ತಾಯವ್ವನ ಕಥೆ………..

ಡಾ.ಸಂಜೀವ ಕುಲಕರ್ಣಿ
                                                                             ತಾಯವ್ವನ ಕಥೆ

 
ಕರುನಾಡು ಎಂಬ ನಾಡಿನಲ್ಲಿ ತಾಯವ್ವ ಅಂತೊಬ್ಬಳು ಇದ್ದಳು. ಪರೋಪಕಾರಿ ಜೀವ.
ತಮ್ಮ ಎಲ್ಲಾ ಸಣ್ಣ ದೊಡ್ಡ ತೊಂದರೆಗಳಿಗೆ ಊರವರು ಧಾವಿಸುತ್ತಿದ್ದುದು ತಾಯವ್ವನ ಕಡೆಗೆ. ಒಮ್ಮೆ ಒಬ್ಬ ಹುಡುಗನಿಗೆ ಕಾಲಿಗೆ ಮುಳ್ಳು ಚುಚ್ಚಿ ಮನೆ ಹಾರುವಂತೆ ನೋವಾದಾಗ ಅವನನ್ನು ತಾಯವ್ವನ ಬಳಿ ತಂದರು. ತಾಯವ್ವ ಮುಳ್ಳು ತೆಗೆಯುವಾಗ ಅಕಸ್ಮಾತ್ತಾಗಿ ಸೂಜಿ ಅವಳ ಬೆರಳಿಗೇ ಚುಚ್ಚಿ ಒಂದು ಹನಿ ರಕ್ತ ಹುಡುಗನ ಮುಳ್ಳಿನ ಗಾಯದ ಮೇಲೆ ಬಿತ್ತು. ಮುಂದೆ ಒಂದು ಗಳಿಗೆಯಲ್ಲಿಯೇ ತಾಯವ್ವ ಮುಳ್ಳು ಹೊರ ತೆಗೆಯುವುದಕ್ಕೂ ಹುಡುಗನ ಬಾಯಿ ಬಂದ್ ಆಗುವುದಕ್ಕೂ ಸರಿ ಹೋಯಿತು. ತಾಯವ್ವನ ಮೈಯ ಒಂದು ಹನಿ ರಕ್ತ ಹುಡುಗನ ಮೈಯನ್ನು ಸ್ಪರ್ಶಿಸಿದ್ದಕ್ಕೇ ಹುಡುಗ ಗುಣಮುಖನಾದ ಎಂಬ ಮಾತು ಸಂಜೆಯ ತಂಗಾಳಿಯಂತೆ ಊರ ತುಂಬೆಲ್ಲಾ ಓಡಾಡಿ ಮರುದಿನ ಬೆಳಿಗ್ಗೆ ಕೋಳಿ ಕೂಗುವುದರೊಳಗೆ ಚರ್ಮರೋಗದಿಂದ ಬಳಲುತ್ತಿದ್ದ ಒಬ್ಬ ಅಜ್ಜಿ ಬಂದು “ತಾಯವ್ವ, ಒಂದು ಹನಿ ರಗತ ನನ್ನ ಚರ್ಮಕ್ಕೆ ಹಚ್ಚಿ ನನ್ನ ರೋಗ ಗುಣ ಮಾಡು ನನ್ನ ಹಡದವ್ವ” ಎಂದು ಸೆರಗೊಡ್ಡಿದಳು. ಜೇನು ಹೃದಯದ ತಾಯವ್ವ ಸೂಜಿ ಚುಚ್ಚಿಕೊಂಡು ತನ್ನ ಮೈಯ ಒಂದು ಹನಿ ನೆತ್ತರನ್ನು ಅಜ್ಜಿಗೆ ಕೊಟ್ಟಳು. ಏನು ಅಚ್ಚರಿ, ಅಜ್ಜಿಯ ಚರ್ಮರೋಗ ಮೂರು ದಿನದಲ್ಲಿ ಹುಲ್ಲ ಮೇಲಿನ ಇಬ್ಬನಿಯಂತೆ ಕರಗಿ ಮಾಯವಾಯಿತು!
ಮುಂದೇನು ಕೇಳ್ತೀರಿ, ದಿನದಿಂದ ದಿನಕ್ಕೆ ಈ ಸುದ್ದಿಗೆ ಮಕ್ಕಳು ಮೊಮ್ಮಕ್ಕಳು ಹುಟ್ಟಿ ಅವು ಸುತ್ತಣ ಹತ್ತು ಹಳ್ಳಿಯ ಕಿವಿ ಹೊಕ್ಕು ಆ ಕಾಯಿಲೆ ಈ ಕಾಯಿಲೆ ನೂರೆಂಟು ಕಾಯಿಲೆಯ ಜನ ಬೆಲ್ಲಕ್ಕೆ ಇರುವೆಯಂತೆ ತಾಯವ್ವನ ಮನೆಗೆ ಮುತ್ತಿದರು. ನಾಡಿನ ಹೆಸರಾಂತ ವಿಜ್ಞಾನಿಗಳು ಬಂದು ಒಂದು ಸಿರಿಂಜ್ ತಯಾರಿಸಿ ತಾಯವ್ವನ ಶರೀರದಿಂದ ಸರಿಯಾಗಿ ರಕ್ತ ತೆಗೆಯುವ ವ್ಯವಸ್ಥೆ ಮಾಡಿದರು. ಈಗ ತಾಯವ್ವನ ಮನೆ ಮುಂದೆ ದಿನಾಲೂ ಜನಜಾತ್ರೆ. ನಾಡಿನ ನಾಲಿಗೆಯ ಮೇಲೆಲ್ಲಾ ತಾಯವ್ವನನ್ನು ಹೊಗಳಿ ಹಾರೈಸುವ ಹಾಡುಗಳ ಹಬ್ಬ. ಇತ್ತ ದಿನದಿಂದ ದಿನಕ್ಕೆ ತಾಯವ್ವ ಅಶಕ್ತಳಾಗುತ್ತ ಬಿಳಿಚಿಕೊಳ್ಳುತ್ತಾ ಸೊರಗುತ್ತಾ ಹಾಸಿಗೆ ಹಿಡಿದಳು. ಆದರೂ ಜನಜಾತ್ರೆ, ರಕ್ತ ಕೊಡುವುದು ಮುಂದುವರಿಯಿತು. ಕೊನೆಗೊಂದು ದಿನ ವೈದ್ಯರು ಬಂದು ಮನೆ ಮುಂದೆ ಸೇರಿದ್ದ ಜನ ಜಂಗುಳಿಗೆ “ತಾಯವ್ವನ ಸ್ಥಿತಿ ಗಂಭೀರವಾಗಿದೆ. ಅವಳ ಮೈಯಲ್ಲಿ ಸ್ವಲ್ಪವೂ ರಕ್ತವಿಲ್ಲ. ಅವಳು ಬದುಕಿ ಉಳಿಯುವ ಸಾಧ್ಯತೆ ಕಡಿಮೆ. ವಾಪಸ್ ಹೋಗಿ” ಎಂದು ಹೇಳಿದರು. ಸೇರಿದ್ದ ಜನರಲ್ಲಿ ಪ್ರತಿಯೊಬ್ಬರ ಕೂಗೂ ಒಂದೇ “ಹಂಗ ಅನಬ್ಯಾಡರೀ, ತಾಯವ್ವ ಸಾಯೂದಿದ್ದರ ಸಾಯಲಿ ಆದರ ನಮಗೊಬ್ಬರಿಗೆ ಒಂದ್ ಹನಿ ರಕ್ತ ಕೊಟ್ಟು ಆಮ್ಯಾಲೆ ಬೇಕಿದ್ರೆ ಸಾಯಲಿ.”
ನಾವೆಲ್ಲಾ ಇಂದು ತಾಯವ್ವನ ಮನೆ ಮುಂದೆ ನಿಂತು ಹೀಗೇ ಕೂಗುತ್ತಿರುವ ಜನರೇ ಅಲ್ಲವೇ?

[ಮೇ 2015ರ ಹೊಸಮನುಷ್ಯ-ಕೃಪೆ]