ಬಾಲ ಕಾರ್ಮಿಕ ಮಸೂದೆ ತಿದ್ದುಪಡಿ ವಿರೋಧಿಸಿ ಹರ್ಷ್ ಮಂದರ್ ಅವರ ಲೇಖನ

 Harsh Mander.jpg                                                                                                                                                   ಹರ್ಷ ಮಂದರ್

                                                                                                                                                        ಅನು: ನಾ. ದಿವಾಕರ

                                               ಮಕ್ಕಳ ದುಡಿಮೆ ಸಾಮಾಜಿಕ ಕ್ರೌರ್ಯ

    ಶಾಲೆಗೆ ಹೋಗುವ ಮಕ್ಕಳು ತಮ್ಮ ಶಾಲೆಯ ಸಮಯ ಮುಗಿದ ಅನಂತರ ಕೌಟುಂಬಿಕ ಉದ್ಯಮಗಳಲ್ಲಿ ಕೆಲಸ ಮಾಡಬಹುದು ಎಂದು ಕೇಂದ್ರ ಸಚಿವ ಸಂಪುಟ ಬಾಲ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿರುವುದು ನಮ್ಮ ಸಮಾಜದ ಮತ್ತು ಪ್ರಭುತ್ವದ ಅತ್ಯಂತ ಕ್ರೂರ ಪದ್ಧತಿಯ ಸಂಕೇತವಾಗಿದೆ. ಬಡತನದಲ್ಲಿ ಜನಿಸುವುದೇ ಮಕ್ಕಳ ಅಪರಾಧ ಆಗಿರುವ ಸಂದರ್ಭದಲ್ಲಿ ಮಕ್ಕಳ ಭವಿಷ್ಯವನ್ನು ಕಸಿದುಕೊಂಡು ಅವರ ಬಾಲ್ಯವನ್ನು ದುರ್ಬರಗೊಳಿಸುವುದು ಕ್ರೌರ್ಯವಲ್ಲದೆ ಮತ್ತೇನು? ಇಂದಿಗೂ ವಿಶ್ವದ ಬಾಲಕಾರ್ಮಿಕರ ಪೈಕಿ ಅತಿ ಹೆಚ್ಚಿನ ಸಂಖ್ಯೆ ಭಾರತದಲ್ಲಿ ಕಂಡುಬರುತ್ತದೆ. ಬಾಲ ಕಾರ್ಮಿಕ ಕಾಯ್ದೆಯಲ್ಲಿ ಅಪಾಯಕಾರಿ ವೃತ್ತಿಯಲ್ಲಿ ಬಾಲ ಕಾರ್ಮಿಕರನ್ನು ತೊಡಗಿಸುವುದನ್ನು ನಿಷೇಸಲಾಗಿತ್ತು. ಈ ಪಟ್ಟಿಗೆ ಮನೆಗೆಲಸವನ್ನೂ ಸೇರಿಸಲಾಗಿತ್ತು. 14 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಈ ನಿಯಮವೂ ಅನ್ವಯಿಸುತ್ತಿರಲಿಲ್ಲ. ತಮ್ಮ ಮಕ್ಕಳಿಗೆ ಅತ್ಯುತ್ತಮ ಜೀವನವನ್ನು ಒದಗಿಸಲು ಹೆಣಗಾಡುವ ಮಧ್ಯಮ ವರ್ಗಗಳಿಗೆ ಮತ್ತು ನಮ್ಮ ಪ್ರಭುತ್ವಕ್ಕೆ ಅವಕಾಶವಂಚಿತ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಂಡು ಕಾರ್ಖಾನೆಗಳಲ್ಲಿ, ಬೀದಿ ಬದಿಯ ಅಂಗಡಿಗಳಲ್ಲಿ, ನಮ್ಮ ಮನೆಗಳಲ್ಲಿ ದುಡಿಮೆ ಮಾಡುವುದು ಸಮಸ್ಯೆ ಎನಿಸಲೇ ಇಲ್ಲ.
ಮಕ್ಕಳ ಹಕ್ಕುಗಳಿಗಾಗಿ ದಶಕಗಳಿಂದ ನಡೆಯುತ್ತಿರುವ ಹೋರಾಟಗಳಿಗೆ ಸ್ಪಂದಿಸಿ ಯುಪಿಎ ಸರಕಾರ 1986ರ ಬಾಲಕಾರ್ಮಿಕ ನಿಷೇಧ ಮತ್ತು ನಿಬಂಧನೆಯ ಕಾಯ್ದೆಗೆ ತಿದ್ದುಪಡಿ ಮಾಡಲು ಶಿಫಾರಸು ಮಾಡಿತ್ತು. 14 ವರ್ಷದವರೆಗಿನ ಮಕ್ಕಳನ್ನು ದುಡಿಮೆಗೆ ಹಚ್ಚುವುದನ್ನು ಕಾಯ್ದೆಯಡಿ ನಿಷೇಸಲಾಗಿತ್ತು. 14ರಿಂದ 18 ವರ್ಷಗಳೊಗಿನ ಮಕ್ಕಳನ್ನು ಅಪಾಯಕಾರಿ ಉದ್ಯಮಗಳಲ್ಲಿ ದುಡಿಸಿಕೊಳ್ಳುವುದನ್ನು ಅಪರಾಧ ಎಂದು ಪರಿಗಣಿಸಲಾಗಿತ್ತು. ಅಲ್ಲಿಯವರೆಗೂ ಈ ಅನಿಷ್ಟ ಪದ್ಧತಿಗೆ ಕಾನೂನು ನಿರ್ಬಂಧ ಇರಲಿಲ್ಲ ಎನ್ನುವುದು ಸೋಜಿಗದ ಸಂಗತಿ. ಆದರೆ ಯುಪಿಎ ಸರಕಾರದ ಕೊನೆಯ ದಿನಗಳಲ್ಲಿ ಸಂಸತ್ತಿನ ಕಲಾಪ ಸರಿಯಾಗಿ ನಡೆಯದ ಕಾರಣ ಈ ತಿದ್ದುಪಡಿಗಳು ಜಾರಿಯಾಗಲಿಲ್ಲ. ಇತ್ತೀಚೆಗೆ ಕೇಂದ್ರ ಸರಕಾರ ಈ ಕಾಯ್ದೆಯ 14ರಿಂದ 18ನೆಯ ವರ್ಷದ ಮಕ್ಕಳನ್ನು ದುಡಿಮೆಗೆ ಹಚ್ಚುವುದನ್ನು ನಿಷೇಸುವ ಕಾಯ್ದೆಯನ್ನು ಜಾರಿಗೊಳಿಸಿತ್ತು. ಈ ನಿಟ್ಟಿನಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿಷೇಧವಾಗಬೇಕಿತ್ತು. ಆದರೆ ಕೇಂದ್ರ ಸರಕಾರ 14ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಮರೆತು, ಶಾಲಾ ಸಮಯದ ನಂತರ ಕೌಟುಂಬಿಕ ಉದ್ಯಮದಲ್ಲಿ ದುಡಿಯಲು ಅವಕಾಶ ನೀಡಿರುವುದು ಅಕ್ಷಮ್ಯ, ಖಂಡನಾರ್ಹ.

    ಇಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಕೌಟುಂಬಿಕ ಉದ್ಯಮದಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳ ವಿದ್ಯಾಭ್ಯಾಸ ಮತ್ತು ಬಾಲ್ಯವನ್ನು ಕಳೆದುಕೊಳ್ಳಲು ಸಿದ್ಧವಾಗಿರುವ ಸರಕಾರ ಮುಂದಿನ ಪ್ರಜೆಗಳಾದ ಮಕ್ಕಳನ್ನು ಅವರ ಪೋಷಕರ ವೃತ್ತಿಯಲ್ಲೇ ಮುಂದುವರಿಯುವಂತೆ ಏಕೆ ಬಯಸುತ್ತದೆ? ಅಕ್ಕಸಾಲಿಗನ ಮಗ ಕವಿ ಏಕಾಗಬಾರದು? ಮಗಳು ವಿಜ್ಞಾನಿ ಏಕಾಗಬಾರದು? ಮಧ್ಯಮವರ್ಗದ ಮಕ್ಕಳು ತಮ್ಮ ಶಾಲಾ ದಿನಗಳಲ್ಲೂ ಟಿವಿ, ಅಂತರಜಾಲ, ಗಣಕ ಮುಂತಾದ ಸೌಲಭ್ಯಗಳನ್ನು ಹೊಂದಿರುತ್ತಾರೆ. ಇದೇ ಸೌಲಭ್ಯಗಳು ರೈತನ ಭೂಮಿಯಲ್ಲಿ ದುಡಿಯುವ, ಅಂಗಡಿಗಳಲ್ಲಿ ದುಡಿಯುವ ಮಕ್ಕಳಿಗೆ ಏಕೆ ನೀಡಲಾಗುವುದಿಲ್ಲ? ಬಡವರ ಮಕ್ಕಳು ಶಾಲೆಯ ಅನಂತರ ದುಡಿಯಬೇಕು ನಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಬೇಕು ಎಂದು ನಾವೇಕೆ ಬಯಸುತ್ತೇವೆ ? ದುಡಿಯುವ ವರ್ಗಗಳ ಮಕ್ಕಳು ತಮ್ಮ ಪೋಷಕರ ವೃತ್ತಿಯಲ್ಲೇ ಮುಂದುವರಿಯುವಂತೆ ಏಕೆ ಬಯಸುತ್ತೇವೆ? ಇದು ನಮ್ಮ ಸಮಾಜದಲ್ಲಿ ಗಾಢವಾಗಿ ಬೇರೂರಿರುವ ಜಾತಿ ವ್ಯವಸ್ಥೆ ಮತ್ತು ಜಾತಿ ಪ್ರಜ್ಞೆಯ ಸಂಕೇತ ಎನ್ನಬಹುದು. ಬಡ ಮತ್ತು ಅವಕಾಶವಂಚಿತರ ಮಕ್ಕಳು ದೈಹಿಕ ಶ್ರಮದಲ್ಲಿ ತೊಡಗಬೇಕೇ ಹೊರತು ಬೌದ್ಧಿಕ ಶ್ರಮದಲ್ಲಿ ತೊಡಗುವಂತಿಲ್ಲ ಎಂಬ ಜಾತಿ ಪ್ರಜ್ಞೆಯ ಧೋರಣೆ ಸಮಾಜದಲ್ಲಿ ಇನ್ನೂ ಗಟ್ಟಿಯಾಗುತ್ತಿದೆ.
ಈ ಸಂದರ್ಭದಲ್ಲಿ ನಾವು ಶ್ರಮಿಕರ ಘನತೆಗಾಗಿ ಆಗ್ರಹಿಸಬೇಕಿದೆ. ಶಾಲಾ ಶಿಕ್ಷಣದಲ್ಲಿ ಮಕ್ಕಳು ದೈಹಿಕ ದುಡಿಮೆಯಲ್ಲಿ ತೊಡಗುವಂತೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಬೇಕಿದೆ. ಗಾಂಧೀಜಿ ಈ ಒಂದು ಪದ್ಧತಿಯನ್ನು ಪ್ರತಿಪಾದಿಸಿದ್ದರು. ಶ್ರೀಮಂತರ ಮಕ್ಕಳು ದೈಹಿಕ ದುಡಿಮೆಯಲ್ಲಿ ತೊಡಗಿ ನೆಲ ಗುಡಿಸುವುದು, ಶೌಚಾಲಯ ಶುಚಿ ಮಾಡುವುದು, ಇಟ್ಟಿಗೆ ಹೊರುವುದು, ಬಟ್ಟೆ ನೇಯುವುದು ಮುಂತಾದ ಕೆಲಸಗಳಲ್ಲಿ ಪಾಲ್ಗೊಳ್ಳಲಿ. ಇದು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವಾಗುತ್ತದೆ. ಹೊಸ ಆರ್ಥಿಕ ನೀತಿಯ ಫಲವಾಗಿ ಕಾರ್ಖಾನೆಯ ಕೆಲಸಗಳು ಈಗ ಮನೆಯಲ್ಲೇ ಮಾಡುವಂತಾಗಿದೆ. ಬೆಂಕಿ ಪೆಟ್ಟಿಗೆಯಂತಹ ಪುಟ್ಟ ಮನೆಗಳಲ್ಲಿ ಈ ಮಕ್ಕಳು ಅನೇಕ ರೀತಿಯ ಕೆಲಸದಲ್ಲಿ ತೊಡಗಿರುತ್ತಾರೆ. ಕೃಷಿ ಭೂಮಿಯಲ್ಲಿ ಕೆಲಸ ನಿರ್ವಹಿಸುವ ಮಕ್ಕಳು ರಾಸಾಯನಿಕ ಗೊಬ್ಬರ ಮತ್ತು ಇತರ ಔಷಧಗಳಿಂದ ಹಾನಿ ಎದುರಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಮಕ್ಕಳನ್ನು ದುಡಿಮೆಗೆ ಹಚ್ಚುವುದು ಅಕ್ಷಮ್ಯ ಅಪರಾಧ ಅಲ್ಲವೇ? ಬಾಲಕಾರ್ಮಿಕ ದುಡಿಮೆಯನ್ನು ಕಾನೂನುಬದ್ಧವಾಗಿ ಮಾಡುವ ಉದ್ದೇಶ ಎಂದರೆ ಮಕ್ಕಳ ದುಡಿಮೆಯ ಮೂಲಕ ಕಡಿಮೆ ಖರ್ಚಿನಲ್ಲಿ ವಸ್ತುಗಳನ್ನು ಉತ್ಪಾದಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಲಾಭ ಗಳಿಸುವುದೇ ಆಗಿದೆ. ಆದರೆ ಈ ಎಳೆಯ ಮಕ್ಕಳ ಶಿಥಿಲ ಭುಜಗಳ ಮೇಲೆ ಅಭಿವೃದ್ಧಿ ಪಥದ ಹಾಸುಗಲ್ಲುಗಳನ್ನು ಹೊರುವಂತೆ ಮಾಡುವುದು ಅಮಾನವೀಯ ಅಲ್ಲವೇ ?
ಸೌಜನ್ಯ : ವಾರ್ತಾಭಾರತಿ  27.5.2015