ನಾವು ನೆಡುವ ಬೀಜದ ಸಸಿಯ ಫಲ ನಾವೇ ತಿನ್ನಬೇಕೆಂದು ನೆಟ್ಟಿರುವುದಿಲ್ಲ-ದೇವನೂರ ಮಹಾದೇವ

ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಸಂಚಾಲಕ ದೇವನೂರ ಮಹಾದೇವ ಅವರನ್ನು ಹೊಸ ಮನುಷ್ಯ ಸಮಾಜವಾದಿ ಮಾಸಿಕದ ಸಂಪಾದಕ ಡಿ.ಎಸ್. ನಾಗಭೂಷಣ ಅವರು ಮಾತನಾಡಿಸಿದ್ದು, ಅದು ಫೆಬ್ರವರಿ 2018ರ ಹೊಸ ಮನುಷ್ಯ ಸಂಚಿಕೆಯಲ್ಲಿ ಪ್ರಕಟವಾಗಿದೆ.

1. ಪಕ್ಷದ ಕೆಲಸ ಹೇಗೆ ನಡೆದಿದೆ?

ಸ್ಲೋ ಅಂಡ್ ಸ್ಟಡಿ ವಿನ್ಸ್ ದಿ ರೇಸ್ ಎಂಬಂತೆ ನಡೆದಿದೆ. ಕವಯಿತ್ರಿ ಸವಿತಾ ನಾಗಭೂಷಣ್ ಅವರು ಸ್ವರಾಜ್ ಇಂಡಿಯಾ ಪಕ್ಷಕ್ಕೆ ಸೇರಿದಾಗಲೇ ಸೂಕ್ಷ್ಮಮತಿಗಳಾದ ನಿಮಗೆ ಇದು ಅರ್ಥವಾಗಬೇಕಾಗಿತ್ತು!

2. ಇನ್ನೈದು ತಿಂಗಳುಗಳಲ್ಲಿ ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಗಂಭೀರ ಸ್ಪರ್ಧೆ ಒಡ್ಡುವ ಇರಾದೆ ನಿಮಗಿದೆಯೇ? ಅಥವಾ ಇನ್ನೂ ದೂರದ ಗುರಿ ಇಟ್ಟುಕೊಂಡಿದ್ದೀರೋ?

ತಾತ್ಕಾಲಿಕವಾಗಿ ಸ್ವರಾಜ್ ಇಂಡಿಯಾ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದು ಹಾಗೂ ಚುನಾವಣಾ ಸಂದರ್ಭವನ್ನು ಬಳಸಿಕೊಂಡು ಪಕ್ಷವನ್ನು ಪ್ರಚಾರಕ್ಕೆ ತರುವುದು ಮತ್ತು ಮುಂದಿನ ಚುನಾವಣೆಗಳಲ್ಲಿ ವ್ಯಾಪಕತೆಯನ್ನು ಪಡೆಯುವತ್ತ ಆಲೋಚಿಸಲಾಗುತ್ತಿದೆ.

3. ಮೇಲಿನ ಪ್ರಶ್ನೆಯನ್ನು ಏಕೆ ಕೇಳುತ್ತಿರುವೆನೆಂದರೆ, ಇಂದಿನ ರಾಜಕೀಯ ಚರ್ಚೆಗಳ ಮಧ್ಯೆ ‘ಸ್ವರಾಜ್ ಇಂಡಿಯಾ’ ಎಂಬ ಪಕ್ಷದ ಪ್ರಸ್ತಾಪವೇ ಇಲ್ಲವಾಗಿದೆ!

ಈಗ ನೀವು ಪ್ರಸ್ತಾಪ ಮಾಡುತ್ತಿದ್ದೀರಲ್ಲ? ನನ್ನಂತಹ ನಿಮ್ಮಂತಹ ಸಣ್ಣ ಸಣ್ಣವರೇ ಸೇರಿಕೊಂಡು ದೊಡ್ಡದಾಗುವ ಪ್ರಯತ್ನ ಇದಾಗಿರುವುದರಿಂದ ಈ ರೀತಿ ನಿಮಗೆ ಅನ್ನಿಸುತ್ತಿರಬಹುದು.

4. ನೀವು ;ಸರ್ವೋದಯ ಕರ್ನಾಟಕವನ್ನು ‘ಸ್ವರಾಜ್ ಇಂಡಿಯಾದಲ್ಲಿ ವಿಲೀನಗೊಳಿಸಲು ಇದ್ದ ಕಾರಣಗಳಾದರೂ ಏನು?

ನಾವು ಹೇಳುತ್ತಿದ್ದುದನ್ನೇ ಸ್ವರಾಜ್ ಇಂಡಿಯಾವು ಕೂಡ ಸಮರ್ಥವಾಗಿ ಹೇಳತೊಡಗಿದಾಗ ; ಜತೆಗೆ ಸರ್ವೋದಯ ಕರ್ನಾಟಕವು ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿಯ ವ್ಯಾಪ್ತಿಯನ್ನು ಮೀರಬೇಕಾದ ಅಗತ್ಯ ಕಂಡದ್ದರಿಂದ ಮತ್ತು ಸ್ವಾಯತ್ತತೆ, ಭಾಗವಹಿಸುವಿಕೆ ಪ್ರಜಾಪ್ರಭುತ್ವ (ಪಾರ್ಟಿಸಿಪೇಟರಿ ಡೆಮಾಕ್ರೆಸಿ) ಸ್ವರಾಜ್ ಇಂಡಿಯಾದ ತಳಪಾಯವಾದ್ದರಿಂದ ವಿಲೀನಗೊಳಿಸಲಾಯಿತು. ಹೆಸರನ್ನು ಉಳಿಸಿಕೊಳ್ಳಬೇಕು, ನಾವೇ ಮಾಡಬೇಕು ಎಂಬ ವಾಂಛೆ, ಪ್ರತಿಷ್ಠೆ ಇಲ್ಲದಿರುವುದು ಕೂಡ ವಿಲೀನಗೊಳಿಸುವುದಕ್ಕೆ ಕಾರಣ ಇರಬಹುದು.

5. ‘ಸರ್ವೋದಯ ಕರ್ನಾಟಕ’ ಪಕ್ಷದ ಮೂಲಕ ಮಾಡಲಾಗದಂತಹ ರಾಜಕಾರಣವನ್ನು ‘ಸ್ವರಾಜ್ ಇಂಡಿಯಾ’ ಮೂಲಕ ಮಾಡಬಹುದು ಎಂದು ನಿಮಗನ್ನಿಸಲು ಕಾರಣಗಳೇನು? ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಜಿಗಿಯುವ ಉದ್ದೇಶವಾದರೂ ಏನು?

ನಿಮ್ಮ ನಾಲ್ಕನೇ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನು ದಯವಿಟ್ಟು ಗಮನಿಸಿ.

6. ‘ಸರ್ವೋದಯ ಕರ್ನಾಟಕ’ದಂತೆಯೇ ನಿಮ್ಮ ಹೊಸ ಪಕ್ಷ ದಲಿತ ಚಳುವಳಿ ಮತ್ತು ರೈತ ಚಳುವಳಿಗಳ ಪಳಯುಳಿಕೆಗಳನ್ನೇ ನಂಬಿ ನಡೆದಂತಿದೆ?

ನಿಮ್ಮ ಮನೆಯಲ್ಲೇ ಸ್ವರಾಜ್ ಇಂಡಿಯಾ ಇರುವಾಗ ನೀವು ಈ ಪ್ರಶ್ನೆಯನ್ನು ಕೇಳಬಾರದಿತ್ತು!

7. ನಿಮ್ಮ ಪಕ್ಷ ಕನಿಷ್ಠ ಕರ್ನಾಟಕದ ರಾಜಕಾರಣದ ಮೇಲೆ ಯಾವಾಗ, ಎಂತಹ ಪರಿಣಾಮ ಬೀರಬಹುದೆಂದು ನೀವು ನಿರೀಕ್ಷಿಸುತ್ತೀರಿ?

ಮುಂದಿನ ಚುನಾವಣೆಗಳು ಮುಗಿದ ಮೇಲೆ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ನಗರ ಸಭೆಗಳ ಸ್ಥಳೀಯ ಚುನಾವಣೆಗಳಲ್ಲಿ ಸ್ವರಾಜ್ ಇಂಡಿಯಾ ಪಕ್ಷವು ಎಷ್ಟು ವ್ಯಾಪಕವಾಗಿ ಸ್ಪರ್ಧಿಸುತ್ತದೆ ಹಾಗೂ ಎಷ್ಟು ರಚನಾತ್ಮಕವಾಗಿರುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವುದು ನಿರ್ಧರಿತವಾಗುತ್ತದೆ. ನಮ್ಮ ಕಣ್ಣು ಸ್ಥಳೀಯ ಸಂಸ್ಥೆಯ ಚುನಾವಣೆಗಳ ಮೇಲಿದೆ.

8. ನೀವು ನಿಮ್ಮ ಹೊಸ ಪಕ್ಷಕ್ಕಾಗಿ ಮಂಡಿಸುತ್ತಿರುವ ಭವಿಷ್ಯದ ನಕ್ಷೆ ನೋಡಿ ಈ ಪ್ರಶ್ನೆಯನ್ನು ಕೇಳಬೇಕೆನಿಸಿದೆ. ನಿಮಗೆ ಇನ್ನೂ ಎಷ್ಟು ವರ್ಷ ಕೈ ಕಾಲು-ಬುದ್ಧಿ ಮನಸ್ಸುಗಳು ಗಟ್ಟಿ ಅಥವಾ ಸಮವಿರುತ್ತದೆಂದು ನೀವು ಭಾವಿಸಿದ್ದೀರಿ? ನಿಮ್ಮ ಆಯಸ್ಸು ಎಷ್ಟಿರಬಹುದೆಂದು ಅಂದಾಜು ಮಾಡಿದ್ದೀರಿ?[ಈಗಿನ ನಿಮ್ಮ ಆರೋಗ್ಯದ ಸ್ಥಿತಿಯ ಆಧಾರದ ಮೇಲೆ]
ನಿಮ್ಮ ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಮೇಲೂ ‘ಏನ ಮಾಡಿದರೇನು ಭವ ಹಿಂಗದೂ!’ ಎಂಬಂತೆ ಮತ್ತೆ ಪ್ರಶ್ನೆ ಕೇಳಿದ್ದೀರಿ. ಇರಲಿ, ಪ್ರಿಯ ನಾಗಭೂಷಣ್ ನಾನು ಈ ಗಳಿಗೆಯಲ್ಲಿ ಉಸಿರಾಡುತ್ತಿರುವೆ. ಮುಂದಿನ ಘಳಿಗೆ ಹೋಗೋ ಗೊತ್ತಿಲ್ಲ. ಒಂದು ನೆನಪಿರಲಿ, ನಾಗಭೂಷಣ್, ನಾವು ನೆಡುವ ಬೀಜದ ಸಸಿಯ ಫಲ ನಾವೇ ತಿನ್ನಬೇಕೆಂದು ನೆಟ್ಟಿರುವುದಿಲ್ಲ. ಬಹುಶಃ ನೀವೂ ಕೂಡ.

9. ‘ಸ್ವರಾಜ್ ಇಂಡಿಯಾ’ ಸ್ಥಾಪನೆಯಾಗುತ್ತಿದ್ದಂತೆಯೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಮ್ಮ ಶಾಸಕ ಪುಟ್ಟಣ್ಣಯ್ಯನವರನ್ನು ಉದ್ದೇಶಿಸಿ ‘ನೀವು ಎಂದಿದ್ದರೂ ನಮ್ಮ ಕಡೆಯೇ ಬರಲಿದ್ದೀರಿ!’ ಎಂದು ಆಡಿದ ಮಾತನ್ನು ನೀವು ಹೇಗೆ ಅರ್ಥೈಸುತ್ತೀರಿ?

ಮುಖ್ಯಮಂತ್ರಿಗಳ ಮಾತಿಗೆ ಪುಟ್ಟಣ್ಣಯ್ಯನವರು ಕೊಟ್ಟ ಉತ್ತರವನ್ನು ಯಾಕೆ ನಿಮ್ಮ ಹೊಟ್ಟೆಯೊಳಗೆ ಇಟ್ಟುಕೊಂಡಿದ್ದೀರಿ? ಪುಟ್ಟಣ್ಣಯ್ಯನವರು ಮುಖ್ಯಮಂತ್ರಿಗಳಿಗೆ ಕೊಟ್ಟ ಉತ್ತರದಲ್ಲೇ ನಿಮ್ಮ ಪ್ರಶ್ನೆಗೂ ಅದರೊಳಗೇ ಉತ್ತರ ಇಲ್ಲವೇ?

10. ಮುಖ್ಯಮಂತ್ರಿಗಳಿಗೆ ಪುಟ್ಟಣ್ಣಯ್ಯ ಏನು ಉತ್ತರಿಸಿದರೋ ನೆನಪಿಲ್ಲ. ನೆನಪಿಲ್ಲ ಅಂದರೆ ನೆನಪಿಟ್ಟುಕೊಳ್ಳುವಂತಹ ಮಾತನ್ನೇನೂ ಬಹುಶಃ ಅವರು ಆಡಿರಲಾರರು. ಆದರೆ ನಿಮಗೆ ನೆನಪಿರುವುದರಿಂದ ದಯವಿಟ್ಟು ಅದೇನೆಂದು ತಿಳಿಸಿ.

ನಿಮಗೆ ನೆನಪಿಲ್ಲದ್ದನ್ನು ಗೊತ್ತುಗುರಿಯಿಲ್ಲದೇ ಕಲ್ಲೆಸೆಯುವಂತೆ ಕೇಳಿದ್ದೀರಲ್ಲ ನಾಗಭೂಷಣ್! ಇದು ನಿಮಗೆ ಭೂಷಣವೇ?

11. ನಿಮ್ಮದು ರಾಜಕಾರಣ ಮಾಡುವಂತಹ ವ್ಯಕ್ತಿತ್ವವಲ್ಲ ಎಂದು ಬಹಳ ಜನ ಅಭಿಪ್ರಾಯಪಡುತ್ತಾರೆ. ನಿಮ್ಮ ಪ್ರತಿಕ್ರಿಯೆ ಏನು?

ನನ್ನದೂ ಅದೇ ಅಭಿಪ್ರಾಯ. ಆದರೆ ನನ್ನ ಎದುರಿಗಿರುವ ವಾಸ್ತವಗಳು ಕಷ್ಟಪಟ್ಟಾದರೂ ನಾನು ರಾಜಕಾರಣವನ್ನು ಮಾಡುವಂತೆ ಮಾಡುತ್ತಿವೆ. ನಿಮ್ಮನ್ನು ನೀವು ಸಂಯಮಿಸಿಕೊಂಡು ನೀವೂ ರಾಜಕಾರಣಕ್ಕೆ ಬರುವಂತಾಗಲಿ ಎಂದು ಪ್ರಾರ್ಥಿಸುವೆ.

12. ಈಗ ವಿವಾದಾತ್ಮಕ ಎನಿಸಿರುವ ಭೀಮಾ-ಕೋರೆಗಾಂವ್ ಪ್ರಕರಣವನ್ನು ನಾವು ಹೇಗೆ ನೋಡಬೇಕೆಂದು ನಿಮಗನ್ನಿಸುತ್ತದೆ?

ಸಂಕೀರ್ಣ ಇದೆ. ಈಗಷ್ಟೇ ತಿಳಿದುಕೊಳ್ಳುತ್ತಿರುವೆ. ಇದರ ನಾಡಿ ಹಿಡಿಯಬೇಕಾಗಿದೆ.

[ಸವಿತಾ ನಾಗಭೂಷಣ ಅವರು ತಾವು ಯಾವುದೇ ಪಕ್ಷದ ಸದಸ್ಯತ್ವವನ್ನೂ ಇದುವರೆಗೆ ಪಡೆದಿಲ್ಲವೆಂದೂ, ಕೆಲವು ಗೆಳೆಯರ ಕೋರಿಕೆಯ ಮೇರೆಗೆ ಸ್ವರಾಜ್ ಇಂಡಿಯಾ ಪಕ್ಷದ ಶಿವಮೊಗ್ಗ ಜಿಲ್ಲ ಸಲಹಾ ಸಮಿತಿಯ ಸದಸ್ಯರಾಗಿದ್ದು, ಮುಂದಿ ದಿನಗಳಲ್ಲಿ ಆ ಪಕ್ಷದ ನಡಾವಳಿಯನ್ನು ಗಮನಿಸಿ ಅದರ ಸದಸ್ಯತ್ವವನ್ನು ಪಡೆಯುವ ಬಗ್ಗೆ ಯೋಚಿಸಲಾಗುವುದೆಂದು ತಿಳಿಸಿದ್ದಾರೆ-ಸಂ]