ದೇವನೂರ ಮಹಾದೇವರ ‘ಒಡಲಾಳ’ – ಯು.ಆರ್.ಅನಂತಮೂರ್ತಿ

odal
ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು, ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು ಕನ್ನಡದಲ್ಲಿ ಪ್ರಸಿದ್ಧವಾದ ಎರಡು ಬಗೆಗಳನ್ನು ನೋಡೋಣ. ಧೀಮಂತ ವಿಮರ್ಶಕರಾದ ಡಾ.ಡಿ.ಆರ್.ನಾಗರಾಜರ ಜೊತೆಗೆ ಇದನ್ನು ಒಮ್ಮೆ ಚರ್ಚಿಸುವಾಗ ಕಾರಂತರ ಚೋಮ ಮತ್ತು ಕುವೆಂಪುರವರ ನಾಯಿಗುತ್ತಿಯರಲ್ಲಿ ಯಾರು ಹೆಚ್ಚು ಸಮರ್ಪಕ ದಲಿತ ಪಾತ್ರವೆಂಬ ಪ್ರಶ್ನೆಯೆದ್ದಿತು. ಚೋಮನ ಕಲ್ಪನೆ ಟ್ರಾಜೆಡಿಯ ರೀತಿಯದು; ನಾಯಿಗುತ್ತಿ ಕಾಮಿಕ್ ಎನ್ನಬಹುದಾದ ಪಾತ್ರ. ಡಾ.ನಾಗರಾಜರು ಗುತ್ತಿಯ ಪರವಾಗಿ ವಾದಿಸಿದರು. ಈ ಬಗ್ಗೆ ಅವರು ನಮ್ಮ ತಿಳಿವನ್ನು ಬೆಳೆಸುವಂತೆ ಹೇಳುವ ತುಂಬ ಸೂಕ್ಷ್ಮಗಳು ಇವೆ. ಅವುಗಳನ್ನು ಸದ್ಯಕ್ಕೆ ಕಡೆಗಾಣಿಸಿ, ಗಂಭೀರವಾದ ಚೋಮನನ್ನೂ, ಮೃದುಹಾಸ್ಯದಲ್ಲಿ ತನ್ನ ಜೀವಂತಿಕೆಯಿಂದ ಹೊಳೆಯುವ ವೈನೋದಿಕ ಪಾತ್ರವಾದ ಗುತ್ತಿಯನ್ನೂ ದಲಿತ ಇರುವ ಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಒಟ್ಟಾಗಿ ಬಿಂಬಿಸಬಲ್ಲ ಎರಡು ಸಾಹಿತ್ಯ ಮಾದರಿಗಳೆಂದು ತಿಳಿದು ಮುಂದುವರೆಯುವೆ. ಚೋಮ ತಾನು ಹಾಯಲಾರದ ಗೋಡೆಗಳಿಗೆ ತಲೆ ಚಚ್ಚಿಕೊಂಡು ಸಾಯುತ್ತಾನೆ. ತನ್ನ ಹೋರಾಟದಲ್ಲಿ ಹಠದಲ್ಲಿ ನಮ್ಮ ಅನುಕಂಪವನ್ನೂ ಗೌರವವನ್ನೂ ಗಳಿಸಿಕೊಳ್ಳುತ್ತಾನೆ. ತನ್ನ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳಲು ದುಡಿಯನ್ನು ಉನ್ಮಾದದಲ್ಲಿ ಬಾರಿಸುವ ಚೋಮ ನಮಗೆ ಗೊತ್ತಿರಬಹುದಾದ ಯಾವ ವಿಶಿಷ್ಟ ಹರಿಜನನಿಗಿಂತಲೂ ದೊಡ್ಡವನು. ಅವನ ಗಾತ್ರ ಹೀಗೆ ವಾಸ್ತವಕ್ಕಿಂತ ಸ್ವಲ್ಪ ದೊಡ್ಡದಾದ್ದು ಎನ್ನಿಸುವುದರಿಂದಲೇ ಅವನು ಎಲ್ಲ ಕಾಲದ, ದೇಶದ ದಲಿತರನ್ನೂ ಪ್ರತಿನಿಧಿಸಬಲ್ಲ ಕಾವ್ಯಪ್ರತಿಮೆಯಾಗಿಬಿಡುತ್ತಾನೆ. ಇಂಗ್ಲಿಷಿನಲ್ಲಿ ‘ಹೈ ಮೈಮಟಿಕ್’ (High minetic = ಘನ ಅನುಕರಣೆ?) ಎಂಬ ಬಗೆಯ ಚಿತ್ರಣ ಚೋಮನದು. ನಾಯಿಗುತ್ತಿಯದಾದರೋ ‘ಲೋ ಮೈಮಟಿಕ್’ (low minetic = ಲಘು ಅನುಕರಣೆ?) ಎಂಬ ಬಗೆಯದು. ಇವನು ತಲೆ ಘಟ್ಟಿಸಿಕೊಳ್ಳುವುದಿಲ್ಲ, ಸಿಕ್ಕಿಬೀಳುವುದಿಲ್ಲ; ಇವನಿಗೆ ತಾಳಿಬಾಳುವ ಒಳ ದಾರಿಗಳು ಗೊತ್ತು. ಸ್ಪಷ್ಟ ದಿಟ್ಟ ಗೆರೆಗಳಿಂದ ಕಡೆದು ನಿಲ್ಲಿಸಿದ ಚಿತ್ರ ಚೋಮನದ್ದಾದರೆ, ಗುತ್ತಿ ಮೂಡುವುದು ಹಲವು ದೇಸೀ ನಡೆನುಡಿಯ ವಿವರಗಳಲ್ಲಿ. ಚೋಮನನ್ನು ನಾವು ಕಾಣುವುದು ಎಷ್ಟು ಬೇಕೋ ಅಷ್ಟೇ ವಿವರಗಳಲ್ಲಿ; ಎಲ್ಲ ದೇಶ ಕಾಲಗಳ ದಲಿತ ಪ್ರತಿಮೆಯಾಗಲು ಅವನು ಹಾಗೆ ಕಣ್ಣಿಗೆ ಹೊಡೆಯುವಂತೆ ಕಾಣಬೇಕು. ಗುತ್ತಿಯ ದಟ್ಟವಾದ ಚಿತ್ರಣ; ಅವನನ್ನು ಕಂಡು ನಗುವುದು ಸಾಧ್ಯವಾಗುವುದು ಅವನು ಹೀಗೆ ತೀರಾ ಎನ್ನಿಸುವಷ್ಟು ವಿಶಿಷ್ಟನಾಗುವುದರಿಂದಲೇ.ಅವನನ್ನು ನಾವು ಗುರುತಿಸುವುದೇ ಚೋಮನಂತೆ ಹರಿಜನರ ಪ್ರತಿನಿಧಿಯೆಂದು ಆಗಿದ್ದಲ್ಲಿ, ಅವನನ್ನು ಕಂಡು ನಗುವುದು ಕ್ರೌರ್ಯವಾಗಿರುತ್ತಿತ್ತು. ನಗುವವನ ಶ್ರೇಷ್ಠತೆಯ ಹಮ್ಮಾಗಿರುತ್ತಿತ್ತು. ಬಾಳುವ ಉಪಾಯಗಳನ್ನು ತಿಳಿದಿರುವ ಗುತ್ತಿ ನಮ್ಮನ್ನು ನಗಿಸುತ್ತಲೇ ಅವನಂಥವರ ಆಳವಾದ ಪ್ರಕೃತಿದತ್ತ ಚೈತನ್ಯವನ್ನೂ ನಮಗೆ ಹೊಳೆಯುವಂತೆ ಮಾಡುತ್ತಾನೆ- ಗಟ್ಟಿ ಮಾತಲ್ಲಲ್ಲ, ಪಿಸುಮಾತಿನಲ್ಲಿ; ನಿಲ್ಲುವಲ್ಲಲ್ಲ; ಚಲನೆಯಲ್ಲಿ.
ಈ ಎರಡು ಕ್ರಮಗಳ ಬಗ್ಗೆ ಇನ್ನೂ ಹೇಳುವುದಿದೆ. ನಗಿಸುತ್ತಲೇ ನಮ್ಮನ್ನು ದೃಢಗೊಳಿಸುವ ಕ್ರಮಕ್ಕೆ ಚಾಪ್ಲಿನ್‍ನ The Great Dictator ಅಪೂರ್ವ ಉದಾಹರಣೆ. ಯಹೂದ್ಯರನ್ನು ಸುಟ್ಟು ಬೇಯಿಸಿ ಅವರ ತಲೆಬುರುಡೆಗಳನ್ನು ಆಶ್‍ಟ್ರೇ  ಮಾಡಿಕೊಳ್ಳುತ್ತಿದ್ದ ಕಾಲದಲ್ಲೇ ಹಿಟ್ಲರ್‍ನನ್ನು ಹಾಸ್ಯಾಸ್ಪದ ಮಾಡಿದ ಚಾಪ್ಲಿನ್ ನಮಗೆ ಕೊಡುವುದು ಭವ್ಯವಾದ ಆಧ್ಯಾತ್ಮಿಕ ಅನುಭವವನ್ನೇ. ಸಾಹಿತ್ಯ ತನ್ನ ಓದುಗರ ಮಾನವೀಯತೆಯನ್ನು ಪೊರೆದು ಬೆಳೆಸುವುದು, ಆತಂಕಗಳನ್ನು ಗೆಲ್ಲುವ ಕ್ರಮಗಳನ್ನು ಕಲಿಸುವುದು ಹೀಗೆ ಹಲವು ರೀತಿಗಳಲ್ಲಿ. ಕಲೆಗಾರಿಕೆ ಕೇವಲ ಮೆರುಗಲ್ಲ; ಅದು ವಾಸ್ತವದಲ್ಲೇ ನಮ್ಮಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಕಾಪಾಡಬಲ್ಲ ಸಾಧನ. ಅಂದರೆ ಜೀವನ ಸ್ಪಂದನಶೀಲ ಆರೋಗ್ಯವನ್ನು ಕಾಯುವ ಉಪಾಯ. ಬದುಕಿ ಉಳಿಯುವ ಉಪಾಯವಾಗಿ ದಲಿತರು ಹಾಡುವಾಗ, ಕಥೆ ಕಟ್ಟುವಾಗ, ನಗುವಾಗ, ಕುಣಿಯುವಾಗ ವ್ಯಕ್ತವಾಗುವ ಕಲೆ ಆಧ್ಯಾತ್ಮಿಕವೆನ್ನಬಹುದಾದ ಚೈತನ್ಯದ್ದೇ. ಕಷ್ಟವನ್ನೂ ದುಷ್ಟವನ್ನೂ ಮೀರುವ ಕ್ರಮಗಳು ಹಲವು: ಸಮಾಜದ ನೈಜ ಬದಲಾವಣೆಯ ಕ್ರಾಂತಿಕಾರವಾದ ಸಾಧ್ಯತೆಯನ್ನು ಇಲ್ಲೇ, ಈ ಸೋಲಿನ ನಿರಾಶೆಯಲ್ಲೇ, ಸಾಧ್ಯವೆಂದೂ, ಸಾಧುವೆಂದೂ ತರ್ಕಾತೀತವಾಗಿ ಒಪ್ಪಿಸುವಂತೆ ಮಾಡುವುದು ಹಲವು ಉಪಾಯಗಳನ್ನು ಪಡೆದ ಕಲೆಗಾರಿಕೆ.
ಚೋಮ ಮತ್ತು ಗುತ್ತಿಯರ ಎರಡು ಮಾದರಿಗಳಂತೆ ಪ್ರೇಂಚಂದರ ಹೆಣದ ಬಟ್ಟೆ (ಕಫನ್) ಕಥೆಯ ಇನ್ನೊಂದು ಮಾದರಿಯಿದೆ- ನಮ್ಮನ್ನು ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುವಂತೆ ಮಾಡುವ ಉಪಾಯವಾಗಿ. ಬಡತನ ಮತ್ತು ಅದರಿಂದ ಹುಟ್ಟುವ ಅತಿದೈನ್ಯ ಪ್ರೇಂಚಂದರ ಅಂತ್ಯಜರನ್ನು ಅಮಾನವರನ್ನಾಗಿ ಮಾಡಿದೆ. ಸತ್ತ ಹೆಣ್ಣಿಗೆಂದು ಹೆಣದ ಬಟ್ಟೆಯನ್ನು ಬೇಡಿ ತಂದು, ಅದನ್ನು ಮಾರಿ, ಅವರು ಕುಡಿದು ತಿಂದು ಮೈಮರೆಯುತ್ತಾರೆ. ನಮ್ಮಂತೆ ಮನುಷ್ಯರಾದ ಈ ಇಬ್ಬರು, ನಾವು ಪೊರೆಯುವ ವ್ಯವಸ್ಥೆಯಿಂದಾಗಿ ಪಶುಸಮಾನರಾಗುವುದು ಕಂಡು, ಬಡತನ ಎಲ್ಲ ಮಾನವೀಯ ಲಕ್ಷಣಗಳನ್ನೂ ಇಂಗಿಸಬಲ್ಲುದೆಂದು ತಿಳಿದು ನಾವು ಬೆಚ್ಚುತ್ತೇವೆ. ತೀವ್ರ ಮುಜುಗರದಲ್ಲಿ ನಮ್ಮ ಬಗ್ಗೆ ನಾವು ಹೇಸುವಂತೆ ಮಾಡಿ ಪ್ರೇಂಚಂದರು ನಮ್ಮಲ್ಲಿ ಮೌಲ್ಯ ಪ್ರಜ್ಞೆ ಅಂಕುರಿಸುವಂತೆ ಮಾಡುತ್ತಾರೆ. ಈ ಮಾದರಿಯ ಬರವಣಿಗೆಯನ್ನು ಕನ್ನಡದಲ್ಲಿ ನಾನು ಅಷ್ಟಾಗಿ ಕಂಡಿಲ್ಲ. ಹಿಂದಿ ಮತ್ತು ಉರ್ದುವಿನಲ್ಲಿ ಪ್ರೇಂದಂದರ ಕಥೆ ಒಂದು ವಿಶಿಷ್ಟ ಪ್ರಗತಿಶೀಲ ಪರಂಪರೆಯನ್ನೇ ಬೆಳೆಸಿದೆಯೆಂದು ಕೇಳಿದ್ದೇನೆ. ಚೋಮ, ಗುತ್ತಿಯರದರಂತೆ ಈ ಬಗೆಯೂ ಮಹತ್ವದ್ದೆಂದು ಗುರುತಿಸಲು ಮಾತ್ರ ಪ್ರೇಂಚಂದರನ್ನು ಇಲ್ಲಿ ಪ್ರಸ್ತಾಪ ಮಾಡಿದ್ದೇನೆ.
ಮೇಲಿನ ದೀರ್ಘ ಪ್ರಸ್ತಾವನೆಯ ಉದ್ದೇಶ: ದೇವನೂರ ಮಹದೇವರ ಅಪೂರ್ವ ಶೋಭೆಯ ಕಥಾನಕವಾದ ಒಡಲಾಳದ ಅಧ್ಯಯನಕ್ಕಾಗಿ ಒಂದು ಚೌಕಟ್ಟನ್ನು ನಿರ್ಮಿಸಿಕೊಳ್ಳುವುದು. ಹಾಪ್‍ಕಿನ್ಸ್ ಎಂಬ ಇಂಗ್ಲಿಷ್ ಕವಿಯ ಬಗ್ಗೆ ಬರೆಯುತ್ತ ಲಿವೀಸ್ ಎಂಬ ವಿಮರ್ಶಕ ಅವನ ಒಂದು ಪದ್ಯದಲ್ಲಿ ಟೆಕ್ನಿಕಲ್ ಟ್ರಯಂಫ್ (Technical triumph = ರೀತಿಯ ಜಯ) ಎಂಬುದೇ ಸ್ಪಿರಿಚುಯಲ್ ಟ್ರಯಂಫ್ (spiritual triumph = ಆಧ್ಯಾತ್ಮಿಕ ಜಯ) ಆಗುತ್ತದೆ ಎನ್ನುತ್ತಾನೆ. ಕವಿಯ ಮನಸ್ಸಲ್ಲಿ ಒಂದು ತೀವ್ರ ತಳಮಳವೆದ್ದಿದೆ. ಅದನ್ನು ಅವನು ಗೆಲ್ಲಬೇಕಾಗಿದೆ. ಗೆದ್ದು ಬರೆಯುವುದಲ್ಲ, ಗೆಲ್ಲಲೆಂದೇ ಬರೆಯುವುದು ಅವನ ಕ್ರಮ; ಹಾಗೆ ನೋಡಿದರೆ ಎಲ್ಲ ದೊಡ್ಡ ಲೇಖಕರ ಕ್ರಮ ಅದೇ. ಹಾಗಾದ್ದರಿಂದಲೇ ಬರೆದುಕೊಳ್ಳುವ ಕ್ರಮ ಸಾಹಿತ್ಯದ ‘ರೀತಿ’ಯ ಪ್ರಶ್ನೆ ಮಾತ್ರವಾಗದೆ ತನ್ನ ಮನಸ್ಸಿನ ತಳಮಳವನ್ನು ಗೆಲ್ಲುವ ಕ್ರಮವೂ ಆಗಿಬಿಡುತ್ತದೆ. ಮಹಾದೇವರ ಒಡಲಾಳದ ಭಾಷಾಪ್ರಯೋಗ, ಕಥನ  ಕ್ರಮಗಳಿಗೆ ಅಪೂರ್ವ ಶೋಭೆ ಉಂಟಾಗುವುದು ಲೇಖಕನಿಗೆ ಬರೆಯುವ ಕ್ರಮವೇ ನೈತಿಕ ಕ್ರಿಯೆಯೂ ಆಗಿದೆ ಎಂದು ನಮಗೆ ಅನ್ನಿಸುವುದರಿಂದ. ಇರುವುದನ್ನು ಇದ್ದಂತೆಯೇ ಸ್ವೀಕರಿಸುವ ಪ್ರಕ್ರಿಯೆಯಲ್ಲಿ ಪ್ರೀತಿಹುಟ್ಟುವುದು, ಹೀಗೆ ಪ್ರೀತಿಗೆ ಪಾತ್ರರಾದ ಜನಗಳು ಶೋಭಾಯಮಾನರಾಗುವುದು ಒಡಲಾಳದ ಕ್ಷುಲ್ಲಕವೆನ್ನಿಸಬಹುದಾಗಿದ್ದ ದೈನಿಕದ ಜಗಳ ಮತ್ತು ಚೌರ್ಯದ ಕಥೆಯಲ್ಲಿ ಸಾಧ್ಯವಾಗಿದೆ. ಇದೊಂದು ಬೆರಗು ಹುಟ್ಟಿಸುವ ಯಶಸ್ಸು ಎನ್ನಬಹುದು. ಇದನ್ನು ಸಾಧ್ಯವಾಗಿಸಿದ್ದು ಲೇಖಕರ ನೋಟ, ಅಂದರೆ ನೋಡುವ, ಅರಿಯುವ ಕ್ರಮ; ತೋರಿಕೆಗೆ ಕ್ಷುಲ್ಲಕವಾಗಿ ಕಾಣುವುದರಲ್ಲೂ ಚೈತನ್ಯವನ್ನು ಗುರುತಿಸುವ ಶಕ್ತಿ. ಸ್ವತಃ ಹರಿಜನ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದು ವಿದ್ಯಾವಂತರಾದ ಮಹಾದೇವರಂಥ ಲೇಕಕರೊಬ್ಬರು, ತಾವು ಹುಟ್ಟಿದ ತಾಣದಿಂದ ಅನಿವಾರ್ಯವಾಗಿ ದೂರವಾಗುತ್ತಿರುವಾಗ ಈ ಕಥಾನಕವನ್ನು ಬರೆದಿದ್ದಾರೆಂಬುದನ್ನು ಗಮನಿಸಿದಲ್ಲಿ, ಈ ಬರೆಯುವ ಪ್ರಕ್ರಿಯೆಯೇ ಅವರಿಗೆ ಕಳೆದುಕೊಳ್ಳುತ್ತಿರುವುದನ್ನು ಮತ್ತೆ ಪಡೆದುಕೊಳ್ಳುವ, ತನ್ನ ಜನದ ಬಗ್ಗೆ ಮತ್ತೆ ಪ್ರೀತಿಯನ್ನೂ ಸಲಿಗೆಯನ್ನೂ ಗಳಿಸಿಕೊಳ್ಳುವ ಕ್ರಿಯೆಯಾಗಿದೆ ಎನ್ನಿಸುತ್ತದೆ. ಬೆಂಕಿಯ ಸುತ್ತ ಕೂತು ಕಡಲೆಕಾಯಿಯನ್ನು ತಿನ್ನುತ್ತ ಹರಿಜನ ಕುಟುಂಬ ಬೆಂಕಿಯ ಪ್ರಭೆಯಲ್ಲಿ ಹೊಳೆಯುವಾಗ, ಗೌರಿ ಚಿತ್ರಿಸಿದ ನವಿಲು ಕುಣಿಯುವಾಗ, ಸಾಕವ್ವ ‘ಮೂರನೆ ಕ್ಲಾಸಿನ’ ಶಿವೂಗೆ ಕಥೆ ಹೇಳುವಾಗ, ಪೊಲೀಸ್ ಕಾನ್ಸ್‍ಟೇಬಲ್ ರೇವಣ್ಣ ಉಚ್ಚೆ ಹೊಯ್ಯುವುದನ್ನು ಕಂಡು ಹರಿಜನ ಹೆಂಗಸರು ನಗುವಾಗ ಲೇಖಕರು ಈ ಪಾತ್ರಗಳ ಬಗ್ಗೆ ಅನುಭವಿಸುವ ಪ್ರೀತಿ ನಮ್ಮದೂ ಆಗುತ್ತದೆ. ಅವರೂ ನಾವೂ ಒಂದಾಗುತ್ತೇವೆ; ಕರುಣೆಯಲ್ಲಲ್ಲ, ತಾದಾತ್ಮ್ಯದಲ್ಲಿ. ಹೊಟ್ಟೆಪಾಡಿನ ರಿಕ್ತವಾದ ಸಬ್‍ಸಿಸ್ಟೆನ್ಸ್ ಅರ್ಥವ್ಯವಸ್ಥೆಯಲ್ಲಿ (Subsistence economy) ಹೇಗೋ ಬದುಕುವ, ಕದ್ದಾದರೂ ಬಾಳುವ ಉಪಾಯಗಾರರಾದ ದಲಿತರು ಮಾನವನ ಅದಮ್ಯ ಚೇತನಕ್ಕೆ ಉದಾಹರಣೆಗಳಾಗುತ್ತಾರೆ.
ಅಂದರೆ ಒಡಲಾಳ ಹೀಗೆ ಖುಷಿಪಡಿಸಿ ನಮ್ಮನ್ನು ತಣಿಸುವ ಕೃತಿ ಮಾತ್ರವಾಗಿದ್ದರೆ ಅದು ದೋಷಯುಕ್ತವಾಗಿಬಿಡುತ್ತಿತ್ತು. ವೈಭವೀಕರಿಸುವ ಬರವಣಿಗೆಯ ಕ್ರಮ ಅಹಿತವಾದ್ದನ್ನು ಮರೆಸುತ್ತದೆ. ಹಾಗಾಗುವ ಅಪಾಯದಿಂದ ಒಡಲಾಳ ತಪ್ಪಿಸಿಕೊಂಡಿದೆ. ಒಂದು ಸಿಪ್ಪೆಯೂ ಪೊಲೀಸರಿಗೆ ಸಿಗದಂತೆ ಕಡಲೇಕಾಯಿಯನ್ನು ತಮ್ಮ ಒಡಲಿನ ಉರಿಯಲ್ಲಿ ಜೀರ್ಣಿಸಿಕೊಂಡ ಈ ಉಪಾಯಗಾರರ ಹಿರಿಯವ್ವನಾದ ಸಾಕವ್ವ ತನ್ನ ಇನ್ನೊಂದು ಹುಂಜವನ್ನೂ ಪೊಲೀಸರಿಗೆ ಕಳೆದುಕೊಂಡು ಪೆಚ್ಚಾಗುತ್ತಾಳೆ. ಪೊಲೀಸರು ತಪಾಸಣೆ ಮಾಡುವ ಸಾಕವ್ವನ ‘ನಾಕು ಕಂಬದ ತೊಟ್ಟಿ ಹಟ್ಟಿ’ಯಲ್ಲಿ “ಗೋಡೆಯ ದೊಡ್ಡ ಮೊಳೇಲಿ ನೂಲೊ ರಾಟೆಯ ಕತ್ತಿಗೆ ಹಗ್ಗ ಬಿಗಿದು ನೇಣಾಕಿತ್ತು” ಎಂಬ ಒಂದು ವಿವರ ಕಾಣಿಸಿಕೊಳ್ಳುತ್ತದೆ. ಇದು ಅತ್ಯಂತ ಮಹತ್ವದ ವಿವರ. ಹೊಟ್ಟೆಪಾಡಿನ ಸಬ್‍ಸಿಸ್ಟೆನ್ಸ್ ಅರ್ಥವ್ಯವಸ್ಥೆಯಲ್ಲೂ ದುಡಿಮೆಯ ಮಾರ್ಗವನ್ನು ಕೊಟ್ಟಿದ್ದ ರಾಟೆ ನಿಷ್ಪ್ರಯೋಜಕವಾಗಿದೆ. ಬೆಳವಣಿಗೆಯನ್ನು ಕಳೆದುಕೊಂಡ ರೋಗಿಷ್ಟ ಬಾಲಕ ಸದಾ ದುಪಟಿ ಹೊದ್ದ ‘ದುಪಟಿ ಕಮಿಷನ್‍ರ್’ ಆಗಿದ್ದಾನೆ. ಬಡತನ ಮತ್ತು ನಿರುದ್ಯೋಗ ಹರಿಜನರನ್ನು ಹಿಂಡಿ ಹಿಪ್ಪೆ ಮಾಡಿದೆ; ಆದರೂ ಅವರು ಜ್ವಲಿಸಬಲ್ಲವರಾಗಿ ಉಳಿದಿದ್ದಾರೆ. ‘ಲೋ ಮೈಮೆಟಿಕ್’ನ ವೈನೋದಿಕ ಕ್ರಮದ ಬರವಣಿಗೆ ಇರುವ ಸ್ಥಿತಿಯನ್ನೂ ಅಂತರ್ಗತ ಸಾಧ್ಯತೆಯನ್ನೂ ಹೀಗೆ ಒಟ್ಟಾಗಿ ಬಿಂಬಿಸುತ್ತದೆ. ಕಥಾನಕ ಕೊಡುವ ಖುಷಿ ನಮ್ಮನ್ನು ತಣಿಸುವಂಥದಲ್ಲ; ನಮ್ಮ ಏಕಾಗ್ರಗಮವನ್ನು ಕಥೆಯ ಲೋಕಕ್ಕೆ ಉತ್ಕರ್ಷದಲ್ಲಿ ಒದಗಿಸಿ ಕೊಡುವಂಥದು. ಎಂಥ ಸ್ಥಿತಿಯಲ್ಲೂ ಹರಿಜನರು ಎಷ್ಟು ಜೀವಂತವಾಗಿದ್ದಾರೆ ಎಂದು ನಮಗೆ ಅನ್ನಿಸುತ್ತಿರುವಂತೆಯೇ, ಅವರನ್ನು ಅವುಕಿರುವ ದಾರಿದ್ರ್ಯ ಮಾಯವಾದಲ್ಲಿ ಅವರ ಶಕ್ತಿ ಎಷ್ಟು ಅಪಾರ ಸಾಧ್ಯತೆಗಳನ್ನು ಪಡದಿರುವಂಥದು ಎಂದು ನಮಗೆ ಅನ್ನಿಸುವಂತ ಕಥಾನಕ ನಮ್ಮ ಗಮನವನ್ನು ಪ್ರಚೋದಿಸುತ್ತದೆ. ನಮ್ಮ ಚೈತನ್ಯ ಹೀಗೆ ಹೆಚ್ಚದ ಹೊರತು ಕ್ರಾಂತಿಕಾರಕತೆ ಹೇಗೆ ತಾನೇ ಸಾಧ್ಯವಾದೀತು? ಹೇಗೋ ಜೀವವುಳಿಸಿಕೊಂಡು ಸಾಯದಂತೆ ಬದುಕಿರುವವರ ಸರ್ವೈವಲ್‍ನ ಕಥೆಯೊಂದು, ಮನುಷ್ಯ ಚೈತನ್ಯ ಅದಮ್ಯವೆಂಬ ಪಾರಮಾರ್ಥಿಕ ಅನುಭವವನ್ನು ಕೊಡುವ ಮೂಲಕ ಓದುಗರ ಕ್ರಾಂತಿಯ ಅಪೇಕ್ಷೆಯನ್ನು ಹೇಗೆ ಕುದುರಿಸುತ್ತದೆಂಬುದನ್ನು- ‘ಲೋ ಮೈಮಟಿಕ್’ ಕ್ರಮದಲ್ಲಿ ಅದನ್ನು ಹೇಗೆ ಸಾಧಿಸುತ್ತದೆಂದು- ಇನ್ನಷ್ಟು ಪರಿಶೀಲಿಸೋಣ.
ಮನುಷ್ಯನ ಅಸ್ತಿತ್ವಕ್ಕೇ ಅಡಿಪಾಯವಾದ ಕಾಮ ಮತ್ತು ಪಾಲನೆಗಳಲ್ಲಿ ಕಾಮದ ಮಹತ್ವವನ್ನು ಮನಗಾಣಿಸುವ ಎಷ್ಟೋ ಕನ್ನಡ ಕೃತಿಗಳಿವೆ. ಆದರೆ ‘ಪಾಲನೆ’ಯನ್ನೇ ಕೇಂದ್ರವಸ್ತುವಾಗಿ ಪಡಕೊಂಡ ಈಚಿನ ಮುಖ್ಯ ಕೃತಿಯೆಂದರೆ ಮಹದೇವರ ‘ಒಡಲಾಳ’ ಸಂಸಾರ, ಸಮಾಜ, ಪ್ರಭುತ್ವ, ಒಟ್ಟಿನಲ್ಲಿ ಮಾನವನ ನಾಗರಿಕತೆ ಮತ್ತು ಸಂಸ್ಕೃತಿ- ಇವುಗಳಿಗೆ ಪ್ರೇರಕವಾದ ಶಕ್ತಿಯೆಂದರೆ ಮಾನವನಲ್ಲಿರುವ ‘ಪಾಲನೆ’ಯ ಪ್ರವೃತ್ತಿ. ಸಾಮಾಜಿಕ ವ್ಯವಸ್ಥೆಯೊಂದು ವಿನಾಶಕಾರಿಯಾಗಿದೆಯೆಂದು ನಮಗೆ ಅನ್ನಿಸುವುದು ಮನುಷ್ಯನಿಗೆ ಸಹಜವಾದ ‘ಪಾಲನೆ’ಗೆ ಅದು ಅಡ್ಡಿಯನ್ನುಂಟುಮಾಡಿದಾಗ.ಮಕ್ಕಳನ್ನು ಬೆಳೆಸುವುದು, ಓದಿಸುವುದು, ವಂಶಾಭಿವೃದ್ಧಿಗೆ ಹಾತೊರೆಯುವುದು, ಆಸ್ತಿಗಾಗಿ ಆಸೆಪಡುವುದು- ಎಲ್ಲವುದಕ್ಕೂ ತಳದಲ್ಲಿರುವುದು ‘ಪಾಲನೆ’ಯ ಪ್ರವೃತ್ತಿಯೇ. ನಮ್ಮ ನೈತಿಕತೆಯ ಉಗಮವಿರುವುದೂ ಈ ‘ಪಾಲನೆ’ಯಲ್ಲೇ. ಒಡಲಾಳದ ಸಾಕವ್ವನ ಮೂಲಕ, ಅವಳ ಹೆಸರಿನಿಂದಾಗಿ ಕೂಡ, ನಮ್ಮ ಗಮನವನ್ನೆಲ್ಲ ದುಡಿಸಿಕೊಳ್ಳುವುದು ಹೇಗೆ ಒಂದು ರಿಕ್ತ ಹೊಟ್ಟೆಪಾಡಿನ ಅರ್ಥವ್ಯವಸ್ಥೆಯಲ್ಲೂ ಈ ಪಾಲನೆಯ ಕ್ರಿಯೆ ನಡೆದುಕೊಂಡು ಬಂದಿದೆ ಎಂಬುದು.(ನೋಡಿ, ‘ಮರಳಿ ಮಣ್ಣಿಗೆ’ ಲೇಖನ.)
ತಾನು ಸಾಕಿದ  ಒಂದು ಹುಂಜ (ಅದು ದೇವರಿಗೆ ಬಿಟ್ಟಿದ್ದೆಂಬುದು ಅರ್ಥಪೂರ್ಣ) ಉಳಿದವರಿಗೆ ಯಕಃಶ್ಚಿತ್ ಎನ್ನಿಸುತ್ತಿದ್ದರೂ, ಕಳೆದುಹೋಯಿತೆಂದು ಹಂಬಲಿಸುವ ಸಾಕವ್ವ ನಮ್ಮನ್ನು ಪಾಲನೆಯ ಹಲವು ಮಜುಲುಗಳ ಬಗ್ಗೆ ವೈನೋದಿಕವಾಗಿ ಚಿಂತಿಸುವಂತೆ ಮಾಡುತ್ತಾಳೆ. (ಹುಂಜದ ಮೂಲಕ ಪಾಲನೆಗೂ ದೈವಿಕ ಕಲ್ಪನೆಗೂ ಇರುವ ಸಂಬಂಧ ಸಾಕವ್ವನ ಪ್ರಜ್ಷೆಯಲ್ಲಿ ವ್ಯಕ್ತವಾಗುತ್ತದೆ) “ಚರುಮಗಳ ಸ್ವತಂತ್ರವಾಗಿ ಅಲ್ಲಾಡುವ” ಸಾಕವ್ವ ತನ್ನ ವೃದ್ಧಾಪ್ಯದಲ್ಲಿ ಸಾವಿಗೆ ಹತ್ತಿರವಾದವಳು. ಆದರೂ ಅವಳ ಛಲ ಅದಮ್ಯವಾದ್ದು. ಸವುತಿ ಕೆಂಪಮ್ಮನ ಬಗ್ಗೆ ಅವಳು ಅಂದುಕೊಳ್ಳುವುದು, ಕಡಲೇಕಾಯನ್ನು ತಿನ್ನುವಾಗ ನೆರೆಮನೆಯ ಕಾಳಕ್ಕಗೆಂದು ಸೊಸೆ ಎತ್ತಿಕೊಂಡ ನಾಲ್ಕು ಬೊಗಸೆಯಲ್ಲಿ ಒಂದು ಬೊಗಸೆ ತೆಗೆದು ಗುಡ್ಡೆಗೆ ಹಿಂದಿರುಗಿಸುವುದು, ಕಳೆದ ಹುಂಜಕ್ಕಾಗಿ ಅವಳು ಗೋಳಿಡುವುದು, ಮಣ್ಣೆರುಚ್ಚತ್ತ ಶಾಪ ಹಾಕುವುದು, ಮಗ ಸೊಸೆಯರ ಜೊತೆ ಆಸ್ತಿಗಾಗಿ ವ್ಯಾಜ್ಯ ಮಾಡುವುದು- ಈ ಎಲ್ಲದರಲ್ಲೂ ನಮಗೂ, ಅವಳ ಸುತ್ತಲಿನವರಿಗೂ ಕೂಡ, ವಿನೋದವೆನ್ನಿಸುವ ಅತಿಯಿದೆ. ಆದರೆ ಅವಳ ಈ ಹಠದ ಇನ್ನೊಂದು ಮುಖವೇ ‘ಪಾಲನೆ’ಯಾಗಿದೆ. ಸೊಸೆ ಚೆಲುವಮ್ಮನ ಕೂಸು ಅವರ ಜೊತೆ ಆಡುತ್ತಿರುತ್ತದೆ. ತನಗೆ ತಿನ್ನಲು ಕುಡಿಯಲು ಕೊಟ್ಟಿದ್ದನ್ನು ಅವಳು ಯಾವಾಗಲೂ ಮಕ್ಕಳ ಜೊತೆ ಹಂಚಿಕೊಳ್ಳುತ್ತಾಳೆ (ಪುಟ-15). ಅವಳು ಸೊಸೆ ಜೊತೆ ಜಗಳವಾಡುವ ಕ್ರಮ ಕೂಡ ಅವಳು ತನ್ನ ಪ್ರೀತಿಯನ್ನೂ, ಪಾಲನೆಯ ಕಾಳಜಿಯನ್ನೂ ವ್ಯಕ್ತಗೊಳಿಸುವ ಒಂದು ಕಟುವಾದ ರೀತಿಯೇ ಆಗಿಬಿಡುತ್ತದೆ. ಹಟ್ಟಿ, ಹೊಲದ ಮಾತೇ ತುಂಬಿರುವ ಈ ಜಗಳದಲ್ಲಿ ಚೆಲುವಮ್ಮನ ಕೈಗೂಡು ಅಜ್ಜಿಯ ಸುತ್ತ ಆಡುತ್ತಿರುತ್ತದೆ. (ಪುಟ-11) ಹೇಗಾದರೂ ಬಾಳುವುದೊಂದೇ ಮೌಲ್ಯವೆನ್ನುವಂತೆ, ತೀರಾ ಈ ಮಣ್ಣಿಗೆ ಮಾತ್ರ ಸೇರಿದವಳು ತಾನೆಂಬುವಂತೆ ಸಾಕವ್ವ ಮಾತಾಡುತ್ತಾಳೆ. ಪುಟಗೌರಿ ಬರೆದ ನವಿಲಿನಿಂದ ಖುಷಿಯಾದ ಶಿವೂ ಅಜ್ಜಿಯನ್ನು ಕರೆದು ಅದನ್ನು ತೋರಿಸಬೇಕೆಂದಾಗ “ತಗಾ ಅದ್ಯಾರೊ ಒಬ್ಬಳು ಕುಟ್ಟೋ ಬತ್ತ ಬುಟ್ಟು ಹುಟ್ಟೋ ಶ್ಯಾಟ ನೋಡ್ಕತ್ತಿದ್ಲಂತೆ” (ಪುಟ-18).ಎನ್ನುತ್ತಾಳೆ.
ಆದರೆ ಮಾತ್ರ, ಯಾವ ನಿರುಪಯುಕ್ತ ಸೊಗಸಿಗೂ ಜಾಗವಿಲ್ಲವೆನ್ನುವಂತೆ ಹೊಟ್ಟೆಪಾಡಿನ ಕಾಯಕಜೀವಿಯಾದ ಇದೇ ಸಾಕವ್ವ ತನ್ನ ಪರದಾಟಗಳ ಪ್ರಪಂಚವನ್ನು ಮೀರಿ ಮಾತಾಡುವಾಗ ತತ್ವಜ್ಞಾನಿಯಾಗಿಬಿಡುತ್ತಾಳೆ: ‘ಮೂರನೇ ಕ್ಲಾಸಿನ’ ಶಿವೂನಲ್ಲಿ ಅವಳು ಕಾಣುವ ಭವಿಷ್ಯದ ಕನಸು, ತನ್ನ ಹೋರಾಟದ ಜೀವನವನ್ನು ಅವರು ನಿರುದ್ವಿಗ್ನಳಾಗಿ ಭಾವಿಸುವ ರೀತಿ ಒಡಲಾಳದ ಬರವಣಿಗೆಯ ಎಲ್ಲ ಚೆಲುವನ್ನೂ ಸಾರವಾಗಿ ಪಡೆದುಕೊಂಡಿದೆ. ಮಹದೇವರ ಭಾಷೆಗೆ ಇರುವ ಕಾವ್ಯ ಚೈತನ್ಯಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯೆಂದು ಇಡಿಯಾಗಿ ಅದನ್ನಿಲ್ಲಿ ಉದ್ಧರಿಸುತ್ತಿದ್ದೇನೆ: ತನ್ನ ಮೊತ್ತದ ಒತ್ತಡದಲ್ಲಿ ಸಾಕವ್ವನ ದುಡಿಮೆ ಜೀವನದ ದೈನಿಕ ಬವಣೆ ಹೇಗೆ ಮೌಲಿಕವಾದ ಜೀವನದೃಷ್ಟಿಯಾಗಿ ರೂಪಾಂತರವಾಗುತ್ತದೆ ಗಮನಿಸಿ- (ಹೆಗಲ್ ಹೇಳುವಂತೆ Quantitative change becomes qualitative change]ದೈನಿಕದ ಒಡಲಲ್ಲೇ ಗುಣಾತ್ಮಕವಾದ ಪುರಾಣಸೃಷ್ಟಿಯಾಗುವ ಕ್ರಮ ಇಲ್ಲಿದೆ. ಈ ಪುರಾಣಸೃಷ್ಟಿಯ ಮೂಲವಿರುವುದು ಸಾಕವ್ವನ ಪಾಲನೆಯ ಛಲದಲ್ಲಿ.

‘ನೀ ಇದ್ರ?’
‘ಯಮದೇವರೂ ಒಡೋಯ್ತರ!’
ಶಿವೂಗೆ ಅದನ್ನು ತನ್ನ ಕಣ್ಣುಗಳಿಗೆ ತಂದುಕೊಳ್ಳಲು ಆಗಲಿಲ್ಲ. ಬೆಪ್ಪಗಣ್ಣು ಬುಟ್ಟು
ನೋಡಿತು. ಸಾಕವ್ವ ಅಂದಳು:
‘ಅವರ್ಗ ಆಲ್ದಮರ್ದ ಗಾತ್ರ ಮೀಸ…. ದಾರಂದದಗಲದ ಹಲ್ಲು…’
‘ಅವ್ರು ನಿನ್ನ ಎಳ್ಕೊಂಡೋದ್ರ…’
‘ಅಯ್ ತಗತಗಾ… ನನ್ಯಾಕ ಎಳ್ಕಂಡುವೋದೀರಿ ಮೂದೇವ್ಗಳ… ನಾನೇ ಬತ್ತೀನಿ
ನಡೀರಿ ಅಂತೀನಿ.’
‘ಆಮೇಲ…’
‘ಆಮೇಲ ಅವರ್ಗಿಂತ, ಮೊದ್ಲು ನಾನೀಯ ಯಮಧರ್ಮರಾಜ್ನ ತವುಕ ವೊಯ್ತೀನಿ…’
ಸಾಕವ್ವನ ಬಾಯಿಂದ ಮಾತುಗಳು ಬರುತ್ತಿದ್ದಂತೆ… ಅವಳ ಸುಕ್ಕಿಂದ ಮಾಡಿದ ಅಲ್ಲಾಡುವ ಚರ್ಮ, ಅವಳ ಮೊಖದ ಹಲ್ಲಿಲ್ಲದ ಬಾಯಿ, ತಲೆಯ ನೆರೆಕೂದಲು ಮಾಯವಾದವು. ಸಾಕವ್ವನೊಳಗ ಪುಟ್ಟಗೌರಿ ಚಿಕ್ಕಿ ಮೂಡಿದಳು.
‘ಯಮಧರ್ಮರಾಜ ಏನ್ಮಾಡೀನು…?’
‘ಅವ್ನಾ… ನಮ್ಮ ಹಟ್ಟಿಗಾತ್ರದ ಸಿಮ್ಮಾಸನದ ಮೇಲೆ ಕೂತ್ಕೊಂಡು… ಯಮದೂತರು
ಕರ್ಕಾ ಬತ್ತಾರಲ್ಲ… ಅವರ್ಗ ಸೀಕ್ಸೆ ಕೊಡ್ತಾನ…’
‘ಅದ್ಕೂನೂ ನಿಂಗೆ ಹೆದ್ರಕ ಆಗಲ್ವಾ…’
‘ಅಯ್… ನರಲೋಕದಲ್ಲಿ ನಾನು ಪಟ್ಟಂಥ ಕಷ್ಟಕ್ಕೆ ಆ ಸೀಕ್ಸ ಎಲ್ಲಾದ್ದು ತಗಾ…
ಅವ್ನ ಜಿತೇಲೂ ಅದ್ನೆ ಅಂತೀನಿಕನಾ…’
ಪುಟಗೌರಿ ಚಿಕ್ಕಿಯಾಗಿದ್ದ ಸಾಕವ್ವ ಈಗ ಬಿಳೀ ಸೀರೆ ಉಟ್ಟು ಹಾರಾಡುವ ಕೂದಲ
ಗಾಳೀಗೆ ಬಿಟ್ಟು ಬಳಕುತ ದೇವಕನ್ನಿಕೆ ಆದಳು.
‘ಅವ್ನು… ಅದ್ಕೇನಂದನು?’
‘ಅದ್ಕ ಅವ ಆಯ್ತು ಮುದ್ಕಿ, ನಿನ್ನ ಧೈರಕ ಮೆಚ್ಚಿ… ಏನ್ ವರ ಬೇಕು ಕೇಳ್ಕ
ಅಂತಾನ.’ ಬಿಳಿ ಸೀರೆ ಉಟ್ಟು ಹಾರಾಡುವ ಕೂದಲ ಗಾಳೀಗೆ ಬಿಟ್ಟು ಬಳಕುತ
ದೇವಕನ್ನಿಕೆಯು ತನ್ನ ಕಿರು ಬೆರಳಲಿ ಭೂಲೋಕಾನ ಆಡಿಸತೊಡಗಿದಳು.
‘ವರ ಕೇಳ್ಕ ಅಂದ್ಮೇಲ…’
‘ಅದ್ಕ ನಾನು, ನೋಡು ಸ್ವಾಮಿ… ನನ್ನ ಮೊಮ್ಗೂಸು ನರಲೋಕದಲಿ ರಾಜ್ ಭಾರ
ಮಾಡುವಂಥ ವರಕೊಡು… ಅಷ್ಟು ಸಾಕು ಅಂತೀನಿ.(ಪುಟ-20-21)
“ಮೂರನೇ ಕ್ಲಾಸಿನ’ ಶಿವೂ ಕಣ್ಣಿಂದ ಸಾಕವ್ವನನ್ನು ನೋಡುವುದರಿಂದಾಗಿ (ಭಾಷೆಯಲ್ಲಾಗುವ ಬದಲಾವಣೆಯನ್ನು ಗಮನಿಸಿ) ಸಾಕವ್ವ ಒಂದು ಪುರಾಣ ಪಾತ್ರವಾಗುತ್ತಾಳೆ. ನವಿಲು ಬರೆದ ಪುಟಗೌರಿಯ ಜೊತೆ ಮಿಲನವಾಗುತ್ತಾಳೆ. ಕಥಾನಕದ ವೈನೋದಿಕ ಧಾಟಿಯಿಂದಾಗಿ ಸಾಕವ್ವ ಯಮನನ್ನೂ ಎದರಿಸುವುದು ನಮ್ಮ ಭಾವನೆಗೆ ಹೊರೆಯಾಗದಂತೆ ಅವಳ ಒಟ್ಟು ಜೀವನದ ಮೇಲೆ ವಿಶೇಷವಾದ ಪ್ರಭೆಯನ್ನು ಚೆಲ್ಲುತ್ತದೆ. ಕೊನೆಯಲ್ಲಿ ಅವಳು ಶಿವೂನ ಧ್ಯಾನವ ಮುರುದು ‘ಈಗ ನನ್ನುಂಜನ ನೋಡ್ಕಂಬರವ. ಬಾ ಕೂಸು’ ಎನ್ನುವುದಂತೂ ಇಡೀ ಕಥೆ ಅವಳ ಹುಂಜದ ತಪಾಸಣೆಗೆ (ಪಾಲನೆ) ಶಿವೂನನ್ನು ಬಳಸುವ ಉಪಾಯವಾಗುತ್ತದೆ. ದೈನಿಕದ ಇಕ್ಕಟ್ಟಿನಲ್ಲೇ ಅವಳ ಕಲ್ಪನೆ ಮೊಳೆಯುತ್ತದೆ. ಕಥೆಯುದ್ದಕ್ಕೂ ಅವಳಲ್ಲಿ ಕಾಣುವ ಜಗಳಗಂಟಿತನ, ದಿಟ್ಟತನ, ಜಿಗಟುಗಳು ವಂಶಪಾಲನೆಗೆ ಅಗತ್ಯವಾದ ಗುಣಗಳಾಗಿ ಕಾಣುತ್ತವೆ, ಹೀಗೆ ನಾವು ನಮ್ಮ ಜಗತ್ತಲ್ಲಿ ನೆಗೆಟಿವ್ ಎಂದುಕೊಳ್ಳುವ ವಿಷಯಗಳು- ಜಗಳಗಂಟಿತನ, ಜಿಪುಣತನ, ಚೌರ್ಯ ಇತ್ಯಾದಿ- ದಲಿತ ಹೊಟ್ಟೆಪಾಡಿನ ಅರ್ಥವ್ಯವಸ್ಥೆಯಲ್ಲಿ ಪಾಸಿಟಿವ್ ಮೌಲ್ಯಗಳನ್ನು ಪೋಷಿಸುವ ಉಪಾಯಗಳಾಗುತ್ತವೆ.
ಫೆಲನಿಯ ಸಿನಿಮಾವೊಂದರಲ್ಲಿ ಊರಿನೊಳಕ್ಕೆ ಹಠಾತ್ತನೆ ಬಂದು ನಮ್ಮನ್ನು ಬೆರಗುಗೊಳಿಸುವ ನವಿಲಿನಂತೆ ಒಡಲಾಳದ ರಿಕ್ತ ಪ್ರಪಂಚದಲ್ಲಿ ಪುಟಗೌರಿ ಗೋಡೆಯ ಮೇಲೆ ನವಿಲು ಬರೆಯುತ್ತಾಳೆ. “ಶಿವೂ ತಲ ಎತ್ತಿ ನೋಡಿದರೆ, ನಡುಮನೆ ಗೂಡ ಬಲ ಪಕ್ಕದಲ್ಲಿ ನೀಲಿ ಮೂಡಿದ್ದ ನವುಲು ಶಿವೂನ ನೋಡ್ತ ಕುಣೀತಿತ್ತು” (ಪು1-18).ನಂತರ ಪೊಲೀಸರು ಸಾಕವ್ವನ ಹಟ್ಟಿಯನ್ನು ತಪಾಸಣೆ ಮಾಡುವಾಗ “ಯಾವ ಜಪ್ತಿಗೂ ಸಿಗದೆ ಗೋಡೆ ಮೇಲಿನ ನವುಲುಗಳು ಕುಣಿಯುತ್ತಿದ್ದವು” (ಪುಟ-46).ಶಿವೂ, ಪುಟಗೌರಿ, ವಾಚುಕಟ್ಟಿದ ಗುರಿಸಿದ್ದ, ಸಿಪ್ಪೆ ಸಿಗದ ಹಾಗೆ ಕಡಲೆಕಾಯನ್ನು ತಿಂದುಬಿಡುವ ಎಲ್ಲರೂ ಬೇರೆ ಬೇರೆ ಬಗೆಗಳಲ್ಲಿ ಈ ಹಟ್ಟಿಯೊಳಗಿನ ಬದುಕಿನ ಕಾರ್ಪಣ್ಯವನ್ನು ಮೀರಬಲ್ಲ ಶಕ್ತಿ ಪಡೆದಿದ್ದಾರೆ. ಗುರುಸಿದ್ದು, ಹೋಟೆಲಿಗೆ ನುಗ್ಗಿ “ಕಾಸ ಬಿಸಾಕಿ ‘ದೋಸ ಟೀ ಕೂಡ್ರಿ’” ಎಂದು ರಾಜಕೀಯವಾಗಿಯೇ ದಲಿತ ಸ್ಥಿತಿಯನ್ನು ಮೀರಬಲ್ಲವನು. (ಕಡಲೇಕಾಯಿ ತಿನ್ನುತ್ತಾ ಬೆಂಕಿ ಎದುರು ಇಡೀ ಹಟ್ಟಿ ಸೇರಿದಾಗ ಇವನೇ ‘ಸಹವೀರ್ಯಂಕರವಾವಹ್ಯೆ’ ಕ್ರಿಯೆಗೆ ಕುಮ್ಮಕ್ಕು  ಕೊಡುವವನು.) ವಂಶದ ಪಾಲನೆಯಲ್ಲಿ ಜೀವ ಸವೆಸಿದ ಸಾಕವ್ವ ನೋವನ್ನು ಉಂಡವಳಾದ್ದರಿಂದ ಯಮನಿಗೇ ಸವಾಲು ಹಾಕಬಲ್ಲವಳಾಗಿ ತನ್ನ ಸ್ಥಿತಿ ಮೀರುವವಳು. ಒಡಲಾಳ ಕಥಾನಕ ಹೀಗೆ ತನ್ನ ಮಿತಿಗಳ (necessity]ಇಕ್ಕಟ್ಟಿನ ಪ್ರಪಂಚದಲ್ಲೇ ಸ್ವಾತಂತ್ರ್ಯ (freedom]ವನ್ನು ಸೂಚಿಸುತ್ತದೆ. ಕಥೆಯ ಧಾಟಿ ವೈನೋದಿಕದ್ದಾದ್ದರಿಂದ ಭಾವನೆಗಳನ್ನು ಒಂದರ ಮೇಲೊಂದು ಪೇರಿಸಿ, ಶೃಂಗ ಸ್ಥಿತಿ ಮುಟ್ಟಿಸಿ ಕಥೆಯನ್ನು ಕೊನೆಯಲ್ಲಿ ಮುಕ್ತಾಯಕ್ಕೆ ತರುವ ಅಸಹಜ ಒತ್ತಡ ಲೇಖಕನ ಮೇಲಿಲ್ಲ. ಅಥವಾ ಅಂಥ ಮುಕ್ತಾಯದ ಅಪೇಕ್ಷೆಯೂ ನಮ್ಮಲ್ಲಿ ಹುಟ್ಟುವುದಿಲ್ಲ. ನಿಜ ಜೀವನದಲ್ಲಿ ನಾವು ಕಾಣದ ಕ್ರಾಂತಿಕಾರಕತೆಯನ್ನಾಗಲೀ, ಸಮಸ್ಯೆಗೆ ಉತ್ತರವನ್ನಾಗಲೀ ಕಥೆಯಲ್ಲಿ ಕೊಡಬೇಕಾದ ತಾತ್ವಿಕ ಬಿಕ್ಕಟ್ಟಿಗೆ ಲೇಖಕ ಒಳಗಾಗಲ್ಲ. ನಮ್ಮಲ್ಲಿ ಪ್ರೀತಿಯನ್ನು ಹುಟ್ಟಿಸುವ ಮೂಲಕ ನಮ್ಮ ಅರಿವನ್ನು ಬದಲಾಯಿಸಿ ಹಿಗ್ಗಿಸುವ ಕೆಲಸವನ್ನು ಮಹದೇವರ ಕಥನಕ್ರಮ ಮಾಡುತ್ತದೆ. ಪ್ರತಿಯೊಬ್ಬರೂ ಕಥೆಯಲ್ಲಿ ಒಂದಲ್ಲ ಒಂದು ಬಗೆಯ ಕನಸುಗಾರರಾಗಿಯೇ ಬೆಳೆಯುತ್ತಾರೆ. ಸಾಹುಕಾರ್ ಎತ್ತಪ್ಪನವರ ಸಮೃದ್ಧಿಯೂ ಇವರ ಕನಸುಗಾರಿಕೆಗೆ ಪುಷ್ಟಿಕೊಡುತ್ತದೆ; ಅವರ ಹೊಲದ ಕಡಲೇಕಾಯಿ ಇವರ ಜಠರಾಗ್ನಿಯಲ್ಲಿ ನಿರ್ನಾಮವಾಗುತ್ತದೆ. ಸ್ಥಿತಿಯಲ್ಲೇ ಸಾಧ್ಯತೆ ಹೀಗೆ ಬಿಂಬುತ್ತದೆ.
ಕಥೆಯ ‘ಇಹ’ದಲ್ಲಿ ‘ಪರ’ ಎಂದು ನಮಗೆ ಅನ್ನಿಸುವುದು ‘ಯಾವ ಜಪ್ತಿಗೂ’ ಸಿಗದಂತೆ ಹಟ್ಟಿಯ ಗೋಡೆ ಮೇಲೆ ಕುಣಿಯುತ್ತಿರುವ ನವಿಲುಗಳು. ಓದುತ್ತಿರುವ ಶಿವೂ ಬಿಟ್ಟು ಉಳಿದೆಲ್ಲರ ಅವಜ್ಞೆಗೆ ಒಳಗಾಗುವ ಈ ನವಿಲುಗಳು ಕಥೆಯ ಲೋಕದಲ್ಲಿ ಹುಟ್ಟಿಯೂ ಆ ಲೋಕ ಬಿಟ್ಟು ನಿಲ್ಲುತ್ತದೆ ಎನ್ನಿಸಬಹುದಾದರೂ, ಕಥೆಯ ಲೋಕದ ದೈನಿಕಗಳ ಕ್ಷುದ್ರತೆಯಲ್ಲಿ ಈ ಬಗೆಯ ‘ಪರ’ ಎನ್ನಿಸುವ ಸೌಂದರ್ಯ ಮಾತ್ರ ಸೃಷ್ಟಿಯಾಗಿದೆಯೆಂದು ತಿಳಿದರೆ ತಪ್ಪಾಗುತ್ತದೆ. ರಿಕ್ತವಾದ ಅರ್ಥವ್ಯವಸ್ತೆಯ ಈ ಪ್ರಪಂಚದಲ್ಲಿ ಕಳೆದ ಹುಂಜಕ್ಕಾಗಿ ನಡೆಯುವ ತಪಾಸಣೆ, ಇಲ್ಲದಿರುವ ಆಸ್ತಿ ಬಗ್ಗೆ ಅದೇನೋ ಮಹತ್ತಿನದು ಇದೆ ಎಂಬಂತೆ ಸಾಕವ್ವ ನಡೆಸುವ ಸಂಭ್ರಮದ ಜಗಳ, ಶಿವೂನನ್ನು ಹುಂಜದ ತಪಾಸಣೆಗೆ ಎಳೆದೊಯ್ಯುವ ಉಪಾಯವಾಗಿ ಅವಳು ಹೇಳುವ ಪುರಾಣದ ಶೋಭೆಯುಳ್ಳ ಕಥೆ, ಬೆಂಕಿಯೆದುರು ಕಡಲೇಕಾಯಿ ತಿನ್ನುವಾಗ ನಡೆವ ಮಾತುಕಥೆ- ಈ ಎಲ್ಲ ಪ್ರಸಂಗಗಳೂ ಕ್ಷುದ್ರವಾಗಬಹುದಾಗಿದ್ದ ದೈನಿಕವೇ ಹೊಳೆಯಿಸಿದಂಥವು. ಉಣ್ಣುವಂಥ ಒಂದು ನಿತ್ಯದ ಸಾಮಾನ್ಯ ಕ್ರಿಯೆಯೂ ಇಲ್ಲಿ ಯಜ್ಞಕ್ಕೆ ಸಮಾನವಾದ ರಿಚುಯಲ್. ಸಾಕವ್ವನ ‘ಪಾಲನೆ’ಯ ಪ್ರಪಂಚದಲ್ಲಿ ಹೀಗೆ ಸಾಮಾನ್ಯವಾಗಬಹುದಾದ್ದೆಲ್ಲವೂ ವಿಶೇಷ. ಅವಳು ಪಾಲಿಸುತ್ತಿರುವ ಕಿರಿಯರಾದ ಪುಟಗೌರಿ, ಶಿವೂರಿಂದಾಗಿ ನವಿಲು ಕೂಡ ಈ ದೈನಿಕಗಳೇ ಹೊಳೆಯಿಸುತ್ತಿರುವ ಇನ್ನೊಂದು ಸಂಭ್ರಮ. ಈ ಹಟ್ಟಿಯಲ್ಲಿ ಹೀಗಾಗಿ ದೀಪಹಚ್ಚುವುದೂ, ಅದನ್ನು ಹಂಚಿಕೊಳ್ಳುವುದೂ ಒಟ್ಟಾಗಿ ಉಣ್ಣುವುದೂ “ಸಹನಾವವತು |ಸಹನೌ ಭುನಕ್ತು| ಸಹವೀರ್ಯಂ ಕರವಾವಹೈ” ಎಂಬಂಥ ಉಪನಿಷತ್ತಿನ ಆದರ್ಶವಾದ ಮಾನವ ಸಾಹಚರ್ಯದ ಕ್ರಿಯೆಗಳೇ. ‘ಪಾಲನೆ’ಯಿಂದಾಗಿ ದೈನಿಕವನ್ನೂ ವಿಶೇಷವಾಗಿಸಿಕೊಂಡ ಸಾಕವ್ವನ ಹಟ್ಟಿ ಪೊಲೀಸರಿಂದ ತಪಾಸಣೆಗೆ ಒಳಗಾಗುತ್ತದೆ. ಇದು ಇಡೀ ಹಟ್ಟಿಯ ಜಗತ್ತನ್ನು ನಾಶಮಾಡುವಂತೆ ದೇವನೂರರು ಚಿತ್ರಿಸಬಹುದಿತ್ತು. ಹೈ ಮೈಮಟಿಕ್ ಮಾದರಿಯ ಕಥೆಯಾಗಿದ್ದಲ್ಲಿ ಒಡಲಾಳದ ಪಾತ್ರಗಳು ಈ ಪೊಲೀಸ್ ತಪಾಸಣೆಯನ್ನು ಒಂದೋ ಗೆಲ್ಲಬೇಕಾಗುತ್ತಿತ್ತು. ಅಥವಾ ಅದರಿಂದ ಕರುಣಾಜನಕವೆಂಬಂತೆ ನಾಶವಾಗಬೇಕಾಗಿತ್ತು. ಚಾಪ್ಲಿನ್‍ನ ಬೌಲರ್ ಹ್ಯಾಟ್ ಧರಿಸಿದ ಪುಟ್ಟ ಮನುಷ್ಯನಿಗೆ ನಾಶವಾಗದಂತೆ ಹೇಗೆ ಬಾಳುವುದು ಗೊತ್ತು; ಅಂಥ ಕಾಮೆಡಿಯ ಶಕ್ತಿಯನ್ನು ಪಡೆದ ಕಥೆ ಒಡಲಾಳವಾದ್ದರಿಂದ ಕಡಲೇಕಾಯಿಯನ್ನು ಕದ್ದು ತಂದು ತಿನ್ನುವುದು ಕೂಡ ನವಿಲನ್ನು ಗೋಡೆ ಮೇಲೆ ಕುಣಿಸುವ ಕ್ರಿಯೆಗೆ ಸರಿಸಮವೆನ್ನಿಸುವ ಶೋಭೆಯನ್ನು ಪಡೆದುಕೊಳ್ಳುತ್ತದೆ. ಕ್ಷುದ್ರವಾಗಬಹುದಾಗಿದ್ದ ದೈನಿಕ ಉದ್ದೀಪನಗೊಳ್ಳುತ್ತದೆ. ಪಾಲನೆಯ ಪರದಾಟದಲ್ಲಿ ಕ್ರಾಂತಿಗೆ ಹದಗೊಳ್ಳಬಲ್ಲ ನೆಲೆ ಸೂಚಿತವಾಗುತ್ತದೆ.
ಹೀಗಾಗಿ ಭಾರತದ ಕಥಾಸಾಹಿತ್ಯದಲ್ಲೇ ನಾನು ತಿಳಿದಂತೆ ದೇವನೂರ ಮಹಾದೇವರ ಒಡಲಾಳ ಒಂದು ಅಪೂರ್ವ ಶೋಭೆಯ ಕೃತಿ ಎನ್ನಬಹುದು.