ಬಾಲಾಪರಾಧಗಳಿಗೆ ವಯಸ್ಕರ ಪ್ರತೀಕಾರದ ಶಿಕ್ಷೆ ?-ಡಾ.ಅ.ಶ್ರೀಧರ

                                                       child prisoners                         

ಹುಸಿತನ, ಕಳ್ಳತನ ಮುಂತಾದ ದುಷ್ಟ ವರ್ತನೆಗಳನ್ನು ಪ್ರದರ್ಶಿಸದ ಮಕ್ಕಳು ತೀರಾ ವಿರಳ. ಹಾಗೆಯೇ, ಅವುಗಳನ್ನು ತಂಟಾಟ, ಕುಚೇಷ್ಟೆ, ಎನ್ನುತ್ತಲೇ ಸರಿಪಡಿಸುವ ಪೋಷಕರೇ ಹೆಚ್ಚು. ಎಳೆಯತನದ ವರ್ತನೆಗಳು ಸದಾ ಒಂದೇ ರೀತಿಯಲ್ಲಿ ಇರುವುದಿಲ್ಲ. ಬಾಲ್ಯದಲ್ಲಿಯೇ ವರ್ತನೆಗಳೇನಕವು ಬದಲಾಗುವುಂತೆ, ಪ್ರೌಢಾವಸ್ಥೆಯಲ್ಲೂ ಹಳೆಯ ವರ್ತನೆಗಳು ಮಾರ್ಪಾಡಾಗಬಲ್ಲದು. ಹದಿಹರೆಯದ ದುಷ್ಟ ವರ್ತನೆಗಳು ಯೌವನದೊಂದಿಗೆ ಬದಲಾಗುವುದು ಅಪರೂಪವಲ್ಲ. ವ್ಯಕ್ತಿ ಮನೋವಿಕಾಸ ಹಂತ ಹಂತವಾಗಿ ಸಾಗುವ ಸಹಜ ಪ್ರಕ್ರಿಯೆ. ಹದಿಹರೆಯದ ಮನೋವಿಕಾಸದಲ್ಲಿ ಕಾಣಿಸಿಕೊಳ್ಳುವ ಸಾಹಸ, ಉತ್ಸಾಹ, ಹೊಣೆಗೇಡಿತನಗಳು ಇಂತಹುದರ ಒಂದು ಉದಾಹರಣೆ. ಕ್ರಮೇಣ ಅದೇ ಕಿಡಿಗೇಡಿತನ, ಚೇಷ್ಟೆ, ಸುಳ್ಳು, ಸಣ್ಣಪುಟ್ಟ ಕಳ್ಳತನದ ವರ್ತನೆಗಳನ್ನು ತ್ಯಜಿಸಿ, ಖಂಡಿಸುವಷ್ಟು ಮುನ್ನಡೆ ಮನಸ್ಸಿಗೆ ಬಂದಿರುತ್ತದೆ. ಮಕ್ಕಳೆಸೆಗುವ ಅಪರಾಧಗಳನ್ನು ಅರ್ಥಮಾಡಿಕೊಳ್ಳುವಾಗ ಅವರ ವಯಸ್ಸು ಮತ್ತು ವಿವೇಚನೆ ಪ್ರಧಾನವಾಗಿರುವುದು ಸಾಮಾನ್ಯ. ಆದರೂ ಅನೇಕ ದೇಶಗಳಲ್ಲಿರುವ ಬಾಲಾಪರಾಧದ ಕಾನೂನಿನ ನಿಲುವು ಅಪರಾಧ ತೀವ್ರತೆಗೆ ಅನುಗುಣವಾದ ಶಿಕ್ಷೆ ಎನ್ನುವ ನಿಟ್ಟಿನಲ್ಲಿದೆ. ಇದರ ಹಿಂದಿರುವ ತರ್ಕದಲ್ಲಿ ಮಕ್ಕಳ ಮನಸ್ಸಿನ-ವಯಸ್ಸಿನ ಬೆಳವಣಿಗೆಯ ಸಂಬಂಧ ಮುಖ್ಯವಲ್ಲ. ಗಂಭೀರದ ಅಪರಾಧ ಮಾಡಿದ ಮಕ್ಕಳಿಗೂ ಸಹ ವಯಸ್ಕರಿಗಾಗುವ ಶಿಕ್ಷೆಯಾಗಬೇಕೆನ್ನುವ ನೀತಿ. ಘೋರಾಪರಾಧ ಮಾಡಿದ ಮಕ್ಕಳ ಬಗ್ಗೆಯೂ ಇದೇ ಕ್ರಮ ಇರಬೇಕು-ಇರಬಾರದು ಎನ್ನುವುದೀಗ ಬಹು ಚರ್ಚೆಗೆ ಒಳಗಾಗಿರುವ ವಿಷಯ. ಇದನ್ನು ವಿರೋಧಿಸುವವರ ಪ್ರಕಾರ ಮಗುವೊಂದು ಕೊಲೆಮಾಡಿದ ತಕ್ಷಣ ವಯಸ್ಕನಾಗುವನೆ/ಳೆ? ಹೀಗೊಂದು ಹೀನ ಕೃತ್ಯವೆನ್ನು ಎಸೆಗಿದ ತಕ್ಷಣದಿಂದಲೇ ಬಾಲ್ಯಾವಸ್ಥೆಯ ಲಕ್ಷಣಗಳೆಲ್ಲವು ಮಾರ್ಪಾಡಾಗಿ ಬಿಡಲು ಸಾಧ್ಯವೆ? ವಿವೇಚನೆಗೆ ಮೀರಿದ ವರ್ತನೆಗಳು ಕೆಲವರಲ್ಲಿ ಒಂದು ವಿಧದ ಪ್ರಕೃತಿಯ ಲಕ್ಷಣವೆನ್ನುವಂತಿದ್ದು, ಮನೋವಿಕಾಸದೊಂದಿಗೆ ಬದಲಾಗುವುದು ಎನ್ನುವ ನಂಬಿಕೆ ಇದೆ. ಮನೋವಿಕಾಸದ ಹಂತಗಳು ತನ್ನಷ್ಟಕ್ಕೆ ತಾನೇ ಸರಾಗವಾಗಿ ಸಾಗುವುದಿಲ್ಲ. ಅದು ಸಕಾರಾತ್ಮಕ ಪ್ರೇರಕಗಳಿಂದ ಪಕ್ವಗೊಳ್ಳುತ್ತವೆ. ಮಕ್ಕಳ ಮನಸ್ಸಿನ ಕೂಗು, ಕೊರತೆಗಳನ್ನು ಕಡೆಗಾಣಿಸಿದಾಗ ಪ್ರತಿಭಟನೆ ಮನೋತಂತ್ರವಾಗಿ ಮೂಡುತ್ತವೆ. ಹೀಗಾಗಿಯೇ ಸಮಸ್ಯೆ ಉಲ್ಬಣಗೊಳ್ಳುವುದು. ಆದುದರಿಂದಲೇ ಘೋರ ಬಾಲಾಪರಾಧಗಳಿಗೆ ಸುಧಾರಣೆಯ ಕ್ರಮಗಳಿಗೇ ಮಹತ್ವ ನೀಡುವ ಅಗತ್ಯವಿದೆ. ಈ ವಿಷಯಗಳ ಬಗ್ಗೆ ಮನೋವಿಜ್ಞಾನದ ಸಂಶೋಧನೆ, ಅಧ್ಯಯನಗಳು ಮಕ್ಕಳ ಸಕಾರಾತ್ಮಕ ಮನೋವಿಕಾಸವನ್ನು ವಿವರಿಸುವಷ್ಟು ನಿಖರವಾಗಿ ನಕಾರಾತ್ಮಕ ಮನಸ್ಸಿನ ಬಗ್ಗೆ ಇಲ್ಲ.

ಮಗುವಿನ ಹುಟ್ಟಿನೊಂದಿಗೆ ಸಾಮಾಜೀಕರಣ ಮತ್ತು ಕಲಿಕೆಯ ಪ್ರಭಾವವೂ ಇರುತ್ತದೆ. ಬಹುಶಃ ಮಿದುಳಿನ ಏಳಿಗೆಯನ್ನೂ ಮೀರಿಸುವ ಬಲವೂ ಇದರಲ್ಲಿರುತ್ತದೆ. ಇದನ್ನು ಹೊರತರುವಂತೆ ಮಾಡಬಲ್ಲ ಪೋಷಕರು, ಹಿತೈಷಿಗಳು ಇರುತ್ತಾರೆ ಎನ್ನುವುದರ ಅತ್ಯುತ್ತಮ ನಿದರ್ಶನ ಅಮೆರಿಕದ ಹೆಸರುವಾಸಿ ಪ್ರಾಣಿ ವರ್ತನಾ ಶಾಸ್ತ್ರಜ್ಞೆ ಟೆಂಪಲ್ ಗ್ಯ್ರಾಂಡಿನ್. ಆಕೆಯ ಬಾಲ್ಯದುದ್ದವೂ ಮನೋವಿಕಾಸದ ಸಮಸ್ಯೆಗಳಿಂದಲೇ ತುಂಬಿತ್ತು. ತೀರಾ ಹದಗೆಟ್ಟಿದ್ದ ಹಲವಾರು ವರ್ತನೆಗಳು; ಭಾಷೆ, ಭಾವಗಳ ತೀವ್ರ ತೊಂದರೆ. ಜೊತೆಗೆ ಪ್ರೀತಿ, ಆಸರೆ ಕೊಡಬೇಕಿದ್ದ ತಂದೆಯೂ ದೂರವಾದದ್ದು. ಈ ಸ್ಥಿತಿಯಲ್ಲಿ ತಾಯಿಗೆ ಸಿಕ್ಕ ವೈದ್ಯಕೀಯ ನೆರವು ಮತ್ತು ಸಲಹೆ ಆಘಾತ ಉಂಟುಮಾಡುವಂತಹದ್ದಾಗಿತ್ತು. ಮಗುವಿನಲ್ಲಿ ಬದಲಾಗದ ನರಮಂಡಲದ ದೌರ್ಬಲ್ಯವಿರುವುದರಿಂದ ಸಾಮಾನ್ಯ ರೀತಿಯ ಮಾನಸಿಕ ಬದುಕು ಸಾಧ್ಯವೇ ಇಲ್ಲವೆಂದಿದ್ದರೂ ವೈದ್ಯತಜ್ಞರು. ಆದರೂ ತಾಯಿಯು ಛಲ ಬಿಡಲಿಲ್ಲ.  ಆಕೆ ಸರಿಪಡಿಸುವ ಪ್ರಯತ್ನಗಳನ್ನು ಸತತವಾಗಿ ಮಾಡಿದರ ಪರಿಣಾಮದಿಂದಾಗಿ ಮಗಳ ಮಾನಸಿಕ ಶಕ್ತಿಯಲ್ಲಿ, ವೈದ್ಯಜಗತ್ತು ಬೆರಗಾಗುವಷ್ಟು, ಸುಧಾರಣೆ ಕಾಣಿಸಿಕೊಂಡಿತು. ಮನೋವಿಕಾಸದ ಪರಿ ಸರಾಗವಾಗಿ ಸಾಗದಿದ್ದರೂ ಪ್ರಾಣಿಗಳ ಸೂಕ್ಷ್ಮ ಭಾವಗಳನ್ನು ಅರ್ಥಮಾಡಿಕೊಳ್ಳುವ ಟೆಂಪಲ್ ಗ್ರಾಂಡಿನ್ ಸಾಮರ್ಥ್ಯ ಅತ್ಯದ್ಭುತವೆನ್ನುವಂತಹದ್ದು. ವಧ್ಯ ಪ್ರಾಣಿಗಳ ನೋವು, ತಲ್ಲಣಗಳನ್ನು ಕಡಿಮೆ ಮಾಡುವಂತಹ ತಂತ್ರ ಮತ್ತು ಸಾಧನಗಳನ್ನು ಆಕೆ ರೂಪಿಸಿದಳು. ಇದುವರೆವಿಗೂ ಆಕೆ ಪಡೆದಿರುವ ಮನ್ನಣೆ, ಪದವಿಗಳು ಅಪಾರ. ಪೋಷಕರ ವಾತ್ಯಲ್ಯ, ಕಾಳಜಿ, ಪ್ರೋತ್ಸಾಹಗಳು ಮಕ್ಕಳಲ್ಲಿ ಹೊಸ ಚೈತನ್ಯವನ್ನು ಮೂಡಿಸಬಲ್ಲದೆನ್ನುವುದಲ್ಲಿ ಸ್ಪಷ್ಟ. ವ್ಯಕ್ತಿ ಸಾಮರ್ಥ್ಯ ಮತ್ತು ವರ್ತನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮನೋಪಕ್ವತೆ ಮತ್ತು ವಯಸ್ಸಿನ ಮಹತ್ವ ತಿಳಿದುಕೊಳ್ಳುವುದು ಅತ್ಯಗತ್ಯ. ಮಕ್ಕಳ ವರ್ತನೆಗಳು ಕಲಿಕೆಯ ಮೂಲಕ ಪಕ್ವಗೊಳ್ಳುವ ರೀತಿಯ ಉತ್ತಮ ಉದಾಹರಣೆಯಿದು.

ಈ ಮಾದರಿಯ ಪ್ರಕರಣಗಳು ತೀರಾ ಅಪರೂಪವೆನ್ನುವುದು ನಿಜವೇ ಆಗಿದ್ದರೂ ಮಹಾಪರಾಧಗಳನ್ನು ಮಾಡಿ ಶಿಕ್ಷೆಯ ಕ್ರೇಂದ್ರಗಳಲ್ಲಿದ್ದರೂ ಉತ್ತಮ ನಾಗರೀಕರಾಗದಿರುವ ಪ್ರಕರಣಗಳಿವೆ ಎನ್ನುವುದಕ್ಕೆ ಇಂಗ್ಲೆಂಡಿನ ಗ್ಯ್ರಾಹಂ ಯಂಗ್ ಉತ್ತಮ ಉದಾಹರಣೆ. ಈತ ಹುಟ್ಟಿದ್ದು ೧೯೪೭ ರಲ್ಲಿ, ಮಗುವಿಗೆ ಜನ್ಮ ಕೊಟ್ಟ ಮೂರೇ ತಿಂಗಳುಗಳಲ್ಲಿ ಅನಾರೋಗ್ಯದಿಂದ ತಾಯಿ ತೀರಿಕೊಂಡಿದ್ದಳು. ಸಾಕುತಾಯಿಯೊಂದಿಗೆ ಸಮಸ್ಯೆಗಳಿಂದ ತುಂಬಿದ್ದ ಬಾಲ್ಯ ಸರಿಯಿತು. ಆದರೂ ರಸಾಯನಶಾಸ್ತ್ರದಲ್ಲಿ ಎಲ್ಲಿಲ್ಲದ ಆಸಕ್ತಿ. ಅತಿ ಸಣ್ಣವಯಸ್ಸಿನಲ್ಲಿಯೇ ರಸಾಯನಿಕ ವಿಷ ಪದಾರ್ಥಗಳನ್ನು ತಯಾರಿಸುವುದರಲ್ಲಿ ನಿಸ್ಸೀಮನಾಗಿಬಿಟ್ಟಿದ್ದ. ಹೊರಗಿನವರಿಗಷ್ಟೇ ಅಲ್ಲದೆ ಮನೆಮಂದಿಗೂ ವಿಷವುಣಿಸಿ ಸಂತೋಷಪಟ್ಟಿದ್ದ. ಅವನ ದುಷ್ಟ ಪ್ರಯೋಗಕ್ಕೆ ಬಲಿಯಾಗಿ ಸತ್ತವರಲ್ಲಿ ಮಲತಾಯಿಯ ತಾಯಿಯೂ ಒಬ್ಬರು. ಈ ಕೃತ್ಯಗಳಿಗಾಗಿ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಮಹಾಭದ್ರತೆ ಇರುವ ಆಸ್ಪತ್ರೆಯಲ್ಲಿ ಇರಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಅಲ್ಲಿಯೂ ಸಹ ಅವನ ವಿಕೃತ ಕುತೂಹಲವನ್ನು ಬಿಡಲಿಲ್ಲ.  ವಿಷಪದಾರ್ಥಗಳ ಬಗ್ಗೆ ಅವನಲ್ಲಿದ್ದ ವಿಶೇಷ ಜ್ಞಾನ, ಆಸಕ್ತಿಯು ಅಧಿಕಾರಿಗಳನ್ನೇ ಮಂತ್ರಮುಗ್ಧರನ್ನಾಗಿಸಿತ್ತು. ಆದುದರಿಂದ ನ್ಯಾಯಾಲಯ ಸೂಚಿಸಿದ್ದ ಹದಿನೈದು ವರ್ಷಗಳ ಶಿಕ್ಷೆಯನ್ನು, ಅವನ ಸನ್ನಡತೆಗಾಗಿ, ಎಂಟು ವರ್ಷಗಳಿಗೆ ಮಿತಿಗೊಳಿಸಿ ಬಿಡುಗಡೆ ಮಾಡಿದರು. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಹಲವಾರು ಜನರಿಗೆ ಮತ್ತೆ ವಿಷವುಣಿಸಿದಾಗ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ನಲವತ್ತೆರಡನೆಯ ವಯಸ್ಸಿನಲ್ಲಿ ಸೆರೆಮನೆಯಲ್ಲಿಯೇ ಗ್ಯ್ರಾಹಂ ಅಸುನೀಗಿದ.

ಮಕ್ಕಳ ವಿಷಯದಲ್ಲಿ ಅಪರಾಧಕ್ಕೆ ತಕ್ಕ ಪ್ರತಿ ಶಿಕ್ಷೆಯ ಕ್ರಮವನ್ನು ಬಹಳ ಎಚ್ಚರಿಕೆಯಿಂದ ಸ್ವೀಕರಿಸಬೇಕಾಗುತ್ತದೆ. ಮಕ್ಕಳು ಎಸೆಗುವ ಅಪರಾಧಗಳು ಯಾವುದೋ ಅತೃಪ್ತಿ, ಅದ್ಯಾವುದೋ ಹಿಂಸೆ ಅಥವಾ ಯಾತನೆ ಮೂಡಿಸುವ ಕ್ರಿಯೆಗೆ ಪ್ರತಿಕ್ರಿಯೆಯಾಗಿರಲೂಬಹುದು. ಆದುದರಿಂದಲೇ ಬಾಲಾಪರಾಧಿಗಳ ಅಗೋಚರ ಮಾನಸಿಕ ಬಲಗಳತ್ತವೂ ಗಮನ ಹರಿಸುವುದು ಬಹಳ ಮುಖ್ಯ. ಸೂಕ್ತ ಕಲಿಕೆಯ ವ್ಯವಸ್ಥೆ , ಮಾರ್ಗದರ್ಶನಗಳಿದ್ದಾಗ ಸದಾ ಕಾಡಿಸುವ ಬಾಲ್ಯದ ಸಮಸ್ಯೆಗಳಿಂದ ಹೊರಬರುವಂತೆ ಮಾಡಬಹುದು. ಹುಟ್ಟಿನೊಂದಿಗೆ ಯಾರೂ ಬಾಲಾಪರಾಧಿಗಳಾಗುವುದಿಲ್ಲ, ಮನೋವಿಕಾಸಕ್ಕೆ ಅಡೆತಡೆಯುಂಟು ಮಾಡುವ ಸಂಗತಿಗಳು ವ್ಯಕ್ತಿ ವಿರೂಪಕ್ಕೂ ಕಾರಣ. ಮನೋವಿಕಾಸವನ್ನು ಸಹಜವಾಗಿ ಮುಂದುವರೆಯುವ ಕ್ರಿಯೆ ಎನ್ನಬಹುದಾದರೂ ಅದು ಸರಾಗ ಮತ್ತು ಸಮರ್ಪಕವಾಗಿ ಮುಂದುವರೆಯಲು ಹಲವಾರು ಹೊರಗಿನ ಪ್ರೇರಣೆ-ಪ್ರೋತ್ಸಾಹಗಳಿರಬೇಕು. ಅತ್ಯಗತ್ಯವಾಗಿ ಕುಟುಂಬ, ಶಾಲೆ ಯಾವಾಗಲೂ ಉತ್ತಮವಾಗಿ ಇರಲೇಬೇಕು. ಶಾಲಾ ಶಿಕ್ಷಣದ ಬಗ್ಗೆ ಬಗ್ಗೆ ಸರ್ಕಾರಗಳ ನಿರ್ಲಕ್ಷತೆ ಮತ್ತು ರಾಜಕಾರಣಿಗಳ ಅಜ್ಞಾನವೂ ಮಕ್ಕಳ ಘೋರ ಅಪರಾಧಗಳ ಪರೋಕ್ಷ ಕಾರಣವಾಗಿರಬಲ್ಲದು.

ಮಕ್ಕಳ ಮಾಡುವ ಕೆಲ ಹೀನ ತಪ್ಪುಗಳು ಸಮಾಜವನ್ನು ತಲ್ಲಣಕ್ಕೆ ಒಳಪಡಿಸುತ್ತಿರುವುದು ಆತಂಕದ ವಿಷಯ. ಹದಿಹರೆಯದ ಹಂತದಲ್ಲಿರುವ ಗಂಡು ಮಕ್ಕಳೆಸಗುವ ಲೈಂಗಿಕ ಅತ್ಯಾಚಾರ, ಕ್ರೌರ್ಯವು ಉದಾಸೀನ ಮಾಡುವಂತಹದ್ದಲ್ಲ. ಪಿಸ್ತೂಲು, ಬಂದೂಕಗಳಿಂದ ಅಮಾಯಕರನ್ನು ಕೊಲ್ಲುವುದು, ದುಷ್ಟ ವಯಸ್ಕರೊಂದಿಗೆ ಸೇರಿ ಸಮಾಜಘಾತುಕ ಕೃತ್ಯಗಳತ್ತ ಮನಸ್ಸು ಹರಿಯುವುದಕ್ಕೆ ನಿಜವಾದ ಕಾರಣಗಳನ್ನು ಕಂಡುಕೊಳ್ಳಲೇ ಬೇಕಾಗಿದೆ. ಶಿಕ್ಷೆಯ ಮೂಲಕ ಮನಸ್ಸು ಪರಿವರ್ತನೆಯಾಗುವುದರ ಬಗ್ಗೆ ಇರುವಂತಹ ಸಂದೇಹಗಳು ಊಹೆಗಳೇನು ಅಲ್ಲ. ಹೀಗಾಗಿ ಮನಃಪರಿವರ್ತನೆಯ ಹೊಸ ಮಾದರಿಗಳು ಕಂಡುಕೊಳ್ಳುವ ಅಗತ್ಯವಿದೆ. ಮಕ್ಕಳನ್ನು “ಸರಿಯಾಗಿ” ಸಾಕಿ-ಸಲಹುವ ಹೊಣೆಗಾರಿಕೆ ಹೆತ್ತವರಿಗೆ ಬಿಟ್ಟಿದ್ದು ಎನ್ನುವ ಅನಿಸಿಕೆ ಜನತೆಯಲ್ಲಿದೆ. ಆದರೆ, ಮಕ್ಕಳ ಮನೋವಿಕಾಸ ಹದವಾಗಿ ಮುಂದುವರೆಯುವುಂತೆ ಮಾಡಲು ಸಾರ್ವಜನಿಕರು ಮತ್ತು ಸರ್ಕಾರದ ಜವಾಬ್ದಾರಿಯೂ ಇರಬೇಕಾಗುತ್ತದೆ. ಈ ಹಿನ್ನೆಲೆಯಿಂದ ಗಮನಿಸಿದಾಗ ಮಕ್ಕಳ ಶೈಕ್ಷಣಿಕ ವಿಕಾಸ, ನೈತಿಕ ವಿಕಾಸಗಳೆರಡನ್ನು ಕಡೆಗಾಣಿಸುತ್ತಿರುವುದು ಎದ್ದು ಕಾಣಿಸುವ ಸಂಗತಿ. ರಾಜ್ಯಭಾರ ನಡೆಸುವ ಜನಪ್ರತಿನಿಧಿಗಳ ನಿರ್ಲಕ್ಷ ಮತ್ತು ಅಜ್ಞಾನ ಅತಿಯಾಗಿಯೇ ಇದೆ. ಮಕ್ಕಳೆಸೆಗುವ ಕ್ರೌರ್ಯಕ್ಕೆ ಅಮಾಯಕರು ಬಲಿಯಾಗುವುದು ಸತ್ಯವೇ ಆಗಿದ್ದರೂ ವಯಸ್ಕರಿಂದ ಪ್ರತೀಕಾರ ಸರಿಯಲ್ಲ.