ದರ್ಶನ್‍ಗೆ ಬೆಂಬಲಿಸಿ- ದೇವನೂರ ಮಹಾದೇವ


ಈಗ ಒಂದು ಸುದ್ದಿ ಹರಿದಾಡುತ್ತಿದೆ- ದರ್ಶನ್ ಅಮೆರಿಕಾಕ್ಕೆ ಹೋಗಿ ಬಿಡುತ್ತಾರೆ ಎಂಬುದೇ ಆ ಸುದ್ದಿ. ಇಂಥ ಸುದ್ದಿ ಕಳೆದ ಚುನಾವಣೆಯಲ್ಲಿ ಪುಟ್ಟಣ್ಣಯ್ಯನವರ ಬಗ್ಗೂ ಇತ್ತು. ಪುಟ್ಟಣ್ಣಯ್ಯನವರ ಜೀವದ ತುಡಿತ ಗೊತ್ತಿರುವವರು ಇಂಥ ಮಾತಾಡಲಾರರು. ಪುಟ್ಟಣ್ಣಯ್ಯ ಜತೆ ಪ್ರವಾಸ ಮಾಡಿದ್ದೇನೆ. ಪುಟ್ಟಣ್ಣಯ್ಯ ಎಲ್ಲಿಗೆ ಹೋಗಲಿ, ಅವರು ನೆನಪಿಸಿಕೊಳ್ಳುತ್ತಿದ್ದುದು ಏನು ಗೊತ್ತೆ? ಪಾಂಡವಪುರದ ಬೊಂಡ, ಪಕೋಡ ಹಾಗೂ ಮದ್ದೂರು ಜೋಪಡಿ ಹೋಟೆಲ್ ದೋಸೆ. ಪಾಂಡವಪುರದ ಥರದ ಬೋಂಡವನ್ನು ಎಲ್ಲೂ ಮಾಡಲ್ಲ ಬಿಡಿ ಅಂತಿದ್ದರು. ಆಮೇಲೆ ನಮ್ಮ ರಾಣಿ ಮಾಡೋ ಇಡ್ಲಿ ಕೈಮ ಅಮೆರಿಕಾದಲ್ಲೂ ಮಾಡಲ್ಲ ಅಂತಿದ್ದರು. ಇಡ್ಲೀನ ಅಮೆರಿಕಾದಲ್ಲಿ ಮಾಡ್ತಾರ? ಅಷ್ಟೊಂದು ಮುಗ್ಧ ಕೂಡ ಅವರು. ಅವರು ಅಮೆರಿಕಾದಲ್ಲಿ ಮೂರು ತಿಂಗಳು ಇರಬೇಕಾಗಿ ಬಂದಾಗ ಅವರ ಮನಸ್ಸಲ್ಲಿ ಇದ್ದುದು ಒಂದೇ- ಕುಡಿಯುವ ನೀರಿನ ಸಮಸ್ಯೆ. ಅಮೆರಿಕಾದಲ್ಲಿ ಸಾವಿರಾರು ಕಿಲೋಮೀಟರ್ ನಾಲೆ ಮಾಡಿ ಕುಡಿಯುವ ನೀರು ತಂದು ಕೊಡುವುದಾದರೆ ನಮ್ಮಲ್ಲಿ ಏನಾಗಿದೆ? ಇದು ಅವರ ಚಿಂತೆಯಾಗಿತ್ತು. ದುದ್ದ ಹೋಬಳಿಗೆ ನೀರು ತರುವುದು ಹೇಗೆ? ಅದಕ್ಕಾಗಿ ಪುಟ್ಟಣ್ಣಯ್ಯ ತಪಸ್ಸು ಮಾಡುತ್ತಿದ್ದರು. ನನ್ನಿಂದಲೂ ಕೆಲವರಿಗೆ ಹೇಳಿಸಿದ್ದರು. ಇಂಥ ಮನಸ್ಥಿತಿಯ ಪುಟ್ಟಣ್ಣಯ್ಯನವರ ಮಗ ದರ್ಶನ್ ಅಮೆರಿಕಾ ಬಿಟ್ಟುಬಂದು, ಅಪ್ಪನ ಹೆಸರನ್ನು ಉಳಿಸಲು, ಅಪ್ಪನ ಕೆಲಸ ಕಾರ್ಯಗಳ್ನು ಮುಂದುವರಿಸಲು ಪಣ ತೊಟ್ಟಿದ್ದಾರೆ. ದರ್ಶನ್ ನಿರ್ಧಾರದ ಗಟ್ಟಿತನ ನೋಡಿಯೆ ಸ್ವರಾಜ್ ಇಂಡಿಯಾ ಪಕ್ಷವು ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ. ದರ್ಶನ್‍ಗೆ ತಮ್ಮ ಆಶೀರ್ವಾದ ಬೇಕು.
ಈಗ ಕಾಂಗ್ರೆಸ್ ದರ್ಶನ್‍ಗೆ ಬೆಂಬಲಿಸಿದೆ, ಜೆಡಿಎಸ್ ನೇರ ಪ್ರತಿಸ್ಪರ್ಧಿಯಾಗಿದೆ. ಆದರೂ ನಮಗೆ ಸನ್ಮಾನ್ಯ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ನೈತಿಕ ಬೆಂಬಲವೂ ಬೇಕು. ಯಾಕೆಂದರೆ ದೇವೇಗೌಡರು ರಾಜಕಾರಣದಲ್ಲಿ ಭೀಷ್ಮ ಇದ್ದಂತೆ. ಅವರು ಎದುರು ಪಾರ್ಟಿಯಲ್ಲಿ ಇರಬಹುದು. ರಾಜಕಾರಣದಲ್ಲಿ ಭಿನ್ನಭಿಪ್ರಾಯಗಳೂ ಇರಬಹುದು. ಪ್ರಧಾನಿಯಾಗಿದ್ದ ಆ ಕಾಲಾವಧಿಯಲ್ಲಿ ನಾನು ಅವರ ಬಹಿರಂಗ ಬೆಂಬಲಿಗನಾಗಿದ್ದೆ. ಅದು ಅವರಿಗೂ ಗೊತ್ತು. ಹಾಗೇ ಕಾವೇರಿ ನದಿ ನೀರಿನ ವಿವಾದದಲ್ಲಿ ಅವರ ಪಕ್ಷಾತೀತ ನಡೆಯನ್ನು ಮೆಚ್ಚಿ ಬರೆದಿದ್ದೆ. ಭಿನ್ನಾಭಿಪ್ರಾಯಗಳ ನಡುವೆ ಇಂಥವೂ ಇರುತ್ತದೆ. ರಾಜಕಾರಣದ ಭೀಷ್ಮರಾದ ಹೆಚ್.ಡಿ.ದೇವೇಗೌಡರ ಆಶೀರ್ವಾದ ಈ ಬಾಲಕ ದರ್ಶನ್ ಮೇಲೂ ಇರಲಿ ಎಂದು ವಿನಂತಿಸುವೆ.
ಇಂದು ದೇಶದ ರಾಜಕಾರಣ ಕೆಟ್ಟಿದೆ. ಎಷ್ಟು ಕೆಟ್ಟಿದೆ ಅಂದರೆ ಕೆ.ಆರ್.ಎಸ್ ಡ್ಯಾಂಗೆ ಡೈನಮೆಟ್ ಇಟ್ಟರೂ ಸರಿಯೇ- ಎಲ್ಲರೂ ಕೊಚ್ಚಿಕೊಂಡು ಹೋದರೂ ಸರಿಯೇ- ನಾನು ನನ್ನ ಬಂಧುಬಳಗ ಬದುಕಬೇಕು, ಈ ರೀತಿ ಇದೆ ಇಂದಿನ ರಾಜಕಾರಣ. ಸಾರ್ವಜನಿಕ ಸಂಪತ್ತು ಸಮುದಾಯಕ್ಕೆ ಸೇರಬೇಕು. ಆದರೆ ಅದರ ಲೂಟಿ ಮಾಡಲು ದರೋಡೆಕೋರರು ರಾಜಕಾರಣದಲ್ಲಿ ಹೆಚ್ಚಾಗಿ ಪ್ರವೇಶಿಸುತ್ತಿದ್ದಾರೆ. ಇದು ಎಲ್ಲೆಲ್ಲು ಇದೆ. ಈ ದರೋಡೆ ರಾಜಕಾರಣವನ್ನು ಮತದಾರ ತಡೆಗಟ್ಟಬೇಕು. ತಡೆಗಟ್ಟದಿದ್ದರೆ ಉಳಿಗಾಲವಿಲ್ಲ.
ಈಗ ಜನಬಲ ಮತ್ತು ಹಣಬಲದ ನಡುವೆ ಸ್ಪರ್ಧೆ ನಡೆಯುತ್ತಿದೆ. ಹಣವು ಮದದಿಂದ ಜನರನ್ನು ಜಾನುವಾರುಗಳು ಎಂಬಂತೆ ಭಾವಿಸಿ ಕೊಂಡುಕೊಳ್ಳಬಹುದು ಅಂದುಕೊಂಡಿದೆ. ಹಣದ ಮದ ಮುರಿಯಬೇಕು. ಹಣದ ಗರ್ವಭಂಗವಾಗಬೇಕು. ಇದಾದಾಗಲೇ ಜನಸಾಮಾನ್ಯರು ಉಸಿರಾಡಲು ಸಾಧ್ಯ. ಅದಕ್ಕಾಗಿ ಮತದಾರರು ದರ್ಶನ್‍ರನ್ನು ಗೆಲ್ಲಿಸಬೇಕು, ಕೈ ಹಿಡಿದು ನಡೆಸಬೇಕು. ಇದು ನನ್ನ ಪ್ರಾರ್ಥನೆ.
ಕೊನೆಯದಾಗಿ ಇನ್ನೊಂದು ಮನವಿ: ದರ್ಶನ್‍ಗೆ ಪ್ರಚಾರವನ್ನು ಹೇಗೆ, ಎಲ್ಲಿಂದ ಮಾಡಬೇಕು? ನೆನಪಿಡಿ- ಸುಳ್ಳು ಹಬ್ಬಿಸುತ್ತಾರೆ. ನೆನಪಿಡಿ- ಒಡಕು ಉಂಟುಮಾಡುತ್ತಾರೆ. ಇಂಥಲ್ಲಿ ಹೇಗೆ ಪ್ರಚಾರ? ಎಲ್ಲಿದ್ದೀರೊ ಅಲ್ಲೆ ಪ್ರಚಾರ ಮಾಡಬೇಕು. ನಂನಮ್ಮ ಮನೆಯಿಂದಲೇ ಆರಂಭಿಸಬೇಕು. ನಂನಮ್ಮ ಬೀದಿಯಲ್ಲೇ ಪ್ರಚಾರ ಆಗಬೇಕು. ಎಲ್ಲಿದ್ದೀವೋ ಅಲ್ಲೇ ಪ್ರಚಾರ. ಈ ರೀತಿ ಪ್ರಚಾರವನ್ನು ಮೇಲುಕೋಟೆ ಕ್ಷೇತ್ರದ ಯುವಕರು ಕೈಗೊಂಡರೆ ಇದೇ ರಾಜ್ಯದ ಚುನಾವಣಾ ರೀತಿರಿವಾಜಿಗೆ ಒಂದು ಮಾದರಿಯಾಗಿ ನಾಡಿಗೆ ಕೊಡುಗೆ ಕೊಟ್ಟಂತಾಗುತ್ತದೆ. ದರ್ಶನ್ ಗೆಲುವಿನ ಜೊತೆಗೆ ಈ ಮಾದರಿಯನ್ನೂ ಹುಟ್ಟುಹಾಕಿ ಎಂದು ಮೇಲುಕೋಟೆ ಕ್ಷೇತ್ರದ ನಮ್ಮ ಯುವಕರಲ್ಲಿ ವಿನಂತಿಸುವೆ.