ಬಂಡವಾಳಶಾಹಿಗಳ ಕೈಗೆ ಶಿಕ್ಷಣದ ಜುಟ್ಟು-ಸಾಹಿತಿ ದೇವನೂರ ಮಹಾದೇವ ಕಳವಳ

[ಕೆ.ಆರ್ ಪೇಟೆಯ ಶತಮಾನದ ಶಾಲೆ ಆವರಣದಲ್ಲಿ ‘ಸಮಾನ ಶಿಕ್ಷಣ ಜನಾಂದೋಲನಾ ಸಮಿತಿ’ ಆಶ್ರಯದಲ್ಲಿ ಶನಿವಾರ ನಡೆದ ಜಾಗೃತಿ ಸಭೆಯಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು]

ಕೆ.ಆರ್ ಪೇಟೆ: ‘ದೇಶದಲ್ಲಿ ಬಂಡವಾಳಶಾಹಿಗಳು ಹಾಗೂ ರಾಜಕಾರಣಿಗಳು ಶಿಕ್ಷಣ ನೀತಿ ರೂಪಿಸುತ್ತಿರುವುದರಿಂದ ಸಮಾನ ಶಿಕ್ಷಣ ಗಗನಕುಸುಮವಾಗಿದೆ’ ಎಂದು ಸಾಹಿತಿ ದೇವನೂರ ಮಹಾದೇವ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಶತಮಾನದ ಶಾಲೆ ಆವರಣದಲ್ಲಿ ಸಮಾನ ಶಿಕ್ಷಣ ಜನಾಂದೋಲನಾ ಸಮಿತಿ ಆಶ್ರಯದಲ್ಲಿ ಶನಿವಾರ ನಡೆದ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಜಾಗೃತಿ ಸಭೆಯಲ್ಲಿ ‘ಸರ್ಕಾರಿ ಶಾಲೆ ಉಳಿಸಿ’ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣತಜ್ಞರು ಶಿಕ್ಷಣ ರೂಪಿಸಬೇಕೇ ಹೊರತು ರಾಜಕಾರಣಿಗಳಲ್ಲ. ಆದರೆ, ದೇಶದಲ್ಲಿ ಶಿಕ್ಷಣದ ಜುಟ್ಟು ಬಂಡವಾಳಶಾಹಿಗಳು, ಮಠಾಧೀಶರ ಕೈಗೆ ಸಿಲುಕಿ ಅವರು ಹೇಳಿದಂತೆ ರಾಜಕಾರಣಿಗಳು ಶಿಕ್ಷಣ ರೂಪಿಸಲು ಹೊರಟಿದ್ದಾರೆ. ಇದರಿಂದ ಸಮಾನ ಶಿಕ್ಷಣ ಮರೀಚಿಕೆಯಾಗಿದೆ ಎಂದರು.

ವರ್ತಮಾನದ ಅವಶ್ಯಕತೆಗೆ ಅನುಗುಣವಾಗಿ ಶಿಕ್ಷಣ ರೂಪಿಸುವ ಕೆಲಸ ಆಗುತ್ತಿಲ್ಲ. ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ ಬೇರೆ ದಾರಿ ತುಳಿಯುತ್ತಿದೆ. ತಮಗಾಗದವರ ಧ್ವನಿ ಅಡಗಿಸಲು ಅಧಿಕಾರದಲ್ಲಿರುವವರು ದೇಶಪ್ರೇಮದ ಕತೆ ಎಳೆದು ತರುತ್ತಾರೆ. ಇದು ನಿಲ್ಲಬೇಕು. ಈಗ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಬೇಸರ ತರಿಸುವಂತಹವು ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆ ಮುಚ್ಚಿದರೆ ಬಡವರು ಮತ್ತು ಮಧ್ಯಮ ವರ್ಗದವರಿಗೆ ಗುಣಾತ್ಮಕ ಶಿಕ್ಷಣ ಮರೀಚಿಕೆಯಾಗಲಿದೆ. ಸರ್ಕಾರಿ ಶಾಲೆ ಉಳಿಸಲು ಎಲ್ಲಾ ವರ್ಗಗಳ ಜನರು ಹೋರಾಟ ನಡೆಸಬೇಕಿದೆ. ರಾಜ್ಯದಲ್ಲಿ ನೆರೆರಾಜ್ಯಗಳ ಪದ್ಧತಿ ಜಾರಿಗೊಳಿಸುವ ಮೂಲಕ ಕನ್ನಡ ಶಾಲೆ ಉಳಿಸುವ ಪ್ರಯತ್ನ ಮಾಡಬಹುದು ಎಂದರು.

ಭಾಷೆ ವಿಷಯದಲ್ಲಿ ನ್ಯಾಯಾಂಗ ಮೂಗು ತೂರಿಸುವುದು ಒಳ್ಳೆಯ ಲಕ್ಷಣವಲ್ಲ. ಹಾಗೆಯೇ, ಶಾಸಕಾಂಗವು ನೆಲ, ಜಲ ಮತ್ತು ಭಾಷೆ ವಿಷಯದಲ್ಲಿ ಅನ್ಯಾಯವಾದಾಗ ನ್ಯಾಯಾಂಗಕ್ಕೆ ಹೆದರಿ ಕೂರುವ ಅಗತ್ಯವಿಲ್ಲ. ಭಾಷೆ ಉಳಿಸಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದರು.

ಸರ್ಕಾರಿ ಶಾಲೆ ಉಳಿಯದಿದ್ದರೆ ಬಡವರು ಹಾಗೂ ಶೋಷಿತರ ಪಾಲಿಗೆ ಶಿಕ್ಷಣ ಕನಸಿನ ಗಂಟಾಗಿ ಉಳಿಯಲಿದೆ. ಶಿಕ್ಷಣದಿಂದ ವಂಚಿತರಾಗುವ ಬಡವರ ಮಕ್ಕಳು ಅನಿವಾರ್ಯವಾಗಿ ಗುಲಾಮಗಿರಿ ಕಡೆಗೆ ಹೆಜ್ಜೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.