‘ನಾವರಿಯದ ಮಣ್ಣಿನ ಲೋಕ’ ಕುರಿತ ಸಮಾಲೋಚನಾ ಸಭೆಯಲ್ಲಿ ಆಡಿದ ಭಾಷಣದ ಬರಹ ರೂಪ

ದೇವನೂರ ಮಹಾದೇವ
                                                                                    ಭೂಮಿ ಉಳಿಸಿಕೊಳ್ಳುವುದು ಹೇಗೆ?

Village Protest
ಮಣ್ಣಿನ ಜೀವಂತಿಕೆ ಕಾಪಾಡಿಕೊಳ್ಳಲು ನಾವಿಲ್ಲಿ ಆಲೋಚಿಸುತ್ತಿದ್ದೇವೆ. ಆದರೆ ಇಂದಿನ ಸರ್ಕಾರಗಳು ಭೂಮಿಯನ್ನೇ ಕೊಂದು ನೇತುಹಾಕುತ್ತಿವೆ. ಭೂಮಿಯ ಜೊತೆಗೆ ಯಾವುದೇ ನೈಸರ್ಗಿಕ ಸಂಪತ್ತಿಗೂ ಉಳಿಗಾಲವಿಲ್ಲದ ಕಡೆಗೆ ನಾವು ಚಲಿಸುತ್ತಿದ್ದೇವೆ. ಇದಕ್ಕೆ ಕೇಂದ್ರ ಜಾರಿಗೊಳಿಸಬೇಕೆಂದಿರುವ ಯಮಪಾಶದ ಜವರಾಯನಂತಿರುವ ಭೂಸ್ವಾಧೀನ ಸುಗ್ರೀವಾಜ್ಞೆ-ಇದೊಂದನ್ನೇ ನೋಡಿದರೂ ಸಾಕು. ಇಂಥ ಭೂಸ್ವಾಧೀನ ಸುಗ್ರೀವಾಜ್ಞೆ ಮನುಷ್ಯ ಮಾತ್ರದವರು ಮಾಡಲಾರರು. ಎದೆಯಲ್ಲಿ ಹೃದಯವಿಲ್ಲದ, ಮಿದುಳೊಳಗೆ ಮನಸ್ಸು ಇಲ್ಲದ ರೊಬೋಟ್ ಯಂತ್ರ ಮಾನವ ಮಾತ್ರ ಮಾಡಬಹುದಾದ ಕಾನೂನಿನಂತಿದೆ ಇದು.
ಮಣ್ಣಿನ ಜೀವಂತಿಕೆಯನ್ನು ಕಾಪಾಡಲು ಇಲ್ಲಿ ಚರ್ಚಿಸಲ್ಪಡುವ ಸಲಹೆ ಸೂಚನೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುತ್ತದಂತೆ. ಭೂ ಹಂತಕರ ಪರವಾದ ಈ ಸರ್ಕಾರಗಳು ತಮ್ಮ ಭೂ ಹತ್ಯೆಯನ್ನು ಮರೆ ಮಾಚಲು ಭೂ ಫಲವತ್ತತೆ ಕಾಪಾಡುವ ಹೆಸರಲ್ಲಿ ಒಂದಿಷ್ಟು ಹಣ ಚೆಲ್ಲಬಹುದು, ಒಂದಿಷ್ಟು ಸರ್ಕಾರಿ ಕಾರ್ಯಕ್ರಮಗಳನ್ನು ಮಾಡಲೂಬಹುದು. ಮಣ್ಣಿನ ಜೀವಂತಿಕೆ ಚರ್ಚಿಸುವತ್ತ ಗಮನ ಸೆಳೆದು ಮತ್ತಷ್ಟು ಭೂಮಿಯನ್ನು ನಿರಾಯಾಸ ಧ್ವಂಸ ಮಾಡಲೂಬಹುದು. ಇದು, ಭೂಮಿಯನ್ನು ಅಗೆದು ಬಗೆದು ಟಾರು ಮರಳು ಮಾಡಿ ಕೊಂದು ಅದರೊಳಗೆ ಜೀವ ಕಾಪಾಡುವ ಮಾತನಾಡಿದಂತಾಗುತ್ತದೆ. ಜೊತೆಗೆ ಇಂಥ ಸಮಸ್ಯೆಗಳನ್ನು ತಟ್ಟೆ ಮಾಡಿಕೊಂಡು ಒಂದಿಷ್ಟು ಜನಕ್ಕೆ ಹೊಟ್ಟೆಯಾಪ್ತಿ ನಡೆಯಬಹುದು ಅಷ್ಟೇ.
ಹಾಗಾದರೆ ಹೇಗೆ? ಭೂ ಜೀವಂತಿಕೆ ಕಾಪಾಡುವ ಸಮಸ್ಯೆಯನ್ನು ಭೂಸ್ವಾಧೀನ ಸುಗ್ರೀವಾಜ್ಞೆ ವಿರೋಧಕ್ಕೆ ತಳಕು ಹಾಕಬೇಕಾಗಿದೆ. ಎರಡನ್ನೂ ಜೊತೆಗೂಡಿಸಿ ಒಂದೇ ಎಂಬಂತೆ ನೋಡಬೇಕಾಗಿದೆ. ನಾಳೆ ಈ ಭೂಮಿ ಉಳಿಸಿಕೊಂಡು ಬದುಕಿ ಬಾಳಬೇಕಾದ ವಿದ್ಯಾರ್ಥಿ ಯುವಜನತೆಯಲ್ಲಿ ಎಚ್ಚರ ಮೂಡಿಸಬೇಕಾಗಿದೆ; ಜನಾಂದೋಲನಕ್ಕೆ ಪ್ರೇರಣೆಯಾಗಬೇಕಾಗಿದೆ. ಇದಾಗದಿದ್ದರೆ ನಾವು ಬಿಳಿಬಟ್ಟೆ ವರದಿಗಾರರೋ ವಕ್ತಾರರೋ ಆಗಿಬಿಡುತ್ತೇವೆ.
ನಮ್ಮ ಮುಂದೆ ಎಷ್ಟು ಕತ್ತಲು ಇದೆ ಎಂದರೆ-ನೈಸರ್ಗಿಕ ಸಂಪತ್ತನ್ನು ಧ್ವಂಸಿಸುವ ಭೂ ಕೊಲೆಗಡುಕರ ಕೈಗೊಂಬೆಯಾಗಿ ಇಂದಿನ ರಾಜಕಾರಣ ಕುಣಿಯುತ್ತಿದೆ. ಹಿಂದೆ ರಾಜನ ಆಸ್ಥಾನವಿತ್ತು, ಅಲ್ಲಿ ನರ್ತಕಿಯರು ಕುಣಿಯುತ್ತಿದ್ದರು. ಇಂದು ಅಂಬಾನಿ-ಅದಾನಿ ಥರದವರ ಆಸ್ಥಾನದಲ್ಲಿ ಬಣ್ಣಬಣ್ಣದ ವೇಷಧರಿಸಿ ಕುಣಿಯುವ ನರ್ತಕಿಯರಂತೆ ನಮ್ಮ ಸರ್ಕಾರಗಳಾಗಿಬಿಟ್ಟಿವೆ. ಅಂದರೆ ಯಾರಿಗೋ ಮೇಸ್ತ್ರಿಗಳಂತೆ ಇಂದಿನ ಸರ್ಕಾರಗಳು ಕೆಲಸ ಮಾಡುತ್ತಿವೆ.
ಹೇಳಿ, ಭೂಮಿ ಉಳಿಸಿಕೊಳ್ಳುವುದು ಹೇಗೆ? ಆಮೇಲೆ ಅದರೊಳಗಿನ ಮಣ್ಣಿನ ಜೀವ ಉಳಿಸಿಕೊಳ್ಳುವುದು ಹೇಗೆ?