ದಿಕ್ಕು ತಪ್ಪಿಸುವ ಹೊಸ ಶಿಕ್ಷಣ ನೀತಿಯ ಚರ್ಚೆ- ನಿರಂಜನಾರಾಧ್ಯ.ವಿ.ಪಿ

ನಿರಂಜನಾರಾಧ್ಯ.ವಿ.ಪಿ

                                                      ದಿಕ್ಕು ತಪ್ಪಿಸುವ ಹೊಸ ಶಿಕ್ಷಣ ನೀತಿಯ ಚರ್ಚೆ
ಕೇಂದ್ರ ಮಾನವ ಅಭಿವೃದ್ಧಿ ಮಂತ್ರಾಲಯವು ರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸುವ ಭಾಗವಾಗಿ ಶಾಲಾ ಶಿಕ್ಷಣದಲ್ಲಿ ತರಬಹುದಾದ ಬದಲಾವಣೆಯನ್ನು ಕುರಿತಂತೆ 13 ವಿಷಯಗಳನ್ನು ಗುರುತಿಸಿ ಪ್ರಶ್ನೆಗಳನ್ನು ಸಿದ್ಧಪಡಿಸಿದೆ. ಬಹುತೇಕ ಎಲ್ಲ ಪ್ರಶ್ನೆಗಳು ಕ್ಲೀಷೆಯಿಂದ ಕೂಡಿದ ಕಾಟಾಚಾರದ ಪ್ರಶ್ನೆಗಳಾಗಿದ್ದು ಶಿಕ್ಷಣದಲ್ಲಿ ಈಗಿರುವ ಅಸಮಾನತೆ, ತಾರತಮ್ಯ ಮತ್ತು ಶ್ರೇಣೀಕೃತ ವ್ಯವಸ್ಥೆಯನ್ನಾಗಲಿ ಅಥವಾ ನಾಗಾಲೋಟದಿಂದ ಸಾಗುತ್ತಿರುವ ಶಿಕ್ಷಣದ ಖಾಸಗೀಕರಣ, ವ್ಯಾಪರೀಕರಣ ಮತ್ತು ಸರ್ಕಾರಿ-ಖಾಸಗಿ ಸಹಭಾಗಿತ್ವದ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮುಕ್ತ ಮಾರುಕಟ್ಟೆಗೆ ತೆರೆದಿಡುತ್ತಿರುವ ಪ್ರಕ್ರಿಯೆಯನ್ನು ಬದಲಾಯಿಸುವ ಹಾಗು ತಡೆಯುವ ನಿಟ್ಟಿನಲ್ಲಿಯಾಗಲಿ ಯಾವುದೇ ಮುಂಗಾಣ್ಕೆಯಿಲ್ಲದಿರುವುದು ಆತಂಕ ಮೂಡಿಸಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಗೌಪ್ಯ ಅಜೆಂಡಾದೊಂದಿಗೆ ನಡೆಯುತ್ತಿರುವ ಈ ಪ್ರಕ್ರಿಯೆಯು ಮುಗ್ಧ ಜನರನ್ನು ದಾರಿತಪ್ಪಿಸಿ ಖಾಸಗೀಕರಣಕ್ಕೆ ಪೂರಕವಾದ ಪ್ರಶ್ನೆಗಳನ್ನು ಅವರ ಬಾಯಿಗೆ ಹಾಕಿ ತಮಗೆ ಅನುಕೂಲಕರವಾಗುವ ಉತ್ತರಗಳನ್ನು ಪಡೆಯುವ ಮೂಲಕ ಒಮ್ಮತವನ್ನು ಹುಟ್ಟು ಹಾಕುವ ಪ್ರಕ್ರಿಯೆಯಾಗಿದೆ. ಹೀಗಾಗಿ, ಮಾನವ ಅಭಿವೃದ್ಧಿ ಮಂತ್ರಾಲಯದ ಪ್ರಶ್ನೆಗಳನ್ನು ಉತ್ತರಿಸುವಾಗ ಕನಿಷ್ಟ ಮೂಲ ವಾರಸುದಾರರಾದವರು ಒಂದು ಮುಂಗಾಣ್ಕೆಯನ್ನಿಟ್ಟುಕೊಂಡು ಉತ್ತರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಇದಾಗಿದೆ.

ಮೊದಲೆಯದಾಗಿ, ಪ್ರಾಥಮಿಕ ಶಾಲೆಯಲ್ಲಿ ಕಲಿಕೆಯ ಪರಿಣಾಮವನ್ನು ಉತ್ತಮಪಡಿಸುವ ವಿಷಯದ ಅಡಿಯಲ್ಲಿ 12 ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳಲ್ಲಿನ ಒಂದು ಮುಖ್ಯ ಪ್ರಶ್ನೆಯೆಂದರೆ, ಶಾಲೆಯಲ್ಲಿ ನಿಮ್ಮ ಮಗುವಿನ ಕಡಿಮೆ ಸಾಧನೆಗೆ ನಿಮ್ಮ ದೃಷ್ಠಿಯಲ್ಲಿ ಕಾರಣಗಳೇನು ಎಂಬುದಾಗಿದೆ. ನಮಗೆಲ್ಲ ತಿಳಿದಿರುವಂತೆ, ರಾಜ್ಯ ಸರ್ಕಾರಗಳು ನಡೆಸುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಾಧನೆ ಕ್ಷೀಣಿಸಲು ಬಹಳ ಮುಖ್ಯ ಕಾರಣವೆಂದರೆ, ಸರ್ಕಾರಿ ಶಾಲೆಗಳ ದುರ್ವವ್ಯವಸ್ಥೆ. ಬಹುತೇಕ ಪ್ರಾಥಮಿಕ ಶಾಲೆಗಳಲ್ಲಿ ಇಬ್ಬರು ಶಿಕ್ಷಕರಿದ್ದು 1ರಿಂದ 5ನೇ ತರಗತಿಯವರೆಗೆ ಕಲಿಸಬೇಕಿದೆ. ನಿಜ ಹೇಳಬೇಕೆಂದರೆ ಬಹುವರ್ಗ ಬೋಧನೆಯನ್ನು ಕಾನೂನುಬದ್ಧಗೊಳಿಸಲಾಗಿದೆ. ಇಬ್ಬರು ಶಿಕ್ಷಕರು 17ರಿಂದ 20 ವಿಷಯಗಳನ್ನು ಕಲಿಸಬೇಕಿದೆ. ಜೊತೆಗೆ ಬಹುತೇಕ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಸದಾಕಾಲ ನೀರಿನ ಸರಬರಾಜಿರುವ ಶೌಚಾಲಯ, ವಿದ್ಯುಚ್ಛಕ್ತಿ ಇರುವ ಕಲಿಕಾ ಕೊಠಡಿ, ವಿಜ್ಞಾನದ ಉಪಕರಣಗಳುಳ್ಳ ಪ್ರಯೋಗಾಲಯ ಮತ್ತು ಎಲ್ಲಕ್ಕಿಂತ ಮಿಗಲಾಗಿ ಮಕ್ಕಳ ಸ್ನೇಹಿ ವಾತಾವರಣದ ಕೊರತೆ ಮಕ್ಕಳ ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಆದರೆ, ಇದಕ್ಕೆ ಅಪವಾದವೆಂಬಂತೆ ಕೇಂದ್ರ ಸರ್ಕಾರದ ಕೇಂದ್ರೀಯ ಅಥವಾ ನವೋದಯ ಶಾಲೆಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದ್ದು ಕಲಿಕಾ ವಾತಾವರಣ ಮತ್ತು ವ್ಯವಸ್ಥೆ ಉತ್ತಮವಾಗಿರುವುದರಿಂದ ಆ ಶಾಲೆಗಳಲ್ಲಿ ಮಕ್ಕಳ ಸಾಧನೆ ಯಾವ ಅಂತರಾಷ್ಟ್ರೀಯ ಶಾಲೆಗಳಿಗೂ ಕಡಿಮೆಯಿಲ್ಲದ ಗುಣಮಟ್ಟದಿಂದ ಕೂಡಿದೆ. ನಿಜ ಹೇಳಬೇಕೆಂದರೆ, ಈವರೆಗೆ ಯಾವುದೇ ಖಾಸಗಿ ಶಾಲೆ ಕೇಂದ್ರೀಯ ಶಾಲೆಗೆ ಸರಿಸಾಟಿಯಾಗಲು ಸಾಧ್ಯವೇ ಇಲ್ಲವೆನ್ನುವುದು ಹಲವು ಸಂದÀರ್ಭಗಳಲ್ಲಿ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ, ಉದ್ದೇಶಿತ ಹೊಸ ಶಿಕ್ಷಣ ನೀತಿಯು ದೇಶದ ಎಲ್ಲ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕೇಂದ್ರೀಯ ಅಥವಾ ನವೋದಯ ಶಾಲೆಗಳಿಗೆ ಸರಿಸಮಾನವಾಗಿ ಕಟ್ಟಿಕೊಡುವ ಮುಂಗಾಣ್ಕೆಯನ್ನು ಹಾಗು ನಿಗದಿತ ಸಮಯದಲ್ಲಿ ಗುರಿ ಮುಟ್ಟುವ ವಿಷಯದ ಬಗ್ಗೆ ಚರ್ಚಿಸಬೇಕಾಗಿದೆ. ಮೊನ್ನೆ ರಾಹುಲ್ ಗಾಂಧಿಯವರು ರೈತರ ಸಮಸ್ಯೆಗೆ ಸ್ಪಂದಿಸಲು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಮೈದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸುತ್ತಿದ್ದಾಗ ಗ್ರಾಮೀಣ ಪ್ರದೇಶದ ಶಾಲೆಗಳನ್ನು ಉತ್ತಮ ಪಡಿಸಲು ಏನು ಮಾಡುವಿರೆಂಬ ವಿದ್ಯಾರ್ಥಿಯ ಪ್ರಶ್ನೆಯೊಂದಕ್ಕೆ ಉತ್ತರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಸೂಚಿಸಿದಾಗ, ಮುಖ್ಯಮಂತ್ರಿಗಳು 50ಲಕ್ಷ ಅನುದಾನ ಘೋಷಿಸಿದ್ದಾರೆ. ಈ ಉದಾಹರಣೆ ಗಮನಿಸಿದರೆ, ಶಿಕ್ಷಣ ಕ್ಷೇತ್ರಕ್ಕೆ ತುರ್ತಾಗಿ ಬೇಕಿರುವುದು ಹೆಚ್ಚಿನ ಹೂಡಿಕೆ ಎಂಬುದನ್ನು ಮತ್ತೊಮ್ಮೆ ಸಾಬೀತುಗೊಂಡಿದೆ. ಉದಾಹರಣೆಗೆ, 2008-09 ರಲ್ಲಿ ಭಾರತ ತನ್ನ ರಾಷ್ಟ್ರೀಯ ಉತ್ಪನ್ನದಲ್ಲಿ ಶಿಕ್ಷಣಕ್ಕೆ ಹೂಡಿದ ಹಣ ಕೇವಲ 2.9%. ಇದು 2014-15 ರಲ್ಲಿ 3.4% ಗೆ ಏರಿದೆ. ಆದರೆ ಕೊಥಾರಿ ಅಯೋಗವು 1964-66 ರಲ್ಲಿ ಶಿಕ್ಷಣಕ್ಕೆ ದೇಶದ ಜಿಡಿಪಿಯಲ್ಲಿ ಕನಿಷ್ಠ ಶೇಕಡ 6 ರಷ್ಟನ್ನು ಮೀಸಲಿಡುವಂತೆ ಶಿಫಾರಸ್ಸು ಮಾಡಿತ್ತು. ವಿಪರ್ಯಾಸವೆಂದರೆ 50 ವರ್ಷ ಕಳೆದರೂ ನಾವು ಶೇಕಡ 6ರ ಗುರಿ ಮುಟ್ಟಲು ಸಾಧ್ಯವಾಗಿಲ್ಲ.

ಆದರೆ ಈಗ ಪ್ರಸ್ತುತ ನಡೆಯುತ್ತಿರುವ ಶಿಕ್ಷಣ ನೀತಿಯ ಚರ್ಚೆಯಲ್ಲಿ ಹೆಚ್ಚಿನ ಸಂಪನ್ಮೂಲ ಹೂಡಿಕೆಯ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಬಲವರ್ಧನೆಗೊಳಿಸುವ ಬಗ್ಗೆ ಚರ್ಚಿಸುವ ಬದಲು ಖಾಸಗಿ ಸಹಭಾಗಿತ್ವ ಜಾರಿಗೊಳಿಸುವ ಕೆಲಸಕ್ಕೆ ಮುಂದಾಗಿದೆ. ಉದಾಹರಣೆಗೆ, ಪ್ರೌಢ ಹಾಗು ಪದವಿ ಪೂರ್ವ ಶಿಕ್ಷಣವನ್ನು ವಿಸ್ತರಿಸುವ ವಿಷಯಕ್ಕೆ ಸಂಬಂಧಿಸಿದಂತೆ 11 ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳಲ್ಲಿನ ಒಂದು ಮುಖ್ಯ ಪ್ರಶ್ನೆಯೆಂದರೆ, ಪ್ರೌಢ ಹಾಗು ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ಸಾರ್ವಜನಿಕ –ಖಾಸಗಿ ಸಹಭಾಗಿತ್ವವನ್ನು ವಿಸ್ತರಿಸುವ ಕುರಿತದ್ದಾಗಿದೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಪ್ರೌಢ ಶಿಕ್ಷಣ ಹಂತದಲ್ಲಿ ಖಾಸಗಿಯವರ ಪಾಲು ಸುಮಾರು ಶೇಕಡ 65. ಸರ್ಕಾರದ ಪಾಲು ಕೇವಲ ಶೇಕಡ 35. ಪರಿಸ್ಥಿತಿ ಹೀಗಿರುವಾಗ, ಸಾರ್ವಜನಿಕವಾಗಿ ಪ್ರೌಢ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವುದಾಗಿ ಹೇಳುತ್ತಿರುವ ಸರ್ಕಾರ ಗೌಪ್ಯವಾಗಿ ನೀತಿನಿರೂಪಣೆಯಲ್ಲಿ ಖಾಸಗೀಕರಣಕ್ಕೆ ಇಂಬು ನೀಡುತ್ತಿರುವುದು ಸರ್ಕಾರದ ಇಬ್ಬಗೆ ನೀತಿಯನ್ನು ಬಯಲು ಮಾಡಿದೆ.

ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗಾಗಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಪರೀಕ್ಷೆ ನಡೆಸುವ ಪದ್ಧತಿಯ ಬದಲು ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಈಗಾಗಲೇ ವ್ಯಾಪಕ ನಿರಂತರ ಮೌಲ್ಯಮಾಪನವನ್ನು ಜಾರಿಗೊಳಿಸಲಾಗಿದೆ. ಸಿಸಿಇ ಯನ್ನು ಮತ್ತಷ್ಟು ಗಟ್ಟಿಗೊಳಿಸುವ ಬದಲು ಹೊಸ ಶಿಕ್ಷಣ ನೀತಿಯ ಚರ್ಚೆಯ ಭಾಗವಾಗಿ ಮತ್ತೊಮ್ಮೆ ಹಿಂದಕ್ಕೆ ಸರಿಯುವ ರೀತಿಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸಿ.ಸಿ.ಇ. ಸಹಕಾರಿಯಾಗಿದೆಯೇ? ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಹಾಗೂ ಅನುತ್ತೀರ್ಣಗೊಳಿಸದಿರುವ ನಿಯಮಗಳ ಬಗ್ಗೆ ಮಕ್ಕಳ, ಶಿಕ್ಷಕರ, ಪೋಷಕರ ಸಾಮಾನ್ಯ ಅಭಿಪ್ರಾಯವೇನು? 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ನಿರ್ಮೂಲನೆ ಮಾಡಿರುವುದು ಮಕ್ಕಳ ಕಲಿಕಾ ಮಟ್ಟದಲ್ಲಿ ಕೊರತೆ ತಂದಿರುವುದೇ? ಇತ್ಯಾದಿ ಪ್ರಶ್ನೆಗಳನ್ನು ಎತ್ತಲಾಗಿದೆ.

ಒಂದು ದೇಶದ ಶಿಕ್ಷಣ ವ್ಯವಸ್ಥೆಯು ಅಲ್ಲಿನ ಶಿಕ್ಷಕರಿಗಿಂತ ಉತ್ತಮವಾಗಿರಲು ಸಾಧ್ಯವಿಲ್ಲವೆನ್ನುವುದು ಸಾರ್ವತ್ರಿಕ ಸತ್ಯ. ಹೀಗಾಗಿ, ನಮ್ಮ ಮುಂದಿರುವ ತಕ್ಷಣದ ಸವಾಲೆಂದರೆ ಶಿಕ್ಷಕರ ಸ್ಥಾನಮಾನವನ್ನು ಸುಧಾರಿಸುವ ಮೂಲಕ ಶಿಕ್ಷಕರ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು. ಈಗಿನ ಗುಣಮಟ್ಟ ಕುಸಿಯಲು ಪ್ರಮುಖ ಕಾರಣವೆಂದರೆ ಅಗತ್ಯ ಸಂಖ್ಯೆಯ ಶಿಕ್ಷಕರಿಲ್ಲದಿರುವುದು. ಶಿಕ್ಷಕರ ಕೊರತೆ, ಪ್ರೌಢಶಾಲೆಯಲ್ಲಿ ಗಣಿತ,
ವಿಜ್ಞಾನ ಮತ್ತು ಭಾμÁ ಶಿಕ್ಷಕರ ಕೊರತೆ, ಸೇವಾ ಪೂರ್ವ ಹಾಗೂ ಸೇವಾ ನಿರತ ಶಿಕ್ಷಕರ ತರಬೇತಿಯ ಗುಣಮಟ್ಟ ಇವುಗಳ ಬಗ್ಗೆ ಸಾಕಷ್ಟು ಸಮಸ್ಯೆಗಳಿವೆ. ಇವುಗಳ ಬಗ್ಗೆ ಸಮಗ್ರವಾಗಿ ಚರ್ಚಿಸುವ ಒಂದು ಕರಡು ದಸ್ತಾವೇಜನ್ನು ಸಿದ್ಧಪಡಿಸಿ ಆ ಆಧಾರದ ಮೇಲೆ ಚರ್ಚಿಸುವ ಬದಲು ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಯಾವ ಕ್ರಮ ಕೈಗೊಳ್ಳಬೇಕು? ಬೋಧನಾ-ಕಲಿಕೆಯಲ್ಲಿ ಗುಣಮಟ್ಟಸಾಧನೆಯನ್ನು ಮಾಡಲು ಪ್ರಸ್ತುತದ ಶಿಕ್ಷಕರ ತರಬೇತಿಗಳು ಏಕೆ ವೈಫಲ್ಯವಾಗಿದೆ? ಶಿಕ್ಷಕರ ಶಿಕ್ಷಣದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಯಾವ ಕಾರ್ಯಾತ್ಮಕ ಪರಿಹಾರಗಳನ್ನು ಕೈಗೊಳ್ಳಬೇಕು? ಶಿಕ್ಷಕರ ಹೊಣೆಗಾರಿಕೆಯ ಸಂಸ್ಕøತಿಯನ್ನು ಬೆಳೆಸಲು ಶಿಕ್ಷಕರ ಕಾರ್ಯ ನಿರ್ವಹಣೆಯ ಮೌಲ್ಯಮಾಪನದ ಅಗತ್ಯವಿದೆಯೇ? ಶಿಕ್ಷಕರ ಭಡ್ತಿಯು ಅವರ ಕಾರ್ಯನಿರ್ವಹಣೆಯೊಂದಿಗೆ ಸಂಯೋಗವಾಗಿರಬೇಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಹೊಸ ಶಿಕ್ಷಣ ನೀತಿಯ ಹೆಸರಿನಲ್ಲಿ ಸಮುದಾಯದ ಮೇಲೆ ಹೇರುವ ಹುನ್ನಾರ ಮಾಡಲಾಗುತ್ತದೆ. ಈಗಾಗಲೇ ಇರುವ 1968, 1986, 1992(ಪರಿಷ್ಕøತ ನೀತಿ) ಶಿಕ್ಷಣ ನೀತಿ, 2005ರ ಪಠ್ಯಕ್ರಮ ಚೌಕಟ್ಟು ಹಾಗು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳುವ ಬದಲು ಶಿಕ್ಷಣವನ್ನು ಮುಕ್ತ ಮಾರುಕಟ್ಟೆಗೆ ತೆರೆದಿಡಲು ಅನುಕೂಲವಾಗುವ ಮತ್ತು ಜನರನ್ನು ದಿಕ್ಕು ತಪ್ಪಿಸುವ ಶಿಕ್ಷಣ ನೀತಿಯನ್ನು ರೂಪಿಸಲೊರಟಿರುವ ಕೇಂದ್ರ ಸರ್ಕಾರದ ಕ್ರಮ ಸಾರ್ವಜನಿಕವಾಗಿ ಚರ್ಚೆಯಾಗಬೇಕಿದೆ.