ನನ್ನ ಕಥನದೊಳಗೆ ನಾನು ಕಂಡಷ್ಟು…ದೇವನೂರ ಮಹಾದೇವ

 

                                                   ದೇವನೂರ ಮಹಾದೇವ – ಚಿತ್ರ: ಆನಂದ ಬಕ್ಷಿ

“ದಿಕ್ಕಿಲ್ಲದವನಂತೆ ಕತ್ತಲಲ್ಲಿ ನಡೆದಂತೆ ನಾನಿಟ್ಟ ಹೆಜ್ಜೆಗಳೇ ನನಗೆ ದಿಕ್ಕು ತೋರಿಸಿದವೇನೊ ಅನ್ನಿಸುತ್ತದೆ. ಮುಂದೆ ಹೆಚ್ಚೆಚ್ಚು ಮೌಖಿಕವೂ ಜಾನಪದೀಯವೂ ಆಗುತ್ತೇನೆ. ಹಾಗೆ ನನ್ನ ಭಾಷೆ ಹೆಚ್ಚು ಮೌಖಿಕವಾಯ್ತು ಎಂದರೆ ಅದು ಯಥಾವತ್ತಾಗಿ ಮೌಖಿಕವೂ ಅಲ್ಲ.

ಯಾವುದನ್ನು ಮೂಡಿಸಬೇಕಾಗಿದೆಯೊ ಆ ವಸ್ತು, ಆ ಜೀವ ಆಲಿಸಿ ಅದರ ನುಡಿತಕ್ಕೆ ಅಕ್ಷರ ಕೊಡುವ ಪ್ರಯತ್ನದಂತೆ ಭಾಷೆ ನನ್ನ ಕಥನಗಳಲ್ಲಿ ಉಂಟಾಗುತ್ತದೆ. ಹಾಗಾದರೆ ಇದು ಹೊಸ ಪ್ರಯೋಗವೇ?

ಪೊಲೀಸ್ ಲಾಕಪ್‌ನಲ್ಲಿ ನಾನು ಮೊದಲ ಕತೆ ಬರೆದೆ. ಸಾಧಾರಣವಾದ ಆ ಕತೆಯ ಹೆಸರು ‘ಕತ್ತಲ ತಿರುವು’ ಅಂತ. ನನ್ನ ಅಪ್ಪ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದರು.

ನಾನು ಪಿಯುಸಿಯಲ್ಲಿ ಇಂಗ್ಲಿಷ್ ಮತ್ತು ವಿಜ್ಞಾನದಲ್ಲಿ ಫೇಲಾಗಿದ್ದೆ. ನಾನು ಫೇಲಾಗಲು, ಕತೆ ಪುಸ್ತಕಗಳನ್ನು ಓದುವ ನನ್ನ ಹವ್ಯಾಸವೇ ಕಾರಣ ಎಂದು ಪಠ್ಯಪುಸ್ತಕಗಳ ಜತೆ ನನ್ನನ್ನು ಲಾಕಪ್‌ಗೆ ಕೂಡಿ ಹಾಕಿದರು. ಅಲ್ಲೆ ನನ್ನ ಮೊದಲ ಕತೆ ಹುಟ್ಟಿತು.

ಆಗ ನವ್ಯ ಸಾಹಿತ್ಯ ಉತ್ತುಂಗ ಸ್ಥಿತಿಯಲ್ಲಿ ಇತ್ತು. ವಿದ್ಯಾರ್ಥಿಯಾಗಿದ್ದ ನನ್ನ ಒಡನಾಟವೂ ಕೂಡ ಪ್ರಮುಖ ನವ್ಯ ಸಾಹಿತಿಗಳ ಜೊತೆಗೇ ಇತ್ತು. ಈ ಪ್ರಭಾವದಲ್ಲಿ ಸಿಲುಕಿ ಮೂರ್ನಾಲ್ಕು ಕತೆಗಳನ್ನೂ ಬರೆದೆ. ಅವು ಹುಟ್ಟಿದ ಕತೆ ಅನ್ನಿಸುತ್ತಿರಲಿಲ್ಲ.

ಕಟ್ಟಿದ ಕತೆ ಅನ್ನಿಸುತ್ತಿದ್ದವು. ಈ ಅತೃಪ್ತಿಯಲ್ಲಿ ವಿದ್ಯಾರ್ಥಿ ದೆಸೆಯಲ್ಲೆ ಮತ್ತೆ ಮೂರು ಕತೆಗಳನ್ನು ಬರೆದೆ. ಆ ಮೂರು ಒಂದೊಂದು ಥರ. ಒಂದು ವರದಿಗೆ ಹತ್ತಿರವಿರುವಂತೆ, ಮತ್ತೊಂದು ಕೇಂದ್ರವೂ ಇಲ್ಲದ ಕತೆ, ಹೀಗೆ. ಆದರೆ ಮೂರಕ್ಕೂ ಒಂದು ಸಾಮಾನ್ಯತೆ ಇತ್ತು. ಅವು ವ್ಯಕ್ತಿ ಕೇಂದ್ರಿತ ಕತೆಗಳಾಗದೆ ಬದಲಾಗಿ ಸಮುದಾಯದ ಕತೆಯಾಗಲು ಹವಣಿಸುತ್ತಿದ್ದವು.

ಈ ಕತೆಗಳ ಮೂಲಕ ನಾನಿಟ್ಟ ಹೆಜ್ಜೆಗಳು ವ್ಯಕ್ತಿ ಪ್ರಜ್ಞೆಯಿಂದ ಸಮುದಾಯ ಪ್ರಜ್ಞೆಗೆ ನನ್ನನ್ನು ಸ್ಥಳಾಂತರಿಸಿಬಿಟ್ಟವು. ಇರಲಿ, ತಮಾಷೆ ಎಂದರೆ ದಲಿತ ಸಾಹಿತ್ಯ ಪರಿಕಲ್ಪನೆ ಮರಾಠಿ ಸಾಹಿತ್ಯದ ಮೂಲಕ ಭಾರತದಲ್ಲಿ ಪ್ರಚಲಿತವಾಗುವ ಮುನ್ನವೇ ಮೇಲಿನ ಕತೆಗಳು ಪ್ರಕಟವಾಗಿದ್ದವು. ತದನಂತರ ಇವು ದಲಿತ ಕತೆಗಳು ಎಂದು ಹೆಸರು ಪಡೆದವು. ಅದನ್ನೂ ಮೀರಿ ಕನ್ನಡದ ಪ್ರಾತಿನಿಧಿಕ ಉತ್ತಮ ಕತೆಗಳ ಸಾಲಿಗೂ ಸೇರಿದವು.

ಈ ಕತೆಗಳಾಗಲಿ, ಆ ನಂತರ ಬರೆದ ‘ಒಡಲಾಳ’, ‘ಕುಸುಮಬಾಲೆ’ಗಳಾಗಲಿ ಕನ್ನಡ ಸಾಹಿತ್ಯದಲ್ಲಿ ಯದ್ವಾತದ್ವಾ ಪ್ರಯೋಗಗಳು ಎಂದು ಸ್ವೀಕರಿಸಲ್ಪಟ್ಟಿವೆ. ಆದರೆ ಅವನ್ನು ನಾನು ಬರೆಯುವ ಗಳಿಗೆಗಳಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರಯೋಗ ಎಂದು ಪ್ರಯತ್ನಪಟ್ಟೆನೆ? ನಾನು ಆ ಗಳಿಗೆಗಳಿಗೆ ಹಿಂದಕ್ಕೆ ಹೋಗಿ ಹುಡುಕಿದರೂ ಆ ಪ್ರಯೋಗ ಎಂಬುದು ನನಗೆ ಕಾಣಲಿಲ್ಲ.

ಲ್ಯಾಟ್‌ವೀಯನ್ ಲೇಖಕಿ ಇಂಗಾ ಅಬ್ಲೆ ಅವರ– ‘ವ್ಯಕ್ತಿಯೊಬ್ಬ ತನ್ನ ಭಾಷೆಯಲ್ಲಿ ನೀರಲ್ಲಿರುವ ಮೀನಿನಂತೆ ಇರುತ್ತಾನೆ/ಳೆ. ಹಾಗಾಗೇ ಲೇಖಕರಿಗೆ ತಮ್ಮ ಕಲಾಕೃತಿ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ’ ಎಂಬ ಮಾತು ನಿಜವಿರಬೇಕು. ಅದನ್ನು ನಾನೀಗ ಅನುಭವಿಸುತ್ತಿದ್ದೇನೆ.

ಇರಲಿ, ದಿಕ್ಕಿಲ್ಲದವನಂತೆ ಕತ್ತಲಲ್ಲಿ ನಡೆದಂತೆ ನಾನಿಟ್ಟ ಹೆಜ್ಜೆಗಳೇ ನನಗೆ ದಿಕ್ಕು ತೋರಿಸಿದವೇನೊ ಅನ್ನಿಸುತ್ತದೆ. ಮುಂದೆ ಹೆಚ್ಚೆಚ್ಚು ಮೌಖಿಕವೂ ಜಾನಪದೀಯವೂ ಆಗುತ್ತೇನೆ. ಹಾಗೆ ನನ್ನ ಭಾಷೆ ಹೆಚ್ಚು ಮೌಖಿಕವಾಯ್ತು ಎಂದರೆ ಅದು ಯಥಾವತ್ತಾಗಿ ಮೌಖಿಕವೂ ಅಲ್ಲ. ಯಾವುದನ್ನು ಮೂಡಿಸಬೇಕಾಗಿದೆಯೊ ಆ ವಸ್ತು, ಆ ಜೀವ ಆಲಿಸಿ ಅದರ ನುಡಿತಕ್ಕೆ ಅಕ್ಷರ ಕೊಡುವ ಪ್ರಯತ್ನದಂತೆ ಭಾಷೆ ನನ್ನ ಕಥನಗಳಲ್ಲಿ ಉಂಟಾಗುತ್ತದೆ.

ಹಾಗಾದರೆ ಇದು ಹೊಸ ಪ್ರಯೋಗವೇ? 9ನೇ ಶತಮಾನದಲ್ಲೆ ಕನ್ನಡದ ಆದಿಕವಿ ಪಂಪನು ತನ್ನ ಕಾವ್ಯದ ಭಾಷೆ ಪುಲಿಗೆರೆಯ ತಿರುಳುಗನ್ನಡ ಅನ್ನುತ್ತಾನೆ. ಪುಲಿಗೆರೆ ಪ್ರದೇಶದ ಕನ್ನಡವನ್ನು ಕಚ್ಚಾವಸ್ತು ಎಂಬಂತೆ ಪರಿಗಣಿಸಿದ ಪಂಪ, ಆ ಭಾಷೆಯ ತಿರುಳು, ಬನಿ ತೆಗೆದು ತನ್ನ ಕಾವ್ಯದ ಭಾಷೆ ಮಾಡಿಕೊಳ್ಳುತ್ತಾನೆ.

ಹಾಗೆಯೇ ನನ್ನ ಕಥನದ ಭಾಷೆಯೂ ನಂಜನಗೂಡು ಸುತ್ತಲಿನ ಉಪಭಾಷೆಯ ತಿರುಳಿನಿಂದ ಅಂದರೆ ನನ್ನ ಪ್ರದೇಶದ ಕೆರೆಯ ಮಣ್ಣಿನಲ್ಲಿ ಕಡೆದ ವಿಗ್ರಹದಂತೆ ಇಲ್ಲಿ ಭಾಷೆ ಮೈತಳೆದಂತಾಯಿತೇ? ಹೀಗೆ ಒಡಮೂಡುವಿಕೆಯಲ್ಲಿ ಭಾಷೆಯೂ ಕಥನದ ಚರ್ಮದಂತಾಗಿಬಿಡುತ್ತದೆ.

ಹಾಗಾಗಿ ಇಲ್ಲಿ ಭಾಷೆಯೂ ಪಂಚೇದ್ರಿಯಗಳನ್ನು ಪಡೆದುಕೊಂಡು ಕನಸು, ವಾಸ್ತವ, ಪುರಾಣ, ಆಲೋಚನೆ, ಪ್ರಜ್ಞೆ ಅದು ಯಾವುದು ಇದು ಯಾವುದು ಎಂದು ತಿಳಿಯದಂತೆ ಅನುಭವವಾಗಿ ಕಲೆಸಿಕೊಳ್ಳುತ್ತದೆ.

ಇಂದಿನ ಆಧುನಿಕ ಲೋಕವು ಭಾಷೆಯನ್ನು ಉಡುಪಿನಂತೆ ಬಳಸುತ್ತ ವಿಚಾರ, ಅನುಭವ ಅಭಿವ್ಯಕ್ತಿಸುವ ಒಂದು ಮಾಧ್ಯಮವಾಗಿಸಿಕೊಂಡಿದೆ. ಕೈಗಾರಿಕಾ ಕ್ರಾಂತಿಯಾದ ನಂತರ ಸಮುದಾಯದ ಬದುಕಿನಿಂದ ವಿಮುಖವಾದ ಇಂಗ್ಲಿಷ್ ಭಾಷೆಯಲ್ಲಿ ದೀರ್ಘ ಸ್ವರಗಳು ಕ್ಷೀಣವಾದುದನ್ನು ಗಮನಿಸಿ ಅರ್ಥ ಮಾಡಿಕೊಳ್ಳುವುದಾದರೆ– ಸಮಷ್ಟಿ ಸಂವೇದನೆಯ ದಿಕ್ಕಿಗೆ ಹೆಜ್ಜೆ ಇಟ್ಟ ನನ್ನ ಬರವಣಿಗೆಯಲ್ಲಿ ಸ್ವರಗಳು ತುಂಬಿ ತುಳುಕುತ್ತವೆ. ಹೌದು, ಕಣ್ಮರೆಯಾಗುತ್ತಿರುವ ಸ್ವರಗಳು ಭಾಷಾ ಕುಟುಂಬದ ಮೂಲ ನಿವಾಸಿಗಳು.

ಹಾಗೆಯೇ ಜಾನಪದೀಯತೆಯೂ ಕೂಡ. ಅಂದರೆ ಯಥಾವತ್ತು ಜಾನಪದವೂ ಅಲ್ಲ. ಅದು ಜಾನಪದದ ನೆಲದಿಂದ ಜಿಗಿತದಂತೆ. ಹಾಗಾಗಿ ವರ್ತಮಾನವೇ ಅರೆ–ಜಾನಪದದಂತಾಗೂ ಬಿಡುತ್ತದೆ, ಹಾಗೂ ವರ್ತಮಾನದ ವಾಸ್ತವವನ್ನು ಪರಿಣಾಮಕಾರಿಯಾಗಿ ಕಟ್ಟುವುದಕ್ಕೂ ದುಡಿಯುತ್ತದೆ. ಜಾನಪದವನ್ನು ವಸ್ತು ಎಂದು ಬಳಸಿಕೊಳ್ಳದೇ ಎಷ್ಟು ಜಾನಪದ ನಾನೇ ಆಗಬಹುದೋ ಅಷ್ಟು ಮಾತ್ರ ಜಾನಪದೀಯತೆ, ದಕ್ಕಿದಷ್ಟು ಅಷ್ಟೆ.

ಹಾಗಾಗಿ ಕೇಳಿದ ಜಾನಪದ ಕತೆಗಳು ಇಲ್ಲಿ ಕತೆಗಳಾಗದೆ ಪಾತ್ರಗಳಾಗಿಬಿಡುತ್ತವೆ. ಇದಕ್ಕೊಂದು ಉದಾಹರಣೆ– ಕುಸುಮಬಾಲೆಯಲ್ಲಿ, ತನ್ನ ಮಗಳಿಗೊಂದು ಮಗು ಹುಟ್ಟೀ, ಆ ಮೊಮ್ಗೂಸ ಕಣ್ತುಂಬಿಕೊಳ್ಳಲು ಪ್ರಾಣ ಹಿಡಿದುಕೊಂಡು ಕಾಯುತ್ತಿರುವ ತೂರಮ್ಮ ಎಂಬ ಮುದುಕಿ ಬರುತ್ತಾಳೆ.

ಅವಳ ದುಃಖಕ್ಕೆ ಸಾಥ್ ಕೊಡಲು ಅವಳ ಚಿಂತೆಯೂ ಒಂದು ಪಾತ್ರವಾಗಿ ಮೂಡಿಬಂದು ತೂರಮ್ಮನ ಪಕ್ಕದಲ್ಲಿ ಕೂತು ಇಬ್ಬರೂ ಕಷ್ಟಸುಖ ಮಾತಾಡಿಕೊಳ್ಳುತ್ತಾರೆ. ಚಿಂತೆ ತನ್ನ ಚಿಂತೆಯನ್ನೂ ಅರುಹುತ್ತದೆ, ದುಃಖಿತ ತೂರಮ್ಮನಿಗೆ ಸಾಂತ್ವನವನ್ನೂ ಮಾಡುತ್ತದೆ, ಪರಿಹಾರವನ್ನೂ ಹೇಳುತ್ತದೆ.

ಇದು ದುಃಖಿತರು ಈ ಕಠೋರ ವಾಸ್ತವದ ಎದುರು ಬದುಕುಳಿಯುವತ್ತ ಜೀವಶಕ್ತಿ ಸೆಲೆ ಪಡೆದುಕೊಳ್ಳುವ ಪ್ರಕ್ರಿಯೆಯಾಗೂ ಬಿಡುತ್ತದೆ. ಹಾಗೇ ಯಥಾವತ್ ಜಾನಪದದ ಅರೆಗನಸಾಗದೆ ಹೆಚ್ಚು ವಾಸ್ತವವೂ ಆಗುತ್ತದೆ. ಇಲ್ಲಿ ಜೀವಗಳು, ವಸ್ತುಗಳು, ಸ್ಪಿರಿಟ್‌ಗಳು– ಅವವುಗಳೇ ಪಾತ್ರಧಾರಿಗಳಾಗಿರುವುದರಿಂದ ಆ ಎಲ್ಲವೂ ಸ್ವಾಯತ್ತವಾಗಿ ಅವವುಗಳ ಭಾಷೆಯಲ್ಲಿ, ವೇಷದಲ್ಲಿ ತಂತಮ್ಮ ರೀತಿ ರಿವಾಜುಗಳು, ಜೀವನದೃಷ್ಟಿಗಳೊಡನೆ ರೂಪ ಪಡೆದುಕೊಳ್ಳುತ್ತವೆ.

ಹೀಗೆ, ಮೌಖಿಕ ಭಾಷೆ ಹಾಗೂ ಜಾನಪದೀಯತೆಯ ಮೈ ಪಡೆದುಕೊಂಡ, ಬಹಿಷ್ಕೃತ ಅಸ್ಪೃಶ್ಯ ನೆಲದಿಂದ ಅರಳುವ ಕಲಾಕೃತಿಯೊಂದರಲ್ಲಿ ಪ್ರಜ್ಞೆ, ಆಧುನಿಕತೆ, ವೈಚಾರಿಕತೆಗಳ ಚಲನೆ ಹೇಗೆ? ಎಷ್ಟು? ಇಂಥ ಸಮುದಾಯದ ಸ್ಥಿತಿಯನ್ನೂ ಕಲೆಯಾಗಿಸುವ ಪ್ರಕ್ರಿಯೆಯಲ್ಲಿ ಹದ ಸಂಯಮ ತಪ್ಪದೆ, ಹುಸಿಯಾಗದಂತೆ ಅದರೊಳಗೇನೇ ಪ್ರಜ್ಞೆಯನ್ನೂ ಕಾಣಿಸಬೇಕಾಗಿರುತ್ತದೆ. ಅದಕ್ಕಾಗಿ ಮೊದಲು ಅಸ್ಪೃಶ್ಯತೆಯ ಸಂಕೀರ್ಣತೆಯನ್ನು ಸ್ಪರ್ಶಿಸಬೇಕಾಗಿದೆ.

ಭಾರತದ ಇತಿಹಾಸವು ಬಡತನ ಮತ್ತು ಅವಮಾನಗಳನ್ನು ಗಂಟುಮೂಟೆ ಕಟ್ಟಿ ಅಸ್ಪೃಶ್ಯರನ್ನಾಗಿಸಿ ಊರಾಚೆ ಎಸೆದಿದೆ. ನನ್ನ ಲೇಖನವೊಂದರ ತಲೆಬರಹ– ‘ಅಸ್ಪೃಶ್ಯತೆ: ವರ್ಣಭೇದದ (apartheid) ಮುತ್ತಾತ’ ಎಂದಿದ್ದು, ಆ ತಲೆಬರಹವೇ ಅಸ್ಪೃಶ್ಯತೆಯ ತಲೆಬುಡ ಅರ್ಥಮಾಡಿಕೊಳ್ಳಲು ಒಂದಿಷ್ಟು ಸುಳಿವು ನೀಡಬಹುದು.

ಹಾಗೇ ಆಫ್ರಿಕಾದ ಮಹಾಲೇಖಕ ಚಿನುವಾ ಅಚಿಬೆ ಮೈಸೂರಿನ ಹತ್ತಿರದ ಒಂದು ಹಳ್ಳಿಗೆ ಭೇಟಿ ನೀಡಿ ನುಡಿದ ಮಾತುಗಳು ಇವು, ‘‘ನಿಮ್ಮ ಹಳ್ಳಿಗಾಡಿನಲ್ಲಿರುವ ಅಸ್ಪೃಶ್ಯತೆ ನೋಡಿದೆ. ಇದು ನನ್ನನ್ನು ಹೆಚ್ಚು ದುಃಖಿತನನ್ನಾಗಿ ಮಾಡಿತು. ಆಫ್ರಿಕಾದಲ್ಲೂ ದೇವರ ಮಕ್ಕಳು ಎಂದು ಕರೆಸಿಕೊಳ್ಳುವ ಗುಂಪಿದೆ. ಅವರ ರಕ್ತ ಭೂಮಿಗೆ ಬಿದ್ದರೆ ಅದು ಪಾಪ ಎಂಬ ಭಾವನೆ ಅಲ್ಲಿದೆ. ಆದರೆ, ಇಲ್ಲಿ ಹರಿಜನರ (ದೇವರ ಮಕ್ಕಳ) ರಕ್ತ ಭೂಮಿಗೆ ಬಿದ್ದರೆ, ಅದು ಪುಣ್ಯವಾಗುತ್ತದೆ’’.

ಅಚಿಬೆಗೆ ಕಂಡಂತೆ ಯಾಕೆ ಇದು ನಮಗೆ ಕಾಣುವುದಿಲ್ಲ? ಈ ಗತಕಾಲದ ಅಸ್ಪೃಶ್ಯತೆ ಭಾರತವನ್ನು ಸಂವೇದನಾಹೀನವಾಗಿಸಿ ಅದನ್ನು ಅಂರ್ತಗತ ಮಾಡಿಬಿಟ್ಟಿದೆ. ಹಾಗಾಗಿ ಇಲ್ಲಿನ ಕ್ರೌರ್ಯ ಬೂದಿ ಮುಚ್ಚಿದ ಕೆಂಡದಂತೆ. ಅದು ಕಾಣದು. ಮತ್ತೂ ಹೇಳುವುದಾದರೆ ದಾರ್ಶನಿಕ ಕಾರ್ಲ್ ಮಾರ್ಕ್ಸ್, ಜಗತ್ತಿನ ದುಡಿಯುವ ವರ್ಗವನ್ನು ಶ್ರಮಜೀವಿಗಳು ಎಂದು ಹೆಸರಿಸಿ, ಭಾರತದ ಅಸ್ಪೃಶ್ಯರನ್ನು ಕಠಿಣ ಶ್ರಮಜೀವಿಗಳು ಎಂದು ಕಾಣುತ್ತಾನೆ.

ಇದೂ ನಮಗೆ ಕಾಣದು. ಇನ್ನೂ ಒಂದು ಉದಾಹರಣೆ– ಭಾರತದ ಸಂದರ್ಭದಲ್ಲಿ ಮೂಲನಿವಾಸಿಗಳು ಯಾವುದೋ ಭೂತಕಾಲಕ್ಕೆ ಸಿಕ್ಕಿಹಾಕಿಕೊಂಡು ಸ್ಥಗಿತವಾಗಿ ನೇತಾಡುತ್ತಿರುವಂತೆ ಜೀವಿಸುತ್ತಿದ್ದರೂ ಅವರಿಗೇನಾದರೂ ಅವಕಾಶ ಸಿಕ್ಕಿ ವಿದ್ಯಾವಂತರಾಗಿ ಉದ್ಯೋಗಸ್ಥರಾದರೆ, ಭಾರತದ ಜಾತ್ಯಸ್ಥ ಸಮಾಜದ ಮನೋಭೂಮಿಕೆಯು ಅವರನ್ನು ತನ್ನೊಳಕ್ಕೆ ಸೇರಿಸಿಕೊಳ್ಳುತ್ತದೆ.

ಈ ಅವಕಾಶ ಅಸ್ಪೃಶ್ಯರಿಗೆ ಬಲು ಕಷ್ಟ. ಅಸ್ಪೃಶ್ಯತೆಯ ಒಳಸುಳಿಗಳನ್ನು ಅರ್ಥಮಾಡಿಸುವುದಕ್ಕೆ ಮಾತ್ರ ಈ ಮಾತುಗಳು. ನಾನು ಅಸ್ಪೃಶ್ಯತೆಯ ಹಿನ್ನೆಲೆಯಿಂದ ಬಂದಿರುವವನಾಗಿರುವುದರಿಂದ ಹೀಗೆ ಅನ್ನಿಸುತ್ತಿರಬಹುದೇ ಎಂಬ ಸಂಕೋಚವೂ ನನ್ನೊಳಗಿದೆ.

ಭಾರತದ ಇತಿಹಾಸವು ಚಾತುರ್ವರ್ಣ ಜಾತಿಭೇದ ತಾರತಮ್ಯಗಳ ಕಾನೂನು ಕಟ್ಟಳೆಗಳನ್ನು ಕಾಪಾಡಿಕೊಳ್ಳಲು ಶಾಸ್ತ್ರ ದೇವರುಗಳನ್ನು ರೌಡಿಗಳಂತೆ ದುರುಪಯೋಗಪಡಿಸಿಕೊಂಡಿದ್ದರಿಂದಾಗಿ ಈಗ ನಮ್ಮ ಸಂವಿಧಾನದಲ್ಲಿ ಅಸ್ಪೃಶ್ಯತಾ ನಿಷೇಧ ಕಾನೂನು ಇದ್ದರೂ ಜನಜೀವನದಲ್ಲಿ ಇನ್ನೂ ಉಳಿದಿದೆ.

ಪ್ರೊ. ಮರಿಸ್ವಾಮಿ ಅವರು ತಮ್ಮ ಹಳೆನೆನಪನ್ನು ಹೇಳುತ್ತಾ– ಒಂದ್ಸಲ ಅವರು ಬಸ್ಸಿಗಾಗಿ ಕಾಯುತ್ತಾ ಲಿಂಗಾಯಿತರ ಮನೆ ಜಗುಲಿ ಮೇಲೆ ಕೂತಿದ್ದಾಗ ಆ ಮನೆಯ ಯಜಮಾನ ಹೊರಬಂದು ಅಸ್ಪೃಶ್ಯನೊಬ್ಬ ತನ್ನ ಮನೆಯ ಜಗುಲಿಯ ಮೇಲೆ ಕೂತಿದ್ದನ್ನು ಸಹಿಸಿಕೊಳ್ಳಲಾಗದೆ ಜಾತಿಯ ಹೆಸರು ಹೇಳಿ ನಿಂದಿಸಿ ಅವರನ್ನು ಬೀದಿಗೆ ಹಾಕಿದ್ದನ್ನು ನೆನಸಿಕೊಂಡು ಹೇಳುತ್ತಾರೆ: ‘‘ಆಗ, ನಾವು ಬದುಕುವ ರೀತಿ ಇರುವುದೇ ಹಾಗೇ ಎಂದು ಅಂದುಕೊಂಡಿದ್ದೋ.

ಯಾವಾಗ ಡಾ. ಅಂಬೇಡ್ಕರ್‌ರವರ ಕೃತಿಗಳನ್ನು ಓದಿದೆವೋ ಆವಾಗಲೇ ನಮಗೆ ಅರ್ಥವಾದದ್ದು– ನಾವು ಜಾತಿಪದ್ಧತಿಗೆ ಬಲಿಪಶುಗಳು. ಅಸ್ಪೃಶ್ಯತೆ ಎನ್ನುವುದು ಒಂದು ಆಳವಾದ ಗಾಯ. ಅಲ್ಲಿಯವರೆಗೂ ಅದು ನಮಗೆ ಗಾಯ ಅನ್ನಿಸಿರಲೇ ಇಲ್ಲ’’ ಎಂಬ ಅವರ ಮಾತು ನನ್ನೊಳಗೆ ಒಂದು ಮಾಯದ ಗಾಯದಂತೆ ಉಳಿದಿದೆ.

ಈ ಮೂರ್ಛಾವಸ್ಥೆ ಸ್ಥಿತಿಯ ಸಮುದಾಯದ ನೆಲದಿಂದ ಮೂಡುವ ಕೃತಿಯೊಳಗೆ ಆಧುನಿಕ ವೈಚಾರಿಕ ಪ್ರಜ್ಞೆ ಎಷ್ಟು? ಹೇಗೆ? ಕಲಾಕೃತಿಯಾದುದರಿಂದ ಅದು ಅನುಭವದೊಳಗೆ ಸಂಭವಿಸಬೇಕಾಗುತ್ತದೆ. ಬಹುಶಃ ಹೀಗೆ– ಭೂಮಿಯ ಆಳದಲ್ಲಿರುವ ಜಲದ ಸೆಲೆಯಂತೆ? ಅಂದರೆ ಡ್ರಿಲ್ ಮಾಡಿದರೆ ಮಾತ್ರ ಹೊರ ಬರುವ ಜೀವಜಲದಂತೆ. ಮತ್ತು ಬೀಜದೊಳಗಿನ ವೃಕ್ಷದಂತೆ? ಅಂದರೆ ನಾಳೆಗಳ ಸತ್ವವನ್ನು ಬಚ್ಚಿಟ್ಟುಕೊಂಡಿರುವ ಸ್ಥಿತಿಯಂತೆ.

ಹಾಗೇ ತನ್ನ ಸಮುದಾಯದ ಓದುಗರೇ ಅಪರೂಪವಾಗಿರುವ ಇಂಥ ಸಂದರ್ಭದಲ್ಲಿ ಆ ಸಮುದಾಯದ ಲೇಖಕನೊಬ್ಬ ಯಾರನ್ನು ತನ್ನ ಓದುಗರೆಂದು ಉದ್ದೇಶಿಸಿ ಬರೆಯಬೇಕು? ಇತರರಿಗೆಂದು ಬರೆದರೆ ಆ ಬರವಣಿಗೆ ಇತರರ ಆಸಕ್ತಿ, ಕುತೂಹಲ ಪೂರೈಸಲು ಮಾನವಶಾಸ್ತ್ರೀಯ ವಸ್ತುವಿನಂತಾಗಿಬಿಡುವುದರಿಂದ ತನ್ನ ಸಮುದಾಯದ ಗಾಯದ ಮೇಲೆ ಆ ಸಮುದಾಯದ ಪ್ರಜ್ಞಾವಂತನೇ ಬರೆ ಎಳೆದಂತಾಗುವುದಿಲ್ಲವೆ?

ಹಾಗೂ ಮೂಲತಃ ಸಂವೇದನಾಶೀಲವಾದ ಸೃಷ್ಟಿ ಕ್ರಿಯೆಯ ಸೆಲೆ ಅಂದರೆ ಅದು ಇನ್ನೊಂದು ಜೀವವಾಗುವ ಪ್ರಕ್ರಿಯೆ ಆಗಿರುವುದರಿಂದ, ಸೃಷ್ಟ್ಯಾತ್ಮಕತೆಯ ಸತ್ವದ ಈ ಬೆಳಕನ್ನೂ ಉಳಿಸಿಕೊಂಡು ಹಾಗೂ ಅಸ್ಪೃಶ್ಯತೆಯ ಗಾಯವನ್ನು ಅದು ಗಾಯ ಎಂದು ಸಂವೇದಿಸಿ, ಆ ಸ್ಥಿತಿಗೆ ಎಚ್ಚರ,

ಘನತೆ ಕಾಣಿಸುವುದು ಹೇಗೆ? ಹಾಗಾದರೆ ಹೇಗೆ? ಅಸಹಾಯಕನಾಗಿ ನಾನು ನನ್ನನ್ನೇ ಮುಂದೆ ಕೂರಿಸಿಕೊಂಡು ಬರೆಯತೊಡಗಿದರೆ ಆಗ ನಾನು ಸಮುದಾಯದ ಮನೋಭೂಮಿಗೆ ಕೂಡಿ ಸಮಷ್ಟಿಯೇ ತನ್ನನ್ನು ಅಭಿವ್ಯಕ್ತಿಸಿಕೊಳ್ಳಬಹುದೇನೊ…

ಇದೇ ಕಾರಣಕ್ಕಾಗಿ ಇರಬೇಕು– ‘ಕುಸುಮಬಾಲೆ’ಯನ್ನು ಇಂಗ್ಲಿಷ್‌ಗೆ ಅನುವಾದಿಸುತ್ತಾ ಪ್ರಜ್ಞಾಪೂರ್ವಕವಾಗಿ ಸೃಷ್ಟಿಕ್ರಿಯೆಯ ಪ್ರಕ್ರಿಯೆಯಲ್ಲಿ ಒಳಗಿನಾಕೆಯಾದ ಸೂಸನ್ ಡೇನಿಯಲ್, ಜಾತಿಯ ತಾರತಮ್ಯಗಳಿಗೆ ಸಿಕ್ಕಿ ಚಿಂದಿಯಾದ ನನ್ನ ಕತೆಗಳ ಅನುಭವ ಸಂವೇದನೆಗಳು ಜನಾಂಗದ ಎಸ್ತೆಟಿಕ್ ಸಂರಚನೆ ಹಾಗೂ ಜೀವನದೃಷ್ಟಿ ಪಡೆದುಕೊಂಡು ಅಲ್ಲಿ ಸೃಷ್ಟ್ಯಾತ್ಮಾಕ ಸ್ತರವೊಂದು (Creative space) ಉಂಟಾಗಿರುವುದರ ಬಗ್ಗೆ ಹೇಳುತ್ತಾ–

‘‘…ಕುಸುಮಬಾಲೆಯ ಶಬ್ದಲಯಗಳ ಗತಿಯು ಲೇಖಕನ ಜೊತೆಗೆ ಓದುಗರನ್ನೂ ಕೂಡ ಭಾಷೆಯ ಸೃಷ್ಟಿಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಭಾಷೆ ಎಂಬುದು, ಮುಖ್ಯವಾಗಿ ಸಮುದಾಯದೊಳಗಿನ ಕೊಡುಕೊಳ್ಳುವಿಕೆಯ ಚಟುವಟಿಕೆ ಅಂದರೆ ಅದೊಂದು ಸಾಮುದಾಯಿಕ ಕ್ರಿಯೆಯಾಗಿ ತನ್ನ ಸ್ವರೂಪವನ್ನು ನೆನಪಿಸುತ್ತದೆ.

ಹಾಗಾಗಿ ಈ ಕಥನದಲ್ಲಿ ಮಾತಿಗೂ ಮುಂಚಿನ ಪದಗಳು ಹಾಗೂ ಪದಗಳಿಗೂ ಮುಂಚಿನ ಶಬ್ದಗಳನ್ನು ಹಿಡಿಯುವ ಚಲನೆಯಲ್ಲಿ ಹೊಮ್ಮುವ ಧ್ವನಿ–ಪ್ರತಿಧ್ವನಿಗಳು ವಿಶಾಲ ವಿಶ್ವದೊಂದಿಗೆ ಸಂಬಂಧ ಕಟ್ಟಿಕೊಳ್ಳುವ ಆದಿಮ ಪ್ರಚೋದನೆಯನ್ನು ಪಡೆದುಕೊಂಡುಬಿಡುತ್ತವೆ.

ಹಾಗೂ ಇಲ್ಲಿ ವೈರುಧ್ಯತೆಗಳು ಇಲ್ಲವಾಗಿ ನೀತಿ–ಅನೀತಿಗಳಿಗೆ ಅತೀತವಾದ ನಿಲುವು ದಕ್ಕುತ್ತದೆ ಮತ್ತು ಇಲ್ಲಿನ ಮಾತಿನ ಲಯಲಾಸ್ಯವು ಜನಸಮುದಾಯದ ಅಪ್ರಜ್ಞಾಪೂರ್ವಕ ಚರಿತ್ರೆಯನ್ನು ಮುನ್ನೆಲೆಗೆ ತರುವ ಪ್ರೇರಕಶಕ್ತಿಯಾಗೂ ಪರಿಣಮಿಸುತ್ತದೆ.

ಈ ಮಾತನ್ನು ಹಿಗ್ಗಿಸಿ ನೋಡಿ ಹೇಳುವುದಾದರೆ, ಇದು ನಮ್ಮನ್ನು ಹಿಂದಿನ ಕಾಲಮಾನಕ್ಕೆ ಒಯ್ದು, ಒಟ್ಟಾರೆ ಭಾರತೀಯ ಮನೋಭೂಮಿಕೆಯನ್ನು ರೂಪಿಸಿರುವ ಮೌಖಿಕ ಪರಂಪರೆಗಳೆಡೆಗೆ ಒಯ್ಯುತ್ತದೆ’’ ಎಂದು ಗುರುತಿಸುತ್ತಾರೆ.

ಅದಕ್ಕೇ ಇರಬೇಕು, ದೂರದ ಬಂಗಾಳದ ಆದಿವಾಸಿ ಸಂತಾಲ್ ಬುಡಕಟ್ಟಿಗೆ ಸೇರಿದ ಸಾಹಿತ್ಯದ ವಿದ್ಯಾರ್ಥಿಯೊಬ್ಬ ನನ್ನ ‘ಅಮಾಸ’ ಕತೆಯನ್ನು ಓದಿ ‘‘ಇದು ನನ್ನ ಟ್ರೈಬ್‌ನ ನನ್ನದೇ ಕತೆ. ಬರೆದವನೂ ಖಂಡಿತ ನನ್ನ ಬುಡಕಟ್ಟಿಗೆ ಸೇರಿದವನು’’ ಎಂದು ಮೊಂಡುಮೊಂಡಾಗಿ ವಾದಿಸಿದನಂತೆ.
ಅವನಿಗೆ ಕೃತಜ್ಞತೆಗಳು.