ದೇವನೂರರ ‘ಕುಸುಮಬಾಲೆ’-ಸುರೇಶ್ ನಾಗಲಮಡಿಕೆ

ದೇವನೂರು ಮಹಾದೇವ ಅವರ ಕುಸುಮಬಾಲೆ ಪ್ರಕಟಗೊಂಡಿದ್ದು 1984 ರಲ್ಲಿ ಆ ವೇಳೆಗೆ ದಲಿತ – ಬಂಡಾಯ ಚಳುವಳಿಗಳು ತನ್ನ ಉನ್ನತಿಯನ್ನು ಹಾಗೆಯೇ ಕ್ವಚಿತ್ತಾಗಿ ಮುಖಹೀನತೆಯನ್ನು ಅನುಭವಿಸಿದ್ದವು. ಈ ಕಾದಂಬರಿಯನ್ನು ಓದುವಾಗ ನಾವು ಯಾವುದೇ ಒಂದು ಸಿದ್ಧಾಂತವನ್ನಾಗಲೀ ಅದರ ಪ್ರಣಾಳಿಕೆಯನ್ನಾಗಲೀ ಹಿನ್ನೆಲೆಯಾಗಿಟ್ಟುಕೊಂಡು ಪ್ರವೇಶ ಮಾಡಿದರೆ ಅದರಿಂದ ಆಗುವ ‘ಪ್ರಯೋಜನ’ , ‘ಅರ್ಥಗಳು’ ದಕ್ಕುವುದು ಕಡಿಮೆ. ಒಂದು ಜೀವಂತ ಕೃತಿ, ಸಿದ್ಧಾಂತಗಳ ಭಾರದಿಂದ ತಪ್ಪಿಸಿಕೊಂಡಾಗ ಮಾತ್ರ ಬಹುಕಾಲ ಬಾಳಬಹುದು. ಆ ಬಗೆಯ ಕಾದಂಬರಿ ಕಾವ್ಯಗಳಲ್ಲಿ ಕುಸುಮಬಾಲೆಯೂ ಒಂದು. ಕಥನ-ಕಾವ್ಯ ಎರಡನ್ನೂ ಅಧ್ವೈತಗೊಳಿಸಿಕೊಂಡ ಕೃತಿ ಇದು. ಹಾಗೆ ನೋಡಿದರೆ ದೇವನೂರು ಮಹಾದೇವರ ಎಲ್ಲಾ ಬರೆಹಗಳೂ ಕಡ ತಂದ ಸಿದ್ಧಾಂತಗಳ ಭಾರದಿಂದ ತಪ್ಪಿಸಿಕೊಂಡು ತನ್ನ ವಿಶಿಷ್ಟತೆಯನ್ನು ಕಾಪಾಡಿಕೊಂಡಿವೆ. ಅವರ ಒಟ್ಟು ಬರಹ ಲೋಕವು ಮಾನವೀಯ ಸಂಬಂಧಗಳ ಹುಡುಕಾಟವನ್ನೇ ಗರ್ಭೀಕರಿಸಿಕೊಂಡಿದೆ.

ಇದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ಭಾಷೆ/ ಶೈಲಿಗಳು ಸಾಕಷ್ಟು ಕೆಲಸ ಮಾಡಿವೆ. ಗಧ್ಯಕ್ಕೆ ಅವರು ಕೊಡುವ ರೂಪಕ ಶಕ್ತಿಯೊಳಗೆ ಒಂದು ಜನಾಂಗದ ಸಾಂಸ್ಕೃತಿಕ ಅಸ್ಮಿತೆ ಅಡಗಿದೆ. ಆ ಸಮುದಾಯವನ್ನು ಎದುರುಗೊಳ್ಳುವ ಇತರ ಸಮುದಾಯಗಳ ಪರಿವರ್ತನೆಗೆ ಹಾತೊರೆಯುತ್ತದೆ. ಕಾದಂಬರಿಯ ಪ್ರಾರಂಭದಲ್ಲಿ ಅಲ್ಲಮನ ವಚನವನ್ನು ದೇವನೂರು ಉಧ್ಧರಿಸುತ್ತಾರೆ. ಇದಕ್ಕೆ ಎರಡು ಕಾರಣಗಳಿವೆ ಎನ್ನಬಹುದು. ಒಂದು ಮಾನವ ಸಂಬಂಧಗಳ ದೃಷ್ಟಿಯಿಂದ ಎರಡು ಅಲ್ಲಮ ಮೂಲತ ಒಬ್ಬ ಬೆಡಗಿನ ವಚನಕಾರ. ಆತನ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಕುಸುಮಬಾಲೆಯ ದೇಶೀ ಭಾಷೆಯ ಗರ್ಭದಲ್ಲಿ ಒಂದು ಬೆಡಗು ಆಡಗಿದೆ. ಆ ದೇಶೀ ಭಾಷೆಯನ್ನು ಸೇರಿಸಿಕೊಂಡ ಬೆಡಗಿನಿಂದಾಗಿ ಸಂವಹನ ತೊಡಕು ಎಂದು ಅನ್ನಿಸಬಹುದು. ಆದರೆ ಇದು ದೇವನೂರು ಅವರ ವಿಶಿಷ್ಟತೆ.

ಈ ಕಾದಂಬರಿ ಪ್ರಪಂಚವು ಎರಡು ಮುಖ್ಯವಾದ ದಿಕ್ಕುಗಳನ್ನು ಒಳಗೊಂಡಿದೆ ಎನ್ನಬಹುದು. ಮುಗ್ಧಲೋಕವೊಂದು ಅನಾವರಣಗೊಂಡಿರುವುದು. ಇಲ್ಲಿ ಮುಗ್ಧ ಎಂಬುದು ದಡ್ಡತನ ಎಂದು ಸ್ವೀಕರಿಸಬಾರದು, ಅದೊಂದು ಬದುಕಿನ ಯಾನ ಮತ್ತು ಇರುವು. ಈ ಲೋಕದಲ್ಲಿ ಅಕ್ಕಮಹಾದೇವಮ್ಮ,  ಕುಸುಮಬಾಲೆ, ಈಕೆಯ ತಮ್ಮ ಪರ್ಸಾದ, ತೂರಮ್ಮ, ಈರಿ, ತನ್ನ ಬದುಕಿನಲ್ಲಿ ಬೀಡಿಗೆ ಹೆಚ್ಚು ಮಹತ್ವ ಕೊಡುವ ಚೆನ್ನನ ಅಪ್ಪ, ಮೇಲುವರ್ಗದವರಿಂದ ಒಡೆತ ತಿನ್ನುವ ಗಾರ್ ಸಿದ್ದಮಾವ, ಹೆಂಗಸರ ಮುಟ್ಟಿನ ಬಟ್ಟೆಗಳನ್ನು ಮಾರುವ ಅನಣಸ ಇವರೆಲ್ಲಾ ಇದ್ದಾರೆ. ಈ ಮುಗ್ಢ ಲೋಕದ ಆಚೆ ಬರುವ ಅಂದರೆ ದಲಿತರನ್ನು ಉಧ್ಧಾರ ಮಾಡಬೇಕೆಂದು ಬರುವ ಗುಂಪು. ಬಹುಶ ದೇವನೂರರ ಶಕ್ತಿ ಅಡಗಿರುವುದು ಮುಗ್ಧ ಲೋಕವನ್ನು ಬಿಚ್ಚಿಡುವುದರಲ್ಲಿ, ಹಾಗೂ ಅದನ್ನು ಕಟ್ಟುವ ರೀತಿಯಲ್ಲಿ. ಇವರ ಬಹುಪಾಲು ಬರಹಗಳಲ್ಲಿ ನಾವು ಕಂಡುಕೊಳ್ಳಬೇಕಾಗಿದ್ದು ದೇಹ ಸಂಬಂಧಗಳ ಸಂಕರಗಳಿಗಿಂತ ಮಾನಸಿಕ ಸಂಬಂಧಗಳ ಸಂಕರಗಳಿಗೆ ಹೆಚ್ಚು ಹಾತೊರೆಯುವುದು. ಹಾಗೆ ನೋಡಿದರೆ ಮೇಲುಜಾತಿಯ ಕುಸುಮ ಮತ್ತು ಹೊಲೆಯರ ಚೆನ್ನರ ದೇಹಗಳು ಒಂದಾದರೂ ಅದು ಯಶಸ್ಸು ಕಂಡಿಲ್ಲ.

ಚನ್ನನ ಗುರುಗಳಾದ ಮಧ್ವಾಚಾರ್ಯರು ಸಾವಿತ್ರಿಯ ದೇಹ ಸಂಕರವನ್ನು ನಿರಾಕರಿಸುತ್ತಾರೆ. ಹಿಂದೂ ಧರ್ಮದ ಸ್ವರೂಪಿಣಿ ಭಗವತಿಯು ಮೊದಮೊದಲು ಅಮಾಸನನ್ನು ಹೊಲೆಯ ಎಂದು ಕರೆದರೂ ಕನಸಲ್ಲಿ ಆತನನ್ನು ಅಪ್ಪಿಕೊಂಡು ಸುಖಿಸುತ್ತಾಳೆ. ಆಂದರೆ ಇಲ್ಲಿ ಒಂದು ತಲೆಮಾರು ಆ ಬಗೆಯ ಸಂಬಂಧಗಳನ್ನು ನಿರಾಕರಿಸಿದರೆ ಮತ್ತೊಂದು ತಲೆಮಾರು ಅಪ್ರಜ್ಞಾಪೂರ್ವಕವಾಗಿಯೇ ಒಪ್ಪಿಕೊಳ್ಳುತ್ತದೆ. ದೇವನೂರರ ಮತ್ತೆ ಸಮಾನತೆಯ ಕನಸು ಯಾವುದು? ಎಂಬ ಪ್ರಶ್ನೆ ಕೇಳಿಕೊಂಡರೆ ಮುಂದುವರೆದ ಸಮುದಾಯಗಳು ದಲಿತ ಜನಾಂಗವನ್ನು ಮಾನಸಿಕವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂಬುದು. ಮತ್ತೊಂದು ಮುಗ್ಧ ಮನಸ್ಸುಗಳ ಕೊಲೆ ಇವರ ಬರೆಹಗಳಲ್ಲಿ ಗಟ್ಟಿಯಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬಹುದೊಡ್ಡ ಉದಾಹರಣೆ ಕುಸುಮಬಾಲೆಯದು. ಚೆನ್ನನ ಸಂಬಂಧದಿಂದ ವಂಚಿತಳಾದ ಈಕೆ ಬದುಕಿದ್ದರೂ ಜೀವಂತ ಶವವಾಗುತ್ತಾಳೆ.

ಕೊಲೆಯೆಂಬುದು ಇವರಿಗೆ ರಕ್ತಪಾತವಲ್ಲ ಬದಲಾಗಿ ಮಾನಸಿಕ ನೆಮ್ಮದಿಯ ನಾಶವೆಂದು ಹೇಳಬಹುದು. ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ ಕಥೆಯಲ್ಲಿ ಎಲ್ಲಿಯೂ ಕೊಲೆಯಾಗದಿದ್ದರೂ ರಂಗಪ್ಪನಿಗೆ ತನ್ನ ವೈಯಕ್ತಿಕ ಬದುಕಿನಲ್ಲಿ ಮಾನಸಿಕವಾಗಿ ಕೊಲೆಯಾಗುತ್ತದೆ. ರಂಗಪ್ಪನ ಮಗನನ್ನು ಮೇಲು ವರ್ಗದವರು ನೀನು ರಾಜ ಅಲ್ಲ ಗೀಜ ಎಂದು ಕರೆದಾಗ ಅವನ ಮನಸ್ಸಿನಲ್ಲಿ ಆಗುವ ಕೊಲೆ, ಒಡಲಾಳದಲ್ಲಿ ಪೋಲಿಸರು ಹುಂಜನನ್ನು ಎತ್ತಿಕೊಂಡಾಗ ಸಾಕವ್ವಳ ಮನದಲ್ಲಿ ಆಗುವ ಕೊಲೆ ಲಚುಮಿಯ ಗಂಡ ಬೀರನ ಮನಸ್ಸಲ್ಲಿ ನಡೆಯುವ ಕೊಲೆಯ ಸ್ವರೂಪಗಳನ್ನು ಬಹಳ ಗಂಭೀರವಾಗಿ ಗಮನಿಸಬೇಕಾಗುತ್ತದೆ.

ದೇವನೂರರು ಕೊಲೆಯ ಪರಿಕಲ್ಪನೆಯನ್ನು ತರುವ ಬಗೆ ಭಿನ್ನವಾದುದು. ಅವರು ಕಟ್ಟುವ ಭಾಷಿಕ ರೂಪದಲ್ಲೇ ಇದು ಅಂತರ್ಗತವಾಗುತ್ತದೆ. ಜತೆಗೆ ಜಮೀನ್ದಾರಿ ಪದ್ದತಿಯನ್ನು ತರುವಾಗ ಕೂಡ ಇದು ವಾಸ್ತವ. ಅವರು ಬಳಸುವ ಭಾಷೆಯ ಅಥವಾ ಗದ್ಯದ ರೂಪಕ ಶಕ್ತಿಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಹೋದರೆ ಅದರ ಸಾಂಸ್ಕೃತಿಕ ಪದರುಗಳ ಅರ್ಥಛಾಯೆಯು  ನಮಗೆ ಲಭ್ಯವಾಗುವುದಿಲ್ಲ. ಗಾರ್ ಸಿದ್ದಮಾವನ ಪ್ರಸಂಗವು ಇದಕ್ಕೆ ಬಹು ದೊಡ್ಡ ನಿದರ್ಶನ. ಗಾರಸಿದ್ದನ ಮಾತುಗಳ ಗರ್ಭದಲ್ಲೇ ಜಮೀನ್ದಾರಿ ಪದ್ದತಿಯ ತೀವ್ರ ವಿರೋಧವಿದೆ. ವ್ಯಂಗ್ಯದಿಂದ ನಾವು ಜಾರಿಕೊಳ್ಳುವಂತಿಲ್ಲ. ಹಾಗೆ ನೋಡಿದರೆ ‘ಮಾರಿಕೊಂಡವರು’ ಕಥೆಯಲ್ಲಿ ಗೋಚರಿಸುವ ಜಮೀನ್ದಾರಿ ಪಧ್ಧತಿಗೂ ಕುಸುಮಬಾಲೆಯಲ್ಲಿ ಇರುವ ಜಮೀನ್ದಾರಿ ಪದ್ಧತಿಗೂ ಸಾಕಷ್ಟು ಅಂತರಗಳೂ ಇವೆ. ‘ಅಲ್ಲಿ ಕಿಟ್ಟಪ್ಪ ಕೊಟ್ಟಿರುವರಗ್ಗು ಲಚಮೀನ ಕವಿಚಿಕೊಂಡಿದೆ’ ಎಂಬ ಮಾತಿನ ವ್ಯಂಗ್ಯವೂ ಇದನ್ನೇ ಹೇಳುತ್ತದೆ.

ಗಾರ್ ಸಿದ್ದನನ್ನು ಹೊಡೆದಾಗ ದಲಿತ ಸಂಘದ ನಾಗರಾಜು ನೀವು ಪೋಲಿಸರಿಗೆ ಕಂಪ್ಲೇಂಟ್ ಕೊಡಬೇಕಾಗಿತ್ತು ಎಂದಷ್ಟೇ ಹೇಳುತ್ತಾನೆ. ಮುಂದೆ ಕಾದಂಬರಿಯಲ್ಲಿ ದಲಿತ ಸಮುದಾಯಗಳ ಸಂಘಟನೆಗಳು ಎಚ್ಚೆತ್ತು ಕೊಂಡಿರುವುದನ್ನು ಹಾಗು ಅವುಗಳ ಮಿತಿಯೂ ಅನಾವರಣಗೊಂಡಿದೆ. ಕಾದಂಬರಿಯ ಕೊನೆಯ ಭಾಗ ತೀರಾ ವರ್ತಮಾನಕ್ಕೆ ತಿರುಗುತ್ತದೆ. ಕೆಲವು ಪುಟಗಳಲ್ಲಿ ಕೆ. ರಾಮಯ್ಯ, ಕೆ.ಬಿ.ಸಿದ್ದಯ್ಯ, ಸಿದ್ದಲಿಂಗಯ್ಯ, ಕೃಷ್ಣಪ್ಪನವರು ಸೇರಿದಂತೆ ದೇವನೂರು ಮಹಾದೇವರ ಹೆಸರು ಪ್ರಸ್ತಾಪವಾಗುತ್ತದೆ. ಇವರ ಬೌಧ್ಧಿಕತೆಗೂ ಕುರಿಯನ ಒಳಗೆ ಇರುವ ಜೋತಮ್ಮನಿಗೂ ನಡೆಯುವ ಮುಖಾಮುಖಿಗೆ ಸಾಂಸ್ಕೃತಿಕವಾಗಿ ಸಾಕಷ್ಟು ಮಹತ್ವವಿದೆ. ಕುರಿಯಯ್ಯಾ (ಜೋತಮ್ಮ) ಹೊಲೆಯರನ್ನು ಕುರಿತು ಹಳೆಯ ಕಥೆಯೊಂದನ್ನ ಹೇಳಿದರೂ ಆ ಮಾತುಗಳಲ್ಲಿ ಸಮಕಾಲೀನ ದಲಿತ ಸಂಘಗಳ ವಿಮರ್ಶೆ ಇದೆ. ಈ ಪ್ರಸಂಗ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಈ ಮೆರವಣಿಗೆಯ ಬಗ್ಗೆ ದೇವನೂರರಿಗೆ ಗುಮಾನಿಯೂ ಇದ್ದಂತೆ ಕಾಣುತ್ತದೆ. ಈ ನಡುವೆ ಚನ್ನನ ಕೊಲೆಯ ಸುದ್ದಿ ಅರಿವಾಗದೋಪಾದಿಯಲ್ಲಿ ನಡೆದು ಹೋಗುತ್ತದೆ. ಕೊಲೆಯ ಸುದ್ದಿ ನಮಗೆ ಮೊದಲು ಲಭ್ಯವಾಗುವುದು 146 ರ ಪುಟದಲ್ಲಿ ಮತ್ತೆ 162 ನೇ ಪುಟದಲ್ಲಿ ಸಾಬರು ಚನ್ನನು ಬೊಂಬಾಯಿಯಲ್ಲಿ ಇದ್ದಾನೆ ಎಂದು ಹೇಳುತ್ತಾರೆ. ಆದರೆ ಭಾಷೆಯಲ್ಲಿ ಆಡಗಿರುವ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡರೆ ಅವನ ಕೊಲೆ ಆಗಿದೆ. ಆ ಮಾತುಗಳು ಹೀಗಿವೆ. ‘ನಮ್ಮ ಕ್ರಿಯಾ ಒಂದು ಸುದ್ದ ಇದ್ರ ಒಂದಲ್ಲಾ ಒಂಜಿನ ಅವ್ನ ಬತ್ತನಕನಾ. ಸಾಸ್ತ್ರ ಹೇಳವ್ನಾ ರೂಪ್ದಲಿ ಬರಬೌದು….. ದಾಸಯ್ಯನ ರೂಪ್ದಲಿ ಬರಬೌದು ಯಾವ ರೂಪದಲ್ಲಾರೂ ಆಗ್ಲಿ ಕನಾ ಯಾವತಾರೂ ಒಂಜಿನಾರು ಬಂದನಾ ? ಬರ್ದೆ ಸಂಬಂಜ ಅನ್ನೋದಿದು ದೊಡ್ಡದುಕನಾ . . .| ಎಂಬ ಮಾತಿನೊಂದಿಗೆ ಕಾದಂಬರಿಯೂ ಮುಕ್ತಾಯಗೊಳ್ಳುತ್ತದೆ.

ಅತ್ತ ಕುಸುಮಾಳ ಸ್ಥಿತಿಯೂ ಹಾಗೆ ಆಗಿದೆ. ನಾಗರಬೆತ್ತದ ಪ್ರಸಂಗದಲ್ಲಿ ಎಲ್ಲಾ ಮಂತ್ರವಾದಿಗಳು ಕುಸುಮಾಳನ್ನು ಮಾನಸಿಕವಾಗಿ ಹಿಂಸೆಗೆ ಗುರುಪಡಿಸುತ್ತಾರೆ. ಅವಳಿಗೆ ಅಗತ್ಯವಾಗಿದ್ದ ಮನೆ ಯಾವ ಬಗೆಯದು? ಎಂಬ ಪ್ರಶ್ನೆ ಸಹಜವಾಗಿಯೇ ಉಧ್ಬವವಾಗುತ್ತದೆ. ಬಹುಶ ಮಹಾದೇವರ ಎಲ್ಲಾ ಬರೆಹಗಳಲ್ಲಿ ಒಂದು ವಿಶಿಷ್ಟ ಸ್ತ್ರೀ ಸಂವೇದನೆ ಅಡಗಿದೆ, ಅವರು ಧೈರ್ಯವಂತರೂ ಕೂಡಾ. ಈ ಕಾದಂಬರಿಯಲ್ಲಿ ಅಕ್ಕಮಹಾದೇವಮ್ಮ ಗಂಡು ಜಾತಿಗೆ ಎದುರಾಗಿ ಹೋಟೆಲನ್ನು ಇಟ್ಟು ಬದುಕು ಸಾಗಿಸುತ್ತಾಳೆ. ಸಾಕವ್ವ ಎಂಬ ಹೆಸರಿನಲ್ಲೇ ಬದುಕಿನ ದೊಡ್ಡ ರೂಪಕ ಅಡಗಿದೆ. ಅಲ್ಲಮ್ಮನ ವಚನದಂತೆ ಕಾದಂಬರಿಯಲ್ಲಿ ಸಂಬಂಧಗಳ ಲೋಕ ಅಡಗಿದೆ.