ದಿಟ್ಟತನದ ಗಟ್ಟಿ ಹೋರಾಟಗಾರ್ತಿ ವಿಜಯಾ ದಬ್ಬೆ ಸ್ತ್ರೀ ಚೈತನ್ಯದ ಸಂಕೇತ-ರೂಪ ಹಾಸನ


ನಮ್ಮ ಹಾಸನ ಜಿಲ್ಲೆಯ ಮೊದಲ ಕವಯಿತ್ರಿ, ಚಿಂತಕಿ, ದಿಟ್ಟ ಮಹಿಳಾಪರ ಹೋರಾಟಗಾರ್ತಿ 67 ವರ್ಷದ ವಿಜಯಾ ದಬ್ಬೆಯವರು ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾದರೆಂಬ ಸುದ್ದಿ ಕೇಳಿ ಆಘಾತವಾಯ್ತು. ತಕ್ಷಣವೇ ನನಗೆ ಆತ್ಮೀಯರಾಗಿದ್ದ ಅವರ ಕಿರಿಯ ಸಹೋದರ ಸೋಮಶೇಖರ್ ಅವರಿಗೆ ಫೋನ್ ಮಾಡಿ ಮಾತಾಡಿದೆ. ವಿಜಯಾ ದಬ್ಬೆಯವರು ನೆಲೆಸಿದ್ದು, ತಮ್ಮ ತವರೂರು ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ದಬ್ಬೆಯಲ್ಲಿ, ಸಹೋದರರ ಕುಟುಂಬದೊಡನೆ. ಆಗೀಗ ಮೈಸೂರಿನ ತಮ್ಮ ಸಹೋದರಿಯ ಮನೆಯಲ್ಲಿ ಹೋಗಿ ಉಳಿಯುತ್ತಿದ್ದರು. ಮೊನ್ನೆಯವರೆಗೂ ದಬ್ಬೆಯಲ್ಲಿದ್ದವರು, ಕೆಮ್ಮು, ಉಸಿರಾಟದ ತೊಂದರೆಯಾಗಿತ್ತೆಂದು ಸಹೋದರಿಯೊಂದಿಗೆ ಮೈಸೂರಿಗೆ ವೈದ್ಯರಿಗೆ ತೋರಿಸಲು ಹೊಗಿದ್ದರಷ್ಟೇ. ಸಾವು ಅಲ್ಲಿಂದಲೇ ಅವರನ್ನು ಕರೆದೊಯ್ದಿತ್ತು. ಹೊಸ ತಲೆಮಾರಿನ ಅನೇಕರಿಗೆ ಅವರು ಬದುಕಿದ್ದಿದ್ದು ತಿಳಿದೇ ಇರಲಿಲ್ಲ!
ವಿಜಯಾ ದಬ್ಬೆಯವರು ಲೇಖಕಿ ಮಾತ್ರವಲ್ಲ. ಮುಖ್ಯವಾಗಿ ಅವರೊಬ್ಬ ದಿಟ್ಟ ಮಹಿಳಾಪರ ಹೋರಾಟಗಾರ್ತಿ. ಸಾಹಿತ್ಯದ ಜೊತೆಗೆ ಪ್ರತಿಭಟನೆ, ಹೋರಾಟಗಳ ಮೂಲಕ ಲಿಂಗಾಧಾರಿತವಾದ ಸಾಮಾಜಿಕ ಬದಲಾವಣೆಯನ್ನು, ಸಮಾನತೆಯನ್ನು ತರಬೇಕು, ಜನಜಾಗೃತಿ ಮೂಡಿಸಬೇಕು ಎಂದು ನಂಬಿ ನಡೆಯುತ್ತಾ ಬಂದ ಚಿಂತಕಿ. ಹೀಗಾಗಿ ಸಾಹಿತ್ಯ ಚರಿತ್ರೆಯಲ್ಲಿ ಮಾತ್ರವಲ್ಲ, ಮಹಿಳಾ ಚರಿತ್ರೆಯಲ್ಲಿ ಕೂಡ ಅವರ ಹೆಸರು ಚಿರಸ್ಥಾಯಿಯಾಗಿರುವಂತದ್ದು.
ಹಾಗೆ ವಿಜಯಾ ಮೇಡಂ ನನಗೆ ವೈಯಕ್ತಿಕವಾಗಿ ತುಂಬಾ ಪರಿಚಿತರಲ್ಲ. ಆದರೆ ಒಂದು ರೀತಿಯಲ್ಲಿ ಅವರು ನನ್ನ ಮಾನಸ ಗುರುಗಳು! ನನ್ನ ಕಾಲೇಜು ದಿನಗಳಲ್ಲಿ [ನಾನು ಪದವಿ ಓದಿದ್ದು ಗೌರಿಬಿದನೂರಿನಂತ ಒಂದು ಪುಟ್ಟ ಊರಿನಲ್ಲಿ] ಅವರ ಶಿಷ್ಯೆ ಆಗಿದ್ದ ನನ್ನ ಕನ್ನಡ ಉಪನ್ಯಾಸಕರಾದ ಪೂರ್ಣಿಮಾ ಅವರು, ಮೇಡಂ ಬಗ್ಗೆ ಎಷ್ಟೊಂದು ಹೇಳುತ್ತಿದ್ದರೆಂದರೆ, ನಮಗೆಲ್ಲ ‘ಆದ್ರೆ ವಿಜಯಾ ದಬ್ಬೆ ತರಹ ಧೈರ್ಯವಂತ ಹೆಣ್ಣುಮಗಳಾಗಬೇಕು’ ಎನ್ನುವಂತಹ ಆಸೆಯನ್ನು ಹುಟ್ಟಿಸಿದ್ದರು. ಅವರ ಮಹಿಳಾಪರ ಲೇಖನಗಳನ್ನು ಓದಿ, ಅವರ ಸಮತಾ ಚಟುವಟಿಕೆಗಳ ಬಗ್ಗೆ ಕೇಳಿ ಅವರನ್ನು ನೋಡದಿದ್ದರೂ ನಾವು ಗೆಳತಿಯರು ಅದೆಷ್ಟೊಂದು ಪ್ರೇರಣೆ ಪಡೆದಿದ್ದೆವು ಎನ್ನುವುದನ್ನು ವಿವರಿಸಲು ಸಾಧ್ಯವಿಲ್ಲ. ಅವರ ಮೊದಲ ಪ್ರಭಾವ ನನ್ನಂತವರ ಮೇಲೆ ಲೇಖಕಿಯಾಗಿ ಆಗಿದ್ದಕ್ಕಿಂತಾ ಹೆಚ್ಚಾಗಿ ಹೋರಾಟಗಾರ್ತಿಯಾಗಿಯೇ ಹೆಚ್ಚು ಎಂದು ಭಾವಿಸುತ್ತೇನೆ. ಆನಂತರದ ಪ್ರಭಾವ ಕವಿಯಾಗಿ, ಬರಹಗಾರ್ತಿಯಾಗಿ.
ನನ್ನ ಕಾಲೇಜು ದಿನಗಳಲ್ಲೇ ಮೈಸೂರಿಗೆ ಹೋದಾಗ ಅವರನ್ನು ಒಮ್ಮೆ ನೋಡಲೇಬೇಕು ಎಂದು ಯೂನಿವರ್ಸಿಟಿಗೆ ಹುಡುಕಿಕೊಂಡು ಹೋಗಿದ್ದು ಇನ್ನೂ ನೆನಪಿದೆ. ಆಗ ಅವರನ್ನು ನೋಡಿ ನನಗೆ ಬಹಳವೇ ನಿರಾಶೆ ಆಗಿತ್ತು. ಅವರು ಅತ್ಯಂತ ಮೃದು ಸ್ವಭಾವದ, ತೀರಾ ಮುಗ್ಧ ಹೆಣ್ಣು ಮಗಳಾಗಿ ನನಗೆ ಕಂಡಿದ್ದರು! ದಿಟ್ಟ ಮಹಿಳಾ ಹೋರಾಟಗಾರ್ತಿ, ಅನ್ಯಾಯಗಳ ವಿರುದ್ಧ ಕಿಡಿಕಾರುವ ಬಂಡಾಯಗಾರ್ತಿ, ಸಮಾನತೆಗಾಗಿ ಪ್ರತಿಭಟನೆ ಮಾಡುವ ಚಳವಳಿಗಾರ್ತಿ ಇವರೇನಾ? ಎಂದು ಆಶ್ಚರ್ಯ ಆಗಿತ್ತು. ಅವರ ವ್ಯಕ್ತಿತ್ವ ನಾನು ಕಲ್ಪಿಸಿಕೊಂಡಂತಹ ‘ದಿಟ್ಟ ಹೆಣ್ಣು ಮಗಳ’ ಚಿತ್ರಕ್ಕೆ ಸ್ವಲ್ಪ ಕೂಡ ಹೊಂದಿಕೆ ಆಗುತ್ತಿರಲಿಲ್ಲ. ಅದು ನನ್ನ ಹದಿಹರೆಯದ ತಿಳಿವಳಿಕೆಯ ದೋಷವಿರಬಹುದು! ‘ಇವರು ಮಹಿಳೆಯರ ಪರವಾಗಿ ಅದೆಂತಹಾ ಹೋರಾಟ ಮಾಡ್ತಾರೆ?’ ಎಂದು ವಿಸ್ಮಯಪಟ್ಟಿದ್ದೆ. ಆದರೆ ನನ್ನ ಮೇಲಿನ ಅವರ ಪ್ರಭಾವ ಮಾತ್ರ ಅಳಿಸಿ ಹೋಗುವಂತದ್ದಾಗಿರಲಿಲ್ಲ. ಏಕೆಂದರೆ ಎಂಭತ್ತರ ದಶಕದಲ್ಲಿ ಅವರು ಮಾಡುತ್ತಿದ್ದಂತಹ ಕೆಲಸಗಳು ಅಷ್ಟೊಂದು ಶಕ್ತಿಶಾಲಿಯಾಗಿದ್ದವು.
ಬೇರೆ ಬೇರೆ ಚಳವಳಿಗಳು ಹಾಗೂ ವಿಚಾರವಾದದ ಹಿನ್ನಲೆಯ ಜೊತೆಗೆ, ಹೆಚ್ಚಾದ ಮಹಿಳಾ ಶಿಕ್ಷಣ ಪ್ರಮಾಣ, ಮಹಿಳಾ ಸಬಲೀಕರಣ ಹಾಗೂ ಔದ್ಯೋಗಿಕ ಕ್ರಾಂತಿ, ಆ ಸಂದರ್ಭದಲ್ಲಿ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಿತ್ತು. ಇದೇ ಸಂದರ್ಭದಲ್ಲಿ 1972ರಲ್ಲಿ ಅದೇ ಮೊದಲ ಬಾರಿಗೆ ಇಂದಿರಾಗಾಂಧಿಯವರ ಸರ್ಕಾರ ಮಹಿಳಾ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ನೇಮಕ ಮಾಡಿದ್ದ ಸಮಿತಿಯ ವರದಿ, ಬೌದ್ಧಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮಹಿಳೆಯರಲ್ಲಿ ಹೊಸ ಎಚ್ಚರವನ್ನು ಮೂಡಿಸಿತು. ಮಹಿಳೆಯರ ಸ್ಥಾನಮಾನ, ಸಾಮಾಜಿಕ ಸ್ಥಿತಿಯ ಕುರಿತು ಕಾಳಜಿ ಇದ್ದ ಹಲವು ಮಹಿಳೆಯರು ಈ ವರದಿ ಕುರಿತು ದೇಶದ ಎಲ್ಲೆಡೆ ಚರ್ಚೆಗಳನ್ನು, ವಿಚಾರಗೋಷ್ಠಿಗಳನ್ನು, ಕಾರ್ಯಾಗಾರಗಳನ್ನು ನಡೆಸಿದರು. ಇಂಥಹ ಒಂದು ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಮೈಸೂರಿನ ಆಹಾರವಿಜ್ಞಾನಿಗಳಾದ ಡಾ.ಈ.ರತಿರಾವ್ ಹಾಗೂ ಡಾ.ವಿಜಯಾ ದಬ್ಬೆಯವರ ದೃಢ ನಿರ್ಧಾರದಿಂದ 1978ರಲ್ಲಿ, ಮೈಸೂರಿನಲ್ಲಿ ‘ಸಮತಾ’ ವೇದಿಕೆಯನ್ನು ಹುಟ್ಟುಹಾಕಿಕೊಂಡರು. ಹಾಗೆ ಇದೇ ಸಂದರ್ಭದಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲೂ ಅನೇಕ ಮಹಿಳಾ ಪರ ಸಂಸ್ಥೆಗಳು, ಸಂಘಟನೆಗಳು ಹುಟ್ಟಿಕೊಂಡವು.
‘ಸಮತಾ’ ಪ್ರಾರಂಭದಲ್ಲಿ ಒಂದು ಮಹಿಳಾ ಅಧ್ಯಯನ ಕೇಂದ್ರವಾಗಿ ಕೆಲಸ ಮಾಡಲು ಉದ್ದೇಶಿಸಿದ್ದರೂ ಮಹಿಳೆಯರ ಸಮಸ್ಯೆಗಳ ತೀವ್ರತೆಯನ್ನು ಗಮನಿಸಿ, ಅಧ್ಯಯನದ ಜೊತೆಗೆ ಹೋರಾಟದ ಹಾದಿಯನ್ನು ಹಿಡಿಯಿತು. ವಿಜಯಾ ದಬ್ಬೆಯವರ ವ್ಯಕ್ಕಿತ್ವವನ್ನು ಈ ‘ಸಮತಾ ವೇದಿಕೆ’ ಹಾಗೂ ‘ಸಮತಾ ಅಧ್ಯಯನ ಕೇಂದ್ರ’ಗಳನ್ನು ಹೊರತುಪಡಿಸಿ ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ. ಇವು, ಅವರು ಮಹಿಳಾಪರ ಮತ್ತು ಸಮಾಜಮುಖಿಯಾಗುವಂತೆ ಹಂತ ಹಂತವಾಗಿ ಬೆಳೆಸಿವೆ. ಮಹಿಳಾ ಚಳವಳಿಗೆ ಒಂದು ಸಾಂಸ್ಕøತಿಕ ನೆಲೆಗಟ್ಟು ರೂಪಿಸುವಲ್ಲಿ ನೆರವಾಗಿವೆ. ಸಮಾಜದ ಎಲ್ಲ ಸ್ತರದ ಮಹಿಳೆಯರ ಮೇಲಿನ ವಿವಿಧ ರೀತಿಯ ಶೋಷಣೆಯ ವಿಶ್ವರೂಪದರ್ಶನ ವಿಜಯಾ ಅವರಿಗಾಗಿದ್ದು ಇವುಗಳಿಂದಲೇ. ‘ಸ್ತ್ರೀವಾದವೆಲ್ಲಾ ಪಾಶ್ಚಾತ್ಯರಿಂದ ಬಂದದ್ದು ನಮ್ಮಲ್ಲಿ ಅದರ ಅವಶ್ಯಕತೆ ಇಲ್ಲ’ ಎನ್ನುವಂತಹ ನಂಬಿಕೆ ಇದ್ದ ಕಾಲದಲ್ಲಿ ಕಲಿತ ತಿಳಿವಳಿಕೆಯ ಜೊತೆಗೆ, ಸ್ವಂತ ಅನುಭವದ ಸಾರವನ್ನು ಬೆರೆಸಿ ತನ್ನ ಬದುಕನ್ನು-ಬರಹವನ್ನು-ಚಟುವಟಿಕೆಗಳನ್ನು ಗಟ್ಟಿಗೊಳಿಸಿಕೊಳ್ಳುವುದರ ಜೊತೆಗೆ, ಅದು ಸಮಾಜಕ್ಕೆ ಉಪಯೋಗಿಯಾಗುವಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಲೆ, ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರು ವಿಜಯಾ ದಬ್ಬೆಯವರು. ಜೊತೆಗೆ ವಿಚಾರವಂತ ಮಹಿಳೆಯರನ್ನು ನಿರಂತರವಾಗಿ ಸಂಘಟನೆಯಲ್ಲಿ ಹಿಡಿದಿಡುವಂತಾ ಕೆಲಸ ಕಡಿಮೆಯದಲ್ಲ.
ಕರ್ನಾಟಕದಾದ್ಯಂತ ಹಲವಾರು ಮಹಿಳಾ ಜಾಗೃತಿ ಶಿಬಿರ, ಸಂಕಿರಣ, ಸಂಘಟನೆಗಳನ್ನು ವ್ಯವಸ್ಥಿತವಾಗಿ ಇಪ್ಪತ್ತು ವರ್ಷಗಳ ಕಾಲ, ಸಮಾನ ಮನಸ್ಕರೊಡಗೂಡಿ ನಡೆಸಿದ ಗಟ್ಟಿಗಿತ್ತಿ ಇವರು. ಮಹಿಳೆಯರ ಮೇಲೆ ವಿವಿಧ ರೂಪಗಳಲ್ಲಿ ನಡೆಯುತ್ತಿದ್ದ ವರದಕ್ಷಿಣೆ ಕಿರುಕುಳ, ಸಾವು ಅಥವಾ ಕೊಲೆ, ಅತ್ಯಾಚಾರ, ಕೌಟುಂಬಿಕ ಹಿಂಸೆ, ಮುಂತಾದವುಗಳನ್ನು ಪ್ರತಿಭಟನೆ, ಹೋರಾಟಗಳ ಮೂಲಕ ಹೆಣ್ಣಿನ ಪರವಾಗಿ ನ್ಯಾಯ ಕೇಳಲು ಬಳಸಿಕೊಂಡಿದ್ದಾರೆ. ಅನೇಕ ದನಿಯಿಲ್ಲದ ಮಹಿಳೆಯರಿಗೆ ದನಿ ನೀಡಿದ್ದು, ನೊಂದ ಮಹಿಳೆಯರಿಗೆ ಸಾಂತ್ವನ ನೀಡಿ, ಸಮಸ್ಯೆಗಳಿಗೆ ಪರಿಹಾರ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು ‘ಸಮತಾ ವೇದಿಕೆ’. ಅದರ ಹಿಂದಿನ ಶಕ್ತಿ ವಿಜಯಾದಬ್ಬೆ.
ಚೇತನ ಕನ್ನಡ ಸಂಘದ ಪುಸ್ತಕ ಪುರವಣಿಯ ಸಂಪಾದಕಿಯಾಗಿ, ನೆಲೆ ತಪ್ಪಿದ ಮಹಿಳೆಯರಿಗೆ ಭದ್ರನೆಲೆ ಒದಗಿಸುವ ಉದ್ದೇಶದಿಂದ ರೂಪಿತಗೊಂಡಿರುವ ‘ಶಕ್ತಿಧಾಮ’ದ ಖಜಾಂಚಿಯಾಗಿ, ಆಳಕ್ಕಿಳಿದು ಅಭ್ಯಸಿಸುವ ಸಂಶೋಧಕಿಯಾಗಿ, ಪುರುಷ ಪ್ರಧಾನ ವ್ಯವಸ್ಥೆಯ ಮೂಲ ಬೇರುಗಳನ್ನು ಜಾಗೃತ ನೆಲೆಗಳಿಂದ ದಿಟ್ಟವಾಗಿ ಪ್ರಶ್ನಿಸುವ ಕವಯಿತ್ರಿಯಾಗಿ, ಕಡ್ಡಿ ತುಂಡು ಮಾಡುವ ನಿಷ್ಠೂರತೆ ಇಲ್ಲದೇ, ಮಗುವಿಗೆ ತಿಳಿ ಹೇಳುವ ನೆಲೆಯ ವಿಮರ್ಶಕಿಯಾಗಿ, ನಿರ್ಲಕ್ಷಿತ ಲೇಖಕಿಯರ ಕುರಿತ ಲೇಖನಗಳ ಸಂಪಾದಕಿಯಾಗಿ, ಮಹಿಳಾ ಲೋಕದ ಅಧ್ಯಯನದ ಗಂಭೀರ ಲೇಖಕಿಯಾಗಿ, ಸಂಸ್ಕøತಿಯ ಪುನರ್ ನಿರ್ಮಾಣದ ದಿಟ್ಟ ಚಿಂತಕಿಯಾಗಿ, ಪುರಾಣ ಪ್ರತೀಕಗಳನ್ನು ಮುರಿದು ಕಟ್ಟುವ ವಿದ್ವಾಂಸರಾಗಿ, ಸಮರ್ಥ ಅನುವಾದಕಿಯಾಗಿ, ಪ್ರವಾಸದಲ್ಲಿ ತನ್ನ ಸುತ್ತಲನ್ನು ಸೂಕ್ಷ್ಮತೆಯೊಂದಿಗೆ ದಾಖಲಿಸುವ ಸಾಹಿತಿಯಾಗಿ, ವಿಮೆನ್ ರೈಟಿಂಗ್ ಇನ್ ಇಂಡಿಯಾ- ಕನ್ನಡ ವಿಭಾಗದ ಪ್ರಾದೇಶಿಕ ಸಂಪಾದಕಿಯಾಗಿ, ಲೇಖಕಿಯರ ಆತ್ಮಕಥಾನಕ ‘ಲೇಖ-ಲೋಕ’ದ ಸಂಪಾದಕಿಯಾಗಿ……… ಹೀಗೆ ಆಧುನಿಕ ಲೇಖಕಿಯರು ಮಾತ್ರವಲ್ಲ, ಆಧುನಿಕ ಮಹಿಳೆಯರೆಲ್ಲರ ಮೇಲೂ ಪ್ರಭಾವ ಬೀರಬಲ್ಲಂತಹ ಬಹುಮುಖಿ ವ್ಯಕ್ತಿತ್ವ ವಿಜಯಾ ದಬ್ಬೆಯವರದ್ದು.
ಮೈಸೂರು ವಿಶ್ವವಿದ್ಯಾನಿಲಯದ ಪ್ರಾರಂಭದ ದಿನಗಳಲ್ಲಿ, ಮಹಿಳೆಯರು ಓದಲು ಸೇರಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅನೇಕರಿಗೆ ಪ್ರೋತ್ಸಾಹ, ಪ್ರೇರಣೆ ನೀಡಿದ್ದಾರೆ. ಮಹಿಳಾ ಉಪನ್ಯಾಸಕಿಯರನ್ನು ರೂಪಿಸಿದ್ದಾರೆ. ಮಹಿಳಾ ಪಿ.ಹೆಚ್.ಡಿ ಗೈಡ್‍ಗಳು ಇಲ್ಲದಿದ್ದ ಕಾಲದಲ್ಲಿ ತಾವೇ ಪ್ರಥಮ ಮಹಿಳಾ ಗೈಡ್ ಆಗಿ ದಾಖಲೆ ನಿರ್ಮಿಸುವುದರೊಂದಿಗೆ, ಅನೇಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವೆಲ್ಲವೂ ಅವರ ‘ವಿಜಯಾಭಿನಂದನ’ ಗ್ರಂಥದಲ್ಲಿ ದಾಖಲಾಗಿವೆ. ಅವರ ಗುರುಗಳು, ಸಹವರ್ತಿಗಳು, ಮಿತ್ರವೃಂದ, ಶಿಷ್ಯರು, ಸಹಾಯ ಪಡೆದವರು ಅವರನ್ನು, ಅವರ ಗುಣ-ಸ್ವಭಾವಗಳನ್ನು ಮೆಚ್ಚಿ ಬರೆದಿರುವ ಬರಹಗಳನ್ನು ಓದಿದರೆ ಕಣ್ಣು ತುಂಬಿಬರುತ್ತದೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡುವುದೆಲ್ಲವನ್ನೂ ಅವರು ಕೇವಲ ಇಪ್ಪತ್ತು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂಬುದೇ ಅಚ್ಚರಿಯ ವಿಷಯ. ಅನೇಕರಿಗೆ ವಿದ್ಯಾಭ್ಯಾಸಕ್ಕೆ ಹಣ ನೀಡಿದ್ದಾರೆ. ತಮ್ಮ ಮನೆಯಲ್ಲೇ ಇಟ್ಟುಕೊಂಡು ಓದಿಸಿದ್ದಾರೆ. ಇಂತಹ ಅನನ್ಯ ವ್ಯಕ್ತಿತ್ವದ ವಿಜಯಾ ದಬ್ಬೆಯವರ ಬರಹಗಳು ಮಾತ್ರವಲ್ಲ, ಅವರ ಕೆಲಸಗಳೂ ನಮಗೆ ಮಾದರಿಯಾಗುವಂತದ್ದು.
‘ಇರುತ್ತವೆ,’ ‘ನೀರು ಲೋಹದ ಚಿಂತೆ,’ ‘ಇತಿಗೀತಿಕೆ’ ಕವನ ಸಂಕಲನಗಳು, ಕಾವ್ಯಾಭ್ಯಾಸಿಗಳಿಗೆಲ್ಲಾ, ಅದರಲ್ಲೂ ಮಹಿಳಾ ಚಳುವಳಿಗಳ ಹಿನ್ನಲೆಯಲ್ಲಿ ಕವಿತೆಗಳನ್ನು ಅಧ್ಯಯನ ಮಾಡುವ ಸಂಶೋಧಕರು, ಹಾಗೂ ವಿದ್ಯಾರ್ಥಿಗಳಿಗೆಲ್ಲಾ ಆಕರ ಕೃತಿಗಳಾಗಿವೆ ಹಾಗೂ ಪ್ರಭಾವ ಬೀರುವಂತವೇ ಆಗಿವೆ. ಮಹಿಳೆ ದಾರಿ ದಿಗಂತ, ಉರಿಯ ಚಿಗುರ ಉತ್ಕಲೆ, ಮಹಿಳೆ ಮತ್ತು ಮಾನವತೆ, ಸಾನಂದ ಗಣೇಶ ಸಾಂಗತ್ಯ, ಸಂಪ್ರತಿ, ನಯಸೇನ, ನಾಗಚಂದ್ರ ಒಂದು ಅಧ್ಯಯನ, ವಿಮೋಚನೆಯೆಡೆಗೆ, ಶ್ಯಾಮಲ ಸಂಚಯ, ಮಹಿಳೆ ಸಾಹಿತ್ಯ ಸಂಚಯ, ಹಿತೈಷಿಣಿಯ ಹೆಜ್ಜೆಗಳು, ಸಾರ ಸರಸ್ವತಿ, ಅನುಪಮಾ ನಿರಂಜನ ಮುಂತಾದ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಸ್ತ್ರೀವಾದಿ ಅಧ್ಯಯನಕ್ಕೆ ಅವರ ಮಹಿಳಾ ಕಾಳಜಿಯ ಅಸಂಖ್ಯ ಲೇಖನಗಳು ಮುನ್ನುಡಿಗಳಿದ್ದಂತೆ. ಅವನ್ನು ಓದಿಕೊಳ್ಳದೇ ಮುನ್ನಡೆಯುವಂತೆಯೇ ಇಲ್ಲ.
ಅವರ ಸಾಹಿತ್ಯ ಸಾಧನೆಗಾಗಿ ವರ್ಧಮಾನ ಸಾಹಿತ್ಯ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಸದೋದಿತಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಗೌರವ ಇನ್ನೂ ಮುಂತಾದ ಸಮ್ಮಾನಗಳು ಸಂದಿವೆ.
*********
ಹಾಸನ ಜಿಲ್ಲೆಯ, ಬೇಲೂರು ತಾಲ್ಲೂಕಿನ, ದಬ್ಬೆ ಎಂಬ ಗಡಿ ಭಾಗದ ಪುಟ್ಟ ಗ್ರಾಮದಲ್ಲಿ 1951ರಲ್ಲಿ ಜನಿಸಿದ ಇವರದ್ದು ಹೋರಾಟದ ಬದುಕು. ಅವರ ಊರು ದಬ್ಬೆಗೆ ಹೋದಾಗ ಅವರ ತಂದೆ-ತಾಯಿ ವಿಜಯ ಮೇಡಂ ಅವರ ಬಾಲ್ಯದ ಕುರಿತು ವಿವರಿಸುವಾಗಲೆಲ್ಲಾ ಅವರ ಬಗೆಗಿನ ಗೌರವ ಮತ್ತಷ್ಟು ಹೆಚ್ಚುತ್ತಿತ್ತು. ದಬ್ಬೆಯಲ್ಲಿ ಆ ಕಾಲಕ್ಕೆ ಶಿಕ್ಷಣ ಸೌಲಭ್ಯಗಳಿಲ್ಲದಿದ್ದಾಗ, ಅಪ್ಪನೊಂದಿಗೆ ಹಠ ಹಿಡಿದು ಪರ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಹಾಸನ ಸೇರಿ ಮನೆ ಮಾಡಿಕೊಂಡು, ಹೈಸ್ಕೂಲಿಗೆ ಸೇರಿ ತಮ್ಮ-ತಂಗಿಯರನ್ನೂ ಜೊತೆಗಿರಿಸಿಕೊಂಡು ಅಡಿಗೆ, ಮನೆವಾರ್ತೆ ನೋಡಿಕೊಳ್ಳುತಾ,್ತ ಓದಿ, ಒಂದು ಹಂತದ ವಿದ್ಯಾಭ್ಯಾಸ ಮುಗಿಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರೆಗೆ, ನಂತರ ವಿಶ್ವವಿದ್ಯಾಲಯದಲ್ಲಿಯೇ ಕೆಲಸಕ್ಕೆ ಸೇರುವವರೆಗೂ ಮುಕ್ಕಾಗದ ಛಲ. ಆನಂತರ ಪ್ರೀತಿಸಿದ ವಿದೇಶಿ ವಿದ್ವಾಂಸರೊಂದಿಗೆ ವಿವಾಹ….., ಕಡು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು, ಇಷ್ಟೆಲ್ಲಾ ವೈಚಾರಿಕವಾಗಿ, ಪ್ರಬುದ್ಧವಾಗಿ ಬೆಳೆದಿದ್ದನ್ನು ಕೇಳುವಾಗ ಒಬ್ಬಂಟಿಯಾಗಿ ಎಲ್ಲವನ್ನೂ ಎದುರಿಸುವ ಇಂಥಹಾ ದಿಟ್ಟತನ ಇವರಿಗೆ ಎಲ್ಲಿಂದಾ ಬಂತು? ಎಂದು ಆಶ್ಚರ್ಯವಾಗುತ್ತದೆ.
ಆದರೆ ಜನವರಿ 6, 1999ರಲ್ಲಿ ಘಟಿಸಿದ ಒಂದು ರಸ್ತೆ ಅಪಘಾತದಲ್ಲಿ ನೆನಪಿನಶಕ್ತಿಯನ್ನು, ಆರೋಗ್ಯವನ್ನೂ ಕಳೆದುಕೊಂಡು ನಿಷ್ಕ್ರಿಯರಾಗಿದ್ದ ವಿಜಯಾದಬ್ಬೆಯವರನ್ನು ಇಲ್ಲಿಯೇ ಬಿಟ್ಟು, ಅವರ ಪತಿ, ತಮ್ಮ ಮಗಳನ್ನು ಕರೆದುಕೊಂಡು ವಿದೇಶಕ್ಕೆ ವಾಪಸ್ಸಾದ ಸುದ್ದಿಯನ್ನು ನಿರ್ಭಾವುಕವಾಗಿ ಅವರು ಹೇಳುವುದನ್ನು ಕೇಳುವಾಗ ನಮ್ಮ ಕಣ್ಣು ಹನಿಗೂಡುತ್ತದೆ. ಕಳೆದ 7-8 ವರ್ಷಗಳಿಂದಷ್ಟೇ ವಿಜಯಾ ಮೇಡಂ, ಒಂದಿಷ್ಟು ಚೇತರಿಸಿಕೊಂಡಿದ್ದರು. ಅವರು ಆರೋಗ್ಯದಿಂದಿದ್ದಾಗ ನಾನವರನ್ನು ನೋಡಿದ್ದು ಒಂದೇ ಬಾರಿ. ಆದರೆ ಅವರು ಅಪಘಾತಕ್ಕೀಡಾಗಿ ನೆನಪಿನಶಕ್ತಿ ಕಳೆದುಕೊಂಡ ನಂತರದ ಇತ್ತೀಚೆಗಿನ ವರ್ಷಗಳಲ್ಲಿ 8-10 ಬಾರಿ ಅವರನ್ನು ಭೇಟಿಯಾಗಿದ್ದೇನೆ. ಆಗೆಲ್ಲಾ ಅವರ ಅದಮ್ಯ ಜೀವನ ಪ್ರೀತಿಯನ್ನು ಕಂಡು ಬೆರಗಾಗಿದ್ದೇನೆ. ಹೊರಗಿನದೆಲ್ಲವನ್ನೂ ಗ್ರಹಿಸುವ ಶಕ್ತಿ ಇದ್ದರೂ ಅದನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಶಕ್ತಿಯನ್ನು ಕಳೆದುಕೊಂಡಿರುವ ವಿಜಯಾ ಮೇಡಂ, ‘ಈಗ ಕವಿತೆಗಳನ್ನು, ಚಿಕ್ಕ ಕಥೆಗಳನ್ನು ಬರೀತಿದ್ದೀನಿ. ಪ್ರಕಟಣೆಗೆ ಕಳಿಸಕ್ಕಾಗಲ್ಲ ಇನ್ನೂ ತಿದ್ದಬೇಕು. ನಿಮ್ಮೆಲ್ಲರ ಪ್ರೀತಿ ನಾನು ಮೊದಲಿನಂತಾಗಲು ಸಹಕರಿಸುತ್ತದೆ. ಓದಿ ನೋಡಿ’ ಎಂದು ಪುಸ್ತಕವನ್ನು ಎದುರಿಗೆ ಹಿಡಿದು ಹೇಳುವಾಗ ಕಣ್ಣು ತುಂಬಿ ಬರುತ್ತಿತ್ತು. ಅವರ ಅಸ್ಪಷ್ಟ ಕವಿತೆಗಳು ನಿಗೂಢವಾಗಿ, ಅವರೊಳಗಿನದನ್ನೆಲ್ಲಾ ತೋಡಿಕೊಳ್ಳಲು ಕಾದಿರುವ ಏಕೈಕ ಮಾಧ್ಯಮವಾಗಿ ನನಗೆ ತೋರುತ್ತಿತ್ತು. ಅಂಥಹಾ ಹೊತ್ತಿನಲ್ಲೂ ಅವರಲ್ಲಿರುವ ಆಶಾವಾದ ಬರೀ ಲೇಖಕಿಯರನ್ನು ಮಾತ್ರವಲ್ಲ, ಯಾವುದೇ ಪರಿಸ್ಥಿತಿಯಲ್ಲಿರುವ ಎಂಥಹಾ ನಿರಾಶಾವಾದಿಗಳನ್ನೂ ಪ್ರೇರೇಪಿಸುವಂತದ್ದು.
ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ, ಅಂದಿನ ಅಧ್ಯಕ್ಷರಾಗಿದ್ದ ಎಂ.ಹೆಚ್.ಕೃಷ್ಣಯ್ಯನವರು ‘ಸ್ವಂತ ಕವಿತೆಯ ಓದು’ ಸರಣಿಯನ್ನು ಮಾಡುತ್ತಿದ್ದ ಸಂದರ್ಭ, ನನ್ನ ಕವಿತೆಗಳನ್ನು ಓದಿಸಿ, ರೆಕಾರ್ಡಿಂಗ್ ಮಾಡಬೇಕೆಂದು ಕೇಳಿದಾಗ ನಾನು ಮೊದಲು ವಿಜಯಾ ದಬ್ಬೆಯವರ ಕವಿತೆ ಓದಿನ ದಾಖಲೀಕರಣವಾಗಬೇಕೆಂದು ಹಠ ಹಿಡಿದಿದ್ದೆ. ‘ಅವರಿಗೆ ಅನಾರೋಗ್ಯ, ಮಾತಾಡಲೇ ಸರಿಯಾಗಿ ಆಗಲ್ಲವಂತೆ ಹೇಗೆ ರೆಕಾರ್ಡಿಂಗ್ ಮಾಡೋದು?’ ಎಂದು ಪ್ರಶ್ನಿಸಿದ್ದರು. ಇಲ್ಲ ಖಂಡಿತಾ ಅವರಿಂದ ಒಂದಾದರೂ ಕವಿತೆ ಓದಿಸಲೇಬೇಕು, ನಾನು ಅದನ್ನೆಲ್ಲಾ ನೋಡಿಕೊಳ್ಳುತ್ತೇನೆ ಎಂದು ಒಪ್ಪಿಸಿದ್ದೆ. ಅದಕ್ಕೆ ತಕ್ಕಂತೆ ಸೃಜನಶೀಲ ನಿರ್ದೇಶಕ ಚಿಕ್ಕ ಸುರೇಶ ಅವರು, ತುಂಬು ತಾಳ್ಮೆಯಿಂದ ಚಿತ್ರೀಕರಣ ಮಾಡಿದ್ದರು. ಮೇಡಂ ಒಂದು ಕವಿತೆ ಓದಬಹುದೇನೋ ಎಂದು ಇನ್ನಿತರ ವಿವರಗಳನ್ನೇ ಹೆಚ್ಚು ಚಿತ್ರೀಕರಣ ಮಾಡಿಕೊಂಡಿದ್ದರು. ಆದರೆ ಮೇಡಂ ಉತ್ಸಾಹದಿಂದ 5 ಕವಿತೆಗಳನ್ನು ಓದಿದ್ದರು! ಅದು ಒಂದು ಅಪೂರ್ವ ದಾಖಲೆಯಾಗಿ ಅಕಾಡೆಮಿಯಲ್ಲಿ ಉಳಿಯುವಂತಾಯ್ತು. ಆನಂತರ ಈ ಕವಿತೆಗಳ ರೆಕಾರ್ಡಿಂಗ್ ನೋಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿಯವರು ಅವರ ಕುರಿತು ಒಂದು ಸಾಕ್ಷ್ಯಚಿತ್ರವನ್ನು ತಯಾರಿಸುವ ಜವಾಬ್ದಾರಿಯನ್ನು ಚಿಕ್ಕಸುರೇಶ ಅವರಿಗೇ ನೀಡಿದರು. ಜೊತೆಗೆ ನನಗೆ ಅವರೊಂದಿಗೆ ಸಂವಾದಿಸಿ, ಸಾಧ್ಯವಾದಷ್ಟೂ ಅವರಿಂದ ಹೊರತೆಗೆಯುವ ಅವಕಾಶ! ಅದೂ ಒಂದು ದಾಖಲೆಯಾಗಿ ನಮ್ಮ ಪಾಲಿಗೆ ಉಳಿದಿದೆ. ಆದರೆ ಈಗ ವಿಜಯ ದಬ್ಬೆಯವರೂ, ಚಿಕ್ಕ ಸುರೇಶ ಅವರೂ ಇಬ್ಬರೂ ನಮ್ಮೊಂದಿಗಿಲ್ಲ……
ವಿಜಯಾ ಮೇಡಂ ಆರೊಗ್ಯದಲ್ಲಿ ಆಗಿದ್ದ ಧನಾತ್ಮಕ ಬದಲಾವಣೆಯನ್ನು ಹತ್ತಿರದಿಂದ ಕಂಡಿದ್ದ ನಾನು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯಳಾಗಿದ್ದಾಗ 2015ರ ಅಕ್ಟೋಬರ್‍ನಲ್ಲಿ, ಧೈರ್ಯವಾಗಿ ಹಾಸನದಲ್ಲಿ ಅವರೊಂದಿಗೆ ಒಂದು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆ. ಬಹುಶಃ ಅಪಘಾತದ ನಂತರ, ಅಂದೇ ಅವರು ಅಷ್ಟು ವಿವರವಾಗಿ, ಆಸಕ್ತ ಸಭಿಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದು. ಅವರ ಪ್ರತಿ ಮಾತಿನಲ್ಲಿ ಹೆಣ್ಣುಮಕ್ಕಳ ಬಗೆಗಿನ ಕಾಳಜಿ ಎದ್ದು ಕಾಣಿತ್ತಿತ್ತು.
ಜೊತೆಗೇ ಅವರ ಬದುಕಿನ ಎಲ್ಲ ಘಟ್ಟಗಳೂ ಜೀವನ ಚರಿತ್ರೆಯ ರೂಪದಲ್ಲಾದರೂ ದಾಖಲಾಗಬೇಕು ಎಂಬ ಆಸೆ ನನ್ನದಾಗಿತ್ತು. ಅವರು ಮಾಮೂಲಿನಂತೆ ಆರೋಗ್ಯದಿಂದ ಇದ್ದಿದ್ದರೆ ಇಷ್ಟು ಹೊತ್ತಿಗೆ ಅವರೇ ಆತ್ಮಕಥೆಯನ್ನು ಬರೆದುಕೊಂಡಿರುತ್ತಿದ್ದರೇನೋ? ಅವರ ಬದುಕನ್ನು ದಾಖಲಿಸುವ ಕುರಿತು ಅವರೊಡನೆ ಆಪ್ತವಾಗಿ ಒಡನಾಡಿದ ಗೆಳತಿಯರಲ್ಲಿ ಹೇಳುತ್ತಲೇ ಬಂದಿದ್ದೆ. ಅದು ಖಂಡಿತಾ ಮುಂದಿನ ಪೀಳಿಗೆಯ ನಮ್ಮಂಥಹ ಅನೇಕರಿಗೆ ಪ್ರೇರಣೆ ನೀಡುವಂತದ್ದಾಗಿರುತ್ತಿತ್ತು. ಹಾಸನ ಜಿಲ್ಲೆಯ ಮೂಲೆಯ ಪುಟ್ಟಹಳ್ಳಿಯ ಹೆಣ್ಣುಮಗಳೊಬ್ಬಳು ಸಾಹಿತ್ಯ ಹಾಗೂ ಹೋರಾಟದ ಮಹಿಳಾ ಚರಿತ್ರೆಯಲ್ಲಿ ಈ ಎತ್ತರವನ್ನು ತಲುಪಿದ್ದು ಖಂಡಿತಾ ದೊಡ್ಡ ಸಾಧನೆಯೇ. ವಿಜಯಾ ದಬ್ಬೆಯವರು ಮತ್ತೆ ಮೊದಲಿನಂತಾಗಲಿ ಅನೇಕ ಕಿರಿಯರಿಗೆ ಅವರ ಬರಹ, ಕೆಲಸಗಳು, ಚೈತನ್ಯ ಸದಾ ಪ್ರೇರಣೆ ನೀಡುವಂತಾಗಲಿ….. ಎಂದು ಮನಸು ಹಾರೈಸುತ್ತಲೇ ಇತ್ತು. ಆದರೆ…..ವಿಧಿ ಅವರನ್ನು ನಿರ್ದಾಕ್ಷಿಣ್ಯವಾಗಿ ಹೊತ್ತೊಯ್ದೇಬಿಟ್ಟಿತು. ಈಗ ಕೇವಲ ಅವರೊಂದಿಗೆ ಒಡನಾಡಿದ ನೆನಪುಗಳಷ್ಟೇ ಉಳಿದಿವೆ.