ಪಾಂಡವಪುರದಲ್ಲಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ

26.4.2015 ರಂದು ಪಾಂಡವಪುರದಲ್ಲಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಮಹಾದೇವರು ಆಡಿದ ಮಾತುಗಳ ದ್ವನಿ ಮುದ್ರಿಕೆ, ಭಾವಚಿತ್ರ ಮತ್ತು ಪ್ರಜಾವಾಣಿ ವರದಿ


”ಮಗು ಬೆಳೆಯುತ್ತಾ ಕ್ಷೀಣವಾಗುವ ಸಾಕ್ಷಿಪ್ರಜ್ಞೆ”

ಪಾಂಡವಪುರ: ‘ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಹಾಗೆ ಪ್ರತಿಯಿಂದು ಮಗು ಹುಟ್ಟುತ್ತ ವಿಶ್ವಮಾನವನಾಗೇ ಹುಟ್ಟುತ್ತದೆ. ಆದರೆ, ಬೆಳೆಯುತ್ತ ಆ ಮಗುವಿಗೆ ಜಾತಿ, ಮತ, ಪ್ರಾದೇಶಿಕ ಸೋಂಕುರೋಗ ಅಂಟುತ್ತದೆ. ಇದರಿಂದ ಮಗುವಿನಲ್ಲಿ ಸಾಕ್ಷಿಪ್ರಜ್ಞೆ ಕ್ಷೀಣವಾಗುತ್ತ ಹೋಗುತ್ತದೆ’ ಎಂದು ಸಾಹಿತಿ ದೇವನೂರ ಮಹಾದೇವ ವಿಶ್ಲೇಷಿಸಿದರು.
ಪಟ್ಟಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ‘ವಿಶ್ವಮಾನವರ ದಿನಾಚರಣೆ’ ಸಮಾರಂಭವನ್ನು ಉದ್ಫಾಟಿಸಿ ಅವರು ಮಾತನಾಡಿದರು.

‘ದಲಿತರ ಮನೆಯಲ್ಲಿ ಊಟ ಮಾಡಿದ ಮೇಲ್ಜಾತಿಯ ಹುಡುಗರಿಗೆ ಕೆಲವರು ತಲೆ ಬೋಳಿಸಿ, ನಾಲಿಗೆ ಸುಟ್ಟು, ಗಂಜಲ ಕುಡಿಸಿದ್ದರು. ಆದಕ್ಕೆ ಕುವೆಂಪು ಕುಪಿತರಾಗಿದ್ದರು. ಆ ಮತಾಂಧ ಒಕ್ಕಲಿಗರಿಗೆ ಪೊಲೀಸ್ ಕೇಸ್ ಮಾತ್ರ ಹಾಕಿ ಸುಮ್ಮನಿರಬಾರದು. ಅವರ ತಲೆಯನ್ನೂ ಬೋಳಿಸಿ, ನಾಲಿಗೆ ಸುಟ್ಟು, ಗಂಜಲ ಕುಡಿಸಿ ಶುದ್ಧರಾಗಿ ಮಾಡಬೇಕು ಎಂದು ಕುಂವೆಂಪು ಹೇಳಿದ್ದರು’ ಎಂದು ಸ್ಮರಿಸಿದರು.

ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜವಾದಿ ಚಿಂತಕ ಪ. ಮಲ್ಲೇಶ್, ವಿಚಾರವಾದಿ ಪ್ರೊ.ಕರೀಮುದ್ದೀನ್, ಸಾಹಿತಿ ಮಲೆಯೂರು ಗುರುಸ್ವಾಮಿ, ಪ್ರಾಧ್ಯಾಪಕ ಫಾದರ್ ಡಾ.ದಯಾನಂದಪ್ರಭು, ಕರ್ನಾಟಕ ಜನಶಕ್ತಿಯ ಮಲ್ಲಿಗೆ ವಾಸು ಮಾತನಾಡಿದರು.

ಮಾನವ ಮಂಟಪದ ಅಧ್ಯಕ್ಷ ಪ್ರೊ.ಬಿ. ಕೃಷ್ಣಪ್ಪ ಅವರು ದೇವಮ್ಮ, ಪುಟ್ಟಮ್ಮ, ನಿಂಗಮ್ಮ, ನಾಗಮ್ಮ, ಹೊನ್ನಮ್ಮ, ತರಕಾರಿ ರಾಣಿ, ನಸರ್ ರಾಣಿ, ಸಿಸ್ಟರ್ ವೆರೋನಿಕಾ, ಫಾವಿದಾಬಿ ಅವರಿಗೆ ‘ವಿಶ್ವಕಾಯಕ ಯೋಗಿ ಮಹಿಳಾ ಪ್ರಶಸ್ತಿ’ ಪ್ರಧಾನ ಮಾಡಿದರು.

ಪ.ಪಂ. ಅಧ್ಯಕ್ಷ ಜಮಾಲುದ್ದೀನ್, ಜಿ.ಪಂ. ಸದಸ್ಯರಾದ ಎ.ಎಲ್. ಕೆಂಪೂಗೌಡ, ವಿ. ವಸಂತಪ್ರಕಾಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೇದಮೂರ್ತಿ, ಪತ್ರಕರ್ತರ ಸಂಘದ ಅಧ್ಯಕ್ಷ ವೇದಮೂರ್ತಿ, ಲೇಖಕ ಕ್ಯಾತನಹಳ್ಳಿ ರಾಮಣ್ಣ, ಪ್ರೊ.ಬಿ. ನಾರಾಯಣಗೌಡ ಇದ್ದರು.