ಮೋದಿಯವರು ಅಮೆರಿಕದ ಸಂಸತ್ತಿನಲ್ಲಿ ಮಾಡಿದ ಭಾಷಣಕ್ಕೆ ಸಿಕ್ಕ ಚಪ್ಪಾಳೆ ಸುರಿಮಳೆಯನ್ನು ನಾವೆಲ್ಲ ನೋಡಿದೆವು, ಕೇಳಿದೆವು, ಓದಿದೆವು. ಅದಕ್ಕಿಂತ ತುಸು ಮುಂಚೆ ಅವರು ಶ್ವೇತಭವನದಲ್ಲೂ ಚಪ್ಪಾಳೆ ಗಿಟ್ಟಿಸಿದರು.ಅಮೆರಿಕದ ಆರು ಅಣುಸ್ಥಾವರಗಳನ್ನು ಭಾರತದಲ್ಲಿ ಹೂಡುವ ಒಪ್ಪಂದಕ್ಕೆ ಮೋದಿ ಹಾಗೂ ಒಬಾಮ ಸಹಿ ಹಾಕಿದ ಸಂದರ್ಭ ಅದಾಗಿತ್ತು. ಅದಕ್ಕಿಂತ ಒಂದು ದಿನ ಮುಂಚೆ, 6.6.16ರಂದು ಅಮೆರಿಕದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಅಣುವಿದ್ಯುತ್ ಉತ್ಪಾದಿಸುತ್ತಿರುವ ‘ಎಕ್ಸೆಲಾನ್’ ಕಂಪನಿ ತನ್ನ ಸ್ಥಾವರಗಳನ್ನು ಮುಚ್ಚುವುದಾಗಿ ಘೋಷಣೆ ಮಾಡಿತು.ನಮ್ಮಲ್ಲಂತೂ ಅದು ಸುದ್ದಿಯಾಗಲಿಲ್ಲ. ಅಮೆರಿಕದಲ್ಲೂ ಅದು ದೊಡ್ಡ ಸುದ್ದಿಯಾಗಲಿಲ್ಲ. ಸಂತಸದ ಸುದ್ದಿಗೆ ಸಾವಿರ ಚಪ್ಪಾಳೆ, ವಿಷಾದದ ವಾರ್ತೆಗೆ ಒಂಟಿ ಕೈ ಚಪ್ಪಾಳೆ. ಹಾಗೆಂದು ಅಲ್ಲೇನು ಪರಮಾಣು ದುರ್ಘಟನೆ ನಡೆಯಿತೆ, ಇಲ್ಲ. ಬದಲಿಗೆ, ಆ ಕಂಪನಿಯ 15 ಸ್ಥಾವರಗಳು ಅತ್ಯಂತ ದಕ್ಷ ರೀತಿಯಲ್ಲಿ ಕೆಲಸ ಮಾಡುತ್ತಿದ್ದವು. ದಾಖಲೆ ಮೀರಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದವು.

ಆದರೂ ಖರ್ಚನ್ನು ಸರಿತೂಗಿಸಲಾಗದೆ ಎಕ್ಸೆಲಾನ್ ದಿವಾಳಿಯ ಅಂಚಿಗೆ ಬಂದಿತ್ತು.  ಗ್ರಿಡ್‌ಗೆ ವಿದ್ಯುತ್ ಪೂರೈಕೆ ಮಾಡುತ್ತ ಹೋದಂತೆಲ್ಲ ಅದರ ನಷ್ಟದ ಹೊರೆ ದೊಡ್ಡದಾಗುತ್ತ ಹೋಗುತ್ತಿತ್ತು. ಸರ್ಕಾರ (ತೆರಿಗೆ ಹಣದ ಮೂಲಕ) ತನಗೆ ನಷ್ಟಭರ್ತಿ ಮಾಡಿದರೆ ಮಾತ್ರ ತಾನು ಕೆಲಸ ಮಾಡುತ್ತೇನೆ,ಇಲ್ಲಾಂದರೆ ಇಲ್ಲ ಎಂದು ಕಂಪನಿ ಕರಾರು ಹಾಕಿ ಕೂತಿತ್ತು. ಆದರೆ ಪರಮಾಣು ಕಂಪನಿಗೆ ಸಬ್ಸಿಡಿ ನೀಡುವ ವಿಷಯವನ್ನು ಇಲ್ಲಿನಾಯ್ ಪ್ರಾಂತದ ಶಾಸನಸಭೆ ಚರ್ಚಿಸಲೇ ಇಲ್ಲ. ವಿದ್ಯುತ್ ಉತ್ಪಾದನೆ ಸ್ಥಗಿತವಾದರೆ ಆಗಲಿ ಎಂಬ ಧೋರಣೆಯನ್ನು ಪ್ರದರ್ಶಿಸಿತು.

ಒಂದರ್ಥದಲ್ಲಿ ಅದು ಸೂರ್ಯಶಕ್ತಿಯ ಗೆಲುವು, ಪರಮಾಣು ಶಕ್ತಿಯ ಸೋಲು ಎಂತಲೂ ಹೇಳಬಹುದು. ಹೊಸ ಹೊಸ ತಂತ್ರಜ್ಞಾನದ ಮೂಲಕ ಬಿಸಿಲು, ಗಾಳಿ, ಸಮುದ್ರದ ಅಲೆ, ಜೈವಿಕ ಇಂಧನವೇ ಮುಂತಾದ ಚಿರಂತನ ಮೂಲಗಳಿಂದ ವಿದ್ಯುತ್ ಶಕ್ತಿಯನ್ನು ಹೊಮ್ಮಿಸುವ ಪೈಪೋಟಿ ಎಲ್ಲೆಡೆ ನಡೆಯುತ್ತಿದೆ.ಸೌರ ವಿದ್ಯುತ್ತಿನ ದಕ್ಷತೆ ಹೆಚ್ಚುತ್ತಿದೆ, ವೆಚ್ಚ ದಿನದಿನಕ್ಕೆ ಕಡಿಮೆ ಆಗುತ್ತಿದೆ. ಎಷ್ಟರಮಟ್ಟಿಗೆ ಎಂದರೆ, ಚಿಲಿ ದೇಶದ ಕೆಲವು ಭಾಗಗಳಲ್ಲಿ ಸೌರವಿದ್ಯುತ್ತನ್ನು ಉಚಿತವಾಗಿ ಗ್ರಿಡ್ ಮೂಲಕ ಒದಗಿಸಲಾಗುತ್ತಿದೆ.ಈ ವರ್ಷ ಒಟ್ಟೂ 113 ದಿನಗಳ ಕಾಲ ಚಿಲಿಯ ನಾಗರಿಕರು ಪುಕ್ಕಟೆ ವಿದ್ಯುತ್ ಪಡೆದರು. ಸೌರ ಫಲಕಗಳ ನಿರ್ಮಾಣದಲ್ಲಿ ಹೊಸ ಹೊಸ ಕ್ರಾಂತಿಕಾರಿ ಸಂಶೋಧನೆಗಳು ನಡೆಯುತ್ತಿವೆ. ಪೆರೊಸ್ಕೈಟ್ ಹೆಸರಿನ ಹೊಸ ದ್ರವ್ಯದಿಂದ ಪಾರದರ್ಶಕ ಸೌರಬಿಲ್ಲೆಗಳನ್ನು ತಯಾರಿಸಿದರೆ ವಿದ್ಯುತ್ ಉತ್ಪಾದನೆಯ ದಕ್ಷತೆ ಶೇಕಡಾ 70ರಷ್ಟು ಹೆಚ್ಚಲಿದೆ ಎಂಬುದು ಗೊತ್ತಾಗಿದೆ.

ಇನ್ನೇನು, ಅದನ್ನು ಪ್ಲಾಸ್ಟಿಕ್ ಹಾಳೆಯಂತೆ ಸುರುಳಿ ಸುತ್ತಿ ಬೇಕೆಂದಲ್ಲಿಗೆ ಸಾಗಿಸಬಹುದು; ಕಿಟಕಿಗಳಿಗೆ ಅಂಟಿಸಬಹುದು, ರೇನ್ ಕೋಟ್‌ನಂತೆ ಧರಿಸಿ ಸೈಕಲ್ ಓಡಿಸಬಹುದು- ಪೆಡಲ್ ತುಳಿಯದೆಯೇ.‘ಈ ವಿದ್ಯುತ್ತಿಗೆ ಮೀಟರ್ ಹಾಕುವ ಅಗತ್ಯವೇ ಇಲ್ಲ’ (ಟೂ ಚೀಪ್ ಟು ಮೀಟರ್) ಎಂಬ ಅಗ್ಗಳಿಕೆಯನ್ನು 1960ರ ದಶಕದಲ್ಲಿ ಅಣುವಿದ್ಯುತ್ತಿಗೆ ಹೊದೆಸಲಾಗಿತ್ತು.ಹಿರೊಶಿಮಾ ನಾಗಾಸಾಕಿ ಧ್ವಂಸದ ನಂತರ ಎಲ್ಲರೂ ಅಣುಶಕ್ತಿಗೆ ಛೀ ಥೂ ಎನ್ನುತ್ತಿದ್ದಾಗ, ಬಾಂಬ್ ತಯಾರಿಕೆಯ ಜ್ಞಾನವನ್ನು ಜನೋಪಕಾರಿ ತಂತ್ರಜ್ಞಾನವನ್ನಾಗಿ ಮಾರ್ಪಡಿಸಲು ಸಿದ್ಧತೆಗಳು ನಡೆದವು. ಅಮೆರಿಕದ ಅಣುಶಕ್ತಿ ಆಯೋಗದ ಮುಖ್ಯಸ್ಥನಾಗಿದ್ದ ಲೀವಿಸ್ ಸ್ಟ್ರಾಸ್ ಎಂಬಾತ ಅಣುವಿದ್ಯುತ್ತನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸುವ ಭರದಲ್ಲಿ ಉಚಿತವಾಗಿ ಅದನ್ನು ಮನೆಮನೆಗೆ ವಿತರಿಸುವ ದಿನಗಳು ಬರಲಿವೆ ಎಂದು ಹೇಳಿದ್ದ.‘ಖರ್ಚಿಲ್ಲದ, ಪರಿಶುದ್ಧವಾದ, ಸುರಕ್ಷಿತ, ವಿಶ್ವಾಸಾರ್ಹ, ಭರಪೂರ ಶಕ್ತಿಮೂಲವನ್ನು ಅಣುವಿನಿಂದ ಹೊಮ್ಮಿಸಿ ತಲೆತಲಾಂತರ ಬಳಸುತ್ತ ಹೋಗಬಹುದು’ ಎಂದೆಲ್ಲ ಹೊಗಳಿದ್ದ.

ಮುಂದೆ ದೇಶದಿಂದ ದೇಶಕ್ಕೆ, ಖಂಡದಿಂದ ಖಂಡಕ್ಕೆ ಪರಮಾಣು ತಂತ್ರಜ್ಞಾನ ವಿಸ್ತರಿಸುತ್ತ ಹೋದಂತೆಲ್ಲ ಆತನ ಹೊಗಳಿಕೆಯ ಮಾತುಗಳೂ ಅದರೊಟ್ಟಿಗೆ ಸಾಗುತ್ತ ನಮ್ಮ ಭಾರತದ ಪರಮಾಣು ವಿಜ್ಞಾನಿಗಳೂ ‘ಟೂ ಚೀಪ್ ಟು ಮೀಟರ್’ ಎಂಬ ಮಾತನ್ನು ಸಂಸತ್ತಿನ ಮಂದಿಯ ಕಿವಿಯಲ್ಲಿ ಊದಿದರು. ವಾಸ್ತವದಲ್ಲಿ ಆ ಅಗ್ಗಳಿಕೆಯ ಒಂದೊಂದು ಪದವೂ ಸುಳ್ಳೆಂಬುದು ಸಾಬೀತಾಗುತ್ತ ಹೋಯಿತು. ಪರಮಾಣು ಶಕ್ತಿ ಎಂದರೆ ದುಬಾರಿ, ಅಪಾಯಕಾರಿ, ಮುಂದಿನ ತಲೆಮಾರಿಗೆ ಮಾರಿ ಎಂಬುದು ಗೊತ್ತಾಗುತ್ತ ಹೋದರೂ ಅದಕ್ಕಾಗಿ ಭಾರೀ ಹಣ ಹೂಡಿದ್ದನ್ನು ಸಮರ್ಥಿಸಿಕೊಳ್ಳಬೇಕಲ್ಲ? ಗಾಣಕ್ಕೆ ಕೈಕೊಟ್ಟಂತೆ ಈ  ನ್ಯೂಕ್ಲಿಯರ್ ತಂತ್ರಜ್ಞಾನಕ್ಕೆಂದು ಇನ್ನಷ್ಟು ಹಣ ಸುರಿಯಬೇಕಾದ ಅನಿವಾರ್ಯತೆ ದೇಶದ ಧುರೀಣರಿಗೆ ಎದುರಾಗುತ್ತ ಹೋಯಿತು. ಇಂದು ಪರಮಾಣು ತಂತ್ರಜ್ಞಾನವೆಂದರೆ ತಾನೇ ಸೃಷ್ಟಿಸಿಕೊಂಡ ಕೆಸರುಗುಂಡಿಯಿಂದ ಮೇಲಕ್ಕೇಳಲು ಯತ್ನಿಸಿ ಇನ್ನಷ್ಟು ಆಳಕ್ಕೆ ಕುಸಿಯುತ್ತ ನೆರವಿಗೆ ಕೂಗುವ ದೈತ್ಯಗಾತ್ರದ ಬಿಳಿಯಾನೆಯ ಚಿತ್ರಣವೇ ಕಾಣುತ್ತದೆ.

ತಾನು ಅಪಾಯಕಾರಿ ಅಲ್ಲವೆಂದೂ, ಅಷ್ಟೇನೂ ಕೊಳಕಲ್ಲವೆಂದೂ, ಈ ಭೂಮಿಯನ್ನು ಬಿಸಿಪ್ರಳಯದಿಂದ ಪಾರು ಮಾಡಬಲ್ಲೆನೆಂದೂ ಹೇಳುತ್ತ ಅದು ಸರ್ಕಾರಿ ಸಹಾಯವನ್ನು ಬೇಡುತ್ತಲೇ ಇದೆ. ಅಮೆರಿಕದಲ್ಲಿ ನೇರ ಸಬ್ಸಿಡಿ ಮೂಲಕ ಅದನ್ನು ಮೇಲೆತ್ತಲು ಅವಕಾಶವಿಲ್ಲದ ಕಾರಣ ಕಳೆದ ಇಪ್ಪತ್ತು ವರ್ಷಗಳಿಂದ ಅಧ್ಯಕ್ಷ ಪದವಿಗೆ ಏರಿದ ಎಲ್ಲರೂ ಅದಕ್ಕೆ ಪರೋಕ್ಷ ನೆರವಿನ ಹಸ್ತ ಚಾಚುತ್ತಲೇ ಇದ್ದಾರೆ.

ಸರ್ಕಾರಿ ಸಾಲ ಕೊಡುವುದು, ಸರ್ಕಾರಿ  ವೆಚ್ಚದಲ್ಲೇ ತಂತ್ರಜ್ಞಾನ ಸುಧಾರಣೆಯ ಸಂಶೋಧನೆ ನಡೆಸುವುದು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಭಾರತದಂಥ ದೇಶಗಳಲ್ಲಿ ಬೇರುಗಳನ್ನು ಚಾಚಲು ರಾಜತಾಂತ್ರಿಕ ಅವಕಾಶಗಳನ್ನು ಸೃಷ್ಟಿ ಮಾಡುವುದು. ಕಳೆದ ವಾರ ನಮ್ಮ ಪ್ರಧಾನಿಯವರು ಅಮೆರಿಕದ ವೆಸ್ಟಿಂಗ್‌ಹೌಸ್ ಕಂಪನಿಯ ಆರು ಪರಮಾಣು ಸ್ಥಾವರಗಳನ್ನು ಬುಟ್ಟಿಗೆ ಹಾಕಿಕೊಂಡು ಬಂದಿದ್ದನ್ನು ಈ ದೃಷ್ಟಿಯಿಂದ ನೋಡಬೇಕು. ಈ ಆರು ಸ್ಥಾವರಗಳನ್ನು ಹೂಡಲು ಬೇಕಾದ ಹಣವನ್ನು ನಮಗೆ ಸುಲಭ ಸಾಲದ ರೂಪದಲ್ಲಿ ಎಕ್ಸಿಮ್ ಬ್ಯಾಂಕ್ ಮೂಲಕ ವ್ಯವಸ್ಥೆ ಮಾಡುವುದಾಗಿ ಒಬಾಮ ಹೇಳಿದರಲ್ಲ? ಅದರ ಅರ್ಥ ಏನೆಂದರೆ, ‘ಪ್ರಧಾನಿ ಮೋದಿಯವರ ಈ ಅಮೆರಿಕದ ಭೇಟಿಯ ವೆಚ್ಚ 2.8 ಲಕ್ಷ ಕೋಟಿ’ ಎಂದು ‘ದಿ ಸಿಟಿಝನ್’ ಹೆಸರಿನ ಆನ್‌ಲೈನ್ ಪತ್ರಿಕೆಯಲ್ಲಿ ಅಣುವಿಶ್ಲೇಷಕ ಪ್ರಬೀರ್ ಪುರ್ಕಾಯಸ್ಥ ಬರೆದಿದ್ದಾರೆ.

ಭಾರತ ಮತ್ತು ಅಮೆರಿಕದ ನಡುವಣ ಎಂಟು ವರ್ಷಗಳ ಸತತ ರಾಜತಾಂತ್ರಿಕ ಕೊಸರಾಟದ ಫಲ ಏನೆಂದರೆ ‘ಸಾವಿನಂಚಿನಲ್ಲಿರುವ ತಂತ್ರಜ್ಞಾನವನ್ನು ಭಾರತಕ್ಕೆ ಎಳೆದು ತರಲು ರಹದಾರಿ ಸಿಕ್ಕಂತಾಯಿತು’ ಎಂದು ಅವರು ಹೇಳುತ್ತಾರೆ. ಅದೂ ಎಂಥ ರಹದಾರಿ? ವೆಸ್ಟಿಂಗ್‌ಹೌಸ್ ಕಂಪನಿ ಭಾರತಕ್ಕೆ ಈ ತಂತ್ರಜ್ಞಾನವನ್ನು ನೀಡಲು ಸಿದ್ಧತೆ ನಡೆಸುತ್ತೇನೆ ಎಂದಿದೆ ಅಷ್ಟೆ. ಸಿದ್ಧತೆ ಏನೂ ಇಲ್ಲ. ಗುಜರಾತಿನ ಮೀಠಿವಿರ್ಡಿ ಎಂಬಲ್ಲಿ ಅದರ ಆರೂ ಘಟಕಗಳಿಗೆ ಜಾಗವನ್ನು ನಿಷ್ಕರ್ಷೆ ಮಾಡಲಾಗಿತ್ತು. ಮೂರು ವರ್ಷಗಳ ಹಿಂದೆಯೇ ವೆಸ್ಟಿಂಗ್‌ಹೌಸ್ ಕಂಪನಿ ಈ ಸ್ಥಳದಲ್ಲಿ ಸುರಕ್ಷಾ ಸಮೀಕ್ಷೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿತ್ತು.

ಇನ್ನೇನು ‘ನಮೋ ವೇಗ’ದಲ್ಲಿ ಅಣುಸ್ಥಾವರ ಸ್ಥಾಪನೆಯ ಕೆಲಸ ಆರಂಭವಾಗಲಿದೆ ಎಂದು ಭಾರತದ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್‌ನ ಉಪಾಧ್ಯಕ್ಷ ಎಸ್. ಠಾಕೂರ್ ಹೇಳಿದ್ದರು. ಏನೂ ಆಗಲಿಲ್ಲ. ಮೀಠಿವಿರ್ಡಿಯ ಸುತ್ತಲಿನ ಗ್ರಾಮಸ್ಥರು ತಮ್ಮ ಫಲವತ್ತಾದ ಜಮೀನನ್ನು ಬಿಡುವುದಿಲ್ಲವೆಂದು ಪ್ರತಿಭಟನೆ ಮಾಡಿದರು. ಹಳೇ ಹಡಗುಗಳನ್ನು ಕಳಚಿ ಗುಜರಿಗೆ ಹಾಕುವ ಅಲಂಗ್ ಬಂದರು ಸಮೀಪದಲ್ಲೇ ಇರುವುದರಿಂದ ಈ ಸ್ಥಳ ಸುರಕ್ಷಿತವಲ್ಲ ಎಂಬ ಮಾತು ಕೇಳಬಂದವು (ಮುದಿ ಹಡಗುಗಳ ಅತಿದೊಡ್ಡ ಕಸಾಯಿಖಾನೆ ಎಂಬ ಜಾಗತಿಕ ಕುಖ್ಯಾತಿ ಈ ಅಲಂಗ್ ಬಂದರಿಗೆ ಬಂದಿದೆ.ಅಣುಸ್ಥಾವರಕ್ಕೆ ಇದರಿಂದ ಅಪಾಯವೊ, ಅಥವಾ ಅಣುಸ್ಥಾವರದಿಂದ ಇದಕ್ಕೆ ಅಪಾಯವೊ ಉತ್ತರ ನಿಗೂಢ). ವೆಸ್ಟಿಂಗ್‌ಹೌಸ್ ಕಂಪನಿಯ ಸ್ಥಾವರಗಳನ್ನು ಮೀಠಿವಿರ್ಡಿಯಲ್ಲಿ ಕಟ್ಟಿದರೆ ವಿದ್ಯುತ್ ಬಳಕೆದಾರರು ಪ್ರತಿ ಯೂನಿಟ್ಟಿಗೆ ₹11ರಿಂದ 22ರವರೆಗೆ ತೆರಬೇಕಾದೀತು ಎಂದು ಅಮೆರಿಕದ್ದೇ ಐಇಇಎಫ್‌ಎ ಸಂಸ್ಥೆ ವರದಿ ಕೊಟ್ಟಿತು.

ಅದೇನಾಯಿತೊ, ಇದ್ದಕ್ಕಿದ್ದಂತೆಯೇ ವೆಸ್ಟಿಂಗ್‌ಹೌಸ್ ಯೋಜನೆಯನ್ನು ಮೀಠಿವಿರ್ಡಿಯ ಬದಲು ಆಂಧ್ರ ಪ್ರದೇಶದ ಶ್ರೀಕಾಕುಳಂ ಬಳಿಯ ಕೊವ್ವಾಡ ಎಂಬಲ್ಲಿಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಕೊವ್ವಾಡದಲ್ಲಿ ಈ ಮೊದಲು ಅಮೆರಿಕದ ಜಿಇ ಕಂಪನಿಗೆ ಸ್ಥಳವನ್ನು ನಿಗದಿಪಡಿಸಲಾಗಿತ್ತು. ಆದರೆ ಜಿಇ ಇಲ್ಲಿಗೆ ಬರಲು ಒಪ್ಪಲಿಲ್ಲ. ಅದೇ ಜಾಗವನ್ನು ಈಗ ವೆಸ್ಟಿಂಗ್‌ಹೌಸ್‌ಗೆ ನೀಡಲು ನಿರ್ಧರಿಸಲಾಗಿದೆ.ತಮಾಷೆಯ ಸಂಗತಿ ಏನೆಂದರೆ, ಇಲ್ಲಿ ಪರಮಾಣು ಘಟಕದ ಸ್ಥಾಪನೆಯಾದರೆ ಬಳಕೆದಾರರಿಗೆ ವಿದ್ಯುತ್ ವೆಚ್ಚ ಪ್ರತಿ ಯೂನಿಟ್ಟಿಗೆ ₹ 19ರಿಂದ 33ರವರೆಗೂ ಏರೀತೆಂದು ಇದೇ ಐಇಇಎಫ್‌ಎ ಸಂಸ್ಥೆ ಹೇಳಿದೆ. ಯೂನಿಟ್ಟಿಗೆ ಐದಾರು ರೂಪಾಯಿಗಳಲ್ಲಿ ಬಿಸಿಲಿನಿಂದ ಅಥವಾ ಕಲ್ಲಿದ್ದಲಿನಿಂದ ವಿದ್ಯುತ್ ಪಡೆಯಲು ಸಾಧ್ಯವಿರುವಾಗ ದುಬಾರಿ ಅಣುವಿದ್ಯುತ್ತಿಗೆ ಗಿರಾಕಿ ಸಿಗಬೇಕಲ್ಲ. ಮೇಲಾಗಿ ಅಣುಸ್ಥಾವರ ಸ್ಫೋಟಗೊಂಡರೆ ಪರಿಹಾರವನ್ನು ಕಂಪನಿ ಕೊಡಬೇಕೆ, ಭಾರತ ಸರಕಾರ ಕೊಡಬೇಕೆ ಎಂಬುದು ಈಗಲೂ ಸ್ಪಷ್ಟವಿಲ್ಲ. ಸಹಜವಾಗಿ ವೆಸ್ಟಿಂಗ್‌ಹೌಸ್ ಕಂಪನಿ ‘ಬರೋಣ, ನೋಡೋಣ’ ಎಂದಿದೆ.

ತಂತ್ರಜ್ಞಾನದ ದೃಷ್ಟಿಯಿಂದಲೂ ವೆಸ್ಟಿಂಗ್‌ಹೌಸ್‌ನ ಹೊಸ ಎ-1000 ಮಾದರಿಯ ಘಟಕಗಳು ಎಷ್ಟು ಸುರಕ್ಷಿತ ಎಂಬುದು ಇನ್ನೂ ಗೊತ್ತಿಲ್ಲ. ಏಕೆಂದರೆ ಅದರ ನಿರ್ಮಾಣ ಕೆಲಸ ತೀರಾ ಕ್ಲಿಷ್ಟ ಹಾಗೂ ತೀರಾ ದುಬಾರಿಯದಾಗಿದ್ದು ಅಮೆರಿಕ ಮತ್ತು ಚೀನಾ ದೇಶಗಳಲ್ಲಿ ಅದರ ಐದು ಘಟಕಗಳನ್ನು ಕಟ್ಟುವ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. ಎಲ್ಲೂ ಪೂರ್ಣವಾಗಿಲ್ಲ.ಇನ್ನು ಮಹಾರಾಷ್ಟ್ರದ ಜೈತಾಪುರ ಎಂಬಲ್ಲಿ ಫ್ರಾನ್ಸಿನ ಅರೇವಾ ಕಂಪನಿಯ ಹೊಸ ಅಣುಸ್ಥಾವರ ನಿರ್ಮಾಣವೂ ಆಮೆವೇಗದಲ್ಲೇ ನಡೆಯುತ್ತಿದೆ. ಅದರ ಕಾಲುಭಾಗದಷ್ಟು ವೆಚ್ಚದಲ್ಲಿ, ಮೂರು ಪಟ್ಟು ಹೆಚ್ಚು ವಿದ್ಯುತ್ತನ್ನು ಸೌರಫಲಕಗಳಿಂದ ಸುರಕ್ಷಿತವಾಗಿ ಪಡೆಯಬಹುದಿತ್ತು. ಐದು ಪಟ್ಟು ಹೆಚ್ಚು ಜನರಿಗೆ ಉದ್ಯೋಗ ನೀಡಬಹುದಿತ್ತು. ಸೌರವಿದ್ಯುತ್ ಘಟಕಗಳಲ್ಲಿ ಚೆರ್ನೊಬಿಲ್ ಅಥವಾ ಫುಕುಶಿಮಾದಂಥ ದುರಂತ ಸಂಭವಿಸುವುದಿಲ್ಲ. ಅದರ ಮೇಲೆ ಬಾಂಬ್ ದಾಳಿಯ ಭಯವಿಲ್ಲ; ಅದನ್ನು ಕಳಚಿ ಹೂಳುವ ವೆಚ್ಚವನ್ನು ಮುಂದಿನ ಪೀಳಿಗೆಯ ತಲೆಯ ಮೇಲೆ ಹೊರಿಸಬೇಕಿಲ್ಲ.

ಆದರೂ ಯಾಕೆ, ಯಾರಿಗೂ ಬೇಡವಾದ ಅಣುಶಕ್ತಿಯನ್ನು ಭಾರತ ತನ್ನ ಮೇಲೆ ಎಳೆದುಕೊಳ್ಳುತ್ತಿದೆ? ಅದಕ್ಕೆ ಬೇಕಾದ ಯುರೇನಿಯಂ ಇಂಧನ ನಮ್ಮಲ್ಲಿಲ್ಲ. ಅದಕ್ಕೆಂದು ಆಸ್ಟ್ರೇಲಿಯಾದಿಂದ ಹಿಡಿದು ಕಝಾಕ್‌ಸ್ತಾನದವರೆಗೆ ಅನೇಕರ ಮರ್ಜಿ ಹಿಡಿಯಬೇಕು. ಇಷ್ಟಕ್ಕೂ ಸಾವಿರ ಮೆಗಾವಾಟ್‌ನ ಆರಾರು ಘಟಕಗಳನ್ನು ಒಂದೇ ಕಡೆ ಹೂಡುವುದು ಅಪಾಯಕರ. ಬಾಂಬ್ ದಾಳಿಯ ಸಾಧ್ಯತೆ ಹೆಚ್ಚುತ್ತದೆ. ಒಂದು ಆಸ್ಫೋಟಿಸಿದರೆ ಸುಸ್ಥಿತಿಯಲ್ಲಿರುವ ಇನ್ನೆಲ್ಲವನ್ನೂ ಒಟ್ಟಿಗೆ ಮುಚ್ಚಬೇಕಾಗುತ್ತದೆ. ಇದಕ್ಕಿಂತ ಸಂದಿಗ್ಧದ ಪ್ರಶ್ನೆ ಏನೆಂದರೆ, ಅಮೆರಿಕದಲ್ಲೇ ಅಷ್ಟು ದುಬಾರಿಯಾಗಿರುವ ಈ ತಂತ್ರಜ್ಞಾನವನ್ನು ನಮ್ಮಲ್ಲಿ ಕಡಿಮೆ ಬೆಲೆಯಲ್ಲಿ ದುಡಿಸಿಕೊಳ್ಳಬೇಕೆಂದರೆ ಸುರಕ್ಷಾ ತಂತ್ರಗಳನ್ನು ಸಡಿಲಿಸಬೇಕು; ಮತ್ತು ಅಗ್ಗದ ಕೂಲಿಕಾರರನ್ನು ಅಣುಕುಲುಮೆಗೆ ಒಡ್ಡಬೇಕು. ಎರಡೂ ನಮ್ಮ ದೇಶಕ್ಕೆ ಆತ್ಮಘಾತುಕ ಅಲ್ಲವೆ?

ಆದರೂ ಯಾಕೆ ವಾಜಪೇಯಿ, ಡಾ. ಮನಮೋಹನ್ ಸಿಂಗ್, ನರೇಂದ್ರ ಮೋದಿ ಹೀಗೆ ಅಧಿಕಾರದ ಚುಕ್ಕಾಣಿ ಹಿಡಿದವರೆಲ್ಲ ತಮ್ಮ ಇನ್ನೊಂದು ಕೈಯಲ್ಲಿ ಈ ಪರಮಾಣು ಕೊಳ್ಳಿಯನ್ನು ಹಿಡಿಯಬೇಕಾದ ಸ್ಥಿತಿ ಬರುತ್ತಿದೆ? ದೇಶವನ್ನು ಬಲಾಢ್ಯಗೊಳಿಸುವ ಹೆಸರಿನಲ್ಲಿ ಇನ್ನಷ್ಟು ದುರ್ಬಲಗೊಳಿಸುವಂತೆ ಯಾರು ನಮ್ಮನ್ನು ಅಣುಕುಣಿಕೆಯಲ್ಲಿ ಸಿಲುಕಿಸುತ್ತಿದ್ದಾರೆ? ಏನೊ, ಅವೆಲ್ಲ ರಾಜತಾಂತ್ರಿಕ ಪ್ರಶ್ನೆ ಆಗಿರುವುದರಿಂದ ಈ ಅಂಕಣದ ವ್ಯಾಪ್ತಿಗೆ ಬರುವುದಿಲ್ಲ ಅನ್ನಿ. ಜೈತಾಪುರ ಇರಲಿ, ಮೀಠಿವಿರ್ಡಿ ಇರಲಿ, ಕುವ್ವಾಡಾ ಇರಲಿ, ಅಣುಸ್ಥಾವರ ನಿರ್ಮಾಣ ನಿಧಾನವಾದಷ್ಟೂ ದೇಶಕ್ಕೆ ಒಳ್ಳೆಯದು. ಏಕೆಂದರೆ ಸೌರಶಕ್ತಿಯನ್ನು ಶೇಖರಿಸಿ ರಾತ್ರಿ ವೇಳೆಯಲ್ಲೂ ಕಾರು ಲಾರಿಗಳಲ್ಲೂ ಬಳಸಲು ಸಾಧ್ಯವಾಗುವಂತೆ ಹೊಸ ‘ಲೀಥಿಯಂ ಏರ್’ ಬ್ಯಾಟರಿ ಸಿದ್ಧವಾಗುತ್ತಿದೆ.

ಕೇಂಬ್ರಿಜ್ ವಿ.ವಿಯ ತಜ್ಞರು ರೂಪಿಸುತ್ತಿರುವ ಈ ಹೊಸ ಬಗೆಯ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ ನಿಮ್ಮ ಕಾರನ್ನು 650  ಕಿ.ಮೀ.ವರೆಗೂ ಓಡಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದು ಬಳಕೆಗೆ ಬರಲು ಏಳೆಂಟು-10 ವರ್ಷಗಳೇ ಬೇಕಾಗಬಹುದು.ಪರವಾಗಿಲ್ಲ, ಅಣುಸ್ಥಾವರಗಳಿಗಿಂತ ಮೊದಲು, ಅಂದರೆ ನಮೋವೇಗವನ್ನೂ ಮೀರಿಸಿ ಬರುತ್ತದೆ ತಾನೆ? ಅದು ಬಂತೆಂದರೆ ಅಣುಶಕ್ತಿಗಷ್ಟೇ ಅಲ್ಲ, ಕೊಳಕು ಪೆಟ್ರೋಲ್ ಡೀಸೆಲ್‌ಗೂ ವಿದಾಯ ಹೇಳಬಹುದು.