಗೆಯಾಗುವ ಹಂತದವರೆಗೂ ಮರಿಗಳಿಗೆ ಬೇಕಾಗುವಷ್ಟು ಆಹಾರವನ್ನಿಟ್ಟು ಆಮೇಲೆ ಗೂಡಿನ ಕಿಂಡಿ ಮುಚ್ಚಿ ಹೊರಟು ಹೋಗುತ್ತದೆ. ಅಲ್ಲಿಗೆ ಆ ತಾಯಿ ಕಣಜದ ಜೀವಿತಾವಧಿ ಮುಗಿದು ಹೋಗುತ್ತದೆ. ಆದರೆ ಆ ಗತಿಸಿದ ತಾಯಿ ಕಣಜದ ಮೊಟ್ಟೆಗಳು ಲಾರ್ವ ಹಂತ ತಲುಪಿ ರೆಕ್ಕೆ ಪಡೆದು ಕಣಜ ಕೀಟಗಳಾಗಿ ಪರಿವರ್ತಿತವಾಗಿ ಮಣ್ಣಿನ ಗೂಡನ್ನು ಸೀಳಿಕೊಂಡು ಹೊರ ಜಗತ್ತಿಗೆ ಬಂದ ಕೂಡಲೇ ಅವು ತಮ್ಮೆಲ್ಲಾ ಬದುಕಿನ ವಿಧಾನಗಳಲ್ಲಿ ಎಂದೂ ಕಂಡರಿಯದ ತಮ್ಮ ಅವ್ವನನ್ನೆ ಅನುಕರಿಸುತ್ತವೆ. ಆ ಕೀಟದ ಮರಿಗಳು ಇದನ್ನು ಎಲ್ಲಿಂದ ಪಡೆದವು? `ಮೊಟ್ಟೆಯ ಮೂಲಕ ತನ್ನಂತೆಯೇ ಇರುವ ಕೀಟವನ್ನು ಹೆತ್ತಿದ್ದು ಒಂದು ಹೆರಿಗೆಯಾದರೆ, ಅದರ ಪರಂಪರಾ ನೆನಪಿನ ಕೋಶದಲ್ಲಿ ಬಚ್ಚಿಟ್ಟುಕೊಂಡಿರುವುದು ಎರಡನೆಯ ಹೆರಿಗೆ’!- ಇದು ನನ್ನನ್ನು ಸ್ತಬ್ಧಗೊಳಿಸಿಬಿಟ್ಟಿತು. ಇಂದು ನಮ್ಮ ವಿಜ್ಞಾನ ಹೇಳುವ ಜೀವಕೋಶದ ನೆನಪು (Cellular Memory) ರೀತಿಯಂತೆಯೇ ಇದು?
ಈ ನೋಟ ನನ್ನೊಳಗೆ ಇಳಿದಾಗಲೇ- ಅಚಲ ಪರಂಪರೆಯಲ್ಲಿ ಬರುವ, ಶೂನ್ಯ-ಒಂದು-ಶೂನ್ಯ ( 0 1 0) – ಈ ತತ್ವ ಸ್ವಲ್ಪಮಟ್ಟಿಗೆ ಅರ್ಥವಾಯ್ತು ಅನ್ನಿಸಿತು. ಪರಂಪರಾ ಸ್ಮೃತಿ ಅಂದರೆ ಪರಂಪರಾ ನೆನಪಿನ ಕೋಶವು ಹುಟ್ಟಿನೊಡನೆಯೇ ಬರುತ್ತದೆ. ಹಾಗಾಗೇ ನಮ್ಮ ನಡುವೆ ಜಾತಿ, ಮೌಢ್ಯ, ಧರ್ಮ, ಭೇದ, ಅಸಮಾನತೆಗಳು ಜಟಿಲ ಕಗ್ಗಂಟಾಗಿರುವುದು. ಇದಕ್ಕೆ ಹುಟ್ಟಿನೊಡನೆ ಬರುವ ನೆನಪಿನ ಕೋಶದ ಪಾತ್ರ ಅಗಾಧವಾಗಿದೆ. ಈ ಸಮಾಜ ಸಂತಾನ ಹರಿಯುತ್ತಿರುವ ರೀತಿ ಹೇಗಿದೆ ಎಂದರೆ + 1 + ರೀತಿ. ಇಲ್ಲಿ ಒಂದು ಸಂಖ್ಯೆಯು ವ್ಯಕ್ತಿ ಎಂದಾದರೆ, ಮೊದಲ + ಆ ವ್ಯಕ್ತಿ ಜೊತೆಗೆ ಹುಟ್ಟಿನೊಡನೆ ಬರುವ ಸ್ಮೃತಿ  ಕೋಶ. ಹಾಗೂ ತದನಂತರ ಬರುವ + ಎಂದರೆ ಆ ವ್ಯಕ್ತಿ ತನ್ನ ಜೀವಿತದ ನಂತರ ಬಿಟ್ಟು ಹೋಗುವ ಸ್ಮೃತಿ  ಅರ್ಥಾತ್ ನೆನಪು. ಜಗತ್ತಿನ ದುಃಖ ಪ್ರವಾಹಕ್ಕೆ ಇದುವೇ ಕಾರಣ.
ಅಚಲ ಗುರುಮಾರ್ಗವು + 1 + ಅನ್ನು 0 1 0 ಆಗಿಸುವ ಕ್ರಿಯಾಮಾರ್ಗವಾಗಿದೆ. ಹುಟ್ಟಿನೊಡನೆ ಬರುವ ಸ್ಮೃತಿ  ಅಥವಾ ನೆನಪಿನ ಕೋಶವನ್ನು ನಿರಚನ ಮಾಡಿಕೊಂಡು ತನ್ನದೆಂಬುವ ಯಾವ ಸ್ಮೃತಿ ಯನ್ನು ಉಳಿಸದೆ Just ಜೀವಿಸುವುದಷ್ಟೆ ಆಗಿದೆ. “ಬದುಕನ್ನು ಅದರ ಸಹಜತೆಯೊಂದಿಗೆ ನೋಡಿದಾಗ ಈ ಪ್ರಪಂಚಕ್ಕೆ ಬಂದವರು ಯಾರೂ, ಏನೂ ಕಳೆದುಕೊಂಡಿದ್ದಿಲ್ಲ! ಪಡೆದುಕೊಂಡಿದ್ದೂ ಇಲ್ಲ! ಉಳಿಸಿ ಹೋಗಬೇಕಿರುವುದಂತು ಏನೂ ಇಲ್ಲ” (ಪುಟ 177) ಈ ವಿವೇಕ ಇಲ್ಲಿ ಕೆಲಸ ಮಾಡುತ್ತದೆ. ಇದರಿಂದಾಗಿ “ನನ್ನದೆಂಬುದು ಲೋಕದಲ್ಲಿ ಏನೂ ಇಲ್ಲ. ಈ ಲೋಕವೆಲ್ಲಾ ಸಂಬಂಧದಿಂದಾಗಿ ನನ್ನದೇ” (ಪುಟ 86) ಎಂದು ಜೀವ ಜೀವಿಸುತ್ತದೆ.
ಈ ರೀತಿ ಜೀವಿಸುವಿಕೆಯಲ್ಲಿ ಮಾತ್ರ ಮನುಷ್ಯ ಜೀವಿಗಳ ಒಳಗಿಂದ ಕಾರುಣ್ಯ, ಮೈತ್ರಿಭಾವ ಪ್ರವಹಿಸುತ್ತದೆ ಎಂದು ಅಚಲಮಾರ್ಗ ನಡೆಯುತ್ತದೆ. ಹುಟ್ಟಿನೊಡನೆ ಬರುವ ಸ್ಮೃತಿ ಕೋಶವನ್ನು ಖಾಲಿ ಮಾಡಿಕೊಂಡು ತನ್ನ ಯಾವ ಸ್ಮೃತಿ ಯನ್ನು ಉಳಿಸದೆ ‘ಇರುವ’ ನಡಿಗೆ ಇದು. ಇದೊಂದು ರೀತಿ ಹೆಜ್ಜೆ ಗುರುತು ಉಳಿಸದ ಮರಳಿನ ಮೇಲಿನ ನಡಿಗೆ. `ಇರುವಿಕೆ’ ಎಂದರೆ ಬಹುಶಃ ಹಿಂದು ಮುಂದು ಇಲ್ಲದ ಈ ನಡಿಗೆಯೇ ಇರಬಹುದು ಅನ್ನಿಸಿಬಿಡುತ್ತದೆ. ಇಲ್ಲಿ ಬರುವ 0 1 0 ನಲ್ಲಿ, 1 ಅಂದರೆ ಪ್ರಜ್ಞೆ ಬದಲು ಪ್ರಜ್ಞಾಪೂರ್ವಕ ಇರುವಿಕೆ ಎಂದು ಗ್ರಹಿಸಿ ಹೇಳುತ್ತಿರುವೆ. ಆಗ ಇದ್ದಾಗ ಇದ್ಹಾಂಗ ಇರುವುದಷ್ಟೆ ಅಂತಾಗುತ್ತದೆ.

ಈಗ ಒಂದಿಷ್ಟು ಸಲಹಾರೂಪದ ಅನ್ನಿಸಿಕೆಗಳು:
1. ಇಲ್ಲಿ- “ಎರುಕ ನಿರಸನಮು” ಎಂಬ ಪರಿಕಲ್ಪನೆ ಬರುತ್ತದೆ. ತೆಲುಗಿನ `ಎರುಕ’ ಪದಕ್ಕೆ `ಅಚಲ ಗುರುಮಾರ್ಗ’ ಪುಸ್ತಕದಲ್ಲಿ `ಅರಿವು’ ಎಂಬುದಕ್ಕೆ ಸಂವಾದಿಯಾಗಿ ಬಳಸಲಾಗಿದೆ. ಆದರೆ ಕನ್ನಡದಲ್ಲಿ ಅಲ್ಲಮ “ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು” ಅನ್ನುತ್ತಾನೆ. ಕುರುಹು ನಷ್ಟ ಮಾಡಿಕೊಳ್ಳುವುದಕ್ಕಾಗೆ ಅಚಲ ಮಾರ್ಗವೂ ಒದ್ದಾಡುತ್ತದೆ. ಅಲ್ಲಮ `ಅರಿವು’ನ್ನು ಪ್ರಜ್ಞೆ ಎಂದೇ ಗ್ರಹಿಸಿದ್ದಾನೆ. ಹಾಗಾಗಿ `ಎರುಕ’ ಅಂದರೆ ಜ್ಞಾನ (Knowledge) ಇರಬಹುದೆ? ಕನ್ನಡದಲ್ಲಿ ಎರಕ ಹುಯ್ಯೋದು ಅಂತ ಒಂದು ಪದವೂ ಇದೆ- Mould ಅನ್ನುವುದಕ್ಕೆ. ಇಲ್ಲಿ ಹುಟ್ಟುವ ವ್ಯಕ್ತಿ Knowledgeನಿಂದ Mould ಆಗಿ ಆದವನು, ಹಾಗಾಗಿ “ಎರುಕ ನಿರಸನಮು” ಅಂದರೆ “ಜ್ಞಾನದ ನಿರಸನ” ಎಂದು ಮಾಡಿಕೊಂಡರೆ ತಿಳಿಯಾಗಬಹುದೆನ್ನಿಸುತ್ತದೆ.
2. ಪುಟ 105ರಲ್ಲಿ- `ಉಪನಿಷತ್ತಿನ ಅಹಂಬ್ರಹ್ಮಾಸ್ಮಿ ಎಂದರೆ ನಾನು ಬ್ಮಹ್ಮನಾಗಿರುವೆನು ಎಂದರ್ಥ, ನಾನು ಬ್ರಹ್ಮನಾಗಿದ್ದ ಪಕ್ಷದಲ್ಲಿ ಈ ಶರೀರವು ಬ್ರಹ್ಮನಾಗಿ ಸಾಯದಿರಬೇಕಿತ್ತಲ್ಲವೆ?’ ಎಂದು ವಾದ ಮಾಡಲಾಗಿದೆ. ಆದರೆ ಉಪನಿಷತ್ ಶರೀರವನ್ನು `ನಾನು’ ಅಂದುಕೊಂಡಿಲ್ಲ. ಹಾಗಾಗಿ ವಾದ ನಿಲ್ಲುವುದಿಲ್ಲ ಅಥವಾ ಇಂಥ ವಾದಗಳು ಅನಗತ್ಯ.
3. ಅಚಲದಲ್ಲಿ `ವೀರ್ಯ ಶುಲ್ಕ’ದ ಪರಿಕಲ್ಪನೆ ಬರುತ್ತದೆ. ಇದು ಅಜ್ಞಾತವಾಸದ ಅಭಿವ್ಯಕ್ತಿ. ಈ `ವೀರ್ಯಶುಲ್ಕ’ ಪರಿಕಲ್ಪನೆಯ ಮಾರುವೇಷವನ್ನು ತೆಗೆದು ಬಿಡುಗಡೆಗೊಳಿಸಿದರೆ ಕಾಣುವಿಕೆ ತಿಳಿಯಾಗಬಹುದೇನೊ. ಹಾಗೂ ಬಹಳ ಮುಖ್ಯವಾಗಿ ಕಾರುಣ್ಯ ಮತ್ತು ಮೈತ್ರಿಗಳನ್ನು ಅಚಲ ತನ್ನ ಉಸಿರಾಟ ಮಾಡಿಕೊಂಡಿದೆ. ಇದೊಂದು ಸಣ್ಣ ಝರಿಯಂತೆ ಹರಿಯುತ್ತಿದೆ. ಕಾರುಣ್ಯ ಮತ್ತು ಮೈತ್ರಿಗಾಗಿ ಒದ್ದಾಟಗಳು ಎಲ್ಲೆಲ್ಲೊ ಹೇಗೆಗೊ ಮರೆಮಾಚಿಕೊಂಡು ವೈದಿಕದೊಳಗೊ, ಎದ್ದು ಕಾಣುವಂತೆ ಅವೈದಿಕದೊಳಗೊ ಯಾವಯಾವುದೊ ದರ್ಶನಗಳ ಒಳಗೆ ಧರ್ಮಗಳ ಒಳಗೂ ಮೂಲನಿವಾಸಿಗಳಲ್ಲೊ ಈ ಭೂಮಿಯ ಯಾವ ಮೂಲೆಯಲ್ಲೊ ಸಣ್ಣ ಸಣ್ಣ ಝರಿಗಳಾಗಿ ಹರಿಯುತ್ತಿರಬಹುದು. ಕಾಲವು ಎಲ್ಲರನ್ನೂ ಎಲ್ಲವನ್ನೂ ಕಲಸಿಬಿಟ್ಟಿದೆ. ಅವು ಅಚಲರ ವೀರ್ಯಶುಲ್ಕದಂತೆ ಮಾರುವೇಷದ ಅಜ್ಞಾತವಾಸದಲ್ಲೂ ಇರಬಹುದು. ಭೂಮಿ ಮೇಲೆ ಹರಿಯುತ್ತಿರುವ ಈ ಕಾರುಣ್ಯ ಮತ್ತು ಮೈತ್ರಿಯ ಝರಿಗಳನ್ನು ಕೂಡಿಸಿದರೆ ಅದೊಂದು ನದಿಯಾಗಿ ಹರಿಯಬಹುದಲ್ಲವೆ? ಭೂಮಿಗೆ ಕಾರುಣ್ಯ, ಮೈತ್ರಿ ತುರ್ತಾಗಿ ಬೇಕಾಗಿದೆ.
ಜೊತೆಗೆ, ಭಾರತೀಯ ದರ್ಶನ/ಚಿಂತನೆಯಲ್ಲಿ ಆತ್ಮ ಮತ್ತು ಪ್ರಜ್ಞೆ ಇವೆರಡೂ ಇಲ್ಲಿ ಹುಟ್ಟುವವರನ್ನು ನಿರ್ಧರಿಸುತ್ತಿರಬಹುದು ಅನ್ನಿಸಿತು. ಆತ್ಮದಲ್ಲಿ ಪರಮ (absolute) ಇರುತ್ತದೆ. ಇದು Permanent ಕಡೆಗೆ ಕೊಂಡೊಯ್ಯುತ್ತದೆ. ಆದರೆ ಪ್ರಜ್ಞೆಯಲ್ಲಿ ‘ಪರಮ’ ಅನ್ನುವುದು ಇಲ್ಲ. ಇದು ಪ್ರವಾಹ. `ಪ್ರಜ್ಞಾ ಪ್ರವಾಹ’ ಅನ್ನುತ್ತೇವೆ. `ಆತ್ಮ ಪ್ರವಾಹ’ ಅನ್ನಲಾಗದು. ಆತ್ಮವು ಶಾಶ್ವತದ ಕಡೆಗೆ ನಡೆದರೆ ಪ್ರಜ್ಞೆಯುImpermanent ಅಂದರೆ ಕ್ಷಣಕ್ಷಣ ಬದಲಾವಣೆಯ ಕಡೆಗೆ ಚಲಿಸುತ್ತದೆ. ಆತ್ಮ ಮತ್ತು ಪ್ರಜ್ಞೆಯ ಈ ಜಗ್ಗಾಟದಲ್ಲಿ ಜೀವ ಸಂಕುಲಕ್ಕೆ ಹಿತವಾದುದನ್ನು ಹುಡುಕಬೇಕಾಗಿದೆ. ವಚನಕಾರರು ಕಂಡುಕೊಂಡಂತೆ.
ಈ ಕಾರ್ಯದಲ್ಲಿ ಪದ್ಮಾಲಯ, ಬೂದಾಳ್, ತರೀಕೆರೆ, ಕೋಲಾರ, ನಂಗ್ಲಿ ಮುಂತಾದ ಸಹಮನಸ್ಕ ಮಠಗಳ ಗುರುಗಳು ಕೂಡಿ ಸಂವಾದಿಸಿದರೆ ಒಂದು ಕಾಣ್ಕೆ ಸಿಗಬಹುದು. ಇವರುಗಳು ನನ್ನನ್ನು ಹತ್ತಿರ ಸುಳಿಯದಂತೆ ನೋಡಿಕೊಂಡರೆ ಅವರಿಗೆ ಕ್ಷೇಮ. ಯಾಕೆಂದರೆ ನಾನು mislead ಮಾಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಕೊನೆಯದಾಗಿ, ಈ ಪುಸ್ತಕ ಓದಿದ ಮೇಲೆ ನನ್ನೊಳಗೆ ಉಳಿದಿದ್ದು- ಭೂಮಿಗೆ ಭಾರವಾಗದಂತೆ ಜೀವಿಸುವ ಜೀವಕರಾದ ಅಚಲರ ಬಗ್ಗೆ ಅಪಾರವಾದ ಗೌರವ ಹಾಗೂ ಕೃತಜ್ಞತೆಗಳು.