ದೇವನೂರ ಮಹಾದೇವರ ಸಂದರ್ಶನ -ಸಂದರ್ಶಿಸಿದವರು: ಕಿಕ್ಕೇರಿ ನಾರಾಯಣ ಸಂವಾದ ಪತ್ರಿಕೆಗಾಗಿ

samvada cover
[ ಕುಸುಮಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದ ಸಂದರ್ಭದಲ್ಲಿ ಮೈಸೂರು ಆಕಾಶವಾಣಿ ಪರವಾಗಿ ಶ್ರೀ ಕಿಕ್ಕೇರಿ ನಾರಾಯಣ ಅವರು ಮಹಾದೇವ ಅವರನ್ನು ಸಂದರ್ಶಿಸಿದರು. ಆ ಸಂದರ್ಶನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಂವಾದಕ್ಕಾಗಿ ಧ್ವನಿಸುರುಳಿಯಿಂದ ಈ ಸಂದರ್ಶನವನ್ನು ಬರಹದ ರೂಪಕ್ಕೆ ತಂದುಕೊಟ್ಟ ಶ್ರೀ ಕಿಕ್ಕೇರಿ ನಾರಾಯಣ ಅವರಿಗೆ ಸಂವಾದ ತನ್ನ ನೆನಕೆಗಳನ್ನು ಸಲ್ಲಿಸುತ್ತದೆ.-ಸಂ [ಸಂಪಾದಕರು -ಸ.ಉಷಾ, ಡಿ.ಎಸ್.ನಾಗಭೂಷಣ, ರಾಘವೇಂದ್ರ ಪಾಟೀಲ್  .]
ಕಿಕ್ಕೇರಿ ನಾರಾಯಣ: ನಿಮ್ಮ – ನಮ್ಮ–ಕನ್ನಡಿಗರ ಕುಸುಮಬಾಲೆ ಕೃತಿಗೆ 1990ರ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದ ಸಂದರ್ಭದಲ್ಲಿ ಆಕಾಶವಾಣಿ ಪರವಾಗಿ ನಿಮಗೆ ಅಭಿನಂದನೆಗಳನ್ನು ಅರ್ಪಿಸ್ತಿದೀನಿ.
ದೇವನೂರ ಮಹಾದೇವ: ವಂದನೆಗಳು.
ಕಿ.ನಾ: ಈ ಸಂದರ್ಭದಲ್ಲಿ ನೀವು ಬರಹಗಾರರಾಗಿ ಬಹುಮಾನದ ಸುದ್ದಿ ಬಂದಾಗ ನಿಮಗೇನನಿಸ್ತು ?
ದೇ.ಮ. : ನಾನಾವಾಗ ಬೆಂಗಳೂರಿನಲ್ಲಿದ್ದೆ. ಮೊದಲು ನನಗನಿಸಿದ್ದು- ಸ್ವಲ್ಪ ಸಂಕೋಚ ಅನಿಸ್ತು. ಯಾಕಂದರೆ ಅನಂತಮೂರ್ತಿಯವರಿಗೆ ಬಂದಿರಲಿಲ್ಲ. ಇದು, ಲಂಕೇಶ್ ಅವರಿಗೆ ಬಂದಿರಲಿಲ್ಲ, ಕಂಬಾರರಿಗೆ ಬಂದಿರಲಿಲ್ಲ. ಅವರು ನನಗಿಂತಲೂ ಹಿರಿಯರಾದುದರಿಂದ ಆ ಕಾರಣಕ್ಕೆ ಸ್ವಲ್ಪ ಸಂಕೋಚ ಅನಿಸ್ತು. ಆದರೆ ಕೆಲಸ ಬಿಟ್ಟು ಬೇಸಾಯಕ್ಕೆ ಇಳಿದು land holder  ಆದಮೇಲೆ– land holder ಅಂದರೆ ಭೂಮಿ ಹಿಡಕೊಂಡವನು ಅಂತ…
ಕಿ.ನಾ.: ನೆಲ ಕಚ್ಚಿದವನು ಅಂತ
ದೇ.ಮ.: ನೆಲ ಕಚ್ಚಿದವನು ಅಂತ, ಆ ತರ ಸ್ಥಿತೀಲಿದ್ದೆ ಸ್ವಲ್ಪ ಹೆಚ್ಚು, ಹೆಚ್ಚೂ ಕಮ್ಮಿ. ಆದ್ದರಿಂದ ಹಣದ ದೃಷ್ಟಿಯಿಂದ ಖುಷಿಯಾಯ್ತು.
ಕಿ.ನಾ. ಕುಸುಮಬಾಲೆ ಬರೆಯೋವಾಗ ಪ್ರೇರಣೆ ಏನಿರಬಹುದು ನಿಮಗೆ ?
ದೇ.ಮ.: ಬರೆಯೋವಾಗ ಬರೆಯೋದೆ. ಆವಾಗ ಪ್ರೇರಣೆಗೀರಣೆ ಅಂತಿರಲ್ಲ. ಬರೆಯೋದಕ್ಕೆ ಹಿಂದೆ ಇರಬಹುದು. ಒಂದು ಸಂಗತಿ ನನಗೆ ಆಗಾಗ ನೆನಪಿನಲ್ಲಿ ಬರ್ತಾ ಇತ್ತು. ಅದೇನೂಂತಂದರೆ ಒಂದು ಆಚರಣೆ- ನಮ್ಮ ಕಡೆ ಹಳ್ಳಿಗಳಲ್ಲಾಗುವ ಒಂದು ಆಚರಣೆ, ಆ ಆಚರಣೆ ಏನೂಂತಾಂದರೆ ಯಾರಾದರೂ ಊಟ ಇಲ್ಲದೇನೋ ಅಥವಾ ಕಾಯಿಲೆಯಿಂದಾನೋ ಸಣ್ಣಕಾಗ್ತಾ ಹೋಗ್ತಾ ಇದ್ದರೆ ಅದಕ್ಕೆ ಆ ಮಗೂಗೆ ದೆವ್ವಾನೋ ಪಿಚಾಚೀನೋ ಹಿಡಕೊಂಬಿಟ್ಟಿದೆ. ಅದಕ್ಕೆ ಭೂತ ಬಿಡಿಸಬೇಕು ಅಂತ ಹೇಳಿಬಿಟ್ಟು ಒಂದು ಆಚರಣೆ ಮಾಡ್ತಿದ್ರು. ಆ ಆಚರಣೆ ಇದೆಯಲ್ಲಾ ಅದು ನನ್ನ ಮನಸ್ಸಲ್ಲೇ ಸುತ್ತಾಇತ್ತು. ಆ ಒಂದು ಎಳೆ ಇನ್ನು ಬೇರೆ ಸಂಗತಿಗಳ ಜೊತೆ ಕೂಡಿಕೊಂಡು ಕುಸುಮಬಾಲೆಯಾಯ್ತು.
ಕಿ.ನಾ.: ನೀವು ದ್ಯಾವನೂರು ಕಥಾ ಸಂಕಲನ ತಂದ ಏಳು ವರ್ಷಗಳ ನಂತರ ಒಡಲಾಳ ಬರೆದಿರಿ. ಆ ನಂತರ ಏಳೆಂಟು ವರ್ಷದ ಮೇಲೆ ಕುಸುಮಬಾಲೆ ಬರದ್ರಿ. ಒಂದು ಕೃತಿ ರಚನೆಗೂ ಇನ್ರ್ನೆಂದು ಕೃತಿ ರಚನೆಗೂ ಏಕೆ ಇಷ್ಟು ಅಂತರ? ಅದನ್ನ ತಿಳಕೋಬೇಕು ಅನ್ನೋ ಕುತೂಹಲ ಇದೆ.
ದೇ.ಮ.: ನಾನೂ ತಿಳಕೋಬೇಕು ಅಂತಾನೇ ಆಸೆಪಡ್ತಿದೀನಿ, ಗೊತ್ತಾಯ್ತಾ ಇಲ್ಲ.
ಕಿ.ನಾ.: ಅಂದರೆ ಬರವಣಿಗೆ ಬರೀತಾ ಇರ್ತಾರಲ್ಲ- ಸಾಮಾನ್ಯವಾಗಿ ಬರೆಯೋರು ಬಹಳ ಬೇಗ ಬೇಗ ಬರದು ಬರದು ಪ್ರಕಟಣೆ ಮಾಡ್ತಾ ಇರ್ತಾರೆ.
ದೇ.ಮ.: ನಾನು ಪ್ರತಿ ಸಲ ಯಾವುದನ್ನೇ ಬರೆದರೂನೂ ನಾನು ಒಬ್ಬ ಬರಹಗಾರ ಅನ್ಕೊಂಡು ಆರಂಭ ಆಗಿರಲ್ಲ. ಹೊಸದಾಗಿ ಅ-ಆ-ಇ-ಈ ಕಲಿತ್ಕೊಂಡು ಆರಂಭ ಮಾಡ್ದಂಗೆ ನಾನು ಆರಂಭದಲ್ಲಿ ಬರೀತೀನಿ. ಮೊಲನೆ ಪುಟ ಅಚಿತೂ ಒಂದ್ಮೂರು ಸಲನಾದ್ರೂ ಬರೀತಿನಿ. ಇಂತಾ ಕಷ್ಟದ ಕಾರಣಕ್ಕಾಗೋ ಅಥವಾ ಪ್ರತಿ ಸಲ ಬರೆದಾಗ್ಲೂನೂ ಒಬ್ಬ ಹೊಸ ಬರಹಗಾರನಾಗಿ ಆಗೋದ್ರಿಂದ ಈ ತರ ಕಷ್ಟ ಇರಬಹುದು.
ಕಿ.ನಾ.: ಒಡಲಾಳ, ದ್ಯಾವನೂರು ಬರೆಯೋವಾಗಿನ ಮನಃಸ್ಥಿತಿಗೂ ಕುಸುಮಬಾಲೆ ಬರೆದಾಗಿನ ಮನಃಸ್ಥಿತಿಗೂ ವ್ಯತ್ಯಾಸ ಇತ್ತಾ? ಇದ್ದರೆ ಏನದು?
ದೇ.ಮ.: ಒಡಲಾಳ ಬರೆಯೋವಾಗ ನನಗೆ ಅಂದಾಜು ಹೆಚ್ಚಿಗೆ ಇತ್ತು. ಏನು ಬರೀಬೇಕೂಂತ ಅಂದಾಜು ಇದೆಯೋ ಅದು ಹೆಚ್ಚಿಗೆ ಇತ್ತು. ಆದರೆ ಕುಸುಮಬಾಲೆನಲ್ಲಿ ನನಗೆ ಅಂದಾಜುಗಳೇ ಇರಲಿಲ್ಲ. ಒಡಲಾಳ ಬರೆಯೋವಾಗ ನಿರ್ದಿಷ್ಟವಾದ್ದು ಎಷ್ಟಿತ್ತೋ ಅಷ್ಟನ್ನೇ ಬರೀತಾ ಇದ್ದೆ. ಹೆಚ್ಚಿಗೆ ಅಂದರೆ ಅದೇ ಅಂತ ಅಲ್ಲ. ಆದರೆ ಕುಸುಮಬಾಲೆ ಬರೆಯೋವಾಗ ಆ ಮನಸ್ಥಿತಿನಲ್ಲಿ ಯಾವದನ್ನ ಕಾಣತೀನೋ ಅದೆಲ್ಲಾ ಕಲಾಕೃತಿಯಾಗೋ ಒಂದು ಬಿಂದು- ಒಂದು ಸಾಧ್ಯತೆ ಇತ್ತು. ಉದಾಹರಣೆಗೆ ಹೇಳ್ತೀನಿ ಪ್ರತಿಯೊಂದು ವಸ್ತೂನೂ ನಾನು ಸುಮ್ಮನೆ ಮುಟ್ಕೊಂಡು ಮುಟ್ಕೊಂಡು ಹೋಗ್ತಾ ಇದ್ದೆ. ಏನೂ ಸಿಕ್ಕ ದಾರೀನಲ್ಲಿ ಹೋಗ್ತಾ ಹೋಗ್ತಾ-
ಬರೆಯೋ ಸ್ಪೀಡಿನಲ್ಲಿ ಪ್ರತಿಯೊಂದು ವಸ್ತೂನೂ ಮುಟ್ಟೋದು. ಈ ತರ ಒಂದು ಮನಸ್ಥಿತಿ ಇತ್ತು. ಅಂದರೆ ಆ ತರದ ವ್ಯತ್ಯಾಸ ಕಾಣಿಸತ್ತೆ.
ಕಿ.ನಾ.: ಈಗ ನೀವು ಬರಹಗಾರರಾಗಿ ಬೇರೆ ಒಂದು ಕೃತೀನ ಓದ್ತೀರ ಅಂತ ಇಟ್ಕೋಳ್ಳೋಣ. ಈಗ ಕುವೆಂಪು ಅವರ ಪುಸ್ತಕಗಳು- Particular  ನಾವೆಲ್ ಅಥವಾ ಟಾಲ್‍ಸ್ಟಾಯ್ ಅವರ–ಚಿನುವಾ ಅಚೆಬೆ ಇಂಥವರ ಕೃತಿಗಳನ್ನು ಓದ್ತೀರಲ್ಲ- ಅದನ್ನ ನೀವು ಬರಹಗಾರರಾಗಿ ಹೇಗೆ ಓದ್ತೀರ?
ದೇ.ಮ.: ನಾ ಬರಹಗಾರನಾಗಿ ಓದೋದೇ ಇಲ್ಲ. ಓದುಗನಾಗೇ ಓದೋದು.
ಕಿ.ನಾ.: ನಿಮ್ಮ ಕೃತಿಯನ್ನು ಓದುಗರು ಅಥವಾ ವಿಮರ್ಶಕರು ಓದಿ ಕೃತಿಕಾರರಾಗಿ ನಿಮಗೆ ಅನಿಸದ್ದನ್ನು ಏನಾದರೂ ತೋರಿಸಿಕೊಟ್ಟರೆ ನಿಮಗೆ ಬೆರಗುಗೊಳಿಸಿದೆಯಾ?
ದೇ.ಮ.: ಆ ರೀತಿ ಆಗಿದಾವೆ, ಸುಮಾರು ಆಗಿದಾವೆ. ಆದರೆ ನನಗೆ ಸದ್ಯಕ್ಕೆ ನೆನಪಿಲ್ಲ. ಸುಮಾರು ಸಲ ಹಾಗನ್ನಿಸಿದೆ.
ಕಿ.ನಾ.: ಈಗ ನಿಮ್ಮ ಕುಸುಮಬಾಲೆಗೆ ಬರ್ತಾ… ಅದು ಬಂದಾಗಿನಿಂದ ಕೆಲವರು ಅದನ್ನ ಓದೋದು ತುಂಬಾ ಕಷ್ಟ ಅಂತಾರಲ್ಲ ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ದೇ.ಮ.: ಈಗ ನಾ ಕುಸುಮಬಾಲೆ ಬರೆದಾದ ಮೇಲೆ, ಪ್ರಿಂಟಾದ ಮೇಲೆ ನಾನೂ ಓದಿಲ್ಲ…. ನನಗೂ ಓದಕ್ಕೆ ಆರಂಭ ಮಾಡಿದರೆ ಒಂದ್ಹತ್ತು ಪುಟದವರೆಗೂ ನನಗೂ ಕಷ್ಟ ಆಗತ್ತೆ. ಒಂದು ಮಾಡಬಹುದಾಗಿತ್ತು ನಾನು, ಅದೇನು ದೊಡ್ಡ ನಷ್ಟ ಆಗ್ತಿರಲಿಲ್ಲ. ಆ ಒತ್ತಕ್ಷರಗಳನ್ನು ಕಮ್ಮಿ ಮಾಡಬಹುದಾಗಿತ್ತು ಅಂತ ಈಗ ಅನ್ನಸ್ತಾ ಇದೆ.
ಕಿ.ನಾ.: ಅಷ್ಟು ಬಿಟ್ಟರೆ ಭಾಷೆ ಬಗ್ಗೆ ಏನೂ ಕಷ್ಟ ಅಂತ ಅನ್ನಿಸುಲ್ವಾ ನಿಮಗೆ..
ದೇ.ಮ.: ನಾನೇ ಹೇಳಿದ್ನಲ್ಲ ಇಲ್ಲ. ಒಂದ್ಹತ್ತು ಪುಟ ಓದೋವರೆಗೆ ನನಗೇ ಕಷ್ಟ ಆಗಬಹುದು. ಆಮೇಲೆ ಅದೇ ಒಂದು ಅವರಣ ಉಂಟು ಮಾಡಿಕೊಂಡು ಮುಂದಕ್ಕೆ ಸುಲಭ ಆಗತ್ತೆ ಅನ್ಕಂಡಿದೀನಿ.
ಕಿ.ನಾ.: ಮತ್ತೆ ನಾನು ಅನೇಕ ಸಲ ನೋಡಿದೀನಿ, ನೀವು ಸೃಜನೇತರ ಬರಹದ ಭಾಷೆ ಉಪಯೋಗಿಸೋದಕ್ಕೂ ಮತ್ತು ಸೃಜನಶೀಲ ಬರಹದ ಭಾಷೆ ಉಪಯೋಗಿಸೋದಕ್ಕೂ ಸ್ವಲ್ಪ ವ್ಯತ್ಯಾಸ ಇದೆ ಅಂತನಿಸುತ್ತೆ. ಇದಕ್ಕೆ ಕಾರಣ ಏನು… ?
ದೇ.ಮ.: ನಿಜ. ನಾನು ಒಂದು ಕಲಾಕೃತಿನಲ್ಲಿ ಒಂದು ಪಾತ್ರಾನೇ ಆ ಪಾತ್ರಾನೇ ಅದರ ಮಾತೇ ಅದರ ನುಡಿಗಟ್ಟೇ- ಅದನ್ನ-ಅದರ ನಾಡಿ ಹಿಡಿಯುಕ್ಕೆ ಪ್ರಯತ್ನಪಡ್ತೀನಿ. ಆದರೆ ಒಂದು ಲೇಖನಾನೋ ಏನೋ ಬರೆದಾಗ- ನಾನೂ ಬರೀತಾ ಇರೋದು ಅದು- ಅಂದರೆ ಮಹಾದೇವ ಬರೀತಾ ಇರೋದು, ಆದ್ದರಿಂದ ಅಲ್ಲಿ ಮಹಾದೇವ ಅಲ್ಲ- ಮಹಾದೇವ ಅದಾಗಕ್ಕೆ ಪ್ರಯತ್ನ ಪಡ್ತಿರೋದು ಈ ವ್ಯತ್ಯಾಸ ಇರಬಹುದು.
ಕಿ.ನಾ.: ಮತ್ತೆ ನಿಮ್ಮ ಕುಸುಮಬಾಲೆ ಕೃತಿಯ ಹಿನ್ನೆಲೆಯಲ್ಲಿ ನೋಡಿದಾಗ ಪದ್ಯ ರಚನೆಗೂ ಕಾವ್ಯ ರಚನೆಗೂ ಏನಾರ ವ್ಯತ್ಯಾಸ ಇದೆ ಅಂತ ಅನಿಸುತ್ಯ?
ದೇ.ಮ.: ನಾನೂನು ಪದ್ಯ ಬರೆಯಕ್ಕೆ ಪ್ರಯತ್ನಪಟ್ಟು ವಿಫಲ ಆಗಿದೀನಿ. ಆದರೆ ಕಾದಂಬರೀನೋ ಕಥೇನೋ ಬರೆಯೋವಾಗ ಪದ್ಯ ಬರೆಯೋ ಮನಸ್ಥಿತಿನಲ್ಲೇ ಅದನ್ನೂ ಕೂಡ ನಾನು ಬರೀತೀನಿ ಅನ್ಕೊಂಡಿದೀನಿ.
ಕಿ.ನಾ.: ಅಂದರೆ ಅದು ಅದಕ್ಕೆ ಸೇರಿಕೊಂಡಿರುತ್ತೆ … ಈಗ … ಕುಸುಮಬಾಲೆಯಲ್ಲಿ ಜನಪದ ಅಂಶಗಳನ್ನ ನೀವು ಬಳಸಿಕೊಂಡಿದ್ದೀರಲ್ಲ. ಇದರ ಅವಶ್ಯಕತೆ ಏಕೆ ಬಂತು?
ದೇ.ಮ.: ನಾನು ಬಳಸಿಕೊಂಡಿಲ್ಲ, ಎಷ್ಟು ಸಾಧ್ಯವೋ ಅಷ್ಟು ಜಾನಪದ ಆಗಕ್ಕೆ ಪ್ರಯತ್ನ ಪಟ್ಟಿದೀನಿ. ಆದಷ್ಟು ಮಾತ್ರ ಬರ್ದಿದೀನಿ.ಯಾಕಂದ್ರೆ ನಾನು ಬರೀತಾ ಇರೋದೇ ಜಾನಪದ ….
ಕಿ.ನಾ.: ಕುಸುಮಬಾಲೆನಲ್ಲಿ ಒಂದು ರೀತಿಯ ಲಯ ಸೃಷ್ಟಿಸಿಕೊಂಡಿದಿರಲ್ಲಾ … ಈ ಲಯಕ್ಕೂ ಮತ್ತು ಅದರ ವಸ್ತುಗೂ ಏನಾದರೂ ಸಂಬಂಧ ಇದೆ ಅಂತ ಅನಿಸುತ್ಯ?
ದೇ.ಮ.: ಇಲ್ಲ. ಆ ತರ ಏನು ಸೃಷ್ಟಿಸಿ- ಬರೆಯುವಾಗ ಒಂದು ಲಯ ಸೃಷ್ಟಿಸಿದೀನಿ ಅಂತಾನೋ ಅಥವಾ ಯಾವ ಯಾವ ಪ್ರತಿಯೊಂದೂ ತನ್ನಷ್ಟಕ್ಕೆ ತಾನೇ ಒಂದು ಲಯ ಆಗತ್ತೇನೋ… ಯಾವುದೇ ಮಾಡಿದ್ದರೂ ಇದು ನಾನು ಬರೆಯುವಾಗ ಇಷ್ಟೇ ಮಾಡಿಕೊಂಡದ್ದು- ಎಷ್ಟು ಪರಿಣಾಮಕಾರಿಯಾಗಬಹುದು … ಎಷ್ಟು ಆಳವಾಗಿ ಅರ್ಥ ಮಾಡ್ಕೋಬಹುದು- ಈಗ ಅನ್ಕಂಡಿದ್ದು. ತನ್ನಷ್ಟಕ್ಕೆ ತಾನೇ ಒಂದು ಲಯ ಆಗಿರಬಹುದು ಅಷ್ಟೇನೇ. ಆ ಲಯವೇ ಪ್ರತ್ಯೇಕವಾಗಿ ಸೃಷ್ಟಿಸಿದ್ದು ಅಂತ್ತೇನಲ್ಲ.
ಕಿ.ನಾ.: ನೀವು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿದೀರ ಅಂತ ಅಲ್ಲ. ನಾನು ಕೇಳಿದೆನಲ್ಲ…. ಆ ಲಯ ಬಂತಲ್ಲ ಆ ಲಯ ಬಂದಿದ್ದಕ್ಕೇನಾದರೂ……
ದೇ. ಮ.: ನಾನು ಕುಸುಮಬಾಲೆ ಬರೆದ ಮೇಲೆ ಓದಿಲ್ಲ.
ಕಿ.ನಾ.: ಈಗ ನಿಮ್ಮ ಕೃತಿಯಲ್ಲಿ ಅಂಬೇಡ್ಕರವಾದ, ಲೋಹಿಯಾವಾದ ಇವುಗಳ ಪ್ರಭಾವ ಏನಾದರೂ ಇದೆಯ?
ದೇ.ಮ.: ನೀವು ಹೇಳಬೇಕು ಅದನ್ನ.
ಕಿ.ನಾ.: ಈಗ ಓದುಗರಾಗಿ ನಾವು ಕೇಳಿದರೆ ಈ ಪ್ರಶ್ನೇನ ನೀವು ಏನು ಹೇಳ್ತೀರಾ?
ದೇ.ಮ.: ಅದು ನನಗೆ ಸಂಬಂಧಪಟ್ಟದ್ದಲ್ಲ ಅಂತ ಹೇಳ್ತೀನಿ ಅಷ್ಟೆ.
ಕಿ.ನಾ: ಈಗ ಕೆಲವು ವಿಮರ್ಶಕರು ಈ ವಾದಗಳ ಹಿನ್ನೆಲೆಯಲ್ಲಿ ನಿಮ್ಮ ಕೃತಿಯನ್ನು ನೋಡಹೊರಟಿದಾರೆ. ಅಂದರೆ ಒಂದು ಸಾಮಾಜಿಕ ಸಿದ್ದಾಂತದ ಹಿನ್ನೆಲೆಯಲ್ಲಿ ಕೃತಿಯನ್ನು ನೋಡಕ್ಕೆ ಪ್ರಯತ್ನಪಟ್ಟಿದಾರೆ. ಹೀಗೆ ನೋಡೋದ್ರಿಂದ ಕೃತಿಯನ್ನು ಓದೋದಕ್ಕೆ ಏನಾದರೂ ತೊಡಕಾಗತ್ತೆ ಅಂತ ಅನಿಸುತ್ಯ ನಿಮಗೆ? … ಅಂದರೆ ಹೀಗೆ ನೋಡುವ ದೃಷ್ಟಿ ಡಿesಣಡಿiಛಿಣ ಮಾಡುತ್ತೆ ಅಂತ ಅನಿಸತ್ಯ?
ದೇ.ಮ.: ಇದು ಕೂಡ ಒಬ್ಬ ಬರಹಗಾರನಿಗೆ ಸಂಬಂಧಪಟ್ಟದ್ದಲ್ಲ. ಯಾಕಂದ್ರೆ ಆದಷ್ಟೂ ಮುಕ್ತವಾಗಿರೋದು ಒಳ್ಳೇದು. ಯಾವುದೇ ಅಳತೆಗೋಲಿಲ್ಲದೆ ಮುಕ್ತವಾಗಿರೋದು ಒಳ್ಳೇದು ಅಂತ ನಾನು ಹೇಳಬಹುದೇ ಹೊರತು ಹಿಂಗಲ್ಲ ಹಿಂಗೆ ಓದಿ ಅಂತ ನಾನ್ಯಾಕೆ ಹೇಳ್ಲಿ?
ಕಿ.ನಾ.: ಅಲ್ಲ ಈಗ ವಿಮರ್ಶಕರು ಹಾಗೆ ಓದೋ ಹಾಗೆ ಮಾಡ್ತಾರಲ್ಲ- ಈ ದೃಷ್ಟಿಯಿಂದ ನೋಡಿಕೊಂಡು ಹೋಗಬೇಕೂ ಅನ್ನೋದು. ಈಗ ನಾನು ಓದುಗನಾಗಿ ನನ್ನ ಮೇಲೆ ಒಂದು ರೀತಿಯಲ್ಲಿ ಅದು restrict ಮಾಡುತ್ತೆ. ಈಗ ನನಗೆ ಅಂಬೇಡ್ಕರ್ ವಾದ ಗೊತ್ತಿಲ್ಲದೇ ಇದ್ರೇ ಈ ಕೃತೀನ ಓದಕ್ಕಾಗಲ್ವೇನೋ ಅಚಿತ ಒಂದು ಇದು ಬರುತ್ತೆ ಓದುಗನಲ್ಲಿ. ಈ ಹಿನ್ನೆಲೆಯಲ್ಲಿ ಏನೂ ಹೇಳ್ತೀರಿ?
ದೇ.ಮ.: ನನಗೆ ಅಂಬೇಡ್ಕರ್ ಆಗಲೀ, ಲೋಹಿಯಾ ಆಗಲೀ, ಮಾಕ್ರ್ಸ್ ಆಗಲೀ ಒಂದು ಅಂದಾಜು ಗೊತ್ತೇ ಹೊರತು ವಿವರಗಳು ನನಗೆ ಗೊತ್ತಿಲ್ಲ. ಮತ್ತೆ ಬರೆಯುವಾಗ ಅಲ್ಲಿ ಸಣ್ಣಪುಟ್ಟ ಜನಸಾಮಾನ್ಯರಿರ್ತಾರಲ್ಲ ಅವರೇ ನನಗೆ ಅಂಬೇಡ್ಕರ್ ಆಗಿರ್ತಾರೆ, ಅವರೇ ಲೋಹಿಯಾ ಅನಿಸ್ತಾರೆ, ಅವರೇ ಮಾರ್ಕ್ಸ್ ಆಗಿರ್ತಾರೆ, ಅವರೇ ಇನ್ನೊಂದು ಆಗಿರ್ತಾರೆ, ಸರ್ವಸ್ವ ಆಗಿರ್ತಾರೆ.
ಕಿ.ನಾ.:ಈಗ ಸೃಜನಶೀಲ ಬರಹಗಾರ ತನ್ನ ಸಾಮಾಜಿಕ ಅನುಭವದ ಹಿನ್ನೆಲೆಯಲ್ಲಿ ಕೃತಿ ರಚಿಸಿದರೆ ಹೆಚ್ಚು ಅಥೆಂಟಿಕ್ ಆಗಿರತ್ತೆ ಅನ್ನೋ ವಾದ ಇದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ದೇ.ಮ.: ಪ್ರೇಮ್‍ಚಂದ್ ಅವರು ದಲಿತರಲ್ಲ. ಅವರ … ಗಬನ್ … ಗಬನ್ ಅಲ್ಲ… ‘ಹೆಣದ ಬಟ್ಟೆ’ ಅಂತ ಒಂದು ಕಥೆ ಇದೆ. ಆ ಕಥೆಗಳ ಮಟ್ಟಕ್ಕೆ ನಾನು ಬರೆದಿಲ್ಲ. ಅದು ದಲಿತರ ಬಗ್ಗೆ ಬರೆದಿರೋ ಕಥೆ. ಅಂದರೆ ಅರ್ಥ, ಸೆನ್ಸಿಬಿಲಿಟಿ  ಅಂತಾರಲ್ಲ, ಅದಕ್ಕೆ ಸಂಬಂಧಪಟ್ಟದ್ದು- ಎಷ್ಟು ಒಬ್ಬನಿಗೆ ಒಳಗೊಳ್ಳಕ್ಕೆ ಸಾಧ್ಯನೋ ಆ ಮಟ್ಟದಲ್ಲಿ ಸಾಧ್ಯವಾಗ್ತದೆ. ಗಂಡಸರ ಅನುಭವಾನ ಹೆಂಗಸರು ಬರೆಯೋಕ್ಕಾಗಲ್ಲ, ಹೆಂಗಸರ ಅನುಭವಾನ ಗಂಡಸರು ಬರೆಯೋಕಾಗಲ್ಲ. ಈ ತರ ಮಾಡೋಕೆ ಸಾಧ್ಯವಾ? ಎಷ್ಟು ಹೆಣ್ಣಾಗಕ್ಕೆ ಸಾಧ್ಯ- ಎಷ್ಟು ಒಬ್ಬ ಕಲಾವಿದ ಗಂಡಾಗಕ್ಕೆ ಸಾಧ್ಯ- ಹೆಣ್ಣಾಗಿದ್ರೆ- ಇದರ ಮೇಲೆ ಅವಲಂಬನೆ ಆಗೋದು. ಆದರೆ ಅನುಭವದ್ದು- ಅದನ್ನೂ ಕಡೆಗಣಿಸಕ್ಕೆ ಆಗಲ್ಲ. ಇದಕ್ಕೆ theory ಅಥವಾ ಏನು ಒಂದು ನಿಯಮ ಅಂತ ಮಾಡಿಕೊಳ್ಳೋಕಾಗಲ್ಲ. ನಾವು ಬಾಳಿದ್ದು ಬದುಕಿದ್ದು ಇದೆಲ್ಲಾ ಕೂಡ ಅಲ್ಲಿ ಲೆಕ್ಕಕ್ಕೆ ಬರತ್ತೆ.

( ಕೃಪೆ: ಆಕಾಶವಾಣಿ, ಮೈಸೂರು)

ಸಂವಾದ- ಜನವರಿ- ಫೆಬ್ರವರಿ- 1991