ಭಾರತಕ್ಕೆ ಬಲು ದೊಡ್ಡ ಶಿಕ್ಷಣ ಅಂದರೆ

ಭಾರತಕ್ಕೆ ಬಲು ದೊಡ್ಡ ಶಿಕ್ಷಣ ಅಂದರೆ- ಎಲ್ಲಾ ಜಾತಿ ಧರ್ಮ ಸಮುದಾಯದ ಮಕ್ಕಳು ಪ್ರತ್ಯೇಕತೆಯನ್ನು ಕಳೆದುಕೊಂಡು ಒಡನಾಡಿ ಬೆರೆಯುವುದೇ ಬಲು ದೊಡ್ಡ ಶಿಕ್ಷಣ. ಇದು ನಾಳಿನ ಆರೋಗ್ಯಕರ ಪ್ರಜೆಗಳನ್ನು ರೂಪಿಸುವಲ್ಲಿ ತಳಪಾಯವಾಗುತ್ತದೆ. ಶಿಕ್ಷಣಹಕ್ಕು ಕಾಯಿದೆಯಲ್ಲಿಯೇ ಆಯಾ ಪ್ರದೇಶದ ಮಕ್ಕಳು ಆಯಾ ಪ್ರದೇಶದ ಸಮೀಪ ಶಾಲೆಯಲ್ಲೇ ಕಲಿಯಬೇಕೆಂದು ಕಾನೂನು ಮಾಡಿ ಅದನ್ನು ಕಾರ್‍ಯಗತವಾಗಿಸಿದರೆ ಮಾತ್ರ ಆ ಪ್ರದೇಶದ ಉಳ್ಳವರ ಮಕ್ಕಳೂ ಇಲ್ಲದವರ ಮಕ್ಕಳೂ ಆಧಿಕಾರಿಯ ಮಕ್ಕಳೂ ಜವಾನರ ಮಕ್ಕಳೂ ಒಂದೇ ಶಾಲೆಯಲ್ಲಿ ಓದುವಂತಾಗುವ ಪರಿಸ್ಥಿತಿ ಉಂಟಾದರೆ ಮಾತ್ರವೇ ಸರ್ಕಾರೀ ಶಾಲೆ ಉಳಿಯುತ್ತದೆ, ಅದರ ಗುಣ ಮಟ್ಟವೂ ಹೆಚ್ಚುತ್ತದೆ. ಇದನ್ನು ಮಾಡದಿದ್ದರೆ ಸರ್ಕಾರವೇ ಖಾಸಗಿಯೊಡನೆ ಶಾಮೀಲು ಎಂದು ಅರ್ಥಮಾಡಿಕೊಂಡರೆ ಅದು ಹಾಗೆ ಅರ್ಥ ಮಾಡಿಕೊಂಡವರ ತಪ್ಪಲ್ಲ.

ಎರಡನೆಯದಾಗಿ, ಪ್ರಾಥಮಿಕ ಶಾಲೆಯಲ್ಲಿ ಪಂಚವರ್ಣ ಪದ್ಧತಿ ಇರಬಾರದು. ಹಳ್ಳಿಗರಿಗೊಂದು ಶಾಲೆ, ನಗರದವರಿಗೊಂದು ಶಾಲೆ , ಉಳ್ಳಾದವರಿಗೊಂದು ಶಾಲೆ, ಅಮೆರಿಕಕ್ಕೆ ಹಾರುವವರಿಗೊಂದು ಶಾಲೆ ಈಬಗೆಗಳಲ್ಲಿ ಇದ್ದರೆ ನಾಳಿನ ಶೋಷಣೆಯ ಸಮಾಜವನ್ನು ಕಾಪಾಡಲು ಪ್ರಾಥಮಿಕ ಶಿಕ್ಷಣವೇ ತರಬೇತಿ ನೀಡುವ ಸಂಸ್ಥೆಯಾಗಿ ಬಿಡುತ್ತದೆ. ಹಾಗಾಗಿ ಕನಿಷ್ಠ ಪ್ರಾಥಮಿಕ ಶಿಕ್ಷಣದಲ್ಲಿಯಾದರೂ ಏಕರೂಪದ ಶಿಕ್ಷಣ ಬೇಕು. ಪ್ರಾಥಮಿಕ ಶಿಕ್ಷಣದ ಮಾಧ್ಯಮವಾಗಿ ಮಾತೃಭಾಷೆ, ಹಾಗೂ ಒಂದನೇ ತರಗತಿಯಿಂದಲೇ ಭಾಷೆಯಾಗಿ ಇಂಗ್ಲಿಷ್ ಕಲಿಕೆ ಇಂದಿನ ಅಗತ್ಯ ಎಂದುಕೊಂಡಿದ್ದೇನೆ. ಮಾತೃಭಾಷೆ ಮಾಧ್ಯಮ ಕಲಿಕೆ ತ್ಯಾಗವಾಗಬಾರದು ಬದಲಾಗಿ ಉದ್ಯೋಗದಲ್ಲಿ ಆದ್ಯತೆ ಉನ್ನತ ಶಿಕ್ಷಣದಲ್ಲಿ ಆದ್ಯತೆ ನೀಡಿ ಲಾಭದಾಯಕವಾಗಿಸಬೇಕಾಗಿದೆ. ಈ ಸರ್ಕಾರಕ್ಕೆ ಇಚ್ಛಾಶಕ್ತಿ ಇದೆಯೋ ಇಲ್ಲವೋ ಎನ್ನುವುದು ವ್ಯಕ್ತವಾಗುವುದು ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೂಲಕ ಮಾತ್ರವೇ.

ಪ್ರಾಥಮಿಕ ಶಿಕ್ಷಣದಲ್ಲಿ ವಾರ್ಷಿಕ ಪರೀಕ್ಷೆಯ ಬದಲು ಘಟಕ ಪರೀಕ್ಷೆಗಳನ್ನು ಮಾಡುವುದು ಒಳ್ಳೆಯದು. ಉದಾಹರಣೆಗೆ ಅಆಇಈ ಕಲಿಕೆ ಪ್ರಥಮ ಘಟಕ. ಕಾಗುಣಿತ ಎರಡನೇ ಘಟಕ. ಓದುವುದು ಮೂರನೇ ಘಟಕ., ಬರೆಯುವುದು ನಾಲ್ಕನೇ ಘಟಕ, ಹೀಗೆಯೇ ಅಂಕಿ ಕಲಿಕೆ, ಕೂಡೋದು ಕಳೆಯೋದೂ ಗುಣಿಸೋದು ಭಾಗಾಕಾರ ಇತ್ಯಾದಿ ಇತ್ಯಾದಿಗಳನ್ನು ಘಟಕ ಘಟಕವಾಗಿ ವಿಂಗಡಿಸಿ ಪ್ರಾಥಮಿಕ ಶಿಕ್ಷಣದ ನಾಲ್ಕೂ ವರ್ಷಗಳಲ್ಲಿ ವಿದ್ಯಾರ್ಥಿಗಳು ಅವರವರ ಅಭಿರುಚಿಗೆ ತಕ್ಕಂತೆ ಯಾವುದನ್ನಾದರೂ ಯಾವಾಗಲಾದರೂ ಘಟಕ ಪೂರೈಸಿ ಕಲಿಯುವ ಕಲಿಕಾವ್ಯವಸ್ಥೆ ರೂಪಿಸುವುದರೆ ಬಗ್ಗೆ ತಜ್ಞರು ಗಮನಿಸಬೇಕಾಗಿದೆ. ಇದನ್ನು ಪರೀಕ್ಷೆ ಎಂದುಕೊಳ್ಳದೆ, ತರಬೇತಿ ಎಂದು ಕೊಳ್ಳಬೇಕು. ಒಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿದ ಮೇಲೆ ಆ ವಿದ್ಯಾರ್ಥಿಗೆ ಓದಲು ಬರೆಯಲು ಲೆಕ್ಕ ಮಾಡಲು ಬಂದರೆ ಸಾಕು- ಹಾಗೇ ಒಂದಿಷ್ಟು ಇಂಗ್ಲಿಷ್.

ಏಕರೂಪ ಶಿಕ್ಷಣ ಪದ್ದತಿ ಏಕರೂಪ ಮಾಧ್ಯಮ ಪದ್ಧತಿ ಇವನ್ನು ಅಳವಡಿಸಿಕೊಳ್ಳದಿದ್ದರೆ – ಹಿಂದೆ ಶೂದ್ರರಿಗೆ ಮಹಿಳೆಯರಿಗೆ ಅಸ್ಪೃಶ್ಯರಿಗೆ ಶಿಕ್ಷಣವನ್ನು ನೀಡದೆ ವಂಚಿಸಿದ ಚರಿತ್ರೆಯೇ ಈಗ ನಾಜೂಕಾಗಿ ಪುನರಾವರ್ತನೆಯಾಗುತ್ತಿದೆ- ಶಿಕ್ಷಣವನ್ನು ಕೊಟ್ಟೂ ಕೊಡದಂತೆ ಮಾಡಿ ಪ್ರತ್ಯೇಕತೆ, ತಾರತಮ್ಯವನ್ನು ಉಳಿಸುತ್ತಾ ಹೊಸ ವೇಷದಲ್ಲಿ ಬಂದಿದೆ ಎಂದೇ ಇದನ್ನು ನೋಡಬೇಕಾಗುತ್ತದೆ.