‘ತಾಯಿ’ -ರಾಮು ಅವರ ಕವಿತೆ

 

ಕೈಯೊದರಿ ಕಾಲೊದರಿ  ಗಾಳಿ ಗುಳು ಗುಳು ಎಂದು
ಬಾವಿಯಲಿ ಏದುಸಿರು ಬಿಡುವಾಗ ನೀರ ಮುಕ್ಕಿ
ಆ ಗಂಡು ರಟ್ಟೆ ನನ್ನ ಸೆರಗಿಗೆ ಸಿಕ್ಕಿ ….
ನನ್ನನೆತ್ತಿತು ಮೇಲೆ ಸಾವಿನಿಂದ….

ಜೇನಿನಂಥ ಕಣ್ಣು, ಹಾಲಿನಂಥ ಕೆನ್ನೆ :
ಯಮ ಹಸಿವು ತಿನುತಿರುವಾಗಲೇ
ನನಗೆ ಸಿಕ್ಕಿಬಿಟ್ಟ
ಮಾಧವನೂ ಅಲ್ಲ, ಮಾದೇವನೂ ಅಲ್ಲ ,
ಮಾದಿಗ ಹುಡುಗ !
ನನ್ನ ಮುಟ್ಟಿ ಬಿಟ್ಟ. ಎಲ್ಲಾ ಮುಂಡಾಮೋಚಿ
ಜಾತಿಯಿಂದಲೆ ನನ್ನ ಬಿಡಿಸಿಬಿಟ್ಟ !!

ಆ ರಟ್ಟೆ , ಆ ತೋಳು , ಆ ಭುಜದ ಹರವಿಗೆ

ನಾನು ಆತುಕೊಂಡಿರುವಾಗ….
ಅಯ್ಯೋ…. ಆತ ಗಂಡಸೇ ಅಲ್ಲ ಕಣೇ ….
ತನ್ನ ಬಸಿರೊಳಗೆನ್ನ ಇರಿಸಿಬಿಟ್ಟ !!

(ಮೈಸೂರಿನ ‘ಆಂದೋಲನ’ ಹಾಡುಪಾಡು ರಾಮು ಅವರ ಕವಿತೆ)

Top of Form