ಬದ್ಧತೆಯ ಚಳವಳಿಗೆ ಸಂದ ಗೌರವ – ರಘುನಾಥ ಚ.ಹ.

ವ್ಯಕ್ತಿ: ಗುರುಪ್ರಸಾದ್‌ ಕೆರೆಗೋಡು

ಚಳವಳಿಗಳಲ್ಲಿ ತೊಡಗಿಕೊಂಡಿರುವ, ವಿಶೇಷವಾಗಿ ದಲಿತ ಚಳವಳಿಯಲ್ಲಿ ಗುರುಸಿಕೊಂಡಿರುವ ಬಹುತೇಕ ನಾಯಕರಲ್ಲಿ ಎದ್ದುಕಾಣಿಸುವ ಗುಣಗಳು– ಸಿಟ್ಟು ಹಾಗೂ ಮುನ್ನುಗ್ಗುವ ಮನೋಭಾವ. ಅನ್ಯಾಯ, ಶೋಷಣೆಯ ವಿರುದ್ಧದ ಹೋರಾಟದಲ್ಲಿ ಸಿಟ್ಟು ಅನಿವಾರ್ಯ ಕೂಡ. ಇದಕ್ಕೆ ವಿರುದ್ಧವಾಗಿ ಸೌಮ್ಯ ಸ್ವಭಾವದ ಕೆಲವರು ತಮ್ಮ ವ್ಯಕ್ತಿತ್ವದಿಂದಲೇ ಚಳವಳಿಯ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಅಂಥ ವಿರಳ ನಾಯಕರ ಸಾಲಿಗೆ ಸೇರಿದವರು ಮಂಡ್ಯ ಜಿಲ್ಲೆಯ ಗುರುಪ್ರಸಾದ್‌ ಕೆರೆಗೋಡು.
ಸಾರ್ವಜನಿಕ ಜೀವನದಲ್ಲಿ ಕೈ ಮತ್ತು ಕಚ್ಚೆಯನ್ನು ಶುದ್ಧವಾಗಿ ಇರಿಸಿಕೊಳ್ಳುವುದು ಎಷ್ಟು ಕಷ್ಟ ಎನ್ನುವುದನ್ನು ವರ್ತಮಾನದ ರಾಜಕಾರಣ ಹಾಗೂ ಚಳವಳಿ ಹಿಡಿದಿರುವ ದಿಕ್ಕನ್ನು ನೋಡಿದರೆ ಅರ್ಥವಾಗುತ್ತದೆ. ಗುರುಪ್ರಸಾದ್‌ ಅವರ ವಿಶೇಷ ಇರುವುದೇ ಕೈ–ಕಚ್ಚೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿರುವುದರಲ್ಲಿ. ತಮ್ಮ ವಾರಗೆಯ ಕೆಲವು ಹೋರಾಟಗಾರರು ಕಾಲಕ್ರಮೇಣ ರಾಜಕಾರಣವನ್ನೋ ರಿಯಲ್‌ ಎಸ್ಟೇಟ್‌ ಉದ್ಯಮವನ್ನೋ ನೆಲೆಯಾಗಿಸಿಕೊಂಡರೂ, ಗುರುಪ್ರಸಾದ್‌ ಮಾತ್ರ ಚಳವಳಿಯ ಬದ್ಧತೆಯನ್ನು ಬಿಟ್ಟುಕೊಟ್ಟವರಲ್ಲ. ಚಳವಳಿಯನ್ನು ಸ್ವಂತ ಲಾಭಕ್ಕಾಗಿಯೂ ಎಂದೂ ಬಳಸಿಕೊಂಡವರಲ್ಲ.
ಮಂಡ್ಯ ನಗರಕ್ಕೆ ಕೆರೆಗೋಡು 13 ಕಿ.ಮೀ. ದೂರದಲ್ಲಿರುವ– ಪಟ್ಟಣವೂ ಅಲ್ಲದ, ಹಳ್ಳಿಯೂ ಅಲ್ಲದ ಒಂದು ಗ್ರಾಮ. ಅಲ್ಲಿನ ಕೆ.ಎಚ್.ನೀಲಕಂಠಯ್ಯ ಹಾಗೂ ಮಾಯಮ್ಮ ದಂಪತಿಯ ಪುತ್ರ ಗುರುಪ್ರಸಾದ್‌ (ಜನನ: ಜ. 17, 1959). ಹಸಿವು ಹಾಗೂ ಅಸ್ಪೃಶ್ಯತೆಯನ್ನು ಜೊತೆಜೊತೆಗೆ ಅನುಭವಿಸಿದ ಅವರ ಪಾಲಿಗೆ ಚಳವಳಿ ಎನ್ನುವುದು ಹುಟ್ಟಿನೊಂದಿಗೆ ಜೊತೆಯಾದ ಒಂದು ಅನಿವಾರ್ಯ ಸಂಗತಿ.
ಹಬ್ಬ ಹರಿದಿನಗಳಲ್ಲಿ ಊರ ದೊಡ್ಡವರ ಮನೆಗಳಿಂದ ಅಪ್ಪ ಮಂಕರಿಯಲ್ಲಿ ತರುತ್ತಿದ್ದ ‘ಹಬ್ಬದ ಅಡುಗೆ’ ಹುಡುಗನ ಪಾಲಿಗೆ ಅಪಮಾನ ಎನ್ನಿಸಲು ತುಂಬಾ ದಿನಗಳು ಬೇಕಾಗಲಿಲ್ಲ. ಶಾಲೆಯ ದಿನಗಳಲ್ಲಿ ಮಂಡ್ಯದ ಹಾಸ್ಟೆಲ್‌ವಾಸ ಹೊಸತೊಂದು ಜಗತ್ತನ್ನು ಕಾಣಿಸಿತು. ಹಾಸ್ಟೆಲ್‌ನಲ್ಲಿನ ಭ್ರಷ್ಟಾಚಾರ ಹುಡುಗನನ್ನು ಬೆಚ್ಚಿಬೀಳಿಸಿತು. ಹೋರಾಟ ಎನ್ನುವುದು ಮೊದಲು ಪ್ರಾರಂಭವಾಗಬೇಕಾದುದು ನಮ್ಮೊಳಗಿನಿಂದ, ನಮ್ಮ ಅಂಗಳದಿಂದ ಎನ್ನುವ ಅರಿವು ಗುರುಪ್ರಸಾದ್‌ ಅವರಿಗಾದುದು ಹಾಸ್ಟೆಲಿನಲ್ಲಿಯೇ.
ತಾರುಣ್ಯದ ಹೊಸ್ತಿಲಲ್ಲಿದ್ದ ಹುಡುಗನಲ್ಲಿ ಅರಿವಿನ ಜೊತೆಗೆ ಪ್ರತಿಭಟನೆಯ ಪ್ರಣಾಳಿಕೆಯನ್ನು ರೂಪಿಸಿದ್ದು ‘ಪಂಚಮ’ ಪತ್ರಿಕೆ. ಮಂಡ್ಯದ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ನಾರಾಯಣ್‌ ಅವರ ಗರಡಿಯ ಒಡನಾಟವೂ ಗುರುಪ್ರಸಾದ್‌ ಅವರನ್ನು ಬೆಳೆಸಿತು. ಪದವಿಯ ವೇಳೆಗಾಗಲೇ, ಚಳವಳಿ ಪೂರ್ಣ ಪ್ರಮಾಣದಲ್ಲಿ ಅವರನ್ನು ಆವರಿಸಿಕೊಂಡಿತ್ತು.
ಪದವಿ ಮುಗಿಸುವುದು, ಯಾವುದೋ ಒಂದು ನೌಕರಿ ಹಿಡಿದು ‘ಲೈಫಲ್ಲಿ ಸೆಟ್ಲ್‌’ ಆದೆ ಅಂದುಕೊಳ್ಳುವುದೆಲ್ಲ ಅವರಿಗೆ ಅರ್ಥಹೀನ ಅನ್ನಿಸಿತು. ಓದುತ್ತಿದ್ದ ಬಿ.ಕಾಂ ಅನ್ನು ಅದರ ಪಾಡಿಗೆ ಬಿಟ್ಟು, ಪೂರ್ಣಾವಧಿ ಚಳವಳಿಯಲ್ಲಿ ತೊಡಗಿಸಿಕೊಂಡರು. ವೈಯಕ್ತಿಕ ಸಂಕಷ್ಟಗಳ ನಡುವೆಯೂ, ಚಳವಳಿ ಕಾರಣಕ್ಕಾಗಿಯೇ ‘ಕೆಲಸಕ್ಕೆ ಸೇರಕೂಡದು’ ಎನ್ನುವ ನಿರ್ಧಾರವನ್ನು ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡರು.
ಗುರುಪ್ರಸಾದ್‌ರ ಚಳವಳಿಯ ದಾರಿ ದೀರ್ಘವಾದುದು. ಅಂಬೇಡ್ಕರ್‌ ಪ್ರತಿಪಾದಿಸಿದ ‘ಸಾಮಾಜಿಕ ನ್ಯಾಯ’ದ ಪರಿಕಲ್ಪನೆಯನ್ನು ಕನವರಿಸುತ್ತ 1978ರಲ್ಲಿ ‘ದಲಿತ ಸಂಘರ್ಷ ಸಮಿತಿ’ಗೆ ಸೇರ್ಪಡೆಯಾದ ಅವರು, ಈಗ ಸಮಿತಿಯ ರಾಜ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ದಸಂಸ’ ಸಂಘಟನೆಗೆ ವಿಶ್ವಾಸಾರ್ಹತೆ ತಂದುಕೊಡುವಲ್ಲಿ ಅವರ ಕೊಡುಗೆ ಮುಖ್ಯವಾದುದು. ರಾಜ್ಯದ ಬಹುತೇಕ ದಲಿತ ಚಳವಳಿಗಳಲ್ಲಿ ಅವರ ಸಹಪಯಣ ಇದ್ದೇಇದೆ.
ಹೋಬಳಿಗೊಂದು ವಸತಿಶಾಲೆಗಾಗಿ ಹೋರಾಟ, ಭೂಹೀನ ಬಡವರಿಗಾಗಿ ಹೋರಾಟ, ಪ್ಲಾಂಟೇಷನ್‌ ಒತ್ತುವರಿ ಭೂಮಿ ಸಕ್ರಮದ ವಿರುದ್ಧ ಹೋರಾಟ, ಹೆಂಡ–ಸಾರಾಯಿ ನಿಷೇಧಕ್ಕಾಗಿ ಹೋರಾಟ… ಹೀಗೆ ಅನೇಕ ಪ್ರತಿಭಟನೆ, ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆದಲ್ಲೆಲ್ಲ ಅವರ ಪ್ರತಿಭಟನೆಯ ಧ್ವನಿ ಕೇಳುತ್ತದೆ. ಸಾಕ್ಷರತಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಿರುವ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಟಕಗಳನ್ನು ಸಂಘಟಿಸುವ ಮೂಲಕ ಜನಜಾಗೃತಿಗೆ ಪ್ರಯತ್ನಿಸಿದ್ದಾರೆ.
ಗುರುಪ್ರಸಾದ್‌ ಅವರದು ತತ್ವಬದ್ಧ ಹೋರಾಟ. ಕೆಲವೊಮ್ಮೆ ಅವರು, ತಾವು ವಿರೋಧಿಸುವವರ ಸ್ಥಾನದಲ್ಲಿ ನಿಂತು ಯೋಚಿಸಿರುವುದೂ ಇದೆ. ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯ ಹೆಣ್ಣುಮಗಳೊಬ್ಬಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳು ತೋಳೇರಿಸಿ ನಿಂತಾಗ ಅವರು ತಳೆದ ನಿರ್ಧಾರ ಹಾಗೂ ತೋರಿದ ಸಂಯಮ ‘ದಲಿತ ಚಳವಳಿ ಇತಿಹಾಸ’ದಲ್ಲೇ ಅಪರೂಪ ಎನ್ನುವಂತಹದ್ದು. ನೇರ ನಿಷ್ಠುರ ನಡವಳಿಕೆಯ ಜೊತೆಗೆ ಅಂತಃಕರಣವನ್ನೂ ಸಾವಧಾನವನ್ನೂ ಮೈಗೂಡಿಸಿಕೊಂಡಿದ್ದ ದಲಿತ ನಾಯಕ ಬಿ.ಕೃಷ್ಣಪ್ಪನವರ ಮಾರ್ಗ ಅವರದು. ಕೆಲವೊಮ್ಮೆ ಈ ಸಾವಧಾನ ಗುಣ ಅವರ ‘ಮಿತಿ’ ಎಂದೂ ಕೆಲವರಿಗೆ ಅನ್ನಿಸಿದ್ದಿದೆ.
ಹೆಂಡತಿ ಹಾಗೂ ನಾಲ್ಕು ಮಕ್ಕಳ ಕುಟುಂಬ ಗುರುಪ್ರಸಾದ್‌ ಅವರದು. ಕೊಂಚ ಕೃಷಿ ಜಮೀನು ಇದ್ದುದರಿಂದ ಅನ್ನ ಬಟ್ಟೆಗೊಂದು ಆಧಾರ ಇತ್ತಾದರೂ, ಅವರದು ಸ್ಥಿತಿವಂತ ಕುಟುಂಬವೇನಲ್ಲ. ಕುಟುಂಬದ ಹಿತದೊಂದಿಗೆ ರಾಜಿ ಮಾಡಿಕೊಂಡು ಚಳವಳಿ ಮಾಡುವ ತ್ಯಾಗ ಎಲ್ಲರಿಗೂ ಸಾಧ್ಯವಿಲ್ಲ. ಈಗ ಗುರುಪ್ರಸಾದ್‌ರ ಮಕ್ಕಳು ದೊಡ್ಡವರಾಗಿದ್ದಾರೆ, ಕುಟುಂಬ ಒಂದು ನೆಲೆಗೆ ಬಂದು ನಿಂತಿದೆ.
ದಲಿತ ಚಳವಳಿ ಕವಲಾಗಿ ಒಡೆದಿರುವ ದಿನಗಳಿವು. ‘ಹೌದು, ಈಗ ಸಂಘಟನೆ ಗುಂಪುಗಳ ರೂಪದಲ್ಲಿ ಉಳಿದಿದೆ. ಇದಕ್ಕೆ ವ್ಯಕ್ತಿಗತ ಪ್ರತಿಷ್ಠೆ ಕಾರಣವೇ ಹೊರತು, ತಾತ್ವಿಕ ಭಿನ್ನಾಭಿಪ್ರಾಯವಲ್ಲ’ ಎನ್ನುವುದು ಗುರುಪ್ರಸಾದ್‌ರ ಅನಿಸಿಕೆ. ಒಗ್ಗಟ್ಟಿನ ಕೊರತೆಯಿಂದಾಗಿ ಚಳವಳಿಗೆ ದಣಿವು ಆವರಿಸಿಕೊಂಡಿರುವುದನ್ನೂ, ಚಳವಳಿಕಾರರಲ್ಲಿನ ಬದ್ಧತೆ, ಪ್ರಾಮಾಣಿಕತೆಯಲ್ಲಿನ ಹೊಯ್ದಾಟವನ್ನೂ ಅವರು ಗಮನಿಸಿದ್ದಾರೆ. ‘ಎಲ್ಲರೂ ಈಗ ಕೂತು ಮಾತನಾಡಬೇಕಿದೆ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಚಳವಳಿಗೆ ಮತ್ತೆ ಜೀವ ತುಂಬಬೇಕಿದೆ’ ಎನ್ನುವ ಕನಸು ಅವರದು.
ಸಾರ್ವಜನಿಕ ಜೀವನದಲ್ಲಿ ಅವಕಾಶವಾದಿತನ ಮತ್ತು ಬಾಯಿಬಡುಕತನಗಳು ಮುಂಚೂಣಿಯಲ್ಲಿರುವ ವರ್ತಮಾನದಲ್ಲಿ, ಸಜ್ಜನಿಕೆಯ ಹಾಗೂ ಮೆಲುಮಾತಿನ ಗುರುಪ್ರಸಾದ್‌ ಅವರಿಗೆ, ರಾಜ್ಯ ಸರ್ಕಾರದ 2017ನೇ ಸಾಲಿನ ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ಸಂದಿದೆ. ಸರ್ಕಾರಿ ನೌಕರಿಯಲ್ಲಿದ್ದರೆ ನಿವೃತ್ತಿಯ ಅಂಚಿನದು ಎನ್ನಬಹುದಾದ ವಯಸ್ಸು (58 ವರ್ಷ) ಅವರದು.
ಇಂತಹ ವಯಸ್ಸಿನಲ್ಲಿ ಗುರುಪ್ರಸಾದ್‌ ಅವರಿಗೆ ಸಂದಿರುವ ಈ ಪ್ರಶಸ್ತಿ ಅವರಲ್ಲಿ ನಿವೃತ್ತಿ ಯೋಚನೆಯನ್ನೇನೂ ಉಂಟುಮಾಡುವಂತಿಲ್ಲ. ಏಕೆಂದರೆ, ಪ್ರತಿಯೊಂದು ಪುರಸ್ಕಾರ, ಗೌರವ ವ್ಯಕ್ತಿ ನಿರ್ವಹಿಸಿದ ಜವಾಬ್ದಾರಿಗೆ ಸಂದ ಮನ್ನಣೆ ಆಗಿರುವಂತೆಯೇ, ಮಾಡಬೇಕಾದ ಕೆಲಸಕ್ಕೆ ನೀಡುವ ಉತ್ತೇಜನವೂ ಹೌದು. ಅಲ್ಲದೆ, ಚಳವಳಿಯ ಬದುಕಿಗೆ ನಿವೃತ್ತಿಯಾದರೂ ಎಲ್ಲಿ?