`ಪ್ರಾಣಿ ಪಕ್ಷಿಗಳ ಲೋಕದಲ್ಲಿ’-ಪ್ರೊ. ಸುಮಿತ್ರಾಬಾಯಿ

 

ಚಿಕ್ಕಂದಿನಲ್ಲಿ ನನ್ನ ಕಂಕುಳಲ್ಲೊಂದು ಎಳೆ ಕುರಿಮರಿ ಇದ್ದೇ ಇರುತ್ತಿತ್ತು. ಈ ಎಳೆಮರಿಗಳು ಗಡವಗಳ ಕಾಲುಗಳಿಗೆ ಸಿಕ್ಕುತ್ತವೆ ಎನ್ನುವುದಕ್ಕಿಂತ ನನ್ನ ಖುಷಿಗೆ ನಾನೇ ಕಂಕುಳಲ್ಲಿರಿಸಿಕೊಳ್ಳುತ್ತಿದ್ದೆ. ಈಗಿನ ಮಕ್ಕಳು ಟೆಡ್ಡಿಬೇರ್ ಇಟ್ಟುಕೊಳ್ಳುವಂತೆ! ಮೈಸೂರಿಗೆ ಬಂದ ಮೇಲೂ ಒಂದಲ್ಲಾ ಒಂದು ಪ್ರಾಣಿ ಪಕ್ಷಿಗಳ ಸಖ್ಯ ನನ್ನ ಜೊತೆಗಿತ್ತು. ಮಿತಾಳಿಗೂ ಪ್ರಾಣಿ ಪಕ್ಷಿಗಳೆಂದರೆ ಪ್ರೀತಿ, ಕಡೆಗೆ ಇರುವೆಗಳನ್ನು ಕಂಡರೂ ಇಷ್ಟ. ದಾರಿ ತಪ್ಪಿದ ಇರುವೆಗಳನ್ನು ಅವುಗಳ ಗೂಡಿಗೆ ಉಪಾಯವಾಗಿ ಮುಟ್ಟಿಸುತ್ತಿದ್ದಳು.
ಹೀಗಿರುವಾಗ ನಮ್ಮ ಮನೆಗೆ ಮುದ್ದಾದ ಒಂದು ನಾಯಿಮರಿಯೊಂದು ಬಂತು. ಸ್ನೇಹಿತೆ ವಸಂತ, ತಮ್ಮ ರೇಷ್ಮೆ ಇಲಾಖೆ ಆಫೀಸ್‍ನಲ್ಲಿ ಮರಿ ಹಾಕಿದ್ದ ಆಲ್‍ಸೇಷಿಯನ್ ಕ್ರಾಸ್ ನಾಯಿಮರಿಗಳಲ್ಲಿ ಒಂದನ್ನು ತನ್ನ ಸೆರಗಿನಲ್ಲಿ ಮುಚ್ಚಿಟ್ಟುಕೊಂಡು ಎಂದಿನಂತೆ ತನ್ನ ಕೋಲಿನೋಸ್ ನಗೆ ಬೀರುತ್ತಾ ತಂದುಕೊಟ್ಟರು. ಮೇಡಂ, ಪಾಪ… ಆ ಬಾಣಂತಿ ನಾಯಿಗೆ ಊಟ ಹಾಕುವವರಿಲ್ಲ! ದಿನಾಗಲು ನಾವೆಲ್ಲ ಸೇರಿ ಅದಕ್ಕೆ ಊಟ ಹಾಕುತ್ತಿದ್ದೇವೆ, ಮರಿಗಳಾದರೂ ಚೆನ್ನಾಗಿರಲಿ ಎಂದು ನಿಮ್ಮನೆಗೆ ತಂದೆನು ಎಂದರು. ನಾಯಿಮರಿ ಕಣ್ಮನ ಸೆಳೆಯುವಂತಿತ್ತು. ಸಿಲ್ಕಿಯಾಗಿ ರೇಷ್ಮೆಯಂತೆ ಹೊಳೆಯುತ್ತಿದ್ದ ಕೂದಲು, ಭೀಮಕಾಯದ ಲಕ್ಷಣ ಮತ್ತು ಚೌಲ ಬೀಸು (ಚಾಮರ ಬೀಸುವಂತೆ) ವಂತೆ ದಟ್ಟವಾಗಿದ್ದ ಜೂಲು ಬಾಲವನ್ನು ಬಾವುಟದಂತೆ ಮೇಲೆತ್ತಿಕೊಂಡು ಓಡಾಡುವುದನ್ನು ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. ಮಿತಾ ಹುಟ್ಟುವ ಮೊದಲು, ಗಂಡು ಮಗುವಾದರೆ `ನನ್ನಿ’ ಎಂದು ಹೆಸರಿಡೋಣ, ಹೆಣ್ಣು ಮಗುವಾದರೆ ನಿನ್ನಿಷ್ಟದ್ದೇ ಆಗಲಿ ಎಂಬ ಕರಾರಿನ ಪ್ರಕಾರ, ದೇಮಾ ಸೂಚಿಸಿದ ಚೆಂದದ ಹೆಸರು ನನ್ನ ಕಿವಿಯೊಳಗೆ ಹಾಗೆ ಉಳಿದಿತ್ತು. ಅದೇ ಹೆಸರನ್ನು ನಾಯಿಮರಿಗೆ ಇಟ್ಟರೆ ಖುಷಿಯಾಗುತ್ತಾನೆಂದು ನನ್ನಿ ಎಂದು ಹೆಸರಿಟ್ಟೆ. ನನ್ನಿ ಇದ್ದಷ್ಟು ಕಾಲ ಯಾರಿಗೂ ಕಚ್ಚಲಿಲ್ಲ. ಮನೆಯಲ್ಲಿ ಯಾರೂ ಇಲ್ಲವೆಂದು ಯಾರಾದರೂ ಕಾಂಪೌಂಡ್ ಒಳಗೆ ಬಂದರೆ ಸುಮ್ಮನೆ ಅವರ ಜೊತೆ ನಿಂತಿರುತ್ತಿತ್ತು. ಅವರೇನಾದರೂ ಹೂ ಕೀಳಲು ಗಿಡಕ್ಕೆ ಕೈ ಹಾಕಿದರೆ ಕೂಡ್ಲೆ ಚಂಗನೆ ಹಾರಿ ಅವರನ್ನು ಕಚ್ಚದೆ, ಬಟ್ಟೆಯನ್ನು ಮಾತ್ರ ಕಚ್ಚಿ ಹಿಡಿದುಕೊಳ್ಳುತ್ತಿತ್ತು. ಆದಕಾರಣ ನಮ್ಮ ಮನೆಗೆ ಯಾರೂ ಸೀದಾ ನುಗ್ಗಿ ಏನನ್ನೂ ಮುಟ್ಟುತ್ತಿರಲಿಲ್ಲ. ಇದನ್ನು ಬಿಳಿಯಾನೆಯಂತೆ ಮನೆಯೊಳಗೇ ಸಾಕಿದ್ದೆವು. ಬೇರೆ ನಾಯಿಗಳು ಕಚ್ಚಬಹುದೆಂಬ ಕಲ್ಪನೆಯೂ ಇದಕ್ಕೆ ಇರಲಿಲ್ಲ. ಮನೆಯ ಪಕ್ಕ ಅಡ್ಡಾಡುತ್ತಿದ್ದ ನಾಯಿಯೊಂದನ್ನು ಕಂಡು ಇದು ಹಲೋ ಹೇಳಲು ಹತ್ತಿರ ಹೋದಾಗ ಅದು ನನ್ನಿಯ ಕುತ್ತಿಗೆಯನ್ನು ಕಚಕ್ಕನೆ ಹಿಡಿದುಕೊಂಡು ಹಲುಬುತ್ತಿತ್ತು. ಆಗ ನನ್ನಿ ಕುಯ್ಯೋ ಮುರ್ರೋ ಎಂದು ಕಿರುಚಾಡುವಾಗ, ಅಲ್ಲೇ ಇದ್ದ ಗಾರೆಯವನು ಆ ಬೀದಿನಾಯಿಗೆ ಏಟುಕೊಟ್ಟು ಬಿಡಿಸಿದನು. ಕಚ್ಚಿಸಿಕೊಂಡ ದಿನದಿಂದ, ನನ್ನಿ ಯಾರ ಕೈಗೂ ಸಿಗದೆ ಜೆಟ್ ಸ್ಪೀಡಿನಲ್ಲಿ ಓಡುವುದನ್ನು ಕಲಿಯಿತು. ಆನಂತರ ಬೇರೆ ಯಾವ ನಾಯಿಯೂ ಇದನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಜೀವನ ಕಲಿಸುವುದೆಂದರೆ ಇದೇ ಇರಬೇಕು.
ನನ್ನಿಯನ್ನು ಕಂಡರೆ ನಮ್ಮತ್ತೆಯವರಿಗೆ ಭಾಳ ಪ್ರೀತಿ. ಇವರಿಗೆ, ನಾಯಿಗಳಿಗೂ ಚೆಂದದ ಹೆಸರಿಡಬಹುದೆಂದು ತಿಳಿದಿರಲಿಲ್ಲ ಮತ್ತು ಪೇಟೆ ನಾಯಿಗಳಿಗೆಲ್ಲ ನನ್ನಿ ಎಂದು ಕರೆಯಬೇಕೇನೊ ಅಂದುಕೊಂಡು ಬೀದಿಯಲ್ಲಿ ನಡೆದಾಡುವ ನಾಯಿಗಳನ್ನು ಕಂಡಾಗಲೆಲ್ಲ ಅಲ್ಲೂ ಒಂದು ನನ್ನಿ ಹೋಯ್ತು, ಇಲ್ಲೊಂದು ನನ್ನಿ ಕಂಡಿಕಪ್ಪ… ಆಮೇಲೆ ಅಂಗಡಿತವೊಂದು ನನ್ನಿ ನಾಯಿ ಕಂಡೆಕವ್ವ ಎಂದು ಹೇಳುತ್ತಿದ್ದರು. ಈ ಮಾತುಗಳು ನಮಗೆ ನಗು ಬರಿಸುತ್ತಿತ್ತು. ನಾನಂತು ಜೋರಾಗಿ ನಕ್ಕುಬಿಡುತ್ತಿದ್ದೆ. ಆಗ ಕಿತಾಪತಿ ದೇಮ, ಮಿತ್ರೀ… ಹಿಂದುಗಡೆ ಮನೆಯ ಅಜ್ಜಿ (80 ವರ್ಷ) ನಿಂಗೆ ಏನಂತಾರೆ? ಎಂದನು. ಅವರು ನನ್ನನ್ನು ಆಂಟೀ… ಆಂಟೀ ಎಂದು ಕರೀತಿದ್ದರು. ಎಲ್ಲ ಮಾರ್ಡನ್ ಮಹಿಳೆಯರೆಲ್ಲರೂ ಅವರಿಗೆ ಆಂಟಿಯೆ! ಆಗ ನನ್ನ ನಗು ನನಗೆ ತಿರುಗೇಟು ಆಗಿತ್ತು. ದೇಮಾ ಉಬಾಸುಬಾ ಅನ್ನದೆ ಅರ್ಥ ಮಾಡಿಸಿ ಏನೂ ಆಗಿಲ್ಲ ಎಂಬಂತೆ ಇರುತ್ತಿದ್ದನು.


ನನ್ನಿ ತುಂಬ ಸಾಧುವಾಗಿದ್ದನು. ದೇಮ ಇವನಿಗೆ ಬುದ್ಧ ಎನ್ನುತ್ತಿದ್ದನು. ವಯಸ್ಸಾಗಿ ಸಾಯುವ ಕಾಲಕ್ಕೆ ನನ್ನಿ ಊಟ ಬಿಟ್ಟುಬಿಟ್ಟಿತು. ಅತ್ತೆಯವರು ಅತ್ತೂ ಕರೆದು ಮುದ್ದು ಮಾಡಿ ಒಂದಿಷ್ಟು ಹಾಲನ್ನು ಕುಡಿಸುತ್ತಿದ್ದರು. ಬೆನ್ನುಫಣಿಯಾಗಿ, ಆ ಹುಣ್ಣು ವಾಸನೆ ಬರುತ್ತಿತ್ತು. ಮನೆಗೆ ಬಂದಿದ್ದ ನನ್ನ ತಮ್ಮನು, ಥೂ ಏನಿದು ವಾಸನೆ ಎಂದು ನನ್ನಿಯನ್ನು ಕಂಡು ಮುಖ ಸಿಂಡರಿಸಿಕೊಂಡನು. ಆ ಕ್ಷಣದಿಂದ ನನ್ನಿ ಮನೆಯೊಳಕ್ಕೆ ಬರುವುದನ್ನು ನಿಲ್ಲಿಸಿಬಿಟ್ಟಿತು. ನನ್ನಿ ತುಂಬ ಸೂಕ್ಷ್ಮ… ಏನೂ ಅನ್ನಬೇಡವೆಂದು ತಮ್ಮನಿಗೆ ತಾಕೀತು ಮಾಡಿದೆ. ಒಂದು ಮಧ್ಯರಾತ್ರಿ ಮುಂಬಾಗಿಲು ಚಿಲಕವನ್ನು ಎಳೆದ ಸದ್ದಾಯಿತು. ಅದನ್ನು ನಿರ್ಲಕ್ಷಿಸಿ ನಿದ್ದೆ ಹೋದೆನು. ಸಡನ್ ಆಗಿ ಯಾರೋ ಅಮ್ಮಾ ಎಂದು ಕೂಗಿದ ಆರ್ತನಾದ ಕೇಳಿ ಬೆಚ್ಚಿದಂತಾಗಿ, ದಢಾರನೆ ಹಾಸಿಗೆಯ ಮೇಲೆ ಎದ್ದು ಕೂತು ದೇಮಾನನ್ನು ಎಬ್ಬಿಸಿ ಯಾರೋ ಅಮ್ಮಾ… ಅಂತ ಕೂಗ್ತಿದ್ದಾರೆ ನೋಡೋಣ ಬಾ ಎಂದೆನು. ಹೇಳಿ ಕೇಳಿ ಇವನು ನಿದ್ದೆಬೋರ, ಮೇಲಾಗಿ ಆಲಸಿ… ಆ್ಞ ಊ್ಞ ಅಂದನು ಅಷ್ಟೆ. ನನ್ನೆದೆ ಯಾಕೊ ಡವಡವನೆ ಹೊಡೆದುಕೊಳ್ಳುತ್ತಿತ್ತು. ನಿದ್ರೆ ಬಾರದೆ ಹೊರಳಾಡುತ್ತಿದ್ದೆ. ಬೆಳಿಗ್ಗೆ ಎದ್ದು ಮುಂಬಾಗಿಲನ್ನು ತೆಗೆದರೆ ನನ್ನಿ ಹೊಸ್ತಿಲ ಉದ್ದಕ್ಕೂ ನಿದ್ದೆ ಮಾಡುತ್ತಿರುವನಂತೆ ಕಂಡನು. `ನನ್ನೂ ಎದ್ದೇಳೋ’ ಎಂದರೂ ಅದರ ಕಿವಿಗಳು ಅಲುಗಾಡಲಿಲ್ಲ. ಹಾಗೇ ಬಗ್ಗಿ ನೋಡಿದಾಗ ಬಾಯಿಂದ ಕೊಂಚ ರಕ್ತ ಬಂದಿತ್ತು, ಕಣ್ಣಾಲಿಗಳು ನೆಟ್ಟಗಿದ್ದವು. ನನ್ನಿ ಇನ್ನಿಲ್ಲ. ಅತೀವ ದುಃಖ ಒತ್ತರಿಸಿ ಬಂತು. ಪ್ರಾಣ ಬಿಡುವ ಮುಂಚೆ ನನ್ನನ್ನು ಎಬ್ಬಿಸಲು ಬಾಗಿಲು ತಟ್ಟಿ ಪ್ರಯತ್ನಿಸಿತ್ತು. ದೇಮಾನ ಮೇಲೆ ಅಸಾಧ್ಯ ಕೋಪ ಬಂತು. ಆ ನಂತರ ಎಷ್ಟೋ ವರ್ಷಗಳವರೆಗೆ ನನ್ನಿಯನ್ನು ಮರೆಯಲಾಗದೆ ಅದು ಸಾಯುವ ಮೊದಲು ಅಮ್ಮಾ ಎಂದು ಕೂಗಿ ಕರೆದಂತಾಗಿದ್ದು ನೆನಪಾಗುತ್ತಿತ್ತು.
ಆಮೇಲೆ ಉಜ್ವಲಾಳ ಹಿಂದೇನೆ ಮನೆಗೆ ಬಂದ ಒಂದು ಪುಟಾಣಿ ನಾಯಿಮರಿಗೆ ಚಿಕ್ಕ ನನ್ನಿ ಎಂದು ಹೆಸರಿಟ್ಟು ಮನೆ ತುಂಬಿಸಿಕೊಂಡೆನು. ನಾನು ಕೂಡ ನಮ್ಮ ಬೀದಿಯಲ್ಲಿದ್ದ ಪುಟ್ಟ ಮರಿಯೊಂದನ್ನು ಜೊತೆಗಿರಲಿ ಎಂದು ಮನೆಗೆ ತಂದೆ. ಇದೇ ಮುನ್ನಿ. ಜೊತೆಗೆ ನನ್ನ ಫ್ರೆಂಡ್ ಒಬ್ಬಳು ಇನ್ನೊಂದು ನಾಯಿಮರಿಯನ್ನು ತಂದು ಇದನ್ನು ನಿಮ್ಮ ಮನೆಗೆ ಅಂತನೇ ತಂದೆನು ಎಂದು ಹೇಳಿದಾಗ ಅದನ್ನೂ ಬೇಡ ಅನ್ನಲಾಗಲಿಲ್ಲ. ಅದಕ್ಕೆ ಟುವ್ವಿ ಎಂದು ಹೆಸರಿಟ್ಟೆವು. ಟುವ್ವಿಗೆ ಮುದ್ದು ಮಾಡುವುದನ್ನು ಕಂಡು ಮುನಿಸಿಕೊಂಡ ಚಿಕ್ಕ ನನ್ನಿ ದೇಮಾನ ತಮ್ಮನ ಮನೆಗೆ ಸೇರಿಕೊಂಡು ನಮ್ಮ ಮನೆಗೆ ಆಗಾಗ ವಿಸಿಟ್ ಕೊಡುತ್ತಿದ್ದನು. ಟುವ್ವಿ ಕಾಲವಶವಾದ ಮೇಲೆ ನಮ್ಮ ಮನೆಗೆ ಜರ್ಮನ್ ಶೆಫರ್ಡ್‍ನ ಗಂಗಾ ಬಂದಳು.
ಈ ಗಂಗಾಗೆ ತುಂಬಾ ಹೆಂಗರಳು. ಇವಳಲ್ಲಿದ್ದ ಮಾತೃ ಸ್ವಭಾವವನ್ನು ಅರಿಯುವ ಘಟನೆಯೊಂದು ಜರುಗಿತು. ನಮ್ಮ ಮನೆಯ ಸುತ್ತಲೂ ಸಾಕಷ್ಟು ಮರಗಿಡಗಳನ್ನು ಬೆಳೆಸಿಕೊಂಡಿರುವುದರಿಂದ ಹಕ್ಕಿಗಳು ಆಗಾಗ್ಗೆ ನಿಂಬೆ, ಸೀತಾಫಲ, ಮಲ್ಲಿಗೆ ಬಳ್ಳಿಗಳ ನಡುವೆ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿಕೊಳ್ಳುತ್ತಿದ್ದವು. ಇದು ಎಷ್ಟೋ ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿತ್ತು. ಒಂದು ಸಲ ಬುಲ್‍ಬುಲ್ ಜೋಡಿಗಳು ಬಿಳಿ ದಾಸವಾಳದ ಚಿಕ್ಕ ಕೊಂಬೆಗಳ ನಡುವೆ ಗೂಡು ಕಟ್ಟಿ ವಾಸಿಸತೊಡಗಿದವು. ಇವು ಬೆಳಿಗ್ಗೆ ಹೊತ್ತು ಆಹಾರ ಹುಡುಕಲು ಹೋದ ಸಂದರ್ಭದಲ್ಲಿ ಅವುಗಳ ಗೂಡನ್ನು ಚೆಕ್ ಮಾಡುತ್ತಿದ್ದೆ. ಒಂದಿನ ಆ ಗೂಡಲ್ಲಿ ಸುಂದರವಾದ ಇಟ್ಟಿಗೆ ಬಣ್ಣದ ಚಿತ್ತಾರ ಉಳ್ಳ ಮೊಟ್ಟೆ ಇರುವುದನ್ನು ಕಂಡು ಖುಷಿಪಟ್ಟೆ. ಮತ್ತೆ ಮಾರನೆಯ ದಿನ ಇನ್ನೊಂದು ಮೊಟ್ಟೆ, ಅದರ ಮಾರನೆಗೆ ಮತ್ತೊಂದು ಮೊಟ್ಟೆ. ಆ ಮೂರು ಮೊಟ್ಟೆಗಳು ಒಂದಕ್ಕೊಂದು ತಾಕಿದಂತೆ ಕೂತಿದ್ದವು. ಈಗ ಹಕ್ಕಿಗಳು ಸರದಿಯಂತೆ ಮೊಟ್ಟೆಗಳಿಗೆ ಕಾವು ಕೊಡುತ್ತಾ ಕೂರುತ್ತಿದ್ದವು. ನಾನೇನಾದ್ರೂ ಗೂಡಿನ ಹತ್ತಿರ ಹೋದರೆ, ಕಾವು ಕೊಡುವ ಹಕ್ಕಿ ಪುಕ್ಕ ಕೆದರಿಕೊಂಡು ಹಾರಿ ನನ್ನನ್ನು attack ಮಾಡುವ ಸೂಚನೆ ನೀಡುತ್ತಿತ್ತು. ಹೀಗೊಂದು ವಾರ ಕಳೆಯುವಷ್ಟರಲ್ಲಿ, ಬೆಳ್ಳಂಬೆಳಿಗ್ಗೆ ಅವ್ವ ಹಕ್ಕಿ ತನ್ನ ಕೊಕ್ಕಿನಲ್ಲಿ ಹುಳುವೊಂದನ್ನು ಕಚ್ಚಿಕೊಂಡು ಬರುವುದನ್ನು ಗಮನಿಸಿದೆ. ಓ… ಹಾಗಾದರೆ ಮೊಟ್ಟೆಗಳು ಒಡೆದು ಮರಿಗಳು ಆಚೆ ಬಂದಿವೆ ಎಂಬುದು ಖಾತ್ರಿಯಾಯ್ತು. ಅವ್ವ ಹಕ್ಕಿ ಇಲ್ಲದ ಸಮಯ ನೋಡಿಕೊಂಡು, ಆ ಮರಿಗಳನ್ನು ಹತ್ತಿರದಿಂದ ನೋಡಿದೆನಷ್ಟೆ. ಅದೆಲ್ಲಿತ್ತೋ ಅವ್ವ ಹಕ್ಕಿ ಗಾಬರಿಯಿಂದ ಕೂಗಲು ಶುರು ಮಾಡಿತು. ಅದರ ಕೂಗಿಗೆ ಓಗೊಟ್ಟ ಅಪ್ಪ ಹಕ್ಕಿಯೂ ಹಾರಿ ಬಂದು ಗೂಡಿನ ಸಮೀಪ ಕೂತು ನನ್ನನ್ನೇ ನೋಡುತ್ತಾ ಕೂಗಲು ಶುರು ಮಾಡಿತು. ಅವುಗಳ ಕೂಗಿಗೆ ತಲೆ ಚಿಟ್ಟು ಹಿಡಿದಂತಾಗಿ… ಓಹೋ ಸೀಮೆಗಿಲ್ಲದ ಮಕ್ಕಳು… ಎಂದು ಬೈದು ಮನೆಯೊಳಗೆ ಬಂದೆನು.
ಆನಂತರ, ನನ್ನ ಸಂಸಾರದ ಕೆಲಸಗಳ ಒತ್ತಡದಲ್ಲಿ ಬುಲ್ ಹಕ್ಕಿಗಳ ಸಂಸಾರ ಮರೆತುಹೋಯಿತು. ಒಂದು ಬೆಳಿಗ್ಗೆ ದಿಢೀರನೆ ಪುಟ್ಟ ಹಕ್ಕಿಗಳ ಚಿಲಿಪಿಲಿ ಶಬ್ದ ಕಿವಿಗೆ ಬಿತ್ತು. ಕುತೂಹಲ ತಡೆಯಲಾರದೆ ಬುಲ್‍ಬುಲ್ ಮರಿಗಳಿರುವ ಗೂಡಿನ ಬಳಿ ಹೋಗಿ ನೋಡಿದೆ. ಅವುಗಳ ಮೈಮೇಲೆ ರೆಕ್ಕೆ ಪುಕ್ಕ ಚೆನ್ನಾಗಿ ಬೆಳೆದಿತ್ತು. ಅವುಗಳಲ್ಲೊಂದು ತುಂಬ active. ಈ ಹಕ್ಕಿ ಗೂಡಿನಾಚೆ ಹಾರಲು ಪ್ರಯತ್ನಿಸಿ ಸೋಲುತ್ತಿತ್ತು. ಮತ್ತೆ ಸಂಜೆ ಮನೆಗೆ ಬಂದಾಗ ರೆಕ್ಕೆ ಬಲಿತ ಹಕ್ಕಿಗಳು ಏನು ಮಾಡುತ್ತಿವೆ ಎಂದು ಗಮನಿಸಲು ಗೂಡಿನ ಬಳಿ ಹೋಗಿ ನೋಡಿದರೆ ಗೂಡಿನಲ್ಲಿ ಎರಡೇ ಮರಿಗಳು ಪಿಳಿಪಿಳನೆ ಕಣ್ಣು ಬಿಡುತ್ತಾ, ಕೊಕ್ಕನ್ನು ಆಕಾಶದ ಕಡೆ ಚಾಚಿ ಬಾಯನ್ನು Maximum ಅಳತೆಯಲ್ಲಿ ಬಿಡುತ್ತಿದ್ದವು. ಇನ್ನೊಂದು ಮರಿ ಹಕ್ಕಿ ಮನೆಯ ಅಕ್ಕಪಕ್ಕ ಸದಾ ಸುಳಿದಾಡುವ ಬೆಕ್ಕುಗಳಿಗೆ ಆಹಾರವಾಗಿರಬೇಕೆಂದು ಬೇಜಾರು ಆಯಿತು. ಉಳಿದಿರುವ ಎರಡು ಮರಿಗಳಾದರೂ ಉಳಿಯಲಿ ಎಂದು ಅಂದುಕೋತಾ ಮನೆಯೊಳಕ್ಕೆ ಹೊರಡಲನುವಾದಾಗ ಏನಾಶ್ಚರ್ಯ ನಾಪತ್ತೆಯಾಗಿದ್ದ ಈ ಬುಲ್‍ಬುಲ್ ಮರಿ ನೆಲದ ಮೇಲೆ ಮೆಲ್ಲಮೆಲ್ಲನೆ ಕುಪ್ಪುತ್ತಾ ಮೇಲಕ್ಕೆ ಹಾರಲು ಪ್ರಯತ್ನಿಸಿ ಸೋಲುತ್ತಿತ್ತು. ಆಗ ಸಂತೋಷದಿಂದ ಅದನ್ನು ಹಿಡಿದು ಗೂಡಿಗೆ ಸೇರಿಸೋಣವೆಂದು ಹತ್ತಿರ ಹೋದರೆ, ಪುರ್ರನೆ ಮೇಲಕ್ಕೆ ಸ್ವಲ್ಪ ದೂರ ಹಾರಿ ಮತ್ತೆ ನೆಲಕ್ಕೆ ದೊಪ್ಪನೆ ಬಿತ್ತು. ನನ್ನನ್ನು ಕಂಡು ಹುಚ್ಚಾಪಟ್ಟೆ ಕುಪ್ಪುತ್ತಾ ಹಾರಲು ಪ್ರಯತ್ನಿಸುತ್ತಿರುವಾಗ, ನಮ್ಮ ಗಂಗಾಳ ಹದ್ದಿನ ಕಣ್ಣು ಈ ಹಕ್ಕಿ ಮರಿಯ ಮೇಲೆ ಬಿತ್ತು. ಗಂಗಾಳು ಹಕ್ಕಿ ಮರಿಯ ಹತ್ತಿರ ಹೋಗದಂತೆ ತಡೆದರೂ ಪ್ರಯೋಜನವಾಗಲಿಲ್ಲ. ಗಂಗಾ ಒಂದೇ ನೆಗೆತಕ್ಕೆ ಆ ಹಕ್ಕಿಮರಿಯನ್ನು ಬಾಯಲ್ಲಿ ಹಿಡಿದುಕೊಂಡು ನನ್ನಿಂದ ದೂರಕ್ಕೆ ಓಡಿ ಹೋಯಿತು. ಇನ್ನು ಈ ಹಕ್ಕಿಗೆ ಉಳಿಗಾಲವಿಲ್ಲ ಅನ್ನಿಸಿ, ಬೇಡ ಅದನ್ನು ಬಿಡು ಎಂದು ಕೂಗಿ ಗದರಿಸುತ್ತಾ ಅದರ ಹಿಂದೆ ಓಡಿದರೂ ಗಂಗಾ ಚಿರತೆಯಂತೆ ಮನೆಯ ಸುತ್ತ ಓಡುತ್ತಿದ್ದಳು. ಅದರ ಆಸೆ ಬಿಟ್ಟು ಸುಸ್ತಾಗಿ ಸುಮ್ಮನೆ ನಿಂತೆ. ಆಗ ಗಂಗಾ ನಿಂಬೆಗಿಡದ ಬುಡದ ಬಳಿ ನಿಂತು ಆ ಹಕ್ಕಿ ಮರಿಯನ್ನು ಮೆಲ್ಲನೆ ನೆಲದ ಮೇಲೆ ಇಟ್ಟಳು! ಸತ್ತಿರಬೇಕು ಅಂದುಕೊಂಡಿದ್ದರೆ ಬುಲ್‍ಬುಲ್ ಮರಿ ಆರಾಮಾಗಿ ಕುಪ್ಪುತ್ತಾ ನಿಂಬೆಗಿಡವನ್ನು ಏರಲು ತೊಡಗಿತು! ಗಂಗಾಳ ತಾಯ್ತನಕ್ಕೆ ಕೃತಜ್ಞತೆ ಸಲ್ಲಿಸಿ ಮುದ್ದು ಮಾಡಿದೆ. ಒಟ್ಟಿನಲ್ಲಿ ಸುಖಾಂತ್ಯ ಕಂಡು ನಾನು ಟಿ.ವಿ. ನೋಡುತ್ತಾ ಕೂತಿರಬೇಕಾದರೆ ನಿಂಬೆಗಿಡದಲ್ಲಿದ್ದ ಹಕ್ಕಿಮರಿ ನೋವಿನಿಂದ ಕಿರುಚತೊಡಗಿತು. ಏನು ಆಪತ್ತೊ ಎಂದುಕೊಂಡು ಧಾವಿಸಿ ಬಂದು ನೋಡಿದರೆ ಅಲ್ಲಿ ಕಂಡ ದೃಶ್ಯ ನನ್ನನ್ನು ದಂಗು ಬಡಿಸಿತು. ಗೂಡಿಂದ ಆಚೆ ನೆಗೆದಿದ್ದ ಮರಿಹಕ್ಕಿಗೆ ಅದರ ಅಪ್ಪ ಕೊಕ್ಕಿನಿಂದ ಕುಕ್ಕುತ್ತಿತ್ತು. “ನಮಗೆ ಕೇಳದೆ ಇನ್ನೊಂದು ಸಲ ಆಚೆ ಹೋಗ್ತಿಯಾ? ಆ್ಞಂ’’ ಎಂದು ಗದರಿಸುತ್ತ ಕುಕ್ಕುತ್ತಿರುವಂತೆ ಭಾಸವಾಯ್ತು. ಅಪ್ಪ ಅಂದ್ರೆ ಅಪ್ಪನೇ. (ಆದರೆ ನಮ್ಮಪ್ಪ ಹೀಗಿರಲಿಲ್ಲ!)


ಪಕ್ಷಿಗಳೊಡನೆ ನನ್ನ ಒಡನಾಟ ಕಮ್ಮಿಯೇನಲ್ಲ. 1984ರ ವಿಷಯ- ನಮ್ಮ ಕಾಂಪೌಂಡ್ ಮೇಲೆ ಮುವ್ವತ್ತಕ್ಕೂ ಹೆಚ್ಚು ಗುಬ್ಬಿಗಳು ದಿನಾಗಲು ಕೂತುಕೊಳ್ಳುತ್ತಿದ್ದವು. ಅವುಗಳಿಗೆ ಬೆಳಿಗ್ಗೆ ಹೊತ್ತು ಅಕ್ಕಿ, ಗೋಧಿ, ಭತ್ತ ಮುಂತಾದ ಧಾನ್ಯಗಳನ್ನು ಗೋಡೆಯ ಉದ್ದಕ್ಕೂ ಇಡುತ್ತಿದ್ದೆನು. ಅಷ್ಟೂ ಗುಬ್ಬಿಗಳು ಒಂದೇ ಸಲಕ್ಕೆ ಹಾರಿಬಂದು ಪರಸ್ಪರ ಕಿಚಕಿಚನೆ ಗದ್ದಲ ಎಬ್ಬಿಸುತ್ತಿದ್ದವು. ನಾ ಕಂಡ ಎಲ್ಲ ಹಕ್ಕಿಗಳಿಗಿಂತ ಗುಬ್ಬಚ್ಚಿಗಳು ಮಹಾ ಜಗಳಗಂಟಿಗಳು. ನಾನು ಕೊಂಚ ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ಪರಸ್ಪರ ಬೈಯ್ಯುವ, ಗುದ್ದಾಡುವ ಒಂದು ಇನ್ನೊಂದನ್ನು ಕೊಕ್ಕಿನಿಂದ ಕುಕ್ಕುತ್ತಾ ನೆಲದ ಮೇಲೆ ಎರಡೆರಡು ಜೊತೆಯಾಗಿ ಉರುಳಾಡುತ್ತಾ ಕಚ್ಚಾಡುತ್ತಿದ್ದವು. ಅವು ಗೋಡೆಯ ಮೇಲಿಂದ ಬಿದ್ದಾಗ ರಪ್ ಎಂದು ಶಬ್ದವಾಗುತ್ತಿತ್ತು. ಅಷ್ಟರಲ್ಲಿ ಆಚೆ ಬಂದು ಉಶ್ ಎಂದು ಗದರಿ ಓಡಿಸಿಬಿಡುತ್ತಿದ್ದೆ. ಆದರೂ ಕೆಲವು ಗುಬ್ಬಿಗಳು ಅವರ ಜಗಳ ನಮಗೇಕೆ? ಎಂಬಂತೆ ಹಾಕಿದ್ದ ಕಾಳನ್ನು ತಿನ್ನುವುದರಲ್ಲಿ ಮಗ್ನವಾಗಿರುತ್ತಿದ್ದವು. ಕೊನೆಗೂ ಅವುಗಳ ಜಗಳ ತೀರ್ಮಾನವಾದರೂ, ಕೆಲವು ಮಾತ್ರ ಬಂದು ತಿನ್ನುತ್ತಿದ್ದವು. ಒಂದು ಸೋಜಿಗದ ಸಂಗತಿ ಎಂದರೆ, ನಾನು ಯಾವುದೇ ಬಣ್ಣದ ಸೀರೆಯಲ್ಲಿದ್ದರೂ ಗುರುತಿಸಿ ಪುರ್ರನೆ ಎಲ್ಲ ಗುಬ್ಬಿಗಳು ಹಾರಿ ಬಂದು ಕಾಂಪೌಂಡ್ ಮೇಲೆ ಕುಳಿತು, ತಮ್ಮ ಕೊಕ್ಕನ್ನು ಕ್ಲೀನ್ ಮಾಡಿಕೊಳ್ಳುತ್ತ ರೆಕ್ಕೆಯನ್ನು ನೀವಿಕೊಳ್ಳುತ್ತಿದ್ದವು. ಇವುಗಳ ನಡವಳಿಕೆಯನ್ನು ಗುರುತಿಸಿದ, ನನ್ನ ತಮ್ಮನ ಹೆಂಡತಿ- ಅತ್ತಿಗೆ… ಇವು ನೀವು ಬಂದಾಗ ಮಾತ್ರ ಬರುತ್ತವೆ, ನಾವು ಎಷ್ಟೋ ಹೊತ್ನಿಂದ ಇಲ್ಲೇ ಇದ್ದೇವೆ, ಒಂದೂ ಬರಲಿಲ್ಲ ಎಂದಳು. ಓ ಈ ಚುಲ್ಟಾರಿಗಳಿಗೆ ಮುಖ ಗುರುತಿಸುವ ದೃಷ್ಟಿ ಕೂಡ ಇದೆ ಎಂದು ತಿಳಿದು ಮನಸ್ಸಿಗೆ ಆನಂದವಾಯಿತು. ನಮ್ಮ ಮುನ್ನಿಗೆ (ನಾಯಿ) ಈ ಗುಬ್ಬಿಗಳನ್ನು ಕಂಡರಾಗುತ್ತಿರಲಿಲ್ಲ. ಏಕೆಂದರೆ ಅದಕ್ಕೆ ಜಗಳವಾಡುವವರನ್ನು ಕಂಡರಾಗುತ್ತಿರಲಿಲ್ಲ. ಜಗಳವಾಡುವವರನ್ನು ಕಂಡಾಗಲೆಲ್ಲ ಬೊಗಳುತ್ತಾ ಬಿಡಿಸಲು ಹೋಗುತ್ತಿದ್ದಳು. ಗುಬ್ಬಿಗಳು ಕಚ್ಚಾಡುತ್ತಾ ಉರುಳಾಡಿಕೊಂಡು ನೆಲಕ್ಕೆ ಬಿದ್ದಾಗ ಅವುಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಳು. ಒಂದು ದಿನ ಪಾಪ ಮರಿಗುಬ್ಬಿಯೊಂದು ಮುನ್ನಿಯ ಬಾಯಿಗೆ ಸಿಕ್ಕಿ ಸತ್ತೇ ಹೋಯಿತು. ತುಂಬ ಬೇಜಾರಾಗಿದ್ದರಿಂದ ಧಾನ್ಯ ಹಾಕುವುದನ್ನು ನಿಲ್ಲಿಸಿದೆನು. ಆದರೂ ಒಂದೆರಡು ದಿನಗಳ ಕಾಲ ಕೆಲವು ಬರುತ್ತಿದ್ದವು. ಆಗಲೂ ಮುನ್ನಿ ಒಂದು ಗುಬ್ಬಿಯನ್ನಿಡಿದು ಬಿಟ್ಟಳು, ಅದನ್ನು ಉಪಾಯವಾಗಿ ಅದರ ಬಾಯೊಳಗಿಂದ ಮಿತಾ ಈಚೆಗೆ ತೆಗೆದಳು. ನಾಯಿಯು ಹಿಡಿದ ರಭಸಕ್ಕೆ ಅದರ ಕಾಲು ಮುರಿದು ರಕ್ತ ಬರುತ್ತಿತ್ತು. ಆಗ ಮಿತಾ ಏಳನೆಯ ತರಗತಿಯಲ್ಲಿದ್ದಳು. ಕೂಡ್ಲೆ ಇವಳು ತುಂಬೆ ರಸವನ್ನು ಗಾಯಕ್ಕೆ ಹಾಕಿ ಒಂದೆರಡು ಕಡ್ಡಿಗಳನ್ನು ಜೋಡಿಸಿ ಬಟ್ಟೆ ಸುತ್ತಿಬಿಟ್ಟಳು. ಅದು ಕುಂಟುತ್ತಾ ಅಲ್ಪಸ್ವಲ್ಪ ನಡೆದಾಡತೊಡಗಿತು. ಬಾಲ್ಯದಲ್ಲಿ ನನ್ನ ತಮ್ಮಂದಿರು ಗುಬ್ಬಿಗಳನ್ನು ಹಿಡಿದುಕೊಂಡು ಆಟವಾಡುವಾಗ, ಅಜ್ಜಿ ನಮಗೆ ಅವುಗಳನ್ನು ಹಿಡಿಯಬಾರದು, ಅದರ ಗುಂಪಿನ ಹಕ್ಕಿಗಳು ಇವುಗಳನ್ನು ಸೇರಿಸಲ್ಲವೆಂದಿದ್ದರು. ಇದು ನೆನಪಾಗಿ, ಮಿತಾಳಿಗೆ ಗುಬ್ಬಿಯನ್ನೇಕ್ಕೆ ಹಿಡಿದುಕೊಂಡೆ? ಈಗ ಬೇರೆ ಗುಬ್ಬಿಗಳು ಮತ್ತೆ ಇದನ್ನು ಸೇರಿಸೋಲ್ಲವಂತೆ ಎಂದೆನು. ಅಮ್ಮಾ… ಅದೆಲ್ಲ ಬರೀ ಸುಳ್ಳು… ಪಾಪ ಇದು ಕಾಲು ಮುರಿದುಕೊಂಡಿದೆ. ಬೆಕ್ಕೇನಾದರೂ ಇದನ್ನು ಕಂಡಿದ್ದರೆ ಓಂ ಸ್ವಾಃ ಮಾಡ್ತಿತ್ತು ಎಂದಳು. ಆಶ್ಚರ್ಯಕ್ಕೆ ಕೆಲವು ದಿನಗಳ ನಂತರ ಕಾಲು ಮುರಿದ ಗುಬ್ಬಿ ಬಂದು ಗೋಡೆಯ ಮೇಲೆ ಕೂತು ನಮ್ಮ ಬಾಗಿಲ ಕಡೆ ನೋಡುತ್ತಿದ್ದುದನ್ನು ಮಿತಾ- ಅಮ್ಮ… ಬೇಗ ಬಾ… ಕಾಲು ಕಟ್ಟಿಸಿಕೊಂಡಿದ್ದ ಗುಬ್ಬಿ ಮತ್ತೆ ಬಂದಿದೆ ಎಂದಳು. ನಂಬದೆ ಓಡೋಡಿ ಮನೆಯಾಚೆ ಬಂದು ನೋಡಿದೆ. ಹೌದು ಅದೇ ಗುಬ್ಬಿ! ಮಿತಾ ಸೀದಾ ಆ ಗುಬ್ಬಿಯ ಹತ್ತಿರ ಹೋಗಿ ಮಿಸುಕಾಡದೆ ಕುಳಿತಿದ್ದ ಅದನ್ನು ಹಿಡಿದು ತಾನು ಕಟ್ಟಿದ್ದ ಬಟ್ಟೆ ಕಡ್ಡಿಗಳನ್ನೆಲ್ಲ ಬಿಚ್ಚಿ ತೆಗೆದಳು. ಅದರ ಕಾಲು ಸರಿ ಹೋಗಿತ್ತು! ಮಿತಾಳ ಸಂತಸಕ್ಕೆ ಪಾರವಿರಲಿಲ್ಲ. ಗುಬ್ಬಿಯನ್ನು ಚೆನ್ನಾಗಿ ಮುದ್ದು ಮಾಡಿ ತಿನ್ನಲು ಭತ್ತ ಹಾಕಿದಳು. ಈ ಗುಬ್ಬಿ ಮಾತ್ರ ಎಷ್ಟೋ ದಿನಗಳ ತನಕ ಬರುತ್ತಿತ್ತು.
ಪ್ರಾಣಿ ಪಕ್ಷಿಗಳು ನಮ್ಮ ಜೀವನದ ದೃಷ್ಟಿಕೋನವನ್ನೇ ಬದಲಿಸಿಬಿಡಬಹುದು. 1966ರ ಮಾತು. ಮಾನಸ ಗಂಗೋತ್ರಿಯ ರಸ್ತೆ ರಸ್ತೆಗಳಲ್ಲಿ ಭಗ್ನಪ್ರೇಮಿಯೊಬ್ಬ ಹುಚ್ಚನಂತೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ತಂತಾನೇ ಬಡಬಡಿಸುತ್ತ ವಾಸ್ತವತೆಯ ಅರಿವಿಲ್ಲದೆ ತಿರುಗುತ್ತಿದ್ದನು. ಈ ಹಿಂದೆ ಇಲ್ಲೇ ಈತ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದಾಗ ತನ್ನ ಸಹಪಾಠಿಯನ್ನು ಲವ್ ಮಾಡುತ್ತಿದ್ದನಂತೆ. ಓದು ಮುಗಿದ ನಂತರ ಆಕೆ ಇವನನ್ನು ಕ್ಯಾರೆ ಎನ್ನದೆ ತನ್ನೂರಿಗೆ ಹೊರಟು ಹೋದಾಗಿನಿಂದ ಇವನ ತಲೆಕೆಟ್ಟು ಮೊಸರಿನಗಡಿಗೆಯಂತಾಗಿ, ತನ್ನ ಓದಿಗೆ ತಿಲಾಂಜಲಿ ಬಿಟ್ಟು ಅವಳಿಗಾಗಿ ಗಂಗೋತ್ರಿ ಸುತ್ತಲು ಪ್ರಾರಂಭಿಸಿದವನು ನಾವು ಓದುವ ಕಾಲಕ್ಕೂ ನಿಲ್ಲಿಸಿರಲಿಲ್ಲ. ನಾನು ಮತ್ತು ಸ್ನೇಹಿತೆಯರು ಆತನ ಬಗ್ಗೆ ಅಸಹನೆಯಿಂದ… ಇವನ ಪ್ರೇಮಿ ಸಿಗದಿದ್ದರೇನಂತೆ, ಅವಳಿಗಿಂತ ಸುಂದರಿಯಾದ ಒಳ್ಳೆಯ ಹುಡುಗಿಯನ್ನು ಮದುವೆಯಾಗಿ ಸುಖವಾಗಿ ಇರೋದಿಕ್ಕೇನು ದಾಡಿ ಈ ಮುಂಡೇದಕ್ಕೆ ಎಂದು ಅವನಿಗೆ ಕೇಳಿಸದಂತೆ ಮಾತಾಡಿಕೊಳ್ಳುತ್ತಿದ್ದೆವು. ಅವನ ತಂದೆ ತಾಯಿಗಳು ಇವನ ಮನಸ್ಸನ್ನು ಸ್ಥಿಮಿತಕ್ಕೆ ತರಲು ಪ್ರಯತ್ನಿಸಿ ಸೋತಿದ್ದರಂತೆ. ಆ ಭಗ್ನಪ್ರೇಮಿ ಎದುರಿಗೆ ಸಿಕ್ಕಿದಾಗಲೆಲ್ಲ, ನಮ್ಮ ಕೋಪ ನೆತ್ತಿಗೇರಿದಂತಾಗಿ- ಈ ಪೀಡೆಗೆ ತಂದೆ ತಾಯಿಗಳ ಕಷ್ಟ ಯಾಕೆ ತಿಳೀತಿಲ್ಲ? ಥೂ ಇವನಿಗೆ ಕೈಕಾಲು ಕಟ್ಟಿ ಉಪವಾಸ ಕೆಡವಿದರೆ ತಂತಾನೆ ದಾರಿಗೆ ಬರುತ್ತಾನೆ ಎಂದು ಸ್ನೇಹಿತೆ ಜಯಿ ಹೇಳುವುದು ಸಾಮಾನ್ಯವಾಗಿತ್ತು.


ನನಗೂ ಭಗ್ನಪ್ರೇಮಿಗಳ ಬಗ್ಗೆ ಉಪೇಕ್ಷೆ ಇದ್ದೇ ಇತ್ತು. ಆದರೆ ಅದನ್ನು ನಮ್ಮ ಬೆಕ್ಕುಗಳು ಜೀವನ ದರ್ಶನ ಮಾಡಿಸಿ ಉಲ್ಟಾ ಮಾಡಿಬಿಟ್ಟವು! ಕಲಾವಿದ ಆನಂದಮೂರ್ತಿಯವರು ಒಮ್ಮೆ ನಮ್ಮ ಮನೆಗೆ ಬಂದಿದ್ದಾಗ ನಮ್ಮ ಮನೆಯ ಬೆಕ್ಕು ತನ್ನ ಎದುರಿಗೆ ನಿರ್ಭಯವಾಗಿ ಓಡಾಡುತ್ತಿದ್ದ ಇಲಿಯನ್ನು ಹಿಡಿಯದೆ ಸುಮ್ಮನೆ ಓಡಾಡಿಕೊಂಡಿತ್ತು. ಬೆಕ್ಕಿನ ವರ್ತನೆಗೆ ಆಶ್ಚರ್ಯ ಪಟ್ಟು, ನಿಮ್ಮ ಮನೆಯ ಪ್ರಾಣಿಗಳಿಗೆ ನಿಜ ಸ್ವಭಾವಗಳು ಹೊರಟುಹೋಗುತ್ತವೆ ಎಂದು ತಮಾಷೆ ಮಾಡಿದ್ದರು. ಆಮೇಲೆ ಎರಡು ಮುದ್ದಾದ ಬಿಳಿಬೆಕ್ಕಿನ ಮರಿಗಳನ್ನು ನಮಗೆ ತಂದುಕೊಟ್ಟರು. ಅವುಗಳು ಎಷ್ಟು ಮುದ್ದಾಗಿದ್ದುವೆಂದರೆ, ಮನೆಯ ಮುಂದೆ ಓಡಾಡುವವರೆಲ್ಲರೂ ಕಣ್ಣಾಕುತ್ತಿದ್ದರು. ಬೀದಿಯಲ್ಲಿ ಓಡಾಡುವ ಮಕ್ಕಳಂತು ನೆಟ್ಟದೃಷ್ಟಿಯಿಂದ ನೊಡುತ್ತ ನಿಂತುಬಿಡುತ್ತಿದ್ದರು. ಕದಿಯಲು ಇರಬೇಕೆಂದು ಅನುಮಾನ ಬರುತ್ತಿತ್ತು. ಇವುಗಳಿದ್ದ ಚೆಂದಕ್ಕೆ ಚಿನ್ನು ಮತ್ತು ಬೆಳ್ಳಿ ಎಂದು ಹೆಸರಿಟ್ಟೆವು. ಇವು ಮನೆಯ ಹೊರಗೆ ಹೋಗದಂತಿರಲು ಚಿಕ್ಕಮಗಳು ಮಿತಾ ಅವುಗಳಿಗಾಗಿ ಮರಳಿನ ಹಾಸಿಗೆ ಸಿದ್ಧಪಡಿಸಿ, Toiletಗೆ ಹೋಗಲು ಅಭ್ಯಾಸ ಮಾಡಿಸಿದಳು. ಒಂದು ವರ್ಷದ ತನಕ ಚೆಂದವಾಗಿ ದಷ್ಟಪುಷ್ಟವಾಗಿ ಬೆಳೆದವು. ಈ ಜೋಡಿ ಬೆಕ್ಕುಗಳು. ಮನೆಗೆ ಬಂದಿದ್ದ ಸ್ನೇಹಿತರೊಬ್ಬರು ಗಂಡೋ-ಹೆಣ್ಣೋ ಮೇಡಂ? ಎಂದು ಕೇಳಿದರು. ಎರಡೂ ಗಂಡು ಅಂದಾಗ ಸಧ್ಯ ಒಳ್ಳೆಯದೇ ಆಯಿತು, ಇಲ್ಲದಿದ್ದರೆ ವರ್ಷ ವರ್ಷವೂ ಇವು ಮರಿ ಹಾಕ್ತಿದ್ದವು ಅಂದರು. ಅದಕ್ಕೆ ಮಿತಾ ‘ಅಯ್ಯೋ ಅವುಗಳ ಬಾಣಂತನ ನಾನು ಮಾಡ್ತಿದ್ದೆ’ ಅಂದಳು. ಈ ಹಿಂದೆ ಹಾಗೇ ಮಾಡಿದ್ದಳು. ಆದ್ರೆ, ಮನೆ ತುಂಬ ಮರಿಗಳು ಅಡಿಗೆ ಮನೆಯಲ್ಲಿ ಓಡಾಡೋದನ್ನು ಸಹಿಸಲು ನನಗೆ ಕಷ್ಟವಾಗುತ್ತಿತ್ತೆಂದು ನಾ ಅಂದೆ. ಆಗ ಅವರು, ಅಯ್ಯೋ ಆ ಚಿಂತೆ ಬಿಡಿ, ಎರಡೂ ಗಂಡು ಬೆಕ್ಕಾದ್ದರಿಂದ ಮನೆಯಲ್ಲಿರುವುದಿಲ್ಲ… ಹೆಣ್ಣಾಗಿದ್ದರೆ ಉಳೀತಿದ್ದವು ಎಂದು ನುಡಿದರು. ನನಗಾಗ ಹೊಸ ಚಿಂತೆ ಶುರುವಾಯಿತು. ಬೆಕ್ಕುಗಳು ಮನೆ ಬಿಟ್ಟು ಹೋಗದಂತಿರಬೇಕಾದರೆ ಏನು ಮಾಡಬೇಕೆಂದು ಪ್ಲಾನ್ ಮಾಡಲು ಆರಂಭಿಸಿದೆ. ಮಿತಾ ತನ್ನ ಅಕ್ಕಪಕ್ಕವೆ ನಿತ್ಯ ಮಲಗಿಸಿಕೊಳ್ಳುತ್ತಿದ್ದಳು. ಚಿನ್ನು ಮತ್ತು ಬೆಳ್ಳಿ ನಡುವೆ ಸದಾ ಹಿಸ್ಸಿಂಗ್ ಜಗಳ ನಡೆಯುತ್ತಿತ್ತು. ಮಿತಾ ಆರಾಮ ಕುರ್ಚಿಯಲ್ಲಿ ಕೂತಾಗ, ಇವೆರಡೂ ಅವಳ ತೊಡೆಯ ಮೇಲೆ ಒಂಟಿಯಾಗಿ ಮಲಗಲು ಜಗಳ ಕಾಯುತ್ತಿದ್ದವು. ಮಗಳು ಅವುಗಳನ್ನು ಸಮಾಧಾನಪಡಿಸಿ ಒಟ್ಟಿಗೇ ಮಲಗಿಸಿಕೊಳ್ಳುತ್ತಿದ್ದಳು, ಆಗ ಅವು ಪರಸ್ಪರ ಗುರುಗುಟ್ಟುತ್ತಾ ಪಂಜದಿಂದ ಪರಚಾಡಲು ಸಮಯ ನೋಡುತ್ತಿದ್ದವು. ನಾನು ಓಡಿಸಲು ನೋಡಿದರೆ, ಮಿತಳೂ ಕೇಳುತ್ತಿರಲಿಲ್ಲ, ಬೆಕ್ಕುಗಳೂ ಕೇಳುತ್ತಿರಲಿಲ್ಲ.
ಕೆಲವು ದಿನಗಳ ನಂತರ, ಬೆಳ್ಳಿ ಸಂಗಾತಿ ಹುಡುಕಿಕೊಂಡು ಮನೆ ಬಿಟ್ಟು ಹೊರಟುಹೋದನು. ಆಗ ಹಿಂದೆ ಯಾರೋ ಹೇಳಿದ್ದ ಭವಿಷ್ಯ ನಿಜವಾಗಿರುವುದ ನೆನೆದು ಮನಸ್ಸಿಗೆ ತುಂಬಾ ಬೇಜಾರಾಯಿತು. ಮುಂದೊಂದು ದಿನ ಚಿನ್ನು ಕೂಡ ನಮ್ಮನ್ನು ಬಿಟ್ಟು ಹೊರಟುಹೋಗಬಹುದೆಂದು ಚಿಂತಿಸಿ ಪರಿತಾಪ ಪಡುವಂತಾಯಿತು. ಮುಂದಿನ ಒಂದೆರಡು ದಿನಗಳ ನಂತರ ಧುತ್ ಎಂದು ಚಿನ್ನುನೂ ಮಾಯವಾಗಿಬಿಟ್ಟ. ಬೆಳ್ಳಿ ಹಾದಿಯಲ್ಲಿ ಚಿನ್ನು ಕೂಡ ಹೊರಟುಬಿಟ್ಟನು. ಆದರೂ ಒಮ್ಮೆ ಹುಡುಕುವ ಪ್ರಯತ್ನ ಮಾಡೋಣವೆಂದು ಎಲ್ಲಾ ಕಡೆ ಚಿನ್ನೂ… ಚಿನ್ನೂ ಎಂದು ಕೂಗುತ್ತಾ ಹುಡುಕಿದರೂ ಮಿಯಾಂವ್ ಶಬ್ದ ಪ್ರತಿಧ್ವನಿಸಲಿಲ್ಲ. ಒಂದೆರಡು ದಿನಗಳ ನಂತರ ಕಾಲೇಜಿಗೆ ಹೊರಡಲು ತಲೆ ಬಾಚಿಕೊಳ್ಳುವಾಗ ಕಿಟಕಿಯಾಚೆ ಕಣ್ಣು ಹಾಯಿಸಿದರೆ ಚಿನ್ನು ನಮ್ಮ ಕಾಂಪೌಂಡ್ ಮೇಲೆ ಕೂತಿದ್ದನು. ಅದನ್ನು ನೋಡಿದ್ದೇ ತಡ, ಚಿನ್ನು ಬಾರೋ… ಎಂದು ಕೂಗಿದೆ. ಎಷ್ಟು ಜೋರಾಗಿ ಕೂಗಿದರೂ ನನ್ನ ಕಡೆ ತಿರುಗಿ ನೋಡಲಿಲ್ಲ. ಏನನ್ನೋ ದುರದುರನೆ ನೆಟ್ಟದೃಷ್ಟಿಯಿಂದ ನೋಡುತ್ತಿರುವುದು ಕಾಣಿಸಿತು. ಆಶ್ಚರ್ಯದಿಂದ ಮನೆಯಾಚೆ ದಢದಢನೆ ಓಡಿ ಬಂದು ಜೋರಾಗಿ ಮತ್ತೆ ಕೂಗಿದೆ. ಉಹುಂ… ನನ್ನ ಕಡೆ ಮುಖ ತಿರುಗಿಸಲಿಲ್ಲ, ಬರೇ ತನ್ನ ಒಂದು ಕಿವಿಯನ್ನು ನನ್ನ ಕಡೆ ಆಂಟೇನಾ ರೀತಿ ಹೊರಳಿಸಿ ಮತ್ತೆ ನೆಟ್ಟಗೆ ನಿಲ್ಲಿಸಿಕೊಂಡಿತು. ಆಗ ನಾನು ಕುತೂಹಲಕ್ಕೆ ಅದರ ಕಣ್ಣುಗಳನ್ನು ಗಮನಿಸಿದೆ. ಯಾವ ಪರಿವೆಯಿಲ್ಲದೆ ಅದು ಎದುರು ಮನೆಯ ಬಾಗಿಲನ್ನೇ ದಿಟ್ಟಿಸುತ್ತಿತ್ತು. ನನ್ನ ಕೂಗಾಟ ಕೇಳಿಸಿಕೊಂಡ ಮಿತಾ, ಸಂತಸದಿಂದ ಓಡಿಬಂದು ಅವಳೂ ಕೂಗಿದಳು. ಆಗ ಮಾತ್ರ ಅದು ಒಂದು ಸಲ ಅವಳ ಕಡೆ ತಿರುಗಿ ನಿರ್ವಿಕಾರವಾಗಿ ನೋಡಿ ಮತ್ತೆ ಅದೇ ಮನೆಯ ಬಾಗಿಲು ನೋಡಲು ಶುರು ಮಾಡಿತು. ಅರೆ… ಇದೇನು ಎಷ್ಟು ಕರೆದರೂ ಬರುತ್ತಿಲ್ಲ, ಎರಡು ದಿನಗಳಿಂದ ಹೊಟ್ಟೆಗೆ ಏನನ್ನೂ ತಿನ್ನದೆ ಅದ್ಯಾಕೆ ಹೀಗೆ ಕುಳಿತಿದೆ ಎಂದು ಅರ್ಥವಾಗಲಿಲ್ಲ. ಆಗ ನಾನು, ಅದು ತನ್ನ ಕಣ್ಣುಗಳನ್ನು ನೆಟ್ಟಿದ್ದ ಕಡೆ ನಾನೂ ಒಮ್ಮೆ ಕಣ್ಣು ಹಾಯಿಸಿದೆ. ಮೊದಲಿಗೆ ಏನೂ ಕಾಣಲಿಲ್ಲ. ಕೊಂಚ ಹೊತ್ತಿನ ನಂತರ ಆ ಮನೆಯೊಳಗಿಂದ ನಮ್ಮ ಚಿನ್ನುಗಿಂತಲೂ ಸುಂದರವಾದ ಅಪರೂಪದ ಬಣ್ಣಗಳನ್ನುಳ ಬೆಕ್ಕು! ಚಿನ್ನು ಕಣ್ಣರಳಿಸಿ ಚಂಗನೆ ನೆಗೆದು ಅದರ ಬಳಿ ಹೋಗಲು ಪ್ರಯತ್ನಿಸಿತು. ಅಷ್ಟರಲ್ಲಿ ಆ ಸುಂದರಿ, ಚಿನ್ನುವನ್ನು ಕಂಡು ಕಾಲುಗಳನ್ನು ಒದರಿ ಬಿಂಕದಿಂದ, ಹೋಗಲೋ ಎನ್ನುವಂತೆ careless ಆಗಿ ಮಿಂಚಿನಂತೆ ಮಾಯವಾದಳು. ಪ್ರಾಣಿಲೋಕದ್ದೇ ಅಳತೆಗೋಲು ಬೇರೆ ಇರಬೇಕು! ಆ ಬಿಂಕದ ಸುಂದರಿ ಚಿನ್ನುಗೆ ಸುಲಭದಲ್ಲಿ ದಕ್ಕದೆ ಅವನ ನಿದ್ದೆಗೆಡಿಸಿದ್ದಳು. ಅಯ್ಯೋ ಪಾಪ ಚಿನ್ನು ಎಂದು ಅನುಕಂಪ ಸೂಚಿಸುವಂತಾಯಿತು. ಆನಂತರ ಒಂದು ದಿನ ಚಿನ್ನು ಮನೆಗೆ ವಾಪಸ್ ಬಂದು ಎಂದಿನಂತೆ ನಮ್ಮೊಟ್ಟಿಗೆ ಇರಹತ್ತಿದನು. ಚಿನ್ನು ಬೆಕ್ಕಿನ ಪ್ರೇಮದ ಕಾವನ್ನು ಕಂಡ ಮೇಲೆ, ಭಗ್ನಪ್ರೇಮಿಗಳ ಬಗ್ಗೆ ಇದ್ದ ನನ್ನ ಧೋರಣೆ ಉಲ್ಟಾ ಆಗಿಬಿಟ್ಟಿತು.


ಇಂಥವುಗಳ ಜೊತೆಗೆ ಉರುಗ ಪ್ರಸಂಗವೂ ಇದೆ. ನಮ್ಮ ಮನೆಗೂ ನಮ್ಮ ತೋಟಕ್ಕೂ ದೇಮಾಗೂ ಇರುವ ಉರುಗ ಸಂಬಂಧ ಚಕಿತಗೊಳಿಸುತ್ತದೆ. ಬಿಎ ಓದುವಾಗ ಆತ್ಮೀಯ ಗೆಳೆಯರಾದ ಉಮರಬ್ಬ, ಶ.ಶೆಟ್ಟಿ, ಕ್ಷೀರ ಮತ್ತು ಹೊಸಳ್ಳಿ ಶಿವರಾಂ ಮುಂತಾದವರು ಹಾವು ಎಂದು ದೇಮಗೆ ಅಡ್ಡ ಹೆಸರಿಟ್ಟಿದ್ದರು. ಬಹುಶಃ ಈ ಕಾರಣಕ್ಕೋ ಏನೋ ಆಗಾಗ್ಗೆ ದೇಮಾನ ಅಕ್ಕಪಕ್ಕ ನಿಜ ನಾಗರಗಳ ಸರಿದಾಟವಿರುತ್ತದೆ. ಸ್ನೇಹಿತರು ಹಾವು ಎಂದು ಯಾಕಿಟ್ಟರು ಎಂದು ಕೇಳಿದೆ. ಅದರಲ್ಲೇನು ವಿಶೇಷ? ಮಹಾದೇವನ ಆಭರಣ ಹಾವಲ್ಲವಾ ಎಂದು ಪುರಾಣ ಬಿಟ್ಟನು. ನೋಡಲು ನೀನು ದೊಡ್ಡ ಕರಿನಾಗರದಂತೆ ಇದ್ದೀಯ, ಅಡ್ಡ ಹೆಸರು ಸರಿಯಾಗಿದೆ ಎಂದೆ. ಆಹ್….beautiful ಎಂದು ನಕ್ಕನು. ಆಮೇಲೆ ತನ್ನ ಗೆಳೆಯರಿಗಿರುವ ಅಡ್ಡ ಹೆಸರುಗಳನ್ನು ಹೇಳಿದನು. ಎಲ್ಲರ ಹೆಸರುಗಳು ಒಂದೊಂದು ಪ್ರಾಣಿಯನ್ನು ಸಂಕೇತಿಸುತ್ತಿದ್ದವು. ಇದು ಆದಿವಾಸಿಗಳ ಕುಲಚಿಹ್ನೆಗಳಂತೆ ಕಂಡಿತು.
ದೇಮಾ ಒಡಲಾಳ ಬರೆಯುತ್ತಿದ್ದ ಕಾಲದಲ್ಲಿ ಒಂದು ಮಧ್ಯಾಹ್ನ ಬೋರಲಾಗಿ ಮಲಗಿದ್ದ ಇವನ ಕಡೆ ಕಣ್ಣು ಹಾಯಿಸಿದರೆ, ಬೆನ್ನಿಗೆ ಉದ್ದಕ್ಕೆ ಏನೋ ನುಲಿದು ಕೊಂಡಿರುವ ದಪ್ಪದಾರದಂತೆ ಇದ್ದುದನ್ನು ಗಮನಿಸಿದೆ. ಆಮೇಲೆ ಅದು ಕೊಂಚ ಚಲಿಸಿದಂತೆ ಆಯಿತು, ದೇಮಾಗೆ ಅಲುಗಾಡದೆ ಹಾಗೇ ಇರಲು ಹೇಳಿ ಹತ್ತಿರ ಹೋಗಿ ಗಮನಿಸಿದರೆ ಅದು ಮಿಂಚುವ ಮೈಯ್ಯನ್ನು ನುಲಿಯುತ್ತಾ, ಒಂದು ಬೇಳೇ ಕಾಳು ಅಗಲ ಹೆಡೆ ಎತ್ತಿ ನನ್ನ ಕಡೆ ಮುಖ ತಿರುಗಿಸಿತು. ಅದರ ಕಣ್ಣುಗಳು ಎರಡು ಚುಕ್ಕೆಗಳಂತೆ ಫಳಗುಟ್ಟುತ್ತಿದ್ದವು. ತನ್ನ ನಾಲಿಗೆಯನ್ನು ಆಚೆ ಈಚೆ ಆಡಿಸುತ್ತಿತ್ತು. ಇದೊಂದು ಮರಿನಾಗರವೆಂದು ತಿಳಿದ ಕೂಡಲೆ, ಬೆಡ್‍ಶೀಟ್‍ನಿಂದ ಅದನ್ನು ಮುಚ್ಚಿ ಹಿಡಿದು ಹೊರಗೆಬಿಟ್ಟೆ. ಒಳ ಬಂದಾಗ, ದೇಮಾ ನಿದ್ದೆಗಣ್ಣಲ್ಲಿ ಏನದೂ ಎಂದು ಕೇಳಿ ನಾಗಮರಿ ಅಂಟಿದ್ದ ಜಾಗವನ್ನು ಉಜ್ಜಿಕೊಳ್ಳುತ್ತಿದ್ದನು. ಏನಾಗ್ತಿದೆ ಎಂದು ಗಾಬರಿಯಿಂದ ಕೇಳಿದೆ. ಏನೊ ಒಂಚೂರು ಚುರು ಚುರು ಅಷ್ಟೆ ಎಂದನು ಆ ನಿದ್ದೆ ಬೋರ. ಅದು ಚಿಕ್ಕಮರಿಯಾದ್ದರಿಂದ ವಿಷವಿರಲಾರದೆಂದು ಸಮಾಧಾನ ಪಟ್ಟೆನು. ನಾವಿದ್ದ ಮನೆಯ ಪಕ್ಕದಲ್ಲಿ, ಹನುಮಂತನ ಗುಡಿ cum ರಾಮ ಮಂದಿರವಿತ್ತು. ಇದನ್ನು ಕತ್ತೆ ದೇವಸ್ಥಾನ ಎನ್ನುತ್ತಿದ್ದರು. ಈ ಗುಡಿಯಲ್ಲಿ ವಯಸ್ಸಾದ ದೊಡ್ಡ ಸರ್ಪ ಎಷ್ಟೋ ವರ್ಷಗಳಿಂದ ವಾಸಿಸುತ್ತಿದೆ ಎಂದು ನೆರೆಮನೆಯವರು ಹೇಳಿದ್ದರು. ಆದರೆ ಅದು ಇದುವರೆಗೆ ಯಾರಿಗೂ ತೊಂದರೆ ಮಾಡಿಲ್ಲ ಎಂಬ ಮಾಹಿತಿಯನ್ನೂ ನೀಡಿದ್ದರು. ಆಗಾಗ ನಮ್ಮ ಮನೆಯೊಳಗೆ ನಾಗರ ಮರಿಗಳು ಓಡಾಡುತ್ತಿದ್ದ ಕಾರಣ ತಿಳಿದು, ಅಲ್ಲಿ ಇಲ್ಲಿ ಇದ್ದ ಗೋಡೆಯ ತೂತುಗಳನ್ನೆಲ್ಲ ಹುಡುಕೀ ಹುಡುಕಿ ಮುಚ್ಚಿ ನಿಟ್ಟುಸಿರುಬಿಟ್ಟೆ.
ಆಮೇಲೆ, ಕುವೆಂಪುನಗರದಲ್ಲಿ ಕಟ್ಟಿರುವ ಹೊಸ ಮನೆಗೆ ಬಂದರೂ ಇಲ್ಲೂ ಎತ್ತ ನೋಡಿದರತ್ತ ನಾಗರಹಾವುಗಳು ನುಲಿದಾಡುತ್ತಿದ್ದವು. ಕರಿನಾಗರ, 2 ಗೋಧಿ ನಾಗರ ಮತ್ತು ಒಂದು ಕಾಳಿಂಗ ಸರ್ಪದ ಮರಿ ಜೊತೆಗೆ ಮನೆಯ ಗೇಟಿನ ಮುಂದೆ ಹಾಕಿರುವ ಕಲ್ಲು ಹಾಸಿನ ಕೆಳಗೂ ಒಂದು ಹಾವು. ಇದೆಷ್ಟು ಸುಂದರವಾಗಿತ್ತೆಂದರೆ, ವಾತಾವರಣ ನಿಃಶ್ಯಬ್ಧವಾಗಿದ್ದಾಗ ಮೆಲ್ಲನೆ ಆಚೆ ಬಂದು ಓಡಾಡುವುದನ್ನು ಮನೆಯ ಛಾವಣಿಯ ಮೇಲೆ ನಿಂತು ನೋಡುತ್ತಿದ್ದೆವು. ಇದರ ಹೆಡೆಯೂ ಅತಿಸುಂದರ! ನಮ್ಮ ಕಾಂಪೌಂಡ್ ಪಕ್ಕದಲ್ಲಿದ್ದ ದೊಡ್ಡ ಹುತ್ತವೇ ಇವುಗಳ ಮೂಲಸ್ಥಾನವಾಗಿತ್ತು. ಒಂದು ಸಲ ಮಿತಾಳು ಲೈಬ್ರರಿಯಿಂದ ಕಾರ್ಟೂನ್ ಪುಸ್ತಕ ಪಡೆದು ಅದನ್ನು ದಾರಿ ಉದ್ದಕ್ಕೂ ಓದುತ್ತಾ ಮನೆಯ ಪಕ್ಕದಲ್ಲಿರುವ ಹುತ್ತದ ಬಳಿಯಿಂದ ನಡೆದು ಬರುತ್ತಿರುವಾಗ, ಇವಳ ದಾರಿಗೆ ಅಡ್ಡವಾಗಿ ಉದ್ದನೆಯ ಕರಿನಾಗರಹಾವು ನಿರ್ಭಯವಾಗಿ ನಿಧಾನಕ್ಕೆ ಚಲಿಸುತ್ತಿತ್ತಂತೆ. ಅದರ ಮೇಲೆ ಇವಳು ಹೆಜ್ಜೆ ಹಾಕಬೇಕೆನ್ನುವಾಗ ಕೈಲಿದ್ದ ಪುಸ್ತಕದ ಮರೆಯಲ್ಲಿ ಕರ್ರಗೆ ಕಂಡು ಅದು ಹಾವೆಂದು ಗೊತ್ತಾಗಿ ಇಡುತ್ತಿದ್ದ ಹೆಜ್ಜೆಯನ್ನು ಹಾಗೇ ನಿಲ್ಲಿಸಿಕೊಂಡಿದ್ದು ಆಮೇಲೆ ಓಡೋಡಿ ಮನೆಗೆ ಬಂದಳು. ನನಗಂತೂ ಎಷ್ಟು ಆತಂಕವಾಯಿತೆಂದರೆ, ಅಕಸ್ಮಾತ್ ಹೆದರಿಕೆಯಿಂದ ಕಾಲನ್ನು ಅದರ ಮೇಲೆ ಇಟ್ಟಿದ್ದರೆ ಗತಿ ಏನು? ಚಿಂತಿಸಿ ಹೈರಾಣಾದೆನು. ಆಮೇಲೆ ಹಾವಾಡಿಗನನ್ನು ಕರೆಸಿ ಹುತ್ತ ಅಗೆದು ಹಾವು ಹಿಡಿಯಲು ಪ್ರಯತ್ನಿಸಿದರೆ ಒಂದು ಹಾವು ಕೂಡ ಸಿಗಲಿಲ್ಲ. ಎಲ್ಲಾ ಮಾಯವಾಗಿದ್ದವು. ಆ ಹಾವಾಡಿಗನ ಪ್ರಕಾರ ಹಾವುಗಳಿಗೆ ಮುಂದಾಗುವುದು ತಿಳಿದು, ಬೇರೆ ಜಾಗಕ್ಕೆ ಹೊರಟು ಹೋಗುತ್ತವಂತೆ. ಮುಂದೆ ಅಗೆದು ಹಾಕಿದ್ದ ಹುತ್ತ ಬೆಳೆದು ಅದರೊಳಗೆ ವಾಸಿಸಲು ಅವೇ ಹಾವುಗಳು ಹಿಂತಿರುಗಿದವು.
ದೇಮಾನ ಜೊತೆ ಯಾವುದೇ ಪ್ರಾಣಿಗಳು ಇವನಂತೆ ಸುಖವಾಗಿ ನಿದ್ದೆ ಮಾಡಿಕೊಂಡು ಇದ್ದುಬಿಡುತ್ತವೆ. ನಿದ್ರಾಭಂಗ ಮಾಡುವ ಸೊಳ್ಳೆಗೆ ಮಾತ್ರ ಇವನಲ್ಲಿ ವಿನಾಯಿತಿ ಇಲ್ಲ ಅಷ್ಟೆ! ಸಾಮಾನ್ಯವಾಗಿ ದೇಮಾ ಗಾಳಿಗಾಗಿ ಕಿಟಕಿಯ ಪಕ್ಕದಲ್ಲಿ ನಿದ್ರಿಸುತ್ತಾನೆ. ಮಲಗುವ ರೂಮಿನ ಕಿಟಕಿಯ ಸರಳಿಗೆ ಒಂದು ದೊಡ್ಡ ಹೆಂಟೆಗೊದ್ದ ಉದ್ದಕ್ಕೆ ಮೈ ಚಾಚಿ ಕಣ್ಣು ಮುಚ್ಚಿ ನಿದ್ದೆ ಮಾಡುತ್ತಿತ್ತು. ಯಾವುದೋ ದಪ್ಪ ದಾರವಿರಬೇಕೆಂದು ಅದನ್ನು ನೋಡಿಯೂ ಸುಮ್ಮನಿದ್ದೆ. ಒಂದು ದಿನ ನಾನೇ ಕಿಟಕಿಯ ಪಕ್ಕ ಮಲಗಿಕೊಂಡಾಗ ದಿನವೂ ದಪ್ಪದಾರದಂತೆ ಕಾಣುತ್ತಿದ್ದದ್ದು ಕಣ್ಣುಗಳನ್ನು ಬಿಟ್ಟುಕೊಂಡು ನನ್ನನ್ನು ನೋಡಿತು. ಅದು ಹೆಂಟೆಗೊದ್ದವೆಂದು ತಿಳಿದ ಕೂಡಲೆ ಒಂದೇ ನೆಗೆತಕ್ಕೆ ಮಂಚದಿಂದ ಕೆಳಕ್ಕೆ ಹಾರಿಬಿಟ್ಟೆ. ಏನಪ್ಪಾ… ನಿಂಗೆ ಮಗ್ಗುಲಲ್ಲಿ ಹೆಂಟೆಗೊದ್ದ ಮಲಗಿರುವುದು ಕಾಣಿಸಲಿಲ್ವಾ? ಎಂದರೆ ಗೊತ್ತಿಲ್ಲ ಎಂದನು! ಆಮೇಲೂ ಅದು ದೇಮಾ ಪಕ್ಕದಲ್ಲಿರುವ ಧೈರ್ಯಕ್ಕೆ ಹೆದರದೆ ಮೆಲ್ಲಗೆ ಸರಳಿನ ಇನ್ನೊಂದು ಭಾಗಕ್ಕೆ ಸರಿದು ಮಲಗಿತು. ಅದನ್ನು ಆಚೆಗೆ ಓಡಿಸೆಂದರೆ, ಅದೇನು ಮಾಡ್ತಿಲ್ಲ ಬಿಡು ಎಂದ! ಕೊನೆಗೆ ನಾನೇ ಅದಕ್ಕೆ ನೋವಾಗದಂತೆ ಕಿಟಕಿಯಾಚೆಗೆ ಪೊರಕೆಯಿಂದ ತಳ್ಳಬೇಕಾಯ್ತು. ಇಷ್ಟಲ್ಲದೆ ನಮ್ಮ ತೋಟದ ಮನೆಯಲ್ಲಿ ಹೆಂಚನ್ನು ಬದಲಾಯಿಸಿ ತಾರಸಿ ಹಾಕಿಸಲು ಗೋಡೆ ಒಡೆದಾಗ ಆ ಮೇಲ್ಛಾವಣಿ ಗೋಡೆಯಿಂದ 30ಕ್ಕೂ ಹೆಚ್ಚು ತರಾವರಿ ಹಾವುಗಳು ಧುಮುಕಿ ಎಲ್ಲೆಲ್ಲೂ ಓಡಿಹೋದವಂತೆ. ಅಲ್ಲಿಗೆ ಭೇಟಿ ನೀಡಿದ ಸ್ನೇಕ್ ಶ್ಯಾಂ `ಷಷ್ಠಿ ಮಾಡಬೇಕಾದದ್ದು ಸಿದ್ಧಲಿಂಗಪುರದಲ್ಲಿ ಅಲ್ಲ, ಈ ಭೂಮಿಯಲ್ಲಿ!’ ಎಂದು ಒಂದು ಕಲ್ಲು ನೆಟ್ಟು ಬಂದಿದ್ದಾರೆ!


ಇಂಥವುಗಳ ಜೊತೆಗೆ ಹೇಳಲೇಬೇಕಾದ ಮತ್ತೊಂದು ಪ್ರಸಂಗವು ಇದೆ. ಈಗ್ಗೆ ಏಳು ವರ್ಷಗಳ ಕೆಳಗೆ ಮೈಸೂರಿನಲ್ಲಿರುವ ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮದ ನಂತರ ಮಾದೇವ ಸ್ನೇಹಿತರೊಟ್ಟಿಗೆ ಮಾತುಕತೆಯಲ್ಲಿ ಮಗ್ನರಾಗಿದ್ದರೆ, ಮಿತಾಳಿಗೂ ಕೆಲ ಸ್ನೇಹಿತರು ಸಿಕ್ಕಿ ಬಿಜಿóಯಾದಳು. ಈ ಮಠಕ್ಕೆ ಹಿಂದೆಂದೂ ಬಂದಿರಲಿಲ್ಲ. ಅಲ್ಲಿನ ವಾತಾವರಣ ನನ್ನ ಕುತೂಹಲವನ್ನು ಕೆದಕಿದಂತಾಗಿ, ಮಠದ ಇಡೀ ಆವರಣವನ್ನು ಸುತ್ತಾಡಿದೆ. ಅಲ್ಲಿದ್ದ ಹಲವಾರು ಗಿಡಮರಗಳು ಕೈ ಬೀಸಿ ಕರೆದಂತಾಗಿ, ನಿಧಾನಕ್ಕೆ ಹೆಜ್ಜೆಗಳನ್ನಿಡುತ್ತಾ ಸಾಗಿದೆ. ಕೊಂಚ ಮುಂದೆ ಹೋದಾಗ ಅಲ್ಲೆರಡು ಸಾಕು ಆನೆಗಳಿರುವುದನ್ನು ಕಂಡು ಆಶ್ಚರ್ಯದಿಂದ ಅವುಗಳ ಹತ್ತಿರಕ್ಕೂ ಹೋಗಿ ನಿಂತೆ. ಅಲ್ಲಿದ್ದ ದೊಡ್ಡ ಆನೆ ನನ್ನನ್ನು ಕಂಡು ಸೊಂಡಿಲನ್ನು ತನ್ನ ಹಣೆಯ ನೇರಕ್ಕೆ ತಂದಿತು. ಓ… ಇದು ನನಗೇ ವಂದಿಸಿತೆಂದು ಪುಳುಕಿತಳಾಗಿ, ಏನೋ… ನಾನು ನಿನಗೆ ಗೊತ್ತೇ? ಎಂದು ಮನಸಿನಲ್ಲಿ ಅಂದುಕೊಳ್ಳುತ್ತಿರುವಾಗ, ಅದು ತನ್ನ ಇಡೀ ಮೈಯನ್ನು ಕೊಡವುತ್ತಾ ಒಂದು ಬಗೆಯ ಶಬ್ದವನ್ನು ಹೊರಡಿಸಿತು. ಆಮೇಲೆ ಆ ಆನೆ ತನ್ನ ಕಾಲುಗಳನ್ನು ಹಿಂದಕ್ಕೂ ಮುಂದಕ್ಕೂ ಚುಟ್ಕಾರಿ ಹೆಜ್ಜೆಗಳನ್ನಿಡುತ್ತಾ ಸೊಂಡಿಲನ್ನು ತನ್ನ ಬಾಯಿ ಕಡೆಗೆ ತೂರಿಸಿ ಸಂಜ್ಞೆ ಮಾಡಿತು. ಓ… ಇದಕ್ಕೆ ನೀರೋ ಊಟವೋ ಬೇಕಾಗಿದೆ ಅನ್ನಿಸಿತು. ಅದರ ಮುಂದೆ ನೀರಿನ ಬಾನಿಯಾಗಲಿ ಸೊಪ್ಪುಸದೆ ಇರಲಿಲ್ಲ. ಹತ್ತಿರದಲ್ಲೆಲ್ಲಾದರೂ ನೀರಿನ ಬಕೆಟ್ ಇದೆಯಾ ಎಂದು ಕಣ್ಣಾಡಿಸಿದೆ… ಉಹುಂ… ಎದುರಿನ ನಲ್ಲಿಯಲ್ಲಿ ನೀರು ಬರುತ್ತಿರುವುದು ಮಾತ್ರ ಗೋಚರಿಸಿತು. ಕೈಗಾವಲಿಗಿರಲಿ ಎಂದು ಮನೆಯಿಂದ ಒಯ್ದಿದ್ದ ಎರಡು ಬಾಳೆಹಣ್ಣುಗಳು ನನ್ನ ಹೊಟ್ಟೆ ಸೇರಿದ್ದರಿಂದ ಛೇ ಎಂಥಾ ಕೆಲ್ಸ ಆಯ್ತು…. ಆ ಹಣ್ಣುಗಳನ್ನು ಹಸಿದಿರುವ ಈ ಆನೆಗೆ ಕೊಡಬಹುದಿತ್ತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಆನೆ ಕೈ ಮುಗಿದು ನನ್ನನ್ನು ಬೇಡಿಕೊಳ್ಳುವ ರೀತಿಯಲ್ಲಿ ತನ್ನ ಬಾಯನ್ನು ಅಗಲಿಸಿ ಅದರೊಳಗೆ ತನ್ನ ಸೊಂಡಿಲ ತುದಿಯನ್ನಿಟ್ಟಿತು. ಅಯ್ಯೋ ದೇವ್ರೇ ಇದೊಳ್ಳೆ ಫಜೀತಿ ಆಯ್ತಲ್ಲಪ್ಪಾ ಏನ್ ಮಾಡೋದು… ಅದೆಲ್ಲಿದ್ದಾರೆ ಆನೆ ಪರಿಚಾರಕರು ಎಂದು ಅತ್ತ-ಇತ್ತ ಕಣ್ಣಾಡಿಸಿದೆ. ಆಗ ಆನೆ ಮೂಗಿನಿಂದ ಶಬ್ದ ಹೊರಡಿಸುತ್ತಾ ಸೊಂಡಿಲನ್ನು ನೀಳಗೊಳಿಸಿ ಚಾಚಿತು. ಆನೆಯು ಸೂಚಿಸಿದ ದಿಕ್ಕಿನತ್ತ ನೋಡಿದರೆ ಅಲ್ಲಿ ಮೂರು ಜನ ಮಾವುತರು ಹರಟೆ ಹೊಡೆಯುತ್ತಾ ಕುಳಿತಿರುವುದು ಕಾಣಿಸಿತು. ಆನೆಯ ಸಂವಹನ ಸಾಮಥ್ರ್ಯಕ್ಕೆ ಬೆರಗಾದೆನು. ಇದರ ಪಕ್ಕದಲ್ಲಿದ್ದ ಇನ್ನೊಂದು ಚಿಕ್ಕ ಆನೆಯೂ ಹಿಂದಕ್ಕೂ ಮುಂದಕ್ಕೂ ತೂಗಾಡುತ್ತಾ ತನಗೂ ಹಸಿವಾಗಿದೆ ಎಂದು ಮೂಗಿಂದ ಶಬ್ದ ಹೊರಡಿಸುತ್ತಿತ್ತು. ಆನೆಗಳಿಗೆ ಆಹಾರ ನೀಡುವ ಪರಿವೆಯಿಲ್ಲದೆ ಮಾವುತರು ಕಾಡುಹರಟೆ ಹೊಡೆಯುತ್ತಿರುವುದನ್ನು ಕಂಡು ಅಸಾಧ್ಯ ಕೋಪ ಬಂತು. ನೋಡಪ್ಪಾ ಎಂದು ಒಂದು ಸಲ ಕೂಗಿದೆ. ಅವರ್ಯಾರೂ ನನ್ನತ್ತ ತಿರುಗಲಿಲ್ಲ. ಕೊಂಚ ಅವರ ಹತ್ತಿರ ಹೋಗಿ ಮತ್ತೊಮ್ಮೆ ಜೋರಾಗಿ ಕೂಗಿದಾಗ ಎಲ್ಲರೂ ನನ್ನತ್ತ ಒಟ್ಟಿಗೆ ನೋಡಿದರು! ಆನೆಗೆ ಊಟ, ನೀರು ಬೇಕಂತೆ ಕೊಡಿ… ತುಂಬಾ ಹಸಿವಾಗಿರಬೇಕು… ನನ್ನನ್ನೇ ಊಟ ಕೇಳುತ್ತಿದೆ ಎಂದೆ. ಆಗ ಒಬ್ಬ ಮಾವುತನು, ಊಂ…. ಗೊತ್ತು… ಗೊತ್ತು ಎಂದು ಉದಾಸೀನವಾಗಿ ಅಂದ. ನಾನೇ ನೀರಾದ್ರು ಕೊಡ್ತೀನಿ ಬಕೆಟ್ ಎಲ್ಲಿದೆ? ಎಂದು ಕೇಳಿದೆ. ಆಗ ಒಬ್ಬ ವಾಲಾಡಿಕೋತ… ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕುತ್ತಾ ಬಂದನು. ಅಷ್ಟರಲ್ಲಿ ನನ್ನನ್ನು ಹುಡುಕಿಕೊಂಡು ಮಾದೇವನ ಪಟಾಲಂ ಆನೆಗಳ ಬಳಿಗೆ ಬಂದರು. ಈ ಆನೆ ನನಗೆ ಕೈ ಮುಗಿದು ಊಟ ಬೇಕೆಂದು ಕೇಳಿತು ಎಂದು ದೇಮಾನಿಗೆ ತಿಳಿಸಿದಾಗ ಎಲ್ಲರೂ ಕಣ್ಣರಳಿಸಿ ನೋಡಿದರು. ಆ ಆನೆ ತನಗೆ ಊಟ ಬೇಕೆಂದು ಕೇಳಿದ ಪರಿ ನನ್ನ ಮನಸ್ಸು ತುಂಬಿಕೊಂಡಿತು.