ತಪ್ಪು ಸರ್ಕಾರದ್ದು; ದೂರು ಮುಂಗಾರಿನ ಮೇಲೆ..!!-ಕೆ.ಪಿ.ಸುರೇಶ

ನೀರಿನ ರಫ್ತಿನಲ್ಲಿ ನಮಗೇ ಗೋಲ್ಡ್ ಮೆಡಲ್. ಚೀನಾ, ಅಮೆರಿಕಾಕ್ಕಿಂತಲೂ ನಾವು ಮುಂದಿದ್ದೇವಂತೆ..! ಒಂದುಲಕ್ಷ ಮಿಲಿಯ ಘನ ಮೀಟರ್ ನೀರಿನಷ್ಟು ಉತ್ಪನ್ನವನ್ನು ನಾವು ರಫ್ತು ಮಾಡುತ್ತಿದ್ದೇವೆ..!! ಇದೆಷ್ಟು ಆಗುತ್ತೆ ಅನ್ನುವ ಕಲ್ಪನೆ ನನಗೂ ಇಲ್ಲ!! ಒಂದು ಘಮೀ. ಅಂದರೆ ಒಂದು ಸಾವಿರ ಲೀಟರ್ ಅಂತ ಗೊತ್ತು.ಇದರರ್ಥ, ಯಕ್ಕಮಕ್ಕಾ ನೀರು ಬಳಸಿ ನಾವು ಬೆಳೆ ಬೆಳೆದು ಹೊರಗೆ ಕಳಿಸುತ್ತಿದ್ದೇವೆ; ಜಾಣ ರಾಷ್ಟ್ರಗಳು ತರಿಸಿಕೊಳ್ಳುತ್ತಿದ್ದಾವೆ.
ಇತ್ತ ಕಾವೇರಿ ಮತ್ತು ಕೃಷ್ಣಾ ನಂಬಿಕೊಂಡಿರುವ ಜನಸಂಖ್ಯೆ ಸುಮಾರು ಹನ್ನೊಂದು ಕೋಟಿ. ಈ ಕಾರಣಕ್ಕೇ ನದಿಗಳ ಮೇಲೆ ವರ್ಷದ ಎಂಟು ತಿಂಗಳು ನೀರಿನ ಹಪಾಹಪಿಯ ಒತ್ತಡ ಸೃಷ್ಟಿಯಾಗಿದೆ. ಹೋಗಲಿ ಈ ನೀರನ್ನು ಬೇಕಾಬಿಟ್ಟಿ ಬಳಸಿ ನಮ್ಮಲ್ಲಿ ಬೆಳೆವ ಬೆಳೆಗಳ ಉತ್ಪಾದನಾ ದಕ್ಷತೆ ಜಗತ್ತಿನಲ್ಲೇ ಕನಿಷ್ಠ. ಜಾಗತಿಕ ಸರಾಸರಿಯ ಎರಡು ಪಟ್ಟು ನೀರು ಬಳಸಿ ನಾವು ಬೆಳೆ ಬೆಳೆಯುತ್ತಿದ್ದೇವೆ. ಉದಾ: ಮೆಕ್ಕೆ ಜೋಳ ಬೆಳೆಯಲು ನಾವು ಜಾಗತಿಕ ಸರಾಸರಿಯ ಎರಡೂವರೆ ಪಟ್ಟು ನೀರು ಬಳಸುತ್ತಿದ್ದೇವೆ.
ಭಾರತದ ನೀರಿನ ಅಗತ್ಯದಲ್ಲಿ ಶೇ. 92 ಕೃಷಿ ರಂಗದ ಪಾಲು. ಶೇ. 4ರಷ್ಟು ಕುಡಿಯುವ ನೀರು ( ನಗರಗಲ ಲೆಕ್ಕ ಅಂತಿಟ್ಟುಕೊಳ್ಳಿ.) ಈ ನೀರಿನ ಬಹುಪಾಲು ಮಳೆಯಿಂದಲೂ ಇನ್ನುಳಿದದ್ದು ಅಂತರ್ಜಲದಿಂದಲೂ ಬರುತ್ತದೆ.
ಆದ್ದರಿಂದಲೇ ಮುಂಗಾರು ಮಳೆಯನ್ನು ಅಷ್ಟು ಕಾತರದಿಂದ ಎದುರು ನೋಡುವುದು. ‘ಮುಂಗಾರು ನೆಟ್ಟಗಾಗಿಲ್ಲ, ಆದ್ದರಿಂದ ರಾಜ್ಯ ಬರದ ದವಡೆಯಲ್ಲಿ ಸಿಲುಕಿದೆ’ ಎಂಬುದು ರೈತರ ಆತ್ಮಹತ್ಯೆಯಷ್ಟೇ ಮಾಮೂಲಿಯಾಗಿದೆ.
ಕರ್ನಾಟಕಕ್ಕೆ ಸುಮಾರು ನಾಲ್ಕು ತಿಂಗಳ ಮುಂಗಾರು, ಸುಮಾರು 45 ದಿನದ ಹಿಂಗಾರು ( ಚದುರಿದಂತೆ ಬಯಲು ಸೀಮೆಯಲ್ಲಿ) ಎಂಬುದು ವಾಡಿಕೆ ಗ್ರಹಿಕೆ. ಆದರೆ ಈ ಮಳೆಯೂ ಅಷ್ಟೇ 300-400 ಸೆಂ.ಮೀ.ನಷ್ಟು ಮಳೆ ಪಶ್ಚಿಮ ಘಟ್ಟಗಳ/ಕರಾವಳಿಯ 6-7 ಜಿಲ್ಲೆಗಳಲ್ಲಾದರೆ ಉಳಿದ ಜಿಲ್ಲೆಗಳು 50-80 ಸೆಂ.ಮೀ. ಮ:ಳೆ ಪಡೆಯುತ್ತವೆ.. ಅಂದರೆ ನಮ್ಮ ಮಳೆಯ ಪ್ರಮಾಣ 400 ಸೆಂ.ಮೀ.ನಿಂದ 50 ಸೆಂ.ಮೀ.ವರೆಗೆ ವ್ಯತ್ಯಾಸ ಹೊಂದಿದೆ.
ವರ್ಷದ ಮಳೆ ಲೆಕ್ಕ ನೋಡಿ ಸರ್ಕಾರೀ ಇಲಾಖೆಗಳು ವಾಡಿಕೆಯ ಮಳೆಯಾಗಿದೆ ಎಂದು ಘೋಷಿಸುವುದಿದೆ. ಆದರೆ ಮಳೆಯ ದಾಖಲೆ ನೋಡಿದರೆ ಇನ್ನೊಂದು ದಾರುಣ ವೈಚಿತ್ರ್ಯ ಅನಾವರಣವಾಗುತ್ತದೆ. ಹಲವಾರು ಜಿಲ್ಲೆಗಳಲ್ಲಿ ವರ್ಷದ ಒಟ್ಟು ಮಳೆಯ ಶೇ20-30 ಒಂದೇ ತಿಂಗಳಲ್ಲಿ ಬಿದ್ದು ಅವಾಂತರ ಸೃಷ್ಟಿಸಿದೆ. ಉದಾ: 2015ರಲ್ಲಿ ಕೋಲಾರದಲ್ಲಿ ಒಕ್ಟೋಬರ್ ಒಂದೇ ತಿಂಗಳಲ್ಲಿ 30ಸೆಂ.ಮೀ ಮಳೆ ಬಿದ್ದಿತ್ತು ಇದು ಅಲ್ಲಿನ ವಾಡಿಕೆ ಮಳೆಯ ಅರ್ಧದಷ್ಟು.
1971ರಿಂದ 2014ರವರೆಗಿನ ಮಳೆ ದಾಖಲೆಯೊಂದರಲ್ಲ್ಲಿ ಬೆರಳೆಣಿಕೆ ವರ್ಷಗಳು ಬಿಟ್ಟರೆ ಉಳಿದ ವರ್ಷಗಳಲ್ಲಿ ಒಂದೋ ಹೆಚ್ಚು; ಇಲ್ಲಾ ಕಡಿಮೆ ಮಳೆಯಾಗಿದೆ. ಇದರರ್ಥ ಮಳೆ ಸದಾ ನಮ್ಮ ನಿರೀಕ್ಷೆಗೆ ತಕ್ಕಂತೆ ಸುರಿದಿಲ್ಲ.
ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ವೈಜ್ಞಾನಿಕವಾದ, ನಮ್ಮ ಮಳೆ ಕಡಿಮೆ ಬೀಳುವ ಜಿಲ್ಲೆಗಳಿಗೆ ತಕ್ಕ ಸುಸ್ಥಿರ ಕೃಷಿ/ ಜಲ ನೀತಿಯೊಂದನ್ನು ಮುಂದಿಟ್ಟು ರೈತರಿಗೆ ಮಾರ್ಗದರ್ಶನ ಮಾಡಬೇಕಲ್ಲವೇ?
ನೀರಾವರಿ ವ್ಯವಸ್ಥೆ ಕಲ್ಪಿಸುವುದು ಇಂಥಾ ಒಂದು ನಿಲುಮೆ. ಸರ್ಕಾರೀ ಅಂಕಿ ಅಂಶಗಳ ಪ್ರಕಾರ ಕರ್ನಾಟಕದ 190 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಕೇವಲ 45 ಲಕ್ಷ ಹೆಕ್ಟೇರ್ ಪ್ರದೇಶವನ್ನಷ್ಟೇ ನೀರಾವರಿಗೊಳಪಡಿಸಲು ಬೇಕಾದ ಜಲ ಸಂಪನ್ಮೂಲವಿದೆ. ಅಂದರೆ ಶೇ. 25% ಭಾಗ. ಇನ್ನುಳಿದದ್ದು ಮಳೆಯಾಶ್ರಿತ. ಈ ನೀರಾವರಿಯ ಅಣೆಕಟ್ಟುಗಳಿಗೂ ಮುಂಗಾರು ವಿಜೃಂಭಿಸುವ ಪಶ್ಚಿಮಘಟ್ಟಗಳ ಜಿಲ್ಲೆಯಿಂದಲೇ ನೀರು ಬರಬೇಕು. ಕೊಡಗಿನ ಕಾವೇರಿ ಮೈದುಂಬಿದರೆ ಮಂಡ್ಯದ ಕಬ್ಬು ಕೊಬ್ಬುತ್ತದೆ.
ಇಂತಿಪ್ಪ ಸ್ಥಿತಿಯಲ್ಲಿ ಕೃಷಿ ಹೇಗೆ ನಡೆಯುತ್ತಿದೆ ನೋಡೋಣ.
ನೀರಿನ ಮೂಲ 90-91ರಲ್ಲಿ  (ಲಕ್ಷ .ಹೆಕ್ಟೇರ್)      2011-12 (ಲಕ್ಷ.ಹೆಕ್ಟೇರ್)
ನೀರಾವರಿ        8.62                                       11.78
ಕೆರೆ                  2.4                                          1.96
ಅಂತರ್ಜಲ       1.73                                        15.40
ಇಪ್ಪತ್ತೇ ವರ್ಷದಲ್ಲಿ ಅಂತರ್ಜಲ ಬಳಕೆಯ ಕೃಷಿ, ನೀರಾವರಿಯನ್ನು ಹಿಂದಿಕ್ಕಿದೆ. ಕೆರೆ ಮೂಲದ ಕೃಷಿಯ ಪ್ರದೇಶ ಇಳಿದಿದೆ. ಈ ಅವಧಿಯಲ್ಲಿ ಸರ್ಕಾರ ಸಾವಿರಾರು ಕೋಟಿ ಹಣ ನೀರಾವರಿಗೆ ವೆಚ್ಚ ಮಾಡಿದರೂ ಅದು ಶೇ. 30 ರಷ್ಟು ಮಾತ್ರಾ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ಜಲ ನೀತಿ ಏನು? ಸರ್ಕಾರ 2002ರಲ್ಲಿ ಪ್ರಕಟಿಸಿದ ಜಲನೀತಿ ದಾಖಲೆಯ ಪ್ರಕಾರ ನಮ್ಮ ರಾಜ್ಯದ ಅಂತರ್ಜಲದ ಉಪಯೋಗ ಅಪಾಯಕಾರಿ ಮಟ್ಟ ದಾಟಿದೆ. ಇದರಿಂದಾಗಿ ಸುಮಾರು 3 ಲಕ್ಷ ತೆರೆದ ಬಾವಿಗಳು ಒಣಗಿವೆ. ಆದ್ದರಿಂದ ಜಲಮರುಪೂರಣ ಮತ್ತು ಸೂಕ್ಷ್ಮ ಕೃಷಿಗೆ ಒತ್ತು ನೀಡುವ ಬಗ್ಗೆಯೂ ಈ ದಾಖಲೆ ಹೇಳಿದೆ. ಆದರೆ ಇದೇ ಜಲನೀತಿಯ ಗುರಿ/ ಉದ್ದಿಶ್ಯ ಎಂಬ ಸೆಕ್ಷನ್ನಿನಲ್ಲಿ, ‘ಅಂತರ್ಜಲ ಮೂಲಕ ಸಾಗುವಳಿಯಾಗುವ ಪ್ರದೇಶವನ್ನು 15 ಲಕ್ಷ ಹೆಕ್ಟೆರುಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದೂ ಘೋಷಿಸಲಾಗಿದೆ.!! ಈ ಪರಿ ಗಂಡಭೇರುಂಡದ ಮಾತುಗಳಿದ್ದರೆ ಏನಾಗುತ್ತದೆ? ಈಗಾಗಲೇ ಈ ಅತ್ಮಹತ್ಯಾಕಾರಿ ಗುರಿ ಸಾಧಿಸಲಾಗಿದೆ.. ಸರ್ಕಾರ ನೀರಾವರಿಗೆ ಸುರಿದರೆ ರೈತರು ಸ್ವತಃ ವೆಚ್ಚ ಮಾಡಿದ್ದಾರಷ್ಟೇ. 15 ವರ್ಷ ಮೊದಲು ಸರ್ಕಾರ ಮಾಡಿದ ಅಂದಾಜು ಪ್ರಕಾರ ಅಂದಿಗೇ ರೈತರ ಖಾಸಗೀ ಹೂಡಿಕೆಯ ಮೊತ್ತ 2000 ಕೋಟಿಗೂ ಹೆಚ್ಚು. ಇಂದಿನ ಲೆಕ್ಕ ತೆಗೆದರೆ ಅಂತರ್ಜಲಕ್ಕೆ ಕನ್ನಹಾಕಲು ರೈತರು ಹೂಡಿದ ಬಂಡವಾಳ 20 ಸಾವಿರ ಕೋಟಿ ಮೀರಿರಬಹುದು.
ಮಳೆ ಆಶ್ರಿತ ಪ್ರದೇಶಗಳಲ್ಲೂ ಸರ್ಕಾರದ ಉತ್ತೇಜನದ ಮೇರೆಗೆ ರೈತರು ಏನನ್ನು ಬೆಳೆದರು? ಬಹುತೇಕ ಪ್ರದೇಶಗಳಲ್ಲಿ ವ್ಯಾಪಕವಾಗಿ ದೀರ್ಘಕಾಲೀನ ತೋಟಗಾರಿಕಾ ಬೆಳೆಗಳಿಗೆ ಒತ್ತು ನೀಡಲಾಗಿದೆ. ಚಿತ್ರದುರ್ಗ, ಕೋಲಾರದಂಥಾ ಪ್ರದೇಶಗಳಲ್ಲಿ ತರಕಾರಿ ಬೆಳೆ ಯಶಸ್ವಿಯಾಗಿದೆ. ಆದರೆ ಇದರೊಂದಿಗೇ ನಮ್ಮ ನಾಡಿನ ಪ್ರಮುಖ ಆಹಾರ ಬೆಳೆಯಾಗಿದ್ದ ರಾಗಿ, ಜೋಳಗಳೆರಡೂ ಹಿನ್ನಡೆ ಅನುಭವಿಸಿವೆ. ಇದರ ಜಾಗದಲ್ಲಿ ಪಶು ಆಹಾರಕ್ಕೆ ಬಳಸುವ ಮೆಕ್ಕೆ ಜೋಳ ವಿಜೃಂಭಿಸಿದೆ
ಉತ್ಪಾದನೆ(ಬೆಳೆ) 2001(ಲಕ್ಷ ಟನ್)                2012(ಲಕ್ಷ ಟನ್)
ಭತ್ತ                     57.32                               58.93
ಜೋಳ                 15.47                                11.66
ರಾಗಿ                    18.35                                12.72
ಮೆಕ್ಕೆಜೋಳ         21.36                                 40.85

ಭತ್ತದ ಪ್ರಗತಿ ಸ್ಥಗಿತಗೊಂಡಿದೆ. ಜೋಳ ರಾಗಿ ಉತ್ಪಾದನೆ ಇಳಿದಿದೆ. ಸ್ಥಳೀಯ ಮಳೆಗೆ ತಕ್ಕ ಹಾಗೆ ರೂಪುಗೊಂಡಿದ್ದ ರಾಗಿ ಜೋಳದ ಬದಲು ಅಂತರ್ಜಲ ನೆಚ್ಚಿಕೊಂಡು ಇತರ ಬೆಳೆಗೆ ರೈತರು ವರ್ಗಾವಣೆಗೊಂಡಿದ್ದಾರೆ.
ಇದರೊಂದಿಗೇ ರಾಸಾಯನಿಕ ಗೊಬ್ಬರದ ಬಳಕೆಯನ್ನೂ ಇಟ್ಟು ನೋಡಿದರೆ ಸರ್ಕಾರೀ ಪ್ರೇರಿತ ರೈತರ ದುರಂತ ಪೂರ್ಣವಾಗುತ್ತದೆ.
ವರ್ಷ              N *            P*        K*     ಒಟ್ಟು ಬಳಕೆ N           P                         K
91-92           30.1       23.6      13.4      4.5 ಲಕ್ಷ ಟನ್      2.9 ಲಕ್ಷ ಟನ್       1.7 ಲಕ್ಷ ಟನ್

2011-12       93            60         25        12.2 ಲಕ್ಷ ಟನ್     7.9 ಲಕ್ಷ ಟನ್       3.3 ಲಕ್ಷ ಟನ್

91-92ರಲ್ಲಿ ಬಳಸುತ್ತಿದ್ದ ರಾಸಾಯನಿಕ ಗೊಬ್ಬರದ ಪ್ರಮಾಣ ಎರಡೇ ದಶಕಗಳಲ್ಲಿ 2-2.5 ಪಟ್ಟು ಹೆಚ್ಚಿದೆ…! ಈ ಅಧಿಕ ಬಳಕೆಯಿಂದ ಉತ್ಪಾದನೆಯೂ ಹೆಚ್ಚಳವಾಗಬೇಕಿತ್ತು. ಆದರೆ ಉತ್ಪಾದನೆ ಇಳಿದಿದೆ, ಇಲ್ಲಾ ಸ್ಥಗಿತಗೊಂಡಿದೆ… ಯಾರೇ ಒಬ್ಬ ತಲೆ ಸರಿ ಇರುವ ರೈತ ಇದರ ಕಾರಣ ವಿವರಿಸಬಲ್ಲ. ರಾಸಾಯನಿಕ ಬಳಕೆ ಜಾಸ್ತಿಯಾದಂತೆಲ್ಲಾ ಉತ್ಪಾದನೆ ಇಳಿಮುಖವಾಗುತ್ತದೆ. ಮಣ್ಣು ನಿರ್ಜೀವಗೊಳ್ಳುತ್ತದೆ. ಹಾಗೇ ನೀರಿನ ಅಗತ್ಯವೂ ಹೆಚ್ಚಾಗುತ್ತದೆ. ಅಂದರೆ ಜಲನೀತಿ, ಕೃಷಿ ನೀತಿ ಎರಡೂ ನಮ್ಮ ರೈತರನ್ನು ಪ್ರಪಾತದಂಚಿಗೆ ತಂದು ನಿಲ್ಲಿಸಿದೆ. ಇವೆರಡೂ ಸುಸ್ಥಿರ ದೀರ್ಘಕಾಲೀನ ದೃಷ್ಟಿಯಿಂದ ರೂಪಿತವಾಗದೇ ಒಂದೆರಡು ದಶಕಗಳ ಭ್ರಮಾತ್ಮಕ ಯಶಸ್ಸಿಗೆ ಕಾರಣವಾಗಿದೆ.
ಇಂದೀಗ ಭರಪೂರ ಮಳೆ ನಾಲ್ಕು ವರ್ಷ ಬಂದರೂ ನಮ್ಮ ಪರಿಸ್ಥಿತಿ ಸುಧಾರಿಸುವುದು ಕಷ್ಟ. ಅಂತರ್ಜಲ ಪೂರಾ ಖಾಲಿಯಾಗಿ ಇನ್ನಷ್ಟು ಆಳಕ್ಕೆ ಕೊರೆಸುತ್ತಾ, ಸಾಲ ಮಾಡುತ್ತಾ ದಿಕ್ಕೆಟ್ಟ ರೈತರ ಸಂಖ್ಯೆ ಸಾವಿರಾರು ಇರಬಹುದು. ಆರ್ಥಿಕ ಲಾಭ; ಹೆಚ್ಚಿನ ನಗದು ದೊರಕುವ ಭ್ರಮೆ ಹುಟ್ಟಿಸಿ ರೈತರು ಸತತವಾಗಿ ವ್ಯಾಪಾರಿ ಬೆಳೆಗಳತ್ತ ಮುಖ ಮಾಡಿದ್ದಾರೆ. ಬಯಲು ಸೀಮೆಯುದ್ದಕ್ಕೂ ಅಡಿಕೆ ಎದ್ದ ಪರಿ ನೋಡಿದರೆ ಈ ಆಮಿಷ ಯಾವ ಮಟ್ಟದ್ದು ಎಂದು ಅರ್ಥವಾಗುತ್ತದೆ. ಅಂತರ್ಜಲದ ಉಪಯೋಗಕ್ಕೊಂದಷ್ಟು ಕೊಂಡಿಗಳಿವೆ. ಬೋರ್ ಹೊಡೆಸಿದರೆ ಜಲಮರುಪೂರಣ ವ್ಯವಸ್ಥೆ ಬೇಕು. ನೀರಿನ ದಕ್ಷ ಬಳಕೆಗೆ ಸೂಕ್ಷ್ಮ ನೀರಾವರಿ ಬೇಕು. ಬೆಳೆಯ ಆಯ್ಕೆಯಲ್ಲಿ ವಿವೇಚನೆ ಇರಬೇಕು. ಮಣ್ಣಿನ ತೇವಾಂಶ ಕಾಪಾಡುವ ಕ್ರಮ ಇರಬೇಕು; ಹೀಗೆ.
ಪ್ರಾಯಶಃ ನಮ್ಮ ಹತ್ತು ಶೇಕಡಾ ರೈತರು ಕೂಡಾ ಜಲಮರು ಪೂರಣ ಅಳವಡಿಸಿಕೊಂಡಿಲ್ಲ; ಬಗ್ಗೆ ಯೋಚಿಸಿಲ್ಲ. ಸರ್ಕಾರ ನೀರಾವರಿ ರೈತರನ್ನು ಅನುಕರಿಸುವ ಮಳೆ ಆಶ್ರಿತ ರೈತರ ಹಪಾಹಪಿಗೆ ನಿಯಂತ್ರಣ ಹೇರದೇ ಜಾಣ ಕುರುಡುತನ ತೋರಿದೆ. ಮೊನ್ನೆ ತುಮಕೂರಿನ ಗೆಳೆಯರೊಬ್ಬರು, “ಸರ್, ತೆಂಗು ನೀರು ಬೇಡುವ ಬೆಳೆ. ತುಮಕೂರಿನ ಸೀಮಿತ ಮಳೆಗೆ ಹೇಳಿಸಿದ ಬೆಳೆಯೇ ಅಲ್ಲ. ಸರ್ಕಾರ ನಮ್ಮ ದಿಕ್ಕುತಪ್ಪಿಸಿತು. ಈಗ ಮೊಮ್ಮಕ್ಕಳಿಗೆ ಬರಡು ಭೂಮಿ ಬಿಟ್ಟು ಹೋಗುತ್ತಿದ್ದೇವೆ. ಇನ್ನು ಅವರಾದರೂ ಯಾಕೆ ಕೃಷಿಯಲ್ಲಿ ಉಳಿದಾರು?” ಎಂದು ಮರುಗಿದ್ದರು. ಹಾಸನ, ತುಮಕೂರುಗಳುದ್ದಕ್ಕೂ ಮೈಲುಗಟ್ಟಲೆ ಸೊರಗಿರುವ ತೆಂಗಿನಮರಗಳನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ.
ನಮ್ಮ ಸರ್ಕಾರ ರೈತರ ಮರ್ಜಿಗೆ ತಕ್ಕಂತೆ ಮಣೆ ಹಾಕುವ ಕೆಲಸ ಮಾಡಿ ಈಗ ಅವರು ಖಾಲಿ ಬೋರು ನೋಡುವಾಗ ತಾನೂ ಹಲ್ಲುಗಿಂಜಿ ಮುಂಗಾರಿನ ಮೇಲೆ ದೂರು ಎತ್ತಿ ಹಾಕುತ್ತಿದೆ!!
ನೀರಾವರಿಗೆ ಸಾವಿರಾರು ಕೋಟಿ ಖರ್ಚು ಮಾಡಲು ಹಿಂದು ಮುಂದು ನೋಡದ ಸರ್ಕಾರ ಖಾಸಗಿ ರೈತರ ಕೊಳವೆ ಬಾವಿಗಳಿಗೆ ಜಲಮರುಪೂರಣದ ಅನುದಾನದ ವಿಷಯದಲ್ಲಿ ಇದೇ ಧಾರಾಳಿತನ ತೋರುತ್ತಿಲ್ಲ. ಪ್ರಾಯಶಃ ನಾಳೆ ಸಾಲಮನ್ನಾ ಮಾಡಲು ಅನಿವಾರ್ಯತೆ ಬಂದರೆ ಆ ಮೊತ್ತದ ಒಂದು ದೊಡ್ಡ ಪಾಲು ಕೊಳವೆಬಾವಿ ಸಾಲವೇ ಇರುತ್ತದೆ.
ಈ ಜಲಮರುಪೂರಣವೂ ಖಾಯಂ ಪರಿಹಾರೋಪಾಯವಲ್ಲ. ಆದರೆ ಈ ಮೂಲಕ ನೀರಿನ ಬಗ್ಗೆ ತನ್ನ ಭೌಗೋಳಿಕ ಪ್ರದೇಶದ ವಾರ್ಷಿಕ ಮಳೆ, ಅದಕ್ಕೊಗ್ಗುವ ಬೆಳೆಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಲು ಇದು ಮೊದಲ ಹೆಜ್ಜೆ ಅಷ್ಟೆ. ಸಮುದಾಯ ಸಂಘಟನೆಗಳು, ಸ್ಥಳೀಯ ಆಡಳಿತಗಳನ್ನೆಲ್ಲಾ ಒಟ್ಟುಗೂಡಿಸಿ ಮಾಡಬೇಕಾದ ಕೆಲಸ ಇದು.
ಈಗ ಕೆರೆಗಳ ಹೂಳೆತ್ತಿಸುವ ಅಭಿಯಾನ ಶುರುವಾಗಿದೆ. ಇದು ಒಳ್ಳೆಯದೇ. ಆದರೆ ಕೆರೆ ಹೂಳೆತ್ತಿದರೂ ಅದಕ್ಕೆ ಬರುವ ಮಳೆನೀರಿನ ಇಳಿ ಹಾದಿಗಳೆಲ್ಲಾ ಅನ್ಯಾಕ್ರಮಣಗೊಂಡಿದೆ. ಇನ್ನೊಂದೆಡೆ ಯಾವ್ಯಾವುದೋ ಯೋಜನೆಗಳಲ್ಲಿ ಹೂಳೆತ್ತಿದ ದಾಖಲೆ ತೆಗೆದರೆ ಪ್ರಾಯಶಃ ರಾಜ್ಯದ ಯಾವ ಕೆರೆಯೂ ಬಾಕಿ ಉಳಿದಿರಲಾರದು ಅನ್ನಿಸುತ್ತೆ. ಮಗುವೊಂದು ಕೊಳವೆ ಬಾವಿಗೆ ಬಿದ್ದರೆ ಸಮರೋಪಾದಿಯಲ್ಲಿ ಸಾವಿರಾರು ಖಾಲಿ ಬೋರುಗಳನ್ನು ಮುಚ್ಚಿಸುವ ಇಚ್ಛಾಶಕ್ತಿ ಪ್ರಕಟಿಸುವ ಸರ್ಕಾರಕ್ಕೆ ಬತ್ತಿರುವ ಕೊಳವೆಬಾವಿಗಳಿಗೆ ಜಲಮರುಪೂರಣದ ಪಾಠ ಹೇಳುವುದು ಕಷ್ಟವಾಗಬಾರದು .
ಇದರೊಂದಿಗೇ ಆಯಾ ಪ್ರದೇಶದ ಸಹಜ ಮಳೆಪ್ರಮಾಣದ ಕಹಿ ಸತ್ಯವನ್ನೂ ರೈತರಿಗೆ ಹೇಳಿ ಅದಕ್ಕೆ ತಕ್ಕಂತ ಬೆಳೆ/ಕೃಷಿ ಪದ್ಧತಿಯನ್ನು ಹೇಳುವ ಕೆಲಸವಾಗಬೇಕು. ರೈತರ ಹೊಲವನ್ನೂ ಮನಸ್ಸನ್ನೂ ಕೆಡಿಸಿ ಕೂತಿರುವ ಸರ್ಕಾರ ಈಗ ಮನೋಧರ್ಮವನ್ನು ಬದಲಾಯಿಸುವ ಕ್ರಮ ಕೈಗೊಳ್ಳಬೇಕು..
ತನ್ನ ಕರ್ತಚ್ಯುತಿಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಮುಂಗಾರಿನ ಮೇಲೆ ದೂರು ಎತ್ತಿ ಹಾಕುತ್ತಿದೆ..!! ಅದೇನು ಮಾತಾಡುವುದಿಲ್ಲ..ಅಲ್ಲವೇ?