ತೆಂಗುನಾರಿಗೆ ಸ್ವರ್ಗ ಕಾಣಿಸಿದ ಕೇರಳ- -ಸಹ್ಯಾದ್ರಿ ನಾಗರಾಜ್

coir photo
ಆತ್ಮವಿಶ್ವಾಸದಿಂದ ಅಡ್ಡಾಡುತ್ತಿದ್ದ ತೆಂಗು ಬೆಳೆಗಾರರು, ಖುಷಿಯಿಂದ ಬೀಗುತ್ತಿದ್ದ ಕಾರ್ಮಿಕ ವರ್ಗ, ತೆಂಗುನಾರು ಉತ್ಪನ್ನಗಳ ಒಳಿತಿನ ಬಗೆಗೆ ಗಂಟೆಗಟ್ಟಲೆ ಬೇಕಾದರೂ ವಿವರಿಸಲು ತುದಿಗಾಲಲ್ಲಿ ನಿಂತಿದ್ದ ವ್ಯಾಪಾರಿಗಳ ಸಮೂಹ, ತರಹೇವಾರಿ ಉತ್ಪನ್ನಗಳನ್ನು ಕಣ್ಣಾರೆ ಕಂಡು ಖರೀದಿಸಲು ಬಂದಿದ್ದ ಐವತ್ತಾರು ದೇಶದ ವಿಶೇಷ ಪ್ರತಿನಿಧಿಗಳು…
-ಫೆ.1ರಿಂದ 5ರವರೆಗೂ ಅಲೆಪ್ಪಿಯಲ್ಲಿ ನಡೆದ ‘ಕಾಯರ್ ಕೇರಳ 2016’ರ ಹೈಲೈಟ್ಸ್ ಇದು. ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ಈ ಬೃಹತ್ ಕಾರ್ಯಕ್ರಮಕ್ಕೆ ಈಗ ಆರರ ಹರಯ. 2011ರಿಂದಲೂ ನಡೆಯುತ್ತಿರುವ ಕಾಯರ್ (ತೆಂಗುನಾರು) ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಪ್ರತಿವರ್ಷವೂ ಏನಾದರೊಂದು ಹೊಸತನ್ನು ಪರಿಚಯಿಸುವುದು ವಾಡಿಕೆ. ಎರಡು ಡಿಫೈಬರಿಂಗ್ (ತೆಂಗಿನಕಾಯಿ ಸಿಪ್ಪೆ ಮತ್ತು ಮರದಿಂದ ನಾರನ್ನು ಬೇರ್ಪಡಿಸುವ ಕ್ರಿಯೆ) ಯಂತ್ರ ಹಾಗೂ ಸಾವಯವ ಫೈಬರ್ ತಯಾರಿಸುವ ಮಹತ್ವದ ಯಂತ್ರವೊಂದನ್ನು ಪರಿಚಯಿಸಿದ್ದು ಈ ಬಾರಿಯ ವಿಶೇಷ.
ದೇವರ ನಾಡು ಕೇರಳದಲ್ಲಿ ಎತ್ತ ಕತ್ತೆತ್ತಿದರೂ ಕಾಣುವ ಬೆಳೆ ತೆಂಗು. ಹಾಗಾಗಿ ಅಲ್ಲಿ ಅಡುಗೆ, ಪೂಜೆ, ಚಿಕಿತ್ಸೆ, ವ್ಯಾಪಾರ, ವಾಣಿಜ್ಯ, ಎಲ್ಲದರಲ್ಲೂ ತೆಂಗು ಹಾಗೂ ತೆಂಗಿನ ಉತ್ಪನ್ನಗಳ ನೆರಳು ಮಾಮೂಲು. ತೆಂಗಿನ ನೇರ ಉತ್ಪನ್ನಗಳಾದ ಎಣ್ಣೆ, ಔಷಧ, ನಾನಾ ಬಗೆಯ ತಿನಿಸುಗಳ ಜೊತೆಗೆ ತೆಂಗಿನಕಾಯಿಯ ಸಿಪ್ಪೆ ಮತ್ತು ಮರದಿಂದ ಸಿಗುವ ನಾರು ಬಳಸಿಯೂ ನೂರಾರು ಬಗೆಯ ಉತ್ಪನ್ನ ತಯಾರಿಸುತ್ತಿರುವುದು ಕೇರಳದ ಹೆಗ್ಗಳಿಕೆ. ಅಲ್ಲದೆ, ರಬ್ಬರ್ ಬಿಟ್ಟರೆ ಅತ್ಯಂತ ಹೆಚ್ಚು ಆದಾಯ ತಂದುಕೊಡುತ್ತಿರುವ ಬೆಳೆ ಕೂಡ ತೆಂಗು. ಹಾಗಾಗಿಯೇ ಕೇರಳ ಸರ್ಕಾರದಲ್ಲಿ ಕಂದಾಯ ಖಾತೆಯ ಜೊತೆಗೇ ಕಾಯರ್ (ತೆಂಗುನಾರು) ಕ್ಷೇತ್ರದ ಉಸ್ತುವಾರಿ ಕೂಡ ಸೇರಿಕೊಂಡಿದೆ.

ಬೆಳೆಗಾರರಿಗೆ ಲಾಭ ಹೇಗೆ?
ತೆಂಗು ಬೆಳೆಗಾರರು ತೆಂಗಿನಕಾಯಿ ಸುಲಿದು ಮಾರಾಟ ಮಾಡಿದ ನಂತರ ಉಳಿದ ಸಿಪ್ಪೆ ಹಾಗೂ ನೆಲಕ್ಕುರುಳಿದ ಮರಗಳನ್ನು ಸರ್ಕಾರಿ ಸಂಸ್ಥೆಗಳು, ಕಾಯರ್ ಸಹಕಾರ ಸಂಘಗಳು ಹಾಗೂ ಖಾಸಗಿ ಸಂಸ್ಥೆಗಳು ಖರೀದಿಸುತ್ತವೆ. ಒಂದು ತೆಂಗಿನಕಾಯಿ ಸಿಪ್ಪೆಗೆ ಒಂದೂವರೆ ರು.ನಿಂದ ಮೂರು ರು.ವರೆಗೂ ಹಣ ಸಿಗುತ್ತದೆ. ಜೊತೆಗೆ ಅನುಪಯುಕ್ತ ಎನಿಸಿದ ತೆಂಗಿನಮರಗಳನ್ನು ಮಾರಾಟ ಮಾಡಿದರೂ ಖರೀದಿ ಪಕ್ಕಾ. ಹಾಗಾಗಿ ಬೆಳೆಯ ಜೊತೆಗೆ ಅದರ ಅನುಪಯುಕ್ತ ವಸ್ತುವಿಗೂ ಮೌಲ್ಯ ಕಟ್ಟಿಟ್ಟ ಬುತ್ತಿ.

ಗರಿಗೆದರಿದ ಸಾವಯವ ಫೈಬರ್
ತೆಂಗಿನಕಾಯಿಯ ಸಿಪ್ಪೆ ಹಾಗೂ ಮರವನ್ನು ಡಿಫೈಬರಿಂಗ್ (ನಾರನ್ನು ಬೇರ್ಪಡಿಸುವ ಪ್ರಕ್ರಿಯೆ) ಮಾಡಲಾಗುತ್ತದೆ. ಸದ್ಯ ಕೇರಳದಲ್ಲಿ ತೆಂಗುನಾರಿನ ಮೂಲಕ ಅರವತ್ತು ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ನಾನಾ ಗಾತ್ರದ ಹಗ್ಗ, ಮ್ಯಾಟ್, ಮ್ಯಾಟ್ರೆಸ್, ಮನೆಯ ಒಳಾಂಗಣ ಅಲಂಕೃತ ಹಾಗೂ ನಿತ್ಯಬಳಕೆಯ ವಸ್ತುಗಳು ಪ್ರಮುಖವಾದವು. ಆದರೆ ತೆಂಗುನಾರಿನ ಉತ್ಪನ್ನಗಳಿಗೆ ಸದ್ಯ ಮುಕುಟಪ್ರಾಯ ಎನಿಸಿರುವುದು ಸಾವಯವ ಫೈಬರ್. ಅರವತ್ತೂ ಹೆಚ್ಚು ದೇಶಗಳ ಗಮನ ಕೇರಳದ ಕಡೆ ಹರಿಯಲು ಇದೇ ಕಾರಣ. ಕೃತಕ ಫೈಬರ್ ತಯಾರಿಕೆಯಿಂದ ಆಗುತ್ತಿರುವ ಮಾಲಿನ್ಯ ಹಾಗೂ ವೆಚ್ಚವನ್ನು ಅಳೆದು ತೂಗಿದರೆ ತೆಂಗುನಾರಿನಿಂದ ಉತ್ಪಾದಿಸಲಾಗುವ ಫೈಬರ್ ಅತ್ಯಂತ ಆಕರ್ಷಕ. ಎಲ್ಲಕ್ಕಿಂತ ಹೆಚ್ಚಾಗಿ ತೆಂಗುನಾರಿನ ಫೈಬರ್ ಬೆಂಕಿನಿರೋಧಕ. ಹಾಗಾಗಿ ಸಾವಯವ ಫೈಬರ್ ಸದ್ದು ಜೋರಾಗಿಯೇ ಇದೆ. ಈ ಫೈಬರ್ ತಯಾರಿಕೆಗಾಗಿ ಅಲೆಪ್ಪಿಯ ನ್ಯಾಷನಲ್ ಕಾಯರ್ ರಿಸರ್ಚ್ ಆ್ಯಂಡ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಹೊಸ ಯಂತ್ರ ರೂಪಿಸಿದೆ. ‘‘ಸದ್ಯ ಈ ಯಂತ್ರದ ಮೇಲೆ ಯುರೋಪ್ ದೇಶಗಳ ಕಣ್ಣು ಬಿದ್ದಿದ್ದು, ತಂತ್ರಜ್ಞಾನಕ್ಕೆ ಭಾರಿ ಬೇಡಿಕೆ ಬಂದಿದೆ,’’ ಎನ್ನುತ್ತಾರೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ ಆರ್ ಅನಿಲ್.

Coir_Fiber

ಜಿಯೋ ಟೆಕ್ಸ್ಟೈಲ್ನ ಝಲಕ್
ಕೇರಳದ ತೆಂಗುನಾರು ಉತ್ಪನ್ನಗಳ ಪೈಕಿ ಫೈಬರ್ ಬಿಟ್ಟರೆ ಅತ್ಯಂತ ಹೆಚ್ಚು ಬೇಡಿಕೆ ಇರುವುದು ಮಣ್ಣಿನ ಸವಕಳಿ ತಡೆಗಟ್ಟುವ ಜಿಯೋ ಟೆಕ್ಸ್ಟೈಲ್ ಉತ್ಪನ್ನಗಳಿಗೆ. ಕೃಷಿ ಹಾಗೂ ತೋಟಗಾರಿಕೆಯಲ್ಲಿ ನೀರು ಹಾಯಿಸುವಿಕೆಯಿಂದ ಆಗುವ ಮಣ್ಣಿನ ಸವಕಳಿ ತಪ್ಪಿಸಲು ಈ ಉತ್ಪನ್ನಗಳು ನೆರವಾಗುತ್ತಿದ್ದು, ಯುರೋಪ್ ರಾಷ್ಟ್ರಗಳ ಮೆಚ್ಚುಗೆ ಗಳಿಸಿವೆ.

ಸಮಸ್ಯೆ ಇಲ್ಲ ಅಂತೇನಿಲ್ಲ
ತೆಂಗುನಾರು ಉತ್ಪನ್ನಗಳ ತಯಾರಿಕೆಯು ಕೇರಳದ ಅತ್ಯಂತ ಸಾಂಪ್ರದಾಯಿಕ ಉದ್ಯಮ. ಹಾಗಾಗಿ ಈಗಲೂ ಹ್ಯಾಂಡ್ಲೂಂಗಳು ಉಂಟು. ಆದರೆ ಕಳೆದ ಹತ್ತು ವರ್ಷದಿಂದ ಸರ್ಕಾರದ ಆಸಕ್ತಿ ಹಾಗೂ ಸಂಶೋಧಕರ ಶ್ರಮದ ಫಲವಾಗಿ ಶೇ.90ರಷ್ಟು ಯಾಂತ್ರೀಕರಣ ಸಾಧ್ಯವಾಗಿದೆ. ಆದರೆ ಇದರಿಂದ ಕಾರ್ಮಿಕರಿಗೆ ಪೆಟ್ಟಾಗದಂತೆ ನೋಡಿಕೊಂಡಿರುವುದು ಕೇರಳದ ಹೆಗ್ಗಳಿಕೆ. ಹಳೆಯ ಕಾರ್ಮಿಕರ ಜೊತೆಗೆ ಹೊಸ ಮುಖಗಳನ್ನೂ ಸೇರಿಸಿಕೊಂಡು ಉತ್ಪನ್ನಗಳನ್ನು ಹೆಚ್ಚು ಮಾಡುವ ಹಾಗೂ ಆ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿರುವುದರಿಂದ ಕಾರ್ಮಿಕರು ನಿರಾಳ.

ಕರ್ನಾಟಕದಲ್ಲಿ ಆಗಬೇಕಾದ್ದೇನು?
ರಾಜ್ಯದಲ್ಲೂ ತೆಂಗುನಾರು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಆದರೆ ಈ ಮಾಹಿತಿ ತುಮಕೂರು, ಬೆಂಗಳೂರು ಮತ್ತು ಉ.ಕನ್ನಡದ ಬೆಳೆಗಾರರಿಗೆ ಮಾತ್ರವೇ ಹೆಚ್ಚು ಗೊತ್ತು. ಪರಿಣಾಮ, ಒಟ್ಟು3,88,408 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆದರೂ ತೆಂಗುನಾರು ಉತ್ಪನ್ನಗಳ ವೈವಿಧ್ಯತೆ, ತಯಾರಿಕೆಯ ಪ್ರಮಾಣ ಹಾಗೂ ವ್ಯವಸ್ಥಿತ ಮಾರುಕಟ್ಟೆ ಸೃಷ್ಟಿ, ಈ ಎಲ್ಲದರಲ್ಲೂ ಹಿಂದುಳಿಯುವಂತಾಗಿದೆ. ಹಾಗಾಗಿ ಎಲ್ಲ ತೆಂಗು ಬೆಳೆಗಾರರಿಗೂ ಈ ಮಾಹಿತಿ ಲಭ್ಯವಾಗಬೇಕಿದೆ ಮತ್ತು ಮಾರುಕಟ್ಟೆ ಸೃಷ್ಟಿಸುವ ಪ್ರಾಮಾಣಿಕ ಪ್ರಯತ್ನ ಅವಶ್ಯ. ಜೊತೆಗೆ, ಹೊಸ ಉತ್ಪನ್ನಗಳ ತಯಾರಿಕೆಯತ್ತ ಸಂಶೋಧನೆಗಳ ಅಗತ್ಯವೂ ಇದ್ದೇ ಇದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಕೂಡ ಕೋಕೊ ಪಿಟ್ ಬಳಸಿ ಬೆಳೆ ಬೆಳೆಯುವ ಸುಲಭ ವಿಧಾನವನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುವ ಪ್ರಯತ್ನ ಮಾಡಬೇಕಿದೆ.