ಭೂಮಿಗೀತ ಡಾಟ್ ಕಾಂ.- ಹೊಸ ಅಂತರ್ಜಾಲ ತಾಣ.

              http://www.bhoomigeetha.com/

                              

   ಭೂಮಿಗೀತ ಡಾಟ್ ಕಾಂ. ಹೆಸರೇ ಹೇಳುವಂತೆ ಇದು ಈ ಭೂಮಿಯ ಮೇಲಿನ ಒಡಲಾಳದ ಸಂಕಟಗಳನ್ನು ಹೇಳುವ ಅಂತರ್ಜಾಲದ ತಾಣ. 1982 ರಲ್ಲಿ ದೆಹಲಿಯಲ್ಲಿ ಅನಿಲ್ ಅಗರ್ ವಾಲ್ ಹುಟ್ಟು ಹಾಕಿದ “ ಡೌನ್ ಟು ಅರ್ಥ್” ಇಂಗ್ಲೀಷ್ ಪಾಕ್ಷಿಕ ಪತ್ರಿಕೆಯು ಭಾರತದಲ್ಲಿ ಪರಿಸರ ಕುರಿತ ಕಾಳಜಿಯನ್ನು ಹುಟ್ಟು ಹಾಕುವುದರ ಜೊತೆಗೆ ಇಲ್ಲಿನ ಕೃಷಿ, ಅರಣ್ಯ, ಆದಿವಾಸಿಗಳ ಬದುಕು ಮತ್ತು ಅವರ ನೆಲಮೂಲ ಸಂಸ್ಕೃತಿ ಕುರಿತು ಯೋಚಿಸುವಂತೆ ಮಾಡಿತು. ಅಂತಹ ಪ್ರಯತ್ನ ಮತ್ತು ಕನಸು ನಮ್ಮದು. ಗಾಂಧಿ ತಮ್ಮ ಬದುಕಿನುದ್ದಕ್ಕೂ ಪ್ರತಿಪಾದಿಸಿದ ಸರಳವಾದ ಬದುಕು ಮತ್ತು ನಿಸರ್ಗದ ಕೊಡುಗೆಗಳನ್ನು ಮಿತವಾಗಿ ಬಳಕೆ ಮಾಡುವಂತೆ ನಮ್ಮನ್ನೆಲ್ಲಾ ಪ್ರೆರೇಪಿಸಿತ್ತು. ಆದರೆ, 1990 ರ ದಶಕದಲ್ಲಿ ಜಗತ್ತಿನಾದ್ಯಂತ ಆವರಿಸಿಕೊಂಡ ಜಾಗತೀಕರಣದಿಂದಾಗಿ ನಮ್ಮಲ್ಲಿ ಹುಟ್ಟುಕೊಂಡ ಕೊಳ್ಳುಬಾಕತನ ಇಡೀ ವಿಶ್ವವನ್ನು ಅಪಾಯದ ಅಂಚಿಗೆ ದೂಡಿದೆ.

    ಇಂತಹ ಸಂಕಟ ಮತ್ತು ಆತಂಕದ ಸಮಯದಲ್ಲಿ ಈ ನೆಲದ ಮೇಲಿನ ನೀರು, ಗಾಳಿ, ಗಿಡ, ಮರ, ಪಕ್ಷಿ, ಪ್ರಾಣಿ ಇವುಗಳ ಕುರಿತು ಮಾತನಾಡುವುದು ಈಗ ಅತ್ಯಗತ್ಯವಾಗಿದೆ. ಕರ್ನಾಟಕದದಲ್ಲಿ ಕಳೆದ ಮೂರು ದಶಕಗಳಿಂದ ಪರಿಸರ, ಕೃಷಿ, ಗ್ರಾಮೀಣಾಭಿವೃದ್ಧಿ, ಜಲ ಸಂಪನ್ಮೂಲಗಳು, ದೇಶಿ ಬಿತ್ತನೆ ಬೀಜಗಳು, ಆರಣ್ಯ ಮತ್ತು ಅಲ್ಲಿನ ಆದಿವಾಸಿಗಳ ಜೊತೆ ಗುರುತಿಸಿಕೊಂಡು, ಈ ನಾಡಿನ ಸಾಕ್ಷಿ ಪ್ರಜ್ಞೆಯಂತಿರುವ ತಜ್ಞರ ಸಹಕಾರದೊಂದಿಗೆ ಅವರ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿ ಈ ತಾಣ ಕಾರ್ಯನಿರ್ವಹಿಸಲಿದೆ. ಅಭಿವೃದ್ಧಿ ಕುರಿತ ಅಪಕ್ವ ಕಲ್ಪನೆಗಳು, ನಾವು ಮರೆತು ಹೋಗಿರುವ ಹಾಗೂ ಪರಿಸರಕ್ಕೆ ಎಂದಿಗೂ ಎರವಾಗದ ನಮ್ಮ ಪೂರ್ವಿಕರ ಜ್ಞಾನ ಶಿಸ್ತುಗಳು, ದೇಶಿ ಆಹಾರ ಸಂಸ್ಕೃತಿ, ಸಾಮಾಜಿಕ ಹಾಗೂ ಅವರ ನೈಸರ್ಗಿಕ ಕಾಳಜಿಯನ್ನು ಪುನರ್ ಪ್ರತಿಷ್ಠಾಪಿಸುವುದು ನಮ್ಮೆಲ್ಲರ ಗುರಿಯಾಗಿದೆ.

ಇವುಗಳ ಜೊತೆಗೆ ವಿದ್ಯಾರ್ಥಿಗಳಿಗೆ, ಶಿಕ್ಷರಿಗೆ, ಮತ್ತು ಆಸಕ್ತರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳುವುದು, ಪುಸ್ತಕ ಪ್ರಕಟಣೆ, ವಿಚಾರ ಸಂಕಿರಣ ಏರ್ಪಡಿಸುವುದು, ಸಾಕ್ಷ್ಯ ಚಿತ್ರಗಳ ನಿರ್ಮಾಣ ಹೀಗೆ ಹಲವು ಗುರಿಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.

-ಡಾ. ಎನ್. ಜಗದೀಶ್ ಕೊಪ್ಪ