ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ ನಾಗೇಶ್ ಹೆಗಡೆಯವರ ಮನದಾಳದ ಮಾತುಗಳು-ಎನ್ ಜಗದೀಶ್ ಕೊಪ್ಪ

ಸಿದ್ದಾಪುರ ಮತ್ತು ಶಿರಸಿ ಈ ಪರಿಸರದ ನಿಮ್ಮ ಬಾಲ್ಯದ ನೆನಪುಗಳನ್ನು ಹೇಳಿ.ಅಲ್ಲಿನ ಕಾಡು, ಕಣಿವೆ, ಜಲಪಾತ ನಿಮ್ಮ ಮೇಲೆ ಬೀರಿದ ಪ್ರಭಾವ ಎಂತಹದ್ದು?

nagesh hegadeಬಾಲ್ಯದ ನೆನಪುಗಳನ್ನು ಕೆದಕಲು ಹೋದರೆ ಅದೇ ಒಂದು ಸಂಪುಟವಾದೀತು. ಅಲ್ಲಿನ ಎಲ್ಲರಂತೆ ನಾನೂ ನಿಸರ್ಗದ ಮಡಿಲಲ್ಲಿ ಮುಳುಗಿ ಎದ್ದವ; ಮರ ಹತ್ತಿ ಬಿದ್ದು ಕೈಮುರಿದುಕೊಂಡು ಮತ್ತೆ ಹತ್ತಿ ಏಟು ತಿಂದಿದ್ದು, ಬಾಳೆಗಿಳಿ ಹಿಡಿಯಲೆಂದು ಬಸರೀಮರದ ಅಂಟಿನ ಟ್ರ್ಯಾಪ್ ಮಾಡಿದ್ದು, ದನ ಕಾಯಲು ಹೋದಾಗ ಗುಡ್ಡದ ಮೇಲೆ ಗುಡಿಸಲು ಕಟ್ಟಲು ಹೋಗಿ ಮೈಮೇಲೆ ಕೆಡವಿಕೊಂಡಿದ್ದು, ಸಾವಿರಾರು ಇವೆ. ಮುಂಜಾನೆ ಸವಿ ನಿದ್ದೆಯಲ್ಲಿದ್ದಾಗ ನನ್ನ ಆಯಿ ಬಾಗಿಲಿಗೆ ರಂಗೋಲಿ ಹಾಕುತ್ತ ಕುಮಾರವ್ಯಾಸನ ಕರ್ನಾಟಕ ಭಾರತವನ್ನು ಹಾಡುತ್ತಿದ್ದುದು;

ಮಳೆಗಾಲದಲ್ಲಿ ತಾಳಮದ್ದಲೆ, ಅಡಿಕೆ ಗೊನೆ ಕೊಯ್ಲಿನ ದಿನಗಳಲ್ಲಿ ಜಾನಪದ ಕಥನ; ಆಮೇಲೆ ಆಲೆಮನೆಯ ದಿನಗಳಲ್ಲಿ ಕೋಣಗಳೊಂದಿಗೆ ಗಾಣದ ಸುತ್ತ ಸುತ್ತುವಾಗಿನ ದೇಸೀ ಹಾಡುಗಳು, ಆಮೇಲೆ ಯಕ್ಷಗಾನದ ಕಿನ್ನರಲೋಕ… ಒಂದೇ, ಎರಡೇ? ಅವುಗಳನ್ನೆಲ್ಲ ಚಿತ್ರಗಳನ್ನಾಗಿ ಬರೆಯುತ್ತಿದ್ದೆ. ಮದುವೆ, ಉಪನಯನದ ಸಂದರ್ಭಗಳಲ್ಲಿ ಅಲಂಕಾರಿಕ ಚಿತ್ರಗಳನ್ನು ಬರೆಯಲು ನನಗೆ ಸುತ್ತಮುತ್ತಲಿನ ಊರುಗಳಿಂದ ಆಹ್ವಾನ ಬರುತ್ತಿತ್ತು. ಈಗಲೂ ನಮ್ಮೂರಿನ ಕೆಲವು ಮನೆಗಳ ‘ಬಾಗಿಲು ತೋರಣ’ದಲ್ಲಿ ನಾನು ಬರೆದ ಚಿತ್ರಗಳೇ ಇವೆ.

ಅವೆಲ್ಲಕ್ಕಿಂತ ಮಹತ್ವದ ಸಂಗತಿ ಏನೆಂದರೆ ನನಗೆ ಪುಸ್ತಕಗಳನ್ನು ಓದುವ ಹುಚ್ಚು ಹೇಗೋ ತಗುಲಿಕೊಂಡಿದ್ದು. ನನ್ನ ಅನಿಸಿಕೆಗಳನ್ನೆಲ್ಲ ದಾಖಲಿಸಲು ಬೇಕಾದ ಅಭಿವ್ಯಕ್ತಿಯ ಸಾಧನಗಳು ಚಂದಮಾಮ, ಕಸ್ತೂರಿ, ಎನ್. ನರಸಿಂಹಯ್ಯನವರ ‘ಕೆರಳಿದ ಕೇಸರಿ’ಯಂಥವುಗಳ ಮೂಲಕ ದಕ್ಕಿದವು. ದೇವಕೀನಂದನ ಖತ್ರಿಯವರ ‘ಚಂದ್ರಹಾಸ ಸಂತತಿ’ ಸರಣಿಯನ್ನು ಐದನೇ ಕ್ಲಾಸಿನಲ್ಲಿ ಓದಿ ಮುಗಿಸಿದ್ದೆ. ಏಳನೆಯ ಕ್ಲಾಸಿನಲ್ಲಿದ್ದಾಗ ಬಸವರಾಜ ಕಟ್ಟೀಮನಿಯವರ ‘ಬೀದಿಯಲ್ಲಿ ಬಿದ್ದವಳು’ ಕಾದಂಬರಿಯನ್ನು ಕದ್ದು ಮುಚ್ಚಿ ಓದುತ್ತಿದ್ದಾಗ ಸಿಕ್ಕಿಬಿದ್ದು, ಕ್ಲಾಸಿನಿಂದ ಹೊರ ಹಾಕಿಸಿಕೊಂಡಿದ್ದೆ.

ಆಮೇಲೆ ದೇವುಡು, ಕುವೆಂಪು, ಶರಶ್ಚಂದ್ರ, ಭೈರಪ್ಪನವರ ಮೂಲಕ ಮಲೆನಾಡಿನ ಆಚಿನ ಲೋಕವನ್ನು ಗ್ರಹಿಸುವ ಅವಕಾಶ ಲಭಿಸಿತ್ತು. ಅದೂ ಅಂಥ ವಿಶೇಷವಿರಲಿಕ್ಕಿಲ್ಲ.  ಊರಲ್ಲಿ ನಾಲ್ಕನೆಯ ಕ್ಲಾಸಿನ ನಂತರ ಶಾಲೆಗಾಗಿ ಬೇರೆ ಊರುಗಳ ಪರಿಚಯಸ್ಥರ ಮನೆಯಲ್ಲಿ ಉಳಿಯಬೇಕಾದ ಪ್ರಸಂಗ ಬಂದಾಗ ಅಲ್ಲಿನವರೆಲ್ಲ ನನ್ನನ್ನು ‘ಕುಳ್ಳ’ ಎಂದು ಹಂಗಿಸುತ್ತಿದ್ದರು. ನಾನು ಯಾರಿಗೇನೂ ಕಮ್ಮಿ ಇಲ್ಲವೆಂದು ತೋರಿಸಿಕೊಳ್ಳಲು ಹೆಣಗುತ್ತಿದ್ದೆ. ಆ ಹೆಣಗಾಟವೇ ನನ್ನನ್ನು ಮಲೆನಾಡಿನಿಂದ ತುಂಬ ದೂರಕ್ಕೆ ಒಯ್ಯಿತು.

ನೀವು ಪಶ್ಚಿಮ ಬಂಗಾಳದ ಕೊಲ್ಕತ್ತ ಸಮೀಪದ ಖರಗ್ಪುರದಲ್ಲಿರುವ   ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಇನ್ಸಿಟ್ಯುಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಓದಿದವರು. ಆನಂತರ ದೆಹಲಿ ಜವಹರಲಾಲ್ ವಿಶ್ವ ವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಿದವರು.

ಆ ಕಾಲಘಟ್ಟದಲ್ಲಿ ಎಡ ಪಂಥೀಯ ಚಳುವಳಿ ಮತ್ತು ಚಿಂತನೆಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದವು ಇವುಗಳ ಪ್ರಭಾವದಿಂದ ಹೇಗೆ ತಪ್ಪಿಸಿಕೊಂಡಿರಿ?

ಯಾರು ಹೇಳಿದರು ನಾನು ತಪ್ಪಿಸಿಕೊಂಡೆ ಅಂತ? ಸಾಕಷ್ಟು ಗಾಢವಾಗಿಯೇ ತಟ್ಟಿಸಿಕೊಂಡಿದ್ದೇನೆ. ನಾನು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ನಮ್ಮ ಪಾಡಿಗೆ ನಾವಿರಲೂ ಅವರು ಬಿಡುತ್ತಿರಲಿಲ್ಲ. ಲೈಬ್ರರಿಯಲ್ಲಿ, ಲ್ಯಾಬ್ಗಳಲ್ಲಿ ಇದ್ದ ನಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲದಿದ್ದರೂ ನಂಬೂದ್ರಿಪಾಡರ, ಸುರ್ಜೀತ್ ಸಿಂಗ್ ರ ಭಾಷಣ ಕೇಳಲು, ಮುಷ್ಕರ ಹೂಡಲು, ಪ್ರತಿಭಟನಾ ಮೆರವಣಿಗೆ ಮಾಡಲು, ಬಲವಂತವಾಗಿ ವಿಯೆಟ್ನಾಮ್ ಯುದ್ಧದ ವಿರುದ್ಧ ಅಮೆರಿಕನ್ ರಾಯಭಾರಿ ಕಚೇರಿ ಎದುರು ಧರಣಿ ಹೂಡಿ ಲಾಕಪ್ಗೆ ಹೋಗಲು ನಮ್ಮಂಥವರನ್ನೆಲ್ಲ ಎಳೆದೊಯ್ಯುತ್ತಿದ್ದರು.   ಹೇಳಿಕೇಳಿ ಇದೇ ಪ್ರಕಾಶ್ ಕಾರಟ್, ಸೀತಾರಾಂ ಯೆಚೂರಿ, ಕಮಲ್ ಮಿತ್ರ ಚಿನಾಯ್, ಕೆ.ಎನ್. ಹರಿಕುಮಾರ್ ಎಲ್ಲ ನಮ್ಮ ಓರಗೆಯವರೇ ಆಗಿ ಅಕ್ಕಪಕ್ಕದ ಹಾಸ್ಟೆಲ್ಗಳಲ್ಲೇ ಇದ್ದು ಊಟದ ಹಾಲ್ಗಳಲ್ಲಿ ನಮ್ಮ ತಲೆತಿನ್ನುತ್ತಿದ್ದರು.

ನಾವು ಕೆಲವರು ರೇಜಿಗೆ ಹುಟ್ಟಿ, ನಮ್ಮದೇ ಆದ ‘ಫ್ರೀ ಥಿಂಕರ್ಸ್’ ಎಂಬ ಪಂಗಡವೊಂದನ್ನು ಕಟ್ಟಿದೆವು. ಹೆಣ್ಣುಮಕ್ಕಳೇ ಹೆಚ್ಚಾಗಿದ್ದ ಪಂಗಡ ನಮ್ಮದಾಗಿತ್ತು. ಕರಪತ್ರ ಬರೆಯುವ, ಪೋಸ್ಟರ್ ಚಿತ್ರ ಬರೆಯುವ ಕೆಲಸ ನನ್ನ ಪಾಲಿಗೆ ಬರುತ್ತಿತ್ತು. ಎರಡೆರಡು ಬಾರಿ ಎಡಪಂಥೀಯರನ್ನು ಸೋಲಿಸಿ, ವಿದ್ಯಾರ್ಥಿ ಸಂಘಗಳನ್ನು ನಾವು ‘ಫ್ರೀ ಥಿಂಕರ್ಸ್’ ನಡೆಸಿದ್ದೂ ಇದೆ. ಕ್ರಮೇಣ ಬಲಪಂಥೀಯರು ನಮ್ಮ ಗುಂಪಿನೊಳಕ್ಕೆ ಸೇರಿಕೊಂಡು ನಮ್ಮ ಪಿಎಚ್ಡಿಗೆ ಕಲ್ಲು ತೂರುವಂತೆ ದಿಲ್ಲಿ ಎಬಿವಿಪಿಯವರು ವಿವಿಯಿಂದ ಜೇಟ್ಲಿಯನ್ನೂ ಬಿಹಾರದಿಂದ ಜಯಪ್ರಕಾಶ್ ನಾರಾಯಣರನ್ನೂ ಕ್ಯಾಂಪಸ್ಸಿಗೆ ಕರೆಸುತ್ತ ರಾಜಕೀಯವೇ ರೇಜಿಗೆ ಎನಿಸುವಷ್ಟರಲ್ಲಿ ತುರ್ತು ಪರಿಸ್ಥಿತಿ ಬಂದು ನಾವೆಲ್ಲ ದಿಕ್ಕಾಪಾಲಾಗಿ ಚದುರಿದೆವು.

ಉತ್ತರ ಕಾಂಡ ಅಥವಾ ಉತ್ತರಾಂಚಲದ ನೈನಿತಾಲ್ ಗಿರಿಧಾಮದ ಕುಮಾವನ್ ವಿ.ವಿ,ಯಲ್ಲಿ ಭೂ ವಿಜ್ಞಾನದ ಪ್ರೊಫೆಸರ್ ಆಗಿದ್ದವರು ನೀವು. ಅಲ್ಲಿನ ನೈನಿ ತಾಲ್, ಭೀಮ್ ತಾಲ್ ಎನ್ನುವ ಸರೋವರಗಳು, ಚೀನಾ ಹೈಟ್ ಎಂಬ ಸುಂದರ ಸ್ಥಳ, ಮಾಲ್ ರೋಡ್ ಎಂಬ ಹೆಸರಿನಲ್ಲಿ ಸರೋವರದ ಸುತ್ತ ಬೆಳಗಿನ ಮತ್ತು ಸಂಜೆಯ ವಾಕಿಂಗ್ ಗಾಗಿ ಇರುವ ಸುಂದರ ರಸ್ತೆ, ರಾಣಿಖೇತ್, ಪಿತೋರ್ ಘರ್, ಅಲ್ಮೋರ..

ಇಂತಹ ಸುಂದರ ಪ್ರಕೃತಿಯ ಪ್ರದೇಶವನ್ನು ತೊರೆದು ನೀವು ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿರಿ. ಕಾರಣ ಏನು?

ನನಗಿಂತ ನಿಮಗೇ ಅಲ್ಲಿನ ಭೂಪ್ರದೇಶಗಳು ಚೆನ್ನಾಗಿ ಪರಿಚಯವಾದಂತಿದೆ! ನಾನು ಪ್ರೊಫೆಸರ್ ಅಲ್ಲ, ಪರಿಸರ ವಿಜ್ಞಾನದ ಲೆಕ್ಚರರ್ ಆಗಿದ್ದೆ. ದೇಶದಲ್ಲೇ ಮೊದಲ ‘ಪರಿಸರ ವಿಜ್ಞಾನ’ದ ಹುದ್ದೆ ನನ್ನದಾಗಿತ್ತು. ತಂಪು ಹವೆಯ ಸ್ಥಳ ಅದಾಗಿದ್ದರೂ ನೈನಿತಾಲ್ ಎಂದರೆ ಬೇಸಿಗೆಯಲ್ಲಿ ಮಾತ್ರ ಸುಂದರ. ಮಳೆಗಾಲ, ಚಳಿಗಾಲಗಳಲ್ಲಿ ಘೋರ ನರಕದ ತಾಣ ಅದು. ಅರ್ಧಕ್ಕರ್ಧ ನೈನಿತಾಲ್ ಖಾಲಿಯಾಗಿ, ಅಂಗಡಿ-ಹೊಟೆಲ್ಗಳೆಲ್ಲ ಬಾಗಿಲು ಮುಚ್ಚಿ, ಊಟಕ್ಕೂ ಪರದಾಡಬೇಕಾಗಿ ಬರುತ್ತಿತ್ತು. ಅಲ್ಲಿಂದ ಕಾಲ್ತೆಗೆಯಲು ಏನಾದರೊಂದು ನೆಪ ಹುಡುಕುತ್ತಿದ್ದೆ.

ನಾನು ಹಿಂದೆ ಐಐಟಿ, ಜೆಎನ್ಯು ದಲ್ಲಿದ್ದಾಗಲೂ ‘ಸುಧಾ’, ‘ಕಸ್ತೂರಿ’ ‘ಉತ್ಥಾನ’, ಹಿಂದೂಸ್ತಾನ್ ಟೈಮ್ಸ್ಗಳಿಗೆ ಕಥೆ, ಲಘುಬರಹ, ವೈಜ್ಞಾನಿಕ ಲೇಖನ ಬರೆಯುತ್ತಿದ್ದ ಹಾಗೆ ನೈನಿತಾಲ್ದಲ್ಲಿದ್ದಾಗಲೂ ಬರೆಯುತ್ತಿದ್ದೆ. ಒಮ್ಮೆ, ನನ್ನದೇ ಲೇಖನ ಪ್ರಕಟವಾದ ‘ಸುಧಾ’ದಲ್ಲಿ ‘ಸಬ್ ಎಡಿಟರ್ ಬೇಕಾಗಿದ್ದಾರೆ’ ಎಂಬ ಜಾಹೀರಾತು ಇತ್ತು. ಇಂಟರ್ವ್ಯೂ ಕೊಡುವ ನೆಪದಿಂದ ಬೆಂಗಳೂರು ಸುತ್ತಿ ಬರೋಣವೆಂದು ಈ ಕಡೆ ಬಂದೆ. ಇಲ್ಲೇ ಉಳಿದೆ.

ನೀವು ಪ್ರಜಾವಾಣಿ ಬಳಗಕ್ಕೆ ಸೇರಿಕೊಂಡಾಗ  ಅತ್ಯಂತ ಪ್ರಗತಿಪರ ಆಲೋಚನೆಯುಳ್ಳ ಹಾಗೂ ಎಡ ಪಂಥೀಯ ಚಿಂತನೆಗಳಿಂದ ಪ್ರಭಾವಿತರಾಗಿದ್ದರೂ ಸಹ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯವನ್ನು ಬರೆದ ಕೆ.ಎನ್. ಹರಿಕುಮಾರ್ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಚುಕ್ಕಾಣಿ ಹಿಡಿದಿದ್ದರು. ಅವರ ಜೊತೆಗಿನ ನಿಮ್ಮ ಅನುಭವ ಹೇಗಿತ್ತು?

ಆಗ ಪತ್ರಿಕೋದ್ಯಮಕ್ಕೆ ಅವರೂ ಹೊಸಬರು, ನಾನೂ ಹೊಸಬನಾಗಿದ್ದೆ. ಅವರು ಮಾಲಿಕರು, ನಾನು ನೌಕರ. ನಾನಿದ್ದ ‘ಪ್ರಜಾವಾಣಿ’ಗಂತೂ ಅವರು ಬರುತ್ತಿರಲಿಲ್ಲ; ನಮ್ಮಿಬ್ಬರ ಭೇಟಿ ಎಲ್ಲೋ ಅಪರೂಪಕ್ಕೆ ಲಿಫ್ಟ್ನಲ್ಲಿ ಅದೂ ‘ಹೈ, ಹೌ ಆರ್ ಯೂ?’ ಎಂಬಷ್ಟಕ್ಕೆ ಸೀಮಿತವಾಗಿರುತ್ತಿತ್ತು. ನನಗೆ ‘ವಿಜ್ಞಾನ ಮತ್ತು ಅಭಿವೃದ್ಧಿ ಬಾತ್ಮೀದಾರ’ ಎಂಬ ಹುದ್ದೆ ಕೊಟ್ಟಿದ್ದರು. ಇಂಗ್ಲಿಷ್ ಪತ್ರಿಕೆಗಳಲ್ಲೂ ಅಂಥ ಹುದ್ದೆ ಇರಲಿಲ್ಲ. ಅವರ ಕನಸುಗಳೇನಿದ್ದವೊ, ಕನ್ನಡದಲ್ಲಂತೂ ರಾಜಕೀಯ ಬಿಟ್ಟರೆ ಬೇರೆ ಸುದ್ದಿಗಳಿಗೆ ಜಾಗವೇ ಇರುತ್ತಿರಲಿಲ್ಲ. ಆದರೂ ನನ್ನ ವರದಿ/ವಿಶ್ಲೇಷಣೆಗಳಿಂದಾಗಿ ಮುಖಪುಟದಲ್ಲಿ ಜಾಗ ಗಿಟ್ಟಿಸಿಕೊಳ್ಳಲು ‘ಪ್ರಜಾವಾಣಿ’ಯ ಅಂದಿನ ಸಂಪಾದಕ ವೈಎನ್ಕೆಯವರು ಸಾಕಷ್ಟು ನೆರವಿಗೆ ಬಂದರು.  ಅಭಿವೃದ್ಧಿಯ ಯೋಜನೆಗಳಿಂದಾಗಿ ಗ್ರಾಮೀಣರ ಮತ್ತು ಗಿರಿಜನರ ಬದುಕು ಹೇಗೆ ನರಕವಾಗುತ್ತಿದೆ ಎಂಬುದರ ಕುರಿತು ನಾನು ಸಾಕಷ್ಟು ಪ್ರಸಂಗಗಳನ್ನು ವರದಿ ಮಾಡಿದೆ. ಡೆಕ್ಕನ್ ಹೆರಾಲ್ಡ್ನಲ್ಲಿ ವಿಜ್ಞಾನ ಕುರಿತು ಸಂಪಾದಕೀಯ ಬರೆಯುವವರು (ಹರಿಕುಮಾರ್ ನಿರ್ದೇಶನದ ಪ್ರಕಾರ) ಆಗಾಗ ನನ್ನ ಬಳಿಗೆ ಸಮಾಲೋಚನೆಗೆ ಬರುತ್ತಿದ್ದರು.

ಕೈಗಾ ಪರಮಾಣು ಸ್ಥಾವರ ಕುರಿತಂತೆ ಹರಿಕುಮಾರ್ ಖುದ್ದಾಗಿ ಸಂಪಾದಕೀಯ ಬರೆಯುವ ಮುನ್ನ ನನ್ನನ್ನು ಕರೆಸಿಕೊಂಡು ಪರಮಾಣು ವಿರೋಧಿಗಳ ದೃಷ್ಟಿಕೋನ ಏನೇನಿದೆಯೆಂದು ಚರ್ಚಿಸಿದ್ದರು. ಒಮ್ಮೆ, ಪ್ರಜಾವಾಣಿಯ ಸುದ್ದಿ ಸಂಪಾದಕರ ಒತ್ತಡದಿಂದಾಗಿ ನಾನು ಪುಟ್ಟಪರ್ತಿಗೆ ಹೋಗಿ ಸಾಯಿಬಾಬಾರ ಅದ್ಯಾವುದೋ ದೊಡ್ಡ ಕಾರ್ಯಕ್ರಮವನ್ನು ವರದಿ ಮಾಡಬೇಕಾಗಿ ಬಂತು. ಅದು ಗೊತ್ತಾಗಿ ಹರಿಕುಮಾರ್ ಕುಪಿತರಾಗಿದ್ದರೆಂದು ಕಾಣುತ್ತದೆ. ‘ಇನ್ನುಮೇಲೆ ನಾಗೇಶ ಹೆಗಡೆಗೆ ಅಂಥ ಅಸೈನ್ಮೆಂಟನ್ನು ಹಾಕಕೂಡದು ಎಂದು ಮೇಲಿನಿಂದ ಹುಕುಂ ಬಂದಿದೆ’ ಎಂದು ಸುದ್ದಿಸಂಪಾದಕರು ನನ್ನ ಮೇಲೆ ಗರಮ್ ಆಗಿದ್ದು ನೆನಪಿದೆ.

ಕಾಳಿ ಅಣೆಕಟ್ಟು ಯೋಜನೆಗೆ ದಟ್ಟ ಮಳೆಕಾಡು ಬಲಿಯಾಗಿದ್ದು, ಹರಿಹರ ಪಾಲಿಫೈಬರ್ ಫ್ಯಾಕ್ಟರಿಯಿಂದಾಗಿ ತುಂಗಭದ್ರೆಯೇ ಮಲಿನ ಮಡುವಾಗಿದ್ದು, ನಾಗರಹೊಳೆಯ ಅಭಿವೃದ್ಧಿಗಾಗಿ ವನವಾಸಿಗಳು ನೆಲೆ ಕಳೆದುಕೊಂಡಿದ್ದು…. ಇವೇ ಮುಂತಾದ ವರದಿಗಳಿಂದಾಗಿ ‘ವಿಜ್ಞಾನ ಮತ್ತು ಅಭಿವೃದ್ಧಿಯ ವರದಿಗಾರನೇ ವಿಜ್ಞಾನ ಮತ್ತು ಅಭಿವೃದ್ಧಿಯ ವಿರೋಧಿ’ ಎಂಬ ಹಣೆಪಟ್ಟಿ ಕೂಡ ನನಗೆ ಬಂತು. ನಾನು ‘ಫೀಚರ್ ರೈಟರ್’ ಎಂಬ ಹೊಸ ಹುದ್ದೆ ಪಡೆದು ದಿನಪತ್ರಿಕೆಯಿಂದ ವಾರಪತ್ರಿಕೆಗೆ ಸ್ಥಾನಾಂತರಗೊಂಡೆ. ಆದರೂ ವಿಜ್ಞಾನ ಸಂಬಂಧಿ ಮಹತ್ವದ ಬೆಳವಣಿಗೆ ಆದಾಗಲೆಲ್ಲ ನಾನು ‘ಪ್ರಜಾವಾಣಿ’ಯ ವರದಿಗಾರನೇ ಆಗುತ್ತಿದ್ದೆ. 1992ರಲ್ಲಿ ಬ್ರಝಿಲ್ನಲ್ಲಿ ಮೊದಲ ಪೃಥ್ವಿ ಶೃಂಗಸಭೆಗೆ ಪ್ರಜಾವಾಣಿಯಿಂದ ಯಾರನ್ನಾದರೂ ಕಳಿಸಬೇಕೆಂದು ಪ್ರಧಾನ ಮಂತ್ರಿಯ ಕಚೇರಿಯಿಂದ ಪತ್ರ ಬಂದಾಗ ಅದರ ಮೇಲೆ ‘ನಾಗೇಶ ಹೆಗಡೆಯನ್ನೇ ಕಳಿಸಿ’ ಎಂದು ಹರಿಕುಮಾರ್ ಟಿಪ್ಪಣಿ ಬರೆದಿದ್ದು ನನಗಿನ್ನೂ ನೆನಪಿದೆ.

ಸರ್ ನಾನು ಬಲ್ಲಂತೆ ರಾಷ್ಟ್ರ ಮಟ್ಟದಲ್ಲಿ ದಿವಂಗತ ಅನಿಲ್ ಅಗರವಾಲ್ರವರು ಅವರು ಖರಗ್ ಪುರದಲ್ಲಿ ನಿಮ್ಮ ಸಹಪಾಠಿಯಾಗಿದ್ದರು ಎಂದು ನೆನಪು. ಅವರು ದೆಹಲಿಯನ್ನು ಕೇಂದ್ರವನ್ನಾಗಿಸಿಕೊಂಡು ಹುಟ್ಟು ಹಾಕಿದ ಸೆಂಟರ್ ಪಾರ್ ಸೈನ್ಸ್ ಅಂಡ್ ಎನ್ವಿರಾನ್ ಮೆಂಟ್ ಸಂಸ್ಥೆಯ ಮೂಲಕ ಪರಿಸರ ಕುರಿತಂತೆ ಹೊಸ ತಲೆ ಮಾರಿಗೆ ಹುಟ್ಟು ಹಾಕಿದ ಜ್ಞಾನ ಪರಂಪರೆಯ ಭಾಗವಾಗಿ ನೀವು ನನಗೆ ಕಾಣುತ್ತೀರಿ.

ಏಕೆಂದರೆ,  ನೀವು ಕನ್ನಡದಲ್ಲಿ ಪರಿಸರ ಕುರಿತ ಕಾಳಜಿಯನ್ನು ನನ್ನ ತಲೆ ಮಾರು ಒಳಗೊಂಡಂತೆ ಈಗಿನ ತಲೆಮಾರಿಗೂ ಹಂಚುತ್ತಿದ್ದೀರಿ. ಇದರ ಹಿಂದಿನ ಪ್ರೇರಣೆಗಳು ಏನು?

ಅನಿಲ್ ಅಗರ್ವಾಲ್ ಕಾನಪುರ ಐಐಟಿಯ ಪದವೀಧರರಾಗಿದ್ದರು. ದಿಲ್ಲಿಯಲ್ಲಿ ನಮ್ಮಿಬ್ಬರ ಪರಿಚಯವಾಗಿತ್ತು. ಅವರು ವಿಜ್ಞಾನ ಮತ್ತು ಪರಿಸರ ಪತ್ರಕರ್ತರಾಗಿ ನಮ್ಮ ಜೆಎನ್ಯುದ ಪರಿಸರ ವಿಜ್ಞಾನ ವಿಭಾಗಕ್ಕೂ ಆಗಾಗ ಬರುತ್ತಿದ್ದರು. ದಿಲ್ಲಿಯ ಐಐಟಿ, ಏಮ್ಸ್ ಮತ್ತು ಜೆಎನ್ಯುದಲ್ಲಿದ್ದ ನಾವು ಕೆಲವರು ಸೈನ್ಸ್ ಫೋರಮ್ ಎಂಬ ಸಡಿಲ ಸಂಘಟನೆಯ ಹೆಸರಿನಲ್ಲಿ ಆಗಾಗ ಸಭೆ ಸೇರುತ್ತಿದ್ದೆವು. ಸಮಾಜದ ಕಲ್ಯಾಣಕ್ಕಾಗಿ ವಿಜ್ಞಾನವನ್ನು ಪಳಗಿಸುವುದು ಹೇಗೆ ಎಂದು ಚರ್ಚಿಸುತ್ತಿದ್ದೆವು. ಆಮೇಲೆ ನಾನು 1980ರಲ್ಲಿ ‘ಪ್ರಜಾವಾಣಿ’ಗೆ ಸೇರಿದ ಮೇಲೆ, ಅವರು ‘ಡೌನ್ ಟು ಅರ್ಥ್’ ಪತ್ರಿಕೆಯನ್ನು ಆರಂಭಿಸಲು ಹೊರಟಾಗ ಬೆಂಗಳೂರಿಗೆ ಬಂದರು. ಪ್ರಜಾವಾಣಿ ಬಿಟ್ಟು ತನ್ನ ಹೊಸ ಪತ್ರಿಕೆಗೆ ಸೇರುವಂತೆ ನನಗೆ ಸಾಕಷ್ಟು ಒತ್ತಾಯ ಮಾಡಿದರು. ನನಗೆ ಕನ್ನಡವನ್ನು ಬಿಡಲು ಮನಸ್ಸಿರಲಿಲ್ಲ. ಮೇಲಾಗಿ ಈಗಿದ್ದ ಗಟ್ಟಿ ನೌಕರಿಯನ್ನು ಬಿಟ್ಟು ಹೊರಡು ಧೈರ್ಯ ಇರಲಿಲ್ಲ. ಆದರೆ ಅವರ ಪತ್ರಿಕೆಗೆ ಬೇಕಿದ್ದ ಪರೋಕ್ಷ ನೆರವು, ಸಂಶೋಧನಾ ಸಾಮಗ್ರಿಗಳನ್ನು ನಾನು ಒದಗಿಸುತ್ತಿದ್ದೆ.

ಅದೇ ವೇಳೆಗೆ ಎಲ್ಲೆಲ್ಲಿಂದಲೋ ಕರ್ನಾಟಕಕ್ಕೆ ಬಂದ ಡಾ. ಮಾಧವ ಗಾಡ್ಗೀಳ, ಎಸ್.ಆರ್. ಹಿರೇಮಠ, ಡಾ. ಕುಸುಮಾ ಸೊರಬ, ಯಲ್ಲಪ್ಪ ರೆಡ್ಡಿ, ಪ್ರೊ. ಅಮೂಲ್ಯ ರೆಡ್ಡಿ, ವಂದನಾ ಶಿವ, ರಾಮಚಂದ್ರ ಗುಹಾ ಮುಂತಾದವರೆಲ್ಲ ಕ್ರಿಯಾಶೀಲರಾಗಿ ವಿಜ್ಞಾನ, ಪರಿಸರ ಮತ್ತು ಸಾಮಾಜಿಕ ಅಭಿವೃದ್ಧಿ ಕುರಿತು ಹೊಸ ಸಂಚಲನ ಮೂಡಿಸುವಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿರುವಂತೆ ಮಾಡಿದ್ದರು. ಜೊತೆಗೆ ಬೆಂಗಳೂರಿನವರೇ ಆದ ಡಾ. ಸುದರ್ಶನ, ಪ್ರೊ. ನಂಜುಂಡಸ್ವಾಮಿ ವಿಭಿನ್ನ ಹಾದಿಯನ್ನು ಸೃಷ್ಟಿಸತೊಡಗಿದ್ದರು. ಕಾರಂತರೂ ಪರಿಸರದ ಕುರಿತು ಮಾತಾಡತೊಡಗಿದ್ದರು.

‘ಸುಧಾ’, ‘ಪ್ರಜಾವಾಣಿ’ಯಂಥ ಪ್ರಭಾವೀ ಮಾಧ್ಯಮದಲ್ಲಿದ್ದ ನಾನು ಸಹಜವಾಗಿಯೇ ಅವರೊಂದಿಗೆ ಒಡನಾಡುತ್ತಿದ್ದೆ. ಅವರ ಚಳವಳಿಗಳ ಬಗ್ಗೆ ‘ಸುಧಾ’ದಲ್ಲಿ ಮುಖಪುಟ ಲೇಖನ ಬರೆಯುತ್ತಿದ್ದೆ;  ಅನಿಲ್ ಅಗರರ್ವಾಲರ ಪತ್ರಿಕೆಯ ಮೂಲಕ ರಾಷ್ಟ್ರಮಟ್ಟದಲ್ಲೂ ಇವರೆಲ್ಲ ಪರಿಚಿತರಾಗತೊಡಗಿದರು. ನಿಮಗೆ ಗೊತ್ತಿರಬಹುದು, ಭಾರತದ ಪರಿಸರ ಪರಿಸ್ಥಿತಿ ಕುರಿತು ಮೊಟ್ಟಮೊದಲ ‘ನಾಗರಿಕ ವರದಿ’ ಇಂಗ್ಲಿಷ್ನಲ್ಲಿ ಪ್ರಕಟವಾಗುತ್ತಲೇ ಅದು ಡಾ. ಶಿವರಾಮ ಕಾರಂತರ ಮೂಲಕ ನೇರವಾಗಿ ಕನ್ನಡದಲ್ಲಿ (ಮೊದಲ ಬಾರಿಗೆ ಪ್ರಾಂತೀಯ ಭಾಷೆಯಲ್ಲಿ) ಪ್ರಕಟವಾಯಿತು. ಇಂದು ಕರ್ನಾಟಕವೇ ಪರಿಸರ ಜ್ಞಾನದಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಇವರೆಲ್ಲರ ಕೊಡುಗೆ ಇದೆ. ನಾನು ಒಂದು ಮಾಧ್ಯಮ ಪ್ರತಿನಿಧಿ ಮಾತ್ರ.

ನೀವು ಪರಿಸರ, ಕೃಷಿ ಕುರಿತು ಬರೆಯುವ ಮುನ್ನ ಕನ್ನಡದಲ್ಲಿ ಟಿ. ಆರ್. ಅನಂತರಾಮು ಮತ್ತು ಕೈವಾರ ಗೋಪಿನಾಥ್ ರವರು ವಿಜ್ಞಾನದ ಬಗ್ಗೆ  ಬರೆಯುತ್ತಿದ್ದರು.  ಜಯಣ್ಣ ಎಂಬುವರು ಆಕಾಶವಾಣಿಯ ಮೂಲಕ ಕೃಷಿ ಕುರಿತು ಮಾತನಾಡುತ್ತಿದ್ದರು. ಡಾ. ಶಿವಪ್ಪ ಮತ್ತು ಡಾ.ಸಿ.ಆರ್ ಚಂದ್ರಶೇಖರ್ ಆರೋಗ್ಯದ ಬಗ್ಗೆ ಬರೆಯುತ್ತಿದ್ದರು.

ನೀವು ಕನ್ನಡ ಪತ್ರಿಕೋದ್ಯಕ್ಕೆ ಬಂದ ನಂತರ ಪರಿಸರ ಮತ್ತು ವಿಜ್ಞಾನಕ್ಕೆ  ಹೊಸ ಆಯಾಮ ಸಿಕ್ಕಿತೆಂದು ನನ್ನ ಭಾವನೆ. ಏಕೆಂದರೆ, ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿರಿಸಿಕೊಂಡು ಎಂ.ಬಿ.ಸಿಂಗ್ ಆರಂಭಿಸಿದ್ದ ಸುಧಾ ವಾರಪತ್ರಿಕೆಗೆ ನೀವು ಸೇರಿದ ಮೇಲೆ ಅರಣ್ಯಾಧಿಕಾರಿ ಅ.ನ. ಯಲ್ಲಪ್ಪರೆಡ್ಡಿ ಮೂಲಕ ಸರಣಿ ಲೇಖನಗಳನ್ನು ಬರೆಸಿ ಹೊಸ ಸಂವೇದನೆಯನ್ನು ಹುಟ್ಟು ಹಾಕಿದಿರಿ.

ಆ ಲೇಖನ ಮಾಲೆಯಿಂದ ಯಲ್ಲಪ್ಪರೆಡ್ಡಿರವರ ಒಳಗಿದ್ದ ಒಬ್ಬ ಪರಿಸರವಾದಿಯನ್ನು ಮತ್ತು ಜನಾಂಗದ ತುಳುಸಿ ಎಂಬ ಅಪರೂಪದ  ಹಾಗೂ ಹಾಲಕ್ಕಿ ಒಕ್ಕಲಿಗ ಜನಾಂಗದ ಹೆಣ್ಣುಮಗಳನ್ನು ಜಗತ್ತಿಗೆ ಪರಿಚಯಿಸಿದ್ದಿರಿ ಸಂಪಾದಕರಾಗಿ ಇಂತಹ ಸವಾಲುಗಳನ್ನು ಹೇಗೆ ಸ್ವೀಕರಿಸಿದಿರಿ?

ಎಲ್ಲವೂ ಒಂದಕ್ಕೊಂದು ಕೂಡಿ ಬಂದಾಗ ಇವೆಲ್ಲ ತಂತಾನೇ ಆಗುತ್ತವೆ. ಹಿಂದಿನ ಪ್ರಶ್ನೆಗೆ ಅದರಲ್ಲಿ ಉತ್ತರವಿದೆ ನೋಡಿ. ಸಾಲದ್ದಕ್ಕೆ, ನಾನು ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಹೊಸಬನಾಗಿದ್ದರೂ ಹೊರಜಗತ್ತನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಣ್ಣಾರೆ ನೋಡಿ ಬಂದವನಾಗಿದ್ದೆ. ಮಲೆನಾಡಿನಲ್ಲಿ ಹುಟ್ಟಿ, ಭೂವಿಜ್ಞಾನದ ವಿದ್ಯಾರ್ಥಿಯಾಗಿ ರಾಜಸ್ತಾನದ ಮರುಭೂಮಿಯನ್ನೂ ಬಿಹಾರದ ಗಣಿನಿಕ್ಷೇಪಗಳ ಧ್ವಂಸದೌರ್ಜನ್ಯವನ್ನೂ ಹಿಮಾಲಯದ ಭೀಭತ್ಸ ಪ್ರಕೃತಿಯನ್ನೂ ನೋಡಿ ಬಂದವನಾಗಿದ್ದೆ. ತುರ್ತುಸ್ಥಿತಿಯಲ್ಲಿ ಹಿಮಾಚಲ ಪ್ರದೇಶ, ಕಾರ್ಬೆಟ್ ಪಾರ್ಕ್ಗಳಲ್ಲಿ ತಲೆ ಮರೆಸಿಕೊಂಡು ಆಮೇಲೆ ಮಹಾರಾಷ್ಟ್ರದ ವರ್ಧಾದಲ್ಲಿ ‘ಸೈನ್ಸ್ ಫಾರ್ ವಿಲೇಜಿಸ್’ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿ ಬಂದವ.

ಇಲ್ಲಿ ‘ಸೈನ್ಸ್ ಕರೆಸ್ಪಾಂಡಂಟ್’ ಎಂಬ ವಿಶಿಷ್ಟ ಹುದ್ದೆಯಲ್ಲಿ ‘ಪ್ರಜಾವಾಣಿ’ ಸೇರಿ, ಕನ್ನಡದಲ್ಲೇ ಮೊದಲ ಬಾರಿಗೆ ‘ಫೀಚರ್ ರೈಟರ್’ (ನುಡಿಚಿತ್ರ ಲೇಖಕ) ಎಂಬ ಇನ್ನೊಂದು ಹುದ್ದೆಯೊಂದಿಗೆ ‘ಸುಧಾ’ಕ್ಕೆ ಬಂದಿದ್ದೆ. ಅಲ್ಲಿ ಅದುವರೆಗೆ ‘ಆರಾಮ್ ಕುರ್ಚಿ ಬರವಣಿಗೆ’ಗಳಿಗೆ ಪ್ರಾಶಸ್ತ್ಯವಿತ್ತೇ ವಿನಾ ಕಣ್ಣಿಗೆ ಕಟ್ಟುವಂತೆ ಹೊರಜಗತ್ತಿನ ವಿದ್ಯಮಾನಗಳನ್ನು  ವಿವರಿಸುವ ಶೈಲಿ ಪ್ರಚಲಿತಕ್ಕೆ ಬಂದಿರಲಿಲ್ಲ. ಯಾವುದೋ ಹಾವಾಡಿಗನ, ಹೂವಿನ, ಇಲ್ಲವೆ ರಂಗೋಲಿಯ ಸುಂದರ ಚಿತ್ರವನ್ನು ಮುಖಪುಟಕ್ಕೆ ಹಾಕುವ ಬದಲು ಆಗತಾನೇ ‘ಕವರ್ ಸ್ಟೋರಿ’ ಪರಿಕಲ್ಪನೆ ‘ಸುಧಾ’ದಲ್ಲಿ ಅದೇತಾನೆ ಜಾರಿಗೆ ಬಂದಿತ್ತು. ಆದ್ದರಿಂದಲೇ ಆ ದಿನಗಳಲ್ಲಿ ನಾನು ಬರೆದ ಅನೇಕ ವರದಿಗಳು (ಪಶ್ಚಿಮ ಘಟ್ಟಗಳ ಪತನ, ಅಣುಚಳಿಗಾಲ, ಬುಲ್ಡೋಝರ್ ಸಂಸ್ಕøತಿ, ಆಹಾರವೆಂಬ ಆಯುಧ ಮುಂತಾದವು) ಸಾಕಷ್ಟು ಸಂಚಲನ ಮೂಡಿಸಿದ್ದವು. ಅವು ಇಂದಿಗೂ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗುತ್ತಿವೆ.

ನೀವು ಬರೆದ “ಇರುವುದೊಂದೇ ಭೂಮಿ” ಕೃತಿಯು ಇವೊತ್ತಿಗೂ ಕನ್ನಡದ ಪರಿಸರದ ಜಗತ್ತಿಗೆ ಬೈಬಲ್ ನಂತಿದೆ. ಪರಿಸರ ಮತ್ತು ವಿಜ್ಞಾನ ಕುರಿತಂತೆ ಕನ್ನಡದಲ್ಲಿ ಬರೆಯುವಾಗ ಲೇಖಕನಿಗೆ ಎದುರಾಗುವ ದೊಡ್ಡ ಸವಾಲೆಂದರೆ ಅಲ್ಲಿನ ತಾಂತ್ರಿಕ ಪದಗಳ ಅನುವಾದ. ನೀವು ಅತ್ಯಂತ ಸರಳವಾಗಿ ಹೇಳಬಲ್ಲಿರಿ ಜೊತೆಗೆ ಹೊಸ ಪದಗಳನ್ನು ಹುಟ್ಟು ಹಾಕಿದಿರಿ.

ಇತ್ತೀಚೆಗೆ ಹೊಗೆ ಮತ್ತು ಮಂಜು ಈ ಎರಡು ಶಬ್ದಗಳಿಗೆ ಪರ್ಯಾಯವಾಗಿ ‘ಹೊಂಜು’ ಎಂಬ ಪದವನ್ನು ಹುಟ್ಟು ಹಾಕಿದಿರಿ. ನಿಮ್ಮ ಕೃತಿಗಳ ಮತ್ತು ಲೇಖನಗಳ  ವೈಶಿಷ್ಟ್ಯವೆಂದರೆ, ಕಠಿಣವಾದ ವಿಷಯವನ್ನು ಲಲಿತ ಪ್ರಬಂಧದ ರೀತಿಯಲ್ಲಿ ಸುಲಭವಾಗಿ ಹೇಳಬಲ್ಲಿರಿ. ಇದನ್ನು ಎಲ್ಲಿಂದ ಕಲಿತಿರಿ?

ಹಿಂದಿನವರು ಕಲಿಸಿದ್ದು ಅದು! ಬಾಲ್ಯದಲ್ಲೇ ಕನ್ನಡ ಸಾಹಿತ್ಯವನ್ನು ತಕ್ಕಮಟ್ಟಿಗೆ ಓದಿಕೊಂಡಿದ್ದೆನಲ್ಲ? ಶಿರಸಿಯ ಕಾಲೇಜಿನಲ್ಲಿದ್ದಾಗಲೇ ‘ಸುಧಾ’ದಲ್ಲಿ ಅಂದು ಪ್ರಕಟವಾಗುತ್ತಿದ್ದ ಎಚ್ಚೆಸ್ಕೆಯವರ ಬರಹಗಳ ಸುಲಲಿತ ಶೈಲಿಯನ್ನು ಹುಬೇಹೂಬ್ ಅನುಕರಣೆ ಮಾಡಿ ಅಂತಗ್ರ್ರಹ ಯಾತ್ರೆ ಕುರಿತು ಪ್ರಬಂಧ ಬರೆದಿದ್ದಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಸಿಕ್ಕಿತ್ತು. ಆಮೇಲೆ ನಾನು ದೇಶ ಸುತ್ತುತ್ತಿದ್ದಾಗ ಯಾವ ಪತ್ರಿಕೆಗೆ ಏನೇ ಬರೆದಿದ್ದರೂ ಎಲ್ಲವೂ ಪ್ರಕಟವಾಗುತ್ತಿದ್ದವು.  ‘ಪ್ರಜಾವಾಣಿ’ ಸೇರಿದ ಮೇಲೆ ಅಂದಿನ ಸಂಪಾದಕರಾಗಿದ್ದ ವೈಎನ್ಕೆ ನನ್ನ ಎಲ್ಲ ವರದಿಗಳನ್ನೂ ಬೈಲೈನ್ ಸಮೇತ ಮೊದಲ ಪುಟದಲ್ಲೇ ಪ್ರಕಟವಾಗುವಂತೆ ನೋಡಿಕೊಳ್ಳುತ್ತಿದ್ದರು.

ತಾನು ಬರೆಯುತ್ತಿದ್ದ, ತಮಾಷೆಯ ಮೂರನೆಯ ಸಂಪಾದಕೀಯವನ್ನೂ ಆಗಾಗ ನನ್ನಿಂದ ಬರೆಸುತ್ತಿದ್ದರು. ಆಮೇಲೆ ನನ್ನ ಬಾಸ್ ಆಗಿ ಬಂದ ಜಿ.ಎಸ್. ಸದಾಶಿವ ನಾಲ್ಕು ವರ್ಷಗಳ ಕಾಲ ಸತತವಾಗಿ ನನ್ನಿಂದ ಮೂರನೆಯ ಸಂಪಾದಕೀಯ ಬರೆಸಿದರು. ‘ಸುಧಾ’ ಸಂಪಾದಕರಾಗಿದ್ದ ಎಂ ಬಿ ಸಿಂಗ್ ನನ್ನ ಪ್ರತಿಯೊಂದು ಲೇಖನದ ಹಸ್ತಪ್ರತಿಯನ್ನೂ ಓದಿ, ನನ್ನನ್ನು ಚೇಂಬರ್ ಒಳಕ್ಕೆ ಕರೆದು ಶೇಕ್ಹ್ಯಾಂಡ್ ಮಾಡುತ್ತಿದ್ದರು. ಅವರೆಲ್ಲರ ನೆರವಿನ ಹಸ್ತ ನನಗೆ ಸಿಕ್ಕಷ್ಟು ಬೇರೆ ಯಾರಿಗೂ ಸಿಕ್ಕಿಲ್ಲವೇನೊ. ಮೇಲಾಗಿ, ಸಹೃದಯ ಓದುಗರು ಹಾಗೂ ನನ್ನ ಲೇಖನಗಳನ್ನು ಪಾಠವಾಗಿ ಬೋಧಿಸುವ ಶಾಲೆ ಕಾಲೇಜುಗಳ ಶಿಕ್ಷಕರು ಇದ್ದಾರಲ್ಲ- ಅವರೆಲ್ಲರಿಂದ ಈಗಲೂ ನನಗೆ ಪಾಠಗಳು ಲಭಿಸುತ್ತಿವೆ.

ಈ ದೇಶದ ನಗರಗಳ ಭವಿಷ್ಯವನ್ನು ಮತ್ತು ಅವುಗಳ ನರಕ ಸದೃಶ್ಯ ಬದುಕನ್ನು  ಎಲ್ಲರಿಗಿಂತ ಮುಂಚಿತವಾಗಿ ನೀವು ಊಹಿಸಿಬಲ್ಲಿರಿ. ಬೆಂಗಳೂರು ನಗರದ  ವಾಸವನ್ನು ತೊರೆದು, ನಗರಾದಚೆ ನೆಮ್ಮದಿಯ ಬದುಕನ್ನು ಮತ್ತು ನೆಲದ ಸಂಸ್ಕೃತಿಯನ್ನು ಪ್ರೀತಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದೀರಿ.

ಈ ಹೊಸ ಪರಿಸರ ಮತ್ತು ಏಕಾಂತ ಈಗ ಹೇಗನಿಸುತ್ತೆ?

ಅದು ಹೊಸದಾಗಿ ಉಳಿದಿಲ್ಲ. ಸುತ್ತ ಮೂರೂ ದಿಕ್ಕುಗಳಿಂದ ಬೆಂಗಳೂರು ಅಮರಿಕೊಳ್ಳುತ್ತಿದೆ. ಉಕ್ಕೇರಿ ಬರುವ ಸಮುದ್ರದ ಅಲೆಗಳು ಕಚಡಾ ವಸ್ತುಗಳನ್ನು ತಳ್ಳಿ ತರುವ ಹಾಗೆ ಮಹಾ ನಗರದ ತಿಪ್ಪೆಗಳೆಲ್ಲ ನಮ್ಮತ್ತ ಸಾಗಿ ಬರುತ್ತಿವೆ. ಕೆಡವಿದ ಹಳೇ ಕಟ್ಟಡಗಳ ಅವಶೇಷಗಳು, ಹಬ್ಬದ ತಿಪ್ಪೆಗಳು, ಟಯರ್ಗಳು, ಸ್ಯಾನಿಟರಿ ಪ್ಯಾಡುಗಳು, ಕೊನೆಗೆ ಬೀಡಾಡಿ ನಾಯಿಗಳು, ಬಿಡಿಎ ಬುಲ್ಡೋಜರ್ಗಳು ನಮ್ಮತ್ತ ನುಗ್ಗಿ ಬರುತ್ತಿವೆ. ಬೆಳಕಿನ ಮಾಲಿನ್ಯವೂ ಹೆಚ್ಚುತ್ತಿದೆ. ಕತ್ತಲಲ್ಲಿ ಮಿನುಗುತ್ತಿದ್ದ ನಕ್ಷತ್ರಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ಪ್ರಳಯ ಬರುವ ಮುನ್ನ ಆಕಾಶದ ತಾರೆಗಳು ಒಂದೊಂದಾಗಿ ಕಣ್ಮರೆ ಆಗುತ್ತವೆಂಬ ಟಿಬೆಟನ್ ಜಾನಪದ ಕತೆ ನಮ್ಮೂರಲ್ಲಿ ನಿಜವಾಗುತ್ತಿದೆ.

ಒಂದು ಕಡೆ ನೀವು ನಿಮ್ಮ ಪರಿಚಯದ ಬಗ್ಗೆ ಬರೆದುಕೊಳ್ಳುತ್ತಾ, ಮೈತ್ರಿ ಫಾರ್ಮ್ನಲ್ಲಿ ಕೋಳಿ, ನಾಯಿ, ಇಲಿ, ಕಪ್ಪೆಗಳು ಮತ್ತು ಹಾವುಗಳ ಜೊತೆ ವಾಸವಾಗಿದ್ದೀನಿ ಎಂದು ಬರೆದುಕೊಂಡಿದ್ದೀರಿ.

ನಿಮ್ಮ ತೋಟದಲ್ಲಿರುವ ಹಾವುಗಳ ಬಗ್ಗೆ ತಿಳಿಸಿ.

ಹಾವುಗಳಿಗೇನು ತಮ್ಮ ಪಾಡಿಗೆ ತಾವಿರುತ್ತವೆ. ಅವುಗಳ ವಾಸಸ್ಥಾನವನ್ನು ನಾವು ಆಕ್ರಮಿಸಿಕೊಂಡಿದ್ದೇವೆ. ಅದು ತಮ್ಮ ಜಾಗವಾಗಿತ್ತೆಂದು ವಾದಿಸಲೆಂಬಂತೆ ಆಗಾಗ ಅವು ನಮ್ಮ ಹಿತ್ತಿಲಿಗೆ ಭೇಟಿ ಕೊಡುತ್ತಿರುತ್ತವೆ. ಕರಿನಾಗರ, ಗೋಧಿ ನಾಗರ, ಮಿಡಿನಾಗರಗಳೆಂದು ನಾವು ಮೂರು ಹೆಸರುಗಳಲ್ಲಿ ಅವುಗಳನ್ನು ಗುರುತಿಸುತ್ತೇವೆ. ಜೊತೆಗೆ ಕೇರೆ ಹಾವು, ಮರಕಣಿ ಹಾವು ಆಗಾಗ ಕಾಣಿಸಿಕೊಳ್ಳುತ್ತವೆ. ಎರೆಹುಳು ಸಾಕಣೆ ಮಾಡುವ ನಮ್ಮಲ್ಲಿ ಬೇಡಬೇಡವೆಂದರೂ ಇಲಿ-ಹೆಗ್ಗಣಗಳ ಸಂಖ್ಯೆ ಜಾಸ್ತಿಯೇ ಇವೆ. ಅವು ಇದ್ದಲ್ಲಿ ಹಾವುಗಳಿರುತ್ತವೆ. ಹಾವಿದ್ದಲ್ಲಿ ಮುಂಗುಸಿ ಇರುತ್ತವೆ; ಗೂಬೆಗಳಿರುತ್ತವೆ. ಮನೆಯಲ್ಲಿ ನಾವಿಬ್ಬರೇ ಇದ್ದೇವಾದರೂ ಸುತ್ತೆಲ್ಲ ನಮ್ಮ ಸಂಸಾರ ತುಸು ದೊಡ್ಡದೆಂದೇ ಹೇಳಬೇಕು.

ಕೊನೆಯ ಪ್ರಶ್ನೆ. ನೀವು ಒಬ್ಬ ಪರಿಸರ ಚಿಂತಕರಾಗಿ, ತಜ್ಞರಾಗಿ ಹಲವಾರು ದೇಶಗಳನ್ನು ಸುತ್ತಿದ್ದೀರಿ. ಜಾಗತಿಕ ಮಟ್ಟದ ಎಲ್ಲಾ ಸಮಾವೇಶಗಳಿಗೆ ಮತ್ತು ಚರ್ಚೆಗಳಿಗೆ ಸಾಕ್ಷಿಯಾಗಿದ್ದೀರಿ. ಜೊತೆಗೆ “ಗಗನ ಸಖಿಯ ಸೆರಗು ಹಿಡಿದು” ಎಂಬ ಅದ್ಭುತ ಕೃತಿಯೊಂದನ್ನು ಕನ್ನಡಿಗರಿಗೆ ನೀಡಿದ್ದೀರಿ.

ಕಾಕತಾಳಿಯವೆಂದರೆ, ನೀವು ವಿವಾಹವಾಗಿರುವುದು ಒಬ್ಬ ಗಗನ ಸಖಿಯನ್ನು. ನಿಮಗೆ ಇವರ ಪರಿಚಯ ಹೇಗಾಯಿತು? ನೀವು ಗಗನ ಸಖಿಯ ಸೆರಗು ಹಿಡಿದಿರೊ? ಅಥವಾ ರೇಖಾ ಮೇಡಂ ನಿಮ್ಮ ಕೈಗಳನ್ನು ಹಿಡಿದಿರೊ? ಈ ಬಗ್ಗೆ ನನಗೆ ಕುತೂಹಲವಿದೆ.

ಯಾರು ಯಾರ ಕೈಯನ್ನು ಹಿಡಿದರೆಂಬುದಕ್ಕೆ ಈಗಲೂ ನಮ್ಮಿಬ್ಬರಲ್ಲಿ ಜಗಳವಿದೆ. ನಾನು ಜೆಎನ್ಯುದಲ್ಲಿದ್ದಾಗ ಒಮ್ಮೆ ಏನಾಯ್ತೆಂದರೆ, ಪಕ್ಕದ ಐಐಟಿಯಲ್ಲಿ ನಡೆದ ಇಂಟರ್ ಯುನಿವರ್ಸಿಟಿ ಚಿತ್ರಕಲಾ ಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಬಂದಿತ್ತು. ಅದು ಜೆಎನ್ಯುಗೆ ಬಂದ ಮೊದಲ ಬಹುಮಾನವಾಗಿದ್ದರಿಂದ ಆಗ ವೈಸ್ ಚಾನ್ಸಲರ್ ಆಗಿದ್ದ (ನಂತರ ರಾಷ್ಟ್ರಪತಿಯಾದ) ಕೆ.ಆರ್. ನಾರಾಯಣನ್ ನನ್ನನ್ನು ಕರೆಸಿ, ಚಹ ಬಿಸ್ಕಿಟ್ ತರಿಸಿ, ಅಭಿನಂದನೆ ಹೇಳುತ್ತ ಒಂದು ಸಲಹೆ ನೀಡಿದರು: ರಾಜಕೀಯದ ಬಗ್ಗಡವಾಗಿರುವ ಕ್ಯಾಂಪಸ್ನಲ್ಲಿ ಒಂದಿಷ್ಟು ಸಾಂಸ್ಕøತಿಕ-ಕ್ರೀಡಾ ಚಟುವಟಿಕೆ ಆರಂಭಿಸಬೇಕು ಎಂದು. ‘ಹಣಕ್ಕೆ ಏನೂ ಕೊರತೆ ಇಲ್ಲ’ ಎಂತಲೂ ಹೇಳಿದರು. ಕೇಳಬೇಕೆ, ನಾನು ಪಿಎಚ್ಡಿ ಅಧ್ಯಯನವನ್ನು ಬದಿಗೊತ್ತಿ ಫೊಟೊಗ್ರಫಿ, ಬ್ಯಾಡ್ಮಿಂಟನ್, ಸ್ಕೇಟಿಂಗ್, ಚಿತ್ರಕಲೆ ಮುಂತಾದ ಕ್ಲಬ್ಗಳ ಸಂಚಾಲಕನಾದೆ. ಖುದ್ದಾಗಿ ಮೊದಲ ಬಾರಿಗೆ ಫೊಟೊಗ್ರಫಿ ಡಾರ್ಕ್ರೂಮ್ ಸೆಟಪ್ ಮಾಡಿ, ನಾನೇ ಸ್ಕೇಟಿಂಗ್ ಕಲಿತು ಇತರರಿಗೂ ಪಾಠ ಹೇಳಲು ಹೊರಟೆ. ನಾವೇ ಆರಂಭಿಸಿದ ‘ಫ್ರೀ ಥಿಂಕರ್ಸ್’ ತಂಡದಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆಂದು ಹೇಳಿದ್ದೆನಲ್ಲ? ಹೊಸದರಲ್ಲಿ, ಎಷ್ಟೋ ಹುಡುಗಿಯರ ಕೈ ಹಿಡಿದು ಸ್ಕೇಟಿಂಗ್ ಕಲಿಸಬೇಕಾಗಿತ್ತು. ಕೆಲವು ಹುಡುಗಿಯರು ಬೇಗನೇ ಕಲಿತು ತಮ್ಮ ದಾರಿ ತಾವೇ ನೋಡಿಕೊಳ್ಳುವಂತಾದರು. ಒಬ್ಬಳು ಮಾತ್ರ ಆಗ ಕೈ ಹಿಡಿದವಳು ಇನ್ನೂ ಬಿಟ್ಟೇ ಇಲ್ಲ!