ಡಾ.ಅ.ಶ್ರೀಧರ ಅವರ ಶಿಶುವಿನ ಸಮಗ್ರ ಮನೋವಿಕಾಸದಲ್ಲಿ ತಾಯ್ನುಡಿಯ ಪಾತ್ರ- ಲೇಖನ.

                                                                                                                                                                                                                       ಡಾ. ಅ.ಶ್ರೀಧರ

                                                            ಶಿಶು ಸಮಗ್ರ ಮನೋವಿಕಾಸದಲ್ಲಿ ತಾಯ್ನುಡಿಯ ಪಾತ್ರ

ಭಾಷಾ ಮಾಧ್ಯಮವನ್ನು ಚರ್ಚಿಸುವಾಗ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿರುವ ಅಂಶಗಳಲ್ಲಿ ಮೊದಲ ಭಾಷೆಯೂ ಒಂದು ಎನ್ನುವುದು. ಇದಲ್ಲದೆಯೆ ಮನೆ, ಪರಿಸರ, ಆರ್ಥಿಕ ಸ್ಥಿತಿಗತಿಗಳು, ಕಲಿಕೆಯ ಪೀಳಿಗೆ, ಶಿಕ್ಷಕರ ಗುಣಮಟ್ಟ, ಶಾಲೆಯಲ್ಲಿರುವ ಕಲಿಕೆಯ ಪರಿಸರಗಳೆಲ್ಲವು ಮಕ್ಕಳ ಕಲಿಕೆಯ ಮೇಲೆ ಹಿಡಿತವಿರಿಸಿಕೊಂಡಿರುತ್ತದೆ. ಕೇವಲ ಇಂಗ್ಲಿಷ್ ಶಾಲೆಗೆ ದಾಖಲಾದ ತಕ್ಷಣ ಮಕ್ಕಳು ಇಂಜಿನಿಯರು, ವೈದ್ಯರಾಗಿಬಿಡುತ್ತಾರೆ ಎನ್ನುವಂತಹ ತಪ್ಪು ಕಲ್ಪನೆ ಅನೇಕ ಪೋಷಕರು ಮತ್ತು ಮಕ್ಕಳಲ್ಲೂ ಇರುವುದುಂಟು. ಮಕ್ಕಳಲ್ಲಿ ಕಲಿಯುವ ಸ್ವಭಾವ ಗಟ್ಟಿಯಾಗುವಂತೆ ಮಾಡಬಲ್ಲ ಗುಣ ಮೊದಲ ಭಾಷೆಯಲ್ಲಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಬಹಳಷ್ಟು ನಡೆನುಡಿಗಳು ಸಮುದಾಯದ ಚೌಕಟ್ಟಿನಲ್ಲಿ ಬರುವಂತಹದ್ದು.  ಸಾಮಾಜಿಕ ಮಾನ್ಯತೆ, ಮನ್ನಣೆಗಳಂತಹದ್ದನ್ನು (ಮಕ್ಕಳು) ನಿರೀಕ್ಷಿಸುವುದಕ್ಕೆ ಕಾರಣ ಸಮುದಾಯದ ಗಮನವನ್ನು ಸೆಳೆಯುವುದೇ ಆಗಿರುತ್ತದೆ. ಇತ್ತೀಚೆಗೆ ಮಂಡ್ಯದವರಾಗಿದ್ದ ವೈದ್ಯರೊಬ್ಬರ ಮಗ ಇಂಗ್ಲೆಂಡಿನಲ್ಲಿ ಹುಟ್ಟಿ, ಹೊರದೇಶಗಳಲ್ಲಿ ಶಿಕ್ಷಣ ಪಡೆದು, ಅಮೆರಿಕದಲ್ಲಿ ಖ್ಯಾತ ವೈದ್ಯರೆನಿಸಿಕೊಂಡಿದ್ದು, ಒಬಾಮಾ ಸರ್ಕಾರದಲ್ಲಿ ಅಮೆರಿಕದ ಮಹಾವೈದ್ಯರ ಸ್ಥಾನಕ್ಕೆ ಏರಿದ ಸಂದರ್ಭದಲ್ಲಿ ಆತನನ್ನು ನಮ್ಮವನೆಂದು ಕನ್ನಡಿಗರು ಹೆಮ್ಮೆಪಟ್ಟಿರುವುದು ಈ ವಿವರಣೆಗೆ ಸೂಕ್ತ ಉದಾಹರಣೆ.

ಮೊದಲ ಭಾಷೆಯ ಮಾಧ್ಯಮದಲ್ಲಿ ಕಲಿತ  ಮಕ್ಕಳ್ಳಲ್ಲಿ ಭಾಷಾ ಸೌಲಭ್ಯ ಉತ್ತಮವಾಗಿರುತ್ತದೆ…

ಇಂಗ್ಲಿಷ್ ಭಾಷಾಮಾಧ್ಯಮದಲ್ಲಿ ಕಲಿತ ಮಕ್ಕಳ ಮಾನಸಿಕ ಸಾಮರ್ಥ್ಯಗಳ ಗುಣಮಟ್ಟ ಮತ್ತು ಪ್ರಾಂತೀಯ ಭಾಷೆಗಳಲ್ಲಿ ಕಲಿತ ಮಕ್ಕಳ ಮಾನಸಿಕ ಸಾಮರ್ಥ್ಯಗಳ ಗುಣಮಟ್ಟದಲ್ಲಿ ಕಂಡುಬರುವಂತಹ ವ್ಯತ್ಯಾಸಗಳಿಗೆ ಭಾಷಾಮಾಧ್ಯಮ ಎಷ್ಟರ ಮಟ್ಟಿಗೆ ಕಾರಣವೆನ್ನುವುದನ್ನು ಖಚಿತವಾಗಿ ಸೂಚಿಸುವಂತಹ ಅಧ್ಯಯನಗಳು ಅಪರೂಪ. ಮಾನಸಿಕ ಸಾಮರ್ಥ್ಯದ ಸೂಚಿ ಶೈಕ್ಷಣಿಕ ಯಶಸ್ಸು (ಪರೀಕ್ಷೆಗಳಲ್ಲಿ ಸದಾ ಹೆಚ್ಚು ಅಂಕಗಳನ್ನು ಗಳಿಸುವುದು), ಸಾಮಾಜಿಕ ಮತ್ತು ಆರ್ಥಿಕ ಉನ್ನತಿಯೆನ್ನುವ ಸ್ಥಿತಿಗಳ ಪ್ರಭಾವಗಳನ್ನು (ಖಚಿತವಾಗಿ) ಮಾಪಿಸುವುದು ಸುಲಭವಲ್ಲ. ಜೊತೆಗೆ ವ್ಯಕ್ತಿಯ ಮಾನಸಿಕ ಲಕ್ಷಣಗಳು ಅಂದಾಜಿಗೆ ಮಾತ್ರ ಸಿಗುವಂತಹದ್ದು ಎನ್ನುವದನ್ನೂ ಮರೆಯುವಂತಿಲ್ಲ. ದಕ್ಷಿಣ ಆಫ್ರಿಕದಲ್ಲಿ ಪ್ರಾಂತೀಯ ಭಾಷೆ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಒದಗಿಸಿದ ಪ್ರಾಥಮಿಕ ಶಿಕ್ಷಣದ ಪರಿಣಾಮದ ಬಗ್ಗೆ ೨೦೦೭ ರಿಂದ ೨೦೧೧ ರವರೆಗೆ ನಡೆಸಿದ ಸಂಶೋಧನೆಯ ಫಲಿತಾಂಶಗಳು ಅಚ್ಚರಿ ತರುವಂತಹದ್ದು.  ದಕ್ಷಿಣ ಆಫ್ರಿಕದ ಕೆಲ ಪ್ರಾಂತ್ಯಗಳ ೯೦೦೦  ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ  ಕಪ್ಪು ಜನಾಂಗದ ಬಡ ಕುಟುಂಬದ ಮಕ್ಕಳ ಇಂಗ್ಲಿಷ್ ಕಲಿಕೆಯ ರೀತಿಯನ್ನು ಈ ಅಧ್ಯಯನ ವಿಶ್ಲೇಷಿಸಿತ್ತು.   ಅಧ್ಯಯನಕ್ಕೆ  ಒಳಪಡಿಸಲಾಗಿದ್ದ ಮಕ್ಕಳೆಲ್ಲರೂ ಈ ಶಾಲೆಗಳಲ್ಲಿ ಓದುತ್ತಿದ್ದವರು.  ಅಧ್ಯಯನದ ಒಂದು ಗುಂಪಿನ ಮಕ್ಕಳು ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಕಲಿತವರು (ಆರನೆಯ ತರಗತಿಯಲ್ಲಿರುವವರು) ಮತ್ತು ಇನ್ನೊಂದು ಗುಂಪಿನ ಮಕ್ಕಳು  ಮೊದಲ/ ಮನೆಯ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿರವವರು. ಆದರೆ ಈ ಮಕ್ಕಳಿಗೆ ನಾಲ್ಕನೆಯ ತರಗತಿಯಿಂದ ಇಂಗ್ಲಿಷ್ ಕಲಿಸಲಾಗಿತ್ತು. ಎರಡು ಗುಂಪಿನಲ್ಲಿದ್ದ ನಾಲ್ಕು, ಐದು ಮತ್ತು ಆರನೆಯ ತರಗತಿಗಳಿಗೆ ಅನ್ವಯಿಸುವಂತಹ ಇಂಗ್ಲಿಷ್ ಭಾಷಾ ಮಟ್ಟದ ಪರೀಕ್ಷೆಗಳಲ್ಲಿ  ಗಳಿಸಿದ್ದ ಅಂಕಗಳನ್ನು ಶಾಲಾ ದಾಖಲಾತಿಗಳಿಂದ ಸಂಗ್ರಹಸಿ ಸಂಖ್ಯಾ ತಂತ್ರಗಳ ಮೂಲಕ ವಿಶ್ಲೇಷಣೆ ಮಾಡಲಾಗಿತ್ತು.  ಈ ಎರಡು ಗುಂಪುಗಳ ಫಲಿತಾಂಶ ಉಂಟುಮಾಡಿದ ಅಚ್ಚರಿಯ ಸಂಗತಿಯೆಂದರೆ: ೧ನೆಯ ತರಗತಿಯಿಂದ (ಆರನೆಯ ತರಗತಿಯವರೆಗೆ) ಇಂಗ್ಲಿಷ್ ಭಾಷೆ ಕಲಿತ ಮಕ್ಕಳಿಗಿಂತ ಮೊದಲ ಭಾಷೆಯಲ್ಲಿ  ಶಿಕ್ಷಣ ನೀಡಲಾಗಿದ್ದ(ನಾಲ್ಕನೆಯ ತರಗತಿಯಲ್ಲಿ ಇಂಗ್ಲಿಷ್ ಕಲಿಯಲು ಆರಂಭಿಸಿದ)ಮಕ್ಕಳ ಇಂಗ್ಲಿಷ್ ಭಾಷಾ ಜ್ಞಾನ ಮೂರು (೪,೫,೬) ತರಗತಿಗಳಲ್ಲೂ ಉತ್ತಮವಾಗಿದ್ದದ್ದು. ಪ್ರಾಥಮಿಕ ಶಾಲೆಯ ಮಟ್ಟದಲ್ಲಿ ಮೊದಲ ಭಾಷೆಯಲ್ಲಿ  ಶಿಕ್ಷಣ ಒದಗಿಸುವುದರಿಂದ ಲಾಭವೇ ಹೆಚ್ಚು ಎನ್ನುವುದನ್ನಿದು ಖಚಿತಪಡಿಸಿತ್ತು . ಹಾಗೆಯೇ ಹೊಸ ಭಾಷೆ/ವಿಷಯಗಳನ್ನು ಕಲಿಯುವುದಕ್ಕೂ ತಾಯ್ನುಡಿಯಲ್ಲಿ ಗಳಿಸಿರುವ ಪಕ್ವತೆ ಪೂರಕವಾಗಿರಬಲ್ಲದು  ಎನ್ನುವುದರ ಸೂಚನೆಯನ್ನೂ ಈ ಫಲಿತಾಂಶ ಎತ್ತಿ ಹಿಡಿದಿತ್ತು. ಕ್ಯಾನಡದ ಭಾಷಾ ಶಿಕ್ಷಣ ತಜ್ಞ ಜಿಂ ಕುಮಿನ್ಸ್ ಪ್ರಕಾರ ಎರಡನೆಯ ಭಾಷೆಯು ಪ್ರಾರಂಭಿಕ ಶಿಕ್ಷಣದ ಮಾಧ್ಯಮವಾಗಿದ್ದಂತಹ ಸಂದರ್ಭಗಳಲ್ಲಿ  ಮೊದಲ ಭಾಷೆಯ  ಪ್ರಭಾವ ಅಧಿಕವಾಗಿಯೇ ಇರುತ್ತದೆ. ಅಂದರೆ, ಮಗುವಿಗೆ ಪರಿಚಯವಿರುವ ವಿಷಯಗಳು ಶಿಕ್ಷಣದ ಮಾಧ್ಯಮದ ಭಾಷೆಯಲ್ಲಿ ಇದ್ದಾಗ್ಯೂ ಕಲಿಕೆ/ಜ್ಞಾನಾರ್ಜನೆ  ಸರಾಗ. ಆದರೆ ಮೊದಲ ಭಾಷೆಯ ಪದಪರಿಚಯ, ಬಳಕೆ ಮತ್ತು ಅನ್ವಯಿಕೆಯ ಶಕ್ತಿಯೂ ಉತ್ತಮವಾಗಿದ್ದಲ್ಲಿ ಮಾತ್ರ ಹೀಗೆ ಸಾಧ್ಯವೆನ್ನುವ ಅಭಿಪ್ರಾಯ. ಹೀಗಾಗಿ ಕೆಲ ಮಕ್ಕಳಿಗೆ ಎರಡನೆಯ ಭಾಷೆಯ ಮೂಲಕದ ಕಲಿಕೆ ಕಷ್ಟವಲ್ಲವೆನ್ನುವಂತಹ ಭಾವನೆ ಬರುತ್ತದೆ. ಇದು ಕೇವಲ ಮಗುವಿಗಷ್ಟೇ ಅಲ್ಲದೆಯೆ ಪೋಷಕರು, ಶಿಕ್ಷಕರಿಗೂ  ಭರವಸೆಯನ್ನು ಹೆಚ್ಚಿಸುವಂತಹದ್ದು. ಕೆಲ ಮಕ್ಕಳ ಕಲಿಕೆಯ  ಸೌಲಭ್ಯತೆಗಳನ್ನು ಆಧಾರವಾಗಿರಿಸಿಕೊಂಡು ಶಿಕ್ಷಣದ ಮೊಟ್ಟಮೊದಲ ಹಂತದಲ್ಲಿ ಎರಡನೆಯ ಭಾಷೆಯನ್ನು ಮಾಧ್ಯಮನ್ನಾಗಿಸಿದಾಗ ಹುಟ್ಟಿಕೊಳ್ಳುವ ಮಾನಸಿಕ ಸಮಸ್ಯೆಗಳನ್ನು ವೈಜ್ಞಾನಿಕ ಅಧ್ಯಯನಗಳು ಸೂಚಿಸಿದರೂ ಒಪ್ಪದಿರುವಂತಹ ಸನ್ನಿವೇಶ ನಮ್ಮ ನಾಡಿನಲ್ಲಿದೆ. ಮಕ್ಕಳ ಸಹಜ ಕಲಿಕೆಯ ರೀತಿಗೂ ಬೋಧನಾ ಕ್ರಮದಲ್ಲಿ ಜರುಗುವ ಕ್ರಮಕ್ಕೂ ಇರುವ ಅಂತರವನ್ನು ಪೋಷಕರು/ರಾಜಕಾರಣಿಗಳು ಕಡೆಗಾಣಿಸಿದಾಗ  ಏನು ತಾನೆ ಮಾಡಲು ಸಾಧ್ಯ?

ನವಜಾತ ಶಿಶುವಿನ ಭಾಷಾ ಯಾನ

ನವಜಾತು ಶಿಶುವೆಂದಾಗ ಅಸಹಾಯಕತೆ, ಪರಾಧೀನತೆಯೇ ಪ್ರಧಾನವಾಗಿರುವ ಮನುಷ್ಯಕೂಸು ಎನ್ನುವ ಭಾವನೆ ಬಹು ಪುರಾತನವಾದದ್ದು. ಇಂದಿಗೂ ಈ ನಂಬಿಕೆಯ ಪ್ರಭಾವ ಕೆಲ ಸಂಪ್ರದಾಯ, ಆಚರಣೆಗಳಲ್ಲಿಂದ ಮರೆಯಾಗಿಲ್ಲ. ಇವೆಲ್ಲದರ ನಡುವೆಯೇ ನಾಗರೀಕತೆ ಮತ್ತು ವಿಜ್ಞಾನದ ಪ್ರಗತಿಗಳು ನಿರಂತರವಾಗಿ ಮುಂದುವರೆಯುತ್ತಿವೆ ಎನ್ನುವುದಂತೂ ಸಂತಸದ ಸಂಗತಿ. ನವಜಾತ ಶಿಶುವಿನ ಸಮಗ್ರ ಮನೋವಿಕಾಸದ ಬಗ್ಗೆ ಅಧ್ಯಯನ, ಸಂಶೋಧನೆಗಳನ್ನು ನಡೆಸುತ್ತಿರುವ ವಿಜ್ಞಾನದ ಹಲವಾರು ಕ್ಷೇತ್ರಗಳು ನಿತ್ಯವೂ ಹೊಸ ಹೊಸ ವಿಷಯಗಳನ್ನು ಬೆಳಕಿಗೆ ತರುತ್ತಿವೆ. ಇದರ ಲಾಭ ಪಡೆಯುತ್ತಿರುವವರ ಸಂಖ್ಯೆಗೆ ಮಿತಿಯೇ ಇಲ್ಲವೆನ್ನಬಹುದು. ಈಗಂತೂ ಕಂದಮ್ಮಗಳ ಸಮಗ್ರ ವಿಕಾಸದ ಬಗ್ಗೆಯೂ ಖಂಡಿತವೆನ್ನುವಂತಹ ಮಾಹಿತಿಗಳು ಬಹಳ ಸುಲಭವಾಗಿ ಸಾಮಾನ್ಯರಿಗೂ ಸಿಗುತ್ತದೆ. ಅಂತರ್ಜಾಲ ತಾಣಗಳಲ್ಲಿ ಕಾಣಿಸಿಕೊಳ್ಳುವ ಮಾಹಿತಿಗಳ ಮೂಲಕವೂ ಮಕ್ಕಳ ಬೆಳವಣಿಗೆಯನ್ನು ಕುಳಿತಲ್ಲಿಂದಲೇ ನೋಡಬಹುದು, ತಿಳಿಯಬಹುದು. ಹಾಗೆಯೇ ಮಕ್ಕಳ ಮನೋವಿಕಾಸದ  ವಿವಿಧ ಸ್ಥಿತಿಗಳ ಬಗ್ಗೆಯೂ ನಾನಾ ವಿಧದ ಉಪಯುಕ್ತ ವಿಷಯಗಳು ಆಸಕ್ತರಿಗೆ ಲಭ್ಯ . ಭ್ರೂಣಾವಸ್ಥೆ ಮತ್ತು ನವಜಾತ ಶಿಶುವಿನ ಎಲ್ಲ ರೀತಿಯ ವಿಕಾಸದ ಪರಿಯನ್ನು ಅಂದಾಜಿಸಲು ಸಾಧ್ಯವೆನ್ನುವಂತಹ ವಿವರಣೆಗಳು ಸಾಮಾನ್ಯವಾದ ತಿಳಿವಳಿಕೆ ಎನ್ನುವಷ್ಟು ಸರಳವಾಗಿಸಿವೆ, ವೈಜ್ಞಾನಿಕ ಅಧ್ಯಯನಗಳು. ಮಗುವಿನ ಮನಸು ಚಲಿಸುವಷ್ಟು ವೇಗವಾಗಿ ಶರೀರದ ಚಲನವಲನಗಳು ಇರಲಾರದು. ಹಸುಳೆಯ ಜ್ಞಾನೇಂದ್ರಿಯಗಳಲ್ಲಿ ಸಾಕಷ್ಟು ಚುರುಕತನಗಳಿರುತ್ತವೆ. ಅವುಗಳು ಪಕ್ವಗೊಳ್ಳುವುದಕ್ಕೆ ಬೇಕಾಗುವ ಸಮಯ/ಅವಧಿ ಮಿದುಳಿನಿಂದ ಮೂಡುವ ಕೆಲ ಮಾನಸಿಕ ಕ್ರಿಯೆಗಳಿಗೆ ಬೇಕಾಗಿರುವುದಿಲ್ಲ. ಇವೆಲ್ಲವು ತಕ್ಷಣದ ಮತ್ತು ನಂತರದ ಹೊಂದಾಣಿಕೆಗೆ ನೆರವಾಗುವಂತಹವುಗಳು. ಭಾಷೆ ಮತ್ತು ಆಲೋಚನೆಯ ಬೆಳವಣಿಗೆಯೂ ಇಂತಹ ನೆರವಿನ ಪ್ರಕ್ರಿಯೆಗಳಲ್ಲಿ ಸೇರಿರುತ್ತವೆ.

ಎಳೆಯ ಮಗುವಿನ ಭಾಷಾ ಸಾಮರ್ಥ್ಯವು ಸಹಜವಾಗಿ ಮೂಡಿಬರುವ ಒಂದು ನರಮಾನಸಿಕ(ಮಿದುಳಿನ) ಕ್ರಿಯೆ. ಮಗು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಇಂತಹದೊಂದು ಶಕ್ತಿ ಇರುವುದು ಗೊತ್ತಾಗುತ್ತದೆ. ಮಿದುಳಿನಲ್ಲಿರುವ ಕಲಿಕೆಯ  ಸಾಮರ್ಥ್ಯ ಮತ್ತು ಪರಿಸರದ ಒಡಂಬಡಿಕೆಯಿಂದ ಇದು ಪಕ್ವಗೊಳ್ಳುತ್ತದೆ. ಆರೋಗ್ಯವಂತ ಮಗುವೊಂದು, ಸುಮಾರು ಮೂರು ವರ್ಷ ಮುಟ್ಟುವುದರಲ್ಲಿ, ತನ್ನ ಆವರಣದಲ್ಲಿನ ಭಾಷೆಯನ್ನು ತನ್ನಷ್ಟಕ್ಕೆ ತಾನೇ, ಅಂದರೆ, ಯಾರೂ ಕಲಿಸಿಕೊಟ್ಟಿರದ ರೀತಿಯಲ್ಲಿ, ಬಳಸುತ್ತದೆ. ಇದನ್ನು ಮೊದಲ ಭಾಷೆ, ಅಥವಾ ಮಾತೃಭಾಷೆ ಎಂದು ಕರೆಯುವುದು ವಾಡಿಕೆ. ಎಳೆಯ ಮಗುವು ತನ್ನಷ್ಟಕ್ಕೆ ಕಲಿತ ಭಾಷೆಯಲ್ಲಿ ಪರಿಸರದ ಅನೇಕ ವಿದ್ಯಮಾನಗಳ ಬಗ್ಗೆ ತಿಳಿವಳಿಕೆ ಮೂಡಿಸಿಕೊಂಡಿರುತ್ತದೆ ಎನ್ನುವುದು ಗೊತ್ತಾಗುವುದಕ್ಕೆ ಯಾವ ವಿಶೇಷ ಜ್ಞಾನದ ಅಗತ್ಯವೂ ಇಲ್ಲ. ಎಳೆಯ ಮಗುವಿನ ಈ ತಿಳಿವಳಿಕೆಯೂ ಹೊರಗಿನವರ ನೆರವು ಇರದೆಯೇ ಮೂಡಿಬಂದಿರುವಂತಹದ್ದು. ವಿದ್ಯಾಭ್ಯಾಸ, ಶಾಲೆಯ ಶಿಕ್ಷಣವಿಲ್ಲದ ವ್ಯಕ್ತಿಗಳೂ ಸಹ ಬದುಕಿನ ಕ್ರಮಗಳಿಗೆ ಯಶಸ್ವಿಯಾಗಿ ಹೊಂದಿಕೊಳ್ಳಲು ಸಾಧ್ಯವಾಗಿರುವುದು  ಈ ಸಾಮರ್ಥ್ಯವಿರುವುದರಿಂದಲೇ, ಅಲ್ಲವೆ? ಇಂತಹ ಸಹಜ ಸಾಮರ್ಥ್ಯದ ಮೂಲಕವೇ ಪ್ರತಿಯೊಂದು ಆರೋಗ್ಯವಂತಹ ಕೂಸಿನ ಮಾನಸಿಕ-ಸಾಮಾಜಿಕ ವಿಕಾಸವೂ ಸಾಧ್ಯವಾಗಿರುವುದು.

ಮಕ್ಕಳು ಭಾಷಾ ‘ಆರ್ಕಿಟೆಕ್ಟ್’  ಗಳು 

ಇಂಗ್ಲೆಂಡಿನ ಭಾಷಾ ವಿಜ್ಞಾನಿ ಮೈಕಲ್ ಎ ಹಾಲಿಡೆ(೧೯೨೫-)ಯ ಪ್ರಕಾರ ಮಕ್ಕಳು ಮೊದಲ ಭಾಷೆಯನ್ನು ಕಲಿಯುವಾಗ ಭಾಷಾ ತಜ್ಞರು ವಿವರಿಸುವ ಭಾಷಾ ಕಲಿಕೆಯ ಕ್ರಮವನ್ನು ಅನುಸರಿಸುವುದಿಲ್ಲ. ಭಾಷೆಯ ಕಲಿಕೆಯೂ ತಕ್ಷಣದಲ್ಲಿ ನೆರವೇರುವಂತಹ ಕ್ರಿಯೆ. ಉದಾಹರಣೆಗೆ ಹೇಳುವುದಾದರೆ, ಕಾಗೆಯನ್ನು ಗುರುತಿಸಿದ ತಕ್ಷಣ ಅದಕ್ಕೊಂದು ಹೆಸರಿದ ಎನ್ನುವಷ್ಟು ಮನೋಸಾಮರ್ಥ್ಯ ಕಂದನಲ್ಲಿರುತ್ತದೆ. ಅದು ‘ಕಾ’ ‘ಕ’ ಅಥವಾ ಮತ್ಯಾವುದೋ  ಧ್ವನಿಯೂ ಕಾಗೆಯೊಂದರ ಇರುವಿಕೆಯನ್ನು ಗುರುತಿಸಿ ಸ್ವೀಕರಿಸುತ್ತದೆ.  ಕಾಗೆಯನ್ನು ನೋಡಿದ ಅನುಭವದೊಂದಿಗೆ ಹೊಸದೊಂದು ಪದದ ಬಳಕೆಯೂ ಕಾಣಿಸಿಕೊಳ್ಳುತ್ತದೆ. ಇಂತಹ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಮೂರ್ತ ಅಥವಾ ಕಲ್ಪನೆಯ ಪಾತ್ರವಿರುವುದು ಅಪರೂಪ. ಅಂದರೆ ಆಗ ನೋಡಿದ್ದನ್ನು ಆಗಲೇ ಗುರುತಿಸಿ ಹೊಸದಾಗಿ ಹೆಸರೊಂದನ್ನೋ, ಭಾವವೊಂದನ್ನೋ ವ್ಯಕ್ತಪಡಿಸುವಂತಹ ವರ್ತನಾ ಕ್ರಿಯೆ ಇದಾಗಿರುತ್ತದೆ. ಈ ಕ್ರಿಯೆಯಲ್ಲಿ ಗೋಚರಾನುಭವದ ಪಾತ್ರವಿರುವುದು ಸ್ಪಷ್ಟ.  ನನಗೆ ಪರಿಚಯವಿರುವವರ ಮಗುವಿಗೆ ಎರಡು ವರ್ಷ ತುಂಬುತ್ತಿದ್ದಂತೆಯೇ ಇಂಗ್ಲಿಷ್ ಮಾಧ್ಯಮದ ಶಿಶುವಿಹಾರಕ್ಕೆ ಸೇರಿಸಿದರು. ಶಾಲೆಗೆ ಸೇರಿದ ಎರಡು ಮೂರು ದಿನಗಳಲ್ಲಿಯೇ ಮಗುವು ಅವರಮ್ಮನನ್ನು ಕೇಳಿತು ‘ಸಿಡೌನ್’ ಅಂತಾ ‘ಮಿಸ್’ ಹೇಳಿದ ತಕ್ಷಣ ಏಕೆ ಕುಳಿತುಕೊಳ್ಳಬೇಕು? ನೀನು ಕುಳಿತುಕೊಳ್ಳುವುದಿಲ್ಲವೆ? ಅಮ್ಮ ಕೇಳಿದಳು… ‘ಹೌದು! ಕುಳಿತುಕೊಳ್ಳುತ್ತೀನಿ ಆದರೆ ಎಲ್ಲರೂ ಕುಳಿತುಕೊಳ್ಳುತ್ತಾರೆ, ನಾನೂ ಕುಳಿತುಕೊಳ್ಳುತ್ತೀನಿ’ ಎಂದಿತು. ಅಂದರೆ ಮಗುವಿಗೆ ಈ ಪದದ ಅರ್ಥ ಗೊತ್ತಿಲ್ಲದಿದ್ದರೂ ಇತರರು ಮಾಡುವುದರಿಂದ ತಾನು ಮಾಡಬೇಕೆಂಬ ಅನಿಸಿಕೆ ಮೂಡುತ್ತದೆ.  ಬಹಳಷ್ಚು ಮಕ್ಕಳ ಕಲಿಕೆಯಲ್ಲಿ ಪರಿಸರವೇ ಪ್ರೇರಣೆ. ಒಳಮನಸ್ಸಿನಲ್ಲಿ ಹೊಕ್ಕಿಕೊಳ್ಳುವಂತಹ ವಿಷಯಗಳು ಪರಿಚಯವಿರದ ಭಾಷೆಯೊಂದರ ಮೂಲಕ ತಿಳಿಸಿಕೊಡುವಾಗ “ಕಲಿಕೆ”ಯ ತಂತ್ರಗಳು ಬೇಕಾಗುತ್ತದೆ. ಮಗುವು ಅಷ್ಟೊಂದು ಸುಲಭವಾಗಿ ತನ್ನಷ್ಟಕ್ಕೆ ತಾನೇ ಎರಡನೆಯ ಭಾಷೆಯಲ್ಲಿ ಗ್ರಹಿಸುತ್ತದೆ ಎಂದು ಹೇಳುವುದು ಕಷ್ಟ.

ಕಂದಮ್ಮಗಳು ಹುಟ್ಟಿನೊಂದಿಗೆ ಭಾಷೆಯನ್ನು ಕಲಿಯುವ ಶಕ್ತಿಯನ್ನು ಪಡೆದಿರುತ್ತವೆ.  ಈ ಮನೋಶಕ್ತಿಗೆ ಆ ನುಡಿ, ಈ ಭಾಷೆ ಎನ್ನುವ ವ್ಯಾತ್ಯಾಸವಂತೂ ಗೊತ್ತೇ ಆಗದು. ಮಕ್ಕಳಲ್ಲಿರುವ ಈ ಭಾಷಾ ಕಲಿಕೆಯ ಸಹಜ ಸಾಮರ್ಥ್ಯವೇ ವಿಶ್ವದ ಅನೇಕಾನೇಕ ಸಣ್ಣಪುಟ್ಟ ಭಾಷೆಗಳು ಉಳಿಯುವಿಕೆಗೆ ಮುಖ್ಯ ಕಾರಣ. ಮಕ್ಕಳ ನರಮಂಡಲದ ಚಟುವಟಿಕೆಗಳ ಮೂಲಕವೇ ಭಾಷೆಯೊಂದರ ಬೇರುಗಳು ಅಭಿವೃದ್ಧಿ ಹೊಂದುವುದು. ಹಾಗೆಂದ ಮಾತ್ರಕ್ಕೆ ಕೆಲ ಪ್ರಾಣಿಗಳಲ್ಲಿ ಕಂಂಡುಬರುವ ಅನುಕರಣೆಯ ಗುಣದ ರೀತಿಯಲ್ಲಿ ಭಾಷೆಯ ಕಲಿಕೆಯನ್ನು ಮಗುವಿನ ಮಿದುಳು ಉತ್ತೇಜಿಸುತ್ತದೆ ಎನ್ನಲಾಗದು. ಭಾಷೆಯಲ್ಲಿರುವ ಪದ, ಭಾವಗಳನ್ನು ಅನುಕರಣೆಯ ಕ್ರಮದಲ್ಲಿ ಗ್ರಹಿಸಿಕೊಂಡರೂ ಬಳಕೆಗೆ ಬಂದಾಗ ತನ್ನ ಅಗತ್ಯ-ಅನಗತ್ಯಗಳನ್ನು ಕಡೆಗಾಣಿಸುವುದಿಲ್ಲ. ಮಕ್ಕಳ ವರ್ತನೆಗಳು ಯಶಸ್ವಿಯಾಗಿ ನೆರವೇರುವಂತೆ ಮಾಡಲು ಹಿರಿಯರ ಆಜ್ಞೆ, ಆದೇಶ, ಸಲಹೆಗಳಲ್ಲಿರುವ ಬಲವಂತದ ಪ್ರಭಾವವೂ ಇರುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು. ಆದರೂ ಸರಿಯಾದ ರೀತಿಯಲ್ಲಿ ಭಾಷೆಯನ್ನು ಬಳಸುವ ಗುರಿ ಮಗುವಿನಲ್ಲಿ ಇರುತ್ತದೆ. ಹಾಗಿದ್ದ ಮಾತ್ರಕ್ಕೆ ಮಕ್ಕಳಾಡುವ ಮಾತುಗಳು ಸಂತತಿಯಿಂದ ಸಂತತಿಗೆ ಯಥಾವತ್ತಾಗಿ (ಅನುವಂಶಿಕವೆನ್ನುವ ರೀತಿಯಲ್ಲಿ) ವರ್ಗಾವಾಗುವಂತಹ ಕ್ರಿಯೆ ಎನ್ನಲಾಗದು. ಪೋಷಕರಿಗೆ ಪರಿಚಯವಿರುವ ಭಾಷೆಗಳು ಮಕ್ಕಳಿಗೂ ಹರಿದು ಬರುವುದಿಲ್ಲವೆನ್ನುವುದು ಇದಕ್ಕೆ ಉತ್ತಮ ಉದಾಹರಣೆ. ಭಾಷಾ ಪರಿಸರವಿಲ್ಲದಿದ್ದಾಗ, ಭಾಷಾ ಸಾಮರ್ಥ್ಯಕ್ಕೆ ಬೆಲೆ ಇರುವುದಿಲ್ಲ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ತೋಳಗಳ ಹಿಂಡಿನಲ್ಲಿ ಬೆಳೆದುಳಿದ ಮನುಷ್ಯ ಮಗು(ಕಲ್ಪನೆಗೆ ಹತ್ತಿರುವೆನ್ನುವಂತಹ  ತೋಳ ಬಾಲಕ ರಾಮು!)ವಿಗೆ ಮನುಷ್ಯರಾಡುವ ಮಾತುಗಳ ಬರಲಾರದಷ್ಟೇ ಅಲ್ಲ, ಅರ್ಥವೂ ಆಗುವುದಿಲ್ಲ. ನವಜಾತ ಶಿಶುವಿನ ಮಿದುಳಿನಲ್ಲಿರುವ ಭಾಷಾ ವಲಯ ಸದಾ ಕಾರ್ಯಪ್ರವೃತ್ತವಾಗಿರುತ್ತದೆ. ಇದು ಪ್ರಕೃತಿ ದತ್ತವಾದ, ಜೀವಿ ವಿಶಿಷ್ಟ ಲಕ್ಷಣ. ನವಜಾತ ಶಿಶುವು ತಕ್ಷಣದಲ್ಲಿ ಮಾತನ್ನು ಆಡದಿರಬಹುದು, ಅಥವಾ ಕೇಳಿಸಿಕೊಂಡ ಮಾತಿಗೆ ಪ್ರತಿಕ್ರಿಯಿಸದಿರಲೂಬಹುದು. ಹಾಗೆಂದ ಮಾತ್ರಕ್ಕೆ ಹಸುಳೆಯ ಮಿದುಳಿನಲ್ಲಿ ಭಾಷಾ ಸಂಕೇತ/ಸೂಚಿಗಳು ಹೊಕ್ಕುತ್ತಿಲ್ಲವೆನ್ನಲಾಗದು. ಅಂದ ಮೇಲೆ ಮಗುವಿನ ಮನಸ್ಸಿಗೆ ಪೋಷಕರ/ಪರಿಸರದ ನುಡಿಗಳು ಬಹಳ ಶೀಘ್ರದಲ್ಲಿ ಗ್ರಹಿಕೆಗೆ ಬಂದಿರುವುದನ್ನು ಕಣ್ಣು, ಮುಖ, ಕತ್ತು, ತುಟಿ, ಬಾಯಿ ಆಡಿಸುವುದರ ಮೂಲಕ ವ್ಯಕ್ತಪಡಿಸುವುದು. ಹೀಗೆ ಪ್ರತಿಕ್ರಿಯಿಸುವುದರಿಂದಲೇ ಪರಿಸರದಲ್ಲಿರುವ ವ್ಯಕ್ತಿಗಳು ಮಗುವಿಗೆ  ಅರ್ಥವಾಗುತ್ತಿದೆ ಎನ್ನುವ ನಂಬಿಕೆಯಿಂದ ಮಾತುಗಳನ್ನು ಆಡುವುದು.  ಅದೇ ರೀತಿಯಲ್ಲಿ ಮಗು ಮತ್ತು ಪರಿಸರದ ನಡುವೆ ನಿಕಟ ಸಂಪರ್ಕ ಮೂಡಿಬರುವುದು. ಆದುದರಿಂದಲೇ ಪ್ರತಿಯೊಂದು (ಆರೋಗ್ಯವಂತ)ಮಗುವು  (ನುಡಿ)ರಚಿಸುವ ಬಲವಾದ ಲಕ್ಷಣ ಹೊಂದಿರುತ್ತದೆ. ಒಂದು ರೀತಿಯ ಹೋಲಿಕೆಯ ಪ್ರಕಾರ  ಕೂಸೊಂದು ಭಾಷೆಯ ‘ಆರಿ್ಕಟೆಕ್ಟ್’ ಆಗಿರುತ್ತದೆ.

ಮಕ್ಕಳ ನುಡಿ ಭಂಡಾರ ಸಣ್ಣದೇನಲ್ಲಾ…

ಮಕ್ಕಳು ಭಾಷೆಯೊಂದನ್ನು ಬಳಸುವ ರೀತಿ ಅಚ್ಚರಿ ಮೂಡಿಸುವುಂತಹದ್ದು. ಕೇವಲ ಹಲವಾರು ಶಬ್ದಗಳ ಏರಿಳಿತ, ಬದಲಾವಣೆಗಳ ಮೂಲಕ ಒಳಮಾನಸಿಕತೆಯನ್ನು ಬಿಂಬಿಸುವ ಉದ್ದೇಶ ಅದರಲ್ಲಡಗಿರುತ್ತದೆ. ಇದನ್ನು  ಅರ್ಥಮಾಡಿಕೊಳ್ಳುವ ಶಕ್ತಿ ಭಾಷೆಯ ಬಳಕೆದಾರರಲ್ಲಿರದಿರುವುದು ಅಪರೂಪ. ಹೀಗಾಗಿ ಮಗುವಿನ ಸಂದೇಶಗಳು ಅರ್ಥವಾಗುತ್ತಿವೆ ಎನ್ನುವಂತಹ ಸೂಚನೆಗಳು ಹಿರಿಯರ ವರ್ತನೆಗಳ ಮೂಲಕ ಗೋಚರಿಸುತ್ತವೆ. ಆದರೂ  ಕಂದಮ್ಮನ ಮಾತದು, ಅದರಲ್ಲೇನೂ ವಿಶೇಷವೆಂದುಕೊಳ್ಳುವವರ ಸಂಖ್ಯೆ ದೊಡ್ಡದೇ ಇದೆ.  ಅದೇ ರೀತಿಯಲ್ಲಿ ಮನೆಯ ಅಥವಾ  ಪರಿಸರದ ನುಡಿಗಳು ಕೇವಲ ಸಂಪರ್ಕಕ್ಕೆ ಮಾತ್ರವೆನ್ನುವ ತಾತ್ಸಾರ ಸಾಮಾನ್ಯ. ಆದರೆ ಕಂದಮ್ಮಗಳ ಭಾಷೆ ಭವಿಷ್ಯದ ಸಾಮಾಜಿಕ-ವೈಯಕ್ತಿಕ ವರ್ತನೆಗಳ ಪರಿಪಕ್ವ ನಿರ್ವಹಣೆಯ ತಯಾರಿಯೂ ಆಗಿರಬಲ್ಲದು. ಮಗುವು ಹುಟ್ಟಿದ ಸುಮಾರು ನಾಲ್ಕೈದು ವರ್ಷಗಳ ಅವಧಿಯಲ್ಲಿ, ಮಿದುಳಿನ ತೊಂದರೆಗಳು ಮತ್ತು ಇತರೆ ಮಾನಸಿಕ ಸಮಸ್ಯೆಗಳು ಇರದಿರುವಲ್ಲಿ, ಸಾವಿರಾರು ಪದಗಳ ಪರಿಚಯ ಮತ್ತು ಗ್ರಹಿಸುವಿಕೆಯಾಗಿರುತ್ತದೆ. ಕೆಲವೇ ಕೆಲವು ಪದಗಳನ್ನು ಆಯ್ದು, ಜೋಡಿಸಿಕೊಂಡು ಹೊಚ್ಚಹೊಸ ವರ್ತನೆಗಳನ್ನು ಪ್ರದರ್ಶಿಸುವ ಲಕ್ಷಣ ಮಕ್ಕಳಲ್ಲಿರುತ್ತದೆ ಎನ್ನುತ್ತಾರೆ ಅಮೆರಿಕದ ಭಾಷಾ ತಜ್ಞ ನೊವಾಂ ಚಾಮಸ್ಕಿ. ವಿವಿಧ ಭಾಷೆಗಳಲ್ಲಿ ನಡೆಸಿರುವ ಅಧ್ಯಯನಗಳನೇಕವು ನಾಲ್ಕೈದು ವರ್ಷದ ಮಕ್ಕಳ ನುಡಿ ಗುಡಾಣವು ಬಹು ದೊಡ್ಡದು ಎನ್ನುವುದನ್ನು ಅಂಕಿಅಂಶಗಳ ಮೂಲಕ ವ್ಯಕ್ತಪಡಿಸಿವೆ. ಮೊದಲ ಭಾಷೆ ಬಳಸುವ ಮಕ್ಕಳಲ್ಲಿ ಅರ್ಥವಿರದ ಪದಗಳನ್ನು  ಉಪಯೋಗಿಸುವುದು ಅಪರೂಪ. ಅಂದರೆ ಉಚ್ಚಾರಣೆಯನ್ನು ಹೊರತುಪಡಿಸಿ, ಮಕ್ಕಳಾಡುವ ತೊದಲು ಭಾಷೆಯಲ್ಲಿಯೂ ಸಹ ವ್ಯಾಕರಣದ ನಿಯಮಗಳ ಉಲ್ಲಂಘನೆ ಅಪರೂಪ. ನೂರಾರು ಪದಗಳು ಮಗುವಿನ ಸ್ಮೃತಿ ಸಂಪುಟದಲ್ಲಿದ್ದರೂ ಸಹ ಅವುಗಳೆಲ್ಲವು ಔಚಿತ್ಯಪೂರ್ಣವಾಗಿ(ಗೊಂದಲಗಳಿಲ್ಲದೆ)ಯೇ ಬಳಸಲಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ಹೊಸದಾಗಿ ಭಾಷೆಯನ್ನು  ಬಳಸುವ  ಮಗುವಿನಲ್ಲಿಯೂ ಗಂಡು-ಹೆಣ್ಣು ಪದಗಳನ್ನು ಲಿಂಗ ನಿಯಮದ ಪ್ರಕಾರ ಬಳಸುವುದನ್ನು ಗಮನಿಸದಿರುವವರು ಅಪರೂಪ. ಹೆಣ್ಣು ಮಗುವನ್ನು ಬಾರೋ ಅಂತ ಕರೆಯುವುದು  ತೀರಾ ಅಪರೂಪದ ಸಂಗತಿ. ನಗಿಸುವ ಸಲುವಾಗಿ ಇಂತಹದೊಂದು ಸನ್ನಿವೇಶ ಸಾಧ್ಯ! ಆದರೆ ಅದು ವ್ಯಾಕರಣದ ನಿಯಮ ಗೊತ್ತಿದ್ದು ನಡೆಯುವಂತಹ ಕ್ರಿಯೆ. ಅಂದಮೇಲೆ ಭಾಷೆಯ ಬಳಕೆದಾರನಾಗಿ ಮಗುವಿಗೆ ಪರಿಸರದ ಅನೇಕ ಸಂಗತಿಗಳು ಪರಿಚಯವಾಗಿರುತ್ತವೆ. ಇವುಗಳು ಮಗುವು ವಿಕಾಸಹೊಂದುತ್ತಿರುವ ಪರಿಸರದಿಂದ ಬಂದಿರುವಂತಹದ್ದು ಎನ್ನುವುದನ್ನು ನಿರಾಕರಿಸಲಾಗದು. ಪ್ರತಿಯೊಂದು ಮಗುವಿನ ಮಾತಿನಲ್ಲಿ ಇತರರಿಗೆ ತಿಳಿಯಲಿ ಎನ್ನುವ ಉದ್ದೇಶವಿರುತ್ತದೆ.  ಅದೇ, ಶಾಲೆಯಲ್ಲಿ ಕಲಿಸಿಕೊಡುವ ಇನ್ನೊಂದು ಭಾಷೆಯಲ್ಲಿ ಇಂತಹದೊಂದು ಸಹಜ ಸ್ಥಿತಿ ಇರದು. ಪ್ರತಿಯೊಂದು ಸಂಗತಿಯನ್ನು ಕಲಿಸಿಕೊಡುವ ಅಗತ್ಯವಿರುತ್ತದೆ. ಅದೂ ಕಲಿಸಿಕೊಡುವವರ ಕ್ರಮ ಮತ್ತು ಮಗುವಿನಲ್ಲಿರುವ ಕಲಿಯುವ ಸಾಮರ್ಥ್ಯವನ್ನು ಅವಲಂಬಿಸುತ್ತದೆ.  ಇಂತಹದೊಂದು ವಿಷಯ ಬಹಳಷ್ಟು ಪೋಷಕರಿಗೆ ತಿಳಿಯ(ಒಪ್ಪ)ದಿರುವುದು ದುರದೃಷ್ಟಕರ. ಮಕ್ಕಳಿಗೆ ಕಲಿಯುವ ಶಕ್ತಿ ಇದೆ, ಕಲಿಯುತ್ತಾರೆ ಅದರಲ್ಲೇನು ವಿಶೇಷ ಎನ್ನುವಂತಹ ಅಪಾಯಕಾರಿ ಹಮ್ಮು. ಈ ಧೋರಣೆಯನ್ನು ಹಕ್ಕು ಎಂದುಕೊಂಡಾಗ ಮಕ್ಕಳ ಸಹಜ ಕಲಿಯುವ ಕ್ರಮ ಮತ್ತು ಲಭ್ಯವಿರುವ ಮಾನಸಿಕ ಶಕ್ತಿಗಳೊಂದಿಗೆ ಸರಸವಾಡಿದಂತೆಯೆ ಸರಿ.  ಮಕ್ಕಳ ಕಲಿಕೆಯನ್ನು ಹೊಸದೊಂದು ಭಾಷಾ ಮಾಧ್ಯಮದ ಮೂಲಕ ಮಿದುಳಿಗೆ ತುರುಕುವುದಕ್ಕೂ ರಹದಾರಿ. ಇದೇ ಪೋಷಕರ ಮತ್ತು ಶಿಕ್ಷಣ ಸಂಸ್ಥೆಗಳ ಬಯಕೆಯಾಗಿಬಿಟ್ಟಾಗ ಪೀಡನೆ(ಸೇಡಿಸಂ) ಪ್ರವೃತ್ತಿ ಯಾಕಿರಬಾರದಿದು ಅನಿಸುತ್ತದೆ.

ಮಕ್ಕಳ ಕಲಿಕೆಯೊಂದಿಗೆ  ಚೆಲ್ಲಾ ಟ…

ಕಲಿಕೆ ಎಂದಾಗ, ಸಾಮಾನ್ಯವಾಗಿ, ಶಿಕ್ಷಣ/ಬೋಧನೆಗಳಿಂದ ನೆರವೇರುವಂತಹದ್ದು ಎಂದುಕೊಳ್ಳುವುದು ಸಹಜ. ಆದರೆ ಮೊದಲ ಭಾಷೆಯ ಗಳಿಕೆಯಲ್ಲಿ ಇದಿರುವುದಿಲ್ಲವೆನ್ನುವುದೇ ಅಚ್ಚರಿಯ ಸಂಗತಿ. ವಿಸ್ಮಯವೆನ್ನುವಂತಹ ಭಾಷಾ ಸಾಮರ್ಥ್ಯವನ್ನು ಪ್ರದರ್ಶಿಸುವ ಹಸುಳೆಯನ್ನು ಭಾಷಾವಿಜ್ಞಾನಿ, ಭಾಷಾ ವಿನ್ಯಾಸಕಾರ, ಮುಂತಾದ ಪದಗಳ ಮೂಲಕ ಮೆಚ್ಚಿಕೊಳ್ಳುವುದುಂಟು. ಭಾಷೆಯ ಕಲಿಕೆಯಲ್ಲಿ ಸನ್ನಿವೇಶ, ಸಂದರ್ಭ ಮತ್ತು ಅಗತ್ಯಗಳ ಪ್ರಭಾವ ದೊಡ್ಡದೇ ಇರುತ್ತದೆ. ಸಾಮಾಜಿಕ ವರ್ತನೆಯ ಗುರಿಯನ್ನು ಸೂಚಿಸುವ ಸಂಪರ್ಕದ ಕ್ರಮವಿದು ಎನ್ನಲೂ ಬಹುದು. ಮಗುವು ಹುಟ್ಟಿದ ಮೊದಲು ಮೂರು ವರ್ಷಗಳಲ್ಲಿಯೇ ಪರಿಪಕ್ವವಾಗುವ  ಆಡುವ ಮಾತು ಅಥವಾ ಮೊದಲ ಭಾಷೆ , ಶಿಕ್ಷಣ ಅಥವಾ ಬೋಧನೆಯ ಕ್ರಮಗಳ ನೆರವಿಲ್ಲದೆಯೇ ಮೂಡುವುದಕ್ಕೆ ನರಮಂಡಲ ಮತ್ತು ಜ್ಞಾನೇಂದ್ರಿಯಗಳು ಸಹಕಾರ ಬಹುಮುಖ್ಯ. ಬೋಧನೆಯ ಮೂಲಕ ನೆರವೇರುವ ಕಲಿಕೆಯಲ್ಲಿ ಹೊರಗಿನವರ ಪ್ರೇರಣೆ/ಕಲಿಸಿಕೊಡುವವರು ಇರಬೇಕಾಗುತ್ತದೆ. ತನಷ್ಟಕ್ಕೆ ತಾನೇ ಮೂಡಿಬರುವ ಮೊದಲ ಭಾಷೆಯನ್ನು ಯಾವ ವಿಧ ಕಲಿಕೆಯೆಂದು ಗುರುತಿಸಬೇಕೆಂಬುದರ ಬಗ್ಗೆ ಚರ್ಚೆ, ವಿವಾದಗಳು ಮುಂದುವರೆಯುತ್ತಲೇ ಇವೆ. ಹೀಗಿದ್ದರೂ ಮಕ್ಕಳ ಮನ್ಸಸು ಮತ್ತು ಭಾಷಾ ಸಾಮರ್ಥ್ಯವನ್ನು ರೂಪಕೋಕ್ತಿಗಳ ಮೂಲಕ ವಿವರಿಸುವುದಂತೂ ಸಾಮಾನ್ಯ.

ಹೀಗೆಲ್ಲಾ ಪರಿಸ್ಥಿತಿಗಳು ಇದ್ದಾಗ ಪ್ರಾಥಮಿಕ ಶಾಲೆಯನ್ನು ಪ್ರವೇಶಿಸುವ ಮಗುವೊಂದರ ಹಿತಕರ ಭವಿಷ್ಯವನ್ನು ಎರಡನೆಯ ಭಾಷೆಯ ಮೂಲಕ ಪಡೆಯುವ ಶಿಕ್ಷಣ ಒದಗಿಸುತ್ತದೆ ಎನ್ನುವುದೂ ಸಹ ಪೋಷಕ/ಪಾಲಕರ ಆಕಾಂಕ್ಷೆ, ಅಂದಾಜು ಮತ್ತು ಆತಂಕದ ಪ್ರಭಾವಗಳಿಂದಲೇ ಹುಟ್ಟಿರುವಂತಹದ್ದು ಎನ್ನುವುದು ಒಪ್ಪತಕ್ಕ ಮಾತು. ಇದಲ್ಲದೆ ಹೊಸ ಪೀಳಿಗೆಯ ಪೋಷಕರಿಗಂತೂ ಇಂತಹ ಪರಿಸ್ಥಿತಿಗಳ ಆತಂಕ ಹೆಚ್ಚಾಗಿಯೇ ಇರುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಆತಂಕದ ಮನೋಭಾವವಿರುವ ಪೋಷಕ/ಪಾಲಕರ/ಶಿಕ್ಷಕರು ಮಕ್ಕಳ ಶಿಕ್ಷಣದ ಬಗ್ಗೆ ಪಕ್ವವಾದ ನಿರ್ಧಾರ ತೆಗೆದುಕೊಳ್ಳಬಲ್ಲರೆ? ಬದುಕು ಸುಗಮವಾಗಿ ಸಾಗಲು ಶಿಕ್ಷಣ ಇರಬೇಕು, ಉತ್ತಮ ಶಿಕ್ಷಣವೆಂದರೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮತ್ತು ಇಂಗ್ಲಿಷ್ ಇದ್ದರೆ ಉದ್ಯೋಗ ಖಚಿತವೆನ್ನುವಂತಹ ಮಂತ್ರವು ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ವ್ಯಾಪಾರವನ್ನಾಗಿಸಿದೆ. ನನಗೆ ತಿಳಿದಂತೆ ಐದಾರು ದಶಕಗಳ ಹಿಂದೆ ಬೆಂಗಳೂರಿನ ಅತಿ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ ಶಿಕ್ಷಣ ಪಡೆದವರಲ್ಲಿ ಬಹುಪಾಲು ವಿಶ್ವವಿದ್ಯಾಲಯದ ಪದವಿಯನ್ನು ಗಳಿಸಲಿಲ್ಲ. ವೈದ್ಯ, ಇಂಜಿನಿಯರಿಂಗ್ ಮತ್ತು ‘ಸಿವಿಲ್ ಸರ್ವಿಸ್’ ಮತ್ತು ವಕೀಲ ವೃತ್ತಿ ಹೋದವರು ತೀರಾ ಕಡಿಮೆ. ಆದರೆ ಕುಟುಂಬದ ವ್ಯಾಪಾರ, ವಹಿವಾಟು ಮತ್ತು ಆಸ್ತಿಯ ಮೂಲಕವೇ  ಮುಂದುವರೆದಿರುವುದು ಸ್ಪಷ್ಟ.  ಅದೇ ರೀತಿಯಲ್ಲಿ ಇತ್ತೀಚಿನ  ಎರಡು ದಶಕಗಳಲ್ಲಿನ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ.  ಇಂಗ್ಲಿಷ್ ಶಾಲೆಗಳಲ್ಲಿ  ಓದಿ ಇಲ್ಲಿಯೇ ವೃತ್ತಿ ಹಿಡಿದಿರುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ, ಕನ್ನಡ ಶಿಕ್ಷಣದ ಬಗ್ಗೆ ಪ್ರೋತ್ಸಾಹ ಕೊಡುವುದನ್ನಂತೂ ಮರೆತಿರುವುದು ಖಂಡಿತ. ಈ ಕಾರಣದಿಂದಲೇ ಕನ್ನಡದ ಶಾಲೆಗಳು ಸತ್ತು ಹೋಗಿರುವುದು. ಇಂತಹದೊಂದು ಸತ್ತ ಶಾಲೆ ನಾನು ಓದಿದ ಬಸವನಗುಡಿಯ ಆಚಾರ್ಯಪಾಠಶಾಲೆ: ಈಗದು ‘ಇಂಗ್ಲಿಷ್ ಪಬ್ಲಿಕ್ ಸ್ಕೂಲ್’!

ಪೋಷಕರಿಗೆ ಕಿವಿಮಾತು 

ಮಗುವಿನ ಜನನದೊಂದಿಗೆ ಅನೇಕ ಹೊಸತನಗಳು ಪೋಷಕರಲ್ಲಿ ಮೂಡಿಬರುವುದು ಸಹಜ. ಮಗುವಿನ ಬೆಳವಣಿಗೆಯೊಂದಿಗೆ ತಂದೆತಾಯಿ ಮತ್ತು ಮನೆಮಂದಿಯ ಆಸೆ ಆಕಾಂಕ್ಷೆ, ನಿರೀಕ್ಷೆಗಳು ಬೆಳೆಯುತ್ತವೆ. ಕೆಲವು ಸಾಮಾನ್ಯ ರೀತಿಯದ್ದಾಗಿದ್ದರೆ ಮತ್ತೆ ಕೆಲವು ಅತಿಯಾದದ್ದು. ಮಗುವಿನ ಶಿಕ್ಷಣದ ಬಗ್ಗೆ  ಗೊಂದಲ ಆತಂಕಗಳು ಅನಿವಾರ್ಯವೋ ಏನೋ ಎನ್ನುವ ರೀತಿಯಲ್ಲಿ   ಪೋಷಕರ ಮನವನ್ನು ಕಾಡುವುದುಂಟು.

-ಕಲಿಯುವ ಸಾಮರ್ಥ್ಯಕ್ಕೆ ಸಂಬಂಧಿಸಿದ ಮಿದುಳಿನ ಕ್ಷೇತ್ರವು ಸದಾ ಕಲಿಕೆ ಕ್ರಿಯೆಗಳನ್ನು ಉತ್ತೇಜಿಸುವುದಕ್ಕೆ ಸಿದ್ಧವಾಗಿರುತ್ತದೆ.  ಹೀಗಾಗಿ ಕಲಿಯುವುದಕ್ಕೆ ಹೆಚ್ಚು ಅವಕಾಶಗಳು ಇರಬೇಕೆ ಹೊರತ್ತು ಕಲಿಸಿಕೊಡುವ ಕ್ರಮಗಳು ಮಿತವಾಗಿ ಇದ್ದಷ್ಟು  ಉತ್ತಮ. ಭಾಷೆಯ ಮೂಲಕ ಹೊಸ ಜಗತ್ತು ಅನುಭವಗಳನ್ನು ಕಿರಿಯ ವಯಸ್ಸಿನಲ್ಲಿಯೇ ಹೇರಳವಾಗಿ ಒದಗಿಸಿಕೊಡುವ ಗುಣ ಮನೆ ಮತ್ತು ಪರಿಸರದ ಭಾಷೆಯಲ್ಲಿರುವಷ್ಟು  ಒತ್ತಡ ಮತ್ತು ಭಯದ ಸ್ಥಿತಿಯಲ್ಲಿ ಒದಗಿಬರುವ ಭಾಷಾ ರೀತಿಯಲ್ಲಿ ಇರದು.

-ಕಲಿಕೆಯು ಬಹಳ ಸೂಕ್ಷ್ಮವಾದ ಸಾಮರ್ಥ್ಯ. ಅದರ ಮೇಲೆ ಒತ್ತಡ ಹೇರುವುದು, ಆಮಿಷಗಳ ಮೂಲಕ ಅದನ್ನು ಚುರುಕುಗೊಳಿಸುವ ಅಥವಾ ಉತ್ತೇಜಿಸುವ ಪ್ರಯತ್ನಗಳು ನಂತರದ ಕಲಿಕೆಯ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು.

-ಅರ್ಥವಿಲ್ಲದ ಕಲಿಕೆಯಿಂದ ಯಾವ ಹೆಚ್ಚಿನ ಗಳಿಕೆಯೂ ಸಾಧ್ಯವಿರದು. ಒತ್ತಡದ ಕ್ರಮಗಳ ಮೂಲಕ ಇಂಗ್ಲಿಷು  ಮಾಧ್ಯಮದ ಕಲಿಕೆಗಿದು ಹೆಚ್ಚಾಗಿ ಅನ್ವಯಿಸಬಹುದಾದ್ದು. ಪೋಷಕರ ಆತಂಕ, ಪ್ರತಿಷ್ಠೆ, ಬಯಕೆಗಳ ಮಾತ್ರದಿಂದಲೆ ಯುಕ್ತವೆನ್ನುವಂತಹ ಜ್ಞಾನ ಸಿಗದು. ಮಕ್ಕಳ ಆರಂಭದ ಶಿಕ್ಷಣದಲ್ಲಿ ಇಂತಹದೊಂದು ಬಯಕೆ ಬಲವಂತದ ಕ್ರಮವಾಗಿಯೇ ನಿಲ್ಲುತ್ತದೆ.

-ಆಸಕ್ತಿ ಇರುವ ವಿಷಯಗಳತ್ತ ಮಕ್ಕಳ ಗಮನ ಹರಿಯುವುದು ಹೆಚ್ಚು .ಸಣ್ಣ ಮಕ್ಕಳಲ್ಲಂತೂ ಇದೊಂದು ಸೂತ್ರವಾಗಿಯೇ ಇರುವುಂತಹದ್ದು. ಆದರೆ  ಇಂತಹದೊಂದು ಕಲಿಕೆ ಎರಡನೆ ಭಾಷೆಯ ಮೂಲಕದ ಶಿಕ್ಷಣದಲ್ಲಿ ಸಿಕ್ಕುವುದು ಕಷ್ಟ. ಮಕ್ಕಳ ಒಳಮನಸ್ಸಿನಲ್ಲಿ ಮೂಡುವ ಪ್ರಶ್ನೆ, ಕುತೂಹಲ, ಗೊಂದಲಗಳನ್ನು ಪ್ರಕಟಿಸುವುದು ಪರಿಚಯವಿರುವ ಮೊದಲ ಭಾಷೆಯಲ್ಲಿ ಸುಲಭ. ಆದರೆ ತರಗತಿಯ ಭಾಷೆಯಲ್ಲಿದು ಅಷ್ಟೊಂದು ಸುಲಭವಾಗಿರುವುದು ಅಪರೂಪ. ಹೀಗಾಗಿ ಮಕ್ಕಳ ಸೃಜನ ಶೀಲತೆ, ಆತ್ಮವಿಶ್ವಾಸದಂತಹ ಮನೋಬಲಗಳ ಕೊರತೆಗೂ ಕಾರಣವಾಗಿರುತ್ತದೆ.

-ಶಾಲೆಯ ಪ್ರಾರಂಭದ ಹಂತದಲ್ಲಿ ಅಥವಾ ಕಲಿಕೆಯ ಮೊದಲ ಹಂತದಲ್ಲಿ ಎರಡನೆಯ ಭಾಷೆಯ ಮೂಲಕ ಹಲವಾರು ವಿಭಿನ್ನ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಮಕ್ಕಳ ಮನೆಮಾತು ಚೆನ್ನಾಗಿ ತಿಳಿದಿರಬೇಕು. ನಮ್ಮ ನಾಡಿನ ಅನೇಕ ಇಂಗ್ಲಿಷು ಮಾಧ್ಯಮದ ಶಾಲೆಗಳಲ್ಲಿ ನಾಡ ಭಾಷೆ ತಿಳಿಯದವರೇ ಹೆಚ್ಚು. ಹೀಗಾಗಿ ಮಕ್ಕಳ ಇಂಗಿತಗಳನ್ನು ಅರ್ಥಮಾಡಿಕೊಳ್ಳಲಾರದೆ ಮಕ್ಕಳ ಕಲಿಕೆಯ ಮೇಲೆ ಒತ್ತಡ ಹೇರುವ ಸಾಧ್ಯತೆಗಳು ಹೆಚ್ಚು. ಮಕ್ಕಳಲ್ಲಿ ಶಿಸ್ತು, ಶಿಕ್ಷೆಯ ಮೂಲಕ  ಶಿಕ್ಷಕರ ಅಸಾಮರ್ಥ್ಯವನ್ನು ರಕ್ಷಿಸುವ ಶಾಲೆಗಳು ಬೇಕಾದಷ್ಟಿವೆ.

-ಮಕ್ಕಳ ಹಿತದೃಷ್ಟಿಯಿಂದ ಪ್ರಾಥಮಿಕ ಮಟ್ಟದಲ್ಲಿ ಶಿಕ್ಷಣದ ಮಾಧ್ಯಮವು ಮೊದಲ ಭಾಷೆಯಲ್ಲಿಯೇ ಇದ್ದರೆ ಉತ್ತಮ. ಮಕ್ಕಳ ಸಂಜ್ಞಾನಾತ್ಮಕ ಶಕ್ತಿಗಳು ತಾಯಿ ಭಾಷೆಯ ಮೂಲಕ ಬೇಗ ಮಿದುಳು/ಮನಸು/ನುಡಿಯ ಮೂಲಕ ಬಂದುಬಿಟ್ಟಿರುತ್ತದೆ.

ಇದನ್ನೇಕೆ ಬದಲಿಸುವ ಸಾಹಸ ಮಾಡಬೇಕು? ಮಾಡಲೇ ಬೇಕೆ?