ಪಾಂಡವಪುರದಲ್ಲಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ……

                                                                        ಬೆಳೆಯುತ್ತಾ ಸಾಕ್ಷಿಪ್ರಜ್ಞೆ ಕ್ಷೀಣ……

ಬೀದಿನಲ್ಲಿ, ಧೂಳಿನಲ್ಲಿ, ಬಿಸಿಲಿನಲ್ಲಿ ಇವತ್ತು ವಿಶ್ವಮಾನವರು ಮೆರವಣಿಗೆಲಿ ನಡೆದು ಸುಸ್ತಾಗಿದ್ದಾರೆ. ದಣಿವಾಗಿದ್ದಾರೆ. ನಾವು ಮೆರವಣಿಗೇಲಿ ನೋಡಿದ ಈ ಎಲ್ಲಾ ವಿಶ್ವಮಾನವರು ಬದುಕಿದ್ದಾಗ ಕೂಡ ಸಮಾಜದಲ್ಲಿ ಮನಷ್ಯತ್ವ ಕಾಣೋದಿಕ್ಕಾಗಿ ದುಡಿದು ದುಡಿದು ಸುಸ್ತಾದವರು. ಇರಲಿ… ಈ ವಿಶ್ವಮಾನವ ಪರಿಕಲ್ಪನೆಯನ್ನ ನಮಗೆ ಕೊಟ್ಟವರು, ಕೊಡುಗೆ ನೀಡ್ದವರು ಮಹಾಕವಿ ಕುವೆಂಪು ಅವರು. ಹುಟ್ಟುತ್ತಾ ವಿಶ್ವಮಾನವ ಅಂತ ಅವರು ಹೇಳಿದರು. ಹಾಗಾದರೆ ಬೆಳೆಯುತ್ತಾ? ಈ ಪ್ರಶ್ನೆ ಬರುತ್ತೆ. ಒಂದು ಮಗು ಬೆಳಿತಾ ಬೆಳೀತಾ ಅದು ಮೊದಲಾಗೋದು, ಅದಕ್ಕೆ ಮೊದಲು ಅಂಟೋದು….. ಜಾತೀ-ಮತದ ಸೋಂಕು ರೋಗ ಅಂಟೋದು. ಆಮೇಲೆ ಬಡವ ಬಲ್ಲಿದ ಎನ್ನೋ ವರ್ಗ ರೋಗ ಅಂಟುತ್ತೆ. ಜೊತೆಗೆ ಪ್ರದೇಶದ ರೋಗ ಅಂಟುತ್ತೆ. ಅದಕ್ಕಾಗೇನೆ ವಿಶ್ವಮಾನವನಾಗಿ ಹುಟ್ಟಿದರೂನೂ ಮಗು ಬೆಳೀತಾ ಮನುಷ್ಯತ್ವ ಕಮ್ಮಿ ಆಗ್ತಾ ಹೋಗುತ್ತೆ. ಅದರ ಸಾಕ್ಷಿಪ್ರಜ್ಞೆ ಕ್ಷೀಣ ಆಗುತ್ತೆ, ನ್ಯಾಯವಂತಿಕೆ ಪಕ್ಷಪಾತ ಆಗುತ್ತೆ, ಒಟ್ಟಿನಲ್ಲಿ ವಿಶ್ವಮಾನವನಾಗಿ ಹುಟ್ಟಿದ ಮಗು ಬೆಳೆಯುತ್ತಾ ಅಲ್ಪಮಾನವನಾಗುತ್ತೆ, ಕುಬ್ಜವಾಗುತ್ತೆ, ರೋಗಿಷ ್ಟಆಗುತ್ತೆ.
ಇಂದಿನ ಸಮಾಜದಲ್ಲಿ ಕೂಡಿಕೊಳ್ಳೋದಿಕ್ಕೆ ಇರೋ ರೀತಿ ರಿವಾಜುಗಳನ್ನ ನೋಡಿದಾಗ ಮೂಲ ಕಾರಣ ಇದೇ ಅನ್ಸುತ್ತೆ. ಮನುಷ್ಯ ಮನುಷ್ಯತ್ವವನ್ನ ಕಮ್ಮಿ ಮಾಡ್ಕೊಂಡು ಇರೋದೇ ಈ ಸಮಸ್ಯೆಗೆ ಮೂಲ ಕಾರಣ. ಇದನ್ನ ಕುವೆಂಪು ಹೇಳಿದ್ರು…ಹಾಗಾದ್ರೇ ಇದನ್ನ ಹೇಳಿದ ಕುವೆಂಪು ವಿಶ್ವಮಾನವರಾ? ಅಥವಾ ಅವರು ಹೇಗೆ ವಿಶ್ವಮಾನವರು? ಈ ಪ್ರಶ್ನೆ ಬರುತೆ.್ತ ಇದಕ್ಕೆ ಒಂದು ಉದಾಹರಣೆ ಹೇಳ್ಬಿಡ್ತಿನಿ. 1988ನೇ ಇಸವಿ ಇರ್ಬೇಕು. ಕುವೆಂಪು ಅವರು ‘ನಾನು ಹಿಂದೂ ಅಲ್ಲಾ… ನಾನು ಯಾವುದೇ ಧರ್ಮಕ್ಕೆ ಸೇರಿದವಲ್ಲಾ’ ಅಂಥಾ ಒಂದು ಹೇಳಿಕೆ ಕೊಡ್ತಾರೆ. ಅದಕ್ಕೆ ತ್ರಿಮತಸ್ಥ ಬ್ರಾಹ್ಮಣರು ಸೇರ್ಕೊಂಡು, ಕುವೆಂಪು ದೇಶ ಬಿಟ್ ಹೋಗ್ಲಿ ಅನ್ನುವ ಒಂದು ಸಭೆ ಮಾಡ್ತಾರೆ. ಆ ಸಭೆಗೆ ಪ್ರತಿಭಟಿಸೋದಿಕ್ಕೆ ನಾನು ಮತ್ತು ಆಲನಹಳ್ಳಿ ಕೃಷ್ಣ ಅವರು ಹೋಗಿದ್ದೋ. ಸುಮಾರು ಜನ ಯದ್ವಾತದ್ವಾ ಬೈಯ್ತಿರ್ತಾರೆ ಕುವೆಂಪುಗೆ. ಕುವೆಂಪು ಜಾತಿವಾದಿ ಜಾತಿವಾದಿ ಅಂತ ಬೈಯ್ತಿರ್ತಾರೆ. ನಾನು ಒಂದಿಷ್ಟು ಮಾತಾಡ್ತೀನಿ, ಅಂದ್ರೆ ಮಾತಾಡಕ್ಕೆ ಬಿಡಲ್ಲ… ಎಳೆದುಕೊಂಡು ಹೋಗ್ಬಿಟ್ಟು…ದೂಡ್ಬಿಟ್ಟು ಮೈಕ್ ಕಿತ್ಕಂತಾರೆ. ದೇವಸ್ಥಾನದ ಒಳಗೆ ಅವರಿರ್ತಾರೆ, ದೇವಸ್ಥಾನದ ಹೊರಗೆ ನಾನು ಆಲನಹಳ್ಳಿ ಕೃಷ್ಣ ಇರ್ತಿವಿ. ತುಂಬಾ ಜನ ಇರ್ತಾರೆ. ಆಗ ಆ ಸಂದರ್ಭದಲ್ಲಿ ಅವರಿಗ್ ಹೇಳ್ದೇ..‘ನೋಡಿ ಕುವೆಂಪು ಅವರನ್ನ ಜಾತಿವಾದಿ ಅಂತೀರಲ್ಲ ನಿಮಗ್ ಹೆಂಗ್ ಬಾಯ್ಬರುತ್ತೆ? ಒಂದ್ ಸಲ ಏನಾಗುತ್ತೆ ಅಂದ್ರೆ, ಯಾರೋ ಒಕ್ಕಲಿಗರ್ ಹುಡುಗ್ರು ಅವರ ಸ್ನೇಹಿತರಾದ ದಲಿತರ ಮನೆನಲ್ಲಿ ಊಟ ಮಾಡ್ತಾರೆ. ಅದಕ್ಕೆ ಆ ಊರಿನ ಒಕ್ಕಲಿಗರೇನ್ಮಾಡ್ತಾರೆ ಹುಡುಗ್ರನ್ನ ಎಳ್ಕೊಂಡ್ ಹೊಗ್ಬಿಟ್ಟು ಅವರ ತಲೆಬೋಳಿಸಿ, ನಾಲಿಗೆ ಸುಟ್ಟು, ಗಂಜಲ ಹಾಕಿ ಪವಿತ್ರ ಮಾಡ್ತಾರಂತೆ. ಇದು ಕುವೆಂಪುಗೆ ಗೊತ್ತಾಗ್ಬಿಟ್ಟು ಬಾಳ ಕೋಪಿಸ್ಕೊಂತಾರೆ. ಅವರ್ ಹೇಳ್ತಾರೆ ‘ಆ ಮತಾಂಧ ಒಕ್ಕಲಿಗರಿಗೆ ಪೊಲೀಸ್‍ಕೇಸ್ ಮಾತ್ರ ಹಾಕಿ ನಿಲ್ಲಿಸ್ಬಾರ್ದು. ಆ ಮತಾಂಧರಿಗೂ ಕೂಡ ತಲೆಬೋಳಿಸಿ, ನಾಲಿಗೆ ಸುಟ್ಟು, ಗಂಜಲ ಕುಡ್ಸಿ… ಮೂರ್ಖರಾ ಶುದ್ಧರಾಗ್ಬೇಕ್ಕಾದ್ದು ನೀವು’ ಅನ್ನೋ ಮಾತನ್ನ ಹೇಳ್ತಾರೆ ಅವತ್ತು. ’ಈ ಮಾತನ್ನ ಆ ಬ್ರಾಹ್ಮಣರ ಸಭೆನಲ್ಲಿ ಹೇಳ್ದೆ ನಾನು. ‘ನಿಮ್ಮಲ್ಲಿ ಒಬ್ಬನಾದ್ರೂ ಹಿಂಗ್ ಮಾತಾಡಕ್ಕೆ ಸಾಧ್ಯ ಏನ್ರಿ? ಕುವೆಂಪುಗೆ ಜಾತಿ ಇದೆ ಅಂತ ಹೆಂಗ್ ಹೇಳ್ತೀರ?’
ಆದರೆ ಇಂಥ ವಿಶ್ವಮಾನವರನ್ನ…..ಕುವೆಂಪು ಇರ್ಬಹುದು, ಇನ್ನೊಬ್ಬರಿರ್ಬಹುದು, ಮತ್ತೊಬ್ಬರಿರ್ಬಹುದು ಮತ್ತು ಈಗ ಮೆರವಣಿಗೆ ಬಂದ ಎಲ್ಲಾ ಚೇತನಗಳಿರ್ಬಹುದು, ಅವರು ಯಾರೇ ಇರ್ಬಹುದು ಇಂತಾ ವಿಶ್ವಮಾನವರನ್ನ ಅವರವರ ಜಾತಿಗೆ ಸೀಮಿತಗೊಳಿಸಿ ವಿಶ್ವಮಾನವರ್ಗೇ ‘ಗೌಡ’ ಮಾಡ್ಬಿಟ್ರೆ……ದುರಂತ ಅದು. ಆಗ ಏನಾಗುತ್ತೆ ಅಂದ್ರೆ ಕುವೆಂಪು ಅವರ ಕಾಲಿಗೆ….. ಅಥವಾ ಈ ವಿಶ್ವಮಾನವರ ಕಾಲಿಗೆ ಜಾತಿಯ ಸರಪಳಿಯನ್ನ ಕಟ್ಟಿ ಹಾಕ್ದಂಗ್ ಆಗುತ್ತೆ. ಯಾರ್‍ಗೆ ಸರಪಳಿ ತಗೊಂಡ್‍ಕಟ್ಟಾಕದು ನಾವು? ಹುಚ್ಚರನ್ನ. ಆಗ ಅವರನ್ನ, ವಿಶ್ವಮಾನವರನ್ನ ಗೌರವಿಸದಂಗ್ ಅಲಾ ಹುಚ್ಚರಂತೆ ಮಾಡಿದಂತಾಗುತ್ತೆ. ಈ ಎಚ್ಚರ ನಮಗ್ ಇರ್ಬೇಕು. ಪಾಪ ಇದೇ ಸ್ಥಿತಿ ಇಲ್ಲಿ ಮೆರವಣಿಗೆ ಬಂದ ವಿಶ್ವಮಾನವರದ್ದೆಲ್ಲಾರ ಸ್ಥಿತಿನೂ ಆಗಿದೆ. ಒಂದೇ ತರಹ ಆಗಿದೆ.
ಆದರೆ ಈ ವಿಶ್ವಮಾನವರ ಸಾಲಿಗೆ ಸೇರಸ್ದೇ ಇರೋ ಮಹಮದ್ ಪೈಗಂಬರ್ ಇರ್ಬಹುದು, ಅಂಬೇಡ್ಕರ್ ಇರ್ಬಹುದು……ಇನ್ಯಾರ್ಯಾರು ಮಹನೀಯರು ಬಂದ್ರೋ ಅವರ ಹೆಸರಲ್ಲೇ, ಅವರದ್ದೆಲ್ಲಾ ನೂರೆಂಟು ಗುಂಪುಗಳಾಗುತ್ತೆ, ಹತ್ತೆಂಟು ಪಂಗಡಗಳಾಗುತ್ತೆ, ಅವರವರಲ್ಲಿ ಜಗಳ ನಡಿಯುತ್ತೆ, ಅವರವರಲ್ಲೇ ಕೊಲೆ ಆಗುತ್ತೆ. ಯಾಕಿದು? ಬಹಳ ಉಲ್ಬಣವಾಗಿದೆ ಸಮಸ್ಯೆ ಇದು. ಯಾಕೆ ಅಂದ್ರೆ ನಾವು ಇಂತಾ ಚೇತನಗಳನ್ನ ದೇಹವಾಗಿ ಮಾತ್ರ ತೊಗೊಂಡಿದ್ದೀವಿ. ನಾವವರನ್ನ ಪ್ರಜ್ಞೆಯಾಗಿ ನೋಡ್ತಾ ಇಲ್ಲ.ನಾವು ಅವರನ್ನ ಸ್ಪಿರಿಟ್ ಆಗಿ ನೋಡ್ತಾ ಇಲ್ಲ. ಬರೀ ದೇಹವಾಗಿ ನೋಡೋದ್ರಿಂದ ಅವನು ನಮ್ಮ ಜಾತಿ, ಅವನು ತಮ್ಮ ಜಾತಿ ಅಂದ್ಬಿಟ್ಟು ಕಚ್ಚಾಡ್ತಾ ಇದ್ದೀವಿ. ಮತ್ತು ಇವರಿವರ ನಡುವೇನೂ ಜಗಳ. ಮತ್ತು ಪ್ರತಿಯೊಬ್ಬ ಅನುಯಾಯಿಗಳೊಟ್ಟಿಗೂ ಜಗಳ. ಏನ್ಮಾಡದಿದಕ್ಕೆ? ಈ ತರ ಇರೋವಾಗ ನಾವು ಅವರನ್ನ ಹೆಂಗ್ ಗುರುತಿಸ್ತೀವಿ ಅಂತಂದ್ರೆ.. ಈಗ ಅವರ ದೇಹ ಇಲ್ಲ, ಆದ್ರಿಂದ ಬರೀ ಹೆಣನಾ ಗುರುತಿಸ್ತಾ ಇದ್ದೀವಿ ಅಂತ. ಅದರ ಸ್ಪಿರಿಟ್‍ನ ಗುರುತಿಸ್ತಾ ಇಲ್ಲಾ ನಾವು. ಅದಕ್ಕೇನೇ ಇವತ್ತು ನಾವು ದೇಹ ಬಿಟ್ಟು ಚೇತನವನ್ನ ಗುರುತಿಸೋದಾದ್ರೆ… ಭಿನ್ನಭಾವಇರಲ್ಲ. ಬೇಧನೇಇರಲ್ಲ.
ಮೊನ್ನೆ ಏಪ್ರಿಲ್ 14ಕ್ಕೆ ಬದನವಾಳುನಲ್ಲಿ, ಅಲ್ಲಿ ಪ್ರಸನ್ನ ಅವರ ಸುಸ್ಥಿರ ಬದುಕು ಪ್ರಯೋಗದ ಕಾರ್ಯಕ್ರಮದಲ್ಲಿ….ಲಿಂಗಾಯಿತರು ಸೇರಿ ಅಂಬೇಡ್ಕರ್ ದಿನಾಚರಣೆ ಮಾಡ್ತಾರೆ. ಅಲ್ಲಿ..ಕೆಲವು ವರ್ಷಗಳ ಹಿಂದೆ ಲಿಂಗಾಯ್ತರಿಗೂ ದಲಿತರಿಗೂ ಜಾತಿ ಜಗಳಗಳು, ಗಲಾಟೆಗಳಾಗಿ, ಇದೇ ಕಾರಣಕ್ಕೇ ಸಾವು ನೋವುಗಳಾಗಿರುತ್ತೆ. ನನಗನ್ನಿಸ್ತು ಯಾವಾಗ ಈ ರೀತಿ ಅಂಬೇಡ್ಕರ್ ಜಯಂತಿಯನ್ನ ಅವರು ಮಾಡಿದ್ರೊ ಇವತ್ತು ಬದನವಾಳುವಿಗೆ ಶಾಪ ವಿಮೋಚನೆ ಆಯ್ತು ಅಂತನ್ನಿಸ್ತು. ಪ್ರತಿ ಊರಲ್ಲೂ ಜಾತಿ ಮತ ಭಿನ್ನಭಾವಗಳಿಂದ ಒಡೆದು ಶಾಪಗ್ರಸ್ತವಾಗಿ ಹೋಗಿದೆ. ನಮ್ಮ ಹಳ್ಳಿಗಳಿಗೆ ಶಾಪವಿಮೋಚನೆ ಆಗ್ಬೇಕಾಗಿದೆ. ನಮ್ಮ ಹಳ್ಳಿಗಷ್ಟೇ ಅಲ್ಲ.. ಇಡೀ ದೇಶಕ್ಕೇ ಆಗ್ಬೇಕಾಗಿದೆ. ನಾವೀಗ ಶಾಪಗ್ರಸ್ಥರಾಗಿದ್ದೀವಿ. ನಮಗೀಗ ಜಾತಿಯಿಂದ ಬಿಡುಗಡೆ ಬೇಕಾಗಿದೆ.
ಕೊನೆದಾಗಿ ಒಂದ್ ಮಾತು. ಇಲ್ಲಿ ಮೆರವಣಿಗೇಲಿ ಬಂದ್ರಲ್ಲ ಸುಮಾರು ವಿಶ್ವಮಾನವರು, ಇವರಲ್ಲಿ ಹೆಚ್ಚಿನವರು ಮನುಷ್ಯನ ಅಂತರಂಗಕ್ಕೆ ಸಂಬಂಧಪಟ್ಟಂತೆ ಆಲೋಚನೆ ಮಾಡ್ದವರು. ಅವರು ಬೌದ್ಧಿಕ ಜಗತ್ತಿನ ಅಪಮಾನಗಳ ಬಗ್ಗೆ ಹೆಚ್ಗೆ ತಲೆಕೆಡಿಸ್ಕೊಂಡವ್ರಲ್ಲಾ. ಇವತ್ತು ಸಂಪತ್ತು ಮತ್ತು ಆಸ್ತಿ ಅಸಮಾನತೆಗಳ ಬಗ್ಗೆ ಹೆಚ್ಚು ತಲೆಕೆಡಿಸ್ಕೊಳ್ಳಬೇಕಾಗಿದೆ. ಅದರಿಂದ ವಿಶ್ವಮಾನವರೆಲ್ಲಾ ಬಂದ್ರಲ್ಲಾ ಇವತ್ತು ಮೆರವಣಿಗೇಲಿ, ಅಗತ್ಯ ಇದ್ದವರ್ ಕೆಲವರಿಗೆ ಸಂಪತ್ತಿನ ಸಮಾನತೆಯನ್ನ ಧ್ಯಾನಿಸಿದ, ತಪಸ್ಸು ಮಾಡಿದ ಮಹರ್ಷಿಕಾರ್ಲ್ ಮಾಕ್ರ್ಸ್‍ನ ರಕ್ತ ತೆಗೆದು ಇವರೆಲ್ಲರಿಗೂ ಒಂದೊಂದು ಬಾಟಲ್ ಕೊಡ್ಬೇಕು. ಯಾಕಂತಂದ್ರೆ ನಾವು ಇವತ್ತಾದ್ರೂ ಇದ್ರ ಕಡೆ ಹೀಗೇ ನೋಡ್ಬೇಕಾಗಿದೆ, ಅದಕ್ಕೆ ಗಮನ ಕೊಡ್ಬೇಕಾಗಿದೆ. ಯಾಕಂದ್ರೆ ಎಲ್ಲಾ ಅಸಮಾನತೆ ಜೊತೆನಲ್ಲಿ ಈ ಅಸಮಾನತೆನೂ ನಿವಾರಣೆ ಮಾಡ್ಬೇಕಲ್ಲಾ? ಇವತ್ತು, ಬಡವ-ಬಲ್ಲಿದರ ನಡುವೆ ಅಂತರ ಜಾಸ್ತಿ ಆಗ್ತಾ ಇದೆ. ಇವತ್ತು ಆಸ್ತಿ ಯಾವ ಕಡೆಗಿದೆ ಅಂತ್ ಅಂದ್ರೆ…. ಉದಾಹರಣೆಗೆ, ಸ್ಲಮ್ ಇದೆ ಬಾಂಬೆನಲ್ಲಿ ಇದಕ್ಕೆ ಪಕ್ಕದಲ್ಲೇ ಇಂದ್ರನ ಅರಮನೆ ತರಹ ಅಂಬಾನಿ ಅರಮನೆ ಇದೆ. ಈ ದಿಕ್ಕಲ್ಲಿ, ಈ ಸ್ಪೀಡ್‍ನಲ್ಲಿ ನಮ್ಮ ಅಭಿವೃದ್ಧಿ ಹೋಗ್ತಾ ಇದೆ. ಅದನ್ನ ತಡೆಗಟ್ಟಬೇಕು. ಜೊತೆಗೆ, ಈ ಸ್ಪೀಡ್ ಜೊತೆಗೆ ಮಹರ್ಷಿ ಕಾರ್ಲ್ ಮಾಕ್ರ್ಸ್‍ನ ಸಂಪತ್ತಿನ ಹಂಚಿಕೆಯ ವಿಚಾರವನ್ನೂ ಸೇರಿಸಿದರೆ ಮಾತ್ರ ಒಂದು ಆರೋಗ್ಯ ಪೂರ್ಣವಾದ ಬದುಕನ್ನ ನಾವು ಕಟ್ಟೋಕೆ ಸಾಧ್ಯ.