ಬಡವರ ಹೆಗಲೇರಿ ಭವ್ಯ ಭಾರತ – ನಾಗೇಶ್ ಹೆಗಡೆ

                                 

ಚೆನ್ನೈ ಬಹುಭಾಗ ಈಗ ಜಲಸಮವಾಗಿದೆ. ರಸ್ತೆ, ಸೇತುವೆ, ರೈಲು, ಪಾರ್ಕು, ಟೆಕ್‌ಪಾರ್ಕು, ರನ್‌ವೇ ಎಲ್ಲವೂ ಸಮುದ್ರವಾಗಿವೆ. ಇಡೀ ಏಷ್ಯಾ ಖಂಡದಲ್ಲೇ ಮಳೆಕೊಯ್ಲನ್ನು ಕಡ್ಡಾಯಗೊಳಿಸಿದ ಮೊದಲ ನಗರವೆನಿಸಿದ ಚೆನ್ನೈ ಈಗ ಮಳೆನೀರನ್ನು ಹೊರಹಾಕಲು ತಿಣುಕಬೇಕಿದೆ.

ಅತ್ತ ಬೀಜಿಂಗ್‌ನಲ್ಲಿ ಇದೇ ಸಂದರ್ಭದಲ್ಲಿ ಹೊಂಜಿನ ಪ್ರಳಯ. ಹೊಗೆ ಮತ್ತು ಮಂಜು ಸೇರಿ (ಹೊಂಜು) ಇಡೀ ನಗರಕ್ಕೆ ಮುಖವಾಡ ತೊಡಿಸಿದೆ. ಶಾಲೆಗೆ ರಜೆ, ಕಾರ್ಖಾನೆಗಳಿಗೆ, ಖಾಸಗಿ ಸಂಚಾರಕ್ಕೆ ರಜೆ. ರೈಲು, ವಿಮಾನ, ಹೆದ್ದಾರಿ ಓಡಾಟಕ್ಕೆ ತಡೆ. ವಾಯುವಿನ ಗುಣಮಟ್ಟವೊ ಸುರಕ್ಷಾ ಮಿತಿಗಿಂತ 20 ಪಟ್ಟು ಹೆಚ್ಚು ಕಳಪೆಯಾಗಿದ್ದು ‘ಕಿತ್ತಳೆ’ ತುರ್ತುಸ್ಥಿತಿಯನ್ನು ಘೋಷಿಸಲಾಗಿದೆ.

ಹವಾಗುಣ ವೈಪರೀತ್ಯ ಕುರಿತು ಪ್ಯಾರಿಸ್ಸಿನಲ್ಲಿ 21ನೇ ಸುತ್ತಿನ ಹಣಾಹಣಿ ಮೊನ್ನೆಯಿಂದ ಆರಂಭವಾಗಿದೆ. ಒಂದೆಡೆ ಶ್ರೀಮಂತ ದೇಶಗಳು. ಇನ್ನೊಂದೆಡೆ ಅವರಂತೆಯೇ ಶ್ರೀಮಂತರಾಗಲು ಬಯಸುವ ದೇಶಗಳು. ‘ನಿಮ್ಮಿಂದಾಗಿಯೇ ಭೂಮಿಗೆ ಈ ಸ್ಥಿತಿ ಬಂದಿದೆ’ ಎಂದು ಶ್ರೀಮಂತ ದೇಶಗಳನ್ನು ಭಾರತ ಬೊಟ್ಟು ಮಾಡಿ ತೋರಿಸುತ್ತಿದೆ. ‘ನಮ್ಮ ಹಾದಿಯಲ್ಲಿ ಚಲಿಸಿದರೆ ನಿಮಗೂ ಈ ಗತಿ ಬಂದೀತು’ ಎಂದು ಶ್ರೀಮಂತ ರಾಷ್ಟ್ರಗಳು ಚೆನ್ನೈ ಮತ್ತು ಬೀಜಿಂಗ್‌ಗಳನ್ನು ನಮಗೇ ತೋರಿಸುತ್ತಿವೆ. ಯಾರು ತ್ಯಾಗ ಮಾಡಬೇಕು, ಯಾರು ಭೋಗಕ್ಕೆ ಮಿತಿ ಹಾಕಬೇಕು ಎಂಬುದರ ಕುರಿತು ಮಾತಿನ ಸುರಿಮಳೆ, ಮುಸುಕಿನ ಗುದ್ದಾಟ ನಡೆದಿದೆ.

ಈ ಮೇಲಾಟ ಪುರಾತನ ಕಾಲದಿಂದಲೂ ಇದ್ದದ್ದೇ. ರಾಮ-ರಾವಣ ಯುದ್ಧದಂಥ ಕೆಲವನ್ನು ಬಿಟ್ಟರೆ ಇತರ ಎಲ್ಲ ಘನಘೋರ ಸಮರಗಳೂ ಸಂಪತ್ತಿನ ಒಡೆತನಕ್ಕಾಗಿ, ಭೂಮಿಯ ಯಜಮಾನಿಕೆಗಾಗಿಯೇ ನಡೆದಿವೆ. ದೊಡ್ಡ ಯುದ್ಧಗಳಿಂದ ಹಿಡಿದು ಗ್ರಾಮಮಟ್ಟದ ಚಿಕ್ಕ ಮಾರಾಮಾರಿಗಳೂ ನೆಲಕ್ಕಾಗಿಯೇ ನಡೆದಿವೆ, ನಡೆಯುತ್ತಿವೆ. ಗೆದ್ದ ಸಂಪತ್ತನ್ನು ಉರಿಸಿ ಉಡಾಯಿಸುತ್ತಿದ್ದಂತೆ ತಲೆಯ ಮೇಲಿನ ವಾಯುಮಂಡಲ ನಲುಗಿದೆ; ನಮ್ಮ ಕಾಲ್ಕೆಳಗಿನ ನೆಲ ನಲುಗಿದೆ. ‘ಇಡೀ ಭೂಮಿ ಸಂಕಷ್ಟಕ್ಕೆ ಸಿಲುಕಿದೆ. ಯಾರೂ ಏನೂ ಮಾಡದಿದ್ದರೆ ಇಡೀ ಮಾನವಕುಲವೇ ವಿನಾಶದ ದಳ್ಳುರಿಗೆ ಸಿಲುಕಲಿದೆ’ ಎಂದು ವಿಜ್ಞಾನಿಗಳು ಮತ್ತೆ ಮತ್ತೆ ಎಚ್ಚರಿಸುತ್ತಿದ್ದಾರೆ. ಕಲ್ಲಿದ್ದಲು ಮತ್ತು ಕಚ್ಚಾತೈಲಗಳ ಬಳಕೆ ಕಡಿಮೆ ಮಾಡಲೇಬೇಕು ಎಂದು ಹೇಳುತ್ತಿದ್ದಾರೆ.

ಆದರೆ ಈಗಿರುವ ಸುಖ ಸವಲತ್ತುಗಳನ್ನು ಬಿಟ್ಟುಕೊಡಲು ಯಾರೂ ಬಯಸುವುದಿಲ್ಲ. ಚಳಿ ತುಂಬಿದ ಅಮೆರಿಕ, ಕೆನಡಾ, ಯುರೋಪ್‌ನ ಶ್ರೀಮಂತ ದೇಶಗಳು ತುಂಬ ಹಿಂದೆಯೇ ಮನೆಯ ಗೋಡೆಗಳನ್ನೂ ಬಿಸಿ ಮಾಡಿಟ್ಟುಕೊಳ್ಳಲೆಂದು ಕಲ್ಲಿದ್ದಲು ಮತ್ತು ತೈಲವನ್ನು ಉರಿಸುತ್ತಿವೆ. ಸೌದಿ ಅರೇಬಿಯಾ, ಕುವೈತ್, ಕತಾರ್‌ಗಳಂಥ ಮರುಭೂಮಿಯ ದೇಶಗಳು ಇಡಿಇಡೀ ನಗರವನ್ನೇ ತಂಪಾಗಿ ಇಡಲೆಂದು ತೈಲ ಉರಿಸಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುತ್ತಿವೆ.

ಜೊತೆಗೆ ಆ ಎಲ್ಲ ದೇಶಗಳೂ ಶ್ರೀಮಂತಿಕೆಯ ದ್ಯೋತಕವಾಗಿ ವಿವಿಧ ಬಗೆಯ ಭೋಗಸಾಮಗ್ರಿಗಳನ್ನು ಬಳಸುತ್ತಿವೆ. ಯಾರೂ ಅಂಥ ವೈಭೋಗಗಳನ್ನು ತ್ಯಾಗ ಮಾಡುವುದಿಲ್ಲ. ಮುಕ್ತ ಮಾರುಕಟ್ಟೆಯ ಸೌಲಭ್ಯ ಬಂದನಂತರ ಇತರ ದೇಶಗಳಿಗೂ ಅಂಥ ಭೋಗ ಸಾಮಗ್ರಿಗಳ ಹಾಗೂ ವಿದ್ಯುತ್ ಯಂತ್ರಗಳ ಸುನಾಮಿಯೇ ಬಂದಿದೆ.

ಇಪ್ಪತ್ತು ವರ್ಷಗಳ ಹಿಂದೆ ಬೀದಿತುಂಬ ಸೈಕಲ್‌ಗಳೇ ತುಂಬಿದ್ದ ಚೀನಾದಲ್ಲಿ ಈಗ ರಸ್ತೆಗಳನ್ನು ನಾಲ್ಕು ಪಟ್ಟು ಹಿಗ್ಗಿಸಿದರೂ ಸೈಕಲ್ ತುಳಿಯಲು ಜಾಗ ಇಲ್ಲದಂತೆ ಕಾರುಗಳು ತುಂಬಿವೆ. ಕಲ್ಲಿದ್ದಲ ಬಳಕೆಯ ನಿಯಂತ್ರಣಕ್ಕೆ ಮುಂದೊಂದು ದಿನ ಸಹಿ ಹಾಕಬೇಕಾದೀತೆಂದು ಚೀನಾ ಹತ್ತು ವರ್ಷಗಳ ಹಿಂದೆಯೇ ದೊಡ್ಡ ಯೋಜನೆ ಹಾಕಿಕೊಂಡಿತು. ಅವಸರದಲ್ಲಿ ವಾರಕ್ಕೊಂದು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುತ್ತ ಈಗ ಅದು ಇಂಗಾಲದ ಹೊಗೆ ಹೊಮ್ಮಿಸುವಲ್ಲಿ ಅಮೆರಿಕವನ್ನು ಹಿಂದಿಕ್ಕಿದೆ. ಕಲ್ಲಿದ್ದಲ ಬಳಕೆಯನ್ನು ಇನ್ನುಮೇಲೆ ಕಡಿಮೆ ಮಾಡಲು ಸಿದ್ಧನಿದ್ದೇನೆಂದು ಈಗ ಹೇಳುತ್ತಿದೆ.

ಸಹಜವಾಗಿಯೇ ಪ್ಯಾರಿಸ್‌ನಲ್ಲಿ ಈಗ ಎಲ್ಲರ ಕಣ್ಣು ನಮ್ಮ ಭಾರತದ ಕಡೆಗಿದೆ. ಭಯವೂ ಇದೆ. ಇನ್ನು ಹತ್ತು ವರ್ಷಗಳಲ್ಲಿ ಚೀನಾವನ್ನು ಮೀರಿಸಿ, ಅತಿ ಹೆಚ್ಚಿನ ಜನಸಂಖ್ಯೆಯ ದೇಶವಾಗಲಿದೆ ಇದು. ಈಗೇನೋ 30 ಕೋಟಿ ಜನರಿಗೆ ವಿದ್ಯುತ್ ಇಲ್ಲ. ಅದರ ಡಬಲ್ ಜನರಿಗೆ ವಿದ್ಯುತ್ ನಿರಂತರ ಸಿಗುತ್ತಿಲ್ಲ. ಇತರ ದೇಶಗಳಂತೆ ಇಲ್ಲಿ ಎಲ್ಲರನ್ನೂ ನಗರವಾಸಿಗಳನ್ನಾಗಿ ಮಾಡಿ, ಎಲ್ಲರ ಮನೆಯಲ್ಲೂ ಫ್ರಿಜ್, ವಾಷಿಂಗ್ ಮಶಿನ್ ಮತ್ತು ಮೋಟಾರು ವಾಹನ ಇರಬೇಕೆಂಬ ಕನಸನು ಹೊತ್ತು ನಮ್ಮ ನಾಯಕರೇನಾದರೂ ಚೀನಾ ಮಾದರಿಯಲ್ಲಿ ಮೈ ಕೊಡವಿ ಎದ್ದು ಹೊರಟರೆ ಇಡೀ ಭೂಮಿಗೆ ಪ್ರಳಯ ಬಂದೀತೆಂಬ ದಿಗಿಲು ಅದು. ಹಾಗೆ ಎದ್ದು ನಿಲ್ಲುವ ಎಲ್ಲ ಲಕ್ಷಣಗಳೂ ಸಿದ್ಧತೆಗಳೂ ಈಗ ಎದ್ದು ಕಾಣತೊಡಗಿವೆ.

ಚೀನಾ ಏನೋ ಇಂಗಾಲದ ಬಳಕೆಗೆ ಮಿತಿ ಹಾಕಲು ಸಜ್ಜಾಗಿದೆ. ಭಾರತ ಏನು ಮಾಡಬೇಕು? ವಾಯು ಮಂಡಲಕ್ಕೆ ಇಂಗಾಲದ ಹೊಗೆ ತುಂಬುವಲ್ಲಿ ಜಗತ್ತಿನ ಮೊದಲ ಐದು ದೇಶಗಳ ಸ್ಥಾನಮಾನ ಹೀಗಿದೆ: ಚೀನಾ ವರ್ಷಕ್ಕೆ 903 ಕೋಟಿ ಟನ್, ಅಮೆರಿಕ 533 ಕೋಟಿ, ಐರೋಪ್ಯ ದೇಶಗಳು ಒಟ್ಟೂ 366 ಕೋಟಿ, ಭಾರತ 186 ಕೋಟಿ, ರಷ್ಯ 171 ಕೋಟಿ. ಅಂದರೆ ಭಾರತ ಸಾಕಷ್ಟು ಹಿಂದೆ ಉಳಿದಿದೆ. ಇನ್ನು, ತಲಾವ್ಯಕ್ತಿಯ ಇಂಗಾಲ ವಿಸರ್ಜನೆಯ ಲೆಕ್ಕಾಚಾರದಲ್ಲಂತೂ ಭಾರತ ತೀರಾ ಹಿಂದಿದೆ. ಅಮೆರಿಕ 17 ಟನ್, ರಷ್ಯ 12, ಚೀನಾ 6.7 ಮತ್ತು ಭಾರತ ಬರೀ 1.7 ಟನ್. ನಮಗೂ ಅಭಿವೃದ್ಧಿಯ ಕನಸಿದೆ. ತೈಲದ ನಿಕ್ಷೇಪ ತೀರಾ ಕಡಿಮೆ ಇದೆ. ಆದರೆ ಕಲ್ಲಿದ್ದಲ ಸಂಪತ್ತು ಭರ್ಜರಿ ಇದೆ. ಯಾಕೆ ಉರಿಸಬಾರದು? ನಾವೂ ತಿಂಗಳಿಗೊಂದೊಂದು ಹೊಸ ಹೊಸ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಹೂಡಿಕೊಂಡರೆ ತಪ್ಪೇನಿದೆ?

ನೈತಿಕತೆಯ ನೆಲೆಗಟ್ಟಿನಲ್ಲಿ ಭಾರತವನ್ನು ಯಾರೂ ಪ್ರಶ್ನಿಸುವಂತಿಲ್ಲ. ಪಾಶ್ಚಾತ್ಯ ಶ್ರೀಮಂತರಂತೆ ಆಡಂಬರದ ಬದುಕು ಅಲ್ಲದಿದ್ದರೂ ಎರಡು ಹೊತ್ತಿನ ಊಟ, ಎರಡು ತೋಳುಗಳಿಗೆ ಕೆಲಸ, ಎರಡು ಬಲ್ಬ್‌ಗಳಿಗೆ ಬೆಳಕು ಸಿಗುವಷ್ಟಾದರೂ ಅಭಿವೃದ್ಧಿಯ ಹಕ್ಕು ನಮಗಿದೆ ಎಂದು ಅಂತರರಾಷ್ಟ್ರೀಯ ವೇದಿಕೆಯಲ್ಲಿ ವಾದಿಸಿದರೆ ಯಾರೂ ಅದನ್ನು ನಿರಾಕರಿಸುವುದಿಲ್ಲ. ಮೇಲಾಗಿ ಭಾರತ ತಾನೇ ಇತರ ರಾಷ್ಟ್ರಗಳಿಗೆ ಮೇಲ್ಪಂಕ್ತಿ ಹಾಕಲು ಹೊರಟಿದೆ.

ಸೌರ ವಿದ್ಯುತ್ ಉತ್ಪಾದನೆಯನ್ನು ಇನ್ನು ಏಳು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಿಸಿ ಒಂದು ಲಕ್ಷ ಮೆಗಾವಾಟ್‌ಗೆ ಏರಿಸಲಿದ್ದೇವೆಂದು ಪ್ರಧಾನಿ ಘೋಷಣೆ ಮಾಡಿದ್ದಾರೆ. ಬೇರೆ ಯಾವ ದೇಶವೂ ಸೌರ ವಿದ್ಯುತ್ತಿನ ಬಗ್ಗೆ ಇಷ್ಟೊಂದು ಭವ್ಯ ಬದ್ಧತೆಯನ್ನು ವ್ಯಕ್ತಪಡಿಸಿಲ್ಲ.

ಸಾಲದ್ದಕ್ಕೆ ವಾಯು ಮಂಡಲದ ಇಂಗಾಲವನ್ನು ಹೀರಿ ತೆಗೆಯಲೆಂದು ಪ್ರತಿ ವರ್ಷ ಇಂತಿಷ್ಟು ಕೋಟಿ ಹೆಕ್ಟೇರ್‌ಗಳಲ್ಲಿ ಗಿಡಮರಗಳನ್ನು ನೆಡುತ್ತೇವೆಂದು ಬೇರೆ ಘೋಷಣೆ ಮಾಡಲಾಗಿದೆ. ಬೇರೆ ದೇಶಗಳು ಹಾಗೆ ಮಾಡುವಂತಿಲ್ಲ, ಏಕೆಂದರೆ ಅಲ್ಲಿ ಅಷ್ಟೊಂದು ಜಾಗವೇ ಇಲ್ಲ!

ಎಲ್ಲಕ್ಕಿಂತ ಹೆಚ್ಚಿನ ಸಂಗತಿ ಏನೆಂದರೆ ಭಾರತವೇ ಹಿರಿಹುದ್ದರಿಯಾಗಿ ‘ಅಂತರರಾಷ್ಟ್ರೀಯ ಸೌರಶಕ್ತಿ ಮಂಡಲ’ ಎಂಬ ಹೊಸ ಸಂಘಟನೆಯನ್ನು ಹುಟ್ಟುಹಾಕಿದೆ. ಭೂಮಧ್ಯರೇಖೆಯ ಆಚೆ ಈಚಿನ ಹೆಚ್ಚು ಬಿಸಿಲು ಬೀಳುವ ಎಲ್ಲ ಚಿಕ್ಕ ದೊಡ್ಡ ದೇಶಗಳನ್ನೆಲ್ಲ ಒಗ್ಗೂಡಿಸಿ ಅಲ್ಲೆಲ್ಲ ಬಿಸಿಲಿನ ವಿದ್ಯುತ್ ಕ್ರಾಂತಿ ಮಾಡುವ ಯತ್ನದ ನಾಯಕತ್ವವನ್ನು ವಹಿಸಿಕೊಂಡಿದೆ. ಶ್ರೀಮಂತ ರಾಷ್ಟ್ರಗಳು ಮಾತಾಡುವ ಹಾಗೇ ಇಲ್ಲ.

ಆದರೂ ಗುಸುಗುಸು ಟೀಕೆಗಳು ಹೊಮ್ಮುತ್ತಲೇ ಇವೆ. ಏಕೆಂದರೆ ಮೇಲ್ನೋಟಕ್ಕೆ ಕಾಣದ ವಾಸ್ತವಗಳು ಬೇರೆಯೇ ಇವೆ. ಮೊದಲನೆಯದಾಗಿ, ಸೂರ್ಯನಿಂದ ವಿದ್ಯುತ್ ಪಡೆಯುವ ಕನಸು ಎಷ್ಟೇ ದೊಡ್ಡದಿದ್ದರೂ ಅದು ಹಗಲು ಕನಸು ಮಾತ್ರ. ಏಕೆಂದರೆ ಹಗಲು ಮಾತ್ರ ಸೌರವಿದ್ಯುತ್ತು ಸಿಗುತ್ತದೆ. ಅದನ್ನು ಶೇಖರಿಸಿ ಇಟ್ಟು ರಾತ್ರಿಗೆ ಬಳಸುವ ತಂತ್ರಜ್ಞಾನ ಇನ್ನೂ ಪಕ್ಕಾ ಯಶಸ್ವಿ ಆಗಿಲ್ಲ.

ಒಮ್ಮೆ ಯಶಸ್ಸು ಸಿಕ್ಕರೂ ಈಗ ಹಮ್ಮಿಕೊಂಡ ಭಾರೀ ಭಾರೀ ದೊಡ್ಡ ಔದ್ಯಮಿಕ ಕಾರಿಡಾರ್‌ಗಳು, ಸ್ಮಾರ್ಟ್ ಸಿಟಿಗಳು ಮತ್ತು ಮೇಕಿನ್ ಇಂಡಿಯಾ ಯೋಜನೆಗಳಿಗೆ ಬಂಡವಾಳ ಹರಿದು ಬಂದಿದ್ದೇ ಆದರೆ ಅವುಗಳನ್ನೆಲ್ಲ ಸಾಕಾರಗೊಳಿಸಲು ಕಲ್ಲಿದ್ದಲನ್ನು ಉರಿಸಲೇಬೇಕು.

ಅದು ನಿಜಕ್ಕೂ ಆತಂಕದ ವಿಚಾರ. ಚೀನಾದಲ್ಲೇನೋ ಉತ್ತಮ ಗುಣಮಟ್ಟದ ಕಲ್ಲಿದ್ದಲು ನಿಕ್ಷೇಪಗಳಿವೆ. ಅವನ್ನು ಉರಿಸಿದರೆ ಅಷ್ಟೊಂದು ಹೊಗೆ ಹೊಮ್ಮುವುದಿಲ್ಲ. ಆದರೆ ಭಾರತದ ಕಲ್ಲಿದ್ದಲು ಕಳಪೆ. ಹೊಗೆ ತೀರಾ ಜಾಸ್ತಿ, ಉಷ್ಣತೆ ಮಾತ್ರ ಕಮ್ಮಿ. ಅದು ನಮ್ಮ ತಪ್ಪಲ್ಲ. 120 ಕೋಟಿ ವರ್ಷಗಳ ಹಿಂದೆ ಅಂಟಾರ್ಕ್ಟಿಕಾ ಮತ್ತು ಆಸ್ಟ್ರೇಲಿಯಾ ಜೊತೆ ಭರತಖಂಡ ಬೆಸೆದುಕೊಂಡಿದ್ದಾಗ ನೆಲದೊಳಗೆ ಉತ್ತಮ ಕಲ್ಲಿದ್ದಲು ಜಮಾ ಆಗಿದ್ದವು.

ಕ್ರಮೇಣ ಆಸ್ಟ್ರೇಲಿಯಾದಿಂದ ಬೇರ್ಪಟ್ಟು ಜಾರುತ್ತ ಜಾರುತ್ತ ಹಿಮಾಲಯವನ್ನು ಎತ್ತಿ ನಿಲ್ಲಿಸುತ್ತ, ಚೀನಾದ ಗಡಿಯನ್ನು ಒತ್ತಿ ಸರಿಸುತ್ತ ಬರುವಾಗ ಭಾರತದ ಕಲ್ಲಿದ್ದಲ ಶಿಲಾಸ್ತರಗಳು ಅಲ್ಲಲ್ಲಿ ಭಗ್ನವಾಗಿ, ಚೂರುಚೂರಾಗಿ, ಕಲ್ಲುಮಣ್ಣಿನ ಜೊತೆ ಸೇರಿ ತಮ್ಮ ಗುಣಮಟ್ಟ ಕಳೆದುಕೊಂಡಿವೆ. ಹಾಗಾಗಿದ್ದು ನಮ್ಮ ಭರತಖಂಡದ ಪುಣ್ಯವೇ ಆಗಿತ್ತು. ಏಕೆಂದರೆ ಮಧ್ಯಪ್ರದೇಶ, ಬಿಹಾರ, ಛತ್ತೀಸಗಡ, ಜಾರ್ಖಂಡ್‌ಗಳಲ್ಲಿ ಎಲ್ಲ ದೊಡ್ಡ ನಿಕ್ಷೇಪಗಳ ಮೇಲೂ ದಟ್ಟ ಅರಣ್ಯ ಬೆಳೆದು ನಿಂತಿದೆ. ವಾತಾವರಣ ಸಮತೋಲಕ್ಕೆ, ಜೀವವೈವಿಧ್ಯದ ಶ್ರೀಮಂತಿಕೆಗೆ ಕಾರಣವಾಗಿದೆ. ಈಗ ಗಣಿಗಾರಿಕೆಯನ್ನು ವಿಸ್ತರಿಸಿದ್ದೇ ಆದರೆ ಅರಣ್ಯಗಳೆಲ್ಲ ನಿರ್ನಾಮ ಆಗುತ್ತವೆ. ಆದಿವಾಸಿಗಳೆಲ್ಲ ನಿರಾಶ್ರಿತರಾಗುತ್ತಾರೆ. ಇಂಗಾಲವನ್ನು ಹೀರಬಲ್ಲ ಗಿಡಮರಗಳನ್ನು ಧ್ವಂಸ ಮಾಡಿ ವಾತಾವರಣಕ್ಕೆ ಇಂಗಾಲದ ಹೊಗೆ ತುಂಬುವಂತಾಗುತ್ತದೆ. ಭಾರತ ಅದಕ್ಕೂ ಸಜ್ಜಾಗಿದೆ.

ನಾವೇನೋ ನಮ್ಮ ಬಡವರ ಸ್ಥಿತಿಗತಿಯನ್ನೇ ಪ್ಯಾರಿಸ್ಸಿನಲ್ಲಿ ಎತ್ತಿ ತೋರಿಸಿ ಖನಿಜ ಇಂಧನಗಳನ್ನು ಉರಿಸುವ ನೈತಿಕ ಹಕ್ಕನ್ನು ಬಲವಾಗಿ ಪ್ರತಿಪಾದಿಸಬಹುದು. ಆದರೆ ವಾಸ್ತವ ಏನೆಂದರೆ ಹಾಗೆ ಪಡೆಯುವ ವಿದ್ಯುತ್ತು ನಮ್ಮ ನಗರಗಳನ್ನು, ಹೆದ್ದಾರಿಗಳನ್ನು, ಉದ್ಯಮಗಳನ್ನು, ಮಾಲ್‌ಗಳನ್ನು ಮತ್ತು ಪಾರ್ಕ್‌ಗಳನ್ನು ಝಗಮಗಿಸುತ್ತದೆ ವಿನಾ ಬಡವರ ಗುಡಿಸಿಲನ್ನು ಬೆಳಗುತ್ತದೆಂಬ ಯಾವ ಭರವಸೆಯೂ ಇಲ್ಲ.

ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಶೇಕಡ 87 ಭಾಗಕ್ಕೆ ಸರ್ಕಾರದ ಸಬ್ಸಿಡಿ ಇದೆಯಾದರೂ ಅದರ ಶೇಕಡ 20 ಭಾಗವೂ ಉದ್ದೇಶಿತ ಗ್ರಾಮೀಣ ವಿಭಾಗವನ್ನು ತಲುಪುತ್ತಿಲ್ಲ. ಮುಂಬೈಯಲ್ಲಿ ಮುಕೇಶ್ ಅಂಬಾನಿಯವರ ‘ಅಂಟೀಲಿಯಾ’ ಕಟ್ಟಡವೊಂದಕ್ಕೇ ಪ್ರತಿ ತಿಂಗಳು 70 ಲಕ್ಷ ರೂಪಾಯಿಗಳಷ್ಟು ವಿದ್ಯುತ್ತು ವ್ಯಯವಾಗುತ್ತಿದೆ ಎಂಬ ಸುದ್ದಿ ಐದು ವರ್ಷಗಳ ಹಿಂದೆಯೇ ಬಂದಿತ್ತು. ಅಂಥ ಮಹಾಕೋಟ್ಯಧೀಶರ ಸಂಖ್ಯೆ ಪ್ರತಿ ನಗರದಲ್ಲೂ ಹೆಚ್ಚುತ್ತಿದೆ. ಅವರ ಬೇಡಿಕೆಗಳನ್ನೆಲ್ಲ ಪೂರೈಸಿ ಬಡವರ ಬಾಗಿಲಿಗೆ ಬರುವಷ್ಟು ಚೈತನ್ಯ ವಿದ್ಯುತ್ತಿಗೆ ಇದೆಯೆ? ಈಚೆಗೆ ಗ್ರಾಮೀಣ ಸೌರ ವಿದ್ಯುತ್ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಟ್ಟಭದ್ರರ ಕೈವಾಡ ಎಷ್ಟಿತ್ತೆಂಬುದು ವಿಧಾನ ಸಭೆಯಲ್ಲೇ ಚರ್ಚೆಗೆ ಬಂದಿತ್ತಲ್ಲ? ಬಡವರಿಗೆ ಅನುಕೂಲವಾಗಲೆಂದು ಡೀಸೆಲ್‌ಗೆ ರಿಯಾಯ್ತಿ ಘೋಷಿಸಿದರೆ ಅದರ ಲಾಭ ಪಡೆಯಲೆಂದು ದುಬಾರಿ ಲಕ್ಷುರಿ ಕಾರುಗಳು ತಯಾರಾಗುತ್ತಿಲ್ಲವೆ?

ಮೂರನೆಯದಾಗಿ ಇಲ್ಲಿನ ಹಿಂದುಳಿದವರ ಸ್ಥಿತಿಗತಿಯನ್ನೇ ಮುಂದಿಟ್ಟುಕೊಂಡು, ‘ನಮಗೂ ಸುಖಮಯ ಬದುಕು ಬೇಕು; ಅದಕ್ಕಾಗಿ ಮಾಲಿನ್ಯವಿಲ್ಲದ ನಿತ್ಯನೂತನ ಇಂಧನ ಬಳಸಲು ಸಿದ್ಧರಿದ್ದೇವೆ, ನಿಮ್ಮ ತಂತ್ರಜ್ಞಾನ ಕೊಡಿ’ ಎಂದು ನಾವೇನೋ ಶ್ರೀಮಂತ ರಾಷ್ಟ್ರಗಳನ್ನು ಕೇಳುತ್ತೇವೆ. ಕಳೆದ ಹದಿನೈದು ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ಆದರೆ ನಿಜಕ್ಕೂ ಅಂಥ ಹಿಂದುಳಿದವರ ಬದುಕನ್ನು ಮೇಲೆತ್ತಲು ಕ್ಲಿಷ್ಟ, ದುಬಾರಿಯ ವಿದೇಶೀ ತಂತ್ರಜ್ಞಾನ ಅಗತ್ಯವಿದೆಯೆ? ಅಷ್ಟೊಂದು ಬಾರಿ ವಿದೇಶಗಳಿಗೆ ಪ್ರವಾಸ ಹೋಗಿ ಬರುವ ನಮ್ಮ ವಿಜ್ಞಾನಿಗಳು ಹಳ್ಳಿಯ ಜನರ ಬದುಕಿನ ಗುಣಮಟ್ಟ ಸುಧಾರಿಸಬಲ್ಲ ಒಂದಾದರೂ ತಂತ್ರಜ್ಞಾನವನ್ನು ರೂಪಿಸಿದ್ದಾರೆಯೆ? ಸಾಬೂನು, ಪೇಸ್ಟು, ಸೊಳ್ಳೆಬತ್ತಿ ತಯಾರಿಕೆಯಂಥ ಸರಳ ತಂತ್ರಜ್ಞಾನವೂ ದೊಡ್ಡ ಉದ್ಯಮಿಗಳ ಮುಷ್ಟಿಯಲ್ಲೇ ಸಿಲುಕಿದೆ. ಕುರುಕಲು ತಿಂಡಿಯನ್ನೂ ಬಹುರಾಷ್ಟ್ರೀಯ ಕಂಪನಿಗಳು ಬಾಚಿಕೊಂಡಿವೆ. ಕೈಮಗ್ಗದ ಬದಲು ವಿದ್ಯುತ್ ಮಗ್ಗದ ಆಸೆಗೆ ಬಿದ್ದು ಇತ್ತ ಕೈಮಗ್ಗವೂ ಇಲ್ಲ, ಅತ್ತ ವಿದ್ಯುತ್ತೂ ಇಲ್ಲದ ಅತಂತ್ರ ಸ್ಥಿತಿಯಲ್ಲಿ ನೇಕಾರರು ಸಿಲುಕಿದ್ದಾರೆ. ಹೊಗೆಯಿಲ್ಲದ ಸೌದೆ ಒಲೆ, ನೀರು ಬೇಡದ ಒಣಶೌಚಗಳಂಥ ಸರಳ ತಂತ್ರಜ್ಞಾನವನ್ನೂ ತಳಮಟ್ಟಕ್ಕೆ ಒದಗಿಸಲು ನಾವು ಶಕ್ತವಾಗಿಲ್ಲ.

ಆದರೆ ಶಕ್ತಭಾರತವೊಂದರ ಮಹಾನ್ ಕನಸು ನಮ್ಮೆದುರು ಬಿಚ್ಚಿಕೊಳ್ಳುತ್ತಿದೆ. ಜಗತ್ತಿನ ಅತಿ ದೊಡ್ಡ ಮಿಲಿಟರಿ ಖರೀದಿದಾರರು ನಾವು; ಅತಿಮಳೆ, ಅತಿಚಳಿ, ಅತಿಸೆಕೆ, ಅತಿಹಿಮವೇ ಮುಂತಾದ ಸಂಕಷ್ಟಗಳನ್ನೇ ಚರಿತ್ರೆಯುದ್ದಕ್ಕೂ ಹಾಸಿ ಹೊದೆದಿರುವ ಅತಿ ಹೆಚ್ಚು ಗ್ರಾಮೀಣ ಪ್ರಜೆ ಗಳಿರುವ ರಾಷ್ಟ್ರ ನಮ್ಮದು. ಪ್ಯಾರಿಸ್ಸಿನ ಶೃಂಗಸಭೆಯಲ್ಲಿ ಜಗತ್ತಿಗೇ ಅತಿ ದೊಡ್ಡ ಅಚ್ಚರಿಯನ್ನು ನೀಡುವ ಹಕ್ಕು ನಮಗಿಲ್ಲವೆ?

                           ಕಪ್ಪೆ ಅಲ್ಲ, ಮನುಷ್ಯನ ಕತೆ

 ಒಂದು ಕಾರ್ಟೂನ್‌ ಕಪ್ಪೆ ಇದೆ. ಗಾಜಿನ ಪಾತ್ರೆಯಲ್ಲಿ ನೀರು ಕುದಿಯಲು ಆರಂಭವಾಗಿದೆ. ಆಗ ಆ ಕಪ್ಪೆಯನ್ನು ಯಾರೋ ಪಾತ್ರೆಗೆ ಹಾಕಿ ಬಿಡುತ್ತಾರೆ. ಹಠಾತ್ತಾಗಿ ಕುದಿನೀರಿಗೆ ಬಿದ್ದು ಹೌಹಾರಿದ ಕಪ್ಪೆ ಚಡಪಡಿಸಿ ಛಕ್ಕನೆ ಹೊರಕ್ಕೆ ಕುಪ್ಪಳಿಸುತ್ತದೆ.

ಅದೇ ಕಪ್ಪೆಯನ್ನು ಮತ್ತೆ ಹಿಡಿದು ಈ ಬಾರಿ ತಣ್ಣನೆಯ ನೀರಿನ ಪಾತ್ರೆಯಲ್ಲಿ ಮುಳುಗಿಸುತ್ತಾರೆ. ಕಪ್ಪೆ ಹಾಯಾಗಿ ಪಿಳಿಪಿಳಿ ಕಣ್ಣು  ಬಿಡುತ್ತಾ ಕೂರುತ್ತದೆ. ಪಾತ್ರೆಯ ಕೆಳಗಡೆ ಈಗ ಬೆಂಕಿ ಹಚ್ಚುತ್ತಾರೆ. ನೀರು ನಿಧಾನವಾಗಿ ಬಿಸಿಯಾಗುತ್ತದೆ. ಕಪ್ಪೆಗೆ ಇದು ಗೊತ್ತಾಗುವುದೇ ಇಲ್ಲ. ಕ್ರಮೇಣ ನೀರಿನ ಉಷ್ಣತೆ ಹೆಚ್ಚುತ್ತದೆ. ಕಪ್ಪೆಗೆ ಆಗಲೂ ಗೊತ್ತಾಗುವುದಿಲ್ಲ. ಉಷ್ಣತೆ ಮತ್ತಷ್ಟು ಏರುತ್ತದೆ. ಕಪ್ಪೆ ತುಸು ಚಡಪಡಿಸಿ ಮತ್ತೆ ಅಲ್ಲೇ ಹೇಗೋ ಹೊಂದಿಕೊಂಡು ಕೂರುತ್ತದೆ. ಉಷ್ಣತೆ  ಹೆಚ್ಚಾಗುತ್ತಾ ಹೋದಂತೆ ಗಾಜಿನ ಪಾತ್ರೆಯೊಳಗಿನ ಕಪ್ಪೆಯನ್ನು ನೋಡಿದರೆ ಅಲ್ಲಿ ಅದರ ಶವ ತೇಲುತ್ತಿರುತ್ತದೆ.

ಭೂಮಿಯ ಉಷ್ಣತೆ ಹಠಾತ್ ಏರಿದರೆ ನಾವೆಲ್ಲಾ ಗಡಬಡಿಸಿ ಅದರಿಂದ ಪಾರಾಗುವ ಮಾರ್ಗವನ್ನು ತಕ್ಷಣವೇ ಹುಡುಕುತ್ತೇವೆ. ಆದರೆ ನಿಧಾನಕ್ಕೆ ಉಷ್ಣತೆ ಏರುತ್ತಿದ್ದರೆ, ಅದು ನಮಗೆ ತಟ್ಟಲೇ ಇಲ್ಲವೆಂಬಂತೆ ಹೇಗೋ ಹೊಂದಿಕೊಂಡು ಒಂದು ದಿನ ಇಡೀ ಮಾನವ ಜನಾಂಗ, ಜೀವ ಸಂಕುಲ ನಿರ್ನಾಮ ಆಗುತ್ತದೆ.

[ಆಧಾರ:  ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅವರ ‘ಕೊಪೆನ್‌ಹೇಗನ್‌ ಋತುಸಂಹಾರ’ ಪುಸ್ತಕ]