ಪಂಚೇಂದ್ರಿಯ ಕಳೆದುಕೊಂಡ ಸರ್ಕಾರ: ದೇವನೂರ ಮಹಾದೇವ

ಮೈಸೂರು: ‘ಜನಪ್ರತಿನಿಧಿಗಳ ಸ್ಥಾನದಲ್ಲಿ ಬಂಡವಾಳ ಆಳ್ವಿಕೆ ನಡೆಸುತ್ತಿದ್ದು, ಸರ್ಕಾರ ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆ’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ದೇವನೂರ ಮಹಾದೇವ ಇಲ್ಲಿ ಗುರುವಾರ ಕಟಕಿಯಾಡಿದರು.

‘70ರ ದಶಕದಲ್ಲಿ ನೂರು ಜನ ಸೇರಿ ನಡೆಸಿದ ಜಾಥಾ ವಿಧಾನಸೌಧದಲ್ಲಿ ಚರ್ಚೆಯಾಗುತ್ತಿತ್ತು. ಚಳವಳಿಗೆ ಲಕ್ಷ ಜನ ನೆರೆದರೂ ಸರ್ಕಾರದ ಗಮನ ಸೆಳೆಯಲು ಈಗ ಸಾಧ್ಯವಾಗುತ್ತಿಲ್ಲ. ಸರ್ಕಾರ ಸ್ಪರ್ಶಜ್ಞಾನ ಕಳೆದುಕೊಂಡಿದೆ. ಕಣ್ಣು ಕುರುಡಾಗಿದ್ದು, ಕಿವಿ ಶ್ರವಣ ದೋಷದಿಂದ ಕೂಡಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

‘ಮೂರು ವರ್ಷಗಳಲ್ಲಿ ಕೆಲವೇ ಉದ್ಯಮಿಗಳ ₹ 1.4 ಲಕ್ಷ ಕೋಟಿ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ಮನ್ನಾ ಮಾಡಿವೆ. ಸಮಸ್ಯೆಗಳ ಸುಳಿಗೆ ಸಿಲುಕಿದ ರೈತರ ಸಾಲ ಈ ಪ್ರಮಾಣದಲ್ಲಿ ಇಲ್ಲ. ಆದರೂ, ಕೃಷಿಕರ ಸಾಲ ಮನ್ನಾ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ರೈತರಿಗೆ ನೀಡುವ ಸಬ್ಸಿಡಿ ರಿಯಾಯಿತಿ ಅಲ್ಲ. ಕರ್ತವ್ಯಲೋಪ ಎಸಗಿದ ಸರ್ಕಾರ ನೀಡುವ ಕಾಣಿಕೆ. ಕೃಷಿ ಬಿಕ್ಕಟ್ಟುಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ’ ಎಂದರು.

‘ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ರಚನಾತ್ಮಕ ಹೋರಾಟ ರೂಪಿಸುವ ಅಗತ್ಯವಿದೆ. ಜಲತಜ್ಞರು, ರೈತ ಮುಖಂಡರು ಹಾಗೂ ರಾಜಕಾರಣಿಗಳನ್ನು ಸೇರಿಸಿ ದುಂಡು ಮೇಜಿನ ಸಮ್ಮೇಳನ ನಡೆಸುವ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದರು.

‘ಒಡೆದ ಭಾರತವನ್ನು ಒಗ್ಗೂಡಿಸುವ ಬದಲು ಸಮಾಜವನ್ನು ಛಿದ್ರ ಮಾಡುವ ಕೆಲಸವನ್ನು ಶಿಕ್ಷಣ ಮಾಡುತ್ತಿದೆ. ಮೊಟ್ಟೆ ಇಡುವ ಫಾರ್‌ಂ ಕೋಳಿಯ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿದೆ. ತಾರತಮ್ಯ, ಪಂಕ್ತಿಭೇದವೂ ಶಿಕ್ಷಣ ಸಂಸ್ಥೆಗಳಲ್ಲಿದ್ದು, ಎಳೆಯ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ’ ಎಂದು ಅವರು ಹೇಳಿದರು.