ಭಾರತದಲ್ಲಿ ಎರಡು ರೀತಿಯ ಬಡವರು ಇದ್ದಾರೆಯೆ? –ದೇವನೂರ ಮಹಾದೇವ

[ಸಾಮಾನ್ಯ ಕೆಟಗರಿಯ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲು ನಿಗದಿಗೊಳಿಸಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಪ್ರತಿಕ್ರಿಯೆಯಾಗಿ 8.1.2019ರಂದು ಪ್ರಜಾವಾಣಿ ಪತ್ರಿಕೆಯು ದೇವನೂರ ಮಹಾದೇವ ಅವರನ್ನು ಮಾತಾಡಿಸಿದಾಗ ಆಡಿದ ಮಾತುಗಳ ತಿದ್ದುಪಡಿಯಾದ ಪೂರ್ಣಪಾಠ…]

ಮೀಸಲಾತಿ ಪರಿಕಲ್ಪನೆಯ ಆಳ, ಅಗಲ, ಔಚಿತ್ಯ, ಅರಿವಿಲ್ಲದ ನಾಯಕತ್ವವೊಂದು ತೆಗೆದುಕೊಂಡ ನಿರ್ಧಾರ ಇದಾಗಿದೆ. ಜೊತೆಗೆ, ಈ ನಿರ್ಧಾರ ಎದುರಿಗೆ ಇರುವ ಸಮಸ್ಯೆಗೆ ಮುಖಾಮುಖಿಯಾಗದೆ ಆ ಸಮಸ್ಯೆಯನ್ನೇ ಮಸುಕು ಮಾಡಲು ನಡೆಸಿದ ಪ್ರಯತ್ನದಂತಿದೆ.
ಯಾಕೆಂದರೆ, 2014ರ ಚುನಾವಣಾ ವೇಳೆ ಹಾಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಅವರು ಮಾಡಿಕೊಂಡ ಹಲವು ಅನಾಹುತಗಳಿಂದ ಒಂದು ಕೋಟಿ ಉದ್ಯೋಗಗಳೇ ಕಡಿಮೆಯಾದವು. ಯಥಾಸ್ಥಿತಿ ಕೂಡ ಮುಂದುವರಿಯಲಿಲ್ಲ. ಈಗ ಮತ್ತೊಂದು ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ ಮತ್ತೊಂದು ಭರವಸೆ ನೀಡುತ್ತಿದ್ದಾರೆ. ಇದು 2014ರ ಉದ್ಯೋಗ ಭರವಸೆಯನ್ನು ನೀಡಿ ವಂಚಿಸಿದ್ದನ್ನು, ಆ ವಂಚನೆಯು 2019ರ ಚುನಾವಣೆಯ ಸಂದರ್ಭದಲ್ಲಿ ಚರ್ಚೆಗೆ ಬಾರದಿರಲಿ ಎಂಬ ಕಾರಣಕ್ಕೆ ಈಗ ಸಾಮಾನ್ಯ ಕೆಟಗರಿಯ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ನೀಡುವುದು ಪ್ರಸ್ತಾಪದಲ್ಲಿದೆ ಎಂದು ಅನಿಸುತ್ತದೆ.
ಕಣ್ಣಿಗೆ ಮಣ್ಣೆರಚಿ ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನವಿದು. ಎಲ್ಲರಿಗೂ ಉದ್ಯೋಗ ಇರಬೇಕು. ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆಯನ್ನಾದರೂ ನೀಡಬೇಕು. ಇದು ಸರ್ಕಾರಗಳ ಕರ್ತವ್ಯ. ಈ ಸರ್ಕಾರಕ್ಕೆ ಉದ್ಯೋಗ ನೀಡುವ ಬದ್ಧತೆ, ಹಿತಾಸಕ್ತಿಯೇ ಇಲ್ಲ. ಬದಲಾಗಿ ಇಂದಿನ ಸರ್ಕಾರಗಳು ಎಲ್ಲವನ್ನೂ ಖಾಸಗಿಯವರಿಗೆ ಒಪ್ಪಿಸಿ ಕೈ ತೊಳೆದುಕೊಳ್ಳುತ್ತಿವೆ. ಸಾರ್ವಜನಿಕವಲಯ ಕ್ಷಯಿಸುತ್ತಿವೆ. ಎಲ್ಲರಿಗೂ ಉದ್ಯೋಗ, ಎಲ್ಲರಿಗೂ ಶಿಕ್ಷಣ ನೀಡುವ ಬದಲು ಖಾಸಗೀಕರಣದತ್ತ ವಾಲಿದ್ದಾರೆ. ಹೀಗಿರುವಾಗ ಉದ್ಯೋಗ ಕೊಡುವುದೆಲ್ಲಿಂದ ಬಂತು? ಕಾರ್ಪೋರೇಟ್ ಕಂಪನಿಗಳಿಗೆ ಪ್ರಧಾನಮಂತ್ರಿಯೇ ಕಾವಲುಗಾರರಾಗಿದ್ದಾರೆ. ಉಳ್ಳವರ ಸಂಪತ್ತು ಕಾಯುವ ಹಾವಿನ ರೀತಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಹೆಚ್ಚಿಸದೇ ಈ ರೀತಿ ಆಶ್ವಾಸನೆ ನೀಡುವುದು ನಿರುದ್ಯೋಗದ ಗಾಯದ ಮೇಲೆ ಬರೆ ಹಾಕಿದಂತೆ.
ಆಮೇಲೆ, ಸಾಮಾನ್ಯ ಕೆಟಗರಿಯ  ‘ಬಡವರು’ ಅನ್ನುವುದಕ್ಕೆ 8 ಲಕ್ಷ ಅಂದರೆ ತಿಂಗಳಿಗೆ 66,666 ರೂಪಾಯಿಗಳ ಆದಾಯ ಮಿತಿ ನಿಗದಿ ಮಾಡಿದ್ದಾರೆ. ಆದರೆ ಬಡತನದ ರೇಖೆಯ ಗುರುತಿಸುವಿಕೆಗೆ 2.50 ಲಕ್ಷ ಅಂದರೆ ತಿಂಗಳಿಗೆ 20,830 ರೂಪಾಯಿ ಇದೆ. ಹಾಗಾದರೆ ಭಾರತದಲ್ಲಿ ಎರಡು ರೀತಿಯ ‘ಬಡವರು’ ಇದ್ದಾರೆಯೆ? ಈ ಪ್ರಶ್ನೆ ಬರುತ್ತದೆ. ಇದನ್ನೆಲ್ಲ ನೋಡಿದರೆ ಅವರು ರಫೆಲ್ ಕರ್ಮಕಾಂಡದಿಂದ ಬಚಾವಾಗಲು ಚರ್ಚೆಯನ್ನು ಬೇರೆ ದಿಕ್ಕಿಗೆ ತಿರುಗಿಸುವ ಗಿಮಿಕ್‍ನಂತೆ ಹಾಗೂ ಭಾರತದ ನಿರುದ್ಯೋಗದ ಸಮಸ್ಯೆಯನ್ನು ಮರೆಮಾಚುವ ವಂಚನೆಯಂತೆ ಇದು ಕಾಣಿಸುತ್ತದೆ. ನರೇಂದ್ರ ಮೋದಿಯವರು ಏನೇ ಆಗಲಿ ನಮ್ಮ ಪ್ರಧಾನಿ. ಅವರು ಗಿಮಿಕ್ ಮೋದಿ ಎಂದು ಹೆಸರು ತೆಗೆದುಕೊಂಡು ನಿರ್ಗಮಿಸಬಾರದು!
ಈ ಸಂದರ್ಭದಲ್ಲಿ ನಾವು ಚರ್ಚಿಸಬೇಕಾದ ವಿಷಯ- ಭಾರತವನ್ನು ಕಿತ್ತು ತಿನ್ನುತ್ತಿರುವ ನಿರುದ್ಯೋಗದ ಸಮಸ್ಯೆ. ಜೊತೆಗೆ ಖಾಸಗಿಯಲ್ಲಿ ಮೀಸಲಾತಿಯನ್ನು ಅಳವಡಿಸುವ ಬಗ್ಗೆ ದನಿ ಎತ್ತಬೇಕಾಗಿದೆ. ಇದು ಮುಂದಿನ ಚುನಾವಣೆಯ ಬಲು ಮುಖ್ಯವಾದ ಚರ್ಚೆಯೆನಿಸುತ್ತದೆ.