ಭಾರತ ಮತ್ತು ಕರ್ನಾಟಕದ ಪ್ರಸ್ತುತ ಸಂದರ್ಭ – ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶ – ಧಾರವಾಡ, ಜುಲೈ 9 ಮತ್ತು 10

                                                                       ಒಂದು ಮನವಿ ಪತ್ರ

ಪ್ರಿಯರೇ,

ಭಾರತ ಗಣರಾಜ್ಯವು ಅತ್ಯಂತ ಅಪಾಯಕಾರಿ ಬಿಕ್ಕಟ್ಟಿನಲ್ಲಿ ಸೆರೆಯಾಗಿದೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಕಾರ್ಪೋರೇಟ್ ಪರ ಆರ್ಥಿಕ ನೀತಿಗಳನ್ನು ಜಾರಿಗೆ ತಂದು ಎರಡೂವರೆ ದಶಕಗಳು ಗತಿಸಿಹೋಗಿವೆ. ಸದ್ಯ ಕೇಂದ್ರದ ಬಿಜೆಪಿ ಸರ್ಕಾರ, ಜಾರಿಯಲ್ಲಿ ಇರುವ ನವ ಉದಾರೀಕರಣ ನೀತಿಗಳಿಗೆ ಭಯಾನಕ ವೇಗದ ಗತಿಯನ್ನು ನೀಡಿದೆ.

ಅಗತ್ಯ ವಸ್ತುಗಳು, ಜೀವರಕ್ಷಕ ಔಷಧಗಳ ಬೆಲೆಗಳು ಗಗನಗಾಮಿಯಾಗಿ ಜನರ ಕೊಳ್ಳುವ ಶಕ್ತಿ ಕುಂದುಹೋಗಿದೆ. ಬೇಳೆಕಾಳುಗಳು ಮತ್ತು ತರಕಾರಿಗಳು ಜನರ ಊಟದ ತಟ್ಟೆಯಿಂದ ಮರೆಯಾಗಿವೆ. ಆರೋಗ್ಯ ಮತ್ತು ಶಿಕ್ಷಣ ಜನ ಸಾಮಾನ್ಯರಿಗೆ ನಿಲುಕದ ನಕ್ಷತ್ರಗಳಾಗಿವೆ.

ಕೃಷಿ ಬಿಕ್ಕಟ್ಟು ಸಹಿಸಲಾಗದ ಮಹಾ ಸಂಕಟವಾಗಿದೆ. ದೇಶದಲ್ಲಿ ಈಗಾಗಲೇ 3 ಕೋಟಿ ಹೆಕ್ಟೇರ್ ಫಲವತ್ತಾದ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಮಾರ್ಪಡಿಸಿ, ಉದ್ದಿಮೆದಾರರಿಗೆ, ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಧಾರೆಯರೆದು ಕೊಡಲಾಗಿದೆ. ಅಷ್ಟೇ ಸಾಲದು ಎಂದು 18 ಕೈಗಾರಿಕಾ ಕಾರಿಡಾರುಗಳಿಗೆ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ನಾಲ್ಕು ಪಟ್ಟು ಭೂಮಿಯನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಹುನ್ನಾರ ಪ್ರಾರಂಭವಾಗಿದೆ.

ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ನೀಡುತ್ತಿದ್ದ ಕೃಷಿ ಕ್ಷೇತ್ರ ಕುಗ್ಗುತ್ತಾ ಸಾಗಿ ನಿರುದ್ಯೋಗ ತಾಂಡವವಾಡುತ್ತಿದೆ. ದೇಶದ ಒಟ್ಟು ಜನಸಂಖ್ಯೆಯ ಪ್ರತಿಶತ ಎಂಬತ್ತರಷ್ಟು ಸಂಖ್ಯೆಯಲ್ಲಿ ಇರುವ ದಲಿತರು, ಆದಿವಾಸಿಗಳು, ಗ್ರಾಮೀಣ ಕುಶಲಕರ್ಮಿಗಳು, ಕೃಷಿ ಕಾರ್ಮಿಕರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ನಗರಗಳ ಅಸಂಘಟಿತ ವಲಯದ ಕಾರ್ಮಿಕರು, ಇತ್ಯಾದಿ ಜನ ಸಮೂಹಗಳ ಬದುಕು ಪ್ರಸ್ತುತ  ಆರ್ಥಿಕ ನೀತಿಗಳ ಅಗ್ನಿಕುಂಡದಲ್ಲಿ ಬೆಂದು ಹೋಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ದೇಶದ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂತಹ ಸಂದರ್ಭದಲ್ಲಿ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಗೆ, ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಮುಂಗಡಪತ್ರದಲ್ಲಿ ಹಣ ಕಡಿತಗೊಳಿಸಿದೆ. ಬಿಜೆಪಿಯ “ಮೇಕಿನ್ ಇಂಡಿಯಾ, ಕುಶಲ ಭಾರತ, ಸ್ಟ್ಯಾಂಡ್ ಅಪ್ ಇಂಡಿಯಾ” ಮುಂತಾದ ಒಣ ಘೋಷಣೆಗಳು ಜನರ ಸಂಕಷ್ಟದ ಪರಿಸ್ಥಿತಿಯನ್ನು ಅಣಕಿಸುತ್ತಿವೆ. ಪ್ರಧಾನ ಮಂತ್ರಿ ಜನಧನ್ ಯೋಜನೆಯ ಬ್ಯಾಂಕ್ ಖಾತೆಗಳು ಬರಿದಾಗಿ ಉಳಿದಿವೆ, ವಿದೇಶಿ ಕಪ್ಪು ಹಣ ಬರಲೇ ಇಲ್ಲ.

ಸುಧೀರ್ಘ ಹೋರಾಟದಿಂದ ಕಾರ್ಮಿಕವರ್ಗ ಪಡೆದುಕೊಂಡ ಹಕ್ಕು ಮತ್ತು ಕಾನೂನುಗಳನ್ನು ಬಿಜೆಪಿ ಸರ್ಕಾರ ಶ್ರಮ ವಿರೋಧಿಯಾಗಿ ತಿದ್ದುಪಡಿ ಮಾಡಿ ಜಾರಿಗೆ ತರಲು ಮುಂದಾಗಿದೆ. ಇದೇ ರೀತಿ ನೈಸರ್ಗಿಕ ಸಂಪನ್ಮೂಲಗಳನ್ನು ಕಾರ್ಪೊರೇಟ್ ಸಂಸ್ಥೆಗಳು ಕೊಳ್ಳೆ ಹೊಡೆಯಲು ಅನುಕೂಲವಾಗುವಂತೆ ಅರಣ್ಯ ಮತ್ತು ಪರಿಸರ ನೀತಿ ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ.

ಇಂತಹ  ವಿಷಮ ಪರಿಸ್ಥಿಯಲ್ಲಿ ಫ್ಯಾಸಿಸಂ ತಲೆ ಎತ್ತುತ್ತಿದೆ ಮತ್ತು ಪ್ರಭುತ್ವ ತನ್ನ ರಕ್ಷಣೆಗಾಗಿ ಫ್ಯಾಸಿಸಂನಲ್ಲಿ ಆಶ್ರಯ ಪಡೆಯುತ್ತದೆ. ಫ್ಯಾಸಿಸಂ‌ನ ಪರಿಣಾಮಗಳಾಗಿ ನಾವು ಹೈದರಾಬಾದ್ ಕೇಂದ್ರೀಯ  ವಿಶ್ವವಿದ್ಯಾಲಯದ ದಲಿತ ಸಮುದಾಯಕ್ಕೆ ಸೇರಿದ ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇತನ ತಡೆ ಹಿಡಿಯುವದರಿಂದ ಮೊದಲ್ಗೊಂಡು, ರಾಹುಲ್ ವೇಮುಲ ಆತ್ಮಹತ್ಯೆವರೆಗಿನ ಘಟನೆಗಳಲ್ಲಿ, ಜೆ‍ಎನ್‍ಯುನಲ್ಲಿ ಕನ್ಹಯ್ಯ ಕುಮಾರ್ ಮತ್ತು ಗೆಳೆಯರ ವಿರುದ್ಧ ದೇಶದ್ರೋಹದ ಆಪಾದನೆ ಮಾಡಿ ಜೈಲಿಗೆ ಕಳುಹಿಸಿದ ಘಟನೆಗಳವರೆಗೆ ನಡೆದ ವಿದ್ಯಾಮಾನಗಳನ್ನು ಉದಾಹರಣೆಯಾಗಿ ನೋಡಬಹುದು. ಇದನ್ನು ಫ್ಯಾಸಿಸಂನ ಆಕ್ರಮಣ ಎನ್ನದೆ ಬೇರೇನೆನ್ನಬೇಕು?

ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ದೇಶದ ಆರ್ಥಿಕತೆಯನ್ನು ಒಪ್ಪಿಸಿ ದೇಶದ ಪರಿಸ್ಥಿತಿಯನ್ನು ಹದಗೆಡುವಂತೆ ಮಾಡಿದ್ದು ಪಿ. ವಿ. ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಜೋಡಿ. ಕಾಂಗ್ರೆಸ್ಸಿನ ಮೂಲ ತತ್ವಗಳಾದ ಮಿಶ್ರ ಆರ್ಥಿಕ ನೀತಿ ಮತ್ತು ಅದರ ಭಾಗವಾಗಿದ್ದ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡಿ, ಖಾಸಗೀಕರಣ ಮಾಡಿದ್ದು ಇದೇ ಜೋಡಿ. ಅಲಿಪ್ತ ವಿದೇಶಿ ನೀತಿಯನ್ನು ಕೊನೆಗೊಳಿಸಿ ಅಮೇರಿಕಾದೊಡನೆ ಅಣು ಒಪ್ಪಂದ ಒಳಗೊಂಡಂತೆ ಹಲವಾರು ಒಪ್ಪಂದಗಳನ್ನು ಮಾಡಿಕೊಂಡದ್ದು ಇದೇ ಕಾಂಗ್ರೆಸ್. ಉಳುವವನಿಗೆ ಭೂಮಿ ಎಂಬ ಸಿದ್ಧಾಂತವನ್ನು ಪಕ್ಕಕ್ಕೆ ತಳ್ಳಿ ಅನ್ಯಾಯದ ಭೂಸ್ವಾಧೀನ ನೀತಿಯಿಂದ ಮೂರು ಕೋಟಿ ಹೆಕ್ಟೇರ್ ಭೂಮಿಯನ್ನು ಕೃಷಿಯೇತರ ಬಳಕೆಗೆ ಒಡ್ಡಿದ್ದು ಕೂಡ ಇದೇ ಕಾಂಗ್ರೆಸ್. ಲಕ್ಷಾಂತರ ಕೋಟಿ ಸಾರ್ವಜನಿಕ ಹಣವನ್ನು ಕಲ್ಲಿದ್ದಲು, 2ಜಿ ತರಂಗಾಂತರ, ಕಾಮನ್ವೆಲ್ತ್ ಕ್ರೀಡಾಕೂಟ, ಆದರ್ಶ ವಸತಿ ಹಾಗು ಇನ್ನೂ ಮುಂತಾದ ಹಗರಣಗಳ ಸರಮಾಲೆಗಳ ಮೂಲಕ ಲೂಟಿ ಮಾಡಿ ಸಿಲುಕಿದ್ದು ಕೂಡ ಇದೇ ಕಾಂಗ್ರೆಸ್ಸಿಗರು.

ಈ ಸಂದರ್ಭದ ಪ್ರಮುಖ ಪಲಾನುಭವಿಗಳು ಈ ದೇಶದ ಬಂಡವಾಳಿಗರೇ ಆಗಿದ್ದರು. ಕಳೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತೆ  ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಮನಗಂಡ ಬಡವಾಳಶಾಹಿಗಳು ತಮ್ಮ ಪರ ಆರ್ಥಿಕ ನೀತಿಗಳ ಮುಂದುವರಿಕೆಗೆ ಆಶ್ರಯಿಸಿದ್ದು ನರೇಂದ್ರ ಮೋದಿಯವರನ್ನು. ಚುನಾವಣೆ ಸಂದರ್ಭದಲ್ಲಿ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿದ್ದು ಕೂಡ ಇದೇ ಬಂಡವಾಳಶಾಹಿಗಳು. ಇದರ ಪರಿಣಾಮವು ಲೋಕಸಭೆಯಲ್ಲಿ ವಿರೋಧ ಪಕ್ಷದ ಅಧಿಕೃತ ಸ್ಥಾನವೇ ಇಲ್ಲಂದಂತಾಗಿದ್ದು. ಕಾಂಗ್ರೆಸ್ ತನ್ನ ತಪ್ಪುಗಳ ಭಾರಕ್ಕೆ ಕುಸಿದು ಹೋಗಿದ್ದರೂ ಕೂಡ ಇನ್ನೂ ಬುದ್ಧಿ ಕಲಿತಿಲ್ಲ. ವ್ಯತಿರಿಕ್ತವಾಗಿ ಬಿಜೆಪಿ ಸರ್ಕಾರದ ಎಲ್ಲಾ ಯೋಜನೆಗಳು ನಮ್ಮ ಯೋಜನೆಗಳೇ ಎಂದು ಹೆಮ್ಮೆ ಪಡುತ್ತಿದ್ದಾರೆ. ಒಟ್ಟಿನಲ್ಲಿ ಕಾರ್ಪೊರೇಟ್ ಪಾದಸೇವೆಗೆ ಎನ್‍ಡಿಎ ಮತ್ತು ಯುಪಿಎ ಬಣಗಳು ಸ್ಪರ್ಧೆಗೆ ಇಳಿದಂತೆ ವರ್ತಿಸುತ್ತಿವೆ. ಇದರ ಪರಿಣಾಮವಾಗಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ಹಾಗೇ ಗೋಚರವಾಗುತ್ತಿದೆ.

ಇದು ರಾಷ್ಟ್ರದ ಪರಿಸ್ಥಿತಿಯಾದರೆ, ಇನ್ನು ಕರ್ನಾಟಕದ ಪರಿಸ್ಥಿತಿ ಇನ್ನೂ ವಿಚಿತ್ರವಾಗಿದೆ. ಭ್ರಷ್ಟ ಬಿಜೆಪಿಯನ್ನು ಆಚೆಗಟ್ಟಿ ಅಪಾರ ನಿರೀಕ್ಷೆ ಮತ್ತು ಆಶಾಕಿರಣದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ನೈತಿಕವಾಗಿ ನೆಲ ಕಚ್ಚಿದೆ. ಅಧಿಕಾರ ಅಂಗೀಕರಿಸುತ್ತಲೇ ಅನ್ನಭಾಗ್ಯ ಹಾಗು ಇತರೆ ಜನಪರ ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್ ಸರ್ಕಾರ ಇಂದು ಸ್ವಜನ ಪಕ್ಷಪಾತ ಹಾಗು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಅಕ್ರಮ ಗಣಿಗಾರಿಕೆಯ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್‌ನವರೇ ಪಾದಯಾತ್ರೆ ಮಾಡಿದ್ದರು! ಆದರೆ, ಇಂದು ಅಕ್ರಮ ಗಣಿಗಾರಿಕೆ ಮಾಡಿರುವವರು ಸಚಿವ ಸಂಪುಟದಲ್ಲಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ವಿಸ್ತೃತವಾಗಿ ಬಯಲಿಗೆಳೆದ ಲೋಕಾಯುಕ್ತ ಸಂಸ್ಥೆಯನ್ನೇ ಇಂದು ಮೂಲೆಗುಂಪು ಮಾಡಿ ಸರ್ಕಾರದ ಕೈಗೊಂಬೆಯಂತಿರುವ ಮತ್ತು ಭ್ರಷ್ಟರನ್ನು ರಕ್ಷಿಸುವ ಎಸಿಬಿ ರಚನೆಗೊಂಡಿದೆ.

ರಾಜ್ಯದ ಇತಿಹಾಸದಲ್ಲೇ ಜೈಲಿಗೆ ಹೋದ ಮುಖ್ಯಮಂತ್ರಿ ಎಂಬ ಅಪಖ್ಯಾತಿ ಪಡೆದ ಬಿಜೆಪಿಯ ವರಿಷ್ಠರೊಬ್ಬರನ್ನು ಅಧಿಕಾರ ಹಿಡಿಯುವ ಸಲುವಾಗಿ ಮತ್ತು ಜಾತಿಯ  ಬೆಂಬಲಕ್ಕಾಗಿ ಮುಂದಿನ ಮುಖ್ಯಮಂತ್ರಿ ಎಂದು ಹೇಳಿ, ಬಿಜಿಪಿ  ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದೆ. ಇನ್ನು ಜಾತ್ಯಾತೀತ ಪಕ್ಷ ಎಂದು ತಮ್ಮ ಹೆಸರಿಗೆ ಸೇರಿಸಿಕೊಂಡಿರುವ ಜಾತ್ಯಾತೀತ ಜನತಾದಳ ಒಂದು ಕುಟುಂಬದ ಪಕ್ಷವಾಗಿದೆ. ಜೊತೆಗೆ ಭೂಸುಧಾರಣೆ ಕಾಯ್ದೆಯನ್ನು ಸಡಿಲಗೊಳಿಸಿ ಭೂಗಳ್ಳರಿಗೆ ಮತ್ತು ಬಂಡವಾಳಿಗರಿಗೆ ಭೂಮಿಯನ್ನು ಹರಾಜಿಗಿಟ್ಟು ರೈತರು ಬೀದಿಗೆ ಬೀಳುವಂತೆ ಮಾಡಿರುವ, ಮಣ್ಣಿನ ಮಗ ಎಂದು ಹೇಳಿಕೊಳ್ಳುವ ನೇತಾರರು ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಇಂತಹ ಪೊಳ್ಳು ಜಾತ್ಯಾತೀತವಾದವನ್ನು ಪೋಷಿಸುವ ಹಾಗು ನೈತಿಕವಾಗಿ ದಿವಾಳಿಯಾಗಿರುವ ಪಕ್ಷಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ರಾಜ್ಯದ ನೈಸರ್ಗಿಕ ಸಂಪತ್ತುಗಳಾದ ಮರಳು, ಅರಣ್ಯ, ಗ್ರಾನೈಟ್, ಭೂಮಿ ಯಾವುದೇ ನಿಯಂತ್ರಣವಿಲ್ಲದೆ ಪಟ್ಟಭದ್ರರ ಪಾಲಾಗುತ್ತಿದೆ. ಇದಾವುದೂ ಅವರುಗಳ ಗಮನಕ್ಕೆ ಬರದಂತೆಯೇ ವರ್ತಿಸುತ್ತಿದ್ದಾರೆ. ಈ ಪಟ್ಟಭದ್ರರು ಇಂದಿನ ಮತ್ತು ಹಿಂದಿನ ಸರ್ಕಾರದಲ್ಲಿ ಇದ್ದವರೇ ಆಗಿದ್ದಾರೆ. ಇಂತಹವರಿಂದ ಜನ ಸಾಮಾನ್ಯರ ಹಕ್ಕು ಮತ್ತು ಆಸ್ತಿಗಳ ರಕ್ಷಣೆಯನ್ನು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ?

ಒಟ್ಟಾರೆಯಾಗಿ ಕಾರ್ಪೊರೇಟ್ ಕಂಪನಿಗಳು ಹಾಗೂ ಅದರ ಮಾಲಿಕರುಗಳು ಜನ ಪ್ರತಿನಿಧಿಗಳಾಗುತ್ತಿದ್ದಾರೆ, ಹಾಗೂ  ರಾಜಕೀಯ ಪಕ್ಷಗಳು ಕಾರ್ಪೊರೇಟ್ ವ್ಯವಸ್ಥೆಯಾಗಿ ಬದಲಾಗುತ್ತಿವೆ. ದೇಶದ ಮತ್ತು ರಾಜ್ಯದ ರಾಜಕೀಯ ಹಾಗು ಸಾಮಾಜಿಕ ಸಂಕೀರ್ಣ ಪರಿಸ್ಥಿತಿಯು ಅದು ತಲುಪಬಹುದಾದ ಅಪಾಯಕಾರಿ ಘಟ್ಟಗಳನ್ನು ತಲುಪಿರುವಾಗ ನಾಡಿನ ಪ್ರಜಾಪ್ರಭುತ್ವವಾದಿಗಳು, ದೇಶಪ್ರೇಮಿಗಳು, ಜನಪರ ಚಿಂತಕರು ನೋಡಿದರೂ ನೋಡದಂತೆ ಇರಲು ಸಾಧ್ಯವಿಲ್ಲ.  ಈ ದೇಶದ ಪ್ರತಿಶತ ಎರಡರಷ್ಟಿರುವ ಬಂಡವಾಳಿಗರು, ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಪ್ರತಿಶತ 98ರಷ್ಟಿರುವ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದನ್ನು ಸಹಿಸಿಕೊಂಡು ಸುಮ್ಮನಿರುವುದು ತರವಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೇಲ್ಕಾಣಿಸಿದ ವಿಷಯಗಳಿಗೆ ವಿರೋಧವಿರುವ ಪ್ರಜ್ಞಾವಂತರು, ಜನಪರ ಸಂಘಟನೆಗಳು, ಸಾಹಿತಿಗಳು, ಪತ್ರಕರ್ತರು ನಾವೆಲ್ಲಾ ಒಂದೆಡೆ ಸೇರಿ ಈ ಪರಿಸ್ಥಿತಿಯನ್ನು ನಿಭಾಯಿಸಲು ಚಿಂತಿಸಬೇಕಾಗಿದೆ. ಇಂತಹ ಸಮಯದಲ್ಲಿ ರಾಜಕಾರಣದ ಜನತಾಂತ್ರೀಕರಣ, ಚುನಾವಣಾ ಸುಧಾರಣೆ ಮತ್ತು  ನಾವು ಇನ್ನೂ ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸೋಣ, ಎಲ್ಲರೂ ಒಟ್ಟಾಗಿ ಕೂಡಿ ಮುಂದಿನ ಹೆಜ್ಜೆಗಳನ್ನು ಇಡೋಣ.

ಈ ಕಾರಣಕ್ಕಾಗಿಯೇ 9 ಮತ್ತು 10, ಜುಲೈ 2016 ರಂದು ಧಾರವಾಡದ ವಿಧ್ಯಾವರ್ಧಕ ಸಂಘದಲ್ಲಿ “ಭಾರತ ಮತ್ತು  ಕರ್ನಾಟಕದ ಪ್ರಸ್ತುತ ಸಂದರ್ಭ – ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಚಿಂತಕರಾದ ಎಸ್. ಪಿ. ಶುಕ್ಲಾ, ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಅಖಿಲೇಂದ್ರ ಪ್ರತಾಪ್ ಸಿಂಗ್ ಇತ್ಯಾದಿ ಗಣ್ಯರು ಆಗಮನಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಮ್ಮನ್ನು ಪ್ರೀತಿಯಿಂದ ಮತ್ತು ಆಗ್ರಹಪೂರಕವಾಗಿ ಆಹ್ವಾನಿಸುತ್ತಿದ್ದೇವೆ. ನಿಮ್ಮ ಬರುವಿಕೆಯನ್ನು ಖಚಿತಪಡಿಸಿ ಸಂದೇಶ ಕಳುಹಿಸಲು ವಿನಂತಿಸುತ್ತಿದ್ದೇವೆ.

ವಂದನೆಗಳೊಂದಿಗೆ,

ಎಸ್. ಆರ್. ಹಿರೇಮಠ
ದೇವನೂರ ಮಹಾದೇವ
ರಾಘವೇಂದ್ರ ಕುಷ್ಟಗಿ, ಜನ ಸಂಗ್ರಾಮ ಪರಿಷತ್
ಕೆ. ಎಸ್. ಪುಟ್ಟಣ್ಣಯ್ಯ, ಶಾಸಕರು ಸರ್ವೋದಯ ಕರ್ನಾಟಕ ಪಕ್ಷ
ದೊಡ್ಡಿಪಾಳ್ಯ ನರಸಿಂಹಮೂರ್ತಿ, ಸ್ವರಾಜ್ ಅಭಿಯಾನ್
ಪಿ. ರಾಜೀವ್, ಶಾಸಕರು ಕರ್ನಾಟಕ ಸ್ವರಾಜ್ ಪಾರ್ಟಿ

ಸೂಚನೆ:  1. ಎರಡು ದಿನಗಳ ಊಟ ಮತ್ತು ಒಂದು ದಿನದ ವಸತಿ ವ್ಯವಸ್ಥೆ ಮಾಡಲಾಗಿದೆ.
2. ಹೆಚ್ಚಿನ ಮಾಹಿತಿಗಾಗಿ ಮತ್ತು ಬರುವಿಕೆಯನ್ನು ತಿಳಿಸಲು ಸಂಪರ್ಕಿಸಿ:

ದೀಪಕ್ ಸಿ.ಎನ್- 9449559451/deepu.cn@gmail.com
ಐ. ಜಿ. ಪುಲ್ಲಿ – 9449865021
ಪ್ರಸನ್ನ – 9591985865
ರಾಘವೇಂದ್ರ ಕುಷ್ಟಗಿ – 9738810311
ಅಭಿರುಚಿ ಗಣೇಶ್ –     9980560013

A

 

B