ಪ್ರೊ.ರಾಜೇಂದ್ರ ಚೆನ್ನಿಯವರ ‘‘ಪುರುಷರು ಕಂಡಂತೆ ಮಹಿಳೆ’’ ವಿಶೇಷ ಲೇಖನ.

                                                                                                                                                                                                             ಪ್ರೊ.ರಾಜೇಂದ್ರ ಚೆನ್ನಿ
                                                                                 ಪುರುಷರು ಕಂಡಂತೆ ಮಹಿಳೆ

 

                                                                  ಸಮಾನತೆಯೆಂದರೆ ಭಿನ್ನರಾಗಿರುವ ಸ್ವಾತಂತ್ರ್ಯ.
ಕಳೆದ ನೂರೈವತ್ತು ವರ್ಷಗಳು ಎಲ್ಲಾ ಅರ್ಥಗಳಲ್ಲೂ ಮಹಿಳಾ ಯುಗದ ವರ್ಷಗಳು. ಮಹಿಳಾ ಮೌಲ್ಯಗಳು ಹಾಗೂ ಸಂವೇದನೆ ಎಲ್ಲಾ ಕಾಲದ ನಾಗರೀಕತೆಗಳ ಗಟ್ಟಿ ಬುನಾದಿಗಳಾಗಿದ್ದರೂ ಆಧುನಿಕ ಜಗತ್ತಿನ ಪ್ರಜ್ಞೆಯಲ್ಲಿ ಪುರುಷಕೇಂದ್ರಿತ ರಚನೆಗಳು ಸಡಿಲವಾಗತೊಡಗಿ ಮಹಿಳಾ ಮೌಲ್ಯಗಳು ಕೇಂದ್ರಕ್ಕೆ ಬಂದಿದ್ದು ಈ ಯುಗದಲ್ಲಿಯೇ. ಇದು ಚರಿತ್ರೆಯಲ್ಲಿಯ ಅಸಾಮಾನ್ಯವಾದ, ಆಯುಧಗಳಿಲ್ಲದೇ ಮನುಷ್ಯ ಕುಲದ ಮಾತೂ ಇಲ್ಲದ ಅರ್ಧಜಗತ್ತು ನಡೆಸಿದ ಹೋರಾಟದ ಫಲ. ಆದರೆ ಇದೆಲ್ಲ ಇನ್ನೂ ಕೂಡ ಅಧಿಕೃತ ಇತಿಹಾಸವಾಗಿಲ್ಲ; ನಮ್ಮ ತಿಳಿವಳಿಕೆಯ ಮುಖ್ಯ ನೆಲೆಯೂ ಆಗಿಲ್ಲ.
ಮತದಾನದ ಹಕ್ಕು ಕೇಳಲು ಚಳುವಳಿಗಿಳಿದ ಇಂಗ್ಲೆಂಡ್‍ನ ಮಹಿಳೆಯರು ತಮ್ಮ ಉದ್ದ ಸ್ಕರ್ಟುಗಳಲ್ಲಿ ಕಲ್ಲುಗಳನ್ನಿಟ್ಟುಕೊಂಡು ಬಂದು ಪುರುಷ ಅಧಿಕಾರದ ಕೇಂದ್ರಗಳಾದ ಕಚೇರಿಗಳ ಮೇಲೆ ಎಸೆಯುತ್ತಿದ್ದರು; ಆ ದೇಶವು ಔದ್ಯೋಗಿಕ ಕ್ರಾಂತಿಯ ಲಾಭದ ಮೇಲೆ ಮುಕ್ಕಾಲು ಜಗತ್ತನ್ನೇ ಆಕ್ರಮಿಸುವ ಸಾಮ್ರಾಜ್ಯ ಕಟ್ಟಲು ಹೊರಟಾಗ ಅಲ್ಲಿಯ ಮಹಿಳೆಯರು ಸಮಾನತೆಯನ್ನು ಕೇಳಿ ತಮ್ಮ ಹಾಗೂ ಎಲ್ಲಾ ಕಾರ್ಮಿಕರ ಅಹವಾಲಿನ Magna Carta ಗೆ ಸಹಿ ಹಾಕಿದರು. ವಸಾಹತುಶಾಹಿ ತಂದ ಆಧುನಿಕತೆಯ ಬೆಂಬಲದಿಂದ ಪಂಡಿತಾ ರಮಾಬಾಯಿ ಪುರುಷಧರ್ಮ, ಜ್ಞಾನಗಳಿಗೆ ಸವಾಲು ಹಾಕಿದರು; ಗಾಂಧಿಯುಗದ ರಾಷ್ಟ್ರೀಯ ಚಳವಳಿಯಲ್ಲಿ ಸಾವಿರಾರು ಅನಾಮಧೇಯ ಮಹಿಳೆಯರು ಎಲ್ಲವನ್ನೂ ತೊರೆದು ಬಂದರು. (ಆದರೆ ರಾಷ್ಟ್ರವು ಬಲಿಷ್ಠವಾದಂತೆ ಮಹಿಳೆಯರ ಪ್ರಶ್ನೆಗಳನ್ನೂ ಬದಿಗೆ ತಳ್ಳಿತು) ಸಾವಿತ್ರಿ ಫುಲೆ ದಲಿತ, ಹಿಂದುಳಿದ ಹೆಣ್ಣುಮಕ್ಕಳ ಶಾಲೆಗೆ ಪಾಠ ಮಾಡಲು ಹೋಗುತ್ತಿದ್ದಾಗ ಸವರ್ಣೀಯ ಪುರುಷರು ಅವರ ಸೀರೆಯ ಮೇಲೆ ಕೆಸರು ಎರಚಿದರೆ ಮರುದಿನದಿಂದ ಇನ್ನೊಂದು ಸೀರೆಯನ್ನು ಬುಟ್ಟಿಯಲ್ಲಿಟ್ಟುಕೊಂಡು ಹೋಗಿ ಪಾಠ ಮಾಡಿದರು. ಇವೆಲ್ಲ ಅರ್ಧ ಮನುಷ್ಯಕುಲ ಹಿಂಸೆಯನ್ನು ಬಳಸದೇ ಮಾಡಿದ ಹೋರಾಟದ ತುಣುಕುಗಳು.
ಈ ಹೋರಾಟದಿಂದಾಗಿ ಪುರುಷರಿಗೂ ಪ್ರಜ್ಞೆಯಲ್ಲಾದರೂ ಸ್ತ್ರೀ ಆಗುವ ಸೌಭಾಗ್ಯ ದೊರೆಯಿತು. ಪುರುಷ ಅಹಂಕಾರದ ವಿರುದ್ಧ ಗಾಂಧಿ ಸ್ತ್ರೀಮೌಲ್ಯದ ಸತ್ಯಾಗ್ರಹ ಹೂಡಿದರು; ಜಾತಿ, ಕುಲ, ರಾಷ್ಟ್ರ ಇವೇ ಮುಂತಾದ “ಅನೈತಿಕ” ಪರಿಕಲ್ಪನೆಗಳು ಗಂಡಸರು ಸೃಷ್ಟಿಸಿದ ವಿಚಾರಗಳು ಎನ್ನುವುದನ್ನು ಟಾಗೋರ್ ತಮ್ಮ ಕಥನಗಳಲ್ಲಿ ತೋರಿಸಿದರು. ನಮ್ಮಲ್ಲಿ ಕುವೆಂಪು, ಕಾರಂತರು ಆ ಕಾಲದ ಶ್ರೇಷ್ಠ ಮಹಿಳಾ ಕಾದಂಬರಿಕಾರ್ತಿಯರಾದರು. ಮಹಿಳಾ ಮೌಲ್ಯಗಳು ಮುನ್ನೆಲೆಗೆ ಬಂದು ನಮ್ಮ ಸಂಸ್ಕøತಿ, ಧರ್ಮಗಳು ಮೊದಲ ಬಾರಿಗೆ ಆರೋಗ್ಯವಂತಿಕೆ ಪಡೆಯುತ್ತಿವೆ ಎಂದು ನಿರೀಕ್ಷಿಸುತ್ತಿರುವಾಗಲೇ ಈಗ ಮತ್ತೆ ಪುರುಷ ಅಹಂಕಾರದ ಎರಡು ಮಹಾನ್ ವಿಕೃತಿಗಳಾದ ಬಂಡವಾಳಶಾಹಿ ಮತ್ತು ಬಲಪಂಥೀಯ ರಾಜಕೀಯಗಳು ಜಂಟಿಯಾಗಿ ಈ ಮೌಲ್ಯಗಳ ಮಾನಭಂಗದಲ್ಲಿ ತೊಡಗಿವೆ. ಹೀಗಾಗಿಯೇ ಇಂದಿನ ಸಮಾಜದ ಅತ್ಯಂತ ಸಮರ್ಥ, ಪ್ರತಿಭಾವಂತ ಸೃಜನಶೀಲ ವ್ಯಕ್ತಿ ಮುಂಚೂಣಿ ವರ್ಗಗಳ ಮಹಿಳೆಯೇ ಆಗಿರುವಾಗಲೇ ಅತ್ಯಂತ ಬರ್ಬರವಾದ ಆರ್ಥಿಕ, ಲೈಂಗಿಕ ಹಾಗೂ ಸಾಂಸ್ಕøತಿಕ ಹಿಂಸೆಯ ಬಲಿಪಶು ಕೂಡ ಎಲ್ಲಾ ವರ್ಗಗಳ ಮಹಿಳೆಯೇ ಆಗಿದ್ದಾಳೆ.
Gender (ಲಿಂಗತ್ವ) ಅನ್ನುವುದು ಪ್ರಕೃತಿಯ ನಿಯಮವಲ್ಲ. ಅದು ಅಂತಿಮವಾಗಿ ನಮ್ಮ ಆಯ್ಕೆ ಎನ್ನುವ, ಎಲ್ಲಾ ಪ್ರಬುದ್ಧ ಮನುಷ್ಯಜೀವಿಗಳು ಏಕಕಾಲಕ್ಕೆ ಹೆಣ್ಣೂ ಹೌದು, ಗಂಡೂ ಹೌದು ಎನ್ನುವ ತಿಳುವಳಿಕೆ ಬಂದಿರುವಾಗ, ನಮ್ಮ ಅತ್ಯುತ್ತಮ ಬರಹಗಾರರು, ಆಟಗಾರರು, ಉದ್ದಿಮೆದಾರರು ಎಲ್ಲರೂ ಮಹಿಳೆಯರೇ ಆಗುತ್ತಿರುವಾಗ ನಮ್ಮ ಪುರುಷಸಮಾಜವು ಮಹಿಳೆಯರ ಸಮಾನತೆ ಹಾಗೂ ಸ್ವಾತಂತ್ರ್ಯದ ಬಗ್ಗೆ ಅತ್ಯಂತ ಕ್ರೂರವಾಗುತ್ತಿದೆ. “ಸ್ತ್ರೀಮತವನ್ನು ಉತ್ತರಿಸಲಾಗದೇ” – ಮಹಿಳೆಯರನ್ನು ಕೊಲೆ, ಮಾನಭಂಗ ಅವಮಾನಗಳ ಮೂಲಕ ಮತ್ತೆ ಮೌನಕ್ಕೆ ತಳ್ಳುವ ಹುಚ್ಚು ಪ್ರಯತ್ನದಲ್ಲಿದೆ. ಆಧುನಿಕ ಜಗತ್ತಿನ ಅತ್ಯಂತ ಸುಂದರ ಅಭಿವ್ಯಕ್ತಿಯಾಗಿ ಮಹಿಳೆ ಅರಳುತ್ತಿರುವಾಗ ಪುರುಷ ಸಮಾಜ ಮಾನವಪೂರ್ವ ಪಶುನಾಗರೀಕತೆಗೆ ಮರಳುತ್ತಿದೆ. ಒಂದು ಕಡೆ ಬಂಡವಾಳಶಾಹಿ ಮಹಿಳೆಯನ್ನು ಅನುತ್ಪಾದಕ ಜೀವಿಯನ್ನಾಗಿಸುತ್ತಿದ್ದರೆ ಬಲಪಂಥೀಯ ಸಂಘಟನೆಗಳು ಮಹಿಳೆಯರನ್ನು ಇಲ್ಲವಾಗಿಸಿ ಕಂತೆಗಟ್ಟಲೆ ‘ಮಾತೆ’ಯರನ್ನು ಉತ್ಪಾದಿಸುತ್ತಿವೆ. (ಇವರು ಸಾಧ್ವಿ ರಿತಾಂಬರಾಳಂತೆ ಪುರುಷವಿಕೃತಿಗಳು)
ಹೀಗಂತ ನಿಟ್ಟುಸಿರೆಳೆದು ಮಹಿಳೆಯನ್ನು ಕೇವಲ ಶೋಷಿತ ಬಲಿಪಶುವನ್ನಾಗಿ ನೋಡುವ ಹುನ್ನಾರದಲ್ಲಿ ನಾನು ಭಾಗಿಯಾಗುವುದಿಲ್ಲ. ಈಗಲೂ ನಮ್ಮ ಸಾರ್ವಜನಿಕ ಬದುಕಿನ ಎಡವಟ್ಟುಗಳನ್ನು ತಿದ್ದಲು ನಿಂತವರೆಲ್ಲ ಬಹುಪಾಲು ಮಹಿಳೆಯರೆ. ವಂದನಾ ಶಿವಾ, ತೀತ್ಸಾ ಸೆಟಲ್‍ವಾಡ, ಮೇಧಾ ಪಾಟ್ಕರ್, ಅರುಂಧತಿ ರಾಯ್ ಇವರೆಲ್ಲ ನಮ್ಮ ಸಾಮಾಜಿಕ ನೈತಿಕಪ್ರಜ್ಞೆಯ ವಾರಸುದಾರರಲ್ಲವೆ? ನನ್ನೂರು ಶಿವಮೊಗ್ಗೆಯಲ್ಲಿ ಒಬ್ಬ ಪೊನ್ನಮ್ಮಾಳ್ ಇರಲಿಲ್ಲವೆ? ಈಗಿರುವ ಸಂದಿಗ್ಧದ ನೋವಿನ ಸ್ಥಿತಿಯೆಂದರೆ ಮಹಿಳಾಯುಗ ಎಚ್ಚರಗೊಳಿಸಿದ ಸಮಗ್ರ ಮನುಷ್ಯಪ್ರಜ್ಞೆ ಕಟ್ಟಿಕೊಟ್ಟ ಮಹಿಳಾ ಮೌಲ್ಯಗಳನ್ನು ನಾಶಮಾಡಹೊರಟಿರುವ ಪುರುಷ ಅಧಿಕಾರದ ಆಕ್ರಾಮಕವಾದ ಹಿಂಸಾತ್ಮಕವಾದ ರಚನೆಗಳು, ಸಂಕಥನಗಳು. ಇವುಗಳ ಮಧ್ಯೆ ಮಣಿಸಲಾಗದ ಸ್ತ್ರೀಶಕ್ತಿಯ ಸಂಕೇತಗಳು, ಈಗಲೂ ಸಮಾನತೆ ಸ್ವಾತಂತ್ರ್ಯಗಳ ಕನಸೂ ಕಾಣಲಾಗದ ಹಸಿವಿನಲ್ಲಿ ಸಾಯುತ್ತಿರುವ ದುರ್ಬಲವರ್ಗದ ಲಕ್ಷಲಕ್ಷ ಮಹಿಳೆಯರು……..
ತಾಯ್ತನವನ್ನು ವೈಭವೀಕರಿಸಲಾರೆ. ಏಕೆಂದರೆ ಅದನ್ನು ಪುರುಷಪ್ರಾಧಾನ್ಯವು ಮಹಿಳೆಯನ್ನು “ಮನೆ”ಯೊಳಗೆ ಇಡಲಿಕ್ಕಾಗಿ ಬಳಸಿಕೊಂಡಿದೆ. ಆದರೆ ತಾಯ್ತನದಿಂದಾಗಿ, ಅವಳ ದೇಹದ ವಿಶಿಷ್ಟವಾದ ಅನುಭವಗಳಿಂದಾಗಿ ಮಹಿಳೆಯ ತಿಳಿವಳಿಕೆ ಹಾಗೂ ಜೀವಪರತೆಯ ಎದುರಿಗೆ ಗಂಡಸು ಯಾವಾಗಲೂ ಕುಬ್ಜನೇ ಎನ್ನುವುದನ್ನು ನೆನಪಿನಲ್ಲಿಡಬೇಕು. ಹಾಗೆಯೇ ಹೆರಲಾಗದಿದ್ದರೇನಂತೆ ಒಳ್ಳೆಯ ತಾಯಿಯಾಗುವ ಅವಕಾಶ ಎಲ್ಲಾ ಗಂಡಸರಿಗೂ ಇದ್ದೇ ಇದೆ. ಕೇವಲ ಗಂಡಸು ಅಥವಾ ಹೆಂಗಸು ಆಗಲಿಕ್ಕೆ ಸಾವಿರಾರು ವರ್ಷಗಳ ಮನುಷ್ಯ ನಾಗರಿಕತೆ ಬೇಕಿರಲಿಲ್ಲ. ಹುಟ್ಟಿನಿಂದ ಬಂದ ಪುರುಷ, ಸ್ತ್ರೀ ಎನ್ನುವ ಸೂತಕಗಳನ್ನು ಬಿಡುವುದರಲ್ಲಿ ಮನುಷ್ಯತ್ವ ಇದೆ.
ಕುಟುಂಬವೆನ್ನುವ ಸಂಸ್ಥೆಯು ಮೊದಲಿನಿಂದಲೂ ಒಂದು ಅಧಿಕಾರ ವ್ಯವಸ್ಥೆಯೇ ಆಗಿದೆ. ಅಲ್ಲದೇ ಸಮಾಜದಲ್ಲಿರುವ ಅಧಿಕಾರ ವ್ಯವಸ್ಥೆಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದರಲ್ಲಿ ಕುಟುಂಬದ ಪಾತ್ರ ಬಹಳ ದೊಡ್ಡದು. ಹೀಗಾಗಿ ಮಹಿಳೆಯ ಎಲ್ಲಾ ಸಾಧ್ಯತೆಗಳು ಅದರ ಬಹು ಇಕ್ಕಟ್ಟಾದ ಇಂದಿನಲ್ಲಿ ಪೂರ್ಣಗೊಳ್ಳಲಾರವು. ಅವಳ ನಿರೀಕ್ಷೆಗಳು ಕುಟುಂಬದ ಚೌಕಟ್ಟುಗಳನ್ನು ಮೀರುತ್ತ ಬಂದಿರುವಂತೆ ಮಧ್ಯಮವರ್ಗದ ಶಿಕ್ಷಿತ ಕುಟುಂಬಗಳು ತಮ್ಮ ಚೌಕಟ್ಟುಗಳನ್ನು ಹಿಗ್ಗಿಸುತ್ತಲೇ ಬಂದಿವೆ. ಆದ್ದರಿಂದ ಅವಳ ನಿರೀಕ್ಷೆಗಳಿಂದಾಗಿಯೇ ಕುಟುಂಬವೆನ್ನುವ ಸಂಸ್ಥೆಯು ಕುಸಿದುಬೀಳುತ್ತಿಲ್ಲ. ನಿಜವಾದ ಸಮಸ್ಯೆಯಿರುವುದು ಹಳ್ಳಿಯ ಜಾತಿ ಪಂಚಾಯತಿಗಳು, ನಗರಗಳ ಸಾರ್ವಜನಿಕ ವಲಯಗಳು (public space) ಹಾಗೂ ಬಹುಮುಖ್ಯವಾಗಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆ ಮಹಿಳೆಯರ ಸ್ವಾತಂತ್ರ್ಯ ಹಾಗೂ ಸಮಾನತೆಗಳನ್ನು ಬಲವಾಗಿ ತಿರಸ್ಕರಿಸುವುದರಲ್ಲಿದೆ. ಅತ್ಯಂತ ಕ್ರೂರ ಆಕ್ರಮಣವಾಗುತ್ತಿರುವುದು ದುರ್ಬಲ ವರ್ಗಗಳ, ದಲಿತ ಜಾತಿಗಳ ಮಹಿಳೆಯರ ಮೇಲೆ. ಇದನ್ನು ಅರ್ಥಮಾಡಿಕೊಂಡು ವಿವರಿಸಬಲ್ಲ ನುಡಿಗಟ್ಟನ್ನೇ ನಾವು ಕಲಿತಿಲ್ಲ.
ನನ್ನ ದೃಷ್ಟಿಯಲ್ಲಿ ಸಮಾನತೆಯೆಂದರೆ ಭಿನ್ನರಾಗಿರುವ ಸ್ವಾತಂತ್ರ್ಯ. ಒಬ್ಬರು ಇನ್ನೊಬ್ಬರ ಅಸ್ಮಿತೆಯನ್ನು ಒಪ್ಪುವ ಸ್ಥಿತಿ. ಆದರೆ ಸಮಾನತೆ ಕೇವಲ ಆದರ್ಶಸ್ಥಿತಿಯಲ್ಲ. ಅದು ಸಮಾಜದ ಎಲ್ಲಾ ಭೌತಿಕ ಸ್ಥಿತಿಗಳಲ್ಲಿ (ರಾಜಕೀಯ ಸೇರಿದಂತೆ) ಮೂರ್ತವಾಗಿ ಖಚಿತವಾಗಿ ಇರಬೇಕು. ಆ ಸ್ಥಿತಿ ನಮ್ಮಲ್ಲಿಲ್ಲದಿರುವುದರಿಂದ ಅದರ ಕಷ್ಟಕರವಾದ ಹುಡುಕಾಟದಲ್ಲಿ ‘ಅವನು’ ‘ಅವಳು’ ‘ನಾವು’ ಆಗುವ ಸಾಧ್ಯತೆ ಇದೆಯಲ್ಲವೆ?