ನೀರು ಉಳಿಸಿದವರ ಕಥೆಗಳನ್ನು ಹೇಳುತ್ತಲೇ ಇರುತ್ತೇವೆ…ಪದ್ಮರಾಜ ದಂಡಾವತಿ

       ಚಕ್ರ ತಿರುಗುತ್ತಲೇ ಇರುತ್ತದೆ. ಮೇಲಿನದು ಕೆಳಗೆ ಬರುತ್ತದೆ. ಕೆಳಗಿನದು ಮೇಲೆ ಹೋಗುತ್ತದೆ. ಈಗ ಮತ್ತೆ ತೆರೆದ ಬಾವಿಗಳ ಕಾಲ! ನಿಸರ್ಗಕ್ಕೆ ಎಂಥ ಕರುಣೆ ಎಂದು ನಮಗೆ ಅರ್ಥವೇ ಆಗುವುದಿಲ್ಲ. ಒಂದಿಷ್ಟು ಪ್ರೀತಿ, ಕಾಳಜಿ ತೋರಿಸಿದರೆ ಸಾಕು. ಅದು ಮತ್ತೆ ನಮಗೆ ಅದೇ ಪ್ರೀತಿಯನ್ನು ಒಸರುತ್ತದೆ. ನೀರು ಹಾಗೆಯೇ ಅಲ್ಲವೇ? ಅದು ಭೂಮಿಯ ಒಳಗಿನಿಂದ ಒಸರುತ್ತ ಇರುತ್ತದೆ.

                                                                     
ಕೆಲವರ ಬದ್ಧತೆಯೇ ಹಾಗಿರುತ್ತದೆ. ಅದು ಅವರಿಗೆ ತೋರಿಕೆಯದು ಆಗಿರುವುದಿಲ್ಲ, ಲಾಭದ ಆಸೆಕೋರತನದ್ದೂ ಆಗಿರುವುದಿಲ್ಲ; ಅದು ಅವರಿಗೆ ಒಂದು ನಿಜವಾದ ಕಾಳಜಿಯಾಗಿರುತ್ತದೆ. ಕಳೆದ ತಿಂಗಳು ನಮ್ಮ ಪತ್ರಿಕೆಯ ಜಲ ಸಂಚಿಕೆ ರೂಪಿಸುವಾಗ  ಅತಿಥಿ ಸಂಪಾದಕರಾಗಿ ಬಂದಿದ್ದ ಶ್ರೀ ಪಡ್ರೆ ಅಂಥ ಒಬ್ಬ ಅದ್ಭುತ ಬದ್ಧತೆಯ ಮನುಷ್ಯ. ನಮ್ಮೊಂದಿಗೆ ಅವರು ಮಾತನಾಡುತ್ತಲೇ ಇದ್ದರು. ‘ಅಲ್ಲಿ ರಾಜಸ್ತಾನದಲ್ಲಿ ಹಾಗೆ’, ‘ಇಲ್ಲಿ ಹುನಗುಂದದಲ್ಲಿ ಹೀಗೆ’ ಎಂದು ಜಿಪುಣತನದಿಂದ ನೀರು ಬಳಸಿದವರ ಕಥೆಗಳನ್ನು ಅವರು ಹೇಳುತ್ತಲೇ ಇದ್ದರು. ಕರ್ನಾಟಕದ ಮೂಲೆ ಮೂಲೆಯಲ್ಲಿ ಇರುವ ಇಂಥ ‘ಜಿಪುಣರು’ ಅವರಿಗೆ ಗೊತ್ತಿದ್ದರು. ಇವರು ನಮ್ಮ ‘ನೀರ ನೆಮ್ಮದಿಯ ನಾಳೆ’ಗಳನ್ನು ನಿರ್ಮಿಸುವವರು. ನಾವೆಲ್ಲ ಇಂದಿಗಾಗಿ ಮಾತ್ರ ಬದುಕುತ್ತೇವೆ. ಮತ್ತು ನಮಗಾಗಿ ಮಾತ್ರ  ನಾವು ಬದುಕುತ್ತೇವೆ. ಇಲ್ಲವಾದರೆ ಭೂಮಿಯ ಮೇಲೆ ನಾವು ಎಲ್ಲೆಂದರಲ್ಲಿ ಆಳವಾದ ರಂಧ್ರಗಳನ್ನು ಕೊರೆದು ನಾಳೆಗಾಗಿ ಇದ್ದ ನೀರನ್ನು ಇಂದೇ ಬಳಸುತ್ತಿರಲಿಲ್ಲ. ಇಂದಿಗಾಗಿ ಬದುಕುವ ನಮ್ಮಂಥ ಸ್ವಾರ್ಥಿಗಳ ನಡುವೆಯೂ ನಾಳೆಗಳ ಕುರಿತು ಚಿಂತಿಸುವವರು ಹೇಗೆ ಹುಟ್ಟಿಕೊಳ್ಳುತ್ತಾರೆ? ತನ್ನ ಶೋಷಣೆಯ ವಿರುದ್ಧ ನಿಸರ್ಗವೇ  ಕಂಡುಕೊಳ್ಳುವ ಉತ್ತರವೇ ಅವರು?

ನಮ್ಮ ‘ಜಲ ಸಂಚಿಕೆ’ಗೆ ಬಂದ ಪ್ರತಿಕ್ರಿಯೆ ಅದ್ಭುತವಾಗಿತ್ತು, ಸ್ವಯಂಸ್ಫೂರ್ತವಾಗಿತ್ತು. ನಾವು ಹೋಗಿ, ‘ನಮ್ಮ ಸಂಚಿಕೆ ಹೇಗಿದೆ ನಿಮ್ಮ ಪ್ರತಿಕ್ರಿಯೆ ಏನು’ ಎಂದು ಯಾರನ್ನೂ ಕೇಳಲಿಲ್ಲ. ತಾನಾಗಿಯೇ ಬಂದ ಪ್ರತಿಕ್ರಿಯೆಗಳನ್ನಷ್ಟೇ ಪ್ರಕಟಿಸಿದೆವು. ಅವರಿಗೆಲ್ಲ, ‘ಇದು ಒಂದು ಅದ್ಭುತ ಪ್ರಯೋಗ’ ಎಂದು ಏಕೆ ಮನಸ್ಸಿಗೆ ತಟ್ಟಿತು?
ನೀರು ಮತ್ತು ಮನುಷ್ಯನ ನಡುವಿನ ಈ ತುಮುಲ ಇಂದು ನಿನ್ನೆಯದು ಅಲ್ಲ. ಊರ್ವಶಿ ಕುರಿತ ಪುರೂರವನ ವಾಂಛೆಯನ್ನು ನೀರು ಮತ್ತು ಮನುಷ್ಯನ ನಡುವಿನ ಸಂಬಂಧಕ್ಕೆ ‘ಮಹಾಭಾರತ’ ಹೋಲಿಕೆ ಮಾಡುತ್ತದೆ. ಊರ್ವಶಿ ಒಬ್ಬ ಅಪ್ಸರೆ.  ‘ಅಪ್ಸ ಎಂದರೆ ನೀರು ಎಂದು ಅರ್ಥ. ಅಪ್ಸರೆ ಎಂದರೆ ಜಲದೇವತೆ. ಮಳೆಯ ರೂಪದಲ್ಲಿ ನೀರು  ದೇವಲೋಕದಿಂದ ಭೂಮಿಗೆ ಬರುತ್ತದೆ. ಸ್ವಲ್ಪ ಕಾಲ ಇದ್ದು ತಿರುಗಿ ಹೋಗುತ್ತದೆ. ಈ ನೀರು ಭೂಮಿಯ ಮೇಲಿನ ಬದುಕನ್ನು  ಪೊರೆಯುತ್ತದೆ. ಆಕಾಶದಿಂದ ಬಂದು ಮತ್ತೆ ತಿರುಗಿ ಹೋಗುವ ನೀರಿಗಾಗಿ (ಊರ್ವಶಿ) ಮಾನವ (ಪುರೂರವ) ಹಾತೊರೆಯವುದನ್ನು ಇದು ಸಾಂಕೇತಿಕವಾಗಿ ಸೂಚಿಸುತ್ತದೆ’ (ಪುಟ 16, ಜಯ : ದೇವದತ್ತ ಪಟ್ಟನಾಯಕ. ಅನು: ಗಿರಡ್ಡಿ ಗೋವಿಂದರಾಜ).

ಮನುಷ್ಯನಿಗೆ ನೀರು ಯಾವಾಗಲೂ ಮರೀಚಿಕೆಯಂತೆ ಕಾಡಿದೆ. ಊರ್ವಶಿ  ಹಾಕಿದ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡು ಪುರೂರವ ಆಕೆಯ ಬೆನ್ನು ಹತ್ತುತ್ತಾನೆ. ಅವನ ಕೈಗೆ ಸಿಕ್ಕಂತೆ ಆಕೆ ತೋರಿಸಿಕೊಂಡರೂ ಕೊನೆಗೂ  ಅವನಿಂದ ತಪ್ಪಿಸಿಕೊಂಡು ಹೋಗುತ್ತಾಳೆ. ಊರ್ವಶಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪುರೂರವನಿಗೆ  ಆಗುವುದಿಲ್ಲ. ನಾವೂ ನೀರಿಗೆ ಕೊಟ್ಟ ವಚನವನ್ನು ಉಳಿಸಿಕೊಳ್ಳಲು ಆಗುತ್ತಿಲ್ಲವೇ?

ಒಂದು ಕಾಲವಿತ್ತು.  ಆಗ ನೀರಿಗೆ ಬರವಿತ್ತು ಎಂದು ನಮಗೆ ಅನಿಸುತ್ತಿರಲಿಲ್ಲ. ಆದರೆ, ಆಗೆಲ್ಲ ಈಗಿನ ಹಾಗೆ ಅನುಕೂಲಗಳು ಇರಲಿಲ್ಲ. ನಮ್ಮ ಮನೆಗಳಲ್ಲಿ ನಲ್ಲಿಗಳು ಇರಲಿಲ್ಲ. ಮನೆಗೆ ಹೋಗಲಿ, ಓಣಿಗೂ ಒಂದು ನಲ್ಲಿ ಸಂಪರ್ಕ ಇರಲಿಲ್ಲ. ನಲ್ಲಿ ಸಂಪರ್ಕ ಹೋಗಲಿ, ನೀರಿನ ಟ್ಯಾಂಕ್‌ ಅನ್ನೂ ನಮ್ಮ ಓಣಿಗಳಲ್ಲಿ ಕಟ್ಟಿರಲಿಲ್ಲ. ನಾವು ಮನೆಗೆ  ನೀರು ತರಬೇಕು ಎಂದರೆ ಬಾವಿಗೆ  ಹೋಗಲೇ ಬೇಕಿತ್ತು. ಒಂದು ಕೈಯಲ್ಲಿ ಕೊಡ, ಇನ್ನೊಂದು ಕೈಯಲ್ಲಿ ಹಗ್ಗ ಇರಬೇಕಿತ್ತು. ಯಾರೋ ಪುಣ್ಯಾತ್ಮರು ಎಲ್ಲರಿಗೂ ಅನುಕೂಲ ಆಗುವ ಹಾಗೆ ಅಲ್ಲಲ್ಲಿ ಬಾವಿ ಕಟ್ಟಿಸಿರುತ್ತಿದ್ದರು. ನಮ್ಮ ಊರಿನಲ್ಲಿಯೂ ಮಾರುಕಟ್ಟೆಯ ಮಧ್ಯದಲ್ಲಿ ಒಂದು ಬಾವಿ ಇತ್ತು. ಅದಕ್ಕೆ ಬಂದಗೀಸಾ ಬಾವಿ ಎಂದು ಹೆಸರು ಇತ್ತು. ಇನ್ನೊಂದು ಬಾವಿಯನ್ನು ನಮ್ಮ ಓಣಿಯ ಶ್ರೀಮಂತರಾದ ನಾಗಠಾಣರು ಕಟ್ಟಿಸಿದರು. ಬಾವಿಗೆ ಅನೇಕ ಗಡಗಡೆಗಳು ಇರುತ್ತಿದ್ದುವು. ಎಲ್ಲರೂ ತಮ್ಮ ತಮ್ಮ ಮನೆಗಳಿಂದ ಹಗ್ಗ ತಂದು ಕೊಡಗಳಲ್ಲಿ ನೀರು ಸೇದಬೇಕಿತ್ತು. ಹೆಣ್ಣು ಮಕ್ಕಳು ಕಂಕುಳಲ್ಲಿ ಮತ್ತು ಗಂಡಸರು ಭುಜಗಳ ಮೇಲೆ ತುಂಬಿದ ಕೊಡ ಹೊತ್ತುಕೊಂಡು ಮನೆಗೆ ನೀರು ತರುತ್ತಿದ್ದರು. ಅದು ಒಂದು ಸಂಭ್ರಮ. ಭುಜದಲ್ಲಿ ಹೆಚ್ಚು ಶಕ್ತಿಯಿದ್ದ ಗಂಡಸರು ಎರಡೂ ಭುಜಗಳ ಮೇಲೆ ಒಂದೊಂದು ಕೊಡ ಹೊರುತ್ತಿದ್ದರು. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆ ಕೊಡಗಳ ಗಾತ್ರ ದೊಡ್ಡದಾಗುತ್ತ ಹೋಗುತ್ತಿತ್ತು. ಎರಡೂ ಭುಜಗಳ ಮೇಲೆ ಕೊಡ ಹೊತ್ತುಕೊಂಡು ತೊಡೆಗಳನ್ನು ಕುಣಿಸುತ್ತ ಗಂಡಸರು ಹೋಗುತ್ತಿದ್ದರು. ಹೆಣ್ಣು ಮಕ್ಕಳು ಕಂಕುಳದ ಜೊತೆಗೆ ತಲೆಯ ಮೇಲೂ ಒಂದು ಕೊಡ ಹೊತ್ತುಕೊಂಡು ಹೋಗುತ್ತಿದ್ದರು. ಆ ಕಾಲ ಹೇಗಿತ್ತು ಎಂದರೆ  ನೀರು ಎಂದರೆ ಎಲ್ಲರೂ ಗಂಗೆ ಎಂದುಕೊಂಡಿದ್ದರು. ಮನೆಯಲ್ಲಿ ಏನೇ ಮಂಗಳ ಕಾರ್ಯ ನಡೆದರೂ ಬಾವಿಗೆ ಬಂದು ಪೂಜೆ ಮಾಡಿಯೇ ಮುಂದಿನ ಕೆಲಸ  ಮಾಡುತ್ತಿದ್ದರು. ಕೊಡದಲ್ಲಿ ನೀರು ತುಂಬಿಕೊಂಡು ಹೆಣ್ಣು ಮಗಳು ಎದುರಿಗೆ ಬಂದರೆ ಹೊರಟ ಕೆಲಸ ಗ್ಯಾರಂಟಿ ಆಯಿತು ಎಂದೇ ಎಲ್ಲರೂ ಅಂದುಕೊಳ್ಳುತ್ತಿದ್ದರು. ಆ ಹೆಣ್ಣು ಮಗಳ ಕೈಯಿಂದ ಕೆಲವು ಹನಿ ನೀರು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು ಮುಂದೆ ಹೋಗುತ್ತಿದ್ದರು. ಖಾಲಿ ಕೊಡ ಎದುರು ಬಂದರೆ  ಕೆಲಸ ಆಗುವುದಿಲ್ಲ ಎಂದೂ ನಂಬುತ್ತಿದ್ದರು!

ತೆರೆದ ಬಾವಿಗಳ ನೀರು ಮನೆಗೆ ಬರಲು ಶ್ರಮ ಬೇಕಿತ್ತು. ನೀರು ಸೇದಲು ರಟ್ಟೆಯಲ್ಲಿ ಶಕ್ತಿ ಬೇಕಿತ್ತು. ಕೊಡ ಹೊತ್ತುಕೊಂಡು ಮನೆಗೆ ಬರಲು ಭುಜಗಳಲ್ಲಿ ತಾಕತ್ತು ಇರಬೇಕಿತ್ತು. ನಲ್ಲಿ ತಿರುಗಿಸಿದರೆ  ನೀರು ಬರುವುದಕ್ಕೂ ಬಾವಿಯಿಂದ ನೀರು ಹೊತ್ತು ತರುವುದಕ್ಕೂ ವ್ಯತ್ಯಾಸ ಇಲ್ಲವೇ? ನಲ್ಲಿ ತಿರುಗಿಸಿದರೆ  ನೀರು ಬಂದಾಗಲೇ ನಮಗೆ ನೀರಿನ ಮಹತ್ವ ಮರೆತು ಹೋಗಿರಬಹುದು. ಮನುಷ್ಯನೇ ಹಾಗೆ. ಆತ ಬಹಳಷ್ಟು ಸಾರಿ ಕೃತಜ್ಞನಾಗಿ ಇರುವುದಿಲ್ಲ. ಮನೆ ನಲ್ಲಿಯಲ್ಲಿ ನೀರು ಬರುತ್ತಿದ್ದಂತೆಯೇ  ಆತ ಬಾವಿಗಳನ್ನು ಮರೆತು ಬಿಟ್ಟ. ಬರೀ ಮರೆತು ತನ್ನ ಪಾಡಿಗೆ ತಾನು ಸುಮ್ಮನೇ ಉಳಿದನೇ? ಹಾಗೂ ಮಾಡಲಿಲ್ಲ. ತೆರೆದ ಬಾವಿಗೆ ಕಲ್ಲು ಹಾಕಿದ. ತನ್ನ ಮನೆಯನ್ನು ಕಟ್ಟುವಾಗ ಬಂದ ಅವಶೇಷಗಳನ್ನು ತೆರೆದ ಬಾವಿಗೆ ಹಾಕಿದ. ಕೆಲವರು ಚಪ್ಪಲಿಗಳನ್ನು ಹಾಕಿದರು. ಇನ್ನು ಕೆಲವರು ದೇವರಿಗೆ ಏರಿಸಿದ ಮಾಲೆಗಳನ್ನು, ಹೂವುಗಳನ್ನು ಹಾಕಿದರು. ಬಳಸದ ನೀರು ಮಲೆತು ಹೋಯಿತು.

ಚಕ್ರ ತಿರುಗುತ್ತಲೇ ಇರುತ್ತದೆ. ಮೇಲಿನದು ಕೆಳಗೆ ಬರುತ್ತದೆ. ಕೆಳಗಿನದು ಮೇಲೆ ಹೋಗುತ್ತದೆ. ಈಗ ಮತ್ತೆ ತೆರೆದ ಬಾವಿಗಳ ಕಾಲ! ನಿಸರ್ಗಕ್ಕೆ ಎಂಥ ಕರುಣೆ ಎಂದು ನಮಗೆ ಅರ್ಥವೇ ಆಗುವುದಿಲ್ಲ. ಒಂದಿಷ್ಟು ಪ್ರೀತಿ, ಕಾಳಜಿ ತೋರಿಸಿದರೆ ಸಾಕು. ಅದು ಮತ್ತೆ ನಮಗೆ ಅದೇ ಪ್ರೀತಿಯನ್ನು ಒಸರುತ್ತದೆ. ನೀರು ಹಾಗೆಯೇ ಅಲ್ಲವೇ? ಅದು ಭೂಮಿಯ ಒಳಗಿನಿಂದ ಒಸರುತ್ತ ಇರುತ್ತದೆ.

ಮುಚ್ಚಿಹೋಗಿದ್ದ, ಕೊಳೆತು ನಾರುತ್ತಿದ್ದ ತೆರೆದ ಬಾವಿಗಳನ್ನು ಮತ್ತೆ ಸಜೀವಗೊಳಿಸಿದ ಒಂದು ಯಶಸ್ಸಿನ ಕಥೆ 22 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆಯಿತು. ಆಗ ನಾನು ಅಲ್ಲಿ ಜಿಲ್ಲಾ ವರದಿಗಾರನಾಗಿದ್ದೆ. ಆಗಿನ್ನೂ ಆ ಊರಿಗೆ ಘಟಪ್ರಭಾ ನದಿಯಿಂದ ನೀರು ಬರುತ್ತಿರಲಿಲ್ಲ. ರಕ್ಕಸಕೊಪ್ಪ ಜಲಾಶಯದಿಂದ ಮಾತ್ರ ನೀರು ಬರುತ್ತಿತ್ತು. ರಕ್ಕಸಕೊಪ್ಪ ಜಲಾಶಯ ಬೆಂಗಳೂರಿನ ಬಳಿಯ ತಿಪ್ಪಗೊಂಡನಹಳ್ಳಿಯ ಜಲಾಶಯದಷ್ಟು ಚಿಕ್ಕದು. ಆದರೆ, ನೀರು ಬಹಳ ರುಚಿ. ಅದು 1995ನೇ ವರ್ಷ. ಜುಲೈ 22ರ ವರೆಗೆ ಮುಂಗಾರು ಮಳೆ ಬರಲೇ ಇಲ್ಲ. ರಕ್ಕಸಕೊಪ್ಪ ಜಲಾಶಯದ ಡೆಡ್‌ ಸ್ಟೋರೇಜ್‌ ನೀರನ್ನೂ ಬಳಸಿಕೊಂಡುದಾಯಿತು. ಈಗ ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರದೀಪಸಿಂಗ್‌  ಖರೋಲ ಆಗ ಬೆಳಗಾವಿಯ ಜಿಲ್ಲಾಧಿಕಾರಿ ಮತ್ತು ಅಲ್ಲಿನ ಪಾಲಿಕೆಯ ಆಡಳಿತಾಧಿಕಾರಿ ಆಗಿದ್ದರು. ಪಾಲಿಕೆಯಲ್ಲಿ ಆರ್‌.ಎಸ್‌.ನಾಯಕ್ ಎಂಬ ಒಬ್ಬ ಎಂಜಿನಿಯರ್ ಇದ್ದರು. ಈಗಲೂ ಅವರು ಅಲ್ಲಿಯೇ ಇದ್ದಾರೆ. ಖರೋಲ ಮತ್ತು ನಾಯಕ್‌ ಅವರು ಊರಿನಲ್ಲಿನ ಹಳೆಯ ಬಾವಿಗಳನ್ನು ಹುಡುಕಿಕೊಂಡು ಹೊರಟರು. ಹೇಳಿದೆನಲ್ಲ, ಎಲ್ಲ ಬಾವಿಗಳು ಕೊಳೆತು ನಾರುತ್ತಿದ್ದುವು. ಹೆಣಗಳನ್ನು ಬಿಟ್ಟು ಎಲ್ಲವನ್ನೂ ಜನರು ಅದರ ಒಳಗೆ ಹಾಕಿದ್ದರು! ಬೆಳಗಾವಿಯಲ್ಲಿ ಗಲ್ಲಿಗೊಂದು ಗಣಪತಿ ಇಡುತ್ತಾರೆ. ಗಣಪತಿಯ ವಿಸರ್ಜನೆಗೆ ಅವರು ಊರ ಹೊರಗಿನ ಕೆರೆಯ ವರೆಗೆ ಹೋಗಲಿಲ್ಲ. ಮಂಟಪದ ಪಕ್ಕದ ತೆರೆದ ಬಾವಿಯಲ್ಲಿಯೇ ಮುಳುಗಿಸಿದರು. ಜನರು ಬಹಳಷ್ಟು ಸಾರಿ ಆಲಸಿಗಳು ಮತ್ತು ಹತ್ತಿರದ ದಾರಿಗಳನ್ನು ಹುಡುಕುವವರು!

ಬೆಳಗಾವಿ ಪಾಲಿಕೆಯ ಅಧಿಕಾರಿಗಳು ಮೊದಲು ಶಹಾಪುರ ಪ್ರದೇಶದ ಕಪಿಲೇಶ್ವರ ಬಾವಿಯ ಕಸವನ್ನೆಲ್ಲ ತೆಗೆದು ಹೊರಗೆ ಹಾಕಿದರು. ಮಲೆತ ನೀರನ್ನೆಲ್ಲ ಹೊರಗೆ ಪಂಪ್‌ ಮಾಡಿದರು. ಒಂದು ಸಾರಿ ಇಡೀ ಬಾವಿ ಸ್ವಚ್ಛವಾದ ಮೇಲೆ ಬಾವಿಯ ಆಳದಲ್ಲಿ ಇದ್ದ ಸೆಲೆಗಳು ತೆರೆದುಕೊಂಡುವು. ನೀರು ಒಸರತೊಡಗಿತು. ನೀರನ್ನು ಸಂಸ್ಕರಿಸಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದರು. ರಾಸಾಯನಿಕಗಳನ್ನು ಸೇರಿಸಿದರು. ಬಾವಿಯ ದಂಡೆಯ ಮೇಲೆ ಸಂಸ್ಕರಣ ಘಟಕ ಸ್ಥಾಪಿಸಿದರು. ರಕ್ಕಸಕೊಪ್ಪ ಜಲಾಶಯದಿಂದ ಬರುತ್ತಿದ್ದ ಕೊಳವೆಗಳಿಗೇ ಕಪಿಲೇಶ್ವರ ಬಾವಿಯ ನೀರನ್ನು ಬಿಟ್ಟರು. ಮತ್ತೆ ನಲ್ಲಿಗಳಲ್ಲಿ ನೀರು ಬರತೊಡಗಿತು. ಜನರು ಹಿಂಜರಿದರು. ಒಂದು ಕಾಲದಲ್ಲಿ ಅದೇ ಬಾವಿಯ ನೀರನ್ನು ಅವರ ತಂದೆತಾಯಿಯರು ಕೊಡಗಳಲ್ಲಿ ಹೊತ್ತು ತಂದು ಕುಡಿದಿದ್ದರು. ಅಧಿಕಾರಿಗಳು ಮನೆ ಮನೆಗೆ ಹೋಗಿ ಬಾವಿಯ ನೀರನ್ನು ತಾವೇ ಕುಡಿದು, ‘ಈ ನೀರು ಕುಡಿಯಲು ಯೋಗ್ಯ’ ಎಂದು ತೋರಿಸಿದರು. ಅದು ಆಗ ನಮಗೆ ಒಂದು ದೊಡ್ಡ ಯಶಸ್ಸಿನ ಕಥೆಯಾಗಿ ಕಾಣಿಸಿತ್ತು.

ಆಗ ಆರಂಭ ಮಾಡಿದ ಪ್ರಯೋಗವನ್ನು ಬೆಳಗಾವಿ ಇದುವರೆಗೆ ನಿಲ್ಲಿಸಿಲ್ಲ. ಈಗ ಬೆಳಗಾವಿ ಪಾಲಿಕೆಯಲ್ಲಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಆಗಿರುವ ಆರ್.ಎಸ್‌.ನಾಯಕ್‌ (94481 02297) ಅವರ ಜೊತೆಗೆ ನಿನ್ನೆ ಮಾತನಾಡಿದೆ. ಅವರು ನನ್ನನ್ನು ಮರೆತಿರಲಿಲ್ಲ. ಆಗಿನಷ್ಟೇ ಉತ್ಸಾಹದಿಂದ ಕಳೆದ ಎರಡು ದಶಕಗಳಲ್ಲಿ ಏನೆಲ್ಲ ಆಗಿದೆ ಎಂದು ಹೇಳತೊಡಗಿದರು. ಈಗ ಬೆಳಗಾವಿಯಲ್ಲಿ ಅಂಥ 35 ಬಾವಿಗಳು ಮರಳಿ ಜೀವ ಪಡೆದಿವೆ. ಐದು ಲಕ್ಷ ಜನಸಂಖ್ಯೆಯ ಬೆಳಗಾವಿಯಲ್ಲಿ ಸುಮಾರು ಎರಡು ಲಕ್ಷ ಜನಸಂಖ್ಯೆಗೆ ಬಾವಿಗಳಿಂದಲೇ ನೀರು ಪೂರೈಕೆ ಆಗುತ್ತದೆ. ಪ್ರತಿ ಬಾವಿಗೂ ಐದು ಹಾರ್ಸ್‌ ಪವರ್‌ ಪಂಪ್‌  ಕೂಡ್ರಿಸಿದ್ದಾರೆ. ಬಾವಿಯಿಂದ ಒಂದು ಸಾವಿರ ಲೀಟರ್‌ ನೀರು ಹೊರಗೆ ತೆಗೆಯಲು ಕೇವಲ 75 ಪೈಸೆ ಖರ್ಚು ಬರುತ್ತದೆ. ದಿನಕ್ಕೆ ಹತ್ತು ಗಂಟೆಗಳ ಕಾಲ ಬಾವಿಯ ನೀರನ್ನು ನಿರಂತರವಾಗಿ ಪಂಪ್‌  ಮಾಡಿದರೂ ಇನ್ನೂ ಐವತ್ತು ವರ್ಷಗಳ ಕಾಲ ಈ ಬಾವಿಗಳು ಬತ್ತುವುದಿಲ್ಲ ಎಂದು ಜಲತಜ್ಞರು ವರದಿ ಕೊಟ್ಟಿದ್ದಾರೆ!

ಬೆಳಗಾವಿಯಲ್ಲಿ ಇರುವ ಎಂಬತ್ತು ವರ್ಷ, ತೊಂಬತ್ತು ವರ್ಷ ಆದ ವೃದ್ಧರನ್ನು ಕರೆದುಕೊಂಡು ಮುಚ್ಚಿ ಹೋಗಿರುವ ಬಾವಿಗಳನ್ನು ಹುಡುಕುತ್ತಿದ್ದಾರೆ. ಈ ಅಧಿಕಾರಿಗಳೂ ವಿಚಿತ್ರ. ಈಗ ಅವರು ಮುಚ್ಚಿ ಹೋಗಿರುವ ಬಾವಿಗಳನ್ನು ತೆರೆಸುತ್ತಿದ್ದಾರೆ. ಆಗ, 1960 ದಶಕದಲ್ಲಿ ರಕ್ಕಸಕೊಪ್ಪ ಜಲಾಶಯದಿಂದ ಕೊಳವೆಗಳ ಮೂಲಕ ನೀರು ಬಂದಾಗ ಜನರು ಆ ನೀರು ಬಳಸಲು ನಿರಾಕರಿಸಿದರು. ತಾವು ಬಾವಿಯ ನೀರನ್ನೇ ಕುಡಿಯುವವರು ಎಂದರು. ಆಧುನಿಕತೆ ಆರಂಭದಲ್ಲಿ ಜನರಿಗೆ ಯಾವಾಗಲೂ ಭಯ ಮೂಡಿಸಿದೆ. ಆಗಿನ ಪುರಸಭೆಯಲ್ಲಿ ಇದ್ದ ರಾವ್ ಎಂಬ ಒಬ್ಬ ಅಧಿಕಾರಿ ಊರಿನಲ್ಲಿ ಇದ್ದ ಎಲ್ಲ ಬಾವಿಗಳನ್ನು ಮುಚ್ಚಿಸಲು ಆದೇಶಿಸಿದನಂತೆ! ಆಗ ಮುಚ್ಚಿ ಹೋಗಿದ್ದ ತೊಂಬತ್ತು ಅಡಿ ಆಳದ ಒಂದು ಬಾವಿಯನ್ನು ಮೊನ್ನೆ ಹುಡುಕಿದ್ದಾರೆ. ಬಾವಿಯ ಕಟ್ಟಡ ಈಗಲೂ ಅಷ್ಟೇ ಭದ್ರವಾಗಿ ಉಳಿದುಕೊಂಡಿದೆ!
ಬೆಳಗಾವಿಯ ಪಾಲಿಕೆಗೆ ಅಂಥ ಒಳ್ಳೆಯ ಹೆಸರು ಇಲ್ಲ. ಯಾವಾಗಲೂ ಅಲ್ಲಿನ ಸದಸ್ಯರು ಆಗದ ಹೋಗದ ಗಡಿ ವಿವಾದಕ್ಕಾಗಿ ಜಗಳ ಮಾಡುತ್ತಾರೆ.

‘ಮಹಾರಾಷ್ಟ್ರಕ್ಕೆ ಹೋಗುತ್ತೇವೆ’ ಎಂದು ಕೂಗುತ್ತಾರೆ. ಅದೇ ಪಾಲಿಕೆಯಲ್ಲಿ ಕೆಲಸ ಮಾಡುವ ಕನ್ನಡದ ಅಧಿಕಾರಿಗಳು ಇಡೀ ರಾಜ್ಯಕ್ಕೆ ಮಾದರಿ ಆಗುವಂಥ ಕೆಲಸ ಮಾಡುತ್ತಿದ್ದಾರೆ. ಆರ್‌.ಎಸ್.ನಾಯಕ್‌ ಈಗಲೂ ಅದೇ ಬದ್ಧತೆಯಿಂದ ದುಡಿಯುತ್ತಿದ್ದಾರೆ. ಅವರ ಕೆಲಸ ಮೆಚ್ಚಿ ಸರ್ಕಾರ ಅವರಿಗೆ ‘ಸರ್ವೋತ್ತಮ’ ಪ್ರಶಸ್ತಿ ಕೊಟ್ಟಿದೆ.
ಕೇವಲ ಕೆಲವು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ, ಆಯಾ ಓಣಿಯ ಜನರನ್ನು ಒಳಗೊಂಡು, ಸ್ವಯಂ ಸೇವಾ ಸಂಸ್ಥೆಗಳ ನೆರವನ್ನು ಬಳಸಿಕೊಂಡು ಬೆಳಗಾವಿಯ ಬಾವಿಗಳನ್ನು ಮತ್ತೆ ಬದುಕಿಸಿದ ಪ್ರಯೋಗ ಜಾಗತಿಕ ಮಟ್ಟದಲ್ಲಿಯೂ ಮನ್ನಣೆ ಗಳಿಸಿದೆ. ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಜಾಗತಿಕ ಜಲ ಶೃಂಗ ಸಭೆಯಲ್ಲಿ ಬೆಳಗಾವಿಯ ಪ್ರಯೋಗ ಎಲ್ಲರನ್ನೂ ಹಿಂದಿಕ್ಕಿ ಪ್ರಶಸ್ತಿಗೆ ಭಾಜನವಾಯಿತು. ಕೋಟಿಗಟ್ಟಲೆ ಖರ್ಚು ಮಾಡಿ ನೀರನ್ನು ಉಳಿಸಿದವರೂ ಪ್ರಶಸ್ತಿ ಬಯಸಿ ಅಲ್ಲಿ ಬಂದಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ಅವರಿಗೆ ಬಹುಮಾನ ಸಿಗಲಿಲ್ಲ ಎಂದೂ ಇಲ್ಲಿ ಹೇಳಬೇಕು.

ಇದೆಲ್ಲ ಏನನ್ನು ಹೇಳುತ್ತಿರಬಹುದು? ಮನುಷ್ಯ ಪ್ರಯತ್ನವನ್ನೇ? ಸಾರ್ವಜನಿಕರ ಸಾಂಗತ್ಯವನ್ನೇ? ಅಥವಾ ನಿಸರ್ಗದ ನಿರಂತರ ಕರುಣೆಯನ್ನೇ? ನಾವು ಮತ್ತೆ ತೆರೆದ ಬಾವಿಗೆ ಹೋಗಿ ನೀರು ಸೇದುವುದು ಬಹುಶಃ ಸಾಧ್ಯವಿಲ್ಲ. ಬೆಳಗಾವಿಯಲ್ಲಿ ಕೂಡ ತೆರೆದ ಬಾವಿಗಳಿಂದ ನೀರು ಸೇದಲು ಅಧಿಕಾರಿಗಳು ಹೇಳಲಿಲ್ಲ. ಆದರೆ, ನಲ್ಲಿಯಲ್ಲಿ ಬರುವ ನೀರನ್ನು ಎಚ್ಚರದಿಂದ ಬಳಸಬೇಕು ಎಂಬ ವಿವೇಕವನ್ನು ನಾವು ಏಕೆ ಕಳೆದುಕೊಂಡಿದ್ದೇವೆ? ನಾವು ಇಂದು ಬಳಸುವ ನೀರು ಮುಂದಿನ ಪೀಳಿಗೆಯದು ಎಂದು ನಮಗೆ ತಿಳಿಯುವುದು ಯಾವಾಗ? ನಾಳೆಗಾಗಿ ನೀರು ಉಳಿಸಿದವರ ಕಥೆಗಳನ್ನು ಹೇಳುತ್ತಲೇ ಇರಬೇಕು ಎಂದು ಅನಿಸುತ್ತದೆ. ಮತ್ತು ಅದು ಜನರಿಗೆ ಇಷ್ಟವಾಗುವಂತೆಯೂ ಕಾಣುತ್ತದೆ. ನಾವಂತೂ ನಿರಂತರವಾಗಿ ಅಂಥ ಕಥೆಗಳನ್ನು ಹೇಳುತ್ತ ಇರುತ್ತೇವೆ.