“ತಿಥಿ” ಸಿನಿಮಾ ನೋಡಿ-ದೇವನೂರ ಮಹಾದೇವ

thithi

ಸರಿಯೋ ತಪ್ಪೋ, ಸಿನಿಮಾ ಮಾಡುವ ಆಸೆಯಿಂದ ಕತೆ ಹುಡುಕುವವರಿಗೆ–“ಯಾಕೆ ಕತೆ ಜಾಡು ಹಿಡಿದು ದೃಶ್ಯ ಕಟ್ಟುತ್ತೀರಿ? ಬದಲಾಗಿ ದೃಶ್ಯಗಳ ಚಲನೆಯೊಳಗೆ ಕತೆ ಕಾಣಿಸಿ” ಎನ್ನುತ್ತಿದ್ದೆ. ‘ತಿಥಿ’ ಸಿನೆಮಾ ನೋಡಿದಾಗ ನನ್ನ ಮನಸ್ಸೊಳಗೆ ಅಂದಾಜು ಇದ್ದುದು ಚಲನಚಿತ್ರವಾಗಿ ಮೂಡಿದೆ ಅನಿಸಿತು. ಅದೂ ಕನ್ನಡದಲ್ಲಿ! ನನಗೆ ಹೆಚ್ಚು ಖುಷಿಯಾಗಲು ಇದೂ ಕಾರಣವೇ.
‘ತಿಥಿ’ ಟ್ರೈಲರ್ ನೋಡಿದಾಗ ತುಂಬಾ ಮಜವಾಗಿದೆ ಅನಿಸುತಿತ್ತು. ಆದರೆ ಇದು ತಮಾಷೆಯಲ್ಲೋ ಲೇವಡಿಯಲ್ಲೋ ಕೇವಲ ಮನರಂಜನೆಯಾಗಿ ಅಂತ್ಯಕಂಡುಬಿಟ್ಟರೆ ಎಂಬ ಆತಂಕವೂ ಜತೆಗೆ ಸುಳಿದಾಡುತ್ತಿತ್ತು. ಸಿನೆಮಾ ನೋಡಿದಾಗ ನನ್ನ ಆತಂಕ ಸುಳ್ಳಾಗಿ ನೆಮ್ಮದಿಯಾಯಿತು. ಯಾಕೆಂದರೆ ಸಿನೆಮಾ ಮುಗಿದಾಗ ಅದರ ಆಳದಲ್ಲಿರುವ ದಿಕ್ಕಿಲ್ಲದಿರುವಿಕೆಯ ದುರಂತ ಮುಟ್ಟುತ್ತದೆ. ಆದರೆ ಈ ದಿಕ್ಕಿಲ್ಲದಿರುವಿಕೆಯ ದುರಂತ ಸ್ಥಿತಿ ಇನ್ನೂ ಸ್ವಲ್ಪ ಪ್ರಬಂಧ ದ್ವನಿ ಪಡೆದುಕೊಂಡು ಧ್ವನಿಸಿದ್ದರೆ ಮತ್ತಷ್ಟು ಗಾಢವಾಗಿ ಪರಿಣಮಿಸುತ್ತಿತ್ತೇನೋ. ಇದು ಉಂಟಾಗಬೇಕಿತ್ತು ಅನಿಸಿತು.ಇರಲಿ.

ಇರಲಿ, ಉತ್ತರಕರ್ನಾಟಕವೋ ದಕ್ಷಿಣಕರ್ನಾಟಕವೋ ಇಲ್ಲಿ ಭಾಷೆ ಮೈದಳೆದಿರುವ ರೀತಿ, ಅಭಿನಯ ಮಾಡದೆ ‘ಇರುವ’ ಪಾತ್ರಗಳು, ಇದನ್ನೆಲ್ಲ ಒಂದು ನೋಟದಲ್ಲಿ ಹಿಡಿದಿಟ್ಟಿರುವ ಕಾಣುವಿಕೆ- ಈ ಎಲ್ಲವೂ ಕನ್ನಡ ಚಲನಚಿತ್ರ ಮಾಧ್ಯಮವನ್ನು ವಿಸ್ತರಿಸಿದಂತೆ ಎನಿಸಿಬಿಟ್ಟಿತು. ಜೇನು ನೊಣಗಳು ಗೂಡು ಕಟ್ಟಿದಂತೆ ಆಗಿರುವ ಈ ಚಲನಚಿತ್ರ ಒಂದು ಸಂಭವದಂತೆ ಕಾಣಿಸಿತು. ಹೀಗೆ ಸಂಭವಿಸಲು ಕಾರಣ ಬಹುಶಃ ಕಾಯುವಿಕೆಯ ತಪಸ್ಸು. ಈ ತಪಸ್ವೀ ಚಲನಚಿತ್ರ ತಂಡಕ್ಕೆ ಅಭಿಂದನೆಗಳು. ಕೃತಜ್ಞತೆಗಳೂ ಕೂಡ.