ಡಾ.ವಸು ಮಳಲಿ ಅವರ ‘ಒಡಲ ಬೆಂಕಿ ಆರದಿರಲಿ’ ಗೆ ದೇವನೂರ ಮಹಾದೇವ ಅವರ ಬೆನ್ನುಡಿ

EPSON scanner image

EPSON scanner image

ವಸು ನಮ್ಮನ್ನು ಅಗಲಿದರು ಎನ್ನುವ ಕಾರಣಕ್ಕೆ ಆಡಿದ ಮಾತು ಹುಸಿಯಾಗಬಾರದು. ಆದರೆ ನಮ್ಮ ಸಂಬಂಧವೇ ಉತ್ಪ್ರೇಕ್ಷೆ ಆಗಿ ಬಿಟ್ಟದೆ. ಪ್ರಜಾವಾಣಿಯ ಕಳ್ಳುಬಳ್ಳಿ ಅಂಕಣದಿಂದ ಕುಡಿಯೊಡೆದ ನಮ್ಮ ಸಂಬಂಧ ಒಂದು ರೀತಿ ಕಳ್ಳುಬಳ್ಳಿ ಸಂಬಂಧವೇ ಆಗಿ ಬಿಟ್ಟಿತು.
ಇದಕ್ಕೆ ಮೊದಲು ವಸುವನ್ನು ಒಂದೆರಡು ಸಭೆಗಳಲ್ಲಿ ನೋಡಿದ್ದೆ, ‘ಹಲೋ’ ‘ಹಲೋ’ ಅಷ್ಟೇ. ಈ ಹುಡುಗಿ ಇಂದಿರಾಗಾಂಧಿ ಥರ ಕಾಣಿಸ್ತಾಳೆ ಅಂತ ಮನಸ್ಸಲ್ಲೇ ಅಂದುಕೊಂಡಿದ್ದೆ. ಪ್ರಜಾವಾಣಿಯ ಕಳ್ಳುಬಳ್ಳಿಯ ಲೇಖನವೊಂದನ್ನು ಓದಿದ ಮೇಲೆ ‘ಇದು ನಾನು ಬರೆಯಬಹುದಾದ ಬರಹದಂತೆಯೇ ಇದೆ. ಆದರೆ ನನಗಿಂತಲೂ ವಸು ಹೆಚ್ಚು ಪ್ರಬುದ್ಧವಾಗಿ ಹೆಚ್ಚು ಸಮಗ್ರವಾಗಿ ಬರೆದಿದ್ದಾರೆ‘ ಎನಿಸಿತು. ತಡೆದು ಕೊಳ್ಳಲಾರದೆ ಫೋನ್ ನಂಬರ್ ಪತ್ತೆ ಮಾಡಿಕೊಂಡು ವಸು ಜೊತೆ ಮಾತಾಡಿದೆ. ಅಲ್ಲಿಂದ ನಮ್ಮ ಕಳ್ಳುಬಳ್ಳಿ ಸಂಬಂಧ ಮೊದಲಾಯಿತು. ಅದಾದ ಮೇಲೆ ನಮ್ಮ ಭೇಟಿ ಒಂದೆರಡು ಸಲ ಅಷ್ಟೇ. ವಸುವಿನ ಪ್ರತಿಭೆ, ಆಕೆಯ ನಾಯಕತ್ವದ ಗುಣ ಎದ್ದು ಕಾಣುತ್ತಿತ್ತು. ಈಕೆಗೆ ಕ್ಯಾನ್ಸರ್ ಏನೂ ಮಾಡಲಾರದು ಎಂಬ ನಂಬಿಕೆ ಅಥವಾ ಆಸೆ ನನ್ನೊಳಗಿತ್ತು. ವಸು, ದೇಹದ ಕ್ಯಾನ್ಸರ್‍ಗೆ ತುತ್ತಾಗಿದ್ದರೂ ಆಕೆಯ ಮನಸ್ಸಿಗೆ ಜಾತಿಯ ಕ್ಯಾನ್ಸರ್ ಸೋಂಕಿರಲಿಲ್ಲವಾಗಿ ಆಕೆ ಅಲ್ಪಳಾಗಿರಲಿಲ್ಲ, ಕ್ಷುದ್ರಳಾಗಿರಲಿಲ್ಲ. ಜೊತೆಗೆ ಡಿ.ಆರ್.ನಾಗರಾಜ್‍ಗಿದ್ದ ಮೇಧಾವಿತನ, ನಾಯಕತ್ವ ಗುಣಗಳು ಆಕೆಯಲ್ಲ್ಲಿತ್ತು. ಇಂಥ ವ್ಯಕ್ತಿತ್ವ ನಾಡಿಗೆ ಬೇಕು ಎಂಬಂಥ ವ್ಯಕ್ತಿತ್ವ. ವಸುವೊಳಗಿದ್ದ ಕಮ್ಯುನಿಸಂ, ಥಿಯರಿ ನೋಟ ಇನ್ನೂ ಸ್ವಲ್ಪ ಕರಗಬೇಕಾಗಿತ್ತು ಅಷ್ಟೇ.
ನಾವು ಅಭಿರುಚಿ ಗಣೇಶ್, ರಾಮು ಹೀಗೆ ಒಂದಿಷ್ಟು ಸ್ನೇಹಿತರು ಸೇರಿಕೊಂಡು ಒಂದು ತ್ರೈಮಾಸಿಕವನ್ನು ವಸು ಸಂಪಾದಕತ್ವದಲ್ಲಿ ಹಾಗೂ ವಿಕ್ರಂ ವಿಸಾಜಿ ಸಹ ಸಂಪಾದಕತ್ವದಲ್ಲಿ ಆರಂಭಿಸುವ ರೂಪರೇಷೆ ಆಗುತ್ತಿತ್ತು. ವಸುವಿನ ಸಿನೆಮಾ ಮಹತ್ವಾಕಾಂಕ್ಷೆಯಿಂದಾಗಿ ಇದು ವಿಳಂಬವಾಗುತ್ತಿತ್ತು. ಇನ್ನೊಂದು ಸಲ ಭೇಟಿಯಾದರೆ ಸುಸ್ತು ಮಾಡುವ ಇಂಥವನ್ನು ಕಮ್ಮಿ ಮಾಡಿ ಎಂದು ಹೇಳಬೇಕೆಂದಿದ್ದೆ. ವಸು ಅಗಲಿ ಬಿಟ್ಟರು.
ನಮ್ಮ ಮನೆಗೂ ವಸು ಒಂದು ಸಲ ಬಂದಿದ್ದರು. ನಾನಿರಲಿಲ್ಲ. ನನ್ನ ಪತ್ನಿ ಸುಮಿತ್ರಾ ಮತ್ತು ಮಗಳು ಮಿತಾ ಜತೆ ಇರುವಷ್ಟು ಕಾಲ ಅಂಟಿಕೊಂಡೇ ಇದ್ದರಂತೆ. ‘ನಮ್ಮ ಮನೆಯಲ್ಲೇ ಇದ್ದುಬಿಡು ವಸು’ಎಂದರೆ, ವಸು ಕಣ್ಣರಳಿಸಿ ‘ಆಗಲಿ!’ಎಂದು ಇದ್ದು ಬಿಡುತ್ತಿದ್ದರೇನೋ ಎಂದು ನನಗನಿಸುತ್ತದೆ. ಅದಕ್ಕೇ ಮೊದಲಿಗೇ ಹೇಳಿದೆ ಈ ನಮ್ಮ ಸಂಬಂಧವೇ ಉತ್ಪ್ರೇಕ್ಷೆ ಅಂತ. ವಸು ಮುಖ ನೆನಪಾದಾಗಲೆಲ್ಲಾ ನನಗನಿಸುವುದು ಇಷ್ಟೇ– ಇದೇನೋ ನನಗೆ ಅರ್ಥವಾಗುವುದಿಲ್ಲ.