ಬಾಳೆ ಬಂಗಾರವಾಗಲೊಂದು ಮಧುರ ಮಾದರಿ-ಪಿ. ಓಂಕಾರ್

* ಪರ್ಯಾಯ..

                                          ಬಾಳೆ ಬಂಗಾರವಾಗಲೊಂದು ಮಧುರ ಮಾದರಿ

ಬಾಳೆ ಬೆಳೆದರೆ ಬಾಳು ಬಂಗಾರವಾಗುತ್ತದೆನ್ನುವುದು ರೈತರ ನಂಬಿಕೆ. ನಾನಾ ತಳಿಯ ಬಾಳೆ ಬೆಳೆಯುವಂತೆ ಸರಕಾರಿ ಇಲಾಖೆಗಳು ರೈತರನ್ನು ಪ್ರೋತ್ಸಾಹಿಸುತ್ತವೆ. ಅದನ್ನು ನಂಬಿ ಬೆಳೆದ ರೈತ ಕೆಲವು ಹಂಗಾಮಿನಲ್ಲಿ ಬದುಕು ಬಂಗಾರ ಮಾಡಿಕೊಂಡಿದ್ದಾನೆ. ಕೆಲವೊಮ್ಮೆ ಶ್ರಮದ `ಫಲ’ಯಾರದ್ದೋ ಪಾಲಾಗಿ, ಸಿಪ್ಪೆಯಷ್ಟೆ ರೈತನಿಗೆ ಉಳಿದದ್ದೂ ಇದೆ. ರಾಜ್ಯದ ಬೆಳೆಗಾರನ ಸದ್ಯದ ಸ್ಥಿತಿ ಫಲವಿಲ್ಲದ ಸಿಪ್ಪೆಗೆ ಸೀಮಿತವಾಗಿದೆ. ಹಲವು ರೈತರು ಪಚ್ಚ ಬಾಳೆಯನ್ನು ಬೀದಿಗೆ ಚೆಲ್ಲಿದರು. ಕೆಲವರು ಶಾಲಾ ಮಕ್ಕಳಿಗೆ ಹಂಚಿದರು. ಕತ್ತರಿಸಿ ಮಾರಿದರೆ ಇನ್ನೂ ನಷ್ಟವೆಂದು ಕೆಲವರು ತೋಟದಲ್ಲೇ ಗೊಬ್ಬರವಾಗಲು ಬಿಟ್ಟರು. ಇದು ಬಾಳೆಗೆ ಸೀಮಿತ ಸಮಸ್ಯೆಯಷ್ಟೆ ಅಲ್ಲ. ಟೊಮೇಟೊ ಹೆಚ್ಚು ಬಂದಾಗಲೂ ರೈತ ಬೆಳೆಯ ಸಮೇತ ಬೀದಿಗೆ ಬೀಳುತ್ತಾನೆ. ಈರುಳ್ಳಿಯೂ ಕಣ್ಣೀರು ತರಿಸುತ್ತದೆ.ಫಸಲು ಬೆಳೆದ ರೈತ,ಕೃಷಿ ಪೂರ್ವ ಗುತ್ತಿಗೆದಾರ, ದಲ್ಲಾಳಿ, ಸಗಟು ವ್ಯಾಪಾರಿ, ಚಿಲ್ಲರೆ ಮಾರಾಟಗಾರ ಮುಂತಾದ ಹಂತಗಳನ್ನು ಹಾಯ್ದು ಗ್ರಾಹಕನಿಗೆ ತಲುಪುವ ವೇಳೆಗೆ ಕನಿಷ್ಠ ಇಪತ್ತು ಪಟ್ಟು `ಮೌಲ್ಯ’ಹೆಚ್ಚಿಸಿಕೊಂಡಿರುತ್ತದೆ. ಈ ಸರಪಳಿಯಲ್ಲಿ ಹೆಚ್ಚು ಶ್ರಮ ಸುರಿಯುವ ಬೆಳೆಗಾರನೇ ಹೆಚ್ಚು ನಷ್ಟಕ್ಕೆ ತುತ್ತಾಗುವುದು ಕಟು ವಾಸ್ತವ.

ದೇಶದಲ್ಲೇ ಅತ್ಯಂತ ಹೆಚ್ಚು ಬಾಳೆ ಬೆಳೆಯುವ ಪ್ರದೇಶ ತಮಿಳುನಾಡು.ಇಲ್ಲಿನ ಥೊಟ್ಟೀಯಂನ ವರದರಾಜಪುರಂ ಸುತ್ತಲಿನ ರೈತರೂ ಬಾಳೆ ಬೆಳೆದು ನಷ್ಟಕ್ಕೆ ತುತ್ತಾಗುತ್ತಿದ್ದರು.ದಲ್ಲಾಳಿ ಕೇಂದ್ರಿತ ಮಾರುಕಟ್ಟೆ ಸೃಷ್ಟಿಸುವ ಅಸ್ಥಿರತೆ ಅವರನ್ನು ವರ್ಷಗಳ ಕಾಲ ಕಂಗೆಡಿಸಿತ್ತು. ಒಂದೆರಡು ವರ್ಷದಿಂದೀಚೆಗೆ ಅಂತಹ ಯಾವ ಅಂಜಿಕೆಯೂ ಅವರಿಗಿಲ್ಲ. ಆತಂಕವಿಲ್ಲದೆ ಬಾಳೆ ಬೆಳೆಯುತ್ತಾರೆ ಮತ್ತು ನಿಶ್ಚಿತ ಲಾಭ ಗಳಿಸುತ್ತಿದ್ದಾರೆ. ಇಂಥದೊಂದು ಆತ್ಮಖಚಿತತೆ ಸಾಧ್ಯವಾದದ್ದು ಹೇಗೆ? ಈ ನಿಟ್ಟಿನ ಪ್ರಯತ್ನ ನಮ್ಮ ಬಾಳೆ ಬೆಳೆಗಾರರು ಮತ್ತು ಇಲಾಖೆಗಳಿಗೆ ಮಾದರಿಯಾಗುವಂತದ್ದು. ಬೆಲೆ ಅಸ್ಥಿರತೆಗೆ ಉತ್ತರ ಕಂಡುಕೊಳ್ಳಲು ತಮಿಳುನಾಡು ಬಾಳೆ ಉತ್ಪಾದಕರ
ಫೆಡರೇಷನ್ ಸುಸ್ಥಿರ ಮಾದರಿಯ ಹುಡುಕಾಟ ನಡೆಸುತ್ತಿದ್ದಾಗ ಹೊಳೆದದ್ದು ಸೂರ್ಯ ಶಕ್ತಿ ಚಾಲಿತ ಒಣಗು ಯಂತ್ರದ (ಸೋಲಾರ್ ಡ್ರೈಯರ್) ಅಳವಡಿಕೆ ಆಲೋಚನೆ. ಕಳೆದ ವರ್ಷ ಥೊಟ್ಟೀಯಂ ಬಾಳೆ ಉತ್ಪಾದಕರ ಸಂಘ ರಚನೆಯಾಯಿತು. 13 ಪ್ರಗತಿಪರ ರೈತರು ನಿರ್ದೇಶಕರು,ಮುನ್ನೂರು ಬೆಳೆಗಾರರು ಅದರ ಸದಸ್ಯರಾದರು. ನಂತರ ಕಂಪನಿಯ ರೂಪ ಪಡೆಯಿತು. ಜರ್ಮನ್ ಡೆವಲಪ್‍ಮೆಂಟ್ ಬ್ಯಾಂಕ್ ಮತ್ತು ಸಂಸ್ಥೆಯೊಂದರಿಂದ 8 ಲಕ್ಷ ಮೌಲ್ಯದ ಹಸಿರುಮನೆ ಸೂರ್ಯಶಕ್ತಿ ಒಣಗು ಯಂತ್ರ ಸಹಿತ 20 ಲಕ್ಷ ರೂ.ಮೂಲ ಬಂಡವಾಳ ದೊರೆಯಿತು.
ರೈತರಿಂದ ರೈತರಿಗಾಗಿಯೇ ಸ್ಥಾಪಿಸಿದ ಕಂಪನಿ ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಗೆ ಬೆಳೆಗಾರರಿಂದ ಬಾಳೆಯನ್ನು ಖರೀದಿಸುತ್ತದೆ.ಕೈಗವಸು ತೊಟ್ಟ ಸ್ಥಳೀಯ ಮಹಿಳೆಯರು ಒಮ್ಮೆಗೆ ನಾಲ್ಕು ಸಾವಿರ ಬಲಿತ ಬಾಳೆಯ ಹಣ್ಣಿನ ಸಿಪ್ಪೆ ಸುಲಿದು, ಶುಚಿಯಾದ ಒಣಗು ತಟ್ಟೆಯಲ್ಲಿ ಜೋಡಿಸುತ್ತಾರೆ. ನಂತರ ಮೂರು ದಿನ ನಿಯಮಿತ ಸೂರ್ಯ ಶಾಖದಲ್ಲಿ ಹದವಾಗಿ ಒಣಗಿಸಿ, ಜೇನು ತುಪ್ಪದಲ್ಲಿ ಅದ್ದಿ ತೆಗೆದು,ಮತ್ತೊಮ್ಮೆ ತೆಳು ಶಾಖದಲ್ಲಿ ಒಣಗಿಸಿ ಪೆÇಟ್ಟಣಗಳಲ್ಲಿಟ್ಟು `ಮಧುರ್ ಸೋಲಾರ್ ಡ್ರೈಡ್  ಬನಾನ’ ಬ್ರ್ಯಾಂಡ್‍ನಡಿ ಮಾರುಕಟ್ಟೆಗೆ ಬಿಡುತ್ತಾರೆ. ಬಾಳೆ ಹಣ್ಣು `ಚಾಕೊಲೇಟಿ’ಯಾಗಿ ಮೌಲ್ಯವರ್ಧಿಸಿಕೊಳ್ಳುವ ಈ ಪ್ರಕ್ರಿಯೆ ಸುತ್ತಮುತ್ತಲ ನೂರಾರು ಬಾಳೆ ಬೆಳೆಗಾರರ ಬದುಕನ್ನು ಸಿಹಿಯಾಗಿಟ್ಟಿದೆ.
ಈಗ ರೈತರೇ ಉದ್ಯಮಿಗಳು. ಸ್ಥಳೀಯರೇ ಉದ್ಯೋಗಿಗಳು. ಥೈವಾನ್ ಮೂಲದ ಒಣಗು ಯಂತ್ರದ್ದು ಸರಳ ತಂತ್ರಜ್ಞಾನ. ಮೈಸೂರಿನ ಸಿಎಫ್‍ಟಿಆರ್‍ಐ ಸಹಿತ ಕೆಲ ಸಂಸ್ಥೆಗಳು ಆಹಾರ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಲಹೆ ನೀಡಿವೆ.ರೈತರು ಪೂರೈಸುವ ಪೂವನ್,ಕರ್ಪೂರವಳ್ಳಿ, ಏಲಕ್ಕಿ ಮುಂತಾದ ತಳಿಯ ಬಾಳೆಹಣ್ಣು ಆ ತಳಿಯ ಹೆಸರಿನಲ್ಲೇ ಚಾಕೊಲೇಟಿಗಳಾಗಿ ಮಾರುಕಟ್ಟೆ ಸೃಷ್ಟಿಸಿಕೊಂಡಿವೆ. ಆಕರ್ಷಕ ಪ್ಯಾಕಿಂಗ್, ಜೇನುತುಪ್ಪ ಲೇಪಿತ ಒಳಗಿನ ಪದಾರ್ಥದ ಸ್ವಾದ ಎರಡೂ ಶುಚಿ-ರುಚಿ. ಮೂರು ತಿಂಗಳು ಕೆಡದಂತೆ ಇಡಬಹುದಾದ ಚಾಕೊಲೇಟಿ ಒಂದಕ್ಕೆ 10 ರೂ.;ಕೆಜಿಗೆ 300ರೂ. ಸುತ್ತಮುತ್ತಲ ಜಿಲ್ಲೆಗಳಲ್ಲಷ್ಟೆ ಅಲ್ಲ ದೇಶಾದ್ಯಂತ `ಮಧುರ್ ಚಾಕೊಲೇಟಿ’ಗೆ ಗ್ರಾಹಕರು ಸೃಷ್ಟಿಯಾಗಿದ್ದಾರೆ. ಮದುವೆ ಮುಂತಾದ ಶುಭ ಕಾರ್ಯಕ್ರಮಗಳಿಗೆ ಸಗಟು ವಿತರಣೆ ಮಾಡಲಾಗುತ್ತೆ. ಅಮೇಜಾನ್, ಫ್ಲಿಪ್‍ಕಾರ್ಟ್‍ನಂತ ಇ-ಮಾರುಕಟ್ಟೆ ಮೂಲಕವೂ ಬೇಡಿಕೆ ಬರುತ್ತಿದೆ. ಪ್ರಯೋಗ ಯಶಸ್ವಿಯಾಗುತ್ತಿದ್ದಂತೆ ಸಹಕಾರಿ ತತ್ತ್ವದಲ್ಲಿ ಶುರುವಾದ ಸಂಸ್ಥೆಗೆ ನಬಾರ್ಡ್ 32 ಲಕ್ಷ ರೂ.ವೆಚ್ಚದಲ್ಲಿ ಶೀತಲೀಕರಣ ಮತ್ತು ಮಾಗಿಸುವ ಘಟಕ ಸ್ಥಾಪಿಸಿಕೊಟ್ಟಿದೆ ಮತ್ತು ಉತ್ಪಾದಕರ ಸಾಂಸ್ಥಿಕ ಅಭಿವೃದ್ಧಿ ನಿಧಿಗೆ ದೊಡ್ಡ ಮೊತ್ತವನ್ನೂ ನೀಡಿದೆ. ಕೇಂದ್ರ ಸಹಕಾರಿ ಬ್ಯಾಂಕ್ 4 ಲಕ್ಷ ರೂ. ಸಾಲ ಮಂಜೂರು ಮಾಡಿತು.ಯಾವುದೇ ಪ್ರಯತ್ನ ಯಶಸ್ಸುಗಳಿಸಿದರೆ ಬೆನ್ನು ತಟ್ಟುವವರಿಗೆ ಕೊರತೆ ಇಲ್ಲ ಎನ್ನುವುದಕ್ಕಿದು ನಿದರ್ಶನ.

ಕರ್ನಾಟಕದಲ್ಲೂ ಇತ್ತೀಚಿನ ವರ್ಷಗಳಲ್ಲಿ ಬಾಳೆ ಬೆಳೆಯುವ ಪ್ರದೇಶ ವಿಸ್ತರಿಸುತ್ತಿದೆ. ಹೆಚ್ಚು ಬೆಳೆಯುವ ಪ್ರದೇಶಗಳನ್ನು ಒಂದೊಂದು ಘಟಕವನ್ನಾಗಿಸಿ, ಅಲ್ಲೆಲ್ಲ ಥೊಟ್ಟೀಯಂ ಮಾದರಿ ರೈತ ಸಹಕಾರಿ ಸಂಸ್ಥೆಗಳನ್ನು ಕಟ್ಟಿ ಸೋಲಾರ್ ಡ್ರೈಯರ್‍ಗಳನ್ನು ಅಳವಡಿಸಿದರೆ ಹಲವು ಹಂತದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ. ಮುಖ್ಯವಾಗಿ,ಎಲ್ಲೋ ಬೆಳೆ ಹೆಚ್ಚಾದರೆ;ಬೇಡಿಕೆ ಕುಸಿದರೆ ಇಲ್ಲಿನ ಬೆಳೆಗಾರ ನಷ್ಟ ಅನುಭವಿಸುವುದು; ಬೆಳೆದದ್ದನ್ನು ಬೀದಿಗೆ ಚೆಲ್ಲುವುದು ತಪುತ್ತದೆ. ಸ್ಥಳೀಯವಾಗಿ ಒಂದಷ್ಟು ಜನರಿಗೆ ಉದ್ಯೋಗ ಸಿಗುತ್ತದೆ. ಸ್ಥಳೀಯವಾದುದೊಂದು ಆರ್ಥಿಕತೆ ನೆಲೆಗೊಳ್ಳುತ್ತದೆ. ಪಚ್ಚ ಬಾಳೆಯನ್ನು ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದ್ದಾಗ,`ಬೆಂಬಲ ಬೆಲೆ ನೀಡಬೇಕು. ಹಣ್ಣುಗಳನ್ನು ಸರಕಾರ ಖರೀದಿಸಿ ಶಾಲಾ ಮಕ್ಕಳಿಗೆ ಉಚಿತ ಹಂಚಬೇಕು’ ಎಂಬಿತ್ಯಾದಿ ಬೇಡಿಕೆಗಳು ವ್ಯಕ್ತವಾದವು. ಹಣ್ಣು ದಾಸ್ತಾನು,ಶಾಲೆಗಳಿಗೆ ನಿತ್ಯ ಪೂರೈಕೆ ಸುಲಭದ ಕೆಲಸವೇನಲ್ಲ. ಅದೇ ಹಣ್ಣನ್ನು ಚಾಕೊಲೇಟಿಯನ್ನಾಗಿಸಿದರೆ ಸರಕಾರ ಖರೀದಿಸಿ ಅಂಗನವಾಡಿ ಮತ್ತು ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆ ಪೌಷ್ಠಿಕ ಆಹಾರವಾಗಿ ನೀಡಬಹುದು. ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ರಾಜ್ಯದ ಶಿರಸಿಯ `ವನಸಿರಿ’, ಮೈಸೂರಿನ `ಇಂದ್ರಪ್ರಸ್ತ’ಮತ್ತಿತರ ಕಡೆ ಬಾಳೆ ಹಣ್ಣಿನ ಮೌಲ್ಯವರ್ಧಿಸಿ, ಮಾರುಕಟ್ಟೆಗೆ ಬಿಡುವ ಸಣ್ಣ ಪ್ರಯತ್ನಗಳು ನಡೆದಿವೆ. ಸಾವಯವ,ನೈಸರ್ಗಿಕ ರೈತರು ತಮ್ಮ ಮಿತಿಯಲ್ಲಿ ಹಲವು ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಮಾರುವ ಮೂಲಕವೇ ಕೃಷಿಯಲ್ಲಿ ಲಾಭ ಕಾಣುತ್ತಿದ್ದಾರೆ. `ಈ ನಿಟ್ಟಿನಲ್ಲಿ ತಿರುಚಿಯ ಪ್ರಯೋಗ ಅಳವಡಿಸಿಕೊಳ್ಳಲೇ ಬೇಕಾದ ಅತ್ಯಂತ ಸುಸ್ಥಿರ ಮಾದರಿ. ಸೂರ್ಯ ಶಕ್ತಿ ಹೇರಳ ಸಿಗುವುದರಿಂದ ವಿದ್ಯುತ್ ಸಮಸ್ಯೆ ಕಾಡುವುದಿಲ್ಲ. ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಯೂ ಸಾಧ್ಯವಾಗುತ್ತೆ. ಬಾಳೆ ಬೆಳೆಯುವ ಪ್ರದೇಶದಲ್ಲಿ ಇಂಥ ಘಟಕಗಳನ್ನು ಅಳವಡಿಸಿಕೊಳ್ಳಲು ಬೆಳೆಗಾರರ ಗುಂಪುಗಳನ್ನೇ ಉತ್ತೇಜಿಸುವುದು ಮತ್ತು ಅವರ ಹಿಂದೆ ನಿಂತು ಸರಕಾರಿ ಇಲಾಖೆಗಳು  ಪ್ರೋತ್ಸಾಹ ನೀಡುವುದು ಒಳಿತು ‘ಎನ್ನುತ್ತಾರೆ ಪರ್ಯಾಯ ತಂತ್ರಜ್ಞಾನ ಸಂಬಂಧ ಕೆಲಸ ಮಾಡುತ್ತಿರುವ ಮೈಸೂರಿನ ಯು.ಎನ್.ರವಿಕುಮಾರ್.

ಇಂಥ ಯಶಸ್ಸಿಗೆ ನಮ್ಮ `ನಂದಿನಿ’ಯೂ ಉತ್ತಮ ಮಾದರಿ. ರೈತ ಉತ್ಪಾದಿಸುವ ಹಾಲು ಹಲವು ಬಗೆಯಲ್ಲಿ ಮೌಲ್ಯವರ್ಧಿಸಿಕೊಂಡು ಗ್ರಾಹಕರನ್ನು ತಲುಪುತ್ತಿರುವುದರಿಂದ ಹೈನುಗಾರಿಕೆ ದೊಡ್ಡ ಮಟ್ಟದ ಬೆಲೆ ಅಸ್ಥಿರತೆಯನ್ನು ಎದುರಿಸಿಲ್ಲ. ಜಡ್ಡುಗಟ್ಟಿರುವ `ಹಾಪ್‍ಕಾಮ್ಸ್ ‘ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿ,ತೋಟಗಾರಿಕೆ ಬೆಳೆಗಳ ಮೌಲ್ಯವರ್ಧಿಸಿ ಮಾರುಕಟ್ಟೆ ಸೃಷ್ಟಿಸುವ ಜವಾಬ್ದಾರಿಯನ್ನು ಅದಕ್ಕೆ ವಹಿಸಬಾರದೇಕೆ? ಕೃಷಿ,ತೋಟಗಾರಿಕೆ,ಸಣ್ಣ ಕೈಗಾರಿಕೆ,ಸಹಕಾರ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದರೆ ರೈತರ ಬೆಳೆಯ ಗುಣ,ಪ್ರಮಾಣಕ್ಕೆ ಅನುಗುಣವಾಗಿ ಮೌಲ್ಯವರ್ಧನೆಯ ಗುಣಾತ್ಮಕ ಕಾರ್ಯಕ್ರಮ ರೂಪಿಸಬಹುದಲ್ಲವೇ? ಆದರೆ, ಅಂದಾಜಿನ ಪ್ರಕಾರ ಮಳೆ-ಬೆಳೆ ವರದಿಯನ್ನು ಸರಕಾರಕ್ಕೆ ರವಾನಿಸಿ ಕೈತೊಳೆದುಕೊಳ್ಳುವ ಇಲಾಖೆಗಳಿಗೆ ಕನಿಷ್ಠ ತಮ್ಮ ವ್ಯಾಪ್ತಿಯಲ್ಲಿ ರೈತರು ಏನು ಬೆಳೆಯುತ್ತಾರೆ,ಈ ಹಂಗಾಮಿನಲ್ಲಿ ಯಾವ ಬೆಳೆ ಹೆಚ್ಚು ಬರುವ ಸಾಧ್ಯತೆ ಇದೆ,ಅದನ್ನು ನಿರ್ವಹಿಸುವ ಬಗೆ ಹೇಗೆ ಎನ್ನುವುದರ ಖಚಿತ ಅರಿವಿರುವುದಿಲ್ಲ. ಪಚ್ಚಬಾಳೆ ಎದುರಿಸಿದ ಸ್ಥಿತಿ ಯಾವುದೇ ಬೆಳೆಗೆ ಬಂದಾಗ,`ಹೆಚ್ಚು ಬೆಲೆ ಇದೆ ಅಂತ ರೈತರು ಹೆಚ್ಚೆಚ್ಚು ಬೆಳೆದರು.ಬೇಡಿಕೆ ಕುಸಿದು,ಬೆಲೆ ಬಿದ್ದಿದೆ.ರೈತರೇ ಇದಕ್ಕೆ ಕಾರಣರು’ಎಂದು ನುಣುಚಿಕೊಳ್ಳುತ್ತಾರೆ. ದೊಡ್ಡ ಕಂಪನಿಗಳು ಉತ್ಪಾದಿಸುವ ಯಂತ್ರ,ರಸಗೊಬ್ಬರ, ಬಿತ್ತನೆ ಬೀಜ,ಕ್ರಿಮಿನಾಶಕಗಳನ್ನು ರೈತರ ಮೇಲೆ ಹೇರುವ ಅಧಿಕಾರಸ್ಥ ದಲ್ಲಾಳಿ ಗಳಂತಾಗಿರುವ ಇವರಿಗೆ ರೈತರ ಹಿತ ಕಾಪಾಡಲು ಇರಬಹುದಾದ ಪರ್ಯಾಯ ದಾರಿ; ಮಾದರಿಗಳು ಸುಲಭಕ್ಕೆ ಕಾಣಿಸುವುದಿಲ್ಲ.

ಯಾವುದೇ ಯಶಸ್ಸು ಹಲವು ಸಾಧ್ಯತೆಗಳನ್ನು ಪರಿಚಯಿಸುತ್ತದೆ. ಬಾಳೆಯ ಮೌಲ್ಯವರ್ಧನೆಯಲ್ಲಿ ಯಶಸ್ವಿಯಾಗಿರುವ ಥೊಟ್ಟೀಯಂ ರೈತ ಕಂಪನಿ ಹಲಸು, ಸಪೋಟ,ಪಪ್ಪಾಯ, ಅನಾನಸ್ ಮುಂತಾದ ಹಣ್ಣಗಳನ್ನೂ ಆಯಾ ಹಂಗಾಮಿನಲ್ಲಿ ಹಸಿರು ಮನೆ ಒಣಗುಯಂತ್ರದಲ್ಲಿ ಒಣಗಿಸಿ,ಮಾರುಕಟ್ಟೆಗೆ ಬಿಡುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಇಂಥ ಸರಳ ತಂತ್ರಜ್ಞಾನವನ್ನು ನಮ್ಮಲ್ಲಿಗೂ ಬರಮಾಡಿಕೊಂಡು; ಬಾಳೆ ಮಾತ್ರವಲ್ಲ ರೈತರು ಬೆಳೆಯುವ ಯಾವುದೇ ಉತ್ಪನ್ನಗಳ ಮೌಲ್ಯವರ್ಧಿಸಿ, ರೈತರ ಬದುಕಿನ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಸಹಕಾರಿ ವಲಯ ಸಮನ್ವಯದ ಪ್ರಯತ್ನ ಮಾಡಬೇಕು. ಸ್ವಾವಲಂಭನೆಯ ಮಾರುಕಟ್ಟೆ ಸೃಷ್ಟಿ ಸಾಧ್ಯವಾದರೆ ದಲ್ಲಾಳಿ ಪ್ರೇರಿತ ಮಾರುಕಟ್ಟೆಯಲ್ಲೂ ಬೆಲೆಯ ಸ್ಥಿರತೆ ಸಾಧ್ಯವಾಗುತ್ತದೆ. ಸರಕಾರ ರೈತರ ಉತ್ಪನ್ನಗಳನ್ನು ಬೆಂಬಲ ಬೆಲೆ ನೀಡಿ ಖರೀದಿಸುವ; ನಷ್ಟ ತುಂಬಿಕೊಡುವ ಪ್ರಮೇಯವೂ ಬರುವುದಿಲ್ಲ.