ಬಾಬರಿ ಮಸೀದಿ ತನಗೆ ತಾನೇ ಬಿತ್ತೆ? -ದೇವನೂರ ಮಹಾದೇವ

[ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ 2.10.2020ರಂದು ಮೈಸೂರಿನಲ್ಲಿ ಆಯೋಜಿಸಿದ್ದ ವೆಬಿನಾರ್‍ಗಳ ಉದ್ಘಾಟನಾ ಸಭೆಯಲ್ಲಿ ಮಹಾದೇವ ಅವರು ಆಡಿದ ಮಾತುಗಳು ವಿವಿಧ ಪತ್ರಿಕೆಗಳಲ್ಲಿ]

ಬಾಬರಿ ಮಸೀದಿ ಪ್ರಕರಣದ ಎಲ್ಲ ಆರೋಪಿಗಳನ್ನು ನ್ಯಾಯಾಲಯ ಖುಲಾಸೆ ಮಾಡಿದೆ. ಹಾಗಾದರೆ ಮಸೀದಿ ತನ್ನಷ್ಟಕ್ಕೇ ತಾನೇ ಕುಸಿಯಿತೇ? ಸತ್ಯ ಎಲ್ಲಿದೆ? ಎಲ್.ಕೆ.ಅಡ್ವಾಣಿ ಮತ್ತು ಮುರಳೀ ಮನೋಹರ ಜೋಷಿ ಅವರು ತೀರ್ಪಿನಿಂದ ತುಂಬಾ ಖುಷಿಯಾಯಿತು ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಇಬ್ಬರ ಬೆನ್ನುಮೂಳೆಯನ್ನು ಮುರಿದು ಮೋದಿಯವರು ಮೂಲೆಗೆ ಎಸೆದಿದ್ದರು. ಪಾಪ ಅವರ ಕೊನೆಗಾಲದಲ್ಲಿ ನಮ್ಮ ನ್ಯಾಯಾಲಯ ಅವರಿಗೆ ಖುಷಿಕೊಟ್ಟಿದೆ. ಆದರೂ ನ್ಯಾಯ ಎಲ್ಲಿದೆ ಎಂಬ ಪ್ರಶ್ನೆಯಾಗೇ ಉಳಿಯಿತು.
ಉತ್ತರಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ನಡೆದ ಮನೀಷಾ ಎಂಬ ಬಾಲೆಯ ಅತ್ಯಾಚಾರ ಮತ್ತು ಸಾವಿನ ಘಟನೆಯಿಂದ ತುಂಬಾ ದುಃಖ ಆಗುತ್ತೆ. ಕೋಪ ಬರುತ್ತೆ. ಹತಾಶೇನೂ ಆಗುತ್ತೆ. ಮೃತದೇಹವನ್ನು ಮಧ್ಯರಾತ್ರಿ ಸುಡುವುದು ಬೇಡ ಎಂದು ಯುವತಿಯ ತಾಯಿ ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸರು ಧಿಕ್ಕರಿಸಿ ಶವಸಂಸ್ಕಾರ ಮಾಡಿದ್ದಾರೆ. ಮುಂದೆ ಶವಪರೀಕ್ಷೆಯ ಅನಿವಾರ್ಯತೆ ಎದುರಾದರೆ ಯಾವ ಸಾಕ್ಷ್ಯಗಳೂ ಸಿಗಬಾರದು ಎಂದು ಸುಟ್ಟುಹಾಕಿದ್ದಾರೆ. ಇಡೀ ಮಾನವ ಕುಲಕ್ಕೇ ಅವಮಾನ ಮಾಡಿದ್ದಾರೆ. ಆ ಹುಡುಗಿಯೇ ಸಾವಿನ ಮೊದಲು ‘ಅತ್ಯಾಚಾರ ಆಗಿದೆ’ ಎಂದೂ ಅತ್ಯಾಚಾರಿಗಳ ಹೆಸರನ್ನೂ ಹೇಳಿದ್ದಳು. ಆದರೂ… ಅಲ್ಲಿನ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆ ಕಠೋರವಾಗಿ ವರ್ತಿಸಿ, ಕಾನೂನು ಸುವ್ಯವಸ್ಥೆಯನ್ನು ಧ್ವಂಸ ಮಾಡಿಬಿಟ್ಟಿತು. ಇದನ್ನೆಲ್ಲಾ ನೋಡಿದರೆ ದುಃಖವಾಗುತ್ತದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ?