ಬಿಜೆಪಿ ತನ್ನ ಆತ್ಮಹತ್ಯೆಗೆ ತಾನೇ ಸಜ್ಜುಗೊಳಿಸಿಕೊಳ್ಳುತ್ತಿದೆಯೇ?

ಸಮಾಜದೊಳಗೆ ಅಸಹನೆ, ಅನುಮಾನ, ದ್ವೇಷ ಬಿತ್ತಿ ಅದನ್ನೇ ಬಂಡವಾಳ ಮಾಡಿಕೊಂಡು ಬೆಳೆದ ಒಂದು ರಾಜಕೀಯ ಪಕ್ಷಕ್ಕೆ ಅದೇ ಸ್ವಭಾವ ಆಗಿಬಿಟ್ಟರೆ ಏನಾಗುತ್ತದೆ? ಅದನ್ನು ಇಂದು ಕಾಣುತ್ತಿದ್ದೇವೆ. ಆ ಪಕ್ಷದೊಳಗೇ ಈಗ ಅಸಹನೆ, ಅನುಮಾನ, ದ್ವೇಷ ಎಡೆಯಾಡುತ್ತಿದೆ. ಆ ಪಕ್ಷದೊಳಗಿನ ಅಭಿಪ್ರಾಯಭೇದಗಳನ್ನು ಹಾಗೂ ಪ್ರತಿಸ್ಪರ್ಧಿಗಳನ್ನು ಕ್ರೂರವಾಗಿ ಅಮಾನವೀಯವಾಗಿ ಮೂಲೆಗುಂಪು ಮಾಡಿ ಉಸಿರಾಡದಂತೆ ಮಾಡಲಾಗುತ್ತಿದೆ. ಇದಕ್ಕೆ ಮೊದಲ ಬಲಿ – ಆ ಪಕ್ಷದ ಬಲಾಢ್ಯ ಅಡ್ವಾಣಿಯವರು. ನಂತರ ಸ್ವಂತಿಕೆ ವ್ಯಕ್ತಿತ್ವದ ಜಸ್ವಂತ್‌ಸಿಂಗ್. ಮುಂದೆ ಅರುಣ್‌ಜೇಟ್ಲಿ, ಸುಷ್ಮಾಸ್ವರಾಜ್, ಉಮಾಭಾರತಿ ಸರದಿ ಬರಬಹುದು. ವೆಂಕಯ್ಯನಾಯ್ಡು ಅಂಥವರಿಗೆ ಏನೂ ಆಗದಿರಬಹುದು. ಆದರೆ ಆ ಪಕ್ಷದೊಳಗೆ ಯಾರ್‍ಯಾರಿಗೆ ಸ್ವಂತ ಅಭಿಪ್ರಾಯ ಇರುತ್ತದೊ, ಯಾರ್‍ಯಾರಿಗೆ ಸ್ವಾಭಿಮಾನ ಇರುತ್ತದೊ, ಯಾರ್‍ಯಾರು ಸ್ಪರ್ಧೆ ಕೊಡುತ್ತಾರೊ, ಯಾರ್‍ಯಾರಿಗೆ ಬೆನ್ನೆಲುಬು ಇರುತ್ತದೊ ಅವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಮುಗಿಸುವ ಲಕ್ಷಣಗಳು ಗೋಚರಿಸುತ್ತಿವೆ. ಮೋದಿಯ ಸಂಪುಟದಲ್ಲಿ ಕಂದಾಯ ಸಚಿವನಾಗಿ ನಾಯಕತ್ವಕ್ಕೇ ಸವಾಲಾಗಿದ್ದ ಹಿರೇನ್ ಪಾಂಡ್ಯನ ನಿಗೂಢ ಕೊಲೆಯ ವಾಸನೆ ಬಿಜೆಪಿ ಮನೆಯಲ್ಲಿ ಸುತ್ತುತ್ತಿರಬಹುದು. ಅಡ್ವಾನಿಯವರ ಆಪ್ತ ಸುಧೀಂದ್ರ ಕುಲಕರ್ಣಿಯವರು ’ ಸಮಾಜದಲ್ಲಿ ವಿಭಜನೆ ತಂದ ವ್ಯಕ್ತಿ ಈಗ ತನ್ನ ಪಕ್ಷವನ್ನೇ ವಿಭಜಿಸುತ್ತಿದ್ದಾನೆ’ ಎನ್ನುತ್ತಾರೆ. ಇದು ಯಾಕೋ ಸೂಕ್ಷ್ಮವಾಗಿ ಮೊಘಲ್ ಸಾಮ್ರಾಜ್ಯದ ಪತನದ ಸಂದರ್ಭದಲ್ಲಿನ ಕೊನೆಯ ಚಕ್ರವರ್ತಿಯ ನಡಾವಳಿಯಂತೆಯೇ ಕಾಣುತ್ತಿದೆ.

ಅದಕ್ಕೆ ಇರಬೇಕು, ಜಸ್ವಂತ್‌ಸಿಂಗ್ ಕಣ್ಣೀರಿಡುತ್ತಾ ಫ್ರಾನ್ಸ್ ನಾಯಕನೊಬ್ಬನ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ: ‘ದೇಶಕ್ಕೆ ತಾನು ಅನಿವಾರ್‍ಯ ಎಂದು ಬಿಂಬಿಸಿಕೊಂಡ ವ್ಯಕ್ತಿಗಳಿಂದಲೇ ಭೂಮಿ ಮೇಲೆ ಸ್ಮಶಾನಗಳು ತುಂಬಿವೆ’ – ಈ ಮಾತುಗಳು ಭಾರತದ ರಾಜಕಾರಣಕ್ಕೆ ಇಂದು ಎಚ್ಚರಿಕೆ ಗಂಟೆಯ ಸದ್ದಿನಂತೆ ಕೇಳಿಸುತ್ತಿದೆ. ಹಾಗೆ ಮೋದಿಯವರ ನಡೆನುಡಿ ನೋಡಿ: ‘ಕಾಶ್ಮೀರದಲ್ಲಿ ಉಗ್ರರು ಜನರಷ್ಟನ್ನೇ ಕೊಲ್ಲಲಿಲ್ಲ. ಅದರ ಜೊತೆಗೆ ಕಾಶ್ಮೀರತ್ವ, ಪ್ರಜಾಪ್ರಭುತ್ವ, ಮಾನವತ್ವವನ್ನೂ ಕೊಂದರು’ ಅನ್ನುತ್ತಾರೆ. ಹಾಗಾದರೆ ಮೋದಿ? ಭಾರತತ್ವ, ಪ್ರಜಾಪ್ರಭುತ್ವ, ಮಾನವತ್ವ ಕೊಲ್ಲಲಿಲ್ಲವೇ? ಕೊಲೆಸುಲಿಗೆ ನಿಲ್ಲಿಸಬೇಕಾದವನೇ ರಾಗದ್ವೇಷಕ್ಕೆ ಒಳಗಾಗಿ ತಾನೇ ಕೊಲೆಸುಲಿಗೆಗೆ ಕಾರಣನಾಗಬಲ್ಲವನಾದರೆ? ಉಳಿಯುವುದೆಲ್ಲಿ ಬಂತು?

ಹಾಗೆಯೇ ಕೆಲವು ಗುಜರಾತ್ ಮಾದರಿಗಳನ್ನು ನೋಡಿದರೂ ಸಾಕು, ಅಂಥವುಗಳನ್ನು ಸರ್ವಾಧಿಕಾರಿ ಮಾತ್ರ ಮಾಡಬಲ್ಲ ಅನ್ನಿಸುವಂತಿವೆ. ಉದಾಹರಣೆಗೆ ಒಂದು: ಗುಜರಾತ್ ಸರ್ಕಾರವು ಕೃಷಿವಿಶ್ವವಿದ್ಯಾನಿಲಯಕ್ಕೆ ಮೀಸಲಿಟ್ಟಿದ್ದ ೧,೧೦೦ ಎಕರೆ ಭೂಮಿಯನ್ನು ಚದರ ಮೀಟರ್‌ಗೆ ೯೦೦ ರೂಪಾಯಿಗಳಂತೆ ಟಾಟಾ ನ್ಯಾನೋ ಕಾರು ಕಂಪೆನಿಗೆ ನೀಡಿದೆ. ಇದರ ಮಾರುಕಟ್ಟೆ ಬೆಲೆ ಚದರ ಮೀಟರ್‌ಗೆ ೧೦,೦೦೦ ರೂಪಾಯಿಗಳು! ಜೊತೆಗೆ ಪ್ರಾಜೆಕ್ಟ್ ಬೆಲೆಯ ನಾಲ್ಕುಪಟ್ಟು ಅಂದರೆ ೯,೫೭೦ ಕೋಟಿ ರೂಪಾಯಿಗಳ ಸಾಲದ ವ್ಯವಸ್ಥೆ ಮಾಡಲೂ ಸರ್ಕಾರ ಸಮ್ಮತಿಸಿದೆ. ಬಡ್ಡಿ ಎಷ್ಟು ಗೊತ್ತೆ? – ೦.೧೦. ಇದನ್ನು ಒಂದು ರೂಪಕವಾಗಿ ನೋಡಿದರೆ – ನಾಳಿನ ಭಾರತೀಯರು ಸರ್ವಾಧಿಕಾರಿ ಉಗ್ರನೊಬ್ಬನ ಆಡಳಿತಕ್ಕೆ ಸಿಕ್ಕರೆ, ನ್ಯಾನೋ ಕಾರಲ್ಲಿ ಕೂತು ಆಹಾರಕ್ಕಾಗಿ ದಿಕ್ಕೆಟ್ಟು ಅಲೆಯುವ ದೃಶ್ಯ ಕಾಣಬಹುದು.

ಇನ್ನೊಂದು : ಗುಜರಾತ್ ಸರ್ಕಾರ ಅದಾನಿ ಗ್ರೂಪ್‌ಗೆ ೧೮ ಸಾವಿರ ಎಕರೆಗಳನ್ನು ಬಂಜರು ಭೂಮಿಯೆಂದು ಹೇಳಿ ಎಕರೆಗೆ ೪ಸಾವಿರ ರೂಪಾಯಿಯಿಂದ ೧ ಲಕ್ಷದ ೩೦ ಸಾವಿರದವರೆಗೆ ನಿಗದಿ ಮಾಡಿ ನೀಡಲಾಗಿದೆ. ಆದರೆ ಅದೇ ‘ಬಂಜರು ಭೂಮಿ’ಯನ್ನು ಅದಾನಿ ಗ್ರೂಪ್‌ನವರು ಬೇರೆ ಬೇರೆ ಕಂಪನಿಗಳಿಗೆ ಎಕರೆಗೆ ೩೨ ಲಕ್ಷದಿಂದ ೪ಕೋಟಿ ರುಪಾಯಿಯವರೆಗೆ ಮಾರಾಟ ಮಾಡಿಕೊಂಡಿದ್ದಾರೆ. ದುರಂತವೆಂದರೆ ಸರ್ಕಾರಿ ಸಾಮ್ಯದ ಸಾರ್ವಜನಿಕ ಕಂಪೆನಿಗಳು ಕೂಡ ಅದಾನಿ ಗ್ರೂಪ್‌ನಿಂದಲೇ ಹೆಚ್ಚಿನ ಬೆಲೆಗೆ ತಾವೂ ಕೊಂಡುಕೊಂಡಿವೆ. ಇದೇನು ವ್ಯವಹಾರ? ಸರ್ಕಾರ ಯಾರು?

ಮತ್ತೊಂದು : ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಬಯೋಟರ್ ಇಂಡಸ್ಟ್ರೀಸ್‌ಗೆ ಜೈವಿಕ ಇಂಧನದ ಹೆಸರಲ್ಲಿ ೧೫೦೦ ಕೋಟಿ ರೂಪಾಯಿಗಳ ಸಾಲ ನೀಡಲಾಗಿದೆ. ಕಚ್ಚಾವಸ್ತು ಖರೀದಿ, ಇಂಧನ ತಯಾರಿಕೆ, ಇಂಧನ ವಿತರಣೆ – ಈ ಎಲ್ಲವೂ ಕಾಗದದ ಮೇಲೆ ಮಾತ್ರ. ಈ ಕಂಪನಿಗೆ ೩೦೦ ಎಕರೆ ಭೂಮಿಯನ್ನು ವಿಶೇಷ ಆರ್ಥಿಕವಲಯ ರಚಿಸಲು ಗುಜರಾತ್ ಸರ್ಕಾರ ನೀಡಿದೆ. ಬಹುಶಃ ವಿದೇಶಿ ಬ್ರಿಟಿಷ್ ಕಂಪನಿ ಸರ್ಕಾರ ಇದ್ದಾಗಲೂ ಇಂಥವು ಆಗಿರಲಾರವು. ಈ ಸರ್ಕಾರ ಒಂದು ಸರ್ಕಾರವೆ?

ಇಂಥವು ಇನ್ನೆಷ್ಟೊ. ಸರ್ಕಾರವೇ ಶಾಮೀಲಾಗದೆ ಇಂಥವು ಆಗಲಾರದು, ಇರಲಿ. ಇಲ್ಲಿ ಪ್ರಶ್ನೆ ಇರುವುದು, ಮೇಲಿನಂತಹ ಹಗಲು ದರೋಡೆಗಳನ್ನು ಒಂದು ಜನತಂತ್ರ ವ್ಯವಸ್ಥೆಯ ಸರ್ಕಾರದಲ್ಲಾದರೆ ಕನಿಷ್ಟ ಪ್ರಶ್ನಿಸಬಹುದು, ಪ್ರತಿಭಟಿಸಲೂಬಹುದು. ಆದರೆ ಸರ್ವಾಧಿಕಾರಿ ಪ್ರವೃತ್ತಿಯ ಆಡಳಿತದಲ್ಲಿ ಪ್ರತಿಭಟನೆಗಳಿಗೆ ಜನಾಂದೋಲನಗಳಿಗೆ ಉಸಿರು ಕಟ್ಟಿರುತ್ತದೆ. ಗುಜರಾತ್ ಸರ್ಕಾರ ಭೂಮಾಫಿಯಾ ಹಗರಣಗಳ ವಿಚಾರಣೆಗೆ ನೇಮಿಸಿದ ನಿವೃತ್ತ ನ್ಯಾಯಧೀಶ ಎಂ.ಬಿ.ಷಾ ಆಯೋಗದ ಕಾರ್‍ಯವೈಖರಿ ನೋಡಿದರೆ ಸಾಕು. ಸಾರ್ವಜನಿಕರು ಸಲ್ಲಿಸುವ ದಾಖಲಾತಿಗಳನ್ನು ಪರಿಶೀಲಿಸಬೇಕಾದರೆ ಆ ದಾಖಲಾತಿಗಳ ಪ್ರತಿಪುಟಕ್ಕೂ ನೋಟರಿ ಸಹಿಯನ್ನು ಕಡ್ಡಾಯ ಮಾಡುತ್ತದೆ ಆ ಆಯೋಗ! ಹಗರಣಗಳಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನೂ ಸಂಗ್ರಹಿಸಿದ ಥಾಕರ್ ಎಂಬಾತ ನೋಟರಿಯ ಸಹಿಗಾಗಿ ೪೪ ದಿನಗಳು ಅಲೆದೂ ಅಲೆದೂ ಕೊನೆದಿನ ಒಬ್ಬ ನೋಟರಿ ಧೈರ್ಯಮಾಡಿ ಸಹಿ ಮಾಡುತ್ತಾನೆ. ಈ ದಾಖಲೆಗಳನ್ನು ಸ್ವೀಕರಿಸದೆ ಆಯೋಗದ ರಿಜಿಸ್ಟ್ರಾರ್, ‘ನೀನು ಯಾರು? ನಿನಗೇನು ಸಂಬಂಧ?’ ಇತ್ಯಾದಿಯಾಗಿ ಥಾಕರ್ ಅವರಿಗೆ ಪ್ರಶ್ನಿಸುತ್ತ ಆ ಕೊನೆಯ ದಿನ ಮುಗಿಸಿಬಿಡಲು ನೋಡುತ್ತಾನೆ. ರಂಪವಾದ ಮೇಲೆ ಆ ದಾಖಲೆಗಳೇನೋ ಸ್ವೀಕೃತವಾಗುತ್ತವೆ. ಆದರೆ ನ್ಯಾಯಮೂರ್ತಿ ಷಾ ಹೇಳಿದ್ದೇನು? ಈ ಭೂ ಹಗರಣದಲ್ಲಿ ಭಾಗಿ ಎಂದು ಆರೋಪಿಸುತ್ತಿರುವ ಆ ಕಾರ್ಪೋರೇಟ್‌ಕುಳಗಳನ್ನು ಹಾಗೂ ಆರೋಪಿ ಅಧಿಕಾರಿಗಳನ್ನು ಖುದ್ದು ಅರ್ಜಿದಾರರು ಹಾಜರುಪಡಿಸಬೇಕು ಅನ್ನುತ್ತಾರೆ – ಸಮನ್ಸ್ ನೀಡುವ ಬದಲು! ಇನ್ನು ತೀರ್ಪು ಎಂತು? ಷಾ ಆಯೋಗ ನೀಡುವ ಮಧ್ಯಂತರ ವರದಿಯನ್ನು ೨೦೧೨ರ ಗಾಂಧಿ ಹುಟ್ಟಿದ ದಿನವನ್ನೇ ನೋಡಿಕೊಂಡು ಗುಜರಾತ್ ಸಚಿವ ಸಂಪುಟ ಒಪ್ಪಿಕೊಳ್ಳುತ್ತದೆ. ಮಾರನೆಯ ದಿನ ಯಥಾಪ್ರಕಾರ ಬಿಜೆಪಿ ವಕ್ತಾರ ಸರ್ಕಾರಕ್ಕೆ ‘ಕ್ಲೀನ್‌ಚಿಟ್’ ಎಂದು ಘೋಷಿಸುತ್ತಾನೆ. ೧೨-೧೨-೧೨ ಪ್ರಳಯ ಪ್ರಳಯ ಅಂತಾ ಚರ್ಚೆ ಆಗುತ್ತಿತ್ತು. ಆ ಚರ್ಚೆಯ ಗಲಾಟೆಯಲ್ಲಿ ಈ ಗುಜರಾತ್ ಮಾದರಿ ಪ್ರಳಯ ಕಣ್ಣಿಗೆ ಬೀಳಲಿಲ್ಲವೇನೊ!

ಇರಲಿ, ಬಿಜೆಪಿಯವರಿಗೆ ಬೇರೆಯವರ ಲೂಟಿ ಭ್ರಷ್ಟಾಚಾರಗಳು ಮಾತ್ರ ಕಾಣಿಸುತ್ತವೆ. ಅವು ತಮ್ಮ ಲೂಟಿ, ಭ್ರಷ್ಟಾಚಾರಗಳನ್ನು ‘ದೇಶಸೇವೆ’ಯೆಂದು ಅಂದುಕೊಂಡುಬಿಟ್ಟಿರುತ್ತವೆ. ತಾನು ಮಾಡಿದರೆ ರಸಿಕತೆ ಬೇರೆಯವರು ಅದನ್ನೇ ಮಾಡಿದರೆ ಅದು ಅತ್ಯಾಚಾರ ಅಂತಾರಲ್ಲ ಹಾಗೆ. ಇದು ಅವರ ಮೈಂಡ್ ಸೆಟ್. ಇರಲಿ. ಇವಕ್ಕೆಲ್ಲಾ ಮೋದಿಯವರ ಉತ್ತರಗಳೇನು? ಮೋದಿಯವರು ತಮ್ಮ ಆಡಳಿತದ ೧೩ ವರ್ಷಗಳಲ್ಲಿ ಒಬ್ಬ ಮುಖ್ಯಮಂತ್ರಿಯಾಗಿ ಯಾವುದೇ ಬಿಲ್‌ನ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ! ಯಾವ ಶಾಸಕರ ಪ್ರಶ್ನೆಗೂ ಉತ್ತರಿಸಿಯೂ ಇಲ್ಲ. ಹಗರಣಗಳ ವಿಚಾರಕ್ಕಂತೂ ಮೌನವೇ ಉತ್ತರ. ಈ ಮೌನದೊಳಗೆ ಏನಿದೆ? ಆ ಮೌನದೊಳಗೊಬ್ಬ ಸರ್ವಾಧಿಕಾರಿ ಬಚ್ಚಿಟ್ಟುಕೊಂಡಿದ್ದಾನೆ. ತಾನೊಬ್ಬ ಜನತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾದವನು ಎಂಬ ಭಾವನೆ ಇದ್ದಿದ್ದರೆ, ಜನಪ್ರತಿನಿಧಿಗಳ ಸಭೆಯನ್ನು ಕಾಲುಕಸದಂತೆ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಈಗಲಾದರೂ ಮೋದಿ ಮುಖವಾಡ ಹಾಕಿಕೊಳ್ಳುತ್ತಿರುವವರು ಅದನ್ನು ಸುಟ್ಟು ಮೋದಿಯೊಳಗಿನ ಸರ್ವಾಧಿಕಾರಿಯನ್ನು ಅವರ ಜೀವಕ್ಕೆ ಅಪಾಯ ಆಗದಂತೆ ಸುಡಬೇಕಾಗಿದೆ. ಇದು ಇಂದಿನ ತುರ್ತು ಅಗತ್ಯ. ಭಾರತಕ್ಕೆ ನಾಳೆಗಳು ಉಳಿಯಲು ಇದಾಗಲೇಬೇಕಾಗಿದೆ.

ಇಷ್ಟೆಲ್ಲಾ ಇದ್ದರೂ, ಅಭಿವೃದ್ಧಿ ಪದದ ಸುಳಿಗೆ ಸಿಕ್ಕಿಹಾಕಿಕೊಂಡಿರುವ ಜನರಿಗೆ ಯಾವುದು ತಾನೇ ಕಾಣಲು ಸಾಧ್ಯ? ಈ ‘ಅಭಿವೃದ್ಧಿ’ ಜೊತೆಗೆ ಪೈಪೋಟಿಗೆ ಬಿದ್ದಂತೆ ಹೆಚ್ಚಳವಾಗುತ್ತಿರುವ ಸ್ಲಂಗಳು ನಮಗೆ ಕಾಣಿಸುತ್ತಿಲ್ಲ. ಈ ಸುಳಿಗೆ ಸಿಲುಕಿ ಐರೋಪ್ಯ ರಾಷ್ಟ್ರಗಳು ಇಂದು ಪಾಪರ್ ಎದ್ದು ಎಂಜಲು ನುಂಗುತ್ತಿರುವುದು ಕಾಣುತ್ತಿಲ್ಲ. ಬಡವ-ಬಲ್ಲಿದರ ನಡುವಿನ ಅಂತರ ಭೂಮಿ ಆಕಾಶದಷ್ಟಾಗಿ ಅದರಿಂದಾಗಿ ನಮ್ಮ ಚುನಾವಣೆ ವ್ಯವಸ್ಥೆ ಪ್ರಜಾಪ್ರಭುತ್ವಗಳು ತತ್ತರಿಸುತ್ತಿರುವುದೂ ಕಾಣಿಸುತ್ತಿಲ್ಲ. ಇಲ್ಲೆ ನಮ್ಮ ಕರ್ನಾಟಕದಲ್ಲೇ ’ನಮ್ಮನ್ನು ಒಂದ್ಸಲ ನೋಡಿ’ ಎಂದು ಅಧಿಕಾರಕ್ಕೆ ಬಂದವರು, ಈ ಭೂಮಿ ನಮ್ಮ ತಾಯಿ ಎಂದು ಹೇಳುತ್ತ ಇಲಿ-ಹೆಗ್ಗಣಗಳಂತೆ ಭೂಸಂಪತ್ತಿಗೆಲ್ಲಾ ಬಿಲ ಕೊರೆದು ಧ್ವಂಸ ಮಾಡಿ ಚುನಾವಣಾ ವ್ಯವಸ್ಥೆಯನ್ನೂ, ಜನಪ್ರತಿನಿಧಿಗಳನ್ನೂ ಮಾರಾಟದ ಸರಕಾಗಿಸಿದ ಘೋರಕ್ಕೂ ನಾವು ಕಣ್ಣುಮುಚ್ಚಿಕೊಂಡಿದ್ದೇವೆ. ಯಾವುದನ್ನೂ ಕಾಣದಂತೆ ಮಾಡಿರುವುದು ಈ ‘ಅಭಿವೃದ್ಧಿ’ ಎಂಬ ಹುಚ್ಚುಕುದುರೆ.

ಆದರೆ ಈಗಲಾದರೂ ನಾವು ಕಣ್ಣು ಬಿಡಬೇಕಾಗಿದೆ. ಯಾಕೆಂದರೆ, ಈಗ ಭಾರತದ ನೆತ್ತಿಯ ಮೇಲೆ ಸರ್ವಾಧಿಕಾರದ ಕತ್ತಿ ತೂಗಾಡುತ್ತಿದೆ. ೧೯೮೫ರಲ್ಲೇ ಮೋದಿಯೊಳಗೊಬ್ಬ ಸರ್ವಾಧಿಕಾರಿ ಬಚ್ಚಿಟ್ಟುಕೊಂಡಿರುವುದರ ವಾಸನೆಯನ್ನು ಮನಃಶಾಸ್ತ್ರದಲ್ಲಿ ತರಬೇತು ಪಡೆದ ಸಮಾಜಶಾಸ್ತ್ರಜ್ಞರಾದ ಆಶೀಶ್‌ನಂದಿ ಪತ್ತೆಹಚ್ಚುತ್ತಾರೆ. ಆಗ ಯುವಕ ಮೋದಿ ದೆಹಲಿಯಲ್ಲಿ ಚಟುವಟಿಕೆ ನಡೆಸುತ್ತಿದ್ದಾಗ ಮೋದಿ ಸಂದರ್ಶನ ಮಾಡಿದ ನಂದಿಯವರು – ಇದು (ಮೋದಿ) ಫ್ಯಾಸಿಸ್ಟ್ ಮನೋವೃತ್ತಿಯ ಒಂದು ಮಾದರಿ ಎಂಬುದರ ಬಗ್ಗೆ ನನಗೆ ಯಾವ ಅನುಮಾನವೂ ಉಳಿಯಲಿಲ್ಲ” ಎನ್ನುತ್ತಾರೆ. “ಮನೋವೈದ್ಯರು, ಮನೋವಿಶ್ಲೇಷಕರು ಮತ್ತು ಮನಃಶಾಸ್ತ್ರಜ್ಞರು ಹಲವಾರು ವರ್ಷಗಳ ಪ್ರಯೋಗಗಳ ಮೂಲಕ ಸಿದ್ಧಪಡಿಸಲಾದ ಸರ್ವಾಧಿಕಾರಿ ವ್ಯಕ್ತಿತ್ವದ ಮಾನದಂಡಗಳ ಪೈಕಿ ಹೆಚ್ಚುಕಮ್ಮಿ ಎಲ್ಲವೂ ಮೋದಿಗೆ ಅನ್ವಯವಾಗುತ್ತವೆ ಎಂದು ಆಶೀಶ್‌ನಂದಿ ವ್ಯಥೆ ಪಡುತ್ತಾರೆ. ಆಮೇಲೆ, ನಾನು ತಲ್ಲಣಿಸಿ ಹೋಗಿದ್ದೆ. ಪುಸ್ತಕಗಳಲ್ಲಿ ಮಾತ್ರ ಫ್ಯಾಸಿಸ್ಟ್‌ನ ಚಹರೆ ಲಕ್ಷಣಗಳನ್ನು ಅಧ್ಯಯನ ಮಾಡಿದ್ದೆ. ಆದರೆ ಆ ಚಹರೆಯ ಲಕ್ಷಣಗಳಿರುವ ಜೀವಂತ ವ್ಯಕ್ತಿ – ಓರ್ವ ಫ್ಯಾಸಿಸ್ಟ್‌ನೂ, ಭಾವಿ ಕೊಲೆಗಡುಕನೂ, ಅಷ್ಟೇ ಏಕೆ, ಭವಿಷ್ಯದಲ್ಲಿ ಪ್ರಾಯಶಃ ಸಾಮಾಜಿಕ ಹತ್ಯಾಕಾಂಡ ನಡೆಸಬಲ್ಲಾತನೂ ಆದ ಇಂತಹ ವ್ಯಕ್ತಿ (ಮೋದಿ)ಯನ್ನು ನಾನು ಭೇಟಿಯಾದುದು ಇದೇ ಮೊದಲು” ಎಂದು ಅಶೀಶ್‌ನಂದಿ ಭೀತಿಗೊಳ್ಳುತ್ತಾರೆ. ಅವರ ೧೯೮೫ರ ಭೀತಿ ೨೦೦೨ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿ ಭಾರತದ ಚರಿತ್ರೆಗೆ ಸೇರಿಯೂ ಆಯ್ತು. ಮುಂದೆ ಕಾದು ಕೂತಿರಲೂಬಹುದು.

ಜೊತೆಗೆ, ಭಾರತದ ಸರ್ವಾಧಿಕಾರಿ ಮನಸ್ಸಿಗೆ ಭಯ, ಮಾಯಮಂತ್ರ ಮತ್ತು ಪುರಾಣ ಜೊತೆಜೊತೆಗೆ ಕೂಡಿಕೊಂಡಿರುತ್ತದೇನೊ. ಗುಜರಾತ್‌ನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕೇವಲ ಒಬ್ಬ ರೈತ ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಮೋದಿಯವರು ಹೇಳುತ್ತಾರೆ. ಹಾಗಾದರೆ ಗುಜರಾತ್ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಸಾವಿರಾರು ಸಂಖ್ಯೆಯ ರೈತರ ಆತ್ಮಹತ್ಯೆ ಅಂಕಿಅಂಶಗಳು ಸುಳ್ಳೆ? ಅಥವಾ ಒಬ್ಬ ರೈತನನ್ನು ಹೊರತುಪಡಿಸಿ ಉಳಿದ ಆತ್ಮಹತ್ಯೆ ಮಾಡಿಕೊಂಡ ರೈತರು ಮೋದಿಯವರ ಪಾಲಿಗೆ ಮನುಷ್ಯರೇ ಅಲ್ಲವೆ? ಇಂಥ ಕ್ರೂರ ಸುಳ್ಳಿಗರು ತಮ್ಮ ಪ್ರಣಾಳಿಕೆಯಲ್ಲಿ ಹಾಲುಜೇನಿನಹೊಳೆಯ ಆಶ್ವಾಸನೆ ಹರಿಸಿದರೂ ಆ ಆಶ್ವಾಸನೆಗಳೂ ಅವರ ಪ್ರಮಾಣಗಳೂ ಆತ್ಮಹತ್ಯೆ ಮಾಡಿಕೊಂಡುಬಿಡುತ್ತವೆ. ಹಾಗೇ ಉತ್ತರಾಖಾಂಡ ಪ್ರವಾಹದಲ್ಲಿ ಮೋದಿ ಪ್ರಯೋಜಿತ ಪ್ರಚಾರಕರು ಸುಳ್ಳು ಸೃಷ್ಟಿಸಿ ೧೬ ಸಾವಿರ ಗುಜರಾತಿಗಳನ್ನು ಕಾಪಾಡಲಾಯಿತೆಂದು ರಂಜಕವಾಗಿ ಪ್ರಚಾರ ಮಾಡಲಾಯ್ತು. ಪುರಾಣದಲ್ಲಿ ಕೃಷ್ಣ ಪರಮಾತ್ಮ ೧೬ ಸಾವಿರ ಗೋಪಿಕಾಸ್ತ್ರೀಯರನ್ನು ಕಾಪಾಡಿದ ಎಂದರೆ ಏನೋ ಪುರಾಣ ಅಂತ ನಂಬಬಹುದಿತ್ತು. ಸರ್ವಾಧಿಕಾರಿ ಚಹರೆಗೆ ಭ್ರಮೆ, ಪುರಾಣವೂ ಸೇರಿಬಿಟ್ಟರೆ ಅದು ಎಲ್ಲಿಗೆ ಕೊಂಡೊಯ್ಯುತ್ತದೆ? ಊಹಿಸಲು ಕಷ್ಟವಾಗುತ್ತದೆ. ಕೋಮುವಾದಿ ಪಕ್ಷವಾಗಿದ್ದ ಬಿಜೆಪಿಯು ಒಬ್ಬ ಸರ್ವಾಧಿಕಾರಿ ಚಹರೆಯ ಉಗ್ರಗಾಮಿ ಕೈಗೆ ಈಗ ದೇಶ ಕೊಟ್ಟು ತಾನೇ ತನ್ನನ್ನು ಕೊಂದುಕೊಂಡು ದೇಶವನ್ನೂ ನಾಶ ಮಾಡಲು ಟೊಂಕಕಟ್ಟಿ ನಿಂತಂತಿದೆ. ಈ ವಾಸನೆಯನ್ನು ಪ್ರಜ್ಞಾವಂತ ಮಾಧ್ಯಮಗಳಾದರೂ ಮುಂಗಾಣಬೇಕಿತ್ತು. ಇತಿಹಾಸದ ಯಾವುದೇ ಸರ್ವಾಧಿಕಾರಿಯ ಅಸಹನೆಗೆ ಮೊದಲ ಬಲಿ – ಮಾಧ್ಯಮ ಸ್ವಾತಂತ್ರ್ಯ. ಈ ಮೊದಲ ಬಲಿಗಾದರೂ ತನ್ನ ಸಾವಿನ ಸುಳಿವು ತಿಳಿಯ ಬೇಕಿತ್ತು. ಇದನ್ನು ಬರೆಯುತ್ತಾ ಭಯಕ್ಕೆ ಬಿದ್ದೆ. ಈಗ ಉಳಿದಿರುವುದು ಇಷ್ಟೆ: ಆಶೀಶ್‌ನಂದಿಯವರ ಭೀತಿ, ನನ್ನಂತವರ ಆತಂಕಗಳು ಹುಸಿಯಾಗಲಿ ಹಾಗೂ ಭಾರತಕ್ಕೆ ಎಂದೆಂದೂ ಭಯೋತ್ಪಾದಕ ಆಡಳಿತ ಬಾರದಿರಲಿ ಎಂದು ನನ್ನಾಳದಿಂದ ಆಶಿಸುವುದು – ಅಷ್ಟೇ.