ಭಾರತದ ಜಾತ್ಯಸ್ಥ ಮನಸಿನೊಳಗೆ ಇಣುಕಿದರೆ… ದೇವನೂರ ಮಹಾದೇವ

gandhi ambedkar.jpg 1
ಒಂದು ಘಟನೆ ಮುಂದಿಡುವೆ. ನಮಗೆಲ್ಲ ಉತ್ತರ ಭಾರತದ ರೈತ ಸಂಘಟನೆಯ ಮಹಾನ್ ನಾಯಕ ಮಹೇಂದ್ರ ಸಿಂಗ್ ಟಿಕಾಯತ್ ಗೊತ್ತು. ಇವರನ್ನು ಭಾರತ ಜಾತ್ಯಸ್ಥ  ಮನಸ್ಸಿಗೆ ಪ್ರಾತಿನಿಧಿಕ ವ್ಯಕ್ತಿ ಎಂದೆನ್ನಬಹುದು. ಅವರೊಂದು ಸಲ, ಕರ್ನಾಟಕಕ್ಕೆ ಬಂದಿದ್ದಾಗ- ಒಂದೇ ಸಲಕ್ಕೆ ಒಂದೇ ಕಾಲಕ್ಕೆ….. ಒಂದು ಬೆಂಗಳೂರು, ಇನ್ನೊಂದು ಬಳ್ಳಾರಿ ಜಿಲ್ಲೆ ಹೊಸಪೇಟೆ. ಈ ಎರಡೂ ಕಡೆಯ ರೈತ ಸಮಾವೇಶಕ್ಕೆ ಬರುವುದಾಗಿ ಒಪ್ಪಿಗೆ ಕೊಟ್ಟು ಅವರು ಎಲ್ಲಿ ಭಾಗವಹಿಸುತ್ತಾರೆ ಎಂಬುದು ತಿಳಿಯದೆ ಗೊಂದಲ ಆತಂಕ ಕುತೂಹಲ ಗಳಿಗೆ ಗಳಿಗೆಗೂ ಹೆಚ್ಚುತ್ತಿತ್ತು. ಮಾಧ್ಯಮಗಳಂತೂ ಹಬ್ಬದ ಮನಃಸ್ಥಿತಿಯಲ್ಲಿದ್ದವು. ಕೊನೆಗೆ ಅದೂ ಕೂಡಿಬಂತು. ಟಿಕಾಯತ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬಂದರು. ಮಾಧ್ಯಮದವರು ಮುಗಿಬಿದ್ದರು. ಪ್ರಶ್ನೆ ಒಂದೇ- “ಯಾವ ಕಡೆ ಹೋಗುತ್ತೀರಿ?” ಒಂದು ಕಡೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದ ರೈತ ಸಮಾವೇಶ ಬೆಂಗಳೂರಲ್ಲಿ- ಟಿಕಾಯತ್ ಕರೆದೊಯ್ಯಲು, ಆಗ ಆ ಪಕ್ಷದ ಅಧ್ಯಕ್ಷ ವೈದ್ಯನಾಥ್ ಪಾಟೀಲ್ (ಮಾಜಿ ಸಚಿವ) ದುಬಾರಿ ಕಾರಿನ ಪಕ್ಕ ಹಸನ್ಮುಖರಾಗಿ ನಿಂತಿದ್ದರು. ಇನ್ನೊಂದು ಕಡೆ ರೈತ ನಾಯಕ ಎಂ.ಡಿ.ನಂಜುಂಡಸ್ವಾಮಿ ನೇತೃತ್ವದಲ್ಲಿ ಬಾಗಲಕೋಟೆಯಲ್ಲಿ ನಡೆಯುವ ರೈತ ಸಮಾವೇಶಕ್ಕೆ ಟಿಕಾಯತ್‍ರನ್ನು ಕರೆದೊಯ್ಯಲು ಒಂದು ಸಾಧಾರಣ ಕಾರಿನೊಡನೆ ರೈತ ಕಾರ್ಯಕರ್ತನೊಬ್ಬ ಸಪ್ಪಗೆ ನಿಂತಿದ್ದ. ಮಾಧ್ಯಮದವರು ಟಿಕಾಯತ್‍ರಿಗೆ ಮತ್ತೆ ಮತ್ತೆ ಅದೇ ಅದೇ ಪ್ರಶ್ನೆ ಮುಂದಿಡುತ್ತಿದ್ದರು-“ಯಾವ ಕಡೆ ಹೋಗುತ್ತೀರಿ?” ಟಿಕಾಯತ್ ತಮ್ಮ ಹೆಗಲ ಮೇಲಿನ ಶಲ್ಯವನ್ನು ಕೈಗೆ ತೆಗೆದುಕೊಂಡು ಒಂದ್ಸಲ ಜಾಡಿಸಿದರು. “ಎಲ್ಲಿ ನಿಜವಾದ ರೈತರು ಇದ್ದಾರೊ ಅಲ್ಲಿಗೆ ಹೋಗುತ್ತೇನೆ” ಎಂದಷ್ಟೇ ಹೇಳಿ ಎಂ.ಡಿ.ನಂಜುಂಡಸ್ವಾಮಿ ಅವರು ಕಳಿಸಿದ್ದ ಕಾರಿನಡೆಗೆ ದಾಪುಗಾಲು ಹಾಕುತ್ತ ನಡೆದರು!

ಬಹುಶಃ ಇದು ಭಾರತದ ಜಾತ್ಯಸ್ಥ ಪ್ರಾತಿನಿಧಿಕ ಮನಸ್ಸಲ್ಲಿ ಇರುವ ವಿವೇಕ ವಿವೇಚನೆ ಅನ್ನಿಸುತ್ತದೆ.
ಮುಂದೆ, ಇನ್ನೊಂದ್ಸಲ ಅದೇ ಎಂಡಿಎನ್‍ರ ರೈತ ಸಮಾವೇಶವೊಂದು ಮುಗಿದ ಮೇಲೆ ಟಿಕಾಯತ್‍ರನ್ನು ವಾಸ್ತವ್ಯಕ್ಕೆ ಒಂದು ಪ್ರವಾಸಿ ಬಂಗಲೆಗೆ ಕರೆದುಕೊಂಡು ಬರುತ್ತಾರೆ. ತಾವು ಆ ರಾತ್ರಿ ಕಳೆಯಬೇಕಾದ ಆ ಪ್ರವಾಸಿ ಬಂಗಲೆ ರೂಂ ಅನ್ನು ನೋಡಿ ಟಿಕಾಯತ್ ಇದೇನು ಇಷ್ಟೊಂದು ವೈಭವಪೂರಿತ ಕೊಠಡಿ! ಬೆಳಕು ಕಣ್ಣು ಕುಕ್ಕುತ್ತಿದೆ! ಎಂಥ ದೊಡ್ಡ ಮಂಚ! ಇಲ್ಲಿ ನನಗೆ ಮಲಗಲು ಸಾಧ್ಯವೇ ಇಲ್ಲ. ನನಗೆ ಇಂಥ ಕಡೆ ನಿದ್ದೆಯೇ ಬರದು’ ಎಂದು ಎಷ್ಟು ಹೇಳಿದರೂ ಕೇಳದೆ, ಎಂಡಿಎನ್ ಇದು ಸಾಧಾರಣ ಪ್ರವಾಸಿ ಬಂಗಲೆ ಎಂದರೂ ಲೆಕ್ಕಿಸದೆ ಮಗುವಿನಂತೆ ರಚ್ಚೆ ಹಿಡಿಯುತ್ತಾರೆ. ಒಪ್ಪಿಸುವ ಪ್ರಯತ್ನ ವಿಫಲವಾಗಿ ಕೊನೆಗೆ ಸುಸ್ತಾಗಿ- ಹಗ್ಗದ ಮಂಚ ಇರುವ ರೈತನೊಬ್ಬನ ಮನೆಯಲ್ಲಿ ಅವರ ವಾಸ್ತವ್ಯಕ್ಕೆ ಏರ್ಪಾಡಾಗುತ್ತದೆ. ಅಲ್ಲಿ ಟಿಕಾಯತ್, ಆ ವಾತಾವರಣದಲ್ಲಿ ದನಕರುಗಳ ಶಬ್ಧ, ವಾಸನೆಗಳನ್ನು ತನ್ನದು ಅಂದುಕೊಂಡರೇನೋ- ಮೈಮರೆತು ನಿದ್ದೆ ಮಾಡುತ್ತಾರೆ.
ಬಹುಶಃ ಇದು ಭಾರತದ ಪ್ರಾತಿನಿಧಿಕ ಜಾತ್ಯಸ್ಥ  ಮನಸ್ಸಲ್ಲಿ ಇರುವ ಸರಳತೆ ಅನ್ನಿಸುತ್ತದೆ.
ಆದರೆ, ಆದರೆ ಇದೇ ಟಿಕಾಯತ್ ಒಮ್ಮೆ “ಅಂತರ್‍ಜಾತಿ ವಿವಾಹವಾಗುವವರ ಕೈ ಕತ್ತರಿಸಬೇಕು” ಎಂದು ಹೇಳಿಕೆ ನೀಡುತ್ತಾರೆ.
ಬಹುಶಃ ಇದು ಭಾರತದ ಜಾತ್ಯಸ್ಥ  ಮನಸ್ಸಲ್ಲಿ ಇರುವ ಕ್ರೌರ್ಯ ಅನ್ನಿಸುತ್ತದೆ.
ಮೊದಲ ಎರಡು– ಅಂದರೆ ಭಾರತದ ಜಾತ್ಯಸ್ಥ  ಮನಸ್ಸಿನ ವಿವೇಕ, ವಿವೇಚನೆ ಹಾಗೂ ಸರಳತೆಗಳು ಗಾಂಧೀಜಿಗೆ ಹೆಚ್ಚು ಕಾಣಿಸುತ್ತಿತ್ತು ಅನ್ನಿಸುತ್ತದೆ.
ಕೊನೆಯದು– ಅಂದರೆ ಭಾರತದ ಜಾತ್ಯಸ್ಥ  ಮನಸ್ಸಿನ ಕ್ರೌರ್ಯವು ಅಂಬೇಡ್ಕರ್‍ರಿಗೆ ಹೆಚ್ಚು ಕಾಣಿಸುತ್ತಿತ್ತು ಅನ್ನಿಸುತ್ತದೆ.
ಆ ವಿವೇಕ ವಿವೇಚನೆ ಹಾಗೂ ಸರಳತೆಯನ್ನು ಕಾಪಾಡಿಕೊಂಡು ಈ ಕ್ರೌರ್ಯವನ್ನು ಕತ್ತರಿಸಿ ಬಿಸಾಕಿ ಭಾರತಕ್ಕೆ ಘನತೆ ಮತ್ತು ಮನುಷ್ಯತ್ವ ತಂದುಕೊಡುವುದು ಹೇಗೆ?– ಈಗ ಇದು ನಮ್ಮ ಮುಂದಿದೆ.