ದೇವನೂರ ಮಹಾದೇವ ಕುರಿತು ಕೆ.ಸತ್ಯನಾರಾಯಣ-ಸಾಲುದೀಪಗಳು ಕೃತಿಯಲ್ಲಿ

[ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಹಾಗೂ ಎಂ.ಎಚ್.ಕೃಷ್ಣಯ್ಯ ಅವರ ಸಂಪಾದಕತ್ವದಲ್ಲಿ 1990ರಲ್ಲಿ ಪ್ರಕಟವಾದ “ಸಾಲುದೀಪಗಳು” ಕೃತಿಯು   ಸುಮಾರು ಒಂದು  ಶತಮಾನ ಕಾಲದ ಹೊಸಗನ್ನಡ ಸಾಹಿತ್ಯದ ಪ್ರತಿಭಾನ್ವಿತರಲ್ಲಿ ಅರವತ್ತೇಳು ವ್ಯಕ್ತಿತ್ವಗಳನ್ನು ಕುರಿತ ಲೇಖಾನ ಮಾಲೆಯಾಗಿದ್ದು, ಇದರಲ್ಲಿ ದೇವನೂರ ಮಹಾದೇವ ಅವರ ಬದುಕು, ಬರಹ, ವ್ಯಕ್ತಿತ್ವ ಕುರಿತು ವಿಮರ್ಶಕ ಕೆ.ಸತ್ಯನಾರಾಯಣ ಅವರು ಬರೆದಿದ್ದಾರೆ.ಅದು ನಮ್ಮ ಮರು ಓದಿಗಾಗಿ…. ]

ಕನ್ನಡ ಕಥಾಸಾಹಿತ್ಯಕ್ಕೆ ಹೊಸ ದಿಕ್ಕು-ದೆಸೆಗಳನ್ನು ತೋರಿಸಿದ ದೇವನೂರ ಮಹಾದೇವ ನವ್ಯೋತ್ತರ ಸಾಹಿತ್ಯ ಸಂದರ್ಭದ ಅಗ್ರಗಣ್ಯ ಲೇಖಕರಲ್ಲೊಬ್ಬರು. ನವ್ಯ ಸಾಹಿತ್ಯ ಚಳುವಳಿಯ ಪ್ರೇರಣೆಗಳು, ಅದರ ಅಭಿವ್ಯಕ್ತಿ ಕ್ರಮಗಳ ಬಳಕೆ ದಟ್ಟವಾಗಿದ್ದ ಸಂದರ್ಭದಲ್ಲೆ ಅವರ ಮೊದಲ ಕಥೆಗಳು ಪ್ರಕಟವಾದದ್ದು ನಿಜವಾದರೂ, ಒಟ್ಟಾರೆ ಅವರ ಬರವಣಿಗೆ ನವ್ಯೋತ್ತರ ಕಾಲಮಾನದ ಸಾಂಸ್ಕೃತಿಕ-ಸಾಹಿತ್ಯಕ ಅಭೀಪ್ಸೆಗಳನ್ನು ಸಮರ್ಥವಾಗಿ ಪ್ರತಿನಿಧಿಸುತ್ತದೆ ಎಂಬುದು ಮುಖ್ಯ. ಅವರ ಕಥಾ ಸಾಹಿತ್ಯವು ಕನ್ನಡ ಕಥಾಲೋಕದ ಸಂದರ್ಭದಲ್ಲಿ ಎರಡು ದೃಷ್ಟಿಯಿಂದ ಮುಖ್ಯವಾದುದಾಗಿದೆ. ಅವರು ಕಂಡರಸಿ ಶೋಧಿಸಿ ಮಂಡಿಸಿದ ದಲಿತಲೋಕದ ಅನುಭವಕ್ಕಿರುವಷ್ಟೇ ಪ್ರಾಮುಖ್ಯತೆ ಒಂದು ಕಡೆಯಾದರೆ, ಮಹಾದೇವರು ಹುಡುಕಿದ, ಹೊಸ ಅಭಿವ್ಯಕ್ತಿ ಕ್ರಮಗಳ ಪ್ರಸ್ತುತತೆಯು ಕೂಡ ಅಷ್ಟೇ ಮುಖ್ಯವಾದುದು. ಹೊಸ ಅನುಭವಗಳ ಮಂಡನೆಯಲ್ಲಷ್ಟೇ ತೃಪ್ತವಾಗುವ ಒಂದು ಗುಂಪಿನ ಲೇಖಕರು, ದಟ್ಟ ಅನುಭವದ ಹಿನ್ನೆಲೆಯಿಲ್ಲದೆ ಕೇವಲ ಕುತೂಹಲಕ್ಕಾಗಿ ಪ್ರಯೋಗಶೀಲರಾಗುವ ಇನ್ನೊಂದು ಗುಂಪಿನ ಲೇಖಕರ ನಡುವೆ, ಮಹಾದೇವರ ಬರವಣಿಗೆ ಒಂದು ಅಪರೂಪದ ಅಪವಾದ.
ದೇವನೂರ ಮಹಾದೇವ ಇದುವರೆಗೆ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ದ್ಯಾವನೂರು’ ಎಂಬ ಏಳು ಕತೆಗಳ ಸಂಗ್ರಹ. ‘ಒಡಲಾಳ’ ಎಂಬ ದೀರ್ಘ ಕಥನ ಮತ್ತು ‘ಕುಸುಮಬಾಲೆ’ಯೆಂಬ ಪ್ರಯೋಗಶೀಲ ಕಾದಂಬರಿ. ಈ ಮೂರು ಕೃತಿಗಳನ್ನು ಬರವಣಿಗೆಯ ಉದ್ದೇಶ, ಸಾರ್ಥಕತೆಯನ್ನು ಮಾನದಂಡವಾಗಿಟ್ಟುಕೊಂಡು ಪರಿಶೀಲಿಸಿದಾಗ, ನಾವು ಲೇಖಕರಲ್ಲುಂಟಾದ ಸ್ಥಿತ್ಯಂತರ ಮತ್ತು ಅದರ ಪ್ರೇರಣೆಗಳನ್ನು ಅರಿಯುವುದರ ಜೊತೆಗೆ ನಮ್ಮ ಕಥಾ ಸಂದರ್ಭದ ಬಗ್ಗೆಯು ತಿಳಿಯಬಹುದಾಗಿದೆ. ಈ ಮೂರು ಕೃತಿಗಳಲ್ಲದೆ ದೇವನೂರು ಬರವಣಿಗೆಯ ತಮ್ಮ ಮೊದಲ ದಿನಗಳಲ್ಲಿ ಬರೆದಿದ್ದ ಕವನಗಳು, ಆಗಾಗ್ಗೆ ಬರೆದ ಸಾಂಸ್ಕೃತಿಕ ಲೇಖನಗಳೂ ಇವೆ. ಆದರೆ ಇದ್ಯಾವುದೂ ಕೃತಿರೂಪದಲ್ಲಿ ಸಂಗ್ರಹಗೊಳ್ಳದೆ ಇರುವುದರಿಂದ ಓದುಗರಿಗೆ ಅಲಭ್ಯವಾಗಿವೆ. ಇವರ ಸಮಗ್ರ ಕಥಾ ಸಾಹಿತ್ಯವು ಮಾತ್ರ ಸಂಕಲನ ರೂಪದಲ್ಲಿ ಓದುಗರಿಗೆ ದೊರಕುತ್ತಿದೆ (ದೇವನೂರ ಮಹಾದೇವ ಅವರ ಕೃತಿಗಳು, ಪತ್ರಿಕೆ ಪ್ರಕಾಶನ, 1992, ಬೆಂಗಳೂರು).
10.6.1948ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವರು, ತಮ್ಮ ಶಿಕ್ಷಣ – ವಿದ್ಯಾಭ್ಯಾಸವನ್ನು ದೇವನೂರು, ನಂಜನಗೂಡು, ಮೈಸೂರುಗಳಲ್ಲಿ ಪಡೆದು, 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿ ಪಡೆದರು. 1975-1989ರ ಅವಧಿಯಲ್ಲಿ ಮೈಸೂರಿನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್‍ನಲ್ಲಿ ಉದ್ಯೋಗನಿರತರಾಗಿದ್ದ ಇವರು ನಂತರದ ವರ್ಷಗಳಲ್ಲಿ ಪೂರ್ಣಾವಧಿಯ ಕೃಷಿಕರಾಗಿದ್ದಾರೆ. 1967ರಲ್ಲಿ ಇವರ ಮೊದಲ ಕತೆ ಪ್ರಕಟವಾಯಿತು. ದ್ಯಾವನೂರು ಸಂಕಲನದ ಕತೆಗಳನ್ನು ಗಮನಿಸಿದರೆ ನವ್ಯಸಾಹಿತ್ಯ ಚಳುವಳಿಯ ಪರಿಚಯ-ಪ್ರೇರಣೆ ಒಂದು ಹಂತದಲ್ಲಿ ಇವರಿಗೆ ಗಾಢವಾಗಿತ್ತೆಂದು ತಿಳಿದುಬರುತ್ತದೆ. ಇದರ ಜೊತೆಗೆ ಅರವತ್ತು-ಎಪ್ಪತ್ತರ ದಶಕಗಳಲ್ಲಿ ಕ್ರಿಯಾಶೀಲವಾಗಿದ್ದ ಲೋಹಿಯಾವಾದಿ ಸಮಾಜವಾದಿ ಪಕ್ಷ- ಸಮಾಜವಾದಿ ಯುವಜನ ಸಭಾದ ಚಿಂತನೆ ಚಟುವಟಿಕೆಗಳು, ಮೈಸೂರಿನಲ್ಲೆ ವಾಸವಾಗಿದ್ದ ಯು.ಆರ್. ಅನಂತಮೂರ್ತಿ, ಶ್ರೀಕೃಷ್ಣ ಅಲನಹಳ್ಳಿ ಇಂತಹ ಹಿರಿಯ ಲೇಖಕರೊಡನಿದ್ದ ಒಡನಾಟ, ಇವೆಲ್ಲವೂ ಮಹಾದೇವರಿಗೆ ಲೇಖಕ ವ್ಯಕ್ತಿತ್ವವನ್ನು ಹುಡುಕಿಕೊಳ್ಳಲು ನೆರವಾಗಿರಬಹುದು.
ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ‘ನರ’ ಎಂಬ ಪ್ರತಿಭಟನಾ ಪತ್ರಿಕೆಯ ಸಂಪಾದಕ-ಪ್ರಕಾಶಕರಾಗಿದ್ದುದು, 1975ರಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣರು ಮೈಸೂರಿಗೆ ಬಂದಿದ್ದಾಗ, ಸಾರ್ವಜನಿಕ ಸಭೆಯೊಂದರ ಅಧ್ಯಕ್ಷರಾಗಿದ್ದುದು ಆ ಕಾಲದ ಇವರ ಆಸಕ್ತಿಯ ಹರವುಗಳನ್ನು ಸೂಚಿಸುತ್ತದೆ. “ನಾನು ನವ್ಯರಿಗೆ ಕಿರಿತಮ್ಮ, ಬಂಡಾಯದವರಿಗೆ ಹಿರಿಯಣ್ಣ’’ ಎಂದು ಮಹಾದೇವರೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 1979ರಲ್ಲಿ ನಡೆದ ಬಂಡಾಯ ಸಾಹಿತ್ಯ ಸಂಘಟನೆಯ ಮೊದಲನೆಯ ಸಮ್ಮೇಳನದಲ್ಲಿ ಕೂಡ ಮಹಾದೇವರ ವ್ಯಕ್ತಿತ್ವ-ಚಿಂತನೆಯ ಪ್ರಭಾವವು ಇತ್ತು ಎಂಬುದನ್ನು ಕೂಡ ಇಲ್ಲಿ ದಾಖಲಿಸುವುದು ಅಗತ್ಯವಿದೆ. ನಂತರದ ವರ್ಷಗಳಲ್ಲಿ ಇವರು ಯಾವುದೇ ಸಂಘಟನೆ-ಚಳುವಳಿಯ ಜೊತೆ ಸಂಪೂರ್ಣವಾಗಿ ತಮ್ಮನ್ನು ಗುರುತಿಸಿಕೊಳ್ಳದೇ ಹೋಗಿದ್ದರು.
ದೇವನೂರರ ಸಾಹಿತ್ಯಕ ಸಾಧನೆಗಳನ್ನು ಗುರುತಿಸುವ ಸಂದರ್ಭದಲ್ಲಿ ದಲಿತ ಲೇಖಕರಾಗಿ ಅವರಿಗಿರುವ  ಸಾಂಸ್ಕೃತಿಕ ಆಯಾಮವನ್ನು ನಾವು ಮರೆಯಬಾರದು. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯ ಹುಟ್ಟು-ಬೆಳವಣಿಗೆಗೆ ಕಾರಣರಾದವರಲ್ಲಿ ಅವರೂ ಒಬ್ಬರು. ದಲಿತ ಚಳುವಳಿ-ಸಂಘಟನೆಗಳು, ದಲಿತರ ಬಗ್ಗೆ ತಮಗಿರುವ ತೀವ್ರತೆ-ಬದ್ಧತೆಯನ್ನು ಕಿಂಚಿತ್ತೂ ಕಡಿಮೆ ಮಾಡಿಕೊಳ್ಳದೆ ಒಟ್ಟು ಸಮಾಜದ ಆರೋಗ್ಯ ಪ್ರಗತಿಗಾಗಿಯೂ ಆಸೆ ಪಡಬೇಕು. ಹಾಗೆ ಆಸೆ ಪಡುವಂತಹ ಐತಿಹಾಸಿಕ ಸಂದರ್ಭ-ಸನ್ನಿವೇಶ ದಲಿತರದು ಎಂಬ ನಿಲುವಿನವರು ಮಹಾದೇವ.
ಇವರ ಸಾಹಿತ್ಯಕ ಸಾಧನೆಗಳನ್ನು ಕನ್ನಡ ಸಾಂಸ್ಕೃತಿಕ ಲೋಕ ಮನಸಾರೆ ಒಪ್ಪಿ ಗೌರವಿಸಿದೆ. 1984ರಲ್ಲಿ, ಕಲ್ಕತ್ತಾದ ಭಾರತೀಯ ಪರಿಷತ್ ಇವರ “ಒಡಲಾಳ”ವನ್ನು ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ. ಅದೇ ವರ್ಷ ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಸಿಕ್ಕಿತು. 1989ರಲ್ಲಿ ಅಮೆರಿಕಾದಲ್ಲಿ ನಡೆದ “ಇಂಟರ್‍ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ”ನಲ್ಲಿ ಮಹಾದೇವ ಭಾಗವಹಿಸಿದ್ದರು. 1991ರಲ್ಲಿ ಇವರ ಕುಸುಮಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ನಲವತ್ತೊಂದರ ಕಿರಿವಯಸ್ಸಿನಲ್ಲೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಭಾರತೀಯ ಲೇಖಕರಲ್ಲಿ ಮಹಾದೇವರೆ ಮೊದಲನೆಯವರಿರಬೇಕು.
ಈ ರೀತಿಯ ಸಾಂಸ್ಥಿಕ ಪ್ರಶಸ್ತಿಗಳೇ ಅಲ್ಲದೆ, ದೇವನೂರ ಮಹಾದೇವ ಅವರು ಪಡೆದಿರುವ ವಿಮರ್ಶಾ-ಪ್ರೀತಿ, ಗೌರವ ಕೂಡ ತುಂಬಾ ಅಪೂರ್ವವಾದದ್ದು. ಅವರ ಕೃತಿಗಳ ಬಗ್ಗೆ ಬರೆಯದ ವಿಮರ್ಶಕರೇ ಇಲ್ಲವೆನ್ನುವುದು ಅಷ್ಟು ಮುಖ್ಯವಲ್ಲ, ಪು.ತಿ.ನ., ಜಿ.ಎಚ್.ನಾಯಕ, ಯು.ಆರ್.ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ.ಲಂಕೇಶ್- ಇಂತಹ ಹಿರಿಯರು ಕೂಡ ಈ ವಿಮರ್ಶಾ ಚರ್ಚೆಯಲ್ಲಿ ಭಾಗವಹಿಸಿದ್ದಾರೆಂಬುದು ಮುಖ್ಯ. ಒಡಲಾಳ, ಕುಸುಮಬಾಲೆ, ಅಮಾಸ-ಈ ಕೃತಿಗಳೆಲ್ಲ ನಾಟಕಗಳಾಗಿ ರೂಪಾಂತರಗೊಂಡು ರಂಗಭೂಮಿಯಲ್ಲಿ ಯಶಸ್ವಿಯಾಗಿವೆ.
2
ಹಿಂಸೆ, ದಬ್ಬಾಳಿಕೆ, ಕ್ರೌರ್ಯ-ಇವೆಲ್ಲವೂ ನಮ್ಮ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿವೆಯೆಂದರೆ, ಈ ವಿದ್ಯಮಾನಗಳಲ್ಲಿ ನಮಗೆ ಸಹಜವಾಗಿ, ಸರಿಯಾಗಿಯೇ ಕಾಣುತ್ತವೆ. ಇಂತಹ ಸಮಾಜದಲ್ಲಿ ಲೇಖಕನಾಗುವವನಿಗೆ ಪ್ರತಿಭಟನೆಯ, ಬಂಡಾಯದ ಅನಿವಾರ್ಯತೆ ಮತ್ತು ಸಂದಿಗ್ಧತೆ ತಿಳಿದಿರಬೇಕು. ಇಲ್ಲಿ ಮನುಷ್ಯನ ಪ್ರೀತಿಸುವ ಮತ್ತು ತಿಳಿಯುವ ಶಕ್ತಿಯು ಎಷ್ಟೊಂದು ಮುಕ್ಕಾಗಿ ಹೋಗಿದೆಯೆಂಬುದನ್ನು ಹೇಳುತ್ತಲೇ, ಈ ಜನವೇ ಪೂರ್ಣವಾಗಿ ಮನುಷ್ಯರಾಗಿ ಅನಾವರಣಗೊಂಡಾಗ, ಎಷ್ಟೊಂದು ಪ್ರೀತಿಸಬಲ್ಲರು, ಎಷ್ಟೊಂದು ಗಾಢವಾಗಿ ತಿಳುವಳಿಕೆ ಪಡೆಯಬಲ್ಲರು ಎಂಬುದನ್ನು ಸೂಚಿಸುವ, ಕನವರಿಸುವ ಶಕ್ತಿಯೂ ಇರಬೇಕು. ಮಹಾದೇವರ ಬರವಣಿಗೆ ಪ್ರಾರಂಭಿಕ ಹಂತದಿಂದಲೂ ಈ ಎಲ್ಲ ಗುಣ ಸ್ವಭಾವಗಳನ್ನು ಬೇರೆ ಬೇರೆ ಸ್ತರದಲ್ಲಿ ಪ್ರಕಟಿಸುತ್ತಾ, ವಿಕಾಸಗೊಂಡಿದೆಯೆಂಬುದೇ ಅವರ ಸಾಹಿತ್ಯದ ವೈಶಿಷ್ಟ್ಯ ಮತ್ತು ಮಹತ್ವ. ಈ ಕಾರಣಕ್ಕಾಗಿಯೇ ಮಹಾದೇವ ದಲಿತರ ಬದುಕಿನ ಬಗ್ಗೆ ಬರೆಯುತ್ತಲೇ ಒಟ್ಟು ಸಮಾಜವನ್ನು, ಒಟ್ಟು ಚರಿತ್ರೆಯನ್ನು ಗ್ರಹಿಸಲು, ಅಭಿವ್ಯಕ್ತಿಸಲು ಪ್ರಯತ್ನಿಸುತ್ತಾರೆ. ದಲಿತರು ನಮ್ಮಗಳ ಮನಸ್ಸು ಪರಿಭಾವಿಸುವಷ್ಟು ಪ್ರತ್ಯೇಕರಲ್ಲ ಎಂದು ಸೂಚಿಸುವ ಕ್ರಮ ಕೂಡ ಇದಾಗಿರಬಹುದು.
ಈ ರೀತಿಯ ಗ್ರಹಿಕೆಯ ಸೂಚನೆಗಳೆಲ್ಲ ಅವರ ಮೊದಲ ಕಥಾ ಸಂಕಲನದಲ್ಲೇ ಇದೆ. ಗ್ರಸ್ತ, ಮಾರಿಕೊಂಡವರು ಇಂತಹ ಪುಟ್ಟ ಕತೆಗಳಲ್ಲಿನ ಕಥಾ ವಿನ್ಯಾಸವೆ ದೊಡ್ಡದಾಗಿದೆ. ಅವುಗಳು ಒಳಗೊಳ್ಳುವ ಪ್ರಪಂಚದ ವಿಸ್ತಾರ ಮತ್ತು ಸಂಕೀರ್ಣತೆ ಸಾಂಪ್ರದಾಯಕ ಸಣ್ಣಕತೆಯ ಅಳವಿಗೆ ಮೀರಿದ್ದೆ. ಗ್ರಸ್ತ ಕತೆಯಲ್ಲಿ ನಿರೂಪಕ ಆತನ ತಾಯಿ, ಆತನನ್ನು ಓದಿಸಿ ಬೆಳೆಸಿದ ಊರ ಗೌಡ-ಎಲ್ಲರೂ ಬರವಣಿಗೆಯಲ್ಲಿ ಸಿಕ್ಕಿಹಾಕಿಕೊಂಡವರೆ, ಅಪೂರ್ಣರೇ, ಅವರೊಳಗೇ ಮತ್ತು ಪರಸ್ಪರರಿಗೆ ಆದರೆ ಇವರೆಲ್ಲರಿಗೂ ಒಬ್ಬರೊಬ್ಬರನ್ನು ತಿಳಿಯುವ ಮತ್ತು ಪ್ರೀತಿಸುವ ಮತ್ತು ಅಷ್ಟೇ ಮುಖ್ಯವಾಗಿ ಸತ್ಯ ಹೇಳುವ ಶಕ್ತಿಯೂ ಇದೆ. ಹೀಗಾಗಿ ಇದು ದಲಿತನೊಬ್ಬನು ತನ್ನ ಸದ್ಯದ ಅವಸ್ಥೆಯನ್ನು ಮೀರಲು ಪ್ರಯತ್ನಿಸುತ್ತಲೇ, ತನ್ನ ಪ್ರತಿಭಟನೆ ಮತ್ತು ಪ್ರೀತಿಯಲ್ಲಿ ಎಲ್ಲರನ್ನು ಒಳಗೊಳ್ಳುವ ಪ್ರಯತ್ನದ ಕತೆಯೂ ಆಗಿದೆ.
ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ ಮುಂತಾಗಿ, ಮಾರಿಕೊಂಡವರು ಕತೆಗಳ ಪಾತ್ರ ಮತ್ತು ಕಥಾವಿನ್ಯಾಸವೂ ಇದೇ ರೀತಿಯದು. ಮೂಡಲಸೀಮೆ ಕತೆಯಲ್ಲಿ ಊರೊಳಗೆ ಆಗುತ್ತಿರುವ ಬದಲಾವಣೆಯು, ದಲಿತ ಮನಸ್ಸಿನ ಹೊಸ ಆಸೆ ಆಕಾಂಕ್ಷೆಗಳು ಒಟ್ಟಿಗೆ ಪ್ರಕಟವಾಗುತ್ತದೆ. ಸ್ಕೂಲಿಗೆ ತಮ್ಮ ಜಾತಿಯವರು ಮೇಷ್ಟರಾಗಿ ಬಂದಿದ್ದಾರೆ ಎಂದು ತಾಯಿಯ ಹತ್ತಿರ ಬೀಗುತ್ತಿರುವ ರಾಜನೇ ಮುಂದೆ ಮಹಾದೇವರ ಕೃತಿಗಳಲ್ಲಿ ಶಿವು ಆಗಿ ಪ್ರಕಟವಾಗುತ್ತಾನೆ. ಗಂಡು-ಹೆಣ್ಣಿನ ಸಂಬಂಧದ ಪ್ರಶ್ನೆ ಬಂದಾಗಲೆಲ್ಲ, ಅದನ್ನು ಸರಿಯಾಗಿ ಗ್ರಹಿಸಬೇಕಾದರೆ ಸಮಾಜದ ಸಾಂಪ್ರದಾಯಿಕ ನೀತಿ-ರಿವಾಜುಗಳ ಚೌಕಟ್ಟಿನಾಚೆಯೇ ಗ್ರಹಿಸಬೇಕು ಎಂಬ ಕುಸುಮಬಾಲೆಯ ಕೃತಿಯ ತಿಳುವಳಿಕೆಯ ಬೀಜಗಳು ಮಾರಿಕೊಂಡವರ ಕತೆಯಲ್ಲಿನ ಲಕ್ಷ್ಮಿ, ಕಿಟ್ಟಪ್ಪ, ಬೀರಪ್ಪರ ಮನೋವ್ಯಾಪಾರದಲ್ಲಿ ಕಾಣುತ್ತದೆ.
ಒಡಲಾಳದ ಪುಟ್ಟಗೌರಿ ದಲಿತ ಹಟ್ಟಿಯೊಂದರಲ್ಲಿ ಗೋಡೆಯ ಮೇಲೆ ನವಿಲಿನ ಚಿತ್ರ ಬಿಡಿಸುವುದನ್ನು ಕನ್ನಡ ಓದುಗರೆಲ್ಲರು ಕಂಡು ಆನಂದಿಸಿದ್ದಾರೆ. ಆದರೆ ಮನುಷ್ಯನ ಕನಸು ಕಾಣುವ ಶಕ್ತಿಯ ಬಗ್ಗೆ ಮಹಾದೇವರು ಅಮಾಸ ಕತೆಯಲ್ಲೆ ನೀಡಿರುವ ಸೂಚನೆಗಳನ್ನು ಅಷ್ಟಾಗಿ ಗಮನಿಸಿದಂತಿಲ್ಲ. ಈ ಮಾತುಗಳನ್ನು ನೋಡಿ “ಕಂಡದ್ದು ಬಣ್ಣ ಬಣ್ಣದ ಬ್ರಿಂಗದ ಕಾಗದದಲ್ಲಿ ಗಂಡಭೇರುಂಡ ಕಿರೀಟ ಮುಂತಾದ ಅವಚವಿ ಕೊರೆಯುತ್ತಿದ್ದುದು. ಅಲ್ಲಿ ಮಾಡಿಟ್ಟದೆಲ್ಲ ಕಣ್ಣಿಗೆ ಅಚ್ಚುಮೆಚ್ಚಾಗಿತ್ತು.’’
ಈ ನೋಟವನ್ನು ಓದುಗರು ಗಮನಿಸದೇ ಹೋಗಿದ್ದರೆ, ಅದಕ್ಕೆ ಈ ಸಂಗ್ರಹದ ಬರವಣಿಗೆಯ ಗುಣವು ಕಾರಣವಿರಬೇಕು. ಮಹಾದೇವರು ಮುಂದಿನ ಬರವಣಿಗೆಯಲ್ಲಿ ತೋರಿಸಿದ ನಿರಾಳ, ಲಾಲಿತ್ಯ, ಮೆಲುದನಿ, ಹಾಸ್ಯ – ಇಲ್ಲಿಯ ಕತೆಗಳಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಇಲ್ಲಿಯ ಬರವಣಿಗೆಯ ಗುಣ ಮುಖ್ಯವಾಗಿ ‘ದಾಖಲೆಯ’ ಸ್ವರೂಪದ್ದು. ನಿರ್ಲಿಪ್ತತೆ ಮತ್ತು ವಸ್ತುನಿಷ್ಠತೆ ಇಷ್ಟವಾದರೂ, ಎಲ್ಲ ನೋಟಗಳು ಸೂಚನೆಯಲ್ಲೇ ಮುಗಿಯುತ್ತವೇನೋ ಎಂಬ ಅನುಮಾನವೂ ಬರುತ್ತದೆ. ಉತ್ತಮ ಕಲಾಕೃತಿಯೊಂದು, ಕೃತಿಯೊಳಗೆ ತಾನು ಪೃಥಕ್ಕರಿಸುವ ಕಾಲದಿಂದ ಬಿಡುಗಡೆಗೊಳ್ಳುವುದಕ್ಕೆ ಎಲ್ಲ ಉಪಾಯಗಳನ್ನು ಕೃತಿಯ ರಚನೆಯಲ್ಲೇ ಒಳಗೊಂಡಿರುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಇಲ್ಲಿಯ ಎಲ್ಲ ಕತೆಗಳಿಗೂ ಈ ಮಾತು ಅನ್ವಯಿಸುವುದು ಕಷ್ಟವಾಗುತ್ತದೆ. ‘ಡಾಂಬರು ಬಂದುದು’ವಿನಂತಹ ಕತೆಗೆ, ಕತೆಗಳು ನಡೆದ ಕಾಲದಿಂದ ಬಿಡುಗಡೆಯೇ ಇಲ್ಲದಂತೆ ಕಾಣುತ್ತದೆ.
‘ಒಡಲಾಳ’ ಕಥಾನಕವನ್ನು ಈಗಾಗಲೇ ಕನ್ನಡ ಸಾಹಿತ್ಯ ಲೋಕ ಕ್ಲಾಸಿಕ್ ಎಂದು ಗುರುತಿಸಿಬಿಟ್ಟಿದೆ. ಎಷ್ಟರ ಮಟ್ಟಿಗೆಂದರೆ ಈ ಕೃತಿಯ ಸಾರಾಂಶ ಅಥವಾ ಮಹತ್ವವನ್ನು ಮತ್ತೆ ಹೇಳುವುದು ಅನಗತ್ಯ ಎನಿಸುವಷ್ಟು. ಸಾಕವ್ವನ ಪರಿವಾರದ ಸದಸ್ಯರೆಲ್ಲ ಒಟ್ಟಿಗೇ ಕುಳಿತು ಕದ್ದ ಕಡ್ಲೆಕಾಯಿ ತಿನ್ನುವುದು, ಪುಟ್ಟಗೌರಿ ನವಿಲು ಬಿಡಿಸುವುದು, ಇಂತಹ ಪ್ರಕರಣಗಳಲ್ಲಿ ಈಗಾಗಲೇ ಕನ್ನಡ ಓದುಗರ ಸಂವೇದನೆಯಲ್ಲಿ ಶಾಶ್ವತ ಸ್ಥಾನ ಪಡೆದಿವೆ. ನೂರಾರು ಪ್ರತಿಭಟನಾ ಬಂಡಾಯದ ಕತೆಗಳನ್ನು ಬರೆದರೂ, ಒಡಲಾಳದಂತಹ ಶುದ್ಧಮಾನವ ಪ್ರೀತಿಯ ಕತೆಯ ಪ್ರಭಾವ ಮುಕ್ಕಾಗಲಾರದು. ಒಡಲಾಳವು ದಲಿತರ, ಬಂಡಾಯದ, ಪ್ರತಿಭಟನೆಯ ಒಡಲಾಳದ ಕತೆಯೆಂದು ತಿಳಿಯುವ ಮುನ್ನವೇ ಓದುಗ ಸಂವೇದನೆಯ ಸ್ತರದಲ್ಲೇ ದಲಿತರ ಸ್ಥಿತಿಯ ಬಗ್ಗೆ, ಅವರ ಆಸೆ-ಆಕಾಂಕ್ಷೆ ಗಳ ಬಗ್ಗೆ ಇತ್ಯಾತ್ಮಕ ಧೋರಣೆಯ ಮನುಷ್ಯನಾಗಿ ಪರಿವರ್ತನೆ ಹೊಂದಿರುತ್ತಾನೆ ಎಂಬುದೇ ಈ ಕೃತಿಯ ಸಾಧನೆ. ಹಿಂದಿನ ಕಥಾಸಂಕಲನಕ್ಕೆ ಹೋಲಿಸಿದರೆ ಮಹಾದೇವ ಅವರ ಈ ಕೃತಿಯ ನಿರೂಪಣೆಯಲ್ಲಿ ಅಡಕವಾಗಿರುವ, ಲಾಲಿತ್ಯ, ಹಾಸ್ಯ, ಮೆಲುದನಿ, ನಮ್ಮ ಗಮನವನ್ನು ಸೆಳೆಯುತ್ತದೆ. ಇಲ್ಲಿಯ ನಿರೂಪಣೆ ಕನ್ನಡ ಕಥನ ಸಾಹಿತ್ಯದ ಇಬ್ಬರು ಶ್ರೇಷ್ಠ ಬರಹಗಾರರಾದ ಮಾಸ್ತಿ ಮತ್ತು ಕುವೆಂಪುರವರನ್ನು ಮತ್ತೆ ಮತ್ತೆ ನೆನಪಿಗೆ ತರುತ್ತದೆ. ಮಹಾದೇವರ ಈ ಕೃತಿಯಲ್ಲಿ ಹಾಸ್ಯ, ತಮಾಷೆ, ಮೆಲುದನಿಯಿದ್ದರೂ ಅದು ಕಥಾವಸ್ತುವಿನಲ್ಲಿ ಅಡಕವಾಗಿರುವ ವಿಷಾದ ಭಾವಕ್ಕೆ ಅಡ್ಡಿ ಬರುವುದಿಲ್ಲ. ತೇಜಸ್ವಿಯವರ ಕತೆಗಳಲ್ಲಿ ಒಮ್ಮೊಮ್ಮೆ ಆಗಿಬಿಡುವಂತೆ ಅನಗತ್ಯ ವ್ಯಂಗ್ಯದ ಕಡೆಗೆ ಹೊರಳಿಬಿಡುವುದಿಲ್ಲ.
ಪುನರುಕ್ತಿಯ ಅಪಾಯವನ್ನು ಒಪ್ಪಿಕೊಂಡೇ ಒಡಲಾಳದ ಕತೆಯನ್ನು ಸಂಗ್ರಹಿಸಬೇಕಾಗಿದೆ. ಸಾಕವ್ವ ಮತ್ತು ಅವಳ ಸಕಲ ಪರಿವಾರವು ದಾರಿದ್ರ್ಯದೊಡನೆಯೇ, ಬದುಕಿನ ಎಲ್ಲ ಚೆಲುವನ್ನು ಅನುಭವಿಸುತ್ತಾ ಸೃಷ್ಟಿಸುತ್ತಾ ಬದುಕುತ್ತಿರುವ ಕತೆಯಿದು. ಅವರ ಪ್ರತಿಭಟನೆ-ಬಂಡಾಯ ಹಾಗೆಂದು ಕಾಣದಷ್ಟು ಅವರು ಬದುಕುವ ಶೈಲಿಯಲ್ಲೆ ಬೆರೆತು ಹೋಗಿದೆ. ಮನುಷ್ಯ ಬದುಕುಳಿಯುವ ಪ್ರಶ್ನೆ ಬಂದಾಗ, ಒಡಲಾಳದ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವಾಗ ನಾವು ನಂಬಿರುವ ಸತ್ಯ, ನ್ಯಾಯ, ಧರ್ಮದ ಕಲ್ಪನೆಗಳಲ್ಲಿ ಹೇಗೆ ಅಸಂಗತವಾಗಿ ಕಾಣುತ್ತವೆಂಬುದನ್ನು ಈ ಕೃತಿ ಬಳಸುವ ಶೈಲಿಯಲ್ಲಿ ಕಳ್ಳತನ, ಪೋಲೀಸು ವಿಚಾರಣೆ ಪ್ರಕರಣಗಳ ಮೂಲಕ ಸೂಚಿಸುತ್ತದೆ. ಸಾಕವ್ವನಿಗೆ ತನ್ನ ಪರಿವಾರದ, ಕುಟುಂಬದ ಪಾಲನೆಯ ಬಗ್ಗೆ ಇರುವ ಆಸೆ ಯಾವ ಮಹಾಸಾಮ್ರಾಜ್ಞಿಯ ಆಸೆಗೂ ಕಡಿಮೆಯಾದುದಲ್ಲ. ಇಲ್ಲದ ಆಸ್ತಿಯ ಹಂಚಿಕೆ-ವಿಲೇವಾರಿ ಬಗ್ಗೆ ಅವಳು ಅದೆಷ್ಟು ಅರ್ಥಪೂರ್ಣವಾಗಿ ಗೊಣಗಾಡಬಲ್ಲಳು. ಸ್ಥಿತ್ಯಂತರದ ಕಾಲದಲ್ಲಿ ಬದುಕುತ್ತಿರುವ ಸಾಕವ್ವನ ಪರಿವಾರಕ್ಕೆ ಹೊಸಕಾಲದ ಗಾಳಿ ಎತ್ತ ಬೀಸುತ್ತಿದೆ ಎಂಬುದು ಗೊತ್ತಿದೆ. ಆದರೆ ಅದಕ್ಕೆಲ್ಲ ಸ್ಪಂದಿಸಲು ಮೊದಲಿಗೆ ಒಡಲಾಳದ ಅಂತಿಮ ಆಸೆ ಇಂಗಬೇಕಾಗಿದೆ. ಅದು ಇಂಗುವ ತನಕ ಅವರ ಬದುಕುವ ಶೈಲಿ, ಪ್ರತಿಭಟನೆ ಎಲ್ಲವೂ ಇಲ್ಲಿ ಬದುಕುಳಿಯುವುದಕ್ಕೆ ಮಾಡಲೇಬೇಕಾದ ಉಪಾಯವಾಗಿ, ಹುಡುಕಾಟವಾಗಿ ಮಾತ್ರ ಕಾಣುತ್ತದೆ. ಈ ಕೃತಿಯಲ್ಲಿ ಮಹಾದೇವ ಪ್ರತಿಭಟನೆ-ಬಂಡಾಯವೆನ್ನುವುದು ಎಷ್ಟೊಂದು ಪ್ರೀತಿಯ, ಎಷ್ಟೊಂದು ಅಂತಃಕರಣದ ಕ್ರಿಯೆಯೆಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.
ಇದೊಂದು ಕೃತಿಯ ಮೂಲಕವೇ ಮಹಾದೇವ ಪರೋಕ್ಷವಾಗಿ ಮುಂದಿನ ದಲಿತ ಲೇಖಕರು ಹೇಗೆ ಕಥಾಸಾಹಿತ್ಯ ರಚಿಸಬೇಕೆಂಬ ಪ್ರಶ್ನೆಯನ್ನು ಎತ್ತಿದರು. ಕುವೆಂಪು, ಕಾರಂತ, ಅಡಿಗ, ಮಾಸ್ತಿ – ಇಂತಹ ದೊಡ್ಡ ಲೇಖಕರ ಹಾಗೇ ಮಹಾದೇವ ಕೂಡ ಈ ಕೃತಿಯ ಮೂಲಕ ಹೊಸ ಸಂವೇದನೆಯೊಂದಕ್ಕೆ ಕಾರಣವಾದರು. ಮುಂದಿನ ದಲಿತ ಲೇಖಕರೇನಿದ್ದರೂ, ಈ ಸಂವೇದನೆಯನ್ನು ತಮ್ಮ ಬೆನ್ನಿಗೆ ಇಟ್ಟುಕೊಂಡು ಹೊಸ ಹೊಸ ವಿವರಗಳನ್ನು, ಹೊಸ ಹೊಸ ಸನ್ನಿವೇಶಗಳನ್ನು ಜೋಡಿಸಿದರಷ್ಟೆ. ಇದನ್ನು ಮಹಾದೇವರ ನಂತರದ ದಲಿತ ಲೇಖಕರ ಸಾಧನೆಯನ್ನು ಉಪೇಕ್ಷೆಯಾಗಿ ಕಾಣಲು ಆಡುವ  ಮಾತೆಂದು ಭಾವಿಸಬಾರದು. ಒಳ್ಳೆಯ ಲೇಖಕರೆಲ್ಲರೂ ಹೊಸ ಸಂವೇದನೆಯ ನಿರ್ಮಾಣಕ್ಕೆ ಕಾರಣರಾಗುವುದಿಲ್ಲ. ಹೊಸ ಸಂವೇದನೆಯ ನಿರ್ಮಾಣದ ಸಂದರ್ಭದಲ್ಲಿ ಲೇಖಕನೊಬ್ಬನ ಪ್ರತಿಭೆ, ಕಾಣ್ಕೆಯಿರುವಂತೆ ಆತ ಬರೆದ ಸಂದರ್ಭದ ಒತ್ತಾಸೆಯೂ ಇರುತ್ತದೆ. ಇವೆಲ್ಲವನ್ನೂ ಹಿನ್ನೆಲೆಯಾಗಿಟ್ಟುಕೊಂಡು ಗಮನಿಸಿದಾಗ, ಮಹಾದೇವ ನಮ್ಮ ಉಳಿದ ಮಹತ್ವದ ಲೇಖಕರಂತೆ ಹೊಸದೊಂದು ಸಂವೇದನೆಯ ನಿರ್ಮಾಣಕ್ಕೆ ಕಾರಣರಾದ ಲೇಖಕರು ಎನಿಸುತ್ತದೆ. ಈ ಹೊಸ ಸಂವೇದನೆ ಕನ್ನಡ ಓದುಗರ ಅರಿವನ್ನೂ, ಕಲ್ಪಕತೆಯನ್ನು ಮತ್ತಷ್ಟು ವಿಸ್ತಾರಗೊಳಿಸಿ, ಸ್ಪೂರ್ತಿಗೊಳಿಸಿದ್ದರಿಂದಲೇ, ಮಹಾದೇವರಿಗೆ ಕನ್ನಡ ಕಥನ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿರುವುದು.
ಮಹಾದೇವರ ಮೂರನೆಯ ಕೃತಿ ‘ಕುಸುಮಬಾಲೆ’ಯ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲ. ಜಿ.ರಾಜಶೇಖರರಂತಹ ಗಣ್ಯ ವಿಮರ್ಶಕರು ಇದನ್ನBad Faith ಕೃತಿಯೆಂದು ಗುರುತಿಸಿದ್ದರೆ, ಲಂಕೇಶರಂತಹ ಹಿರಿಯ ಲೇಖಕರು, ದೇವನೂರರ ಸಮಗ್ರ ಬರವಣಿಗೆಗೆ ಮುನ್ನುಡಿ ಬರೆಯುವ ಸಂದರ್ಭದಲ್ಲೇ ಕುಸುಮಬಾಲೆಯನ್ನು ಮತ್ತೆ ಓದಿದರೂ ತಮ್ಮ ಚಿಂತನೆಯ ಆಳಕ್ಕೆ ಅದು ಇಳಿಯಲಿಲ್ಲವೆಂದು ಹೇಳುತ್ತಾರೆ. ಈ ಅಭಿಪ್ರಾಯಗಳು ‘ಅತಿ’ ಎನ್ನುವಂತೆ ಕುಸುಮಬಾಲೆಯನ್ನು ದೇಸೀ ಕಥನಗಳನ್ನು ಓದುವಂತೆ ಓದಬೇಕೆಂದು ಹೇಳುವವರು ಇದ್ದಾರೆ. ಕೃತಿಯಲ್ಲಿ ಅಡಕವಾಗಿರುವ ನಿರೂಪಣಾ ವೈವಿಧ್ಯ ಮತ್ತು ಭಾಷಾಪ್ರಯೋಗಗಳ ಬಗ್ಗೆ ಗಮನ ಸೆಳೆಯುವವರು ಕೂಡ ಇದೊಂದು ಮಹತ್ವದ ಕೃತಿಯೆಂದೇ ಭಾವಿಸುತ್ತಾರೆ. ಆದರೆ ಯಾವ ವಿಮರ್ಶಕನೂ, ವ್ಯಾಖ್ಯಾನಕಾರನೂ, ಈ ಕೃತಿ ಇಷ್ಟೇ, ಇದೇ ಇದರ ರಚಿತ ಸ್ವರೂಪ ಎಂದು ಬೆರಳು ಮಾಡಿ ಹೇಳಿಲ್ಲ. ಹಾಗೆ ಹೇಳುವ ಅಗತ್ಯವೂ ಇಲ್ಲ. ಈ ಎಲ್ಲ ಅಭಿಪ್ರಾಯಗಳನ್ನು ಒಪ್ಪಿಕೊಂಡೇ, ಗಮನಿಸಿಯೇ ಕುಸುಮಬಾಲೆ ಮಹತ್ವದ ಕೃತಿಯೆಂದು ಹೇಳಬೇಕಾಗುತ್ತದೆ. ಏಕೆಂದರೆ ಮೊದಲೇ ಹೇಳಿದ ಹಾಗೆ, ಒಬ್ಬ ಮುಖ್ಯ ಲೇಖಕನ ಕೆಲಸ ಹೊಸ ಸಂವೇದನೆಯ ನಿರ್ಮಾಣ ಮತ್ತು ಹಾಲಿ ಇರುವ ಸಂವೇದನೆಯ ಸೂಕ್ಷ್ಮವಾಗಿಸುವಿಕೆ. ‘ಕುಸುಮಬಾಲೆ’ಯ ಬಗ್ಗೆ ಬಂದಿರುವ ಎಲ್ಲ ರೀತಿಯ ಅತಿ ಅಭಿಪ್ರಾಯಗಳು ಸೇರಿವೆ. ಈ ಕೃತಿ ಹೊಸ ಸಂವೇದನೆಯ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಎಂಬುದನ್ನೇ ಸೂಚಿಸುತ್ತದೆ ಎಂದು ನನ್ನ ಅನಿಸಿಕೆ.
‘ಕುಸುಮ ಬಾಲೆ’ ಒಂದು ದೃಷ್ಟಿಯಿಂದ ಕತೆಯ ಹಂಗನ್ನು ತೊರೆದ ಕಾದಂಬರಿ ಎಂದು ಹೇಳಬಹುದು. ಹಾಗೆಂದರೆ ಕತೆ ಇಲ್ಲವೆಂದಲ್ಲ, ಘಟನೆ ಇಲ್ಲವೆಂದಲ್ಲ. ಲೇಖಕನೇ ಕತೆಯ ಸ್ವಾರಸ್ಯವನ್ನೆಲ್ಲ ಕೇವಲ ಏಳೆಂಟು ವಾಕ್ಯಗಳಲ್ಲಿ ನಾಂದಿ ರೂಪದಲ್ಲಿ ಹೇಳಿ, ಕತೆಯನ್ನು ಮೀರಿದ್ದಕ್ಕೆ ಓದುಗನನ್ನು ಸಿದ್ಧಗೊಳಿಸುವಂತಿದೆ. ಅಕ್ಕಮಹಾದೇವಿ, ಆಕೆಗೆ ಜೀತದಾಳಿಂದ ಹುಟ್ಟಿದ ಮಗ ಯಾಡ, ನಂತರ ಅವನು ಬೆಳೆದು ಯಾಡೇಗೌಡನಾಗುವುದು, ಅವನ ಮಗ ಸೋಮಪ್ಪ ಊರಿಗೆ ದೊಡ್ಡವನು. ಅವನ ಮಗಳು ಕುಸುಮ, ಅವಳಿಗೆ ಹೊಲೆಯರ ಚನ್ನನ ಮೂಲಕ ಮಗು, ಚೆನ್ನನ ಕೊಲೆ, ಅದನ್ನು ಅರಿಯದವರು ಅವನಿಗಾಗಿ ಕಾಯುವ ಪರಿ. ಇಷ್ಟು ಕತೆಯ ಹಂದರ. ಈ ಹಂದರ ಪಡೆಯಬಹುದಾದ ಕಾಲಾಂತರದ, ದೇಶಾಂತರದ ಸ್ವರೂಪವೇ ಕೃತಿಯ ಜೀವಾಳ. ಈ ಜೀವಾಳವು ಕತೆಯನ್ನು ಪ್ರವೇಶಿಸಲು ಅನೇಕ ಕಿಟಕಿಗಳನ್ನು ತೆರೆಯುತ್ತದೆ. ಯಾವ ಕಿಟಕಿಯ ಮೂಲಕ ನೀವು ಕತೆ ಹೊಕ್ಕರೂ, ಕೊನೆಗೆ ಅನುಭವಿಸುವ ಜೀವಂತಿಕೆಯ ಮತ್ತು ವಿಷಾದದ ಭಾವ ಮಾತ್ರ ಬೇರೆಯಾಗುವುದಿಲ್ಲ. ತಟಕ್ಕನೆ ನೆನಪಿಗೆ ಬರುವುದು ಮಹಾಭಾರತದ ಸ್ವರೂಪ. ಧರ್ಮರಾಯ, ದ್ರೌಪದಿ, ದುರ್ಯೋಧನ, ಕರ್ಣ, ಕುಂತಿಯರ ಮೂಲಕವಾದರೂ ಸರಿಯೇ ನೀವು ಭಾರತದ ಕತೆ ಪ್ರವೇಶಿಸಬಹುದು. ಕೊನೆಗೆ ಅನುಭವಿಸಿದ ಭಾವ ಮಾತ್ರ ಒಂದೇ ಆಗಿರುತ್ತದೆ. ಕುಸುಮಬಾಲೆಯ ಸ್ವರೂಪ ಅಂತಹುದು. ಈ ಸ್ವರೂಪವನ್ನು ಆಧುನಿಕ ಕನ್ನಡದ ಸಂದರ್ಭದಲ್ಲಿ ಕುವೆಂಪು ಅವರ ಕಾದಂಬರಿಗಳು ಉಪಯೋಗಿಸಿಕೊಂಡಿದೆ. ಇಲ್ಲಿಯ ಬದುಕನ್ನು, ಈ ಬದುಕಿನ ಸತ್ಯವನ್ನು ಸ್ಪಷ್ಟಪಡಿಸುತ್ತದೆ. ಈ ಸ್ವರೂಪ ಸೂಚಿಸುವ ಬಹುಮುಖೀ ಜೀವನ ಸಾಧ್ಯತೆಗಳ ಅರಿವಿನ ಪ್ರಕಾರ- ಈ ಕೃತಿಯಲ್ಲಿಯೂ ವ್ಯಕ್ತವಾಗಿರುವಂತೆ- ಸಂಕರವೆನ್ನುವುದು ಸಂಬಂಧ, ಹಾಗಾಗಿ ಅದು ಮನುಷ್ಯನ ಸಹಜ ಸ್ಥಿತಿ ಮತ್ತು ಸಾಧ್ಯತೆ, ಆದರೆ ಬಹುಮುಖೀ ಸಾಧ್ಯತೆಗಳನ್ನು ನೀವು ಒಪ್ಪದೇ ಹೋದರೆ ಸಂಕರ-ಸಂಬಂಧವೆನ್ನುವುದು ಮಹಾಸಮಸ್ಯೆ. “ನೋಡಿ ಇಲ್ಲಿಯ ಬದುಕನ್ನು ನೀವು ಹೀಗೆ ಅನೇಕ ಮಗ್ಗುಲುಗಳಿಂದ ಪ್ರವೇಶಿಸಬಹುದು, ನೋಡಬಹುದು, ನಿಮ್ಮ ಆಯ್ಕೆ  ಎಂತಹುದು’’ ಎಂದು ಕೃತಿ ಬೇರೆ ಬೇರೆ ಸ್ತರಗಳಿಗೆ, ಬೇರೆ ಬೇರೆ ಕಾಲಕ್ಕೆ, ಸೇರಿದ ಪಾತ್ರಗಳ ಮೂಲಕ, ತನ್ನ ಭಾಷಾ ಪ್ರಯೋಗದ ಮೂಲಕ, ನಿರೂಪಣಾ ವೈವಿಧ್ಯದ ಮೂಲಕ ಓದುಗರನ್ನು ಕೆಣಕುತ್ತದೆ. ಕೆಣಕುವುದು (Teasing ಎನ್ನುವ ಅರ್ಥದಲ್ಲಿ) ಈ ಕೃತಿಯ ಒಂದು ಮುಖ್ಯಗುಣ.

ಬದುಕಿನ ಬಹುಮುಖೀ ಸಾಧ್ಯತೆಗಳನ್ನು ಒಪ್ಪುವುವೆಂದರೆ, ಭಾಷೆಯ ಬಳಕೆ ಮತ್ತು ನಿರೂಪಣೆಯಲ್ಲಿ ಕೂಡ ವೈವಿಧ್ಯವನ್ನು ನಾವು ಸ್ವಾಗತಿಸಬೇಕಾಗುತ್ತದೆ ಎಂದು ಈ ಕೃತಿ ಹೇಳುತ್ತದೆ. ಹಳೆ ಮೈಸೂರಿನ ಒಂದು ಭಾಗದ, ಒಂದು ಜನಾಂಗದ ನುಡಿಗಟ್ಟನ್ನು ಬಳಸುವಷ್ಟರ ಮಟ್ಟಿಗೆ ಇಲ್ಲಿಯ ಭಾಷಾ ಪ್ರಯೋಗ ಸೀಮಿತವಾಗಿಲ್ಲ, ವಾಕ್ಯರಚನೆ, ಪ್ಯಾರಾಗಳ ರಚನೆಯ ಹೊಸತನವು ಕೂಡ ಕೃತಿಯೊಳಗೆ ಅಡಕವಾಗಿದೆ. ವಿಮರ್ಶಕರು ಈಗಾಗಲೇ ಗುರುತಿಸಿರುವಂತೆ ಈ ರೀತಿಯ ವಾಕ್ಯ ರಚನೆ ಕೂಡ ವಾಸ್ತವವನ್ನು ಬೇರೊಂದು ರೀತಿಯಲ್ಲಿ ಗ್ರಹಿಸಲು ಓದುಗರನ್ನು ಪ್ರೇರೇಪಿಸುತ್ತದೆ. ಇದರ ಜೊತೆಗೇ ಸದ್ಯದ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಶಿಷ್ಟಭಾಷೆಯ ಕೆಲವು ಸ್ತರಗಳನ್ನು ಕೂಡ ಕೃತಿ ಉಪಯೋಗಿಸಿಕೊಳ್ಳುತ್ತದೆ. ಒಂದರ ಪಕ್ಕ ಮತ್ತೊಂದಿಟ್ಟು ಶೈಲೀಕೃತ ಭಾಷೆಯ ಮಿತಿಗಳನ್ನು ಸೂಚಿಸುತ್ತದೆ. ಶೈಲಿಯ ದೃಷ್ಟಿಯಿಂದ ಈ ಕೃತಿ ಅಳವಡಿಸಿಕೊಂಡಿರುವ ವೈವಿಧ್ಯವನ್ನು ಎನ್.ಎಸ್. ರಘುನಾಥರು ಪಟ್ಟಿಮಾಡಿ ತೋರಿಸಿದ್ದಾರೆ. ಹರಿಕಥೆ ಶೈಲಿ, ನಾಟಕೀಯ ಶೈಲಿ, ಅರೆಗದ್ಯದ ಶೈಲಿ, ಉರ್ದುಶೈಲಿಯ ಕನ್ನಡ-ಹೀಗೆ ಹತ್ತು ಹಲವು ಶೈಲಿಗಳ ಬಳಕೆ ಇಲ್ಲಿದೆ. ಈ ಎಲ್ಲ ಪರಿಕರಗಳ ಮೂಲಕ ಲೇಖಕ ಕಥಾವಸ್ತುವಿಗೆ ತಾನು ಬಯಸುವ ದೇಶಾಂತರ, ಕಾಲಾಂತರದ ಆಯಾಮವನ್ನು ಒದಗಿಸಲು ಸಾಧ್ಯವಾಗಿದೆ. ಜನಪದ ಕಥನದ, ಜನಪದ ಸಾಹಿತ್ಯದ ಪಾತ್ರ ವಿನ್ಯಾಸದ ಬಳಕೆಯೂ ಈ ಕೃತಿಯಲ್ಲಿ ಅಡಕವಾಗಿದೆ. ಇದೆಲ್ಲವೂ ಸೇರಿಕೊಂಡೆ ಕೃತಿಗೆ ಪುರಾಣದ ಸಾಂದ್ರತೆ ದಕ್ಕಿದಂತಿದೆ.
ಕಾದಂಬರಿಯ ಕಥಾವಸ್ತು ತೀರಾ ಸಮಕಾಲೀನವಾದ್ದರಿಂದ ಬಹುತೇಕ ಓದುಗರು-ವಿಮರ್ಶಕರು ಕೃತಿಯ ಘಟನಾವಳಿಗಳ ವಿವರಣೆ-ವರ್ಣನೆಯಲ್ಲಿ ತೃಪ್ತಿಪಟ್ಟಂತೆ ಭಾಸವಾಗುತ್ತದೆ. ಇದೇನೇ ಇರಲಿ ಕುಸುಮಬಾಲೆ, ಎಷ್ಟೇ ಸೋಪಜ್ಞ ಕೃತಿಯಾದರೂ, ಒಂದೇ ಒಂದು ಕೃತಿಯ ಮೂಲಕ ಹೊಸ ಅಬಿsವ್ಯಕ್ತಿ ಕ್ರಮದ ಸಾಧ್ಯಾಸಾಧ್ಯತೆಗಳ ಬಗ್ಗೆ ಓದುಗರನ್ನು ಒಪ್ಪಿಸುವುದು ಕಷ್ಟ. ನಮ್ಮಲ್ಲಿ ಹೊಸ ರೀತಿಯಲ್ಲಿ ಬರೆದವರೆಲ್ಲ-ಬೇಂದ್ರೆ, ಅಡಿಗ-ಸತತವಾಗಿ ಬರೆದು ತಮ್ಮ ಪ್ರಯೋಗಶೀಲತೆಗೆ ಕಾಲಾನುಕ್ರಮದಲ್ಲಿ ಸಫಲ ರೂಪವೊಂದನ್ನು ಕೊಟ್ಟು, ಅವರವರ ಕೃತಿ-ಆಕೃತಿಗಳನ್ನು ಪರಂಪರೆಯ ಭಾಗವಾಗಿಸಿದರು. ಈ ಜವಾಬ್ದಾರಿಯನ್ನು ಹೊಸ ರೀತಿಯ ಕೃತಿ ಬರೆದ ಲೇಖಕನೇ ಮಾಡಬೇಕೆಂದು ವಾದಿಸುವುದು ತಪ್ಪಾದರೂ ಮಹಾದೇವರಂತಹ ಮಹತ್ವದ ಲೇಖಕರ ಸಾಂಸ್ಕೃತಿಕ ಜವಾಬ್ದಾರಿಯ ಪ್ರಶ್ನೆಯೂ ಈ ನಿರೀಕ್ಷೆಯಲ್ಲಿ ಅಂತರ್ಗತವಾಗಿದೆ ಎಂಬುದನ್ನು ಸೂಚಿಸಲೇಬೇಕಾಗಿದೆ.
ಈ ದೃಷ್ಟಿಯಿಂದ ನೋಡಿದಾಗ ಮಹಾದೇವ ನಂತರದ ಲೇಖಕರ ಮೇಲೆ, ವಸ್ತುವಿನ ಆಯ್ಕೆಯನ್ನು ಕುರಿತಂತೆ ಬೀರಿದಷ್ಟು ಪರಿಣಾಮವನ್ನು, ತಂತ್ರ, ಆಕೃತಿಯ ದೃಷ್ಟಿಯಿಂದ ಬೀರಿದಂತಿಲ್ಲ. ಅಲ್ಲೊಂದು ಇಲ್ಲೊಂದು ಅಪವಾದ ಬಿಟ್ಟರೆ, ದಲಿತ ಕತೆಗಾರರು ಸೇರಿದಂತೆ ಬಹುತೇಕ ಹೊಸ ತಲೆಮಾರಿನ ಕತೆಗಾರರು ನವೋದಯ, ನವ್ಯಮಾರ್ಗದವರು ಹಾಕಿಕೊಟ್ಟ ವಾಸ್ತವವಾದಿ ಗದ್ಯ ಮತ್ತು ತರ್ಕದ ರಾಜ ಮಾರ್ಗದಲ್ಲಿ ಬರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊನ್ನೆ ಮೊನ್ನೆ ತಾನೇ ಐವತ್ತು ತಲುಪಿರುವ ದೇವನೂರ ಮಹಾದೇವರ ಮುಂದಿನ ಬರವಣಿಗೆಯ ಮತ್ತು ಅವರ ಬರವಣಿಗೆಯಿಂದ ಆಳವಾದ ಪ್ರೇರಣೆ ಪಡೆದವರ, ಪಡೆಯಬಹುದಾದವರ ಬರವಣಿಗೆಯೂ ಕುತೂಹಲ ಹುಟ್ಟಿಸುತ್ತದೆ.