ಭಾಗ್ಯವನ್ನೇತಾರದ ಲಕ್ಷ್ಮಿಯರು!! -ಶಾರದಾ ಗೋಪಾಲ

female
45,000ಕ್ಕೂ ಅಧಿಕ ಭಾಗ್ಯಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ತಾಂತ್ರಿಕದೋಷದ ಕಾರಣದಿಂದಾಗಿ ಸರಕಾರವು ಸಂಪೂರ್ಣವಾಗಿ ರದ್ದು ಮಾಡಿದೆ ಎಂಬ ಸುದ್ದಿ ಇತ್ತೀಚೆಗೆ ಪತ್ರಿಕೆಯ ಮೂಲೆಯೊಂದರಲ್ಲಿ ಬಂದು ಮಾಯವಾಯಿತು. ಬಹುಜನರ ದೃಷ್ಟಿಗೆ ಅದು ಬಿದ್ದೇ ಇರಲಿಕ್ಕಿಲ್ಲ.
ಅಧಿಕಾರಿಗಳಿಗೆ ಅದು ಒಂದು ಸಂಖ್ಯೆ ಮಾತ್ರವಿರಬಹುದು. ಆದರೆ 45323ರ ಒಂದು, ಹನ್ನೆರಡು, ಹದಿನೈದು, ಸಾವಿರದೈದುನೂರಾ ಇಪ್ಪತ್ತೇಳು, ನಾಲ್ಕುಸಾವಿರದಾ ಮೂರು ಈ ಎಲ್ಲ ಅಂಕಿಗಳೂ ಕೂಡ 2006ರಿಂದ 2014ರ ವರೆಗೆ ಎಲುವು, ರಕ್ತ ಮಾಂಸಗಳೊಂದಿಗೆ ಮೈದಳೆದ, ಹೆಣ್ಣು ಕೂಸುಗಳು!

`ಇನ್ನು ಈ ಮನೆಯಲ್ಲಿ ಹೆಣ್ಣು ಹುಟ್ಟಿದ್ದು ಸಾಕು’ ಎಂಬ ಮಾನಸಿಕತೆಯನ್ನು ಹೇಗೋ ಜಯಿಸಿ ಹುಟ್ಟಿ ಬಂದ ಕೂಸಾಗಿತ್ತೇನೋ ಅದು!`ಗಂಡು ಮಗುವನ್ನೇ ಹಡೆದುತಾ, ಇಲ್ಲದಿದ್ದರೆ ಮನೆಗೆ ಬರುವ ಅವಶ್ಯಕತೆಯಿಲ್ಲ,’ ಎಂಬ ಅಜ್ಜಅಜ್ಜಿಯರ ಆಜ್ಞೆ ಮೀರಿ ಹುಟ್ಟಿದ ಹಸುಳೆಯಾಗಿತ್ತೇನೋ ಅದು!`ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಸರಕಾರ ಒಂದು ಲಕ್ಷ ರೂ. ಕೊಡುತ್ತದಂತ್ರೀ. ಇದೊಂದು ಬಾರಿ ಹೆಣ್ಣಾದ್ರೆ ಆಗಲಿ ಬಿಡಿ’ ಎಂದು ಗೋಗರೆದು ತನ್ನ ಗಂಡನನ್ನು ಒಪ್ಪಿಸಿ ಆ ತಾಯಿ ಹಡೆದ ಹೆಣ್ಣುಮಗುವಿತ್ತೇನೋ! `ತಾಯಿಯಾಗಿ ಇದ್ದರೆ ಸರಿ, ಹೆಂಡತಿಯಾಗಿ, ಪ್ರೇಯಸಿಯಾಗಿಯೂ ಓಕೇ, ಆದರೆ ಮಗಳಾಗಿ ಬೇಡ!’ ಎನ್ನುವ ಸಮಾಜದ ಮನೋಭಾವವನ್ನು ಎದುರಿಸಿ ಈ ಭೂಮಿಗೆ ಬರಲು, ಆ ಒಂದೊಂದು ಮಗುವಿನ ಹೋರಾಟಕ್ಕೂ ಪ್ರತಿಯಾಗಿ `ಭಾಗ್ಯ ಲಕ್ಷ್ಮಿ’ ಉಡುಗೊರೆಯನ್ನು ಕೊಡಲು ಹಿಂದಿನ ಸರಕಾರ ತೀರ್ಮಾನಿಸಿತ್ತು, ವಚನ ಕೊಟ್ಟಿತ್ತು, ಇದೀಗ 45323 ಹೆಣ್ಮಕ್ಕಳ ಹೋರಾಟಕ್ಕೆಉಡುಗೊರೆಯಿರಲಿ, ಬೆಲೆಯೂ ಇಲ್ಲ.
ಇದೇ ಜನೆವರಿ ಇಪ್ಪತ್ತಾರಕ್ಕೆ ಪ್ರಧಾನ ಮಂತ್ರಿಗಳ `ಬೇಟಿ ಬಚಾವೋ ಬೇಟಿ ಪಢಾವೋ’ ಎಂಬ ಘೋಷಣೆಗೆ ಒಂದು ವರ್ಷವಾಗುತ್ತದೆ. ಹೆಣ್ಣು ಮಗಳನ್ನು ಬದುಕಿಸುವ ಅವಶ್ಯಕತೆಯ ಬಗ್ಗೆ ಅಂದು ಪ್ರಧಾನಿಗಳು ಹೃದಯಂಗಮವಾದ ಭಾಷಣ ಮಾಡಿದರು. ಹೆಣ್ಣುಮಕ್ಕಳಿಗೆ ಹಾಕಿದಷ್ಟೇ ಬೇಲಿಗಳನ್ನು ಗಂಡು ಮಕ್ಕಳಿಗೂ ಹಾಕಬೇಕೆಂದು ಅಂದವರು ದೇಶಕ್ಕೆ ಕರೆಕೊಟ್ಟರು. ಪ್ರಧಾನ ಮಂತ್ರಿಗಳ ಉದ್ಘೋಷಣೆಯ ಫಲವಾಗಿ ದೇಶದಲ್ಲಿ ಲಿಂಗಾನುಪಾತ ಅತಿಕಡಿಮೆ ಇರುವ ಆಯ್ದ 100 ಜಿಲ್ಲೆಗಳಲ್ಲಿ ಜಿಲ್ಲೆಗೆ 1 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನ ನೀಡಲಾಯಿತು. ಹೆಣ್ಣು ಮಗಳನ್ನು ಉಳಿಸಲು ಸರಕಾರ ಕೊಡುವ ಅನುದಾನವಿದು.
ವರ್ಷಕ್ಕೊಮ್ಮೆ, ಎರಡು ಸಾರೆ ದೇಶದ ಲಿಂಗಾನುಪಾತದ ಚರ್ಚೆ ಮಾಧ್ಯಮಗಳಲ್ಲಿ ಬರುತ್ತದೆ. ಕುಸಿಯುತ್ತಿರುವ ಲಿಂಗಾನುಪಾತದ ಬಗ್ಗೆ ಬಿಸಿ ಬಿಸಿ ಚರ್ಚೆಆಗುತ್ತದೆ. ಸರಕಾರದ ಯೋಜನೆಗಳ ಬಗ್ಗೆ ಚರ್ವಿತಚರ್ವಣ ಚರ್ಚೆ ಆಗುತ್ತದೆ. ಆದರೆ ಈ ಚರ್ಚೆಗಳ ಫಲಿತಾಂಶ ರಾಜ್ಯಗಳಲ್ಲಿ ಹುಟ್ಟುವ ಹೆಣ್ಣುಗಂಡುಗಳ ಸರಾಸರಿಯ ಮೇಲೆ ಪರಿಣಾಮ ಬೀರಿದ್ದು ಕಾಣುವುದಿಲ್ಲ. ಲಿಂಗಾನುಪಾತ ಮಾತ್ರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ ಹೊರತು ಬದಲಾಗುತ್ತಿಲ್ಲ.
ತಮಗೆ ಹೆಣ್ಣು ಮಗು ಬೇಡ, ಗಂಡೇ ಇರಲಿ ಎಂದು ದಂಪತಿಗಳು ನಿರ್ಧರಿಸುವುದಕ್ಕೆ ಸಮಾಜದಲ್ಲಿ ಮಹಿಳೆಗಿರುವ ಎರಡನೇ ದರ್ಜೆಯ ಸ್ಥಾನಮಾನವೇ ಕಾರಣ.ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ತುಳಿಯಲ್ಪಡುವ ಅವಳಿಗೆ ಆರ್ಥಿಕ ಸ್ಥಾನಮಾನವೂ ಇಲ್ಲ. ರಾಜಕೀಯ ಮೇಲ್ದರ್ಜೆಯೂ ಇಲ್ಲ. ಸೋನೋಗ್ರಫಿಯಂಥ ಮಷೀನುಗಳು ಬಂದು ಸಮಾಜದ ಈ ಮನದಿಂಗಿತಕ್ಕೆ ಒಂದು ಸುಲಭ ಮಾರ್ಗೋಪಾಯವನ್ನು ಸೃಷ್ಟಿಸಿಕೊಟ್ಟಿತು. ಗರ್ಭದಲ್ಲಿರುವ ಭ್ರೂಣದ ಲಿಂಗ ಪತ್ತೆ ಮಾಡಿಸುವ, ಬೇಡವೆಂದು ತೆಗೆಸಿಹಾಕುವದು ಅವ್ಯಾಹತವಾಗಿ ಸಾಗಿದಾಗ 1994ರಲ್ಲೇ ಪಿಎನ್‍ಡಿಟಿ ಕಾಯಿದೆ ಜಾರಿಯಲ್ಲಿ ಬಂತು. ಭ್ರೂಣದ ಲಿಂಗ ಪತ್ತೆ ನಿಷೇಧವಾಗುತ್ತಲೇ ಭ್ರೂಣ ತಯಾರಾಗುವುದಕ್ಕಿಂತ ಪೂರ್ವದಲ್ಲೇ ಲಿಂಗ ಆಯ್ಕೆ ನಡೆಯುವುದೆಂದು ಗೊತ್ತಾಗುತ್ತಲೇ ಕಾಯಿದೆಯನ್ನು ಗರ್ಭ ಪೂರ್ವಕ್ಕೂ ವಿಸ್ತರಿಸಿ ಮುಂದೆ 2001ರಲ್ಲಿ ಪಿಸಿಪಿಎನ್‍ಡಿಟಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಲಿಂಗ ಆಯ್ಕೆ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯಿದೆಯಾಗಿ ಅದನ್ನು ಪರಿವರ್ತಿಸಲಾಯಿತು. ಯುಪಿಎ ಸರಕಾರವಿದ್ದಾಗ ಅಂದಿನ ಪ್ರಧಾನಿಗಳು `ಬೇಟಿ ಬಚಾವೋ’ ಎಂದು ಕಾರ್ಯಕ್ರಮಗಳನ್ನು ಹಾಕಿದರು. ಅಷ್ಟೇ ಸಾಲದೆಂದು ಇಂದಿನ ಪ್ರಧಾನಿ `ಬೇಟಿ ಬಚಾವೋ, ಬೇಟಿ ಪಢಾವೋ’ ಎಂದು ಹೆಣ್ಣುಮಕ್ಕಳನ್ನು ಉಳಿಸುವ ನೀತಿಗೆ ಇನ್ನಷ್ಟು ವಿಸ್ತರಣೆ ಕೊಟ್ಟರು.
1901ರಲ್ಲಿ ಬ್ರಿಟಿಷರು ಜನಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗಲೇ ಭಾರತದಲ್ಲಿ ಗಂಡು ಹೆಣ್ಣು ಅನುಪಾತ ಇಳಿಜಾರಿನಲ್ಲಿ ಇರುವುದು ಪತ್ತೆಯಾಗಿತ್ತು. ಮಕ್ಕಳ ಲಿಂಗಾನುಪಾತ ಎಂದರೆ 0-6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ ಎಷ್ಟು ಹೆಣ್ಣುಮಕ್ಕಳು ಬದುಕಿದ್ದಾರೆ ಎಂಬ ಅನುಪಾತ. ಇನ್ನೊಂದು ಹುಟ್ಟುವ ಶಿಶುಗಳ ಲಿಂಗಾನುಪಾತ. ಜನನಕ್ಕೆ ಮೊದಲು ಹೆಣ್ಣಿನ ಮೇಲಿನ ಕ್ರೌರ್ಯವನ್ನು ಅಂದರೆ ಜನನ ಪೂರ್ವ ಭ್ರೂಣ ಲಿಂಗ ಆಯ್ಕೆಯನ್ನು ಹುಟ್ಟುವಾಗಿನ ಲಿಂಗಾನುಪಾತ ಎತ್ತಿ ತೋರಿಸಿದರೆ,(ಅದು 1991ರಲ್ಲಿ 945 ಇದ್ದುದು, 2001ಕ್ಕೆ 927 ಕ್ಕಿಳಿಯಿತು. 2011ಕ್ಕೆ ಮತ್ತೂ ಕೆಳಕ್ಕೆ 914ಕ್ಕಿಳಿದಿದೆ.), ಜನನದ ನಂತರದ ಕ್ರೌರ್ಯವನ್ನು 0-6 ವರ್ಷದೊಳಗಿನ ಲಿಂಗಾನುಪಾತ ತೋರಿಸುತ್ತದೆ. 1961ರಲ್ಲಿ ಅದು 976 ಇದ್ದುದು 2011ರಲ್ಲಿ 919ಕ್ಕಿಳಿದಿದೆ.`ಅರ್ಥ ಮಾಡಿಕೊಂಡರೆ ಅರ್ಧ ಸಾಧನೆ ಮಾಡಿದಂತೆಯೇ ‘ಎನ್ನುತ್ತಾರೆ. ಆದರೆ ಈ ಮಾತು ಲಿಂಗಾನುಪಾತದ ವಿಷಯಕ್ಕೆ ಮಾತ್ರಅನ್ವಯವಾಗುವುದಿಲ್ಲ. ದೇಶಕ್ಕಿದು ಅರ್ಥವಾಗಿ ಶತಮಾನವೇ ಕಳೆದಿದೆ. ಆದರೆ ಲಿಂಗಾನುಪಾತ ಸರಿಮಾಡುವ ದಿಕ್ಕಿನಲ್ಲಿ ನಮ್ಮ ಸಾಧನೆ ಮಾತ್ರ ಶೂನ್ಯ. ಇಳಿಜಾರಿನಲ್ಲಿರುವ ಸಂಖ್ಯೆ ಮೇಲಕ್ಕೇರುವ ಲಕ್ಷಣಗಳೇ ಕಾಣುತ್ತಿಲ್ಲ.

shocking
ರಾಷ್ಟ್ರದ ಲಿಂಗಾನುಪಾತ 919 ಕ್ಕಿಳಿದಿದ್ದಾಗ ನಮ್ಮ ಕರ್ನಾಟಕದ್ದು 946 ರಷ್ಟಿದೆ ಎಂದು ನಾವು ಬಹಳ ಹೆಮ್ಮೆ ಪಡಬೇಕಾಗಿಲ್ಲ. ಒಂದೊಂದು ಜಿಲ್ಲೆಯ ಲಿಂಗಾನುಪಾತವನ್ನೂ, ಜಿಲ್ಲೆಗಳ ಒಂದೊಂದು ತಾಲೂಕಿನ ಲಿಂಗಾನುಪಾತ ಹೇಗಿದೆ ಎಂದು ಮೈ ಮುಟ್ಟಿ ನೋಡಿಕೊಳ್ಳಬೇಕಾಗಿದೆ. ಹೆಚ್ಚಿನ ಜಿಲ್ಲೆಗಳಲ್ಲೂ ಇಳಿಕೆಯೇ! ಬಾಗಲಕೋಟೆಜಿಲ್ಲೆಯಲ್ಲಿ 940 ಇದ್ದುದು 929ಕ್ಕಿಳಿದಿದೆ . ರಾಯಚೂರಿನ ಲಿಂಗಾನುಪಾತ 964 ಇದ್ದುದು 949 ತೋರಿಸುತ್ತಿದೆ. ಚಾಮರಾಜ ನಗರದ ಲಿಂಗಾನುಪಾತ 964 ಇದ್ದುದು 942 ಕ್ಕಿಳಿಯಿತು. ಚಿತ್ರದುರ್ಗದಲ್ಲಿ 946 ಇದ್ದುದು 933 ಕ್ಕಿಳಿಯಿತು. ಹಾವೇರಿಯಲ್ಲಿ 957 ರಷ್ಟಿದ್ದುದು 945 ಕ್ಕಿಳಿದಿರುವುದು ಹೆಮ್ಮೆ ತರುವಂಥದ್ದಲ್ಲ. ಈ ಜಿಲ್ಲೆಗಳು, ಈ ಜಿಲ್ಲೆಗಳ ತಾಲೂಕುಗಳ ಲಿಂಗಾನುಪಾತ ಎಲ್ಲಿಯಾದರೂ ದಾಖಲೆಯಾಗಿ ಚರ್ಚೆಆಗುತ್ತಿದೆಯೇ? ಜಿಲ್ಲೆಯ ಜವಾಬ್ದಾರಿ ಹೊತ್ತ ಅಧಿಕಾರಿಗಳಿಗೆ ಈ ವಿಷಯಎಂದಾದರೂ ನಿದ್ದೆಗೆಡಿಸಿದ್ದಿದೆಯೇ?
ಬೇಟಿ ಬಚಾವೋ . . . ಕಾರ್ಯಕ್ರಮದಡಿಯಲ್ಲಿ ಕೇಂದ್ರ ಸರಕಾರ ಆಯ್ದ ಜಿಲ್ಲೆಗೆ 1 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿತು ನಿಜ. ಆದರೆ ಕರ್ನಾಟಕದಲ್ಲಿ ಜಿಲ್ಲೆಯನ್ನು ಆರಿಸಿದ್ದು ಹೇಗೆ ಎನ್ನುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಕರ್ನಾಟಕದಲ್ಲಿ ಸಿಕ್ಕಿದ್ದು ಬಿಜಾಪುರ ಜಿಲ್ಲೆಗೆ ಮಾತ್ರ. ಹಾಗೆ ನೋಡಿದರೆ ಬಿಜಾಪುರ ಜಿಲ್ಲೆಯ ಲಿಂಗಾನುಪಾತ ಹಿಂದಿನ ದಶಕಕ್ಕಿಂತ ಸ್ವಲ್ಪವೇ ಆದರೂ ಏರಿದೆ. 928 ಇದ್ದುದು 930 ಆಗಿದೆ. ಇಡೀ ರಾಜ್ಯದಲ್ಲಿ ಅತಿ ಕೆಳಗಿರುವ ಜಿಲ್ಲೆ ಬಾಗಲಕೋಟೆ. ಹೆಣ್ಣುಮಗಳಿಗೆ ಕೊಡುವ ಸವಲತ್ತು ಸೌಲಭ್ಯ ದೊರಕಿಸುವಲ್ಲಿಯೂ ಕೂಡ ಎಮ್ಮೆಲ್ಲೆ, ಎಂಪಿಗಳ ಪ್ರಭಾವ ಕಾರಣವೇ?ಅಥವಾ ಅಂಕಿ ಅಂಶಗಳೇನಾದರೂ ಚರ್ಚೆಗೆ ಬರುವುದೇ?
ಇಲ್ಲವೆನ್ನಲು ಹೇಗಾದೀತು? ಹಣ ಬರುತ್ತದೆ ಎನ್ನುವುದು ಮುಖ್ಯ. ನಮ್ಮ ಬಹುತೇಕ ಜನಪ್ರತಿನಿಧಿಗಳಿಗೆ ಲಿಂಗಾನುಪಾತದ ಬಗ್ಗೆ ರವೆಯಷ್ಟೂ ಗೊತ್ತಿಲ್ಲ. ಲಿಂಗ ಸಮಾನತೆಗೆ ಅವರಲ್ಲಿ ಬೆಲೆಯಿಲ್ಲ. ಹಾಗಿರುವಾಗ ಯಾವ ಸಂಸದರು ಹೆಚ್ಚು ಪ್ರಭಾವಶಾಲಿಗಳಾಗಿದ್ದಾರೋ ಅವರ ಪ್ರದೇಶಕ್ಕೆ ಹೆಚ್ಚು ಮೊತ್ತ ಬಂದಿರಬಹುದು.ಈ ವಿಶ್ಲೇಷಣೆಯನ್ನುಯಾಕೆ ಮಾಡಬೇಕಾಯಿತೆಂದರೆ ಆಯ್ಕೆಯಾದ ಜಿಲ್ಲೆಗೆ ಅರ್ಧ ವರ್ಷವಾದರೂ ಹಣ ಬಿಡುಗಡೆ ಆಗಿರಲಿಲ್ಲ. ಆದ ನಂತರ ಕೂಡ ಅದನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ಆ ಜಿಲ್ಲೆಯ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಹಣ ಬರುತ್ತದೆ, ಅದರ ಹಿಂದೆ ಯೋಜನೆ ಬರುತ್ತದೆ. ಯೋಜನೆ ಮುಗಿಯುತ್ತದೆ, ಹಣ ಖರ್ಚಾಗುತ್ತದೆ.
`ಬೇಟಿ ಬಚಾವೋ ಬೇಟಿ ಪಢಾವೋ’ಕಾರ್ಯಕ್ರಮ ಸರಕಾರದ 9 ಖಾತೆಗಳನ್ನೂ, 7 ಕಾನೂನುಗಳನ್ನೂ ಒಳಗೊಳ್ಳುತ್ತದೆ. ಅಂದರೆ ನಮ್ಮ ಹೆಣ್ಣುಮಕ್ಕಳನ್ನು ಉಳಿಸಿಕೊಳ್ಳಬೇಕೆಂದರೆ 9 ಖಾತೆಗಳು, 7 ಕಾನೂನುಗಳನ್ನು ಗಟ್ಟಿಗೊಳಿಸಿಕೊಂಡು ಕೆಲಸ ಮಾಡಬೇಕು. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಆರೋಗ್ಯ, ಶಿಕ್ಷಣ ಇಲಾಖೆಗಳು, ಪೊಲೀಸ್, ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ, ಮುಂತಾದ ಇಲಾಖೆಗಳು ಮಕ್ಕಳು ಮಹಿಳೆಯರು, ಅವರ ಸುರಕ್ಷಿತತೆ, ಶಿಕ್ಷಣ, ಆಹಾರಕ್ಕೆ ಸಂಬಂಧಪಟ್ಟ ಎಲ್ಲಾ ಕಾಯಿದೆಗಳ ಸರಿಯಾದ ಅನುಷ್ಠಾನಕ್ಕೆ`ಬೇಟಿ ಬಚಾವೋ. . ‘ಕಾರ್ಯಕ್ರಮದಡಿ ಒಂದಾಗಿ ನಿಲ್ಲಬೇಕು. ಎಲ್ಲ ಇಲಾಖೆಗಳು ಸಮನ್ವಯ ಸಾಧಿಸಬೇಕು. ಅಂದಾಗ ಮಾತ್ರ ಹಳ್ಳಿ ಹಳ್ಳಿಗಳಲ್ಲಿ, ಶಹರ ಪಟ್ಟಣಗಳಲ್ಲಿ ಲಿಂಗಾನುಪಾತ ಏರಲು ಸಾಧ್ಯ ಎಂಬುದು ಯೋಜನೆಯ ಆಶಯ.
ವಿಷಾದಕರ ವಿಚಾರವೆಂದರೆ ಪ್ರಧಾನ ಮಂತ್ರಿಗಳು ಜನೆವರಿ 26ಕ್ಕೆ ಭಾಷಣ ಮಾಡಿ ದೇಶದೆಲ್ಲೆಡೆ ಒಂದು ಅಲೆಯನ್ನು ಎಬ್ಬಿಸಿದರು ನಿಜ. ಆದರೆ ಮುಂದೆ ಮಾರ್ಚ್‍ಲ್ಲಿ ಬಜೆಟ್ ಮಂಡಿಸುವಾಗ ಅವರ ಭಾಷಣದ ಆಶಯಗಳು ಅದರಲ್ಲಿ ಮಾಯವಾಗಿದ್ದವು. ಮಹಿಳೆಯರ ಸ್ಥಾನ ಮೇಲಕ್ಕೇರಿಸಬೇಕು, ಮಹಿಳೆಯರಿಗೆ ಗೌರವದಿಂದ ಬದುಕುವ ಹಕ್ಕು ಕೊಡಬೇಕು, ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ಕೋಡಬೇಕಾದ ಎಲ್ಲಾ ಇಲಾಖೆಗಳಿಗೂ ಬಜೆಟ್‍ನಲ್ಲಿ ಆದ್ಯತೆ ಇರಲೇಇಲ್ಲ. ಉಳಿದವಂತಿರಲಿ, ಮಹಿಳಾ ಮತ್ತು ಮಕ್ಕಳ ಅಬ್ಭಿವೃದ್ಧಿ ಇಲಾಖೆಗೆ ಅತಿಕಡಿಮೆ ಬಜೆಟ್.
ತಡೆದೂ ತಡೆದೂ ಕಡೆಗೆ ಸಹನೆ ಮೀರಿ ಸಪ್ಟೆಂಬರಿನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಮೇನಕಾ ಗಾಂಧಿ ತಮ್ಮ ವಿಷಾದವನ್ನು ಹೊರಚೆಲ್ಲಿಯೇ ಬಿಟ್ಟರು. ಇಲಾಖೆಗೆ ಹಣವನ್ನೇ ಬಿಡುಗಡೆ ಮಾಡುತ್ತಿಲ್ಲ. ಪ್ರತಿ ತಿಂಗಳೂ ಹಣಕಾಸು ಇಲಾಖೆಗೆ ಗೋಗರೆದು ಗೋಗರೆದು ದುಡ್ಡು ಹಾಕಿಸಿಕೊಳ್ಳಬೇಕಾಗಿದೆ. ಜನೆವರಿಯ ನಂತರ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೇಗೋ ಏನೋ ಎಂದು. ಸುದ್ದಿ ಗುಲ್ಲಾಗುತ್ತಿದ್ದಂತೆಯೇ ಅವರ ಬಾಯಿ ಮುಚ್ಚಿಸಲಾಯಿತು, ಹಾಗೆ ತಾನು ಹೇಳಿಯೇ ಇಲ್ಲ ಎಂದು ಅನ್ನಿಸಲಾಯಿತು ಇವೆಲ್ಲ ಬೇರೆ ವಿಷಯ, ಆದರೆ ಅಷ್ಟೊತ್ತಿಗಾಗಲೇ ಹುಳುಕು ಹೊರ ಬಿದ್ದಾಗಿತ್ತು! ಹಾಗೆಯೇ ಬಿಸಿಯೂಟಕ್ಕೆ ಗ್ಯಾಸಿನ ವ್ಯವಸ್ಥೆಯನ್ನು ಶಾಲೆಯವರೇ ಮಾಡಿಕೊಳ್ಳಬೇಕೆಂಬ ಹೇಳಿಕೆಗಳು. ಯಾವ ಇಲಾಖೆಯಲ್ಲಿ ಚಿಕ್ಕ ಮಕ್ಕಳ, ಗರ್ಭಿಣಿ ಬಾಣಂತಿಯರ ಮತ್ತು ಕಿಶೋರಿಯರ ಯೋಗ-ಕ್ಷೇಮ ನೋಡಿಕೊಳ್ಳಲಾಗುತ್ತದೆಯೇ ಅದೇ ಖಾತೆಗೆ ಹಣದ ಕಟೌತಿ ಆಗುತ್ತಿದೆಯೆಂದರೆ ಸರಕಾರದ ಆದ್ಯತೆಗಳೇನೆಂಬುದು ಅಲ್ಲಿಯೇ ಸ್ಪಷ್ಟ ಆಗಿಬಿಡುತ್ತವೆ.
ಆಹಾರ ಭದ್ರತಾ ಕಾನೂನು ಬಂದು ಮೂರು ವರ್ಷಗಳಾದರೂ ಅದನ್ನು ಜಾರಿಯಲ್ಲಿ ತರುವ ಲಕ್ಷಣಗಳೇ ಕಾಣದಿರುವುದು, ಅಂತ್ಯೋದಯ ಕಾರ್ಡುಗಳ ಸಂಖ್ಯೆಯನ್ನು ಎಲ್ಲೆಡೆ ಕಡಿಮೆ ಮಾಡುತ್ತಿರುವುದು, ಬಜೆಟ್ಟಿನಲ್ಲಿ ಆರೋಗ್ಯಕ್ಕೆ ಮೀಸಲಿರಿಸುವ ಹಣದಲ್ಲಿ ಕಡಿತ, ಇವೆಲ್ಲವೂ ಸರಕಾರದ ಆದ್ಯತೆಯನ್ನು ಇನ್ನೂ ನಿಚ್ಚಳವಾಗಿ ನಮಗೆ ತೋರಿಸುತ್ತದೆ.
ಈಗ ಮತ್ತೆ ಭಾಗ್ಯವನ್ನುತಾರದ ನಮ್ಮ ಲಕ್ಷ್ಮಿಯರ ಕಡೆಗೆ ಬರೋಣ. ತಾಂತ್ರಿಕದೋಷದಿಂದಾಗಿ 45323 ಹೆಣ್ಣು ಮಕ್ಕಳ ಸರ್ಟಿಫಿಕೇಟ್‍ಗಳು ಬರುವುದು ತಡ ಆಗುತ್ತ ಆಗುತ್ತ ಕಡೆಗೆ ಇಲ್ಲವಾದವು. ಇಲ್ಲಿ ತಾಂತ್ರಿಕದೋಷವೆಂದರೆ ಏನು? ಸುಪರ್‍ವೈಸರ್‍ ಒಬ್ಬರನ್ನು ವಿಚಾರಿಸಿದಾಗ ತಂದೆ ತಾಯಿ ಕೊಡಬೇಕಾದ ಮಾಹಿತಿಯನ್ನು ಸರಿಯಾಗಿಕೊಟ್ಟಿರಲಿಕ್ಕಿಲ್ಲ, ಅಂಗನವಾಡಿಕಾರ್ಯಕರ್ತೆಯರು ಸೂಕ್ತ ಕಾಲದಲ್ಲಿಎಲ್ಲ ಮಾಹಿತಿಯನ್ನೂ ತಾಲೂಕಾಫೀಸಿಗೆ ಮುಟ್ಟಿಸಿರಲಿಕ್ಕಿಲ್ಲ, ಕಂಪ್ಯೂಟರಿನವರು ಸರಿಯಾಗಿ ಹೆಸರು ಮತ್ತಿತರ ಮಾಹಿತಿಗಳನ್ನು ತುಂಬಿರಲಿಕ್ಕಿಲ್ಲ. ಇವೇ ತಾನೇ ತಾಂತ್ರಿಕ ದೋಷಗಳು? ಇದರಲ್ಲೆಲ್ಲಾದರೂ ಮಗು ಮಾಡಿದ ತಪ್ಪಿದೆಯೇ?
ಭಾಗ್ಯಲಕ್ಷ್ಮಿಯ ಮೂಲ ಆಶಯವೇನು? ಮಗು ಹೆಣ್ಣಾಗಿದ್ದರೆ ಕೊಲ್ಲಬೇಡಿ, ಬದುಕಿಸಿಕೊಳ್ಳಿ, ಅವಳ ವಿದ್ಯಾಭ್ಯಾಸವೋ, ಮದುವೆಯೋ ಆ ವಯಸ್ಸಿಗೆ ಬರುವ ಖರ್ಚನ್ನು ಭರಿಸಲಿಕ್ಕಾಗಿ ಸರಕಾರವು ನಿಮಗೆ 1 ಲಕ್ಷ ರೂ.ಗಳ ಧನಸಹಾಯ ಮಾಡುತ್ತದೆ, ಅಂದರೆ ನಿಮ್ಮ ಭಾರವನ್ನು ಸರಕಾರ ಹೊರುತ್ತದೆ ಎಂದು ಕೊಟ್ಟ ವಾಗ್ದಾನದ ನೋಂದಣಿ ಪತ್ರ. ಹುಟ್ಟಿದ ಹೆಣ್ಣು ಮಗುವನ್ನು ಬದುಕಿಸಲಿಕ್ಕಾಗಿ ಸರಕಾರ ಮಾಡುವ ಚಿಕ್ಕ ಪ್ರಯತ್ನ. ಸರಿಯಾದ ಆಹಾರ ಕೊಡುತ್ತೇನೆಂದಾಗಲೀ, ಒಳ್ಳೆಯ ಶಿಕ್ಷಣ ಕೊಡುತ್ತೇನೆಂದಾಗಲೀ, ರಕ್ಷಣೆ ಮಾಡುತ್ತೇನೆಂದಾಗಲೀ ಸರಕಾರ ಭಾಷೆ ಕೊಡುತ್ತಿಲ್ಲ. ಹದಿನೆಂಟನೆಯ ವಯಸ್ಸಿನಲ್ಲಿ ಬರುವ ಖರ್ಚನ್ನು(ಅಂದರೆ ಮದುವೆಯ ಖರ್ಚನ್ನು)ಕೊಡುತ್ತೇನೆಂಬ ಮಾತು ಅಷ್ಟೇ. ಈ 45323 ಮಕ್ಕಳಿಗೆ ಕೊಡಲಿದ್ದ ಆ ಭಾಷೆಯನ್ನೂ ಕಿತ್ತುಕೊಂಡಿತು.
ಇಂದು ಹೆಣ್ಣು ಮಗು ಬೇಡ ಎಂಬುದು ಸಮಾಜದ ರಕ್ತ ನಾಡಿ ನಾಡಿಗಳಲ್ಲಿ ಪ್ರವಹಿಸುತ್ತಿದೆ. ಅದರ ಫಲವೇ ಭ್ರೂಣಹತ್ಯೆ ಅಥವಾ ಚಾಮರಾಜನಗರ ಜಿಲ್ಲೆಯ ಹಳ್ಳಿಗಳಲ್ಲಿ ನಡೆಯುತ್ತಿರುವ ಹೆಣ್ಣುಶಿಶು ಹತ್ಯೆ. ಹೆಣ್ಣು ಹುಟ್ಟಿದರೆ ಅಪಶಕುನ, ಹೆಣ್ಣು ಹುಟ್ಟಿದರೆ ಅವಮಾನ, ಹೆಣ್ಣು ಹುಟ್ಟಿದರೆ ಶಾಪ ಎಂದು ಬಗೆಯುವ ಮಾನಸಿಕತೆ ಒಬ್ಬ ಮುಖ್ಯಮಂತ್ರಿಯಲ್ಲೂ ತುಂಬಿದೆ, ಒಬ್ಬ ಐಎ.ಎಸ್‍ ಅಧಿಕಾರಿಯಲ್ಲೂ ಪ್ರವಹಿಸುತ್ತಿದೆ, ಒಬ್ಬತಾಲೂಕಾಫೀಸರ್, ಜಿಲ್ಲಾಧಿಕಾರಿ, ಒಬ್ಬಕಂಪ್ಯೂಟರ್‍ಮನ್, ಅಂಗನವಾಡಿ ಕಾರ್ಯಕರ್ತೆ ಕಡೆಗೆ ಒಬ್ಬತಂದೆಯಲ್ಲೂ ಅಗೋಚರವಾಗಿ ಹರಿಯುತ್ತಲೇ ಇದೆ. ಜನಪ್ರಿಯತೆಗಾಗಿ ಒಬ್ಬ ಪ್ರಧಾನಿ ಭಾಷಣ ಮಾಡಿರಬಹುದು. ಆದರೆ ಅವರ ಮೈಯಲ್ಲಿ ಹರಿಯುವ ರಕ್ತದಲ್ಲೂ`ಹೆಣ್ಣೇತಕೆ?’ಎಂಬ ಭಾವನೆಯೇ ಇದ್ದಾಗ ಅವರ ಬಜೆಟ್‍ನಲ್ಲಿ ಆಹಾರ, ಆರೋಗ್ಯ, ಸುರಕ್ಷತೆಯಂಥ ಕಾರ್ಯಕ್ರಮಗಳು ಆದ್ಯತೆ ಕಳೆದುಕೊಳ್ಳುತ್ತವೆ. ಒಬ್ಬ ಮುಖ್ಯಮಂತ್ರಿಯ ಮನದಾಳದಲ್ಲೂ ಅದೇ ಭಾವನೆ ತುಂಬಿರುವಾಗ ಅವರಿಗೆ ಭಾಗ್ಯಲಕ್ಷ್ಮಿಯಂಥ ಕಾರ್ಯಕ್ರಮ ಮುಂದುವರಿಸಬೇಕಿಲ್ಲದ, ಹಿಂದಿನ ಸರಕಾರದ ಕಾರ್ಯಕ್ರಮವಾಗಿ ಕಾಣುತ್ತದೆ. ಒಬ್ಬಐ.ಎ.ಎಸ್‍ ಅಧಿಕಾರಿಗೆ, ಜಿಲ್ಲಾ ಮುಖ್ಯಸ್ಥರಿಗೆ, ಅದಕ್ಕಿಂತ ಬೇರೆ ಕಾರ್ಯಕ್ರಮಗಳು ಪ್ರಮುಖವೆನಿಸುತ್ತವೆ. ಕಡೆಗೆ ತಾಲೂಕಾಫೀಸರ್, ಅಂಗನವಾಡಿ ಕಾರ್ಯಕರ್ತೆ ತಾಂತ್ರಿಕದೋಷವನ್ನು ತಮ್ಮ ಹೆಗಲಿನಿಂದ ತಂದೆಯ ಹೆಗಲಿಗೆ ದಾಟಿಸಿ ನಿರ್ಲಿಪ್ತರಾಗುತ್ತಾರೆ. ಇನ್ನೂ ಪಿಳಿ ಪಿಳಿ ಕಣ್ಣು ಬಿಡುತ್ತಿರುವ, ತೊದಲು ಮಾತುಕಲಿಯುತ್ತಿರುವ ಈ 45323 ಹೆಣ್ಣು ಕೂಸುಗಳು ಮನೆಗೆ ಭಾಗ್ಯವಿಧಾತೆಯರಾಗದೇ ಮತ್ತೆ ಮೂಲೆಗುಂಪಾಗುವ ಪರಿಸ್ಥಿತಿ ಅನುಭವಿಸುತ್ತಾರೆ.
***