ದೇವನೂರ ಮಹಾದೇವ… ಲಕ್ಷ್ಮೀಪತಿ ಕೋಲಾರ

[ಕವಿ ಲಕ್ಷ್ಮೀಪತಿ ಕೋಲಾರ ಅವರು ದೇವನೂರ ಮಹಾದೇವ ಅವರ ಬಗ್ಗೆ ಬರೆದ ಒಂದು ಹಳೆಯ ಕವಿತೆ ನಮ್ಮ ಮರು ಓದಿಗಾಗಿ]

ದೇವನೂರ ಮಹಾದೇವ
ಬಿದಿರು ವನದಿಂದ ಹಿಂದಿರುಗಿದ
ಕೊಳಲ ಗಾನದ
ಝೆನ್ ಟೆಲಿಗ್ರಾಂ..

ಎಲ್ಲೆಡೆಯ ಮಣ್ಣಿನ ತಾಯ ಭಾ಼ಷೆಯ ಸಂಗೀತ
ಘಾಸಿ ಮನಸ್ಸುಗಳನ್ನು ಮಾಯಿಸುವ ಜೋಗುಳ
ಜೇನಿನಿಂದ ಜ್ವಾಲೆಗಳ ನಂದಿಸಬಲ್ಲ
ಬಿದಿರು ಗಾನ

ದೇವನೂರ ಮಹಾದೇವ
ಅತ್ಯಪರೂಪದ ಹಕ್ಕಿ
ಮತ್ತೆಷ್ಟನೇ ಸಲವೋ ಬಂದಿದೆ!
ತನ್ನ ಪಾಡಿಗೆ ತಾನು ಉಕ್ಕಿದೆ ಸಿಹಿ ನೀರು
ಕೃತಜ್ಞತೆ ಎಂಬ ಪದದ ಪರಿಚಯವೂ ಇರದೆ!
ನದಿಯ ಅತ್ಯಮೂಲ್ಯ ತಿರುವು ಮತ್ತು
ನೀರ ನಿಶ್ಯಬ್ದ ಜೋಗುಳ
ಮತ್ತೆ ಮತ್ತೆ ನೆನಪಾಗುವಂತೆ

ದೇವನೂರ ಮಹಾದೇವ
ನಡೆದಾಡುವ ಪ್ರತ್ಯೇಕ ಬುದ್ಧನ ಪ್ರತಿಹೆಜ್ಜೆಯೂ
ಭೂಮ್ತಾಯಿಯ ಪೂಜೆಯೆ
ಯುಗಗಳ ಕತ್ತಲೆಯನ್ನು ದಾಟಿ
ಬೆಳಕಿನ ಹೂವು ಅರಳಿಸಬಲ್ಲ
ಪೂರ್ವೀಕ ಬೇರು
ಲೋಕಗಳೆಲ್ಲವೂ ಸಂಧಿಸುವ
ಮಾಂತ್ರಿಕ ಬಾಗಿಲ ಬಳಿ ಹೂವು ತರುವವನಿಗೆ
ಕತ್ತಲೆಯೂ ಬೆಳದಿಂಗಳೆ

ದೇವನೂರ ಮಹಾದೇವ…..