ಬರದ ಬದುಕಿಗೆ ಸೆಡ್ಡು ಹೊಡೆದ ಜಾರ್ಖಂಡ್ ರೈತರು-ಭೂಮಿಗೀತ ಬಳಗದ ಲೇಖಕರು

                                    

ಸತತ ಮೂರು ವರ್ಷಗಳ ಕಾಲ ಭಾರತವನ್ನು ಕಾಡಿದ ಬರಗಾಲಕ್ಕೆ ಜಾರ್ಖಾಂಡ್ ರಾಜ್ಯವೂ ಸಹ ಸಿಲುಕಿದೆ., ಅಲ್ಲಿನ ಇಪ್ಪತ್ತಾಲ್ಕು ಜಿಲ್ಲೆಗಳನ್ನು ಬರಪೀಢಿತ ಪ್ರದೇಶಗಳೆಂದು  ಸರ್ಕಾರ ಅಧಿಕೃತವಾಗಿ ಘೋಷಿಸಿದೆ ಆದರೆ, ಗುಲ್ಮಾ ಜಿಲ್ಲೆಯ ಸಾಟೊ ಎಂಬ ಗ್ರಾಮ ಮತ್ತು ಅಲ್ಲಿನ ರೈತರು ಮಾತ್ರ ಕಳೆದ ಮುವತ್ತು ವರ್ಷಗಳಿಂದ ವರ್ಷಕ್ಕೆ ಎರಡು ಬಾರಿ ಭತ್ತ ಮತ್ತು ಜೋಳ, ಗೋಧಿ ಬೆಳೆದುಕೊಂಡು, ಅರಣ್ಯದ ಮಧ್ಯೆ ಯಾವುದೇ ಬರಗಾಲ ಅಥವಾ ನೀರಿನ ಕೊರತೆಯನ್ನು ಕಾಣದೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಇದಕ್ಕೆ ಕಾರಣವಾದದ್ದು, ತನ್ನೂರಿನ ಗುಡ್ಡದ ಇಳಿಜಾರಿನಿಂದ .ಸದಾ ಹರಿದು ನದಿ ಸೇರುತ್ತಿದ್ದ ನೀರಿಗೆ ತಾವೇ ಸ್ವತಂ ಸಣ್ಣ ಅಣೆಕಟ್ಟು.  ಜಲಾಶಯದಲ್ಲಿ ಸಂಗ್ರಹವಾದ ನೀರನ್ನು  ವರ್ಷ ಪೂರ್ತಿ ಬೇಸಾಯ ಮತ್ತು ಗೃಹ ಕೃತ್ಯಕ್ಕೆ ಬಳಸಿಕೊಳ್ಳುತ್ತಿರುವ ಈ ಅನಕ್ಷರಸ್ತ ಇತರೆ ಹಳ್ಳಿಯ ಬುಡಕಟ್ಟು ಜನಾಂಗದ ರೈತರಿಗೆ ಮಾದರಿಯಾಗಿದ್ದಾರೆ.
ಈ ಬುಡಕಟ್ಟು ರೈತರ ಯಶೋಗಾಥೆಯ ಹಿಂದೆ ಅರ್ಧ ಶತಮಾನದ ಕನಸುಗಳು ಮತ್ತು ಹೋರಾಟದ ಇತಿಹಾಸವಿದೆ.. ಅರಣ್ಯದ ಮಧ್ಯ ಇರುವ ಸಾಟೊ ಎನ್ನುವ ಈ ಪುಟ್ಟ ಗ್ರಾಮದಲ್ಲಿ ಮಳೆ ಬಿದ್ದಾಗ ಮಾತ್ರ ಕೇವಲ ಶೇಕಡ 25 ರಷ್ಟು ಭೂಮಿಯಲ್ಲಿ ಬೇಸಾಯ ಮಾಡಿ ಸಿರಿಧಾನ್ಯಗಳನ್ನು ಮಾತ್ರ ಇಲ್ಲಿನ ರೈತರು ಬೆಳೆಯುತ್ತಿದ್ದರು. ಇವುಗಳೇ ಅವರ ಬದುಕಿಗೆ ಆಧಾರವಾಗಿದ್ದವು.  ತಮ್ಮೂರಿನ ಹಿಂದೆ ಇರುವ ಗುಡ್ಡವೊಂದರಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನೀರಿನ ಜರಿಯೊಂದು ಸುಮ್ಮನೆ ಹರಿದು ಸಮೀಪದ ಕೊಯಲ್ ಎಂಬ ನದಿಯನ್ನು ಸೇರುತ್ತಿತ್ತು. ಈ ನೀರನ್ನು ಎರಡು ಕಿಲೊಮೀಟರ್ ದೂರದ ತಮ್ಮ ಹಳ್ಳಿಯತ್ತ ತಿರುಗಿಸಿ, ಪುಟ್ಟ ಜಲಾಶಯವನ್ನು ನಿರ್ಮಿಸುವ ಕನಸು ಹೊತ್ತ ಊರಿನ ಹಿರಿಯ ಜೀವಗಳು ಕಲ್ಲು ಮತ್ತು ಮಣ್ಣಿನ ಗೋಡೆಯೊಂದನ್ನು ನಿರ್ಮಿಸಿ, ನೀರು ಹಿಡಿದಿಡುವಲ್ಲಿ ವಿಫಲರಾಗಿದ್ದರು.
ತಮ್ಮ ಹಿರಿಯರ ಕನಸನ್ನು ನೆನಸು ಮಾಡುವ ದೃಷ್ಟಿಯಿಂದ 1984 ರಲ್ಲಿ ಊರಿನ ಯುವಕರು ವಿಕಾಸ್ ಭಾರತಿ ಎಂಬ ಸ್ವಯಂ ಸೇವಾ ಸಂಘಟನೆಯ ತಾಂತ್ರಿಕ ನೆರವು ಕೋರಿದರು. ಸಂಘಟನೆಯ ಮುಖ್ಯಸ್ಥ ಅಶೋಕ್ ಭಾಗತ್ ನೇತೃತ್ವದಲ್ಲಿ  ಒಂದು ಸಮಿತಿಯನ್ನು ರಚಿಸಿಕೊಂಡು  ಸಣ್ಣ ಅಣೆಕಟ್ಟು ನಿರ್ಮಿಸುವಂತೆ ಸರ್ಕಾರವನ್ನು ಕೋರಿದಾಗ, ಅಂದಿನ ಬಿಹಾರ ಸರ್ಕಾರ ಕೈ ಚೆಲ್ಲಿತು. ನೀರಾವರಿ ಯೋಜನೆಗಳ ಅಣೆಕಟ್ಟುಗಳೆಂದರೆ, ಸಾವಿರಾರು ಅಥವಾ ಲಕ್ಷ ಕೋಟಿಗಳ ಯೋಜನೆ ಎಂದು ನಂಬಿರುವ ಅಧಿಕಾರಿಶಾಹಿ ಜಗತ್ತಿಗೆ “ಸಣ್ಣದು ಸುಂದರ” ಎಂಬ ಪರಿಕಲ್ಪನೆಯನ್ನು ಮನದಟ್ಟು ಮಾಡಿಕೊಡುವಲ್ಲಿ ರೈತರು ವಿಫಲರಾಗಿದ್ದರು.  ನಿರಾಶರಾಗಿ ಊರಿಗೆ ಬಂದ ರೈತರು ಕೈ ಕಟ್ಟಿ ಕೂರುವ ಬದಲು ಪ್ರತಿ ಮನೆಗೆ ನೂರು ರೂಪಾಯಿ ದೇಣಿಗೆ                                                                                                                          

ಮತ್ತು ಒಂದು ಕುಟುಂಬದಿಂದ ಒಬ್ಬವ್ಯಕ್ತಿ ಅಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಬೇಕು ಎಂಬ ಕರಾರಿನ ಜೊತೆ ಛಲದೊಂದಿಗೆ ಅಣೆಕಟ್ಟು ಕಾಮಗಾರಿ ಕೆಲಸ ಆರಂಭಿಸಿದರು. ಮುವತ್ತು ವರ್ಷಗಳ ಹಿಂದೆ (1984) ಬುಡಕಟ್ಟು ಜನಾಂಗದ ಕುಟುಂಬಗಳಿಗೆ ನೂರು ರೂಪಾಯಿಯೆಂದರೆ, ಅದು ಹತ್ತು ಸಾವಿರ ರೂಪಾಯಿಗಳಿಗೆ ಸಮಾನವಾಗಿತ್ತು. ಸ್ಥಳಿಯವಾಗಿ ದೊರೆಯುತ್ತಿದ್ದ ಮರಳು ಮತ್ತು ಕಲ್ಲುಗಳಿಗೆ ಹಣ ವಿನಿಯೋಗ ಮಾಡುವ ಅಗತ್ಯವಿರಲಿಲ್ಲ. ಕೂಲಿ ವೇತನ ಪಾವತಿಸುವಂತಿರಲಿಲ್ಲ. ಕಬ್ಬಿಣ ಬಳಸದೆ, ಸೀಮೆಂಟಿನಿಂದ ಕಲ್ಲು ಗೋಡಯನ್ನು ನಿರ್ಮಿಸಬೇಕಾದ್ದರಿಂದ ಸಿಮೇಂಟಿಗಾಗಿ ಅವರು ಹಣ ಸಂಗ್ರಹಿಸುವ ಅಗತ್ಯವಿತ್ತು. ಸಾಟ ಗ್ರಾಮ ಬಳಿ ವಿಶಾಲವಾಗಿದ್ದ ಹಳ್ಳವೊಂದಕ್ಕೆ 3 ದಪ್ಪ ಹಾಗೂ 14 ಎತ್ತರದ ಗೋಡೆ ನಿರ್ಮಾಣಕ್ಕೆ ಕೈ ಹಾಕಿದರು. ಈ ಊರಿನ ರೈತರ ಭಗೀರಥ ಪ್ರಯತ್ನವನ್ನು ನೊಡಿದ ಗುಲ್ಮಾ ಜಿಲ್ಲೆಯ ಜಿಲ್ಲಾದಿಕಾರಿ ಕೊನೆಗೆ 95 ಸಾವಿರ ರೂಪಾಯಿ ಅನುದಾನವನ್ನು ಘೋಷಿಸಿದನು.

ಸರ್ಕಾರದಿಂದ ದೊರೆತ ಹಣದಿಂದ ಉತ್ತೇಜಿತರಾದ ಊರಿನ ಗ್ರಾಮಸ್ಥರು ಇಡೀ ಹಳ್ಳವನ್ನು ಜಲಾಶಯವಾಗಿ ಪರಿವರ್ತಿಸಿ, ಅದರ ಹೂಳನ್ನು ಹೊರ ತೆಗೆದು, ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಿದರು.  ಅವರಿಗೆ  ನಿರ್ಮಾಣ ಕಾರ್ಯದಲ್ಲಿ ದಪ್ಪ ದಪ್ಪ ಕಲ್ಲುಗಳನ್ನು ಒಡೆದು, ಸೈಜುಗಲ್ಲುಗಳಾಗಿ ಪರಿವರ್ತಿಸುವುದು ಸವಲಾಗಿತ್ತು. ಯಾವುದೇ ಯಂತ್ರೋಪಕರಣಗಳನ್ನು ಬಳಸದೆ, ತಮ್ಮ ರಟ್ಟೆ ಮತ್ತು ಛಲ ಇವುಗಳ ಮೂಲಕ ಸತತ ಮೂರು ವರ್ಷಗಳ ಶ್ರಮಿಸಿ 1987 ರ ಮಳೆಗಾಲಕ್ಕೆ ಮುನ್ನ ಅಣೆಕಟ್ಟು ನಿರ್ಮಾಣ ಮುಕ್ತಾಯಗೊಳಿಸಿದರು.. ಮಳೆಗಾಲದಲ್ಲಿ ನಂತರ ಬೆಟ್ಟದ ಜರಿಯಿಂದ ನಿರಂತರವಾಗಿ ಹರಿಯುತ್ತಿದ್ದ ನೀರನ್ನು ಎರಡು ಕಿಲೊಮಿಟರ್ ದೂರದಿಂದ ಕಾಲುವೆ ಮೂಲಕ ಜಲಾಶಯಕ್ಕೆ ಹರಿಯುವಂತೆ ಮಾಡಿದರು. 1987 ರ ಡಿಸಂಬರ್ 8 ರಂದು ತಾವು ನಿರ್ಮಿಸಿದ ಜಲಾಶಯ ತುಂಬಿದಾಗ, ಅಲ್ಲಿನ ರೈತರ ಸಂತೋಷ ಮುಗಿಲು ಮುಟ್ಟಿತ್ತು. ಕುಡಿಯುವ ನೀರಿನ ಕೊರತೆಯಿಂದಾಗಿ ಎಂದೂ ಜಾನುವಾರಗಳನ್ನು ಸಾಕದ ರೈತರು ಜಾನುವಾರುಗಳನ್ನು ಸಾಕತೊಡಗಿದರು. ಅವುಗಳ ಮೂಲಕ ಪಾಳು ಬಿದ್ದಿದ್ದ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದರು. ಕೇವಲ ಮಳೆಗಾಲದಲ್ಲಿ ಒಂದು ಅಥವಾ ಎರಡು ಕ್ವಿಂಟಾಲ್ ಭತ್ತ ಬೆಳೆಯುತ್ತಿದ್ದ ರೈತರು ವರ್ಷಕ್ಕೆ ಎರಡು ಬಾರಿ ಹತ್ತರಿಂದ ಹದಿನಾಲ್ಕು ಕ್ವಿಂಟಾಲ್ ಭತ್ತ ಬೆಳೆಯಲು ಆರಂಭಿಸಿದರು. ಜೊತೆಗೆ ತಮ್ಮ ಹಿರಿಯರು ಸಂಗ್ರಹಿಸಿ ಇಟ್ಟಿದ್ದ ಅರವತ್ತೆರೆಡು ಬಗೆಯ ದೇಶಿ ಭತ್ತದ ಬೀಜಗಳನ್ನು ಹೊರತೆಗೆದು ಅವುಗಳ ತಳಿಯನ್ನು ಅಭಿವೃದ್ಧಿ ಪಡಿಸಿದರು. ಕುಡಿಯುವ ನೀರಿಗೆ ಹತ್ತು ಕಿಲೊಮೀಟರ್ ದೂರ ನಡೆಯುತ್ತಿದ್ದ ಅಲ್ಲಿನ ಹೆಂಗಸರ ಬವಣೆ ತಪ್ಪಿತು. ಪ್ರತಿ ವರ್ಷ ಆರು ತಿಂಗಳು ಕಾಲ ಕೂಲಿಯನ್ನು ಅರಸಿಕೊಂಡು ನಗರಕ್ಕೆ ಹೋಗುತ್ತಿದ್ದ ಶೇಕಡ 70 ರಷ್ಟು ರೈತರು ಗ್ರಾಮದಲ್ಲಿ ನೆಲೆ ನಿಂತರು.

ಸಾಟೊ ಗ್ರಾಮದ ರೈತರ ಈ ಯಶೋಗಾಥೆ ಅದೇ ಗುಲ್ಮ ಜಿಲ್ಲೆಯ ನಿಂದಿ ಎಂಬ ಗ್ರಾಮದ ರೈತರಿಗೆ ಪ್ರೇರಣೆಯಾಯಿತು. ಅವರೂ ಸಹ ಸಾಟೊ ಗ್ರಾಮದ ರೈತರಂತೆ ಹಣವನ್ನು ಸಂಗ್ರಹಿಸಿ, ತಮ್ಮೂರಿನ ಸರಹದ್ದಿನಲ್ಲಿ ಹರಿಯುತ್ತಿದ್ದ ಕೆರಲ್ ಎಂಬ ನದಿಗೆ ಪುಟ್ಟ ಅಣೆ ಕಟ್ಟೊಂದನ್ನು ನಿರ್ಮಾಣ ಮಾಡಿ ಯಶಸ್ವಿಯಾದರು. ಇಂತಹ ಪುಟ್ಟ ಅಣೆಕಟ್ಟು ನಿರ್ಮಾಣ ಇದೀಗ ಜಾರ್ಖಾಂಡ್ ರಾಜ್ಯದಲ್ಲಿ ನಿಧಾನವಾಗಿ ಗ್ರಾಮಾಂತರ ಪ್ರದೇಶದಲ್ಲಿ ಹರಡುತ್ತಿದೆ. ಗುಲ್ಮ ಜಿಲ್ಲೆಯ ಪಕ್ಕದ ಲೋಹರ್ ಗಡ ಜಿಲ್ಲೆಯ ಹೆಂಚಿ ಎಂಬ ಗ್ರಾಮದ ರೈತರೂ ಸಹ ಮಾಹುಗಾವ್ ಎಂಬಲ್ಲಿ ಸಣ್ಣ ಜಲಾಶಯವನ್ನು ನಿರ್ಮಿಸಿದ್ದಾರೆ.
ತಮ್ಮ ಊರಿನ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳು ಅಥವಾ ಸಹಾಯ ಹಸ್ತಕ್ಕಾಗಿ ಕಾಯದೆ, ಗಾಂಧೀಜಿಯವರ ಗ್ರಾಮಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಜಾರ್ಖಂಡ್ ರೈತರು ಸಾಧಿಸಿರುವ ಈ ಸಾಧನೆ ದೇಶದೆಲ್ಲೆಡೆ ಸಾಂಕ್ರಾಮಿಕ ರೋಗದಂತೆ ಹರಡಬೇಕಿದೆ.
( ಮಾಹಿತಿ ಮತ್ತು ಚಿತ್ರಗಳ ಸೌಜನ್ಯ- ಡೌನ್ ಟು ಅರ್ಥ್ ಇಂಗ್ಲೀಷ್ ಪಾಕ್ಷಿಕ ಪತ್ರಿಕೆ)