ಜೆಸಿಬಿಗಲ್ಲ, ಜನರ ಕೈಗೆ ಕೆಲಸ ಕೊಡಿ-ಶಾರದಾ ಗೋಪಾಲ

                      

ಇನ್ನೂ ಮಳೆಯಿಲ್ಲ. ಬಿಸಿಲು, ಬರಗಾಲದಿಂದ ಜನರು ಕಂಗೆಟ್ಟಿದ್ದಾರೆ. ಕುಡಿಯಲು ನೀರು ಕೂಡ ಇಲ್ಲದೆ ಬಸವಳಿಯುತ್ತಿದ್ದಾರೆ. ರಾಯಚೂರು, ಬಾಗಲಕೋಟೆ, ಯಾದಗಿರಿ, ಕಲಬುರ್ಗಿಗಳಿಂದ ಜನರು ಉದ್ಯೋಗ ಮತ್ತು ಆಹಾರವನ್ನು ಹುಡುಕಿಕೊಂಡು ಸಾವಿರ ಸಾವಿರ ಸಂಖ್ಯೆಯಲ್ಲಿ ಗುಳೆ ಹೋಗುತ್ತಿದ್ದಾರೆ. ರಾಜ್ಯದಲ್ಲಿನ ಬಹುತೇಕ ಕೆರೆಗಳು ಒಣಗಿ ತಮ್ಮ ಬರಿದಾದ ಒಡಲನ್ನು ತೋರಿಸುತ್ತಿವೆ. ಕೆರೆಯಲ್ಲಿ ತುಂಬಿರುವ ಹೂಳು ಕೂಡ ಬಿರಿದು ಬಾಯ್ಬಿಡುತ್ತಿದೆ. ಕಳೆದ ವರ್ಷ ಇದೇ ದಿನಗಳಲ್ಲಿ ಭರಪೂರ ನೀರು ತುಂಬಿಕೊಂಡು ಪಶು ಪಕ್ಷಿಗಳನ್ನು, ದಾರಿಹೋಕರನ್ನು ತನ್ನತ್ತ ಸೆಳೆಯುತ್ತಿದ್ದವು ಈ  ಕೆರೆಗಳು. ಇಂದು ಒಣಗಿ ಬಿಸುಸುಯ್ಯುತ್ತ ಜನರ ಗಮನ ಸೆಳೆಯುತ್ತಿವೆ. ಹಾಗೆಯೇ ಅಧಿಕಾರಸ್ಥರ, ಗುತ್ತಿಗೆದಾರರ ಗಮನವನ್ನೂ ತಮ್ಮೆಡೆಗೆ ಸೆಳೆಯುತ್ತಿವೆ. ಅವರಲ್ಲಿ ಹೊಸ ಹೊಸ ಯೋಜನೆಗಳನ್ನೂ ಹುಟ್ಟು ಹಾಕುತ್ತಿವೆ.

ಕೆರೆ ಹೂಳನ್ನೆಲ್ಲ ಎತ್ತಬೇಕು, ಮುಂದಿನ ವರ್ಷ ಮಳೆ ಆದಾಗ ಹೆಚ್ಚೆಚ್ಚು ನೀರು ತುಂಬುವಂತೆ ಮಾಡಿಡಬೇಕು, ರೈತರಿಗೆಲ್ಲ ಅನುಕೂಲವಾಗಬೇಕು, ದನಕರುಗಳಿಗೆ, ದಾರಿಹೋಕರಿಗೆ ಕುಡಿಯಲು ನೀರಿನ ಅನುಕೂಲವಾಗಬೇಕು ಎಂದೆಲ್ಲ ಯೋಜನೆಗಳು. ಘನವಾದ ವಿಚಾರ. ಘನತರವಾದ ಯೋಜನೆ. ಕೆರೆಯ ಹೂಳು ಎತ್ತುವುದು, ಹೂಳನ್ನು ರೈತರ ಹೊಲಗಳಿಗೆ ಹಾಕಿಸುವುದು, ಕೆರೆಯಲ್ಲಿ ನೀರು ತುಂಬಿಸುವುದು ಬಲು ಯೋಗ್ಯ ವಿಚಾರವೇ ಸರಿ. ಆದರೆ ಇದರಲ್ಲೂ ಒಂದು ಕುಂದು ಎದ್ದು ಕಾಣುತ್ತಿದೆ. ಅದೆಂದರೆ ಯಂತ್ರಗಳಿಂದ ಹೂಳನ್ನೆತ್ತುವ ಯೋಜನೆ. ಈಗಾಗಲೇ ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಖಾಸಗಿ ಕಂಪೆನಿಯಾದ ಟಾಟಾ ಮೋಟಾರ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡು ಸುತ್ತಲಿನ ನಾಲ್ಕಾರು ಹಳ್ಳಿಗಳ ದೊಡ್ಡ ದೊಡ್ಡ ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ಆರಂಭ ಮಾಡಿಯೇ ಬಿಟ್ಟಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ತಿದ್ದುಪಡಿ ತಂದು ಉದ್ಯೋಗ ಖಾತರಿಯಲ್ಲಿ ಯಂತ್ರಗಳನ್ನು ಬಳಸಲು ಅನುವು ಮಾಡಿಕೊಡಲು ಕೇಳಬೇಕೆಂದು ವಿರೋಧ ಪಕ್ಷದ ನಾಯಕರು ಸೂಚಿಸುತ್ತಿದ್ದಾರೆ. ಮಂತ್ರಿ ಮಹೋದಯರ ಈ ಯಂತ್ರ ಪ್ರೇಮವನ್ನು ನೋಡಿ ಜನಸಾಮಾನ್ಯರು ಕಂಗಾಲಾಗುವಂತಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಬಂದಿದ್ದೇ ಹಳ್ಳಿಗರ ನಿರುದ್ಯೋಗ ನಿವಾರಣೆಗಾಗಿ. ಈ ಕಾನೂನಿಗೆ ಬಹುದೊಡ್ಡ ಹಿನ್ನೆಲೆ ಇದೆ, ಬಲು ದೊಡ್ಡ ಹೋರಾಟದ ಇತಿಹಾಸವಿದೆ. ಹಳ್ಳಿ ಹಳ್ಳಿಗಳಲ್ಲಿ ಜನರು ಕೂಲಿ ಅರಸಿ ಶಹರಗಳತ್ತ ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಭರವಸೆ ಕೊಡಬೇಕೆಂದು ಮಹಾರಾಷ್ಟ್ರದಲ್ಲಿ ಅನೇಕ ವರ್ಷಗಳ ಕಾಲ ಜನರ ಹೋರಾಟಗಳು ನಡೆದವು.

ಪರಿಣಾಮವಾಗಿ ಮಹಾರಾಷ್ಟ್ರ ಸರ್ಕಾರವು ಉದ್ಯೋಗ ಭರವಸೆ ಕಾನೂನನ್ನು ಜಾರಿಯಲ್ಲಿ ತಂದಿತು. ರಾಜಸ್ತಾನದಲ್ಲಿ ‘ಮಜದೂರ್ ಕಿಸಾನ್ ಶಕ್ತಿ ಸಂಘಟನಾ’ದಂಥ ಅನೇಕ ಜನಪರ ಸಂಘಟನೆಗಳ ಹಕ್ಕೊತ್ತಾಯದ ಫಲವಾಗಿ 2005ರಲ್ಲಿ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ’ ಕಾನೂನು ದೇಶದಾದ್ಯಂತ ಜಾರಿಯಲ್ಲಿ ಬಂತು. ಮುಂದೆ ಅದಕ್ಕೆ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾನೂನು’ ಎಂದು ಮರು ನಾಮಕರಣ ಮಾಡಲಾಯಿತು. ಕಾನೂನು ಬಂದರೂ ಕರ್ನಾಟಕ ಸರ್ಕಾರದಲ್ಲಿ ಅಂಥ ಉತ್ಸಾಹವೇನೂ ಕಾಣಲಿಲ್ಲ. ಬಹುಶಃ ಗ್ರಾಮೀಣ ಜನರ ಉದ್ಯೋಗಕ್ಕಾಗಿ ಅಲೆದಾಟ ನಮ್ಮ ಸರ್ಕಾರಕ್ಕೆ ಎಂದೂ ತಲೆ ಕೆಡಿಸಿಕೊಳ್ಳುವ ವಿಚಾರವೇ ಆಗಿದ್ದಿಲ್ಲ. 2005ರಲ್ಲಿ ಬಂದ ಹಣವೆಲ್ಲ ಖರ್ಚಾಗದೆ ಹಿಂದಕ್ಕೆ ಹೋಯಿತು.

ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳಿಗೆ ಕೂಡ ಹಣ ಖರ್ಚಾಗಲಿಲ್ಲ. ಮರುವರ್ಷ ಸ್ವಲ್ಪ ಜಾಸ್ತಿ ಹಣ ಖರ್ಚಾದರೂ ಗ್ರಾಮೀಣ ಜನರ ಕೈಗೆ ಹಣ ತಲುಪಿದ ಸುದ್ದಿ ಇಲ್ಲ. ಈ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗವಂತೂ ಎಲ್ಲಿಯೂ ದೊರಕಲಿಲ್ಲ. ಕಾನೂನು ಬಂದರೂ ಅಧಿಕಾರಿಗಳಿಗಾಗಲಿ, ಜನರಿಗಾಗಲಿ ಅದರ ಮೂಲ ಮಾಹಿತಿ ಸಿಗದಿರುವುದು ಇದಕ್ಕೆ ಕಾರಣ. ವರ್ಷ ವರ್ಷವೂ ಉದ್ಯೋಗ ಅರಸಿಕೊಂಡು ಗುಳೆ ಹೋಗುವಂಥ ಜನರ ಸಲುವಾಗಿ ಬಂದಿದ್ದು ಈ ಕಾನೂನು ಎಂದು ಯಾರೂ ಅರ್ಥ ಮಾಡಿಕೊಳ್ಳಲೇ ಇಲ್ಲ. ಹಳ್ಳಿಗಳಲ್ಲಿ ಸುಗ್ಗಿ ಮುಗಿದ ನಂತರ ಉದ್ಯೋಗ ಅರಸಿಕೊಂಡು ಕುಟುಂಬಗಳು ದೂರ ದೂರದ ಶಹರಗಳಿಗೆ ಹೋಗುತ್ತವೆ. ಮೊದಲು ಗಂಡ, ಮುಂದೆ ಕೆಲ ವರ್ಷಗಳ ನಂತರ ಮಕ್ಕಳನ್ನು ಬಿಟ್ಟು ಗಂಡ ಹೆಂಡತಿ, ಮತ್ತೆ ಇಡೀ ಕುಟುಂಬಕ್ಕೆ ಕುಟುಂಬವೇ ಕೃಷಿ ಕೂಲಿಯನ್ನು ತೊರೆದು ಪಟ್ಟಣವಾಸಿಗಳೇ ಆಗಿಬಿಡುತ್ತಿವೆ.

ಸರ್ಕಾರವು ಆ ಕುಟುಂಬಗಳಿಗಾಗಿ ಮಾಡಿಟ್ಟಿರುವ ಪಡಿತರ, ಅಂಗನವಾಡಿಗಳಲ್ಲಿ ಮಕ್ಕಳ ಆಹಾರ, ಶಾಲೆಯ ಬಿಸಿಯೂಟ, ಗರ್ಭಿಣಿ,  ಬಾಣಂತಿಯರಿಗೆ ಸಾಮಾಜಿಕ ಭದ್ರತೆ ಮುಂತಾದ ಎಲ್ಲಾ ಕಾರ್ಯಕ್ರಮಗಳಿಂದ ವಂಚಿತವಾಗುತ್ತವೆ. ಶಹರಗಳಲ್ಲಿ ಹೇಳುವವರು ಕೇಳುವವರಿಲ್ಲದ, ಗೊತ್ತು ಗುರಿಯಿಲ್ಲದ ಅನಾಮಧೇಯರಾಗಿ ಬದುಕುತ್ತಾರೆ. ತಮ್ಮದೇ ನಾಡಿನಲ್ಲಿ ಇದ್ದೂ ಅನಾಥರಾಗುತ್ತಾರೆ. ಇಂಥ ವಲಸೆಗಳನ್ನು, ವಲಸೆಯಿಂದಾಗುವ ಕುಟುಂಬದ ಛಿದ್ರವನ್ನು ತಡೆಯಬೇಕೆಂಬುದು ಕಾನೂನಿನ ಮೂಲ ಆಶಯ. ಕಾನೂನಿನ ಇನ್ನೂ ಒಂದು ಆಶಯವಿದೆ. ಅದೆಂದರೆ ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳ ಪುನರುತ್ಪತ್ತಿ. ಉದ್ಯೋಗ ಖಾತರಿಯಲ್ಲಿ ಸ್ಥಳೀಯ ಜನಕ್ಕೆ ಉದ್ಯೋಗ ಕೊಡುವುದರ ಮೂಲಕ ಸ್ಥಳೀಯ ಕೆರೆ, ಕಾಡು, ಭೂಮಿ ಅಭಿವೃದ್ಧಿ ಮಾಡಿ ಮುಂದಿನ ವರ್ಷಗಳಲ್ಲಿ ಗ್ರಾಮೀಣ ಜನರಿಗೆ ಸತತವಾಗಿ ಸ್ಥಳೀಯವಾಗಿ ಉದ್ಯೋಗ ಸಿಗುವಂತೆ ಮಾಡುವುದು, ಬರವನ್ನು ತಡೆಯುವುದು ಕಾನೂನಿನ ಆಶಯವಾಗಿದೆ.

ಮೂರನೇ ವರ್ಷದ ಹೊತ್ತಿಗೆ ನಮ್ಮ ರಾಜ್ಯ ಸರ್ಕಾರದಲ್ಲಿರುವವರಿಗೆ ಉದ್ಯೋಗ ಖಾತರಿಯ ಹಣವನ್ನು ಬಳಸುವುದು ಹೇಗೆಂಬ ಸ್ಪಷ್ಟ ಕಲ್ಪನೆ ಬಂದಿತ್ತು. ಅರಣ್ಯೀಕರಣ, ತೋಟಗಾರಿಕೆ, ಜಲಾನಯನ, ಭೂ ಅಭಿವೃದ್ಧಿ ಮುಂತಾದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಎನ್.ಆರ್.ಇ.ಜಿ.ಯೊಳಗಡೆಯೇ ಸೇರಿಸಲಾಯಿತು. ಈ ಕೆಲಸಗಳನ್ನು ಮಾಡಿಸಲು ಹಳ್ಳಿಹಳ್ಳಿಗಳಲ್ಲಿ ಗುತ್ತಿಗೆದಾರರು ಹುಟ್ಟಿಕೊಂಡಿದ್ದರು. ಮುಂದಿನ ಚುನಾವಣೆಗಳಲ್ಲಿ ಗುತ್ತಿಗೆದಾರರೇ ಚುನಾವಣೆಗೆ ನಿಂತು ರಾಜ್ಯ ಶಾಸನಸಭೆಯ ಚುನಾವಣೆಗಿಂತ ಪಂಚಾಯ್ತಿ ಚುನಾವಣೆಗೇ ಹೆಚ್ಚಿನ ತೂಕ ಕೂಡ ಬರುವಂತಾಯಿತು. ಗ್ರಾಮ ಪಂಚಾಯ್ತಿಯ ಹೆಚ್ಚಿನ ಸದಸ್ಯರು ಗುತ್ತಿಗೆದಾರರಾಗಿ ಪರಿವರ್ತನೆಗೊಂಡಿದ್ದು ಉದ್ಯೋಗ ಖಾತರಿ ಯೋಜನೆಯಿಂದಾಗಿಯೆ.

ಆದರೆ ಈ ವೇಳೆಗಾಗಲೇ ರಾಜ್ಯದಲ್ಲಿನ ಅನೇಕ ಸಂಘ ಸಂಸ್ಥೆಗಳು ಜನರಿಗೆ ಕೆಲಸ ಸಿಗಬೇಕು, ಕೂಲಿ ಸಿಗಬೇಕೆಂಬ ಸದಾಶಯದಿಂದ ಅಲ್ಲಲ್ಲಿ ಕೂಲಿಕಾರರ ಗುಂಪುಗಳನ್ನು ಮಾಡಿ ಅರ್ಜಿಗಳನ್ನು ಕೊಡಿಸಿ ಜನರಿಗೆ ಕೆಲಸ ಸಿಗುವಂತೆ ಮಾಡಿದವು. ತಮ್ಮ ಹಳ್ಳಿಯಲ್ಲಿಯೇ ಕೆಲಸ ಮತ್ತು ಕೂಲಿ ಸಿಕ್ಕಾಗ ವಲಸೆಯಿಂದ ಕಂಗೆಟ್ಟಿದ್ದ ಅನೇಕ ಕುಟುಂಬಗಳಿಗೆ ಜೀವ ಬಂತು. ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯು ಹತ್ತಾರು ಜಿಲ್ಲೆಗಳಲ್ಲಿ ಹಬ್ಬಿಕೊಂಡು ಉದ್ಯೋಗ ಖಾತರಿಯಲ್ಲಿ ಗ್ರಾಮೀಣ ಕುಟುಂಬಗಳಿಗೇ ಕೂಲಿ ಪಾವತಿ ಆಗುವಂತೆ ಮಾಡಿದ್ದಲ್ಲದೆ ರೈತರ ಹೊಲ ಸಮತಟ್ಟು ಮಾಡುವುದು, ಕೃಷಿ ಹೊಂಡ ಮಾಡುವುದು, ಕೆರೆಗಳ ಹೂಳೆತ್ತುವುದು, ಅರಣ್ಯೀಕರಣದಂಥ ನೀರಿಂಗಿಸುವ ಮತ್ತು ಸ್ಥಳೀಯ ಸಂಪನ್ಮೂಲ ಬೆಳೆಸುವ ಕೆಲಸಗಳಲ್ಲಿ ಬಹಳ ಮಹತ್ವದ ಪಾತ್ರ ವಹಿಸಿತು.

ಆರಂಭದಲ್ಲಿ ಉದ್ಯೋಗ ಖಾತರಿಯನ್ನು ಸಂಶಯದಿಂದಲೇ ನೋಡುತ್ತಿದ್ದ ಜನರು ಕ್ರಮೇಣ ಅದರತ್ತ ಒಲಿಯತೊಡಗಿದರು. ಮನವಿ, ಹೋರಾಟ, ಧರಣಿ, ಸತ್ಯಾಗ್ರಹಗಳನ್ನು ಮಾಡಿಯಾದರೂ ಸರ್ಕಾರದಿಂದ ದುಡಿದ ಹಣವನ್ನು ಪಡೆಯಬಹುದೆಂಬ ಸ್ಪಷ್ಟತೆ ಬರುತ್ತಲೇ ಕೂಲಿಕಾರರ ಸಂಖ್ಯೆ ಹೆಚ್ಚಾಗತೊಡಗಿತು. ನೂರು, ಇನ್ನೂರು, ಮುನ್ನೂರರ ಸಂಖ್ಯೆಯಲ್ಲಿ ಜನರು ಉದ್ಯೋಗ ಅರಸಿ ಬರತೊಡಗಿದಾಗ ಇಷ್ಟೆಲ್ಲ ಜನರಿಗೆ ಹೇಗೆ ಕೆಲಸ ಕೊಡುವುದೆಂಬ ಚಿಂತೆ ಪಂಚಾಯ್ತಿ ಸಿಬ್ಬಂದಿಯದ್ದು. ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ತಬಕದ ಹೊನ್ನಳ್ಳಿ ಎಂಬಲ್ಲಿ 2011-12ರಲ್ಲಿ 600 ಕೂಲಿಕಾರರು ಒಂದೇ ಬಾರಿ ಒಂದೇ ಕೆರೆಯಲ್ಲಿ ಕೆಲಸ ಮಾಡಿದ ದಾಖಲೆ ಇದೆ. ಸುಮಾರು 50 ಟ್ರ್ಯಾಕ್ಟರ್‌ಗಳು ಹೂಳನ್ನೊಯ್ದು ಹೊಲಕ್ಕೆ ಸಾಗಿಸಲು ಸಾಲುಗಟ್ಟಿ ನಿಂತಿದ್ದ ಚಿತ್ರಗಳಿವೆ.

ಆದರೇನು, ಬಂದ ಎಲ್ಲಾ ಜನರದ್ದೂ ಸರಿಯಾದ ದಾಖಲೆ ಇಡದೆ, ದುಡಿದ ಎಲ್ಲಾ ಜನರಿಗೂ ಕೂಲಿ ಪಾವತಿ ಆಗದೆ ನಿರಾಶರಾಗಿ ಜನರು ಮತ್ತೆ ಉದ್ಯೋಗ ಖಾತರಿಯತ್ತ ಮರಳಿ ಬರಲಿಲ್ಲ. ಬೇಗೂರು, ತುಮರಿಕೊಪ್ಪ, ತಂಬೂರು, ಮಡಕಿ ಹೊನ್ನಳ್ಳಿ, ಜಿನ್ನೂರು, ಇತ್ತ ಬೆಳಗಾವಿ ಜಿಲ್ಲೆಯ ಖಾನಾಪುರದ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ, ರಾಯಚೂರು, ಬಾಗಲಕೋಟೆಯ ನೂರಾರು ಹಳ್ಳಿಗಳಲ್ಲಿ ನೂರಾರು ಜನರು ಒಟ್ಟಿಗೆ ಕೆರೆಯಂಗಳದಲ್ಲಿ ದುಡಿದು ಕೆರೆ ಹೂಳು ತೆಗೆಯುತ್ತಿರುವುದು ನಿತ್ಯದ ದೃಶ್ಯ. ಮೊದ ಮೊದಲು ಕೇವಲ ಭೂರಹಿತ ಕೂಲಿಕಾರ್ಮಿಕರು, ಚಿಕ್ಕ ಹಿಡುವಳಿದಾರರು ಮಾತ್ರ ಬರುತ್ತಿದ್ದ ಉದ್ಯೋಗ ಖಾತರಿಗೆ ಇಂದು ಸಾಕಷ್ಟು ಭೂಮಿ ಇರುವವರು ಕೂಡ ಬರುತ್ತಿದ್ದಾರೆ. ಸ್ವತಃ ಪಂಚಾಯ್ತಿ ಅಧ್ಯಕ್ಷರೂ ನಿತ್ಯ ಉದ್ಯೋಗ ಖಾತರಿಯಲ್ಲಿ ದುಡಿದು ಹೊಟ್ಟೆ ತುಂಬಿಸಿಕೊಂಡ ಉದಾಹರಣೆಗಳಿವೆ.

ಎಲ್ಲೆಲ್ಲಿ ಜನರು ಸಂಘಟಿತರಾಗಿದ್ದಾರೋ ಅಲ್ಲೆಲ್ಲ ನೂರಾರು ಸಂಖ್ಯೆಯಲ್ಲಿ ಗ್ರಾಮೀಣ ಜನರು ಉದ್ಯೋಗ ಪಡೆದುಕೊಂಡಿದ್ದಾರೆ. ಖಾನಾಪುರದಂಥ ತಾಲ್ಲೂಕುಗಳಲ್ಲಿ ಊರ ಸುತ್ತಮುತ್ತಲಿನ ಎಲ್ಲಾ ಕೆರೆಗಳನ್ನೂ ಹೂಳೆತ್ತಿ ಮುಗಿಸಿದ್ದಾರೆ. ‘ದೊಡ್ಡ ದೊಡ್ಡ ಕೆರೆ ಹೂಳೆತ್ತುವಂಥ ಕೆಲಸಗಳನ್ನು ಜನರಿಂದ ಮಾಡಿ ಮುಗಿಸುವುದು ಕಷ್ಟ’ ಎಂಬ ಸಚಿವರ ಮಾತುಗಳನ್ನು ಸಂಪೂರ್ಣ ಅಲ್ಲಗಳೆದಿದ್ದಾರೆ. ಜೆಸಿಬಿಯಂಥ ಮಶೀನುಗಳಿಗೆ ಊರಲ್ಲಿ ಕಾಲಿರಿಸಗೊಳಿಸಿಲ್ಲ. ಕಳೆದ ವರ್ಷ, 2015-16ರಲ್ಲಿ ಮಳೆ ಚೆನ್ನಾಗಿ ಆಗದೆ ಬರಗಾಲ ಬಿದ್ದಿದೆಯೆಂಬ ಕಾರಣಕ್ಕಾಗಿ ಸರ್ಕಾರವು 150 ದಿನಗಳ ಕೆಲಸವನ್ನು ಕೊಟ್ಟಿತ್ತು. 150 ಹಾಜರಿಗಳನ್ನೂ ಪೂರ್ಣಗೊಳಿಸಿ ಕುಟುಂಬಕ್ಕೆ 30 ಸಾವಿರ ರೂಪಾಯಿಗಳನ್ನು ಪಡೆದು ಬರಗಾಲವನ್ನು ಎದುರಿಸಿ ನಿಂತಿದ್ದಾರೆ.

ಇಂಥ ಯಶಸ್ವಿ ಕಥೆಗಳು ಬಹುತೇಕ ಜಿಲ್ಲೆಗಳಲ್ಲಿ ಇರುವಾಗ ಸಚಿವರಿಗೆ ಈ ದುಡಿಯುವ ಕೈಗಳು ಕಾಣಲೇ ಇಲ್ಲವೇ? 2005ರಲ್ಲಿ ಉದ್ಯೋಗ ಖಾತರಿ ಬಂದ ಸಮಯದಲ್ಲೇ ಹಳ್ಳಿ ಹಳ್ಳಿಗಳಲ್ಲಿ ಮೊತ್ತ ಮೊದಲ ಬಾರಿಗೆ ಹಿಂದೆಂದೂ ಕಾಣದ ಬೃಹತ್‌ ಹಲ್ಲುಗಳ ಜೆಸಿಬಿ ಯಂತ್ರಗಳು ಕಾಲಿಟ್ಟಿದ್ದು, ಅವು ಕ್ರಮೇಣ ಗ್ರಾಮೀಣ ನೋಟದ ಭಾಗವೇ ಆಗಿಹೋಗಿವೆ. ಉದ್ಯೋಗ ಖಾತರಿಯಲ್ಲಿ ಗಿಡ ನೆಡಲು ತೋಡಿದ ಗುಂಡಿಗಳಲ್ಲಿ ಕೂಡ ಜೆಸಿಬಿಯ ಹಲ್ಲುಗಳ ಗುರುತುಗಳನ್ನು ಕಾಣಬಹುದು. ಜೆಸಿಬಿ ಒಡೆತನದ ಗುತ್ತಿಗೆದಾರರು ಉದ್ಯೋಗ ಖಾತರಿಯ ಬಹುತೇಕ ಭಾಗವನ್ನು ನುಂಗಿದ್ದಾರೆ. ದಾಖಲೆಯಲ್ಲಿ ಜನರ ಹೆಸರುಗಳು, ದುಡ್ಡು ಸಂದಾಯವಾದದ್ದು ಒಬ್ಬ ಗುತ್ತಿಗೆದಾರನಿಗೆ.

ಕಾನೂನನ್ನು ತಿರುಚಿ, ಜನರನ್ನು ವಂಚಿಸಿ, ಕೋಟಿ ಕೋಟಿ ರೂಪಾಯಿಗಳನ್ನಾಗಲೇ ಅವರು ಬಾಚಿಕೊಂಡಿದ್ದಾರೆ. ಇನ್ನು ಕಾನೂನಿನಲ್ಲಿಯೇ ಯಂತ್ರಗಳಿಗೆ ಅವಕಾಶ ಸಿಕ್ಕಿಬಿಟ್ಟಿತೆಂದರೆ ಕೇಳುವುದೇನು? ಜನಸಮುದಾಯವೆಲ್ಲ ಪೇಟೆಯತ್ತ, ಯಂತ್ರಗಳೆಲ್ಲ ಹಳ್ಳಿಯತ್ತ ಮುಖ ಮಾಡುತ್ತವಷ್ಟೆ. ಬರದ ಬವಣೆಯಲ್ಲಿ ಉದ್ಯೋಗ ಅರಸುತ್ತ ಜನರು ತತ್ತರಿಸುತ್ತಿರುವಾಗ ಜನರ ಹಕ್ಕಾಗಿ ಬಂದಿರುವ ಉದ್ಯೋಗ ಖಾತರಿಯನ್ನು ಯಂತ್ರಗಳಿಗೆ ನೀಡುವಂಥ ವಿಚಾರವನ್ನು ಸರ್ಕಾರ ಮಾಡಲೇ ಬಾರದು. ಅಂಥ ತಿದ್ದುಪಡಿಯನ್ನು ಕಾನೂನಿಗೆ ತಂದು ಕಾನೂನಿನ ಆಶಯವನ್ನು ಸಡಿಲಗೊಳಿಸಬಾರದು. ಕೆರೆಗಳು ಜನಪದ ಜೀವನದ ಅಂಗಗಳು. ಕೆರೆಯಂಗಳದಲ್ಲಿ ಜನರಿಗೇ ಕೆಲಸ ಸಿಗಲಿ ಹೊರತು ಯಂತ್ರಗಳು ಅವನ್ನು ಕಸಿಯದಿರಲಿ.