ನಮ್ಮ ಶಂಕರ್‌ಗುರು ನೆನಪಲ್ಲಿ…

Shankar_Invi1

Shankar_Invi2

ನಮ್ಮ ಕೆ.ಎಂ. ಶಂಕರಪ್ಪ ಒಂದು ರೀತಿಯಲ್ಲಿ ಪ್ರಸಾರಂಗವೆ, ಎಲೆಲ್ಲೋ ಅರಿವಿನ ಬಿತ್ತನೆ ನೆಟ್ಟವನು ಒಂದು ಪಕ್ಷಿಯಂತೆ, ಸಾಧಾರಣವಾಗಿ ಇದ್ದುಕೊಂಡು ಅರಿವಿಗೆ ಬಾರದಂತೆ ಅರಿವಿನ ಬಿತ್ತನೆ. ನಮ್ಮಗಳದ್ದು ಆತನೊಡನೆ ಲೇವಡಿ ಸಂಬಂಧ, ಭಾವ-ಭಾವಮೈದುನರಂತೆ. ಈ ಶಂಕರಪ್ಪನ ಸಹವಾಸ, ಸಹವಾಸವೇ ಅಲ್ಲ, ಅಂದುಕೊಂಡು ಹಾತೊರೆಯುವ ಸಂಬಂಧ ಊಟ, ಉಪಚಾರ, ತೀರ್ಥ ಪ್ರಸಾದ ನಡುವೆ ಎಲ್ಲೊ ಒಂದಿಷ್ಟು ಮಾತು. ಆತನ ಜೊತೆಜೊತೆಗೆ ನೆನಪಾಗುವ ಒಂದು ಮಾತು ಎಂದರೆ ’ಬುದ್ದಿಸಂನಿಂದ ಎಲ್ಲಾನೂ ಎತ್ತಾಕೊಂಡು ಬಿಟ್ಟವರೇ ಕಣ್ರೋ ಈ ವೈದಿಕರು.’ ತಿರುಪತಿ ತಿಪ್ಪನ್ನನ್ನ ನೋಡಿದ್ರೂ ಅದೇ ಮಾತು, ರಾಘವೇಂದ್ರ ಸ್ವಾಮಿ ನೋಡಿದ್ರೂ ಅದೇ ಮಾತು, ಗಣಪತಿ ನೋಡಿದ್ರೂ ಕೂಡ. ಅದಕ್ಕೆ ಅಯ್ಯೋ ಹೋಗಲಿ ಬಿಡು ಶಂಕರಪ್ಪ ಅಂತಿದ್ದೆ. ನಾನು ಎಂ.ಎ ಓದುವಾಗ ನನ್ನ ಬಗ್ಗೆ ಹೇಳಿದ ಆತನ ಒಂದು ಮಾತು – ’ಲೋ ಪರ್‍ವಾಗಿಲ್ಲ ಕಣೋ ನೀನೂನುವೆ. ಪರ್‍ಸ್‌ಪಸ್ಸನ್ ಒಳಗೇನೆ ಕಾನ್ಸಪ್ಸನ್ ಮೂಡೋದು ನಿನ್ನೊಳಗೂ ಐತೆ’ – ಇದು ಅಮಾಸ ಓದಿ ಹೇಳಿದ ಮಾತು ಇರಬೇಕು. ನನಗಾಗ ಆ ಪರ್‍ಸಪ್ಸನ್, ಕಾನ್ಸಪ್ಸನ್ ಅಂದ್ರೆ ಏನೂ ಅಂತಾನೆ ಗೊತ್ತಿರಲಿಲ್ಲ. ಈಗಲೂ ಒಂದು ಅಂದಾಜು ಗೊತ್ತು ಅನ್ಸಿದದೆ ಅಷ್ಟೇನೆ. ಆದರೆ ಇದು ನನ್ನೊಳಗೆ ಉಳಿದಿದೆ. ನನ್ನ ಅರಿವನ್ನು ಹಿಗ್ಗಿಸುತ್ತಿದೆ. ಆಮೇಲೆ ಈ ಶಂಕರಪ್ಪ ಎಲ್ಲೇ ಹೋಗಲಿ, ಆ ಮನೆಯ ಯಜಮಾನ್ತಿಯನ್ನು ‘ಸಪ್ತಮಾತೃಕೆ’ ಅಂದುಬಿಡುತ್ತಿದ್ದ. ಪಾಪ, ಆ ಯಜಮಾನ್ತಿ ತನ್ನ ಜೊತೆಗೆ ಇನ್ನು ಆರು ಜನ ಅಷ್ಟೇ ಅಂದುಕೊಳ್ಳುತ್ತಿದ್ದರು ! ಆದರೆ ಈ ಶಂಕರಪ್ಪ ನೂರಾರು ಮನೆಗೆ ಹೋದರೂ ಅದೇ ಕತೆ, ಅದೇ ಸಪ್ತಮಾತೃಕೆ, ಹಾಗಾಗಿ ನೂರಾರು ಸಪ್ತಮಾತೃಕೆಯರು ! ಅದಕ್ಕೆ ನಾನು ’ಭೂಮಿ ಮ್ಯಾಲೆ ನಿನ್ನನ್ನು ಎಲ್ಲೇ ಎಸೆದರೂ ನಿನಗೆ ಅನ್ನ ಹುಟ್ಟುತ್ತೆ ಬಿಡಪ್ಪಾ’ ಅಂತ ರೇಗಿಸುತ್ತಿದ್ದೆ. ಅದಕ್ಕೆ ಇರಬೇಕು, ಆಗ ಶಂಕರಪ್ಪ ಬಗ್ಗೆ ಒಂದು ಕಾರಣಿಕ ವಾಕ್ಷ್ಯ ಆಗ ಚಾಲ್ತಿಯಲ್ಲಿತ್ತು – ’ಹೆಂಗಸರ ಜೊತೆ ಪಟ್ಟಂಗ, ಗಂಡಸರ ಜೊತೆ ವಿತಂಡವಾದ, ಒಂಟಿ ಇದ್ದಾಗ ಆಕಾಶಕ್ಕೆ ಕಣ್ಣು’ ಇದನ್ನು ಹುಟ್ಟು ಹಾಕಿದ್ದ ಕಾರಣಿಕ ಯಾರು ಎಂದು ಹುಡುಕಿದರೆ ಯಾರು? ಬಹುಶಃ ನಾನೇ, ಕ್ಷಮೆ ಇರಲಿ. ಮದುವೆ ಆದರೆ ಬದಲಾವಣೆ ಆಗಬಹುದೇನೋ ಅಂದುಕೊಂಡು, ನಾಗವಾರ ಇರಬೇಕು, ಮದುವೆ ಮಾಡಿಸಿದರೂ ಏನೂ ಬದಲಾವಣೆ ಆಗದ ಕೈಬೆರಳಣಿಕೆ ವ್ಯಕ್ತಿಗಳಲ್ಲಿ ಶಂಕರಪ್ಪ ಕೂಡ ಸ್ಥಾನ ಪಡೆಯುತ್ತಾರೆ.

ಏನು ಹೇಳುವುದು ಶಂಕರಪ್ಪ ಒಂದು ಪ್ರಜ್ಞೆ ಇದ್ದಂತೆ ಇದ್ದ. ಓಂ ಮಣಿ ಪದ್ಮೇಹಂ’ – ಇದು ಬುದ್ಧಿಸ್ಟ್ ಮಂತ್ರ ಕಣೋ ಅಂತ ಶಂಕರಪ್ಪ ಹೇಳಿದ್ದ ನೆನಪು. ಈ ಶಂಕರಪ್ಪ ಜೊತೆಗೇ ಚಲನಚಿತ್ರ ಕ್ಷೇತ್ರದಲ್ಲಿ ತಿಳುವಳಿಕೆ ಪಡೆದಾತ, ಮಾಡಬೇಕಾದ್ದನ್ನು ಮಾಡಲಿಲ್ಲವಲ್ಲ ಎಂಬ ವ್ಯಥೆ ನನ್ನಲ್ಲಿದೆ. ಒಂದ್ಸಲ, ಕೃಪಾಕರ್ ಸೇನಾನಿ ಕುವೆಂಪು ಬಗ್ಗೆ ಡಾಕ್ಯುಮೆಂಟರಿ ಚಿತ್ರ ಮಾಡಲು ಉತ್ಸುಕರಾದಾಗ ಅವರನ್ನು ಹಿಡಿದು ತಂದು ಶಂಕರಪ್ಪ ಬಳಿ ನಿರ್ದೇಶನಕ್ಕೆ ಬಿಟ್ಟೆ. ಕುವೆಂಪು ವ್ಯಕ್ತಿಚಿತ್ರ; ಶಂಕರಪ್ಪನಿಂದ ನಿರ್ದೇಶನ – ಈ ಎರಡೂ ಕಾರಣಕ್ಕಾಗಿ. ಒಂದಿಷ್ಟು ಮಾತುಕತೆಯಲ್ಲೇ ಅದು ಮುರಿದುಬಿತ್ತು. ಏನೂ ಮಾಡುವುದು? ’ಎರಡು ಹಕ್ಕಿ ಹಿಡಿದುಕೊಂಡು ಬಂದೆ. ನಿನ್ನ ಮರದಲ್ಲಿ ಗೂಡು ಕಟ್ಟಲಿ ಅಂತ. ಯಾಕ್ ಶಂಕರಪ್ಪ ಒದರಾಡಿ ಹಕ್ಕಿಗಳು ಹಾರಿಹೋಗುವಂತೆ ಮಾಡ್ದೆ ಅಂದೆ’ ಅಷ್ಟೆ. ನನಗೆ ಅರ್ಥವಾಗಲಿಲ್ಲ. ಚಲನಚಿತ್ರ ಗ್ರಾಮರ್ ಹೆಚ್ಚು ತಿಳಿದು ಆ ಗ್ರಾಮರ್ ಮರೆಯದೆ ಆ ಜ್ಞಾನದಿಂದಲೇ ಹೀಗಾಯ್ತೆ? – ಒಂದೊಂದು ಸಲ ಅನ್ನಿಸುತ್ತದೆ. ಇರಲಿ, ಶಂಕರಪ್ಪ ನೆನಪಿನ ಬುತ್ತಿ ಬಿಚ್ಚುತ್ತಿರುವ ಈಗ . ಅದು ನಮ್ಮ ಶಂಕರಪ್ಪನಂತೆಯೇ ಇರಲಿ. ಇಲ್ಲ್ಲದ್ದರೆ – ’ನೀವ್ ಮಾತಾಡಿದ್ದನ್ನೆಲ್ಲ ಕೇಳಿಸ್ಕಂಡೆ ಕಣ್ರೋ. ಬಡ್ಡೆತ್ತವಾ ಯಾರ್ ಬಗ್ಗೆ ಮಾತಾಡ್ತ ಇದ್ರೋ’ ಅಂತ ಶಂಕರಪ್ಪನ ಪ್ರಜ್ಞೆಯಿಂದ ಅನ್ನಿಸಿಕೊಳ್ಳಬೇಕಾಗೂ ಬರಬಹುದು.