ಪ್ಲಾಸ್ಟಿಕ್‌ಗೆ ಪರ್ಯಾಯದ ಕಿರುದಾರಿ-ಕರ್ನಾಟಕ ದರ್ಶನ

 ‌                                                                                    ಪರ್ಯಾಯ ಹಾದಿ

                                                                                                                                                                                  ಸುಮಲತಾ ಎನ್.

[ಸಮನ್ವಿ ಭೋಗರಾಜ್ –ಚಿತ್ರಗಳು: ಎಂ.ಎಸ್. ಮಂಜುನಾಥ್]

‘ನಾವು ಚಿಕ್ಕವರಿದ್ದಾಗ, ಅಂಗಡಿಗೆ ಹೋಗುವಾಗ ಕೈಯಲ್ಲೊಂದು ಬ್ಯಾಗ್ ಇರುತ್ತಿತ್ತು. ಹೋಟೆಲ್‌ಗೆ ಹೋದಾಗ ಬಾಳೆ ಎಲೆಯಲ್ಲಿ ತಿಂಡಿ ಕಟ್ಟಿಕೊಡುತ್ತಿದ್ದರು. ಅದರ ರುಚಿಯೂ ಅದ್ಭುತವಾಗಿರುತ್ತಿತ್ತು. ಆದರೆ ಪ್ಲಾಸ್ಟಿಕ್ ಎನ್ನುವ ಸಮಸ್ಯೆ ಅದ್ಯಾವಾಗ ಕೈ ಸೇರಿತೋ ಗೊತ್ತೇ ಆಗಲಿಲ್ಲ. ಅನುಕೂಲದ ಹೆಸರಿನಲ್ಲಿ ಆರೋಗ್ಯವನ್ನೂ ಹದಗೆಡಿಸಿಕೊಂಡೆವು, ಪರಿಸರದ ಆರೋಗ್ಯವನ್ನೂ ಕೆಡಿಸಿದೆವು’… ಸಮನ್ವಿ ಅವರ ಈ ಮಾತುಗಳು, ಪ್ಲಾಸ್ಟಿಕ್‌ನ ಪರಿಣಾಮದ ಗಾಢತೆಯನ್ನು ವಿವರಿಸುವಂತಿದ್ದವು.

ಇದೇ ಸಮಸ್ಯೆಯ ಆಳ ಅವರನ್ನು ಪ್ಲಾಸ್ಟಿಕ್‌ಗೆ ಬದಲಿ ಹುಡುಕಾಟ ನಡೆಸಲು ಪ್ರೇರೇಪಿಸಿದ್ದು. ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಂಬಿಎ ಮುಗಿಸಿರುವ ಸಮನ್ವಿ ಅವರು ಕಾಲೇಜು ದಿನಗಳಲ್ಲೇ ಪರಿಸರಕ್ಕೆ ಉಪಯೋಗಿಯಾಗುವಂಥ ಯೋಜನೆಗಳನ್ನು ರೂಪಿಸಿದ್ದವರು. ಆಗಲೇ ಕಡಿಮೆ ಖರ್ಚಿನಲ್ಲಿ ರೈತಸ್ನೇಹಿ ಹಾಗೂ ಕಡಿಮೆ ಶಕ್ತಿ ಬಳಸುವ ಮೋಟಾರ್ ಅಭಿವೃದ್ಧಿಪಡಿಸಿದ್ದರು. ಆ ಯೋಜನೆಯೇ ಅವರ ಮುಂದಿನ ಆಲೋಚನೆಗಳಿಗೂ ತಳಪಾಯವಾಯಿತು.

ಪ್ಲಾಸ್ಟಿಕ್‌ ಪರ್ಯಾಯವನ್ನೇ ಮೂಲವಾಗಿಟ್ಟುಕೊಂಡು 2011ರಲ್ಲಿ ವಿಸ್‌ಫೋರ್ಟೆಕ್‌ ಕಂಪೆನಿ ಆರಂಭಿಸಿದರು. ಇದರಲ್ಲಿ ಮೊದಲ ಹೆಜ್ಜೆಯಾಗಿ ತೊಡಗಿಕೊಂಡಿದ್ದು ‘ಬಯೋಪ್ಲಾಸ್ಟಿಕ್‌’ ಪ್ರಯೋಗದಲ್ಲಿ. ಜೋಳದ ಗಂಜಿ (ಕಾರ್ನ್‌ಸ್ಟಾರ್ಚ್‌) ಬಳಸಿ ಕೈಚೀಲ ತಯಾರಿಸಲು ಆರಂಭಿಸಿದರು. ಪರಿಸರಸ್ನೇಹಿಯಾದ ಈ ಪ್ರಯೋಗ ಯಶಸ್ವಿಯಾದರೂ ಇದರ ಸೂಕ್ತ  ವಿಲೇವಾರಿಗೆ ಭಾರತದಲ್ಲಿ ವ್ಯವಸ್ಥೆ ಇಲ್ಲದ ಕಾರಣ ಪ್ರಯೋಗಕ್ಕೆ ತಡೆಯಾಯಿತು.

ಆದರೆ ಸಮನ್ವಿ ಅವರ ಹುಡುಕಾಟ ಕೊನೆಗೊಳ್ಳಲಿಲ್ಲ. ಪ್ಲಾಸ್ಟಿಕ್‌ಗೆ  ಸಂಬಂಧಿಸಿದಂತೆ ನಿರಂತರ ಸಂಶೋಧನೆಗಳನ್ನು ಮಾಡಿದರು. ಪ್ಲಾಸ್ಟಿಕ್‌ ಹೆಚ್ಚು ಬಳಕೆಯಾಗುತ್ತಿರುವ ಕ್ಷೇತ್ರ, ಅದಕ್ಕೆ ಕಂಡುಕೊಳ್ಳಬಹುದಾದ ಪರ್ಯಾಯವನ್ನು ಬೆಂಬಿಡದೇ ಶೋಧಿಸಿದರು.

‘ನಮ್ಮಲ್ಲಿ ಪ್ಲಾಸ್ಟಿಕ್ ಹೆಚ್ಚು ಬಳಕೆಯಾಗುವುದು ಆಹಾರದ ವಿಷಯದಲ್ಲಿ. ಎಲ್ಲಿಗೇ ಹೋದರೂ, ಏನೇ ಸಮಾರಂಭ ಮಾಡಿದರೂ ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಉಪಯೋಗಿಸಿ ಬಿಸಾಡುವುದು ರೂಢಿಯೇ ಆಗಿಬಿಟ್ಟಿದೆ. ಅದರ ಪರಿಣಾಮದ ಕುರಿತು ಕಿಂಚಿತ್ತೂ ಕಾಳಜಿಯಿಲ್ಲ. ಆದ್ದರಿಂದ ‘ಅರ್ಥ್‌ವೇರ್‌’ ಎಂಬ ಹೆಸರಿನಲ್ಲಿ ‘ಟೇಬಲ್ ವೇರ್‌’ (ಊಟದ ಪರಿಕರಗಳು) ತಯಾರಿಸುವುದನ್ನು ಆದ್ಯತೆಯಾಗಿಸಿಕೊಂಡೆ. ಎಸೆದರೂ ನೆಲದಲ್ಲಿ ಗೊಬ್ಬರವಾಗುವ ಈ ವಸ್ತುಗಳನ್ನು ತಯಾರಿಸಿದೆ’ ಎಂದು ವಿವರಿಸುತ್ತಾರೆ ಸಮನ್ವಿ.

ನಾರು, ಕೃಷಿ ತ್ಯಾಜ್ಯವೇ ಮೂಲ
ಕಬ್ಬು, ಗೋಧಿ ಹುಲ್ಲು, ಬಿದಿರು, ಮಾವು ಸೇರಿದಂತೆ ಕೃಷಿ ತ್ಯಾಜ್ಯವನ್ನು ಉಪಯೋಗಿಸಿಕೊಂಡು ಪರಿಸರಸ್ನೇಹಿ ಸಾಮಗ್ರಿಗಳನ್ನು ತಯಾರಿಸುವ ಆಲೋಚನೆಯನ್ನು ಕಾರ್ಯರೂಪಕ್ಕೆ ಇಳಿಸಿದರು ಸಮನ್ವಿ. ಕಚ್ಚಾ ಪದಾರ್ಥಗಳನ್ನು ಬೇರೆಡೆಯಿಂದಲೂ ತರಿಸಿಕೊಂಡು ಅವುಗಳಿಗೆ ಅಚ್ಚಿನಲ್ಲಿ ಆಕಾರ ನೀಡಿ, ಒಣಗಿಸಿ ಅಂತಿಮ ಸ್ಪರ್ಶ ನೀಡುತ್ತಾರೆ. ನೋಡಲು ಪ್ಲಾಸ್ಟಿಕ್‌ನಂತೆಯೇ ಕಂಡರೂ ಒಂದಿನಿತೂ ಪ್ಲಾಸ್ಟಿಕ್ ಅಂಶ ಇದರಲ್ಲಿಲ್ಲ. ಎಸೆದ ಸುಮಾರು ತೊಂಬತ್ತು ದಿನಗಳಲ್ಲಿ ಮಣ್ಣಿನಲ್ಲಿ ಸಂಪೂರ್ಣ ಕರಗಿಹೋಗುತ್ತದೆ.

ಸಂಪೂರ್ಣ ಪ್ಲಾಸ್ಟಿಕ್‌ನಂತೆ ಕಾಣುವ ಭಿನ್ನ ಭಿನ್ನ ಗಾತ್ರದ ತಟ್ಟೆ, ಲೋಟ, ಬಟ್ಟಲು, ಕಪ್‌, ಮೀಲ್ ಟ್ರೇ, ಊಟದ ಡಬ್ಬಿ, ಕಟ್ಲೆರಿಗಳನ್ನು, ಮರದ ಚಮಚಗಳನ್ನೂ ತಯಾರಿಸುತ್ತಿದ್ದಾರೆ. ಆಹಾರ ಸೋರದಂತೆ ಹಾಗೂ ನೀರು ಮತ್ತು ಎಣ್ಣೆಯನ್ನು ತಡೆಯುವಂತೆ ಇವುಗಳನ್ನು ವಿನ್ಯಾಸ ಮಾಡಲಾಗಿದೆ. ಮೈಕ್ರೊ ಓವನ್‌ನಲ್ಲೂ ಇವುಗಳನ್ನು ಇಡಬಹುದು.

ಅಣಬೆಯಿಂದಲೂ ಈ ರೀತಿ ಸಾಮಗ್ರಿಗಳನ್ನು ತಯಾರಿಸುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದ ಸಮನ್ವಿ ಅವರು, ಹಲವು ಗಿಡಗಳ ನಾರಿನ ಕುರಿತೂ  ಮಾಹಿತಿ ಕಲೆ ಹಾಕಿದರು. ಒಂದಷ್ಟು ದಿನಗಳನ್ನು ಪ್ರಯೋಗಗಳಿಗೆ ಮೀಸಲಿಟ್ಟರು.

ಕೊನೆಗೂ ಪ್ರಯತ್ನ ಕೈಗೂಡಿತು. ಆದರೆ ಈ ನಿಟ್ಟಿನಲ್ಲಿ ಮುಂದುವರೆಯುವುದು ಸುಲಭದ ದಾರಿಯಾಗಿರಲಿಲ್ಲ. ಗ್ರಾಹಕರ ಮನಸ್ಥಿತಿ ಬದಲಾಯಿಸುವುದು ಅಂದುಕೊಂಡಷ್ಟು ಸರಳವೂ ಅಲ್ಲ. ಅತಿ ಕಡಿಮೆ ಬೆಲೆಗೆ ಪ್ಲಾಸ್ಟಿಕ್ ಸಿಗುವಾಗ ಒಂದಿಷ್ಟು ಹೆಚ್ಚಿಗೆ ದುಡ್ಡು ಕೊಟ್ಟು ಏಕೆ ತೆಗೆದುಕೊಳ್ಳಬೇಕು ಎಂಬ ಗ್ರಾಹಕರ ಪ್ರಶ್ನೆಯೇ ಅವರಿಗೆ ಸವಾಲಾಗಿಬಿಟ್ಟಿತ್ತು. ಆದರೆ ಎಲ್ಲವೂ ಅನುಕೂಲವಾಗಿಯೇ ಇರಬೇಕು ಎನ್ನುವ ಗ್ರಾಹಕರ ಮನಸ್ಥಿತಿ ಬದಲಾದರೆ ಮಾತ್ರ ನೈಸರ್ಗಿಕ ಉತ್ಪನ್ನಗಳ ಬಳಕೆ ಅಗಾಧ ಮಟ್ಟದಲ್ಲಿ ಬೆಳೆಯುತ್ತದೆ ಎಂಬುದು ಸಮನ್ವಿ ಅಭಿಪ್ರಾಯ.

ಹೆಚ್ಚಿತು ಬೇಡಿಕೆ: ಆರಂಭದಲ್ಲಿ ಇದರೆಡೆಗೆ ನಿರ್ಲಕ್ಷ್ಯ ತೋರಿದವರೇ ಹೆಚ್ಚಾದರೂ ಪರಿಸರದೆಡೆಗೆ ಕಾಳಜಿ ಹೊತ್ತ ಕೆಲವರು ಇತ್ತ ಹೊರಳಿದರು. ಪಾರ್ಟಿಗಳಿಗೆ, ಮದುವೆ ಮನೆಗಳಲ್ಲಿ ಈ ವಸ್ತುಗಳನ್ನು ಕೊಂಡುಕೊಳ್ಳಲು ಆರಂಭಿಸಿದರು. ವಸತಿ ಸಮುದಾಯಗಳಲ್ಲಿ ಕೊಳ್ಳುವ ಮಂದಿ ಹೆಚ್ಚಿದರು. ನಗರದ ಹಲವೆಡೆಗಳಿಂದ ಸಣ್ಣ ಸಣ್ಣ ಸಮಾರಂಭಗಳಿಗೆ ಇವುಗಳನ್ನು ಕೊಳ್ಳುವ ಜನರೂ ಅಧಿಕವಾದರು.

‘ಹಲವಾರು ಹೋಟೆಲ್‌ಗಳು, ಸ್ವೀಟ್‌ ಅಂಗಡಿಗಳು, ಆಹಾರಕ್ಕೆ ಸಂಬಂಧಿಸಿದ ಉದ್ಯಮಗಳು ಪ್ಲಾಸ್ಟಿಕ್ ತ್ಯಜಿಸಲು ತೀರ್ಮಾನಿಸಿ ಪರಿಸರಸ್ನೇಹಿಯಾಗುತ್ತಿರುವುದು ಧನಾತ್ಮಕ ಬೆಳವಣಿಗೆ. ಇತ್ತೀಚೆಗೆ, ಅಂದರೆ ಒಂದು ವರ್ಷದಿಂದ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಪ್ಲಾಸ್ಟಿಕ್ ನಿಷೇಧದ ನಂತರ ಕಂಪೆನಿಗಳು ಇದರೆಡೆಗೆ ಮನಸ್ಸು ಮಾಡುತ್ತಿವೆ’ ಎನ್ನುತ್ತಾರೆ ಅವರು.

ಪ್ಲಾಸ್ಟಿಕ್‌ಗೆ ಹೋಲಿಸಿದರೆ ಇದರ ಬೆಲೆ ಸ್ವಲ್ಪ ಜಾಸ್ತಿ ಎನ್ನುವುದನ್ನು ಒಪ್ಪಿಕೊಳ್ಳುವ ಸಮನ್ವಿ, ಬೇರೆ ವಿಧಕ್ಕಿಂತ ಇದರದ್ದು ಶೇಕಡಾ 10ರಷ್ಟು  ಬೆಲೆ ಹೆಚ್ಚಿರಬಹುದು. ಆದರೆ ಇವುಗಳ ಬಳಕೆ ಹೆಚ್ಚಿನ ಮಟ್ಟದಲ್ಲಾದರೆ ಬೆಲೆಯೂ ತಗ್ಗುತ್ತದೆ. ಸಗಟು ವ್ಯಾಪಾರದಲ್ಲಿ ಇನ್ನೂ ಕಡಿಮೆ ಬೆಲೆ ಎನ್ನುತ್ತಾರೆ.

ಮಹಿಳೆಯರಿಗೆ, ಅಂಗವಿಕಲರಿಗೆ ಆದ್ಯತೆ: ಬೆಂಗಳೂರಿನ ಜಾಲಹಳ್ಳಿಯಲ್ಲಿ ರುವ ವಿಸ್‌ಫೋರ್ಟೆಕ್ ಕಂಪೆನಿಯಲ್ಲಿ ಮಹಿಳೆಯರು ಹಾಗೂ ಅಂಗವಿಕಲರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಈ ಸಾಮಗ್ರಿಗಳ ತಯಾರಿಕೆ ಸರಳವಾದ್ದರಿಂದ, ಜೊತೆಗೆ ಅಂಗವಿಕಲರಿಗೂ ನೆರವಾಗುವ ದೃಷ್ಟಿಯಿಂದ ಅವರಿಗೆ ಆದ್ಯತೆ ನೀಡಲಾಗಿದೆ.

ಸಮನ್ವಿ ಅವರೇ ಎಲ್ಲರಿಗೂ ತರಬೇತಿ ನೀಡುತ್ತಾರೆ. ನಗರದಲ್ಲೇ ಹೆಚ್ಚು ಬೇಡಿಕೆ ಇರುವುದರಿಂದ ಹಳ್ಳಿಗಳಲ್ಲೂ ಮಹಿಳೆಯರನ್ನು ಒಟ್ಟುಗೂಡಿಸಿ ಕೆಲಸ ನೀಡಲಾಗುತ್ತಿದೆ.ತುಮಕೂರು, ನೆಲಮಂಗಲ, ಮೈಸೂರು ಕಡೆಗಳ ಮಹಿಳೆಯರೂ ಇದಕ್ಕೆ ಕೈ ಜೋಡಿಸಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದಲೂ ಬೇಡಿಕೆ ಹೆಚ್ಚಿರುವುದರಿಂದ ಗ್ರಾಮಗಳಲ್ಲಿ ಮಹಿಳೆಯರಿಗೆ ಈ  ಉದ್ಯಮದ ಕುರಿತು ಜಾಗೃತಿಯನ್ನೂ ಮೂಡಿಸಲಾಗುತ್ತಿದೆಯಂತೆ.

ಪ್ಯಾಕೇಜಿಂಗ್‌ನೆಡೆಗೆ ನಡೆ
ಆಹಾರದ ಹೊರತಾಗಿ ಪ್ಯಾಕೇಜಿಂಗ್‌ಗೆ ಪ್ಲಾಸ್ಟಿಕ್ ಅನ್ನು ಹೆಚ್ಚು ಬಳಸುತ್ತಿದ್ದೇವೆ. ಎಲೆಕ್ಟ್ರಾನಿಕ್ಸ್‌, ಜವಳಿ ಉದ್ಯಮದಲ್ಲಂತೂ ಪ್ಲಾಸ್ಟಿಕ್‌ ಬಳಕೆ ಮುಕ್ಕಾಲು ಪಾಲಿದೆ.ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಇನ್ನೂ ಕಷ್ಟಕರ. ಯಾವುದೇ ವಸ್ತುಗಳನ್ನು ಪ್ಯಾಕ್ ಮಾಡಲೆಂದು ಥರ್ಮೊಕೋಲ್ ಬಳಸಲಾಗುತ್ತದೆ. ಪುಟ್ಟ ವಸ್ತುವನ್ನು ಪ್ಯಾಕ್‌ ಮಾಡಲು ಹೆಚ್ಚಿನ ಮಟ್ಟದಲ್ಲಿ ಪ್ಲಾಸ್ಟಿಕ್ ಪ್ಯಾಕ್ ಮಾಡಲಾಗಿರುತ್ತದೆ. ಇದು ನಮ್ಮ ಭೂಮಿಗೆ ನಾವು ಮಾಡುತ್ತಿರುವ ದ್ರೋಹ ಎನ್ನುವ ಸಮನ್ವಿ ಅವರು ಇದಕ್ಕೆ ಬದಲಿ ವ್ಯವಸ್ಥೆ ತರುವ ಯೋಜನೆಯಲ್ಲಿದ್ದಾರೆ.

ಪರಿಸರಸ್ನೇಹಿ ಪ್ಯಾಕಿಂಗ್ ಉತ್ಪನ್ನವನ್ನು ಸಿದ್ಧಗೊಳಿಸುವ ತಯಾರಿಯಲ್ಲಿದ್ದಾರೆ. ಪ್ಲಾಸ್ಟಿಕ್‌  ಬಳಕೆಯ ಪರಿಣಾಮದ ಕುರಿತು ಜಾಗೃತಿ ಮೂಡಿಸುವ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾಲೆಗಳಿಗೆ ಹೋಗಿ ಮಕ್ಕಳಲ್ಲಿ ಪರಿಸರಪ್ರಜ್ಞೆ ಮೂಡಿಸುವ ಕೆಲಸವನ್ನೂ ಮಾಡುತ್ತಾರೆ. ಅಡಿಕೆ ಸಾಮಗ್ರಿಗಳು, ಮಣ್ಣಿನ, ಸ್ಟೀಲ್ ಸಾಮಗ್ರಿಗಳನ್ನು ಪ್ಲಾಸ್ಟಿಕ್‌ಗೆ ಬದಲಿಯಾಗಿ ಉಪಯೋಗಿಸುವ ಹಲವು ದಾರಿಗಳ ಕುರಿತು ತಿಳಿ ಹೇಳುತ್ತಾರೆ.

ಸುಲಭ ಹಾಗೂ ಕಡಿಮೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಪ್ಲಾಸ್ಟಿಕ್ ಅನ್ನು ಬೇಕಾಬಿಟ್ಟಿ ಬಳಸುವ, ಪರಿಸರಸ್ನೇಹಿ ಹೆಸರಿನಲ್ಲಿ ಲಾಭ ಪಡೆಯುವ ಕುರಿತು ಬೇಸರ ವ್ಯಕ್ತಪಡಿಸುವ ಅವರು, ಮನಸ್ಸಿದ್ದರೆ  ಪರ್ಯಾಯ ಇದ್ದೇ ಇರುತ್ತದೆ. ಅದನ್ನು ಸದ್ಯದ ಪರಿಸ್ಥಿತಿಯಲ್ಲಿ ಪ್ಲಾಸ್ಟಿಕ್‌ಗೆ ಅನ್ವಯಿಸಿಕೊಳ್ಳುವ ಅವಶ್ಯಕತೆ ಹೆಚ್ಚಿದೆ ಎನ್ನುತ್ತಾರೆ ಸಮನ್ವಿ. ಸಂಪರ್ಕಕ್ಕೆ: 9886151567. ವೆಬ್‌ಸೈಟ್: earthwareproducts.com