ದೇವನೂರ ಮಹಾದೇವರ ಒಡಲಾಳದ ರಾಜಕೀಯ – ವಿ.ಎನ್.ಲಕ್ಷ್ಮೀನಾರಾಯಣ

v.n.laxmi

1
ಒಡಲಾಳದಲ್ಲಿ ಅನೇಕ ಬಗೆಯ ಜಪ್ತಿಗಳು ನಡೆಯುತ್ತವೆ. ಕತೆಯ ವಿವರಗಳು ಅಲಿಗರಿಯ ಮಟ್ಟದಲ್ಲಿ ದಾಖಲಾಗಿವೆ. ಪಾತ್ರಗಳ ಪರಿಚಯ, ಘಟನೆಗಳ ನಿರೂಪಣೆ, ಜಪ್ತಿಯ ರೀತಿಯಲ್ಲೇ ನಡೆದು, ಬಡತನದ ಮೂಲ ಪದರವಾದ ಹಸಿವನ್ನು ಚಿತ್ರಿಸುವ ಪ್ರಕ್ರಿಯೆಯಲ್ಲಿ ವಿವಿಧ ಬಗೆಯ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಸಾಧ್ಯತೆಗಳ ಜಪ್ತಿಗಳೂ ನಡೆಯುತ್ತವೆ. ಇವಕ್ಕೆ ಹೊಂದಿಕೊಂಡಂತೆ ಇರುವ ಫ್ಯಾಂಟಸಿ, ಹೊಟ್ಟೆ ತುಂಬಿದವರ ಕಲೆ, ಹಸಿದಿರುವವರ ಕಲೆ, ಹೀಗೆ ಈ ಮೂರನ್ನೂ ಒಳಗೊಂಡ ನಿರೂಪಣಾ ತಂತ್ರದಲ್ಲಿ ಒಡಲಾಳ ಒಂದು ಕಲಾಕೃತಿಯಾಗಿ ಮೈದಾಳುತ್ತದೆ.
ಅಲಿಗರಿಯಾಗಿ ಒಡಲಾಳ, ಅವನತಿ ಹೊಂದುತ್ತಿರುವ ಯಾವುದೇ ಬಡ ಸಂಸಾರದ, ಹಳ್ಳಿಯ, ವಿಶಾಲ ಭಿತ್ತಿಯಾಗಿ ಭಾರತದ ಕತೆಯಾಗುತ್ತದೆ. ಒಂದು ಕಾಲದಲ್ಲಿ ತಕ್ಕಷ್ಟು ಸಮೃದ್ಧಿಯನ್ನು ಕಂಡಿರಬಹುದಾದ ಸಾಕವ್ವನ ಹಟ್ಟಿಯು ಕ್ರಮೇಣ ವಿರೂಪಗೊಂಡು, ಮಳೆಯಿಲ್ಲದ ಕಾರಣವೂ ಸೇರಿದಂತೆ ಅನೇಕ ರೀತಿಯಲ್ಲಿ ಹಸಿವಿನ ಒಡಲಾಗಿ ನಿಲ್ಲುತ್ತದೆ ಬದುಕೇ ಸಾಕಾದ ಅಥವಾ ಎಲ್ಲರನ್ನೂ ಸಾಕಬಲ್ಲವಳಾಗಿದ್ದ ಸಾಕವ್ವ, ಮೂರು ಮಕ್ಕಳ ಪಾಲಿಗೆ ಹಂಚಿಹೋದ ಹಟ್ಟಿಯಲ್ಲಿ ಕುಳಿತು ಯಮನಿಂದ, ಮೊಮ್ಮಗು ಶಿವು ಭೂಲೋಕದಲ್ಲಿ ರಾಜ್ಯಭಾರ ಮಾಡುವಂಥ ವರ ಬೇಡುವ ಕನಸು ಕಾಣುತ್ತಾಳೆ. ಸದಾ ರೋಗಗ್ರಸ್ತವಾದ ಪರ ತಂತ್ರವಾದ ಅಧಿಕಾರಶಾಹಿಯನ್ನು ನೆನಪಿಸುವ ದುಷ್ಟ ಕಮೀಷನರು, ಗಂಡನಿಂದ ದೂರವಾಗಿ ಅಥವಾ ಅವನಿಗಾಗಿ ಹಂಬಲಿಸುವ ‘ಪತಿವ್ರತೆ’ಯಾದ ಗೌರಮ್ಮಗಳು ಎಣ್ಣೆಯಿಲ್ಲದ ಎಣ್ಣೆ ಗಡಿಗೆಯಂತೆ, ತುಪ್ಪವಿಲ್ಲದ ತುಪ್ಪದ ಕುಡಿಕೆಯಂತೆ ನಿರರ್ಥಕತೆಯನ್ನು ಅನುಭವಿಸುತ್ತಿರುತ್ತಾರೆ. ಹೊರಗೆ ಸಂಪಾದಿಸಬಲ್ಲ ಛಾತಿಯುಳ್ಳ ಗುರುಸಿದ್ದು ಮಾರಿಗುಡಿಯ ‘ಹಾರ್ಮನಿ’ಯಲ್ಲಿ ಸುಖ ಕಾಣುವ ‘ಶಿಖಂಡಿ’ಯಾಗಿದ್ದಾನೆ. ಸ್ವಾರ್ಥಿಯಾದ ಸಣ್ಣಯ್ಯ ಸಣ್ಣ ಮನಸ್ಸಿನವನಾಗಿ, ‘ಚೆಲುವಮ್ಮ’ನ ಮರೆಯಲ್ಲಿ ನಿಂತೇ ಆಸ್ತಿಗಾಗಿ ಹಂಬಲಿಸುವ ಮಧ್ಯಮ ವರ್ಗೀಯನಾಗಿದ್ದಾನೆ. ಬಡ್ಡಿ ಸಾಹುಕಾರ ಎತ್ತಪ್ಪನ ಕಡಲೇಕಾಯಿಯನ್ನು ಕದ್ದು ಹಟ್ಟಿಯ ಜನರ ಒಡಲಾಳದ ಬೆಂಕಿಗೆ ಸುರಿಯುವ ಕಾಳಣ್ಣನಿಗೆ, ಕದಿಯುವುದು ಆನೈತಿಕ ಕ್ರಿಯೆಯಾಗಿರದೆ, ಸದ್ಯದ ಅವಶ್ಯಕತೆ ಹೇಗೋ ಹಾಗೆಯೇ ಉಳ್ಳವರ ವಿರುದ್ಧದ ಭೌತಿಕ ಮತ್ತು ತಾತ್ವಿಕ ದಂಗೆಯಾಗಿದೆ. ಉಳ್ಳವರ ನೈತಿಕತೆಯನ್ನು ಬೆಂಬಲಿಸುವ ಹೊಣೆ ಹೊತ್ತ ಇಡೀ ಪೋಲೀಸು ವ್ಯವಸ್ಥೆಯನ್ನು ರೇವಣ್ಣನ ರೂಪದಲ್ಲಿ ವಿದೂಷಕನ ಮಟ್ಟಕ್ಕೆ ಇಳಿಸಲಾಗಿದೆ.ಈ ಎಲ್ಲ ವಿವರಗಳ ಮಧ್ಯೆಯೇ, ಎಲ್ಲ ಕಷ್ಟಗಳನ್ನು ಹೊತ್ತು, ತಂದೆಯನ್ನು ಎಲ್ಲೂ ನೆನಪಿಸಿಕೊಳ್ಳದ ಕಾಳಣ್ಣನ ಮಾತೃಪ್ರೇಮ, ತನ್ನ ಕಷ್ಟಗಳ ನಡುವೆಯೂ ಎಲ್ಲರನ್ನೂ ಅನುಕಂಪದಿಂದ ಕಾಣುವ, ಕಾಳಣ್ಣನ (ಹೆಸರಿಲ್ಲದ) ಹೆಂಡತಿಯ ಸಮುದಾಯ ಪ್ರೀತಿ ಎದ್ದು ತೋರುವಂತಿವೆ.
ಕತೆಯ ಹಂದರಲ್ಲಿ ಎರಡು ಬಗೆಯ ಶೋಧಗಳು ಏಕಕಾಲಕ್ಕೆ ಮುಖಾಮುಖಿಯಾಗಿ ನಡೆಯುತ್ತಲೇ ಹೋಗುತ್ತವೆ. ಎತ್ತಪ್ಪನವರ ಕಡಲೇಕಾಯಿ ಕಳ್ಳನಿಗಾಗಿ ಪೋಲೀಸರ ಶೋಧ ನಡೆದಿದ್ದಾಗ, ಸಾಕವ್ವ ಕಳೆದುಹೋದ ತನ್ನ ಹುಂಜನಿಗಾಗಿ, ಊರ ತಿಪ್ಪೆಗಳಲ್ಲಿ, ಮನೆ ಮನೆಗಳ ಸಾರಿನ ರುಚಿಯಲ್ಲಿ ಹಡುಕಾಟ ನಡೆಸುತ್ತಾಳೆ. ಕಡಲೇಕಾಯಿ ಕಳ್ಳ ಪೋಲೀಸರ ಕೈಗೆ ಹೇಗೆ ಸಿಗುವುದಿಲ್ಲವೋ ಹಾಗೆಯೇ ಹುಂಜನನ್ನು ಕದ್ದವರೂ ಸಾಕವ್ವನಿಗೆ ಸಿಕ್ಕುವುದಿಲ್ಲ. ಹುಂಜನನ್ನು ಪತ್ತೆಮಾಡಿ ಕೊಡಲಾಗದ ಮನೆ ದೇವರ ಸತ್ಯವೂ ಇಲ್ಲಿ ಬಯಲಾಗುತ್ತದೆ.
ಹಗಲು ಕನಸಿನಲ್ಲಿ ಯಮ ದೇವರಿಗೂ ಹೆದರದ ಸಾಕವ್ವ, ನಿಜಜೀವನದಲ್ಲಿ ಬಾಗಿಲು ಬಡಿಯುವ ಯಮದೂತರಂತಿರುವ ಪೋಲೀಸರನ್ನು ಕಂಡು ನಡುಗುತ್ತಾಳೆ. ಹಟ್ಟಿಯಲ್ಲಿ ಪೋಲೀಸ್ ಜಪ್ತಿ ನಡೆಸಿದ್ದಾಗ, ಶಿಷ್ಟ ದೇವರಾಯ ಕೃಷ್ಣಪರಮಾತ್ಮ ಬಳೆ ಮಾಲೆ ಧರಿಸಿ ಸುಮ್ಮನೆ ಇದ್ದರೆ ದಲಿತ ದೇವರಾದ ಹುಲಿಯ ಮೇಲೆ ಕುಳಿತ ಮಲೆಮಾದೇಶ್ವರ ಕಿರುನಗೆ ಸೂಸುತ್ತಾ ನಿಲ್ಲುತ್ತಾನೆ ಇದು ಹಸಿದವರ ಸಮಕ್ಷಮದಲ್ಲಿ ನಡೆಯುವ ದೇವರ ಜಪ್ತಿ.
ರಾಜಕೀಯ ಪಕ್ಷ ಸಿದ್ಧಾಂತಗಳನ್ನು ಧ್ವನಿಸುವಂತಿರುವ ಕೆಲವು ವಿವರಗಳು ಪೋಲೀಸರ ಜಪ್ತಿಯಲ್ಲೇ ಕಾಣಸಿಗುತ್ತವೆ. ಹಳೆಯ ಜನಸಂಘವನ್ನು ಜ್ಞಾಪಿಸುವ ದೀಪಾಲೆ ಕಂಬದ ಮೇಲಿನ ಎಣ್ಣೆಯಿಲ್ಲದ ದೀಪ, ಇಡೀ ಗಾಂಧೀವಾದಕ್ಕೇ ಕನ್ನಡಿ ಹಿಡಿದಂತಿರುವ, ಅಥವಾ ಗಾಂಧೀವಾದದ ದುಸ್ಥಿತಿಯನ್ನು ನಿರೂಪಿಸುವ ‘ಗೋಡೆಗೆ ನೇತು ಬಿಗಿದ ನೂಲೋರಾಟೆ’, ವಿವಿಧ ರಾಜಕೀಯ ಪಕ್ಷಗಳ ಎಡ-ಬಲ, ಮೇಲು-ಕೀಳುಗಳನ್ನು ವ್ಯಗ್ರವಾಗಿ ಲೇವಡಿ ಮಾಡುವ ವಿವರಣೆ, ಅಂದರೆ ಅಲ್ಲಾಡಿಸಿದಾಗ ‘ಲೊಳ ಲೊಳ’ ಎನ್ನುವ, ಕತ್ತಲೆಯ ಗರ್ಭದಲ್ಲಿ ನಿರುಪಯೋಗಿಯಾಗಿ ಬಿದ್ದ, ಗೋಣೀಚೀಲದಲ್ಲಿ ಸುತ್ತಿಟ್ಟ ‘ಕುಡುಗೋಲು ಸುತ್ತಿಗೆ, ಎಲಕೋಟು’ ಇತ್ತಾದಿಗಳು, ಮತ್ತೊಂದು ಕಡೆ, ಸವೆದ ಚಲಾವಣೆ ಕಳೆದುಕೊಂಡ ನಾಣ್ಯಗಳು. ಹೀಗೆ ರಾಜಕೀಯ ಆರ್ಥಿಕ ಜಪ್ತಿ ನಡೆಯುತ್ತದೆ. ಈ ಮಧ್ಯೆ, ಯಾವ ಜಪ್ತಿಗೂ ಸಿಗದೆ ಕುಣಿಯುವ ಪುಟಗೌರಿಯ ನವಿಲುಗಳನ್ನು ಕತೆಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಗಿದೆ.
ಒಡಲಾಳದಲ್ಲಿ ಚಿತ್ರಿತವಾಗಿರುವ ಬಡತನ, ಪಾರಂಪರಿಕವಾದ ಬಡತನ ಮತ್ತು ಸದ್ಯದ ಪರಿಸ್ಥಿತಿಯಿಂದ ಹುಟ್ಟಿದ ಬಡತನ ಈ ಎರಡು ಮುಖಗಳನ್ನು ಪಡೆದುಕೊಂಡಿದೆ. ಅಲ್ಲದೆ ಅದು ಸಾಕವ್ವನ ಹಟ್ಟಿಗೇ ವಿಶಿಷ್ಟವಾಗಿರುವಂತೆ ತೋರುತ್ತದೆ. ಮಳೆಯಿಲ್ಲದೆ, ಕೂಲಿ ಸಿಗದೆ ಪರದಾಡುವ ಸಾಕವ್ವನ ಸಂಸಾರವಿರುವ ಊರಿನಲ್ಲೇ ಎತ್ತಪ್ಪ ಮತ್ತು ಪರ್ವತಯ್ಯನಂಥ ಅನುಕೂಲಸ್ಥರೂ ಇದ್ದಾರೆ. ಸಾಕವ್ವನ ಹಟ್ಟಿಯಲ್ಲೇ, ಹಸಿದವರ ಮಧ್ಯದಲ್ಲೇ ಇತರರಿಂದ ಮುಚ್ಚಿಟ್ಟ ಆಪತ್ಕಾಲೀನ ದಾಸ್ತಾನಿನ, ಇದ್ದರೂ ಇಲ್ಲವೆನ್ನುವ ಚೆಲುವಮ್ಮ ಇದ್ದಾಳೆ, ಸಾಕವ್ವನ ಹಳ್ಳಿಯಲ್ಲಿ ನಿರುಪಯುಕ್ತವಾಗಿ ಬಿದ್ದ ಸಾಮಾನಿನ ದಾಸ್ತಾನು ಒಗೆದು ಮಡಿಸಿಟ್ಟ ಬಟ್ಟೆಬರೆ, ಪುಟ್ಟಗೌರಿ ನವಿಲು ಬರೆಯಲು ಕಲಸುವ ನೀಲಿ ಇವನ್ನೆಲ್ಲಾ ನೋಡಿದರೆ ಇಲ್ಲಿನ ಮೂಲ ಸಮಸ್ಯೆ ‘ಹಸಿವೆ’ಯೇ ಹೊರತು ಬಡತನವಲ್ಲ ಎಂದೆನಿಸುತ್ತದೆ, ಹಟ್ಟಿಯ ಜನರ ದೇಹಾರೋಗ್ಯ, ಸ್ಥಿತಿಗತಿ. ಒಡನಾಟ ಹವ್ಯಾಸಗಳನ್ನು ಗಮನಿಸಿದರೆ, ಹಸಿವು ಅವರ ಬಡತನದ ಒಂದು ಸಾಮಾನ್ಯ ಅಂಶ ಮಾತ್ರವೇ ಹೊರತು ಹಸಿವೆಯೇ ಬಡತನವಲ್ಲವೆಂಬ ಅಂಶ ಸ್ಪಷ್ಟವಾಗುತ್ತದೆ.‘ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’ ಕತೆಯ ರಂಗಪ್ಪ, ನಿಜವಾದ ಅರ್ಥದಲ್ಲಿ ಬಡವ. ಎತ್ತಪ್ಪನವರ ಮನೆಯಲ್ಲಿ ಮೂರು ಹೊತ್ತು ಉಂಡರೂ ಪೋಲೀಸ್ ರೇವಣ್ಣ ಬಡವನೇ. ಹಸಿವು ಬಡತನಗಳ ಈ ಸಾಪೇಕ್ಷ ಸಂಬಂಧ ಮತ್ತು ವ್ಯತ್ಯಾಸಗಳನ್ನು ಸ್ಪಷ್ಟಪಡಿಸಿಕೊಳ್ಳಲಾಗದ್ದಕ್ಕೆ ಲೇಖಕರಿಗಿರುವ ತಾತ್ವಿಕ ಗೊಂದಲ ಮತ್ತು ಅಸ್ಪಷ್ಟತೆ ಕಾರಣವಿರಬೇಕೆಂದೆನಿಸುತ್ತದೆ. ತಾತ್ವಿಕವಾಗಿ ಹಸಿವಿಗೆ ಪರಿಹಾರವಿಲ್ಲ. ಆದರೆ ಬಡತನಕ್ಕೆ ರಾಜಕೀಯ-ಸಾಮಾಜಿಕ ಪರಿಹಾರವಿದೆ, ಆದರೆ ಎಲ್ಲ ಬಗೆಯ ಧಾರ್ಮಿಕ-ರಾಜಕೀಯ ಪರಿಹಾರಗಳನ್ನು ನಿರರ್ಥಕವೆಂದು, ಒಡಲಾಳದಲ್ಲಿ ನಿರೂಪಿಸಲಾಗಿದೆ. ಕುಸುಮಬಾಲೆಯಲ್ಲೂ ರಾಜಕೀಯ ಪರಿಹಾರಗಳ ವಿವಿಧ ಸಾಧ್ಯತೆಗಳನ್ನು ಲೇವಡಿ ಮಿಳಿತ ತಿರಸ್ಕಾರದಿಂದ ಚಿತ್ರಿಸಲಾಗಿದೆ, ಕಳ್ಳತನವನ್ನೂ ಎರಡೂ ಕೃತಿಗಳಲ್ಲಿ ಹಸಿವು-ಬಡತನದ ಸಮಸ್ಯೆಯ ಪರಿಹಾರೋಪಾಯದ ಒಂದು ಸಾಧ್ಯತೆಯನ್ನಾಗಿ ಸೂಚಿಸಲಾಗಿದೆ. ಇಲ್ಲದವರ ನೈತಿಕತೆಯ ಬೆಳಕಿನಲ್ಲಿ ಇದನ್ನು ಕಳ್ಳತನವಲ್ಲ ಎಂದು ಅರ್ಥೈಸಿದರೆ, ಉಳ್ಳವರು ಮಾಡಿದ ದರೋಡೆಯಲ್ಲಿ ಒಂದಿಷ್ಟನ್ನು ಕದಿಯುವುದು ಅನ್ನದ ಮರುಹಂಚಿಕೆಯ ಕ್ರಮವಾಗುತ್ತದೆ. ಅಮಾಸ ಕುರಿಯಯ್ಯ ಬೆಳೆಸಿದ ತೆಂಗಿನ ಮರದಿಂದ ಗೌಡರ ಆಳು ಕಾಯಿ ಉದುರಿಸಿಕೊಂಡು ಹೋಗುವುದು, ಸಾಕವ್ವನ ಇನ್ನೊಂದು ಹುಂಜವನ್ನು ಪೋಲೀಸ್ ಇನ್‍ಸ್ಪೆಕ್ಟರ್ ಎಗರಿಸಿಕೊಂಡು ಹೋಗುವುದು. ಈ ಮರುಹಂಚಿಕೆಯನ್ನು ವಿಫಲಗೊಳಿಸುವ ಪ್ರತಿಕ್ರಮಗಳಾಗುತ್ತವೆ. ಈ ಕ್ರಮ ಪ್ರತಿಕ್ರಮಗಳು, ರಾಜಕೀಯ ಪರಿಹಾರಗಳಾಗಿ, ಸಾಮಾಜಿಕ ನೆಲೆಗಳಲ್ಲಿ ಅನುಷ್ಠಾನಗೊಳ್ಳದಿದ್ದಾಗ ಹಸಿವು-ಬಡತನಗಳ ಚಿತ್ರಣಗಳಲ್ಲಿ ಕೇವಲ ತನ್ನಷ್ಟಕ್ಕೆ ಸುಂದರವಾದ ಕಲಾಕೃತಿಗಳಾಗುತ್ತವೆ, ಯಾವ ಜಪ್ತಿಗೂ ಸಿಗದೆ ಕುಣಿಯುವ ನವಿಲುಗಳಾಗುತ್ತವೆ. ಕಾಲಿನಿಂದ ಪ್ರಾರಂಭಿಸಿದ ಅಥವಾ ತಲೆಯಿಂದಲೇ ಪ್ರಾರಂಭಿಸಿದ ಪರಿಣಾಮ ಏನೂ ವ್ಯತ್ಯಾಸವಾಗುವುದಿಲ್ಲ. ಕಲಾಕಾರ ಮಾರಿಗುಡಿಯ ‘ಹಾರ್ಮನಿ’ಯಲ್ಲಿ ಸುಖ ಕಾಣುವ ಶಿಖಂಡಿಯಾಗುತ್ತಾನೆ. ಅಥವಾ ಎಲೆ ಅಡಿಕೆಯೂ ಸಿಗದ ಮನೆಯಲ್ಲಿ ನೀಲಿ ಕಲೆಸಿ ನವಿಲು ಬರೆಯುವ ಹಸಿದ ಹೊಟ್ಟೆಯ ಪುಟ್ಟಗೌರಿಯಾಗಲು ಸಾಧ್ಯ. ಸ್ಕೂಲು ಉಪ್ಪಿಟ್ಟನ್ನು ರೋಗಿಷ್ಟ ದುಪ್ಟ್ಟಿ ಕಮಿಷನರ್ ಅಣ್ಣನೊಂದಿಗೆ ಹಂಚಿಕೊಂಡು ತಿಂದು ಚಿಕ್ಕಿಯನ್ನು ಅನುಸರಿಸುವ ‘ಶಿವು’ ಕಲಾಕೃತಿಯನ್ನು ಕಂಡು ರೊಮಾಂಚಿತನಾಗುವುದೂ ಸಾಧ್ಯ. ಒಡಲಾಳದ ಮುಖ್ಯ ಮಿತಿ ಇದೇ.
ಪುಟ್ಟಗೌರಿಯು ‘ಕಲೆ’ಯನ್ನು ಲೇವಡಿ ಮಾಡುವ ಸಾಕವ್ವ ತನ್ನ ಮೊಮ್ಮಗು ರಾಜ್ಯಭಾರ ಮಾಡುವಂತಾಗಲು ಹಗಲುಗನಸಿನ ಮೊರೆ ಹೋಗುತ್ತಾಳೆಂಬುದನ್ನೂ ಇಲ್ಲಿ ವಿಶೇಷವಾಗಿ ಗಮನಿಸಬೇಕು. ಹಗಲುಗನಸು ಕಲೆಯ ಒಂದು ಮುಖ ತಾನೆ! ಸಾಕವ್ವನು ಪಾತ್ರ ಕಲ್ಪನೆಯಲ್ಲಿ ಹೊರಗಿನಿಂದ ತಂದು ತುರುಕಿದಂತೆ ಕಾಣುವ ಸಾಕವ್ವನ ಮೊಮ್ಮಗನ ಕೈಲಿನ ‘ರಾಜ್ಯಭಾರ ಆಸೆ’ ವ್ಯಕ್ತಿ ಮಟ್ಟದ ಕನಸಿನಿಂದಾಚೆ ಏನನ್ನೂ ಹೇಳುವುದಿಲ್ಲ. ಅಮಾಸ ಕತೆಯಲ್ಲಿ, ಗ್ಯಾಂಗ್‍ಮಾನ್ ಸಿದ್ದಪ್ಪ ಕುಡಿದ ಅಮಲಿನಲ್ಲಿ ಮಾತ್ರ ‘ಕಮ್ಯುನಿಸಮ್ಮು ಬರಬೇಕು’ ಎಂದು ಹಂಬಲಿಸುತ್ತಾನೆ. ಒಡಲಾಳದ ‘ಸುತ್ತಿಗೆ-ಕುಡಗೋಲುಗಳು’ ಕತ್ತಲೆಯಲ್ಲಿ ಪೋಲೀಸರೆದುರು ಲೊಳಲೊಳ ಎನ್ನುತ್ತವೆ. ಅಂದರೆ ಲೇಖಕರ ರಾಜಕೀಯ ಅಸ್ಪಷ್ಟತೆ-ತಾತ್ವಿಕ ಗೊಂದಲಗಳು ಅವರ ಬರಹಗಳಲ್ಲಿ ಎಡ ರಾಜಕೀಯವನ್ನು ಅಸಹನೆಯಿಂದ, ತಿರಸ್ಕಾರದಿಂದ ನೋಡುವುದಕ್ಕೆ ಕಾರಣವಾಗಿವೆ. ಇತ್ಯಾತ್ಮಕ ಪರಿಹಾರದ ಒಲವು ಫ್ಯಾಂಟಸಿಯಲ್ಲಿ ನಿಲ್ಲುವ ಆಸೆ ಮಾತ್ರ ಆಗುತ್ತದೆ. ಬಡತನ, ಹಸಿವುಗಳು, ತಾತ್ವಿಕ ಮತ್ತು ರಾಜಕೀಯ ಪರಿಹಾರಗಳ ಶೋಧನೆಗೆ ದಾಳಿಮಾಡಿ ಕೊಡದೆ ಹೊಸಬಗೆಯ ಕಲಾಕೃತಿಗಳ ಆಕರ್ಷಕ ವಸ್ತುಗಳಾಗಿ ಮಧ್ಯಮ ವರ್ಗೀಯರನ್ನು ರಂಜಿಸುತ್ತವೆ. ಯಾವ ಜಪ್ತಿಗೂ ಸಿಗದ ನವಿಲುಗಳಾಗಿ ಕುಣಿಯುತ್ತದೆ.
ಪೋಲೀಸು ಕ್ರೌರ್ಯವನ್ನು ಇನ್‍ಸ್ಪ್ಟೆಕ್ಟರ್, ದಫೇದಾರ ಮತ್ತು ಇತರ ಪೇದೆಗಳಿಗೆ ಸೀಮಿತಗೊಳಿಸಿ, ರೇವಣ್ಣನನ್ನು ಕ್ವಿಕ್ಸೋಟನಂತೆ ಚಿತ್ರಿಸಿ ಕ್ರೌರ್ಯದಿಂದ ಪಾರು ಮಾಡಿರುವುದಲ್ಲದೆ, ಅವನ್ನೇ ಹಳ್ಳಿಯ ಹೆಂಗೆಳೆಯರ ಗ್ರಾಮ್ಯ ಹಾಸ್ಯದ ವಸ್ತುವಾಗಿ ನಿಲ್ಲಿಸುವುದರಲ್ಲಿ, ಸಾಕವ್ವನ ಹಟ್ಟಿಯ ಜನರೊಂದಿಗೆ ಸಮೀಕರಿಸುವ ಲೇಖಕರ ಯತ್ನ ನಷ್ಟವಾಗಿದೆ. ಹುಳವನ್ನು ಹಿಡಿದು ತಂದ ಕೋಳಿಮರಿಯನ್ನು, ಕೋಳಿ ನೋಡುವಂತೆ, ರೇವಣ್ನನನ್ನು ನೋಡುವ ಇನ್‍ಸ್ಪೆಕ್ಟರ್, ಮಾಲು ಸಿಗದಿದ್ದಾಗ ಸಾಕವ್ವನ ಮಕ್ಕಳನ್ನು ಸಂಬೋಧಿಸುವಂತೆಯೇ ರೇವಣ್ಣನನ್ನೂ ನಿಕೃಷ್ಟವಾಗೆ ಸಂಬೋಧಿಸುತ್ತಾನೆ. ಕಳ್ಳನನ್ನು ಹಿಡಿಯುವ ರೇವಣ್ಣನ ಯತ್ನ ಹುಂಜನನ್ನು ಹುಡುಕುವ ಸಾಕವ್ವನ ಯತ್ನದಷ್ಟೇ ನಿರರ್ಥಕ. ಇಲಿಯ ಬಿಲವನ್ನು ಗುದ್ದಿ, ಮಾಲು ಸಿಕ್ಕಿತು ಎಂದು ರೇವಣ್ಣ ಸಂತೋಷಿಸುವುದೂ, ಕಳೆದುಹೋದ ಹುಂಜನನ್ನು ಹುಡುಕಿ ತರಲು ಇನ್ನೊಂದು ಹುಂಜ ಬೇಕೆಂದು ಇನ್‍ಸ್ಪೆಕ್ಟರ್ ಹೇಳಿದಾಗ ಒಂದು ಕ್ಷಣ ಸಾಕವ್ವ ಸಂತೋಷಿಸುವುದೂ ಒಂದೇ ನೆಲೆಯಲ್ಲಿವೆ. ರೇವಣ್ಣನ ನಿರರ್ಥಕತೆಯ ನೋವು, ಸಾಕವ್ವವ ಹುಂಜಗಳನ್ನು ಕಳೆದುಕೊಂಡ ನೋವು ಎರಡೂ ಯಾರಿಗೂ ಕೇಳಿಸದೆ ಹೋಗುತ್ತದೆ. ಸಾಕವ್ವ ‘ಅಯ್ಯೋ’ ಎಂದು ಪೇಚಾಡಿಕೊಂಡಿದ್ದರ ಪ್ರಾಸ್ತಾಪವಾದರೂ ಇದೆ. ಆದರೆ ರೇವಣ್ಣನ ನಿರರ್ಥ ಕತೆಯ ನೋವು ಇನ್ನೂ ಆಳದಲ್ಲಿ ಓದುಗರ ಸಂವೇದನಾಶೀಲ ಕಲ್ಪನೆಗೆ ಮಾತ್ರ ಸಿಗುವಷ್ಟು ತೀವ್ರವಾಗಿದೆ. ಈ ಅರ್ಥದಲ್ಲಿ ಪೋಲೀಸ್ ರೇವಣ್ಣ, ಸಾಕವ್ವನಿಗಿಂತಲೂ  ಹೆಚ್ಚು ಆಳವಾಗಿ, ಹೇಳಿಕೆಯ ಮಟ್ಟವನ್ನೂ ಮೀರಿ ಧ್ವನಿಯಲ್ಲೇ ಚಿತ್ರಿತವಾಗಿರುವ ದುರಂತ ಪಾತ್ರ. ಅವನಿಗೆ ಸಂಬಂಧಿಸಿದ ಎಲ್ಲ ವಿವರಗಳೂ ದುರಂತ ಹಾಸ್ಯವನ್ನೇ ಹುಟ್ಟಿಸುತ್ತದೆ. ‘ಒಂದಕ್ಕೆ ಎರಡರಂತೆ ತಿಂದರೂ ಮೂಟೆ ಮುಗಿಯುವುದು ಸಾಧ್ಯವೆ’ ಎಂಬ ಇನ್‍ಸ್ಪೆಕ್ಟರ್‍ನ ಪ್ರಶ್ನೆ, ‘ಹೊಟ್ಟೆಯಲ್ಲಿ ಬೆಂಕಿಯಿಟ್ಟುಕೊಂಡ ಜನ ತಿಂದಿರಲೂಬಹುದು’ ಎಂಬ ಎತ್ತಪ್ಪನ ವಿವರಣೆಯ ಅನವಶ್ಯಕ ಮಟ್ಟಕ್ಕೆ ಹೋಲಿಸಿದರಂತೂ ಪೋಲೀಸ್ ರೇವಣ್ಣನ ದುರಂತದ ತೀವ್ರತೆ, ಗಾಢವಾದ ವ್ಯಂಗ್ಯ ಸ್ಪಷ್ಟವಾಗಿ ಗೋಚರಿಸುತ್ತದೆ. ಕತೆಯ ಮೇಲ್ಪದರಲ್ಲಿ, ಹೇಳಿಕೆಯ ಮಟ್ಟದಲ್ಲಿ, ಸಾಕವ್ವ ಕಥಾನಾಯಕಿಯಾದರೆ, ಒಡಲಾಳದಲ್ಲಿ ಹಸಿವು-ಕ್ರೌರ್ಯಗಳ ಪ್ರಪಂಚದ ನಿಜವಾದ ದುರಂತ ನಾಯಕ ಪೋಲೀಸ್ ರೇವಣ್ಣನೆ, ಇಡೀ ಕತೆ ಜಪ್ತಿಯ ಶೈಲಿಯಲ್ಲಿ ನಿರೂಪಿತವಾಗಿರುವುದಕ್ಕೆ ಇದೇ ಕಾರಣ ಎಂದು ನನಗೆ ತೋರುತ್ತದೆ.
ಒಡಲಾಳ ಅಸ್ಪಷ್ಟ ರಾಜಕೀಯ ನಿಲುವಿನ ಶಿಷ್ಟಮನಸ್ಸು, ಹಸಿವು: ಬಡತನಗಳ ಹೊಸ ಪರಿಕರಗಳನ್ನು ಬಳಸಿಕೊಂಡು ನವ್ಯಶೈಲಿಯಲ್ಲಿ ಸೃಜಿಸಿದ ಒಂದು ಕಲಾಕೃತಿ. ಕನ್ನಡ ಸಾಹಿತ್ಯದಲ್ಲಿ ಅದಕ್ಕೆ ಸಿಕ್ಕಿರುವ ಮಹತ್ವ ಮೂಲತಃ ಹೊಗಳುವವರ ಸ್ವಂತ ಹಿತಾಸಕ್ತಿ, ರಾಜಕೀಯ ನಿಲುವಿನಲ್ಲಿನ ಅವರ ಅಸ್ಪಷ್ಟತೆ ಅಥವಾ ದಿವಾಳಿತನ ಹಾಗೂ ಆಳುವ ವರ್ಗಗಳು, ಅಧಿಕಾರ ಕೇಂದ್ರದ ಕಡೆಗೆ ಮುನ್ನೊತ್ತಲು ಹವಣಿಸುವ ಹೊಸ ಶಕ್ತಿಗಳನ್ನು ತಮ್ಮ ಕೃಪಾ ಪೋಷಣೆಗೆ ಒಳಪಡಿಸಿಕೊಂಡು ತನ್ನಲ್ಲಿ ಲೀನವಾಗಿಸಿಕೊಳ್ಳುವ ರಾಜಕೀಯ ಫಲಶೃತಿಯಾಗಿದೆ. ‘ದ್ಯಾವನೂರು’, ‘ಒಡಲಾಳ’ಗಳಲ್ಲಿ ಕಾಣುವ ಹಸಿಹಸಿಯಾದ ‘ಮಿಲಿಟೆಂಟ್’ ಮನಸ್ಸು ಕುಸುಮಬಾಲೆಯಲ್ಲಿ ಕಲಾತ್ಮಕ ನಯಗಾರಿಕೆಗೆ ಹೆಚ್ಚು ಒತ್ತುಕೊಟ್ಟು ಸೃಜನಶೀಲವಾಗಿರುವುದು ಗೋಚರಿಸುತ್ತದೆ.
2
ರಾಜಕೀಯವಾಗಿ ಪ್ರಾಮುಖ್ಯತೆ ಪಡೆಯುವ ಸಂಸ್ಕೃತಿಯ ಕೀರ್ತನೆ, ಚರಿತ್ರೆಯುದ್ದಕ್ಕೂ ಕಂಡುಬರುತ್ತದೆ. ವೈದಿಕ ಸಾಹಿತ್ಯದಲ್ಲಿ ಪ್ರಾಕೃತಿಕ ಶಕ್ತಿಗಳ ಪ್ರತೀಕಗಳ ಕೀರ್ತನೆ, ಕ್ಷತ್ರಿಯರ ಪ್ರಾಬಲ್ಯ ಹೆಚ್ಚಾದಂತೆ ಕ್ಷಾತ್ರಬಲದ ಕೀರ್ತನೆ, ಬ್ರಾಹ್ಮಣ ಧರ್ಮ ಆಳುವ ವರ್ಗದ ಸಂಸ್ಕೃತಿಯಾಗಿರುವ ತನಕವೂ ಆಧ್ಯಾತ್ಮ ಮತ್ತು ಬ್ರಾಹ್ಮಣ ಮೌಲ್ಯಗಳ ಕೀರ್ತನೆ, ವಸಾಹತೀಕರಣಕ್ಕೂಳಗಾದಾಗ ಪಾಶ್ಚಾತ್ಯ ಮೌಲ್ಯಗಳ-ಸಂಸ್ಕೃತಿಯ ಕೀರ್ತನೆ ನಡೆದು ಈಗ ಬಹುರಾಷ್ಟ್ರೀಯ ವರ್ತಕರು ನಮ್ಮನ್ನು ಆಳುತ್ತಿರುವ ಸಂದರ್ಭದಲ್ಲಿ, ವಾಣಿಜ್ಯ ಸಂಸ್ಕೃತಿಯ ಕೀರ್ತನೆಯೂ ಪ್ರಾರಂಭವಾಗಿದೆ. ಈ ಮಧ್ಯೆ ಕಳೆದ ಐದಾರು ದಶಕಗಳಲ್ಲಿ ಕೃಷಿಕರು ರಾಜಕೀಯ ಪ್ರಾಬಲ್ಯ ಪಡೆದಾಗ ಕೃಷಿ ಮೂಲದ ಜಾನಪದ ಸಾಹಿತ್ಯದ ಕೀರ್ತನೆ ಪ್ರಾರಂಭವಾಯಿತು, ಕುವೆಂಪುರವರ ಕಾದಂಬರಿಗಳು, ಕೃಷ್ಣ ಆಲನಹಳ್ಳಿ, ಬೆಸಗರಹಳ್ಳಿ ರಾಮಣ್ಣ ಮುಂತಾದ ಶೂದ್ರ ಲೇಖಕರಿಗೆ ಸಿಕ್ಕ ಪುರಸ್ಕಾರ ಕರ್ನಾಟಕದಲ್ಲಿ ಕೃಷಿ ಮತ್ತು ಪಶುಸಂಗೋಪನೆಯ ವರ್ಗದ ಜನರ ಕೈಗೆ ಅಧಿಕಾರ ಸಿಕ್ಕಿದ್ದರ ಸಾಹಿತ್ಯಕ ಪ್ರತಿಫಲನ. ರಾಜಕೀಯ ಅಧಿಕಾರಕ್ಕೆ ದಲಿತರು ಹತ್ತಿರ ಹತ್ತಿರವಾಗುತ್ತಿದ್ದಂತೆ ದಲಿತ ಸಾಹಿತ್ಯ ಮನ್ನಣೆಗೆ ಯೋಗ್ಯವಾದ ಸಾಹಿತ್ಯವಾಯಿತು. ಇಲ್ಲಿಯೂ ಶೂದ್ರ ಸಂಸ್ಕೃತಿ, ದಲಿತ ಸಂಸ್ಕೃತಿ ಮತ್ತು ಸಮಾಜದ ಪರಿಧಿಯಾಚಿನ ಉಪಸಂಸ್ಕೃತಿ ಅಥವಾ ತುಳಿತಕ್ಕೊಳಗಾದವರ ಸಂಸ್ಕೃತಿಯ ಕೀರ್ತನೆ ಪ್ರಾರಂಭವಾಗಿದೆ.
ಲೋಹಿಯಾ ಚಿಂತನೆಗಳ ಪರಿಚಯದ ಮೂಲಕ ಬಂಡಾಯ ಮನೋಧರ್ಮ ಪಡೆದ ಲೀಖಕರು ಕನ್ನಡದಲ್ಲಿ ವ್ಯವಸ್ಥೆಯನ್ನು ಟೀಕಿಸುವ, ಬ್ರಾಹ್ಮಣ ಸಂಸ್ಕೃತಿಯನ್ನು ವಿರೋಧಿಸುವ, ಪರಂಪರೆಯನ್ನು ಧಿಕ್ಕರಿಸುವ ಸಾಹಿತ್ಯ ರಚಿಸಿದರು. ದ್ಯಾವನೂರು ಸಂಕಲನದ , ‘ಮಾರಿಕೊಂಡವರು’, ‘ಗ್ರಸ್ತ’, ಮೂಡಲ ಸೀಮೇಲಿ ಕೊಲೆಗಿಲೆ’ ಮುಂತಾಗಿ ‘ಅಮಾಸ’ ಇಂಥ ಕತೆಗಳು, ಬಡತನ ಶೋಷಣೆ ಮತ್ತು ಜಾತಿ ಮೂಲದ ಅಮಾನವೀಯತೆಗಳನ್ನು ಕೇಂದ್ರಬಿಂದುವಾಗುಳ್ಳ ಬಂಡಾಯದ ಕತೆಗಳು. ಒಡಲಾಳದಲ್ಲಿ ಬಂಡಾಯದ ದನಿ ತಗ್ಗಿ, ಹಸಿದ ದಲಿತರ-ಬಡಜನರ ಕೀರ್ತನೆ ಮೇಲುಗೈ ಪಡೆಯುತ್ತದೆ. ಕುಸುಮಬಾಲೆ, ದಲಿತ ಸಂಸ್ಕೃತಿಯ ಕೀರ್ತನೆಯೊಂದಿಗೆ ದಲಿತ ಐತಿಹ್ಯ, ಪರಂಪರೆಯೊಂದನ್ನು ಕಟ್ಟಲು ಹವಣಿಸುತ್ತದೆ. ಸಾಮಾನ್ಯವಾಗಿ ರಾಜಕೀಯ ಶಕ್ತಿ ಕೇಂದ್ರವನ್ನು ಸ್ಥಾಪಿಸುವವರು ಅಥವಾ ಇರುವ ಶಕ್ತಿ ಕೇಂದ್ರವನ್ನು ಪಲ್ಲಟಿಸಲು ಪ್ರಯತ್ನಿಸುವವರು ಮುಂದಾಳುಗಳೆಂದು ಗುರುತಿಸಲ್ಪಟ್ಟು ‘ಅನುಕರಣ ಯೋಗ್ಯ’ರಾಗುತ್ತಾರೆ. ರಾಮ, ಕೃಷ್ಣ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮುಂತಾದವರೆಲ್ಲಾ ಇಂಥ ಮುಂದಾಳುಗಳು. ಹೀಗಾಗಿಯೇ ಇವರೆಲ್ಲರ ಹೆಸರನ್ನು ಮಂತ್ರ ಹೇಳಿದಂತೆ ಒಟ್ಟಾಗಿ ಹೇಳುವುದು ವಾಡಿಕೆಯಾಗಿದೆ. ಒಂದು ಸಲ ನಿರ್ಣಾಯಕವಾಗಿ ಶಕ್ತಿ ಕೇಂದ್ರವನ್ನು ಸ್ಥಾಪಿಸಿದ ಮೇಲೆ, ಅದನ್ನು ಉಳಿಸಿಕೊಳ್ಳಲು, ಇತರ ಶಕ್ತಿಗಳು ಕೇಂದ್ರವನ್ನು ಪಲ್ಲಟಗೊಳಿಸದಂತೆ ನೋಡಿಕೊಳ್ಳಲು, ಈಗಾಗಲೇ ಇರುವ ಪರಂಪರೆಯಲ್ಲಿ ಬೇಕಾದ ಅಂಶಗಳನ್ನು ಹೆಕ್ಕಿ, ಅರ್ಥೈಸಿ, ಪರಂಪರೆಯೊಟ್ಟಿಗೆ ಬೆಸೆದು ಭದ್ರವಾಗಬೇಕಾದ ಅಗತ್ಯ ಬೀಳುತ್ತದೆ. ಅದಕ್ಕಾಗಿ ಆಯಾ ಶಕ್ತಿ ಕೇಂದ್ರದ ಐತಿಹ್ಯವನ್ನು ಪುನರ್ರಚಿಸಿ, ಅದಕ್ಕೊಂದು ಪವಿತ್ರಗ್ರಂಥ, ಪವಿತ್ರ ಪುರುಷ ಅಥವಾ ಸ್ತ್ರೀ ಮತ್ತು ಇವನ್ನು ಕಾಯ್ದುಕೊಳ್ಳುವ ಪುರೋಹಿತರನ್ನು ಸೃಜಿಸಿಕೊಳ್ಳಬೇಕಾಗುತ್ತದೆ. ರಾಮಾಯಣ. ಭಗವದ್ಗೀತೆ, ವಚನಗಳು, ಅಂಬೇಡ್ಕರ್ ಕೃತಿಗಳು, ಇಂಥ ಧರ್ಮ ಗ್ರಂಥಗಳು; ಬುದ್ಧ, ಬಸವಾದಿಗಳು ಇಂಥ ಪವಿತ್ರ ಪುರುಷರು. ಇವರಿಗೆ ಸಂಬಂಧಿಸಿದಂತೆ ಕೀರ್ತಿಸಿ ಮೈದಾಳುವ ಸಾಹಿತ್ಯ ಕೃತಿಗಳು ಇವರನ್ನು ಅವತಾರ ಪುರುಷರನ್ನಾಗಿ ಚಿತ್ರಿಸಿ ಐತಿಹ್ಯಗಳು ಪುರಾಣಗಳು ಆಗುತ್ತದೆ. (ಸ್ತ್ರೀವಾದೀ ಆಲೋಚನೆಗಳಾಗಲಿ, ಎಡ ರಾಜಕೀಯ ತತ್ವ ಸಿದ್ಧಾಂತಗಳಾಗಲಿ, ಶಕ್ತಿ ಕೇಂದ್ರಗಳಾಗಿ ಬೆಳೆಯುವ ಪ್ರಕ್ರಿಯೆಯಲ್ಲೇ, ಹಿಂದಿನ ಸಾಹಿತ್ಯಗಳಲ್ಲಿ ಎಲ್ಲೆಲ್ಲಿ ಅಂಥ ಧೋರಣೆಗಳಿವೆ ಎಂದು ಹುಡುಕುತ್ತಾ, ಚರಿತ್ರೆಯನ್ನು ಮರು ವ್ಯಾಖ್ಯಾನಿಸುತ್ತಾ, ಒಂದು ಪರಂರೆಯನ್ನು ಸೃಷ್ಟಿಸಿಕೊಂಡಿರುವುದನ್ನು ಪ್ರಚಲಿತ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು.)
ಉಪಸಂಸ್ಕೃತಿಗಳು ಪರ್ಯಾಯ ಸಂಸ್ಕೃತಿಗಳಾಗಿ ಅಧಿಕಾರ ಶಕ್ತಿಕೇಂದ್ರಕ್ಕೆ ಹತ್ತಿರವಾಗುತ್ತಿದ್ದಂತೆ ಮುಖ್ಯ ಸಂಸ್ಕೃತಿಯನ್ನು ಅನುಕರಿಸುವ ಅವಕ್ಕೂ ಪವಿತ್ರ ಗ್ರಂಥ, ಪವಿತ್ರ ವ್ಯಕ್ತಿ ಮತ್ತು ಐತಿಹ್ಯಗಳ ಅಗತ್ಯ ಬೀಳುತ್ತದೆ. ಬ್ರಾಹ್ಮಣ ಮಠಗಳನ್ನು ಅನುಕರಿಸಿ, ಲಿಂಗಾಯತ ಮಠಗಳು, ಜಗದ್ಗುರುಗಳು, ಅವರನ್ನು ಅನುಕರಿಸಿ ಉಳಿದ ಜಾತಿಗಳ ಮಠ, ಜಗದ್ಗುರುಗಳು ಹುಟ್ಟಿದ್ದು ಹೀಗೆ.
‘ಅಮಾಸ’ ಕತೆಯಲ್ಲಿ ಮಾರಿಗುಡಿಯ ಮೂಲೆಯಲ್ಲಿ ಧೂಳು ಕಂಬಳಿ ಹೊದ್ದು ಮಲಗುವ ಕುರಿಯಯ್ಯ, ತಾನು ಶೋಷಿತನೆಂಬ ಅರಿವೇ ಇಲ್ಲದೆ ಬದುಕುವ ಶೋಷಿತರ ಪ್ರತೀಕ. ಕುಸುಮಬಾಲೆಯಲ್ಲಿ ಈತ ದಲಿತರ ಐತಿಹ್ಯವನ್ನು ಸಂರಚಿಸುವ ಪುರೋಹಿತನಾಗುತ್ತಾನೆ. ಕುಸುಮಬಾಲೆ ಅರ್ಪಿತವಾಗಿರುವ ‘ಮಲೆ ಮಾದೇಶ್ವರ’ ದಲಿತರ ಮೂಲ ಪುರುಷನಾಗಿ, ಪವಿತ್ರ ಪುರುಷನಾಗುತ್ತಾನೆ. ಒಡಲಾಳದಲ್ಲಿ ಈತ ಹುಲಿಯ ಮೇಲೆ ಕುಳಿತು ಕಿರುನಗೆ ಸೂಸುವ, ಸಾಕ್ಷಿ ದೇವರು ಮಾತ್ರ. ಇನ್ನೂ ಮುಖ್ಯವಾದ ಅಂಶವೆಂದರೆ, ದಲಿತ ಸಂಸ್ಕೃತಿಯನ್ನು ಕೀರ್ತಿಸುವ ಕುಸಮಬಾಲೆ, ಕಥಾನಕದ ಮೂಲಸ್ವರೂಪಗಳಾದ, ಪುರಾಣ, ಜಾನಪದ ಮತ್ತು ಆಧುನಿಕ ಕಾಲದ ಪ್ರತಿಮಾ ರೀತಿಗಳನ್ನು ಬಳಸಿಕೊಂಡು ಶಿಷ್ಟ ಮನಸ್ಸು ಸೃಜಿಸಿರುವ, ದಲಿತ ಸಾಹಿತ್ಯ ಪರಂಪರೆಯ ಪವಿತ್ರ ಗ್ರಂಥವಾಗಿದೆ. ಕುಸಮಬಾಲೆಯ ಬಗ್ಗೆ ಅಡ್ಡ ವಿಮರ್ಶೆ ಬಾರದಿರುವುದು ನನ್ನ ಮಾತನ್ನು ಪುಷ್ಟೀಕರಿಸುತ್ತದೆ. ಯಾವುದೇ ಪವಿತ್ರ ಪುರುಷನನ್ನು ಪವಿತ್ರ ಗ್ರಂಥವನ್ನು ಕೀರ್ತಿಸದೆ, ಅಡ್ಡ ವಿಮರ್ಶೆಗೊಳಪಡಿಸಿದಾಗ ವಿರೋಧ ತಕ್ಷಣದ ಪ್ರತಿಕ್ರಿಯೆ ಆಗುತ್ತದೆ. ದ್ಯಾವನೂರಿನ ಬಂಡಾಯಗಾರ, ಒಡಲಾಳದಲ್ಲಿ ದಲಿತರನ್ನು ಕೀರ್ತಿಸುತ್ತಾ, ಕುಸುಮಬಾಲೆಯಲ್ಲಿ ದಲಿತ ಸಂಸ್ಕೃತಿಯ ‘ಗುಡ್ಡ’ನಾಗಿ ಹಿನ್ನೆಡೆದಿದ್ದಾನೆಯೆ? ಹೌದೆನ್ನುವುದು ನನ್ನ ಉತ್ತರ. ಆದರೆ ಒಬ್ಬ ಲೇಖಕ ಪರಂಪರೆಯೊಂದಿಗೆ ತನ್ನನ್ನು ಜೋಡಿಸಿಕೊಳ್ಳಲು ಹೊರಟಾಗ ಇದು ಅನಿವಾರ್ಯ. ಶಕ್ತಿ ಕೇಂದ್ರವನ್ನು ಪಲ್ಲಟಗೊಳಿಸಬಯಸುವವರಿಗೆ, ಸಾಹಿತ್ಯ ಸಂಸ್ಕೃತಿಗಳನ್ನು ಅರ್ಥೈಸುವಾಗ ಗಟ್ಟಿಯಾದ ತಾತ್ವಿಕ ನಿಲುವು ಬೇಕಾಗುತ್ತದೆ. ಪಲ್ಲಟ ಏಕಾಗಿ ಮತ್ತು ಯಾರಿಗಾಗಿ ಎಂಬ ಖಚಿತ ತಿಳುವಳಿಕೆಯು ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ವೈರುಧ್ಯಗಳು ದೋಷಗಳಲ್ಲ, ನಿರಂತರವಾಗಿ ಬದಲಾಗುವ ಸಮಾಜದಲ್ಲಿ, ಬದಲಾಗಲೊಲ್ಲದ ಶಕ್ತಿಗಳೊಂದಿಗೆ ಬದಲಾಗುತ್ತಲೇ ಸೆಣಸಬೇಕಾದಾಗ ಹುಟ್ಟುವ ಪರಿಸ್ಥಿತಿಯೇ ವೈರುಧ್ಯ. ಇಂಥ ವೈರುಧ್ಯಗಳನ್ನು ತಿಪ್ಪೆ ಸಾರಿಸಿ ಮುಚ್ಚಲು ನೋಡಿದರೆ, ಶಕ್ತಿ ಕೇಂದ್ರವನ್ನು ಪಲ್ಲಟಗೊಳಿಸಿ ತನ್ನೆಡೆಗೆ ಸೆಳೆದುಕೊಳ್ಳುವ ಬದಲು, ತಾನೇ ಕೇಂದ್ರದ ಕಕ್ಷೆಯೊಳಕ್ಕೆ ಸೆಳೆಯಲ್ಪಟ್ಟು ಸನ್ಮಾನಿತನಾಗುವ ವಿಪರ್ಯಾಸ ಎಲ್ಲಾ ಬಂಡಯಗಾರರಿಗೂ ಪ್ರಾಪ್ತವಾಗುತ್ತದೆ. ದೇವನೂರ ಮಹಾದೇವರ ಸಾಹಿತ್ಯದ ಶಕ್ತಿ ಮತ್ತು ಮಿತಿಗಳನ್ನು ನಾನು ಹೀಗೆ ಗುರುತಿಸುತ್ತೇನೆ.