ಬದ್ಧತೆಯಲ್ಲಿ ರಾಜಿ ಇಲ್ಲದ ಹಠಯೋಗಿ ಕೋಟಿ-ದೇವನೂರ ಮಹಾದೇವ

[ಆಪ್ತಮಿತ್ರನ ಅಂತಿಮ ನಮನ… ಬಹುಕಾಲದ ಆತ್ಮೀಯ ಸ್ನೇಹಿತರಾಗಿದ್ದ ರಾಜಶೇಖರಕೋಟಿ ಅವರಿಗೆ ಅವರದೇ ಮನೆ ಅಂಗಳದಲ್ಲಿ ಖ್ಯಾತ ಸಾಹಿತಿ ದೇವನೂರ ಮಹಾದೇವ ಅವರು ಗುರುವಾರ ಅಂತಿಮ ನಮನ ಸಲ್ಲಿಸಿದ ಕ್ಷಣ. ಕೋಟಿ ಅವರ ಪತ್ನಿ ನಿರ್ಮಲಾ ಕೋಟಿ, ಪುತ್ರ ರವಿ ಕೋಟಿ, ದೇವನೂರರ ಪತ್ನಿ ಪ್ರೊ.ಸುಮಿತ್ರಾಬಾಯಿ ಮತ್ತಿತರರು ಚಿತ್ರದಲ್ಲಿದ್ದಾರೆ.]

ಇವತ್ತು ರಾಜಶೇಖರಕೋಟಿ ಅವರನ್ನು ನಾನು ನೋಡಿದೆ. ಅವರು ಸತ್ತಥರ ಕಾಣಿಸಲಿಲ್ಲ. ಸತ್ತಿದ್ದಾರೆ ಅನ್ನಿಸಲೇ ಇಲ್ಲ. ಕೆಲವರು ಸತ್ತಾಗ ನಮ್ಮೊಳಗೇನೆ ಏನೋ ಒಂದಷ್ಟು ಸತ್ತು ಹೋಯಿತು ಅನ್ಸುತ್ತೆ. ಶಾಕ್‍ ಆದದ್ದು ಬೇರೆ. ಆಲನಹಳ್ಳಿ ಕೃಷ್ಣ ತೀರಿಕೊಂಡಾಗ ಆ ರೀತಿ ಅನ್ಸಿತ್ತು. ನನ್ನೊಳಗೊಂದು ಭಾಗವೇ ಸತ್ತು ಹೋಯಿತು. ಇವತ್ತು ಬೆಳಿಗ್ಗೆ ಸುದ್ದಿ ಕೇಳಿದ್ದಾಗಿಂದಲೂ ಅದೇ ಭಾವನೆ.
-ದೇವನೂರ ಮಹಾದೇವ

ಅದು ಸುಮಾರು 1975ನೇ ಇಸ್ವಿ. ಧಾರವಾಡದಲ್ಲಿ ರಾಜಶೇಖರಕೋಟಿ ಇದ್ದಾಗಲೇ ಅವರ ಹೆಸರು ಕೇಳಿದ್ದೆವು. ಅವರು ಮೈಸೂರಿಗೆ ಬಂದಾಗ ತೇಜಸ್ವಿ ‘ಮೈಸೂರಲ್ಲೇ ಪತ್ರಿಕೆ ಮಾಡ್ರೀ’ ಅಂಥ ಪ್ರೇರಣೆಕೊಟ್ಟರು. ನಾವು ಸಮಾಜವಾದಿ ಯುವಜನ ಸಭಾ, ಜೆಪಿ ಆಂದೋಲನದಲ್ಲಿದ್ದವರು ಒತ್ತಾಸೆಯಾಗಿ ನಿಂತೆವು. ಆ ಒತ್ತಾಸೆ ಎಲ್ಲರಿಗೂ ಸಿಗಬಹುದು. ಆದರೆ ಕೋಟಿ ಒಳಗೊಬ್ಬ ಹಠಯೋಗಿ ಇದ್ದ. ಅವರು ಹಠಕ್ಕೆ ನಿಂತದ್ದರಿಂದಲೇ ‘ಆಂದೋಲನ’ ಪತ್ರಿಕೆಯಾಯಿತು. ಆಮೇಲೆ ಆ ಪತ್ರಿಕೆ ಪತ್ರಿಕಾಕ್ಷೇತ್ರದಲ್ಲೇ ಆಂದೋಲನ ಅನ್ನೋಥರ ಆಯಿತು.
ಪತ್ರಿಕಾ ಕ್ಷೇತ್ರದಲ್ಲಿ ಪಿ.ಲಂಕೇಶ್‍ ಅವರು ಧ್ಯಾನಿ ಅನ್ನೋಥರ ಇದ್ದರೆ, ಕೋಟಿ ಒಂಟಿ ಕಾಲಿನ ತಪಸ್ವಿ, ಅಂಥ `ಆಂದೋಲನ’ ಪ್ರಿಂಟಿಂಗ್ ಪ್ರೆಸ್‍ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೇಳಿದ್ದೆ. ತಪಸ್ಸಿಗೆ ಸತತ ಪರಿಶ್ರಮ ಬೇಕು. ನಿಷ್ಠೆ ಬೇಕು. ಆಮೇಲೆ ಒಂದು ಹಠಾನೂ ಬೇಕು. ಇದೆಲ್ಲವೂ ಕೋಟಿಯವರಲ್ಲಿ ಮೇಳೈಸಿತ್ತು. ಅದೇ ಅವರ ಯಶಸ್ಸಿಗೆ ಕಾರಣ.
ರಾಜಶೇಖರಕೋಟಿ ನಿದ್ದೆ ಮಾಡಿದ್ದನ್ನು ನಾನು ಕಂಡಿಲ್ಲ. ರಾತ್ರಿ, ಬೆಳಿಗ್ಗೆ ಒಂಚೂರು ನಿದ್ದೆ ಮಾಡುತ್ತಿದ್ದರು. ಅಷ್ಟೊಂದು ಎಚ್ಚರದ ಮನಸ್ಸು. ಅದನ್ನು ನನಗೆ ಊಹೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಕೋಟಿಯಂತಹ ಅಪ್ಪಟ ಕನ್ನಡ ಪ್ರೇಮಿಯನ್ನು ನಾನು ಕಂಡಿಲ್ಲ. ಎಷ್ಟೋ ಸಲ ಅತಿ ಅನ್ನಿಸುವಷ್ಟು ಕನ್ನಡ ಪ್ರೇಮ. ನಾನು ಆಕ್ಷೇಪ ಮಾಡಿದರೆ ಅದಕ್ಕೆ ಅವರು ಕರಗುತ್ತಿರಲಿಲ್ಲ. ‘ರೀ ಹೋಗ್ರಿ ಹೋಗ್ರಿ’ ಅನ್ನುತ್ತಿದ್ದರು .ವೈಯಕ್ತಿಕ ಅನುಭವದಲ್ಲಿಯೂ ಕೋಟಿಯಂಥವರನ್ನು ನಾನು ನೋಡಿಲ್ಲ.
ಕೋಟಿ ಅವರು ಕೆ.ಜಿ.ಕೊಪ್ಪಲಿನಲ್ಲಿ ಇರುವವರೆಗೂ ಹೆಚ್ಚುಕಮ್ಮಿ ದಿನನಿತ್ಯ ಒಡನಾಟವಿತ್ತು. ಹಾಗೆ ನೋಡಲು ಹೋದರೆ ಮದುವೆಯಾಗಿದ್ದರಲ್ಲಿ ನಾನು ಸೀನಿಯರ್. ನಾನು-ಸುಮಿತ್ರ್ರಾ ಕೋಟಿಗೆ ಹೆಣ್ಣು ನೋಡೋಕೆ ಹೋಗಿದ್ದೊ. ಈಗಲೂ ಅದು ನನಗೆ ನೆನಪಿಗೆ ಬರುತ್ತೆ.
ಕೋಟಿಯವರ ಬದ್ಧತೆಯಲ್ಲಿ ರಾಜಿ ಇಲ್ಲವೇ ಇಲ್ಲ. ಉದಾ: ಪತ್ರಿಕೋದ್ಯಮ ಸತತವಾಗಿ ದಲಿತರ ಪರವಾಗಿ ನಿಲ್ಲುವುದು ಮತ್ತು ಅದನ್ನೇ ಮುಂದಿಟ್ಟುಕೊಂಡು ಅಭಿವೃದ್ಧಿ ಆಗುವುದು ಬಹಳ ದೊಡ್ಡದು. ಸಿಕ್ಕಾಪಟ್ಟೆ ದೊಡ್ಡದು.
ಕೋಟಿ ಮಹಿಳೆಯರಿಗೆ ಬಹಳ ಗೌರವ ಕೊಡುತ್ತಿದ್ದರು. ನನ್ನ ಮಗಳನ್ನು ನೀವು ಅಂತ ಮಾತಾಡಿಸೋರು.‘ಯಾಕ್ರೀ ಕೋಟಿ’ ಅಂದರೆ ಸುಮ್ಮನಾಗುವರು. ಅದು ಅವರ ಸ್ವಭಾವ. ಅವರ ವ್ಯಕ್ತಿತ್ವ ಹೂವಿನಷ್ಟೇ ಮೃದು, ಕಲ್ಲಿನಷ್ಟೇಕಠಿಣ. ಅವರಿಗೆ ಕನ್ನಡ ಕೋಟಿ ಅಂತ ಹೆಸರಿಡಬಹುದು.
ನಾನಾದರೂ ಕನ್ನಡದ ವಿಚಾರದಲ್ಲಿ ಕೊಂಚ ಉದಾರವಾಗಿರುತ್ತೇನೆ. ವ್ಯಾವಹಾರಿಕವಾಗಿ ಇರುತ್ತೇನೆ. ಆದರೆ ಅವರ ಹತ್ತಿರ ವ್ಯವಹಾರವೂ ಇರಲಿಲ್ಲ. ಉದಾರವೂ ಇರಲಿಲ್ಲ. ಅಷ್ಟೊಂದು ಅಂಟಿಕೊಂಡಿದ್ದರು.
ಹಣ ಸಿಕ್ಕಿದಾಗ ಸಾಮಾಜಿಕ ಸೇವೆ ಮಾಡಿದ್ದಾರೆ. ನಾನು ವಿಮರ್ಶೆ ಮಾಡುವುದಿಲ್ಲ. ಆಂದೋಲನ ಪತ್ರಿಕೆಯಾಗಿ ಬೆಳೆಯಿತಲ್ಲ, ಅದು ದೊಡ್ಡದು. ಉದಾಹರಣೆಗೆ ಸ್ಪಂದನೆ ಇತ್ತಲ್ಲ. ಅದೂ ದೊಡ್ಡದು. ದಲಿತ ಸಂಘರ್ಷ ಸಮಿತಿಯ ವ್ಯಕ್ತಿಯೊಬ್ಬರು ಅಪಘಾತದಲ್ಲಿ ತೀರಿಕೊಂಡಾಗ ಹಣ ಸಂಗ್ರಹ ಮಾಡಿ ತನ್ನ ಮಾನವೀಯ ಗುಣ ಪ್ರದರ್ಶಿಸಿತು. ಇದು ಮುಖ್ಯ.ಇಂಥದು ಯಾರು ಮಾಡ್ತಾರೆ. ಯಾರು ಕೇಳ್ತಾರೆ?
ಕೋಟಿ ಅವರ ಕಷ್ಟವನ್ನು ಬಹಳವಾಗಿ ಕಂಡಿದ್ದೇನೆ. ಕಷ್ಟ ಕಂಡು ಕಂಡು ಈಗ ಅನುಕೂಲವಾಗಿದ್ದರೂ ದುಡ್ಡು ಕೇಳಲು ಅಯ್ಯೋ ಪಾಪ ಅವರಿಗೆ ಕಷ್ಟ ಇರಬೇಕು ಅನ್ಸುತ್ತೆ. ಅಷ್ಟೊಂದು ಅಳವಾಗಿ ಅವರ ಕಷ್ಟ ಕಂಡಿದ್ದೇನೆ.
ನಾನು ಬಹಳಷ್ಟು ಕಷ್ಟವನ್ನು ಅನುಭವಿಸಿದ್ದೇನೆ. ಅದನ್ನು ನಾನು ಮರೆತು ಬಿಡುತ್ತೇನೆ. ಆದರೆ ಕೋಟಿ ಕಷ್ಟವನ್ನು ನೆನಪಿಟ್ಟುಕೊಳ್ಳುತ್ತಿದ್ದರು. ಸ್ನೇಹಿತರೊಬ್ಬರು ಬ್ಯಾಂಕಿನಲ್ಲಿ 1975ರಲ್ಲಿ ಒಂದು ಸಾವಿರ ರೂಪಾಯಿ ಸಾಲ ಕೊಡಿಸಿದ್ದರು. ಆ ಒಂದು ಸಾವಿರದಲ್ಲಿ ಕೋಟಿಗೊಂದು ನೂರು ರೂಪಾಯಿಕೊಟ್ಟೆ. ಅದನ್ನು ಎಲ್ಲ ಕಡೆ ಹೇಳುತ್ತಿದ್ದರು. ಒಂದ್ಸಲ ಸರಿ ಎರಡ್ಸಲ ಸರಿ. ಅದನ್ನೇ ಹೇಳುತ್ತಿದ್ದರು. ಕೋಟಿ ಏನಿದು ಅಂದರೆ ಹೇ ಬಿಡ್ರಿ ನಾ ಹೇಳೋನೆ ಅನ್ನೋರು.
ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದವರು ಕೆಲಸ ಬಿಟ್ಟಾಗ ಕೋಟಿಯವರು ಸ್ವಲ್ಪಮಟ್ಟಿಗೆ ಅಪ್‍ಸೆಟ್‍ ಆಗುತ್ತಿದ್ದರು. ಆದರೆ ಅಳ್ಳಾಡುತ್ತಿರಲಿಲ್ಲ. ಹತ್ತು ಜನರ ಕೆಲಸಾನ ಒಬ್ಬರೇ ಮಾಡೋರು.
ಕೋಟಿಯವರು ಸ್ವಲ್ಪರಾಜಿ ಮಾಡಿಕೊಂಡಿದ್ದರೆ ಚಾಮುಂಡಿ ಬೆಟ್ಟದ ಹತ್ತಿರ ಭೂಮಿ ಸಿಗುತ್ತಿತ್ತು. ಹಸಿವಿನಿಂದ ಬದುಕಿದರೂ ಪರವಾಗಿಲ್ಲ. ರಾಜಿಯಾಗುವುದು ಬೇಡ ಎಂಬ ನಿಲುವು ಅವರದಾಗಿತ್ತು.
ಕೋಟಿಯವರ ಅನುಪಸ್ಥಿತಿ ಮೈಸೂರು ಭಾಗದ ಚಳವಳಿಗೆ ಹಿನ್ನಡೆ ಎಂದು ತಿಳಿಯಬೇಕಿಲ್ಲ. ಆ ತರಹ ಆಲೋಚನೆ ಸರಿಯಿಲ್ಲ. ನಾವೆಲ್ಲರೂ ಹೊರಟು ಹೋದರೂ ನೀರಿನ ಚಲನೆಯಂತೆ ಚಳವಳಿ ತನ್ನಿಂತಾನೆ ಮುಂದುವರಿಯುತ್ತದೆ. ಚಳವಳಿ ಪ್ರವಾಹದ ತರ. ಜತೆಗೆ ಹೊಸ ಜನಾಂಗದ ಲಯಗಳು ನಮಗೆ ಗೊತ್ತಿಲ್ಲದೆ ಇರಬಹುದು. ಮತ್ತೆ ಈ ಕಾಲಕ್ಕೆ ಬೇಕಾಗಿರುವುದು ಬೇರೇನೆ ಇರಬಹುದು. ಅಂಬೇಡ್ಕರ್, ಗಾಂಧಿ ಸತ್ತಿದ್ದಾರ?