ದೇವನೂರರ ಕನ್ನಡ ಶಿಕ್ಷಣ ಪರ ಪ್ರತಿಭಟನೆ ಕುರಿತು… – ಡಿ.ಎಸ್.ನಾಗಭೂಷಣ

dsn book
ರಾಜ್ಯದಲ್ಲಿನ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ‘ಬೆಲೆ’ಯದೆಂದು ಹೇಳಲಾಗುವ ‘ನೃಪತುಂಗ’ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಅತಿ ವಿಶಿಷ್ಠ ಬರಹಗಾರರಲ್ಲೊಬ್ಬರಾದ ದೇವನೂರ ಮಹಾದೇವ ಅವರಿಗೆ ಪ್ರಕಟಿಸಿದಾಗ ಅದು ರಾಜ್ಯಮಟ್ಟದ ಸುದ್ದಿಯಾಯಿತು. ಆದರೀಗ ಮಹಾದೇವ ಅವರು ಆ ಪ್ರಶಸ್ತಿಯನ್ನು ತಿರಸ್ಕರಿಸಿರುವಾಗ ಅದೇನೂ ರಾಜ್ಯಮಟ್ಟದ ಸುದ್ದಿಯಾಗಿಲ್ಲ! ಇದು ನಮ್ಮ ಸದ್ಯದ ಮಾಧ್ಯಮ ಪ್ರಪಂಚದ ಸೋಜಿಗಗಳಲ್ಲೊಂದಾಗಿದೆ.
ಇದಕ್ಕೆಕಾರಣವಿದೆ. ಮಹಾದೇವ ರಾಜ್ಯದ ಶಾಲೆಗಳಲ್ಲಿ ಹತ್ತನೆ ತರಗತಿಯವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯವಾಗಿ ಜಾರಿಗೆ ತರುವ ತನಕ ಮತ್ತು ಈ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುವವರೆಗೆ ಸಾಹಿತ್ಯ ಸಮ್ಮೇಳನ ನಡೆಸುವುದಿಲ್ಲವೆಂದು ಕನ್ನಡ ಸಾಹಿತ್ಯ ಪರಿಷತ್ ಘೋಷಿಸುವ ತನಕ ತಾವು ಈ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲವೆಂದು ಪ್ರಕಟಿಸಿದ್ದಾರೆ. ಇದು ಅಷ್ಟೇನೂ ಜನಪ್ರಿಯವಲ್ಲದ ನಿರ್ಧಾರವಾಗಿದೆ. ಕನ್ನಡ ಸಂಸ್ಕೃತಿ ಎಂಬುದು ಇಂದು ಬಹು ಒತ್ತಡದಲ್ಲಿ ಸಿಲುಕಿ ತನ್ನ ಮೂಲ ಅಸ್ಮಿತೆಯನ್ನೇ ಕಳೆದುಕೊಳ್ಳುವ ಅಪಾಯದಲ್ಲಿದೆ. ಹಾಗಾಗಿ, ಅದನ್ನು ಉಳಿಸುವ ಒಂದು ನಿರ್ಣಾಯಕ ಪ್ರಯತ್ನದ ಭಾಗವಾಗಿ, ಕನ್ನಡ ಸಂಸ್ಕೃತಿಯ ಮೂಲ ಲಾಕ್ಷಣಿಕ ಗ್ರಂಥವೆನಿಸಿದ ‘ಕವಿರಾಜ ಮಾರ್ಗ’ದ ಕೃತಿಕಾರನ ಹೆಸರಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ಮಹಾದೇವ ಇಂದಿನ ನಿಜವಾದ ಕನ್ನಡ ಚಳುವಳಿಕಾರರೆನಿಸಿದ್ದಾರೆ.
ಮೂರು-ನಾಲ್ಕು ವರ್ಷಗಳ ಹಿಂದೆ ರಾಜ್ಯದ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಮಕ್ಕಳೀಗೆ ಇಂಗ್ಲಿಷ್ ಕಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ, ಅದನ್ನುಇಂಗ್ಲಿಷ್ ಶಿಕ್ಷಣದ ‘ಮಾಫಿಯಾ’ದ ಬೆಂಬಲದೊಂದಿಗೆ ಸಾಧ್ಯ ಮಾಡಿದ ಕೆಲವು ಬುದ್ಧಿಜೀವಿ ಹೋರಾಟಗಾರರಿಗೆ ದೇವನೂರರು ಬೆಂಬಲ ನೀಡಿದ್ದರು. ಸರ್ಕಾರದ ಈ ಕ್ರಮದಿಂದ ಸರ್ಕಾರಿ ಶಾಲೆಗಳಿಗೆ ಹೋಗುವ ದಲಿತ ಮತ್ತು ಹಿಂದುಳಿದ ಜಾತಿಗಳ ಮಕ್ಕಳಿಗೆ ಅನುಕೂಲವಾಗುವುದೆಂದೂ, ಇದರ ಫಲವಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿ ಅವುಗಳು ಸುಧಾರಿಸುವ ಅವಕಾಶ ಹೆಚ್ಚೆಂದೂ ತಮ್ಮ ನಿಲುವನ್ನು ಅವರು ಸಮರ್ಥಿಸಿಕೊಂಡಿದ್ದರು. ಮಹಾದೇವ ಅವರು ನಮ್ಮ ನುಡುವೆ ಈಗಲೂ ನೈತಿಕ ಬಲ ಉಳಿಸಿಕೊಂಡಿರುವ ಕೆಲವೇ ಕೆಲವು ಸಾಂಸ್ಕೃತಿಕ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿರುವುದರಿಂದ, ಅವರ ಆ ನಿಲುವಿನಿಂದಾಗಿ ಅಂದಿನ ಇಂಗ್ಲಿಷ್‍ವಾದಿಗಳಿಗೆ ಹೆಚ್ಚಿನ ನೈತಿಕ ಬೆಂಬಲವೂ ದೊರಕಿದಂತಾಗಿತ್ತು.
ಆದರೆ ಸರ್ಕಾರದ ಆ ಕ್ರಮ ದಲಿತ – ಹಿಂದುಳಿದ ಜಾತಿಗಳ ಮಕ್ಕಳ ಕ್ಷೇಮಾಭ್ಯುದಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಗೊಳ್ಳಲಾಗಿರುವ ಕ್ರಮವಲ್ಲ. ಇದು ಮುಕ್ತ ಮಾರುಕಟ್ಟೆ ನೀತಿಯ ಹೆಸರಲ್ಲಿ ಜಗತ್ತನ್ನೇ ಮತ್ತು ಆ ಮೂಲಕ ಮನುಷ್ಯ ಬದುಕನ್ನೇ ಒಂದು ಮಾರುಕಟ್ಟೆಯನ್ನಾಗಿ ಮಾಡಿ ಹಣ ಲೂಟಿ ಮಾಡಬಯಸಿರುವ ಜಾಗತೀಕರಣವಾದಿಗಳ ಸಾಂಸ್ಕೃತಿಕ ರಾಜಕಾರಣದ ಹುನ್ನಾರ. ಹಾಗಾಗಿ ಇದು ಕನ್ನಡದ ಮೇಲೆ ಮಾಡಲಾಗುತ್ತಿರುವ ಉದ್ದೇಶಪೂರ್ವಕ ಪ್ರಹಾರವೆಂಬುದನ್ನು ಗಮನಿಸಬೇಕೆಂದು ನಾವು ಕೆಲವರು ವಾದಿಸಿದ್ದೆವು. ಹಾಗೇ, ಶಾಲಾ ಮಟ್ಟದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಿದ ನಂತರ ಬೇಕಾದರೆ, ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಕ್ರಮ ಕೈಗೊಳ್ಳಲ್ಲಿ ಎಂದೂ ಸೂಚಿಸಿದ್ದೆವು. ಆದರೆ ಏಕೋ ಏನೋ ಆಗ ನಮ್ಮ ಮಾತಿಗೆ ಕಿವಿಗೊಡದ ಮಹಾದೇವ ಅವರು ಈಗ ರಾಜ್ಯಾದ್ಯಂತ ಕನ್ನಡ ಶಾಲೆಗಳು ಒಂದೊಂದಾಗಿ ಮುಚ್ಚತೊಡಗಿರುವುದನ್ನು ನೋಡಿ ಗಾಬರಿಯಾಗಿಯೋ ಏನೋ, ತಮ್ಮತಪ್ಪನ್ನು ತಿದ್ದಿಕೊಳ್ಳ ಬಯಸಿದಂತೆ ನೃಪತುಂಗ ಪ್ರಶಸ್ತಿಯನ್ನು ಕನ್ನಡಪರ ಷರತ್ತುಗಳೊಂದಿಗೆ ತಿರಸ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ಅವರಿಗೆ ಜಾಗತೀಕರಣ ವಿರೋಧದ ಭಾಗವಾಗಿ ಕನ್ನಡ ಶಿಕ್ಷಣವಾದಿಗಳಾಗಿರುವವರ ಪರವಾಗಿ ಅಭಿನಂದನೆಗಳು.
ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದಂತೆ, ಹೊಸ ಕನ್ನಡ ಶಾಲೆಗಳ ಆರಂಭ ಕ್ಷೀಣವಾಗುತ್ತಿದ್ದರೂ, ಇರುವ ಕನ್ನಡ ಶಾಲೆಗಳು ಮುಚ್ಚಲ್ಪಡುವ ಪರಿಸ್ಥಿತಿ ಈವರೆಗೆ ಉಂಟಾಗಿರಲಿಲ್ಲ. ಆದರೆ ಕಳೆದ ನಾಲ್ಕೈದು ವರ್ಷಗಳಲ್ಲಿ ರಾಜ್ಯಾದ್ಯಂತ ಕನ್ನಡ ಶಾಲೆಗಳು ಅತಿ ವೇಗದಲ್ಲಿ ಮುಚ್ಚಲ್ಪಡುತ್ತಿರುವ ವಿದ್ಯಮಾನಗಳನ್ನು ನಾವು ನೋಡುತ್ತಿದ್ದೇವೆ. ಇದಕ್ಕೆ ಕಾರಣ, ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಒತ್ತಾಯದ ‘ಚಳುವಳಿ’ ಮತ್ತು ಅದಕ್ಕೇ ಕಾಯುತ್ತಿದ್ದಂತೆ ಸರ್ಕಾರ ಅದಕ್ಕೆ ಮಾನ್ಯತೆ ನೀಡಿದ ಕ್ರಮದ ಹಿಂದೆ–ಕರ್ನಾಟಕದಲ್ಲಿ ಮೊದಲ ಬಾರಿಗೆ ಯಾವುದೇ ಸಂಕೋಚವಿಲ್ಲದೆ ಧೈರ್ಯದಿಂದ ಪ್ರತಿಪಾದಿಸಲ್ಪಟ್ಟ–ಕನ್ನಡವನ್ನು ಎರಡನೇ ದರ್ಜೆಯ ಭಾಷೆಯ ಸ್ಥಾನಕ್ಕೆ ತಳ್ಳಿ ಇಂಗ್ಲಿಷ್‍ನ್ನು ಮೊದಲ ದರ್ಜೆಯ ಭಾಷೆಯನ್ನಾಗಿ ಮಾನ್ಯ ಮಾಡಿದ ‘ವ್ಯಾವಹಾರಿಕ’ ರಾಜಕಾರಣವೇ ಆಗಿದೆ ಎಂದರೆ ತಪ್ಪಾಗಲಾರದು. ಇದರಿಂದಾಗಿ ಇಂದು ಬೆಂಗಳೂರಿನಲ್ಲಿ ಮಾತ್ರವಲ್ಲ. ರಾಜ್ಯದ ಬಹುಪಾಲು ಎಲ್ಲ ಪಟ್ಟಣಗಳಲ್ಲಿ ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬಯಸುವ ತಂದೆ ತಾಯಿಗಳಿಗೆ ಒಳ್ಳೆಯ ಕನ್ನಡ ಶಾಲೆಗಳೇ ಇಲ್ಲವಾಗಿವೆ. ಇದರಿಂದಾಗಿ ಸಣ್ಣ ಸಣ್ಣ ಊರುಗಳೂ ಸೇರಿದಂತೆ ರಾಜ್ಯಾದ್ಯಂತ ಕನ್ನಡ ಶಿಕ್ಷಣದ ಅವಕಾಶಗಳು ಕಿರಿದಾಗುತ್ತಾ ಇಂಗ್ಲಿಷ್ ಶಿಕ್ಷಣವೆಂಬ ವಿಷವೃತ್ತವೊಂದು ಸೃಷ್ಟಿಯಾಗತೊಡಗಿದೆ.
ಕನ್ನಡದ ಮಕ್ಕಳನ್ನು ಈ ವಿಷವೃತ್ತದಿಂದ ಪಾರು ಮಾಡಬೇಕಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶಿಕ್ಷಣಕ್ಕೂ ತನಗೂ ಏನೂ ಸಂಬಂಧವಿಲ್ಲವೆಂಬಂತೆ, ಭರ್ಜರಿ ಟಿಎ ಡಿಎ ಆಧಾರಿತ ಭಾಷಣ – ಭೀಷಣಗಳ ಬರಡು ಕಾರ್ಯಕ್ರಮಗಳಲ್ಲಿ ತೊಡಗಿದೆ. ಇನ್ನು ಐದನೇ ತರಗತಿಯವರೆಗಾದರೂ ಕನ್ನಡ ಮಾಧ್ಯಮವನ್ನುಕಡ್ಡಾಯ ಮಾಡುವುದಾಗಿ ತನ್ನ ಕನ್ನಡ ಬದ್ಧತೆಯನ್ನು ಘೋಷಿಸಿಕೊಂಡು ಪಕ್ಷಾತೀತವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಸದ್ಯದ ಸರ್ಕಾರ, ನ್ಯಾಯಾಲಯದಲ್ಲಿ ಅದನ್ನು ಸಾಧಿಸಿಕೊಳ್ಳುವಲ್ಲಿ ಯಾವುದೇ ಆಸಕ್ತಿಯನ್ನಾಗಲೀ, ತುರ್ತನ್ನಾಗಲೀ ತೋರುತ್ತಿಲ್ಲ. ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ಎರಡು ಶೈಕ್ಷಣಿಕ ವರ್ಷಗಳು ಮುಗಿಯುತ್ತಾ ಬಂದಿದ್ದರೂ, ಅದು ಇನ್ನೂ ವಿಚಾರಣೆಗೆ ಬಂದಂತಿಲ್ಲ. ನಮ್ಮ ನ್ಯಾಯಾಲಯಗಳಿಗೂ ಶಿಕ್ಷಣ ಮಾಧ್ಯಮದ ಪ್ರಶ್ನೆ ಮಹತ್ವದ ಪ್ರಶ್ನೆಯೇ ಆಗಿಲ್ಲವೆಂಬುದು ನಮ್ಮರಾಷ್ಟ್ರಜೀವನವೆಂಬುದು ಎಂತಹ ತಲೆಕೆಳಗಾದ ಆದ್ಯತೆಗಳಿಂದ ನರಳುತ್ತಿದೆ ಎಂಬುದನ್ನು ಸೂಚಿಸುತ್ತದೆ.
ಕರ್ನಾಟಕದಲ್ಲಿ ಕನ್ನಡದ ಹೆಸರಲ್ಲಿ ಹೊಸ ಹೊಸ ವೇದಿಕೆಗಳೂ, ದಳಗಳೂ, ಸೇನೆಗಳೂ ಹುಟ್ಟಿಕೊಳ್ಳುತ್ತಿದ್ದಂತೆ, ಸರ್ಕಾರ ಕನ್ನಡ ಪರವಾದ ಹೊಸ ಹೊಸ ಘೋಷಣೆಗಳನ್ನು ಕೂಗುತ್ತಿದ್ದಂತೆ ಮತ್ತು ಹಿಂಡು ಹಿಂಡು ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸುತ್ತಿದ್ದಂತೆ ಹಾಗೂ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಹೆರಸಲ್ಲಿ ಕನ್ನಡದ ಉದ್ಧಾರಕ್ಕಾಗಿ ನಮ್ಮಗಬ್ಬೆದ್ದು ಹೋಗಿರುವ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ಬಿಡುಗಡೆಯಾಗುತ್ತಿದ್ದಂತೆ, ಕರ್ನಾಟಕದಲ್ಲಿ ಕನ್ನಡ ಶಕ್ತಿಯ ಮೂಲಕೇಂದ್ರಗಳಂತಿರುವ ಕನ್ನಡ ಶಾಲೆಗಳು ಒಂದೊಂದಾಗಿ ಮುಚ್ಚಿ ಹೋಗುತ್ತಾ, ಕನ್ನಡ ಕಲಿಕೆ ಎಂಬುದು ಕ್ರಮೇಣ ಯಾರಿಗೂ ಬೇಕಾಗದ ವಿದ್ಯಮಾನವಾಗುತ್ತಿದೆ.
ಇಂತಹ ದುರಂತಮಯ ವಿಪರ್ಯಾಸದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರ ಪ್ರತಿಭಟನೆ ಸಾಂಕೇತಿಕವಾದುದಾದರೂ, ಅವರ ಸಾಹಿತ್ಯದಂತೆಯೇ ಆಳದ ಪರಿಣಾಮಶೀಲತೆಯಿಂದ ಕೂಡಿದುದಾಗಿದೆ. ಅದನ್ನು ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಗಂಭೀರವಾಗಿ ಪರಿಗಣಿಸಬೇಕಿದೆ. ಕನ್ನಡ ಚಳುವಳಿಗಾರರು, ಸಾಹಿತಿ ಮಿತ್ರರು ಮತ್ತು ಕನ್ನಡ ಸಂಸ್ಕೃತಿ ಚಿಂತಕರು ಇದು ಕನ್ನಡ ಬದುಕಿನ ನಿರ್ಣಾಯಕ ಪ್ರಶ್ನೆಯೆಂಬಂತೆ ದೇವನೂರರನ್ನು ಬೆಂಬಲಿಸಬೇಕಿದೆ.
(‘ಸಂವಾದ’ದ 2010ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಬರಹ)